ಭಾರತ್ ಜೋಡೋ ಯಾತ್ರೆ | ಕಾಲು ಜಾರದಂತೆ ಕಾಲದ ಜೊತೆ ಹೆಜ್ಜೆ ಹಾಕಬೇಕಾದ ಸಂದರ್ಭ

3500 ಕಿ.ಮೀಗಳ ಅವಿರತ ನಡಿಗೆ ನೀಡುತ್ತಿರುವ ಸಂದೇಶವೂ ಸಕಾರಾತ್ಮಕವಾದುದು. ಇಂದು ಯಾರೇ ದೇಶದ ಐಕ್ಯತೆಯ ಮಾತನಾಡಿದರೂ ಬೆಂಬಲಿಸಬೇಕು, ಜೊತೆ ನಿಲ್ಲಬೇಕು. ಇದು ಕಾಲದ ಕರೆ. ಕಾಲದ ಕರೆಯ ಜೊತೆ ಬದಲಾವಣೆ ಬಯಸುವವರೆಲ್ಲರೂ ಹೆಜ್ಜೆ ಹಾಕಲೇಬೇಕು. ಆದರೆ, ಕಾಲು ಜಾರದಂತೆ, ಮತ್ತೊಂದು ಭ್ರಾಂತಿ ಆವರಿಸಿಕೊಳ್ಳದಂತೆ ಇದನ್ನು ಮಾಡಬೇಕಷ್ಟೆ

ಭಾರತ್ ಜೋಡೋ ಭಾರೀ ಸದ್ದುಗದ್ದಲದ ಮೂಲಕ ಕರ್ನಾಟಕದಲ್ಲಿ ಹಾದು ಹೋಗುತ್ತಿದೆ. ಇದು ಭಾರತವನ್ನು ಎಷ್ಟು ಮಟ್ಟಕ್ಕೆ ಬೆಸೆಯಬಲ್ಲದೋ ಗೊತ್ತಿಲ್ಲ, ಆದರೆ ಕಾಂಗ್ರೆಸ್ ಪಕ್ಷವನ್ನಂತೂ ಚುರುಕುಗೊಳಿಸಿದೆ. ಅದರೊಳಗೆ ಹೊಸ ಚಲನೆ ತಂದುಕೊಟ್ಟಿದೆ. ಆದರೆ ಭಾರತ್ ಜೋಡೋವನ್ನು ಮುಂದಿಟ್ಟುಕೊಂಡು ಪ್ರಗತಿಪರ ವಲಯದಲ್ಲಿ ತುಸು ಗಂಭೀರವೇ ಆದಂತಹ ಒಡಕು ಮೂಡಿರುವುದು ಆತಂಕದ ವಿಚಾರವಾಗಿದೆ. ಭಾರತ್ ಜೋಡೋವನ್ನು ಬೆಂಬಲಿಸುವುದು, ಬಿಡುವುದು ಎರಡನೇ ವಿಚಾರ… ಪ್ರಗತಿಪರ ವಲಯದ ಐಕ್ಯತೆ ಇದರಿಂದ ಧಕ್ಕೆಯಾಗಬಾರದು. ಪರಸ್ಪರ ಗೌರವ, ವಿಶ್ವಾಸವನ್ನಿಟ್ಟುಕೊಂಡೇ ಈ ಜಿಜ್ಞಾಸೆ ನಡೆಯಬೇಕು. ಇಂದಿನ ಸಂದರ್ಭದಲ್ಲಿ ಈ ಚರ್ಚೆ ಅಗತ್ಯ, ಅನಿವಾರ್ಯ. ನನ್ನ ಬರಹವನ್ನೂ ಆ ಸ್ಪಿರಿಟ್ಟಿನಲ್ಲೇ ತೆಗೆದುಕೊಳ್ಳಬೇಕೆಂದು ಕೋರುತ್ತಾ ಕೆಲವು ನೇರ ಮಾತುಗಳು ನಿಮ್ಮ ಮುಂದೆ…

Eedina App

ದೇಶದ ಭವಿಷ್ಯದ ಬಗ್ಗೆ ಆತಂಕಿತರಾಗಿರುವ ನಾವೆಲ್ಲರೂ ಕಾಂಗ್ರೆಸ್ಸನ್ನು ಮನಸಾರೆ ಬೈದುಕೊಂಡಿದ್ದೇವೆ. ಬಿಜೆಪಿಯನ್ನು ಎದುರಿಸಲು ಮಾಡಲೇಬೇಕಾದ ಕೆಲಸವನ್ನೂ ಕಾಂಗ್ರೆಸ್ ಮಾಡುತ್ತಿಲ್ಲ ಎಂದು ಅದನ್ನು ಮನಸಾರೆ ಆಡಿಕೊಂಡಿದ್ದೇವೆ. ಹಾಗಂತ ನಮ್ಮಲ್ಲಿನ ಬಹುತೇಕರು ಕಾಂಗ್ರೆಸ್ಸನ್ನು ಪರ್ಯಾಯವೆಂದೋ, ಪರಿಹಾರವೆಂದೋ ಅಂದುಕೊಂಡಿಲ್ಲ. ಹಾಗೆ ನೋಡಬೇಕೆಂದರೆ ಬಲಪಂಥೀಯ ಶಕ್ತಿಗಳ ಬೆಳವಣಿಗೆಗೆ ಪೌಷ್ಠಿಕಾಂಶ ಒದಗಿಸಿದ್ದು, ಜಾಗತೀಕರಣದ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅದರ ಅವಳಿಯಾದ ಕೋಮುವಾದೀಕರಣದ ವಿಷ ಕಳೆ ಹರಡುತ್ತಿದ್ದರೂ, ಜಾತ್ಯಾತೀತತೆಯ ಒಣ ಮಂತ್ರ ಜಪಿಸಿ ಸುಮ್ಮನಾದದ್ದು ಕಾಂಗ್ರೆಸ್ ಎಂಬುದು ನಮ್ಮೆಲ್ಲರ ಖಚಿತ ಅಭಿಪ್ರಾಯ. ಈ ಅಭಿಪ್ರಾಯ ಸರಿಯಾದುದೂ ಹೌದು. ಆದರೂ. ನಾವೆಲ್ಲರೂ ಮೋದಿ ನಂತರದ ಪ್ರತಿ ಚುನಾವಣೆಯಲ್ಲಿ ಬಿಜೆಪಿ ಸೋಲಬೇಕು, ಕಾಂಗ್ರೆಸ್ ಗೆಲ್ಲಬೇಕು ಎಂದು ಬಯಸುತ್ತಿದ್ದೇವೆ. ಇದು ಕಾಂಗ್ರೆಸ್ ಬಗೆಗಿನ ಅಭಿಮಾನದ ಕಾರಣಕ್ಕಲ್ಲ, ಫ್ಯಾಸಿಸ್ಟ್ ಶಕ್ತಿಗಳನ್ನು ರಾಜಕೀಯವಾಗಿ ಸೋಲಿಸಲು ಇರುವ ಏಕೈಕ ರಾಜಕೀಯ ಶಕ್ತಿ ಎಂಬ ಕಾರಣಕ್ಕೆ.

ಬಿಜೆಪಿಯ ವಿನಾಶಕಾರಿ ನಡೆಗಳನ್ನು ಕಂಡು ನಮ್ಮ ಮನದ ನೆಮ್ಮದಿ ಹಾರಿಹೋಗಿದೆ. ಕಾಂಗ್ರೆಸ್‌ನ ಗೆಲುವಿಗೆ ನಾವು ಕಾತುರಿಸುತ್ತಿಲ್ಲ, ಆದರೆ ಬಿಜೆಪಿಯ ಸೋಲಿಗೆ ಹಾತೊರೆಯುತ್ತಿದ್ದೇವೆ. ಚುನಾವಣೆಗಳಲ್ಲಿ ಬಿಜೆಪಿ ಸೋತು, ಕಾಂಗ್ರೆಸ್ ಬಂದ ಮಾತ್ರಕ್ಕೆ, ಬಲಪಂಥೀಯತೆ ತಗ್ಗುತ್ತದೆಯೇ? ಖಂಡಿತ ಇಲ್ಲ. ಇಂದು ಅಧಿಕಾರ ಹಿಡಿದಿರುವ ಫ್ಯಾಸಿಸ್ಟ್ ಕೂಟ ಕೇವಲ ಒಂದು ರಾಜಕೀಯ ಪಕ್ಷವಲ್ಲ, ಅದೊಂದು ಅತಿ ಆಕ್ರಮಣಕಾರಿ ಮತ್ತು ಪ್ರತಿಗಾಮಿ ಆರ್ಥಿಕ, ಸಾಮಾಜಿ ಶಕ್ತಿ ಮತ್ತು ವಿದ್ಯಮಾನ. ಇದು ಭಾವೋದ್ರೇಕದ ಮತ್ತು ಭ್ರಾಂತಿಯ ಮಾತುಗಳ ಮೂಲಕ, ʻಮೋಡಿಯಾ ಮಾಧ್ಯಮʼ ಬಳಸಿ ದೊಡ್ಡ ಸಂಖ್ಯೆಯ ಜನರನ್ನು ಮರಳು ಮಾಡಿರುವುದಂತೂ ವಾಸ್ತವ. ಕಾಲನೆಲೆ ಕುಸಿಯುತ್ತಿದ್ದರೂ ಜನರು ನೆಲದತ್ತ ನೋಡದೆ ಆಕಾಶದಲ್ಲಿ ಹಾರುವ ಭಗವಧ್ವಜ ಕಂಡು ಸಂಭ್ರಮಿಸುವ ಮನೋಲೋಕವನ್ನು ಸೃಷ್ಟಿಸಿದ್ದಾರೆ.

AV Eye Hospital ad

ನಿಜ ವಾಸ್ತವ ಮುಖಕ್ಕೆ ಹೊಡೆದು, ಭಾವೋದ್ರೇಕತೆ ತಣಿದು, ಭ್ರಾಂತಿ ಹರಿದು, ಆದ ವಂಚನೆಯ ಅರಿವಾಗಿ, ಬದಲಾವಣೆಯ ಬಿರುಗಾಳಿ ಮೂಡಿ ಜನಸಾಗರ ತಿರುಗಿಬೀಳುವುದರಿಂದ ಮಾತ್ರವೇ ಹೊಸ ಋತುಮಾನ ಪ್ರಾರಂಭವಾಗಲು ಸಾಧ್ಯ. ಈ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಸಿನಿಕರಿಗೆ ಇದು ಅಸಾಧ್ಯ ಎನಿಸಬಹುದು. ಚರಿತ್ರೆಯ ಕಾಲಚಕ್ರದ ಅರಿವಿರುವವರಿಗೆ ಇದು ಅಸಾಧ್ಯದ ವಿಚಾರವಲ್ಲ, ಆಗಿಯೇ ಆಗಲಿರುವ ಭವಿಷ್ಯದ ಸತ್ಯ. ಆದರೆ ಇದು ತನ್ನಿಂತಾನೇ ಸಂಭವಿಸುವುದಿಲ್ಲ, ನಮ್ಮೆಲ್ಲರ ಪ್ರಯತ್ನ ಒಟ್ಟುಗೂಡಬೇಕು, ಹರಳುಗಟ್ಟಬೇಕು, ಸಂದರ್ಭ ಪಕ್ವಗೊಳ್ಳಬೇಕು. ನಮ್ಮ ಪ್ರಧಾನ ಪ್ರಯತ್ನ ಈ ನಿಟ್ಟಿನಲ್ಲೇ ಇರಬೇಕು. ಆದರೆ ಜನಜಾಗೃತಿಯ ಕಟ್ಟೆ ಇನ್ನು ಒಡೆದಿಲ್ಲ, ಜನಪರ್ಯಾಯ ನಿಚ್ಚಳವಾಗಿ ಗೋಚರಿಸುತ್ತಿಲ್ಲ, ಹೋರಾಡುತ್ತಿರುವ ಜನಪರ ಶಕ್ತಿಗಳ ನಿಜವಾದ ಮಿಲನವಿನ್ನೂ ಸಂಭವಿಸಿಲ್ಲ. ನಾವು ಬಹಳ ಗಂಭೀರ ರೀತಿಯಲ್ಲೇ ಸಾಮಾಜಿಕ ಪ್ರತಿರೋಧ ದೊಡ್ಡುತ್ತಿದ್ದರೂ ರಾಜಕೀಯ ಪರ್ಯಾಯವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ನುಗ್ಗುತ್ತಿರುವ ದುಷ್ಟಕೂಟವನ್ನು ತಡೆಯಲು ಸಧ್ಯಕ್ಕೆ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಸೇರಿ ಚುನಾವಣೆಗಳಲ್ಲಿ ಗೆಲ್ಲಬೇಕು. ಸರ್ವಾಧಿಕಾರಿ ಶಕ್ತಿಗಳ ನುಗ್ಗುವಿಕೆಗೆ ʻರೋಡ್ ಹಂಪ್ʼ ಆಗಿ ಸಣ್ಣ ಬ್ರೇಕ್ ಆದರೂ ಬೀಳಬೇಕು. ಕನಿಷ್ಠ ಆಳುವವರ ಜೊತೆ ಗುದ್ದಾಡಲಿಕ್ಕಾದರೂ ಒಂದಷ್ಟು ಪ್ರಜಾತಾಂತ್ರಿಕ ಸ್ಪೇಸ್ ಉಳಿಯಬೇಕು. ಇದಾಗಬೇಕಾದರೆ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಸಕ್ರಿಯಗೊಳ್ಳಬೇಕು, ಬೀದಿಗಿಳಿಯಬೇಕು. ಜನರ ಸಮಸ್ಯೆಗಳಿಗಾಗಿ ದನಿ ಎತ್ತಬೇಕು….ಇದು ನಾವೆಲ್ಲರೂ ಬಯಸುವ ಮನದ ಮಾತು.

ಅಂತೂ ಇಂತೂ ಕಾಂಗ್ರೆಸ್ ಬೀದಿಗೆ ಇಳಿದಿದೆ. ಒಡೆಯುವ ರಾಜಕಾರಣದ ಎದುರು ಜೋಡಿಸುವ ಮಾತನಾಡುತ್ತಿದೆ. ಎಲ್ಲ ಸಮಸ್ಯೆಗಳ ಬಗ್ಗೆ ಅಲ್ಲವಾದರೂ ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳ ಬಗ್ಗೆ ಮಾತನಾಡಲು ಶುರು ಮಾಡಿದೆ. ಅಷ್ಟೇ ಅಲ್ಲದೇ, ತಾವು ಪ್ರಾರಂಭಿಸಿರುವ ಯಾತ್ರೆಗೆ ನಾಗರೀಕ ಸಮಾಜದ ಬೆಂಬಲ ಬೇಕು ಎಂದು ಕೇಳುತ್ತಿದೆ. ಅದರ ಮುಂಚೂಣಿ ನಾಯಕ ರಾಹುಲ್ ಗಾಂಧಿ ಸರಳತೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಜನಸಾಮಾನ್ಯರ ಕಷ್ಟನಷ್ಟಗಳನ್ನು ಆಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ವಿರೋಧಿಸಲಿಕ್ಕಾದರೂ ಏನಿದೆ? ನಾಗರಿಕ ಸಮಾಜದ ಬೆಂಬಲ ಬೇಕು ಎಂದು ಕೇಳಿದಾಗ ಸಲ್ಲದು ಎಂಬ ಹಮ್ಮಿನಲ್ಲಾದರೂ ಯಾವ ಅರ್ಥವಿದೆ?

ಕಾಂಗ್ರೆಸ್ ಮಟ್ಟಿಗೆ ಇದೊಂದು ದಿಟ್ಟ ನಡೆಯೇ ಸರಿ. 3500 ಕಿ.ಮೀಗಳ ಅವಿರತ ನಡಿಗೆ ಸಣ್ಣ ವಿಚಾರವಲ್ಲ. ಅದು ನೀಡುತ್ತಿರುವ ಸಂದೇಶವೂ ಸಕಾರಾತ್ಮಕವಾದುದು. ಹಾಗಾಗಿ ಇದನ್ನು ಸ್ವಾಗತಿಸಲು ಮತ್ತು ಬೆಂಬಲಿಸಲು ಹಿಂದೆಮುಂದೆ ನೋಡಬೇಕಿಲ್ಲ. ಇಂದು ಯಾರೇ ದೇಶದ ಐಕ್ಯತೆಯ ಮಾತನಾಡಿದರೂ ಬೆಂಬಲಿಸಬೇಕು, ಜೊತೆ ನಿಲ್ಲಬೇಕು. ಇದು ಕಾಲದ ಕರೆ. ಕಾಲದ ಕರೆಯ ಜೊತೆ ಬದಲಾವಣೆ ಬಯಸುವವರೆಲ್ಲರೂ ಹೆಜ್ಜೆ ಹಾಕಲೇಬೇಕು. ಆದರೆ ಕಾಲು ಜಾರದಂತೆ, ಮತ್ತೊಂದು ಭ್ರಾಂತಿ ಆವರಿಸಿಕೊಳ್ಳದಂತೆ ಇದನ್ನು ಮಾಡಬೇಕು ಅಷ್ಟೆ.

ಇಂದೂ ಗುದ್ದಾಡಬೇಕು, ನಾಳೆಯೂ...

ಕಾಂಗ್ರೆಸ್ ಸಹ ಬಲಾಢ್ಯರ ಪಕ್ಷ ಎಂಬುದನ್ನು ನಾವು ಮರೆಯಬಾರದು. ಅವರ ನೆಚ್ಚಿನ ನಾಯಕ ರಾಹುಲ್ ಗಾಂಧಿಯ ಮಾತನ್ನೂ ಕೇಳದ, ಪಾಲಿಸದ ಪಕ್ಷ ಅದು ಎಂಬ ವಾಸ್ತವವನ್ನು ಉಪೇಕ್ಷಿಸಬಾರದು. ಸಂಘ ಪರಿವಾರದ ವಿರುದ್ಧದ ಜನಕ್ರಾಂತಿಗೆ ಅದು ನಾಯಕತ್ವ ನೀಡುತ್ತದೆ ಎಂಬ ಭ್ರಮೆಗೆ ಗುರಿಯಾಗಬಾರದು. ಮಾಡಬೇಕಾದ ಕೆಲಸವನ್ನೆಲ್ಲಾ ಬಿಟ್ಟು ಕಾಂಗ್ರೆಸ್ ಹಿಂದೆ ಓಡಬಾರದು. ಕಾಂಗ್ರೆಸ್ ಮಾಡಿರುವ ಅಪರಾಧಗಳನ್ನೆಲ್ಲಾ ಮರೆತು ಕಾಂಗ್ರೆಸ್ಸಿಗೆ ಕ್ಲೀನ್ ಚಿಟ್ ನೀಡಿಬಿಡಬಾರದು. ಒಂದು ಕಾಲದಲ್ಲಿ ಕಾಂಗ್ರೆಸ್ಸನ್ನು ದ್ವೇಷಿಸುತ್ತಿದ್ದ ಕೆಲ ಗಣ್ಯರು ಅದರ ಜೊತೆ ಗುದ್ದಾಟವನ್ನೇ ಕೈಬಿಟ್ಟು ಅನ್ ಕಂಡೀಷನಲ್ ಆಗಿ ಅದರ ಜೊತೆ ಹೆಜ್ಜೆ ಹಾಕುತ್ತಿರುವುದು ಆತಂಕದ ವಿಚಾರವೇ ಹೌದು. ಈ ತಪ್ಪನ್ನು ಖಂಡಿತ ಮಾಡಬಾರದು. ಕಾಂಗ್ರೆಸ್ ಜೊತೆ ಗುದ್ದಾಡುತ್ತಲೇ ಬಂದಿದ್ದೇವೆ, ಇಂದೂ ಗುದ್ದಾಡಬೇಕು, ನಾಳೆ ಅವರು ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚು ಗುದ್ದಾಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗುದ್ದಾಡುವ ಈ ಸ್ಪೇಸ್ ಈಗಿನದಕ್ಕಿಂತ ಖಂಡಿತ ಹೆಚ್ಚಿರುತ್ತದೆ. ಅದಕ್ಕಾಗಿಯೇ ಅದನ್ನಿಂದು ಬೆಂಬಲಿಸಬೇಕು.

Jodo

ಮಾಡಿರುವ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ, ಜನರ ಹಕ್ಕೊತ್ತಾಯಗಳ ಕುರಿತೂ ಖಚಿತ ನಿಲುವು ತೆಗೆದುಕೊಳ್ಳುವಂತೆ ಅದನ್ನು ಒತ್ತಾಯಿಸಬೇಕು. ಇಂದಿನ ತುರ್ತನ್ನು ಗಮನದಲ್ಲಿಟ್ಟುಕೊಂಡು ಈ ನಿಲುವು ತಾಳುತ್ತಲೇ, ಸಮಗ್ರ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ಜಾಗೃತಗೊಳಿಸುವ, ಜನರನ್ನು ಅವರ ಹಕ್ಕುಗಳಿಗಾಗಿ ಸಂಘಟಿಸುವ, ಜನಾಂದೋಲನಗಳನ್ನು ಒಟ್ಟುಗೂಡಿಸುವ, ಜನರ ನಿಜವಾದ ಹೋರಾಟದ ಧೃವವನ್ನು ರೂಪಿಸುವ, ಪರಿಸ್ಥಿತಿ ಪಕ್ವವಾದಾಗ ನಿಜವಾದ ಜನರಾಜಕಾರಣವನ್ನೂ ಮುನ್ನೆಲೆಗೆ ತರುವ ಕರ್ತವ್ಯಗಳನ್ನು ಮರೆಯದೆ ಮುಂದುವರಿಸಬೇಕು, ಅದರಲ್ಲೇ ನಮ್ಮ ಚಿತ್ತ ನೆಟ್ಟಿರಬೇಕು. ಬಿಜೆಪಿ ಮತ್ತು ಸಂಘಪರಿವಾರದ ಜೊತೆಗಿನ ಗುದ್ದಾಟದಲ್ಲಿ ಕಾಂಗ್ರೆಸ್ ಜೊತೆಗೆ ಬರಲು ಸಿದ್ಧವಿದ್ದಲ್ಲಿ ನಾವು ಒಲ್ಲೆ ಎನ್ನಬೇಕಿಲ್ಲ. ಆದರೆ, ಕಾಂಗ್ರೆಸ್ ಪರಿಹಾರವಾಗಬಲ್ಲದು, ಅದನ್ನು ಬೆಂಬಲಿಸಿದರೆ ಸಾಕು ಎಂಬ ಭ್ರಮೆಗೆ ತುತ್ತಾಗಬಾರದು ಅಷ್ಟೆ.

ಈ ಸುದ್ದಿ ಓದಿದ್ದೀರಾ?: ಹಿಜಾಬ್‌ ವಿವಾದ | ಮುಸ್ಲಿಂ ಮಹಿಳೆಯರನ್ನು ಈ ಸಮಾಜ ಒಕ್ಕೊರಲಿನಿಂದ ಸೋಲಿಸಿದೆ

ʻಭಾರತ್ ಜೋಡೋʼವನ್ನು ಬೆಂಬಲಿಸಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿ ಮುಳುಗಿರುವ ನನ್ನ ಒಡನಾಡಿ ಮಿತ್ರರಲ್ಲಿ ಒಂದು ಮನವಿ. ದಯವಿಟ್ಟು ಒಮ್ಮೆ ಎದೆಯ ಮೇಲೆ ಕೈ ಇಟ್ಟು, ಒಂದು ಕ್ಷಣ ಕಣ್ಣು ಮುಚ್ಚಿ ನಮ್ಮ ಒಳಮನ ಏನು ಹೇಳುತ್ತಿದೆ ಎಂದು ಕೇಳಿಸಿಕೊಳ್ಳಿ. ಅದು ಎರಡನ್ನೂ ಹೇಳುತ್ತಿದೆ. ಇಂದು ಬಿಜೆಪಿ ಸೋಲಬೇಕು, ಕಾಂಗ್ರೆಸ್ ಅಥವಾ ಮತ್ತೊಂದು ಅದನ್ನು ಸೋಲಿಸಬಲ್ಲ ಪಕ್ಷ ಗೆಲ್ಲಬೇಕು. ಅದೇ ಸಂದರ್ಭದಲ್ಲಿ ಈ ವಿನಾಶಕಾರಿ ಶಕ್ತಿಗಳನ್ನು ಸಮಾಜದ ಪ್ರತಿ ಅಂಗದಿಂದ ಕಿತ್ತೊಗೆಯಲು ಜನಕ್ರಾಂತಿ ಸಂಭವಿಸಬೇಕು. ಅದಕ್ಕಾಗಿನ ನಮ್ಮ ಕೆಲಸ ಮುಕ್ಕಾಗದಂತೆ ಮುಂದುವರೆಸಬೇಕು. ಮನಸ್ಸಿನ ಈ ಎರಡೂ ಮಾತುಗಳಿಗೂ ತನ್ನದೇ ಅರ್ಥವಿದೆ ಮತ್ತು ಸಂಬಂಧವಿದೆ. ಹೆಚ್ಚು ಗೊಂದಲ ಮಾಡಿಕೊಳ್ಳುವುದು ಬೇಡ. ನಿಜವಾದ ಪರ್ಯಾಯಕ್ಕಾಗಿನ ಮತ್ತು ಸಮಗ್ರ ಬದಲಾವಣೆಗಾಗಿನ ಕೆಲಸವನ್ನು ಸಡಿಲಗೊಳಿಸದೇ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದಾದ ಶಕ್ತಿಗಳಿಗೆ ಶರತ್ತುಬದ್ಧ ಬೆಂಬಲವನ್ನು ನೀಡೋಣ. ಈ ನೆಲೆಯಲ್ಲಿಯೇ ಭಾರತ್ ಜೋಡೋ ಯಾತ್ರೆಗೂ ನಮ್ಮ ʻಕಂಡಿಷನಲ್ ಸಪೋರ್ಟ್ʼ ಇರಲಿ. ಆದರೆ ನಮ್ಮ ಪ್ರಧಾನ ಗಮನ ಜನಪ್ರವಾಹ ರೂಪಿಸುವ ಗುರಿಯ ಕಡೆಯೇ ನೆಟ್ಟಿರಲಿ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app