ಭಾರತ್ ಜೋಡೋ ಯಾತ್ರೆ | ನಾಯಕರ ಸುತ್ತ ʼಮುತ್ತುವʼ ಸೆಲ್ಫಿ ಬೇಟೆಗಾರರು

ಭಾರತ್‌ ಜೋಡೋ ಯಾತ್ರೆಯಲ್ಲಿ ಸೆಲ್ಫಿ ಬೇಟೆಗಾರರು

ʼರಾಜಕೀಯ ಸೆಲ್ಫಿಗಳುʼ, ರಾಜಕಾರಣದಲ್ಲಿ ಸಕ್ರಿಯ ವ್ಯಕ್ತಿಯೊಬ್ಬ ಮಹತ್ವದ ಘಟನೆಗಳಲ್ಲಿ ತಮ್ಮ ಉಪಸ್ಥಿತಿಯನ್ನು ದಾಖಲಿಸುವುದು, ನಾಯಕರೊಂದಿಗಿನ ಅವರ ಸಂಬಂಧಗಳನ್ನು ದೃಢಪಡಿಸುವುದು ಮತ್ತು ಅವರ ವೃತ್ತಿಜೀವನವನ್ನು ಭದ್ರಪಡಿಸುವುದರ ಕುರಿತಾಗಿವೆ. ಇವು ಇಂದಿನ ರಾಜಕೀಯ ಜೀವನದಲ್ಲಿ ತಮ್ಮ ಇರುವಿಕೆಯ ಪ್ರಮಾಣಪತ್ರಗಳಾಗಿವೆ

ನಮ್ಮ ಪೂರ್ವಜರ ಹಳ್ಳಿಯ ಮನೆಯಲ್ಲಿ ಒಂದು ಛಾಯಾಚಿತ್ರವಿದೆ. ನನ್ನ ತಂದೆಯವರು ನಂಬಿ ನಡೆದ ಆದರ್ಶಗಳನ್ನು ಪ್ರತಿನಿಧಿಸುವ, ಅವರ ಇಚ್ಛೆಯಂತೆಯೇ ಅನುಕ್ರಮವಾಗಿ ಗೋಡೆಯ ಮೇಲೆ ಜೋಡಿಸಲಾದ ಕೆಲವು ಫೋಟೋಗಳಲ್ಲಿ ಇದೂ ಒಂದಾಗಿದೆ. ಇದು 1930ರ ದಶಕದ ಆರಂಭದ ಅಲಹಾಬಾದ್‌ನಲ್ಲಿ ತೆಗೆದಿರುವುದು. ಯಾವುದೇ ಶೀರ್ಷಿಕೆ ಅಥವಾ ಸಂಕೇತ ಇಲ್ಲದಿರುವುದರಿಂದ ಸಂದರ್ಭ ಏನೆಂಬುದು ಅಸ್ಪಷ್ಟವಾಗಿದೆ. ಆದರೆ ಇದು ಅಲಹಾಬಾದ್‌ನ, ಬಿಳಿ ಟೋಪಿ ಧರಿಸಿದ ಕಾಂಗ್ರೆಸ್ ಕಾರ್ಯಕರ್ತರ ಸಾಮೂಹಿಕ ಛಾಯಾಚಿತ್ರ ಎಂಬುದು ಸ್ಪಷ್ಟ. ಇದರಲ್ಲಿ ಜವಾಹರಲಾಲ್ ನೆಹರು ಮತ್ತು ಕಮಲಾ ನೆಹರು ಮುಂದಿನ ಸಾಲಿನಲ್ಲಿ ಕುಳಿತಿದ್ದಾರೆ. ಎರಡನೇ ಸಾಲಿನಲ್ಲಿ ಅವರ ಹಿಂದೆ ನಿಂತಿರುವ ಇನ್ನುಳಿದ ಕಾರ್ಯಕರ್ತರಲ್ಲಿ, ನನ್ನ ನಾನಾಜಿ(ತಾಯಿಯ ತಂದೆ) ಬಲ್ಬೀರ್ ಸಿಂಗ್ ಇದ್ದಾರೆ. ಅವರು ಕ್ಷಯರೋಗಕ್ಕೆ ತುತ್ತಾಗಿ ಬಹಳ ಬೇಗ ನಿಧನರಾದರು. ಇದು ನಮ್ಮ ಬಳಿ ಉಳಿದಿರುವ ಅವರ ಏಕೈಕ ಫೋಟೋ ಹಾಗೂ ಸ್ವಾತಂತ್ರ್ಯ ಹೋರಾಟದೊಂದಿಗೆ ನಮ್ಮ ಕುಟುಂಬದ ಒಂದು ಅಮೂಲ್ಯ ಬೆಸುಗೆಯಾಗಿದೆ.

ಆದರೂ, ಅದು ಸೆರೆಹಿಡಿದ ಕ್ಷಣದ ಬಗ್ಗೆ ನನಗೆ ಗೊಂದಲಗಳಿವೆ. ಈ ಫೋಟೋ ಶೂಟ್‌ ಬಗ್ಗೆ ನೆಹರೂ ಅವರಿಗೆ ಹೇಗನ್ನಿಸಿರಬಹುದು? ಅವರು ತನ್ನ ಕಾರ್ಯಕರ್ತರೊಂದಿಗೆ ಸಂತೋಷದಿಂದ ಇದ್ದರೇ? ಅಥವಾ ಮುಂದಿನ ಸಭೆಯ ಆತುರದಲ್ಲಿ ಇದ್ದರೆ? ಅಥವಾ ಕೇವಲ ನಿರಾಸಕ್ತಿಯಿಂದಿದ್ದರೇ? ‘ಯಾವ ಛಾಯಾಚಿತ್ರವು ಯಾವುದೋ ಸಮಯದಲ್ಲಿ ವ್ಯಕ್ತಿಯೊಬ್ಬರಿಗೆ ಏನನ್ನು ಅರ್ಥೈಸಬಲ್ಲದು ಎಂದು ನಿಮಗೆ ತಿಳಿದಿರುವುದಿಲ್ಲ’ ಎಂದು ನನಗೆ ಆ ಛಾಯಾಚಿತ್ರವು ನೆನಪಿಸುತ್ತಿರುತ್ತದೆ. ಛಾಯಾಚಿತ್ರವೊಂದನ್ನು ಪದೇ ಪದೇ ಮುದ್ರಿಸಬಹುದು, ಮತ್ತೆ ಉತ್ಪಾದಿಸಬಹುದು ಮತ್ತು ಅದರ ಅರ್ಥವನ್ನೂ ಕೂಡ. 

Image
ಭಾರತ್‌ ಜೋಡೋ ಯಾತ್ರೆ

ನಾನು ಆ ಛಾಯಾಚಿತ್ರದ ಬಗ್ಗೆ ಯೋಚಿಸುತ್ತೇನೆ. ವಿಶೇಷವಾಗಿ ಈ ದಿನಗಳಲ್ಲಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ, ನಾನು ಸೆಲ್ಫಿಗಳಿಗಾಗಿ ಮುಗಿಬೀಳುವುದನ್ನು ನೋಡುವಾಗ. “ಓಹ್, ಯೋಗೇಂದ್ರಜೀ, ನಾನು ನಿಮ್ಮನ್ನು ಚಿಕ್ಕಂದಿನಿಂದಲೂ ಟಿವಿಯಲ್ಲಿ ನೋಡಿದ್ದೇನೆ...” ಎಂದ ವ್ಯಕ್ತಿಯ ಬೋಳು ತಲೆಯನ್ನು ಗಮನಿಸಿ ನನಗೆ 90ರ ವಯಸ್ಸಾಯಿತೇ! ಎಂದು ನಾನು ಭಾವಿಸಲು ಆರಂಭಿಸಿದಂತೆ. ತೋಳೊಂದು ನನ್ನನ್ನು ಬಳಸಿದ್ದು ಗಮನಕ್ಕೆ ಬರುತ್ತದೆ ಮತ್ತು ಕ್ಯಾಮೆರಾವೊಂದು “ಸ್ಮೈಲ್ ಪ್ಲೀಸ್” ಎಂದು ನನ್ನನ್ನು ಆಹ್ವಾನಿಸುತ್ತದೆ. ಕೆಲವೊಮ್ಮೆ ಹೀಗೆ ಗುಂಪುಗಳೇ ದಾಳಿ ಇಡುತ್ತವೆ. ಅವರು ನನ್ನನ್ನು ಸುತ್ತುವರೆದಿರುತ್ತಾರೆ. ಆದರೆ ಯಾರು ಫೋಟೋ ತೆಗೆಯುತ್ತಾರೆ ಎಂದು ಅವರಿಗೆ  ಖಚಿತವಿರುವುದಿಲ್ಲ. ಕೊನೆಗೆ ಅವರಲ್ಲೊಬ್ಬ ಸ್ವಯಂ ತಯಾರಾಗಿ ಫೋಟೋ ತೆಗೆಯಲು ಎಲ್ಲರನ್ನೂ ಚೌಕಟ್ಟಿನೊಳಗೆ ನಿಲ್ಲಿಸುತ್ತಿರುವಾಗ, ಮಧ್ಯದಲ್ಲಿ ಸೆಲ್ಫಿ ಕೈಯೊಂದು ಹೊರಬಂದು, ಎಲ್ಲರ/ಚಿತ್ರದ  ಚೌಕಟ್ಟನ್ನು ಹಾಳುಮಾಡುತ್ತದೆ. ಗ್ರೂಪ್‌ ಫೋಟೋ ತೆಗೆದ ನಂತರ ಕೆಲವರು ವ್ಯಕ್ತಿಗಳ ಜೊತೆ ಪ್ರತ್ಯೇಕ ಫೋಟೋಗಳನ್ನು ತೆಗೆಸಿಕೊಳ್ಳಲು ಪ್ರಯತ್ನಿಸುತ್ತಾರೆ. ನನಗೆ ಆಯ್ಕೆಯೇ ಇರುವುದಿಲ್ಲ. ಯಾವುದೇ ಮನವಿಯನ್ನು ಪರಾಮರ್ಶಿಸುವ ಅಥವಾ ಫಿಲ್ಟರ್ ಮಾಡುವ ಪ್ರಶ್ನೆಯೇ ಇಲ್ಲ. ಈ ಸೆಲ್ಫಿಗಳಲ್ಲಿ ಯಾವುದಾದರೂ ಒಂದು, ಮುಂದೆಂದಾದರೂ ನನ್ನನ್ನು ಕಾಡುವುದೆಂಬ ಭಯದಲ್ಲಿ ನಾನು ಬದುಕುತ್ತೇನೆ. (ಶ್ರೀಯುತ ABC ವ್ಯಕ್ತಿಯು YY ನಿಕಟ ಸಹಾಯಕರಾಗಿದ್ದರು; ಎಂದು ಈ ಫೋಟೋವನ್ನು ತೋರಿಸುತ್ತ).

ಕೆಲವೊಮ್ಮೆ, ಈ ಸೆಲ್ಫಿ-ಬೇಟೆಗಾರನು ಆತುರದಲ್ಲಿರುತ್ತಾನೆ ಮತ್ತು ಸರಿಯಾದ ನಮಸ್ಕಾರವೊಂದನ್ನು ಕೂಡಾ ಹೇಳದೆ ಸೆಲ್ಫಿ ಎಂಬ ಬಹುಮಾನದೊಂದಿಗೆ ಹೊರನಡೆಯುತ್ತಾನೆ. ಅವರಲ್ಲಿ ಕೆಲವರಿಗೆ ಯಾವುದರ ಅರಿವೂ ಇರುವುದಿಲ್ಲ. ಕೆಲವೊಮ್ಮೆ ಸೆಲ್ಫಿಯ ನಂತರ ಅಪಾಯಕಾರಿಯಲ್ಲದ ತಪ್ಪೊಪ್ಪಿಗೆಯೂ ಇರುತ್ತದೆ: “ನಾನು ನಿಮ್ಮನ್ನು ಎಲ್ಲೋ ನೋಡಿದ್ದೇನೆ. ನಿಮ್ಮ  ಹೆಸರೇನು?'' "ಯೋಗೇಂದ್ರಜೀ, ಏಕ್ ಸೆಲ್ಫಿ ತೊ ಬಂತಿ ಹೈ (ಒಂದು ಸೆಲ್ಫಿಯಾದರೂ ಅತ್ಯಗತ್ಯ)". ಸೆಲ್ಫಿ ಎಲ್ಲಿ ಬೇಕಾದರೂ ಆಗಬಹುದು: ಊಟದ ಟೇಬಲ್‌ನಲ್ಲಿ, ಮಲಗುವ ಜಾಗಗಳಲ್ಲಿ, ಶೌಚಾಲಯದ ವ್ಯವಸ್ಥೆ ಇರುವ ಕೋಣೆಯೊಳಗೆ. ಭಾರತೀಯ ಸೆಲ್ಫಿಯು ಗೌಪ್ಯತೆ ಮತ್ತು ಸ್ವಾರ್ಥದ ಯಾವುದೇ ಪಾಶ್ಚಿಮಾತ್ಯ ಕಲ್ಪನೆಯನ್ನು ನಿರಾಕರಿಸಬಹುದು. ನೀವು ಸಾರ್ವಜನಿಕ ಜೀವನದಲ್ಲಿದ್ದರೆ, ನೀವು ಸಾರ್ವಜನಿಕರದೇ ಆಸ್ತಿಯಾಗಿರುತ್ತೀರಿ.

Image
bharath jodo yathra

ಕೆಲವು ವರ್ಷಗಳ ಹಿಂದೆ ನಡೆದ ಸೆಲ್ಫಿ ದಾಳಿಯೊಂದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ನನ್ನ ಇಬ್ಬರು ಮಕ್ಕಳೊಂದಿಗೆ ದೆಹಲಿಯಲ್ಲಿ ನಡೆದ ವಿಶ್ವ ಪುಸ್ತಕ ಮೇಳಕ್ಕೆ ಹೋಗಿದ್ದೆ. ಇದ್ದಕ್ಕಿದ್ದಂತೆ, ಆ ಸಮಯದಲ್ಲಿ ಕೇವಲ ಏಳು ಅಥವಾ ಎಂಟು ವಯಸ್ಸಿನ ನಮ್ಮ ಚಿಕ್ಕ ಮಗುವಿನ ಮೇಲೆ ಗಮನ ಕಳೆದುಕೊಂಡೆ. ಜನಸಂದಣಿಯ ಮಧ್ಯದಲ್ಲಿ ನನ್ನ ಮಗುವನ್ನು ದಿಗಿಲುಗೊಂಡು ಹುಡುಕುವಾಗ ನನ್ನ ಭುಜದ ಮೇಲೆ ಯಾರೋ ಕೈ ಹಾಕಿದ ಅನುಭವವಾಯಿತು. "ಯೋಗೇಂದ್ರ ಜೀ, ಒಂದು ಸೆಲ್ಫಿ ತಗೋಳ್ಳೋಣವೇ", ಎಂದು ಅವರು ಕೇಳಿದರು. ನಾನು ಅದನ್ನು ನಿರ್ಲಕ್ಷಿಸಿ ಸುತ್ತಲೂ ನೋಡುತ್ತಿದ್ದೆ. ಈಗ ಸೆಲ್ಫಿ ಬೇಕೆಂದು ನಿಶ್ಚಯಿಸಿದ ಆ ವ್ಯಕ್ತಿ ನನ್ನನ್ನು ಪಕ್ಕಕ್ಕೆ ಎಳೆದರು. ನಾನು ನನ್ನ ಪರಿಸ್ಥಿತಿಯನ್ನು ವಿವರಿಸಿದೆ ಮತ್ತು ಬಿಡುವಂತೆ ಮನವಿ ಮಾಡಿದೆ. ಆದರೂ ಅವರು ಒಂದು ಸೆಲ್ಫಿ ಬೇಕು ಎಂದರು. ಈ ಪರಿಸ್ಥಿತಿಯಲ್ಲಿ ನೀವಿದ್ದಿದ್ದರೆ ಏನು ಮಾಡ್ತಿದ್ರಿ ಎಂದು ನಾನು ತಿರುಗಿ ಕೇಳಿದೆ. ಅವರು ಸಹಾನುಭೂತಿಯಿಂದ ತಲೆಯಾಡಿಸಿದರು ಮತ್ತು ಸೆಲ್ಫಿ ಕ್ಲಿಕ್ಕಿಸಲು ಹೋದರು!

ಆದರೂ, ಸ್ವತಃ ಪಾತ್ರಧಾರಿಯಾಗಿ ತನ್ನ ದೃಷ್ಟಿಕೋನದಿಂದ ಪ್ರಪಂಚವನ್ನು ನೋಡುವ, ಬ್ರಹ್ಮಾಂಡದ ಕೇಂದ್ರದಲ್ಲಿರುವ ನಾನು-ನನ್ನ -ನನ್ನಷ್ಟಕ್ಕೇ ಎಂಬ ಧಾಟಿಯೇ, ಸೆಲ್ಫಿಯ ಹಿಂದಿನ ಏಕೈಕ ಪ್ರೇರಕ ಶಕ್ತಿಯಾಗಿರುವುದಿಲ್ಲ. ಆಗಾಗ್ಗೆ, ವಿಚಿತ್ರವಾದ ಸೆಲ್ಫಿಗಳು ಶುದ್ಧ ಪ್ರೀತಿಯ ಅಭಿವ್ಯಕ್ತಿಗಳಾಗಿರುತ್ತವೆ. ಕೆಲವು ವಾರಗಳ ಹಿಂದೆ ಹೈದರಾಬಾದಿನ ಚಾರ್ಮಿನಾರ್ ಕಡೆಗೆ ನಡೆಯುತ್ತಿದ್ದಾಗ ನನಗೆ ಅನಿಸಿದ್ದು ಹೀಗೆ. ಸ್ಮಾರಕಕ್ಕೆ ಹೋಗುವ ಕಿರಿದಾದ ದಾರಿಯೊಳಗೆ, 1 ಕಿ.ಮೀ.ಗಿಂತ ಕಡಿಮೆ ದೂರದ ನಡಿಗೆಯಲ್ಲೇ ನಾನು ಕನಿಷ್ಠ ನೂರು ಬಾರಿ ಸೆಲ್ಫಿಗಳಿಗೆ ಒಳಗಾದೆ. ಈ ಸೆಲ್ಫಿಗಳು ಪುರಸ್ಕಾರದ ಬೇಟೆಗಿಂತ ಹೆಚ್ಚಾಗಿ, ಪುಷ್ಪವೃಷ್ಟಿಯಂತೆ ಭಾಸವಾಯಿತು. ತಮ್ಮ ಫೋನ್‌ಗಳಲ್ಲಿರುವ, ಕೆಲವು ವರ್ಷಗಳ ಹಿಂದೆ ನನ್ನೊಂದಿಗೆ ತೆಗೆದ ಸೆಲ್ಫಿಯನ್ನು ‘ಅಪರಿಚಿತರುʼ ನನಗೆ ತೋರಿಸಿದ ಅಸಂಖ್ಯಾತ ಸಂದರ್ಭಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಾನು ಅವರೊಂದಿಗೆ ಇಲ್ಲದಿದ್ದರೂ ನನ್ನ ಚಿತ್ರ ಅವರ ಜೀವನದ ಒಂದು ಭಾಗವಾಗಿತ್ತು.

ನನಗೆ ನಿಜವಾದ ಗೊಂದಲಗಳಿರುವುದು, ಸ್ವತಃ ಒಂದು ಪ್ರಕಾರವಾಗಿರುವ ರಾಜಕೀಯ ಸೆಲ್ಫಿಗಳ ಬಗ್ಗೆ. ಭಾರತೀಯ ರಾಜಕೀಯದ ಶಬ್ದಕೋಶದಲ್ಲಿ, ಸೆಲ್ಫಿಯು ಸಂಬಂಧಪಟ್ಟ ವ್ಯಕ್ತಿ ತೆಗೆದ ಸ್ವಯಂ-ಭಾವಚಿತ್ರವಾದ ಫೋಟೋಗಳಿಗೆ ಸೀಮಿತವಾಗಿಲ್ಲ. ಇದು ತನ್ನನ್ನು ಒಳಗೊಂಡಿರುವ ಯಾವುದೇ ಫೋಟೋವನ್ನು ಸೂಚಿಸುತ್ತದೆ. ಒಬ್ಬ ರಾಜಕೀಯ ನಾಯಕನು ತನ್ನ ಫೋನ್ ಅನ್ನು ಸಾಮಾನ್ಯವಾಗಿ ಒಬ್ಬ ಯುವಕ ಅಥವಾ ಹಿಂಬಾಲಕನಿಗೆ ಕೊಟ್ಟು, ನನ್ನೊಂದಿಗೆ ತನ್ನ 'ಸೆಲ್ಫಿ' ತೆಗೆದುಕೊಳ್ಳುವಂತೆ ಕೇಳಿಕೊಳ್ಳುವುದನ್ನು ನಾನು ಆಗಾಗ್ಗೆ ನೋಡುತ್ತೇನೆ. ಇಲ್ಲಿನ, ಸೆಲ್ಫಿ ಶೈಲಿಯು ನನ್ನ ಸೆಲ್ಫಿಯಲ್ಲಿ ನಾನು ಯಾವ ಭಂಗಿಯನ್ನ ಅನುಸರಿಸಲಿದ್ದೇನೆ ಎಂಬುದರ ಬಗ್ಗೆ ಅಲ್ಲ, ಆದರೆ ನನ್ನ ಸೆಲ್ಫಿಯಲ್ಲಿ ನೀವು ಯಾವ ಶೈಲಿಯಲ್ಲಿ ನಿಲ್ಲಬೇಕು ಎಂಬುದರ ಕುರಿತಾಗಿದೆ. ಹಸ್ತಲಾಘವದ ಭಂಗಿಯಿಂದ ಆಶೀರ್ವಾದದವರೆಗೆ ಮತ್ತು "ನನ್ನ ಭುಜದ ಮೇಲೆ ನಿಮ್ಮ ಕೈ ಹಾಕಿ ನಿಲ್ಲಿ” ಎಂಬುದರವರೆಗೆ...

Image
ಭಾರತ್‌ ಜೋಡೋದಲ್ಲಿ ಸೆಲ್ಫಿ ಬೇಟೆಗಾರರು

ಪಾಶ್ಚಿಮಾತ್ಯರಂತೆ, ಭಾರತೀಯ ರಾಜಕೀಯ ಸೆಲ್ಫಿಯು ವಿಭಜಿತ ಸಮಾಜದಲ್ಲಿನ ಒಂಟಿತನದ ಅಭಿವ್ಯಕ್ತಿಯಲ್ಲ. ಇದು ಎಷ್ಟು ಸಾಧ್ಯವೋ ಅಷ್ಟು ಸಾರ್ವಜನಿಕವಾಗಿರುತ್ತದೆ. ನಮ್ಮ ಸೆಲ್ಫಿ ಜನರನ್ನೊಳಗೊಂಡದ್ದು ಹಾಗೂ ಜನರಿಗಾಗಿ. ಇದು ಪ್ರತ್ಯೇಕತೆಯನ್ನು ದಾಖಲಿಸುವ ಅಥವಾ ವಿಶೇಷ ಚಿತ್ತ/ಕ್ಷಣವನ್ನು ಸೆರೆಹಿಡಿಯುವ ಬಗ್ಗೆ ಅಲ್ಲ. ರಾಜಕೀಯ ಸೆಲ್ಫಿಗಳು, ರಾಜಕಾರಣದಲ್ಲಿ ಸಕ್ರಿಯ ವ್ಯಕ್ತಿಯೊಬ್ಬ ಮಹತ್ವದ ಘಟನೆಗಳಲ್ಲಿ ತಮ್ಮ ಉಪಸ್ಥಿತಿಯನ್ನು ದಾಖಲಿಸುವುದು, ನಾಯಕರೊಂದಿಗಿನ ಅವರ ಸಂಬಂಧಗಳನ್ನು ದೃಢಪಡಿಸುವುದು ಮತ್ತು ಅವರ ವೃತ್ತಿಜೀವನವನ್ನು ಭದ್ರಪಡಿಸುವುದರ ಕುರಿತಾಗಿವೆ. ಇವು ಇಂದಿನ ರಾಜಕೀಯ ಜೀವನದಲ್ಲಿ ಉಪಸ್ಥಿತಿ ಮತ್ತು ಯೋಗ್ಯತೆಯ ಪ್ರಮಾಣಪತ್ರಗಳಾಗಿವೆ.

ಛಾಯಾಚಿತ್ರವು ಪ್ರಾತಿನಿಧ್ಯಕ್ಕೆ ಸಂಬಂಧಿಸಿದೆ. ಸೆಲ್ಫಿಯೂ ಕೂಡ ಹಾಗೆಯೇ, ರಾಜಕೀಯ ಸೆಲ್ಫಿ ಎಂದರೆ ರಾಜಕೀಯ ಪ್ರಾತಿನಿಧ್ಯದ ಕುರಿತಾದುದು: ‘ಸಂಭಾವ್ಯ ವೀಕ್ಷಕರಿಗೆ ತನ್ನನ್ನು ತಾನು  ಪ್ರಸ್ತುತಪಡಿಸಲು, ಚಿತ್ರದ ಮೂಲಕ ರಾಜಕೀಯ ಸಂದೇಶವನ್ನು ನೀಡಲು, ಅಧಿಕಾರಕ್ಕೆ ಹಕ್ಕು ಸಾಧಿಸಲು, ಏನನ್ನಾದರೂ ಅಥವಾ ಯಾರನ್ನಾದರೂ ಪ್ರತಿನಿಧಿಸುವ ನನ್ನ ಹಕ್ಕನ್ನು ಆ ವೀಕ್ಷಕರು ಅಂಗೀಕರಿಸಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಲು ಸೆಲ್ಫಿ ಬಳಕೆಯಾಗಬಹುದು.

ಆದ್ದರಿಂದ ರಾಜಕೀಯ ಸೆಲ್ಫಿಯು ರಾಜಕೀಯ ಪ್ರಾತಿನಿಧ್ಯದ ವಿರೋಧಾಭಾಸದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಾರ್ವಜನಿಕವಾಗಿ ತಮ್ಮನ್ನು ಪ್ರತಿನಿಧಿಸಿಕೊಳ್ಳಲು ಬಯಸುವವರ ಪ್ರಮಾಣವು ಅಗಾಧ ಪ್ರಗತಿಯನ್ನು ಕಂಡಿರುವುದಕ್ಕೆ, ಅಗ್ಗದ ಸ್ಮಾರ್ಟ್‌ಫೋನ್‌ಗಳು ಮತ್ತು ಇಂಟರ್ನೆಟ್ ಕ್ರಾಂತಿಗೆ ಧನ್ಯವಾದಗಳನ್ನು ಹೇಳಬೇಕು. ಅಗ್ಗದ ಸ್ಮಾರ್ಟ್‌ಫೋನ್ ಹೊಂದಿರುವ ಸಾಮಾನ್ಯ ವ್ಯಕ್ತಿಯೊಬ್ಬ, ರಾಜಕೀಯ ನಾಯಕನನ್ನು ಸೆಲ್ಫಿಯ ಬಲೆಯ ಮೂಲಕ ಸೆರೆಹಿಡಿಯಲು ಸಾಧ್ಯವಾಗುವುದರಲ್ಲಿ ಆಳವಾದ ಪ್ರಜಾಪ್ರಭುತ್ವದ ಅಂಶವಿದೆ.

ಪಕ್ಷದ ಸಂಘಟನೆಗಳು ಟೊಳ್ಳಾದ ರಾಜಕೀಯ ಜಗತ್ತಿನಲ್ಲಿ, ನಾಯಕರ ಸಾಮೀಪ್ಯವೊಂದೇ  ಪ್ರಸ್ತುತತೆಯ ಏಕೈಕ ವ್ಯವಸ್ಥೆಯಾಗಿರುವಾಗ ಮತ್ತು ನಾಯಕನ ಆತ್ಮೀಯ ವಲಯಕ್ಕೆ ಸಿಗುವ ಪ್ರವೇಶವೇ ಶಕ್ತಿಯಾಗಿರುವ, ಸೆಲ್ಫಿಯೊಂದು ಜನರು ಮತ್ತು ಅಧಿಕಾರದ ನಡುವಿನ ಸೇತುವೆಯಾಗಿದೆ. ಪ್ರತಿಯೊಂದು ಬದಲಾವಣೆಯೂ ಒಂದು ಘಟನೆಯಾಗಿ, ಪ್ರತಿ ಘಟನೆಯೂ  ವ್ಯಕ್ತಿ ಕೇಂದ್ರಿತವಾಗಿ ಮತ್ತು ವ್ಯಕ್ತಿಯನ್ನು ಚಿತ್ರಕ್ಕೆ ಇಳಿಸುವ ಯುಗದಲ್ಲಿ, ಸೆಲ್ಫಿಯು ನಿಮ್ಮನ್ನು ನೀವು  ಇತಿಹಾಸದಲ್ಲಿ ಸೇರಿಸಿಕೊಳ್ಳುವ ಒಂದು ಮಾರ್ಗವಾಗಿದೆ.

Image
ಭಾರತ್‌ ಜೋಡೊದಲ್ಲಿ ಸೆಲ್ಫಿ ಬೇಟೆಗಾರರು

ಇದನ್ನು ಓದಿದ್ದೀರಾ? ಕೆಲವು ವೆಬ್‌ ಸರಣಿಗಳು ಯುವಕರನ್ನು ಹಿಂಸೆಗೆ ಪ್ರಚೋದಿಸುತ್ತಿವೆ | ಸಮೀಕ್ಷೆ

ಸಾರ್ವಜನಿಕ ಸಂವಹನದಲ್ಲಿ, ಚಿತ್ರಗಳಿಂದ ತುಂಬಿರುವ ಜಾಹೀರಾತು ಫಲಕಗಳು(flex) ಪ್ರಾಬಲ್ಯ ಸಾಧಿಸಿರುವಾಗ (ನನ್ನ ಸ್ನೇಹಿತ ಫಹೀಮ್ ಇದನ್ನು 'ಚಿತ್ರಹಾರ್ ಆನ್ ಫ್ಲೆಕ್ಸ್' ಎಂದು ಕರೆಯುತ್ತಾರೆ), ಸೆಲ್ಫಿಯು ಬಡವನೊಬ್ಬ ತನ್ನ ಖಾಸಗಿ ಜಾಹೀರಾತು ಫಲಕವನ್ನು ಅವನ ಫೋನ್ ಪರದೆಯಲ್ಲಿ  ರೂಪಿಸುವ ಮಾರ್ಗವಾಗಿದೆ. ಪ್ರಾತಿನಿಧ್ಯದ ಈ ಹೊಸ ಹಕ್ಕುಗಳು ಅಧಿಕಾರದ ನೋಟವನ್ನೇ  ಅನುಸರಿಸುತ್ತವೆ ಮತ್ತು ಅಸ್ತಿತ್ವದಲ್ಲಿರುವ ಶ್ರೇಣಿಗಳನ್ನು ದೃಢೀಕರಿಸುತ್ತವೆ ಎಂಬುದು ನಿಜ. ಆದರೆ ಹಾಗೆ ಹೇಳುವುದು ಕುಹಕದಂತೆ ಕೇಳಿಸಬಹುದು. ಗಣ್ಯ ಶಿಷ್ಟಾಚಾರಗಳು, ಉನ್ನತ ನೈತಿಕತೆ ಮತ್ತು ಸ್ವೀಕೃತ ಸೃಜನಶೀಲತೆಯ ನಿಯಮಗಳಿಗೆ ಬದ್ಧರಾಗಿ, ಈ ತೊಂದರೆಯ ಚಟುವಟಿಕೆಗಳನ್ನು  ನಿರ್ಣಯಿಸಲು(judge) ನಮಗೇನು ಅಧಿಕಾರವಿದೆ?

ಸೆಲ್ಫಿ ಒಂದು ಸ್ವಾರ್ಥ ಚಟುವಟಿಕೆಯಾಗಿದ್ದರೆ, ಸಮಸ್ಯೆ ನಮ್ಮ ಕಾಲದಲ್ಲಿ ನಾವು ಪ್ರಚಾರ ಮಾಡಿದ ಸ್ವಯಂ ಮಾದರಿಯಲ್ಲಿದೆ. ಸೆಲ್ಫಿ ಒಂದು ಕಾಯಿಲೆಯಾಗಿದ್ದಲ್ಲಿ, ಚಿಕಿತ್ಸೆಗೆ ಗುರಿಯಾಗಬೇಕಾದದ್ದು ನಮ್ಮ ನಾಗರಿಕತೆ, ಆದರೆ ಸೆಲ್ಫಿ ಬೇಟೆಯಲ್ಲಿರುವ ವ್ಯಕ್ತಿಯಲ್ಲ. ರಾಜಕೀಯ ಸೆಲ್ಫಿಗಳು ರೋಗಗ್ರಸ್ಥವಾಗಿದ್ದಲ್ಲಿ, ಅವು ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವಗಳ ಬಿಕ್ಕಟ್ಟನ್ನು ಮಾತ್ರವೇ ಪ್ರತಿಬಿಂಬಿಸುತ್ತಿವೆ ಎಂದರ್ಥ

ಅನುವಾದ: ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180