ಪಠ್ಯಪುಸ್ತಕದಲ್ಲಿ ವಿಕೃತಿ ಮೆರೆದ ಬ್ರಾಹ್ಮಣ್ಯ: ಡಾ.ಜೆ.ಎಸ್.‌ ಪಾಟೀಲ್

karnataka textbooks 1

ಕೇಂದ್ರ, ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಹಿಡಿದಾಗಲೆಲ್ಲ ಮಾನವ ಸಂಪನ್ಮೂಲ ಇಲಾಖೆಯ ಜವಾಬ್ದಾರಿಯು ಹಿಂದುತ್ವವಾದಿ ಬ್ರಾಹ್ಮಣರ ಹೆಗಲೇರುವುದು ಒಂದು ಪೂರ್ವನಿಯೋಜಿತ ಹುನ್ನಾರ. ಬ್ರಿಟಿಷರು ಸಂಶೋಧಿಸುವ ತನಕ ಒಂದು ಇತಿಹಾಸ ಇದೆ ಎಂಬುದೇ ಗೊತ್ತಿಲ್ಲದ ನಾವು ಆರ್ಯರು ಹೇಳುತ್ತಿದ್ದ ಕಾಲ್ಪನಿಕ ಕತೆಗಳನ್ನೇ ನಂಬಿಕೊಂಡು ಬಂದವರು.

ಸಿಂಧೂ ಕಣಿವೆಯ ಮೂಲಕ ಆರ್ಯ ಸನಾತನಿಗಳು ದನ ಮೇಯಿಸಿಕೊಂಡು, ಕಳ್ಳರಂತೆ ಈ ನೆಲದ ಮೇಲೆ ಕಾಲಿಟ್ಟಾಗಲೇ ಈ ದೇಶಕ್ಕೆ ದುರ್ಗತಿ ಆರಂಭವಾಯಿತು. ಆರಂಭದಲ್ಲಿ ದ್ರಾವಿಡ ಶೈವ ಸಂಸ್ಕೃತಿಯನ್ನು ಹುಡಿಗೊಳಿಸಿ ಇಲ್ಲಿ ಪಾರಮ್ಯ ಮೆರೆದ ಆರ್ಯರು ಈ ನೆಲಕ್ಕೆ ಅಂದಿನಿಂದ ಇಂದಿನವರೆಗೆ ನಿಷ್ಟರಾಗಿ ಬದುಕಲೇಯಿಲ್ಲ. ಮೊದಲು ಮೊಘಲರಾದಿ ಮುಸ್ಲಿಮ್ ಆಳರಸರ ದಿವಾನಗಿರಿ ಮಾಡುತ್ತಾ ವರ್ಣಾಶ್ರಮ ವ್ಯವಸ್ಥೆ ಪೋಷಿಸಿಕೊಂಡು, ಆನಂತರ ಇಡೀ ದೇಶ ಸ್ವಾತಂತ್ರ ಚಳವಳಿಯಲ್ಲಿ ಭಾಗಿಯಾಗಿದ್ದಾಗ ಬ್ರಿಟೀಷರ ಗುಲಾಮಗಿರಿ ಮಾಡುತ್ತ ಈ ದೇಶಕ್ಕೆ ದ್ರೋಹ ಬಗೆದವರು ಈ ಸನಾತನಿ ಆರ್ಯರು. ಇಂದಿನ ಅಧುನಿಕ ಕಾಲಘಟ್ಟದಲ್ಲಿ ರಾಷ್ಟ್ರಭಕ್ತಿ ಮತ್ತು ಹಿಂದುತ್ವದ ಹೆಸರಿನಲ್ಲಿ ಸಂಘಟನೆ ಮತ್ತು ರಾಜಕೀಯ ಪಕ್ಷವನ್ನು ಕಟ್ಟಿಕೊಂಡು ಮತ್ತೆ ಈ ದೇಶವನ್ನು ಹಾಳುಗೆಡವುತ್ತಿದ್ದಾರೆ.

ಬಿಜೆಪಿ ಈ ದೇಶದ ಚುಕ್ಕಾಣಿ ಹಿಡಿದು ಆಳುತ್ತಿರುವ ಈ ದಿನಗಳು ನಿಜವಾದ ದೇಶಭಕ್ತರ ಪಾಲಿಗೆ ಆತಂಕದ ಕಾಲಘಟ್ಟ. ಕೇಂದ್ರ ಸರಕಾರ ಮತ್ತು ಬಿಜೆಪಿಯ ಮೇಲೆ ಯಜಮಾನಿಕೆ ಹೊಂದಿರುವ ಪ್ರತಿಗಾಮಿ ಶಕ್ತಿಗಳ ಮಾರ್ಗದರ್ಶನದಂತೆ ವಿವಿಧ ರಾಜ್ಯಗಳಲ್ಲಿನ ಬಿಜೆಪಿ ಆಡಳಿತ ತೆಗೆದುಕೊಳ್ಳುತ್ತಿರುವ ವಿವಾದಾತ್ಮಕ ನಿರ್ಧಾರಗಳು ಈ ದೇಶದ ಬಹುತ್ವ ಸಂಸ್ಕೃತಿಯ ಮೇಲಿನ ಕ್ರೂರ ದಾಳಿ. ಕೇಂದ್ರದಲ್ಲಾಗಲಿ ಅಥವಾ ರಾಜ್ಯಗಳಲ್ಲಾಗಲಿ ಬಿಜೆಪಿ ಆಡಳಿತ ಹಿಡಿದಾಗಲೆಲ್ಲ ಮಾನವ ಸಂಪನ್ಮೂಲ(ಶಿಕ್ಷಣ) ಇಲಾಖೆಯ ಜವಾಬ್ದಾರಿಯು ಹಿಂದುತ್ವವಾದಿ ಸಂಘಟನೆ ಹಿನ್ನೆಲೆಯ ಬ್ರಾಹ್ಮಣ ವ್ಯಕ್ತಿಯ ಹೆಗಲೇರುವುದು ಒಂದು ಪೂರ್ವನಿಯೋಜಿತ ಹುನ್ನಾರ. ಬ್ರಿಟಿಷರು ಸಂಶೋಧಿಸುವ ತನಕ ನಮಗೆಲ್ಲ ಒಂದು ಇತಿಹಾಸ ಇರುವುದೇ ಗೊತ್ತಿಲ್ಲದ ನಾವು ಆರ್ಯರು ಹೇಳುತ್ತಿದ್ದ ಕಾಲ್ಪನಿಕ ಪುರಾಣಗಳನ್ನೇ ನಂಬಿಕೊಂಡು ಬಂದವರು.

ಮೂರನೇ ದರ್ಜೆಯ ವ್ಯಕ್ತಿಯಿಂದ ಪಠ್ಯ ಪರಿಷ್ಕರಣೆ

ಬಿಜೆಪಿ ಆಡಳಿತದ ಶಿಕ್ಷಣ ಇಲಾಖೆಯ ಪರಮ ದುರುದ್ದೇಶವೆಂದರೆ ಭಾರತದ ಅಸಲಿ ಚರಿತ್ರೆಯನ್ನು ತಿರುಚಿ ಶಿಕ್ಷಣವನ್ನು ವೈದಿಕೀಕರಣಗೊಳಿಸುವುದು. ಇಂದಿನ ದಿನಗಳಲ್ಲಿ ಈ ಕೃತ್ಯ ಬಹಳ ವೇಗವನ್ನು ಪಡೆದುಕೊಂಡಿದೆ. ಬಹುತ್ವ ಸಂಸ್ಕೃತಿಯ ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಪ್ರತಿಪಾದಿಸುತ್ತ ಅದಕ್ಕೆ ಜನಿವಾರ ತೊಡಿಸುವ ಕುಟಿಲ ಹುನ್ನಾರಗಳು ಬಿಜೆಪಿ ಇಂದು ಮಾಡುತ್ತಿದೆ. ವೈದಿಕರು ತಾವು ನಂಬುವ ದೇವರು, ಧರ್ಮ, ಪರಂಪರೆ, ಆಚರಣೆ ಹಾಗೂ ಶಾಸ್ತ್ರಗಳು ಇಡೀ ದೇಶದ ಜನರ ತಲೆಯ ಮೇಲೆ ಹೇರುವ ಹೇಯ ಕಾರ್ಯ ಮಾಡುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿಯೇ ಇಂದು ಕರ್ನಾಟಕ ಸರ್ಕಾರ ಮಾಡುತ್ತಿರುವ ಶಿಕ್ಷಣದ ಬ್ರಾಹ್ಮಣೀಕರಣ. ಸರಕಾರವು ಶಾಲಾ ಪಠ್ಯ ಪರಿಷ್ಕರಿಸುವ ನೆಪದಲ್ಲಿ ಕಲಿಕಾ ಕ್ರಮವನ್ನು ಹಿಂದುತ್ವವಾದಿಗಳ ಮೂಗಿನ ನೇರಕ್ಕೆ ರೂಪಿಸುತ್ತಿದೆ. ಪಠ್ಯ ಪರಿಷ್ಕರಣೆಯ ಗುರುತರ ಜವಾಬ್ದಾರಿಯನ್ನು ಸರ್ಕಾರ ಯಾವುದೇ ಶೈಕ್ಷಣಿಕ ಹಿನ್ನೆಲೆ ಹೊಂದಿರದ ಹಾಗು ಹಿಂದುತ್ವದ ಹೆಸರಿನಲ್ಲಿ ರಸ್ತೆಗಳಲ್ಲಿ ಕಲ್ಲೆಸೆಯುವಂತೆ ಯುವಕರಿಗೆ ಪ್ರಚೋದಿಸುವ ಮೂರನೇ ದರ್ಜೆಯ ವ್ಯಕ್ತಿಯ ಕೈಗೆ ನೀಡಿದೆ.

ಬಿಜೆಪಿ ಸರ್ಕಾರ ಶಾಲಾ ಪಠ್ಯಕ್ರಮದ ಬ್ರಾಹ್ಮಣೀಕರಣ ಕಾರ್ಯವು ವೈದಿಕ ಮತಧರ್ಮಶಾಸ್ತ್ರವಾಗಿರುವ ಹಾಗು ನಮ್ಮೆಲ್ಲರ ಧರ್ಮಗ್ರಂಥವೆಂದು ವೈದಿಕರಿಂದ ಬಿಂಬಿಸಲಾಗಿರುವ ಭಗವದ್ಗೀತೆಯ ಬೋಧನೆಯಿಂದ ಆರಂಭಿಸುತ್ತಿದೆ. ಹಿಂದುತ್ವ ಸಂಘಟನೆಗಳ ರಾಯಭಾರಿಯಂತಿರುವ ಕರ್ನಾಕಟದ ಶಿಕ್ಷಣ ಸಚಿವ ಶಾಲೆಗಳಲ್ಲಿ 'ನೈತಿಕ ಶಿಕ್ಷಣ'ದ ಭಾಗವಾಗಿ ಗೀತೆಯನ್ನು ಬೋಧಿಸಿದರೆ ತಪ್ಪೇನು ಎಂದು ಪ್ರಶ್ನಿಸುವ ಮೂಲಕ ಶಿಕ್ಷಣದ ಕೇಸರೀಕರಣದ ಸುಳಿವು ನೀಡಿಯಾಗಿದೆ. ಶಾಲೆಗಳಲ್ಲಿ ಭಗವದ್ಗೀತೆಯ ಬೋಧನೆಯ ನಿರ್ಧಾರವು ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿದೆ ಎನ್ನಲಾಗುತ್ತಿದೆ. ಈಗಾಗಲೇ NCERT ಪಠ್ಯಪುಸ್ತಕಗಳಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ.

ಶಾಲಾ ಪಠ್ಯ ಮತ್ತು ಮಕ್ಕಳ ಕಲಿಕಾ ಕ್ರಮವನ್ನು ವೈದಿಕೀಕರಿಸುವ ಬಿಜೆಪಿಯ ಆಡಳಿತಾತ್ಮಕ ನಡೆ ಹಿಂದುತ್ವವಾದಿ ಪ್ರತಿಗಾಮಿ ಶಕ್ತಿಗಳ ಗುಪ್ತ ಸೂಚಿಯ ಅನುಷ್ಟಾನವನ್ನು ಸ್ಪಷ್ಟಪಡಿಸುತ್ತದೆ. ಭಗವದ್ಗೀತೆಯ ಸಾರವನ್ನು ಸಾರ್ವತ್ರಿಕವಾಗಿ ಮನ್ನಿಸಬೇಕೆಂದು ಹಿಂದುತ್ವವಾದಿಗಳು ವಾದಿಸುತ್ತಾರೆ. ಆದರೆ ಅದು ಒಂದು ಸಾರ್ವತ್ರಿಕವಾಗಿ ಸ್ವೀಕಾರಾರ್ಹ ಸಂದೇಶವಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಭಗವದ್ಗೀತೆಯಂತೆ ಈ ಮಣ್ಣಿನ ಅನ್ಯ ಧರ್ಮಗಳ ಸಂದೇಶ ಕೂಡ ಶಾಲೆಯಲ್ಲಿ ಏಕೆ ಕಲಿಸಬಾರದು ಎನ್ನುವ ಪ್ರಶ್ನೆ ಸಹಜ. ಬಿಜೆಪಿಯ ಈ ನಡೆ ಅನ್ಯ ಧರ್ಮಗಳ ಮೇಲೆ ವೈದಿಕ ಮತದ ಶ್ರೇಷ್ಠತೆಯ ವ್ಯಸನದಿಂದ ಕೂಡಿದ ಸವಾರಿ ಎಂದೇ ವ್ಯಾಖಾನಿಸಲಾಗುತ್ತಿದೆ. ಅನೇಕ ಖ್ಯಾತನಾಮ ವ್ಯಾಖ್ಯಾನಕಾರರು ಗೀತೆಯನ್ನು ವ್ಯಾಖ್ಯಾನಿಸುತ್ತ ಅದೊಂದು ಜನಪ್ರಿಯ ಪಠ್ಯವೆಂದು ಪರಿಗಣಿಸಿದ್ದರೂ ಅದು ಅಷ್ಟೇ ಅಸ್ಪಷ್ಟವಾದ ಹಾಗು ಕಾಲ್ಪನಿಕ ವಿಷಯಗಳಿಂದ ಕೂಡಿದೆ ಎನ್ನಲಾಗುತ್ತಿದೆ.

ಹಾಗಾಗಿ ಭಗವದ್ಗೀತೆಯು ಅಸ್ಪಷ್ಟವಾದ ವೈದಿಕ ಮತಧರ್ಮಶಾಸ್ತ್ರವಾಗಿದ್ದು ಅದನ್ನು ಪಠ್ಯವಾಗಿ ಪರಿಗಣಿಸಬಾರದು ಎನ್ನುತ್ತಾರೆ ಅನೇಕ ಶಿಕ್ಷಣ ತಜ್ಞರು. ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಗೀತೆಯ ಕುರಿತ ಕಿರು ವಿಮರ್ಶೆಯಲ್ಲಿ ಅದರೊಳಗಿನ ಅತ್ಯಂತ ಜನಪ್ರಿಯ ಶ್ಲೋಕವನ್ನು (ಅಧ್ಯಾಯ 2, ಶ್ಲೋಕ 47) ಹೀಗೆ ವ್ಯಾಖ್ಯಾನಿಸುತ್ತಾರೆ:

"ಕರ್ಮಣ್ಯ-ಇ- ವಾಧಿಕಾರಸ್ತೆ ಮಾ ಫಲೇಷು ಕದಾಚನ|
ಮಾ ಕರ್ಮ-ಫಲ-ಹೇತುರ್ ಭೂರ್ ಮಾ ತೇ ಸಂಗೋ ’ಸ್ತ್ವಕರ್ಮಣಿ|"

ಮೇಲಿನ ಶ್ಲೋಕದಲ್ಲಿ ಹೇಳುವಂತೆ ನಾವು ಯಾವುದೇ ಉದ್ದೇಶವಿಲ್ಲದೆ ಕೆಲಸ ಮಾಡಬೇಕು ಎನ್ನುವ ಸಂದೇಶ ಇಂದಿನ ಅಧುನಿಕ ಸ್ಪರ್ಧಾತ್ಮಕ ಕಾಲಘಟ್ಟಕ್ಕೆ ಅನ್ವಯಿಸುವುದಿಲ್ಲ ಹಾಗು ಇದು ಪ್ರಾಯೋಗಿಕ ಮನೋವಿಜ್ಞಾನದ ಪರಿಕಲ್ಪನೆಗೆ ವಿರುದ್ಧವಾಗಿದೆ. ಒಂದು ಉದ್ದೇಶಿತ ಗುರಿಯಿಟ್ಟುಕೊಂಡು ಶಾಲೆಗೆ ಮಕ್ಕಳು ಭಗವದ್ಗೀತೆಯ ಈ ಕರ್ಮ ಸಿದ್ಧಾಂತದಿಂದ ಗೊಂದಲಕ್ಕೊಳಗಾಗುತ್ತಾರೆ. ನಮ್ಮ ಮಕ್ಕಳು ಇಂದು ಪ್ರಚಲಿತ  ತಂತ್ರಜ್ಞಾನˌ ವಿಜ್ಞಾನ ಮುಂತಾದ ರಂಗಗಳಿಗೆ ಸಂಬಂಧಿಸಿದ ಜ್ಞಾನವನ್ನು ಪಡೆದು ಬದುಕು ಕಟ್ಟಿಕೊಳ್ಳಬೇಕಿದೆ. ಆದರೆ ಉದ್ದೇಶಗಳೇ ಇಲ್ಲದ ಕಠಿಣ ಪರಿಶ್ರಮವು ಜೀವನದ ಮೌಲ್ಯಗಳನ್ನೆ ಅಲ್ಲಗಳೆಯುತ್ತದೆ  ಹಾಗು ಅದರೊಳಗಿನ ಕರ್ಮ ಸಿದ್ಧಾಂತ ಮಕ್ಕಳಲ್ಲಿ ಮೌಢ್ಯವನ್ನು ಪ್ರಚೋದಿಸಿ ಮಕ್ಕಳನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ.

Image
Geeta

ಹಾಗಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು "ಭಗವದ್ಗೀತೆಯು ಒಂದು ಧರ್ಮಗ್ರಂಥವಾಗಲಿ ಅಥವಾ ತತ್ವಶಾಸ್ತ್ರ ಗ್ರಂಥವಾಗಲಿ ಅಲ್ಲ" ಎಂದು ಹೇಳುತ್ತಾರೆ ('ಎಸ್ಸೇಸ್ ಆನ್ ದಿ ಭಗವತ್ಗೀತೆ: ಫಿಲಾಸಫಿಕ್ ಡಿಫೆನ್ಸ್ ಆಫ್ ಕೌಂಟರ್-ರೆವಲ್ಯೂಷನ್: ಕೃಷ್ಣ ಅಂಡ್ ಹಿಸ್ ಗೀತಾ': ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದ ಅವರ ಬರಹಗಳು ಮತ್ತು ಭಾಷಣಗಳ ಸಂಪುಟ ೩). ಹೀಗಾಗಿ ಡಾ. ಅಂಬೇಡ್ಕರ್ ಅವರ ಪ್ರಕಾರ ಗೀತೆಯು ತಾತ್ವಿಕ ಆಧಾರದ ಮೇಲೆ ಧಾರ್ಮಿಕ ಸಿದ್ಧಾಂತಗಳನ್ನು ಸಮರ್ಥಿಸುವ ಗ್ರಂಥವಾಗಿದ್ದು ಇದರಲ್ಲಿ ವೈದಿಕ ಧರ್ಮವನ್ನು ರಕ್ಷಿಸಲು ತತ್ವಶಾಸ್ತ್ರವನ್ನು ವ್ಯಾಪಕವಾಗಿ ಬಳಸಲಾಗಿದೆ ಎನ್ನುತ್ತಾರೆ. ಅದಷ್ಟೇ ಅಲ್ಲದೆ ಗೀತೆಯು ವರ್ಣಾಶ್ರಮ ವ್ಯವಸ್ಥೆಯನ್ನು ಸಮರ್ಥಿಸುವ ಮೂಲಕ ಜಾತಿ ವ್ಯವಸ್ಥೆಗೆ ಇಂಬು ನೀಡುತ್ತದೆ ಕೂಡ.
 
ಕರ್ನಾಟಕದಲ್ಲಿ ಶಿಕ್ಷಣವನ್ನು ಬ್ರಾಹ್ಮಣೀಕರಿಸುವ ಕಾರ್ಯ ಯಡಿಯೂರಪ್ಪ ಅವಧಿಯಲ್ಲೇ ಆರಂಭಗೊಂಡಿದೆ. ಹಿಂದುತ್ವವಾದಿ ಸಂಘಟನೆ ಪ್ರಾಯೋಜಿತ ಚಾಣಕ್ಯ ವಿವಿ ಸ್ಥಾಪನೆಯಲ್ಲಿ ಸರ್ಕಾರದ ಬೆಲೆಬಾಳುವ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಿದ ಸರ್ಕಾರ ಬ್ರಾಹ್ಮಣರ ಆರಾಧನಾ ಭಾಷೆಯಾದ ಸಂಸ್ಕೃತ ವಿವಿಗೆ ಹೆಚ್ಚಿನ ಅನುದಾನವನ್ನು ನೀಡಿ ತನ್ನ ಭಂಡತನವನ್ನು ಮೆರೆದಿದೆ. ಯಡಿಯೂರಪ್ಪ ಇಳಿದು ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಹಿಂದುತ್ವವಾದಿಗಳ ನಿಯಂತ್ರಣ ಆಡಳಿತದ ಮೇಲೆ ಮಿತಿ ಮೀರಿದೆ. ಆ ಕಾರಣಗಳಿಂದಲೇ ಪಠ್ಯ ಪುಸ್ತಕ ಪರಿಷ್ಕರಣೆಯ ಗುರುತರ ಜವಾಬ್ದಾರಿಯನ್ನು ಕೋಮುವಾದಿ ಹಿನ್ನೆಲೆಯ ಪಂಡಿತ ಜಾತಿಯ ಪರಮ ಪಾಮರನ ಕೈಗೆ ನೀಡಲಾಗಿದೆ.

ನಿರೀಕ್ಷಿತ ಬೆಳವಣಿಗೆ

ಶಾಲಾ ಪಠ್ಯ ಪರಿಷ್ಕರಣಾ ಸಮಿತಿಯು ಸಂಪೂರ್ಣವಾಗಿ ಬಿಜೆಪಿ ಮತ್ತು ಸಂಘ ಸ್ಥಾಪಕ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಂದ ತುಂಬಿದೆ. ಸಹಜವಾಗಿ ಈ ಸಮಿತಿ ವೈಚಾರಿಕತೆ ಪ್ರತಿಪಾದಿಸುವ ಬ್ರಾಹ್ಮಣೇತರ ಸಮುದಾಯದ ಲೇಖಕರ ಪಠ್ಯಗಳನ್ನ ಕೈಬಿಟ್ಟು ಬ್ರಾಹ್ಮಣ್ಯವನ್ನು ಪ್ರತಿಪಾದಿಸುವ ಬ್ರಾಹ್ಮಣ ಲೇಖಕರ ಪಠ್ಯಗಳಿಗೆ ಮನ್ನಣೆಯನ್ನು ನೀಡಿದೆ. ಇದು ನಿರೀಕ್ಷಿತವಾದ ಬೆಳವಣಿಗೆ ಎಂದೆ ನಾವು ಭಾವಿಸಬೇಕಿದೆ. ಆದರೆ ನಾಡಿನಾದ್ಯಂತ ಬಿಜೆಪಿಯ ಈ ಕುಕೃತ್ಯಕ್ಕೆ ವ್ಯಕ್ತವಾಗುತ್ತಿರುವ ಪ್ರತಿರೋಧಗಳು ಆಶಾದಾಯಕವಾಗಿದ್ದು ಅದಿನ್ನೂ ಯುದ್ದೋಪಾದಿಯಾಗಿ ಪ್ರಕಟವಾಗಬೇಕಿದೆ. ಯಡಿಯೂರಪ್ಪ ನಿರ್ಗಮನದಿಂದ ಬಿಜೆಪಿಗೆ ಆಗಬಹುದಾದ ನಷ್ಟವನ್ನು ಸರಿದೂಗಿಸಲು ಹಾಗು 2023ರಲ್ಲಿ ಆಗದಿದ್ದರೂ ಅದಕ್ಕಿಂತ ಮುಂದಿನ ಅವಧಿಗೆ ಹಿಂದುತ್ವದ ಆಧಾರದಲ್ಲಿ ಬ್ರಾಹ್ಮಣರ ನಾಯಕತ್ವದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳು ಪೀಠಿಕೆಯನ್ನು ಹಾಕುತ್ತಿವೆ.

ಅದಕ್ಕಾಗಿ ಜನರ ಭಾವನೆಗಳನ್ನು ಕೆರಳಿಸುವ ಕಾರ್ಯಗಳು ನಾಡಿನಾದ್ಯಂತ ಬಿಜೆಪಿ ಸಮರೋಪಾದಿಯಲ್ಲಿ ನಡೆಸುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅದ್ಯಕ್ಷ ಹೇಗೆ ಶೂನ್ಯ ಶೈಕ್ಷಣಿಕ ಹಿನ್ನಲೆಯ ಒಬ್ಬ ಬ್ರಾಹ್ಮಣವಾದಿಯೊ ಹಾಗೆಯೆ ತಮ್ಮ ಯೋಗ್ಯತೆಗೆ ತಕ್ಕಂತೆ ಟಿವಿ ಹರಟೆ ಕಾರ್ಯಕ್ರಮದ ವಿದೂಷಕನೊಬ್ಬನ ಲೇಖನವನ್ನು ಶಾಲಾ ಪಠ್ಯದಲ್ಲಿ ಸೇರಿಸಿ ಶಿಕ್ಷಣದ ಪಾವಿತ್ರ್ಯವನ್ನು ಹಾಳುಗೆಡವಿದ್ದಾನೆ. ಬಹುತೇಕ ಬಹುಜನ ಲೇಖಕರ ವೈಚಾರಿಕ ಲೇಖನಗಳನ್ನು ಕೈಬಿಟ್ಟು ಬ್ರಾಹ್ಮಣ ಲೇಖಕರೆಂದು ಗುರುತಿಸಿಕೊಂಡಿರುವ ಹಿಂದುತ್ವವಾದಿಗಳ ಹಾಗು ಬ್ರಿಟಿಷರ ಗುಲಾಮಗಿರಿ ಮಾಡಿ ದೇಶದ ಸ್ವಾತಂತ್ರ ಹೋರಾಟವನ್ನು ಹಾದಿ ತಪ್ಪಿಸಿದವರ ಕುರಿತ ಪಠ್ಯಗಳನ್ನು ಶಾಲಾ ಕಲಿಕಾ ಕ್ರಮದಲ್ಲಿ ಅಳವಡಿಸಲಾಗಿದೆ. ಪುರುಷ ಪ್ರಧಾನ ಬ್ರಾಹ್ಮಣವಾದಿ ವ್ಯವಸ್ಥೆಯನ್ನು ಶಾಲಾ ಪಠ್ಯ ಪರಿಷ್ಕರಣೆಯಲ್ಲೂ ಅಕ್ಷರಶಃ ಪಾಲಿಸಲಾಗಿದೆ. ಬ್ರಾಹ್ಮಣರೇ ಆದರೂ ಆಗಿರಲಿ ಕನಿಷ್ಠ ಸಂಖ್ಯೆಯ ಲೇಖಕಿಯರನ್ನು ಈ ಕಾರ್ಯದಲ್ಲಿ ಪ್ರಜ್ಞಾಪೂರ್ವಕವಾಗಿಯೇ ಕೈಬಿಡಲಾಗಿದೆ.

ಇದನ್ನು ಓದಿದ್ದೀರಾ: 10ನೇ ತರಗತಿಯ ಕನ್ನಡ ಗದ್ಯ-ಪದ್ಯ ಎಲ್ಲವೂ ಪುರುಷರವು! : ಡಾ ಕೆ ಷರೀಫಾ

ಬೊಮ್ಮಾಯಿ ಸರ್ಕಾರದ ಈ ದಿನದ ಎಲ್ಲ ಆಡಳಿತಾತ್ಮಕ ಬೆಳವಣಿಗೆಗಳು ಹಿಂದುತ್ವದ ಹೆಸರಿನ ಬ್ರಾಹ್ಮಣವಾದಿ ಪ್ರತಿಗಾಮಿ ಶಕ್ತಿಗಳ ನಿರ್ದೇಶನದಂತೆ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಪುರೋಹಿತಶಾಹಿ ಪ್ರತಿಗಾಮಿ ಶಕ್ತಿಗಳು ಎಂದೆಂದಿಗೂ ವೈಚಾರಿಕತೆ ಹಾಗು ಪ್ರಗತಿ ವಿರೋಧಿಗಳು ಅಷ್ಟೇ ಅಲ್ಲದೆ ಜೀವವಿರೋಧಿಗಳು ಕೂಡ ಹೌದು. ಧರ್ಮˌ ಸಂಸ್ಕೃತಿˌ ದೇವರುˌ ಆಚರಣೆಗಳ ಮುಖವಾಡದಲ್ಲಿ ಈ ಮಣ್ಣಿನ ಮೂಲ ನಿವಾಸಿಗಳನ್ನು ಕತ್ತಲಿನಲ್ಲಿಟ್ಟು ತಮ್ಮ ಸ್ವಹಿತಾಸಕ್ತಿಯನ್ನು ರಕ್ಷಿಸಿಕೊಂಡು ಬರುತ್ತಿರುವ ಹಿಂದುತ್ವವಾದಿಗಳ ಈ ಆಟಾಟೋಪಕ್ಕೆ ತಡೆಯೊಡ್ಡದಿದ್ದರೆ ನಮ್ಮ ಪೂರ್ವಜರು ಕಟ್ಟಿದ ಈ ದೇಶ ಸರ್ವನಾಶವಾಗುವುದು ನಿಶ್ಚಿತ. ಇದನ್ನು ಇಲ್ಲಿನ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಅರ್ಥಮಾಡಿಕೊಳ್ಳಬೇಕಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್