ಅಡಿಕೆ ಆತಂಕ | ಮಾನ ಕಾಯುವ ಮಾತು ಮತ್ತು ಭೂತಾನ್‌ ಆಮದು ಪೆಡಂಭೂತ

areca

ಎಲೆ ಚುಕ್ಕೆ ರೋಗ ಎಂಬ ಹೊಸ ರೋಗ, ಹಳದಿ ರೋಗ ಎಂಬ ಹಳೆಯ ಬಾಧೆ ಜೊತೆಗೆ ಬೇರು ಹುಳ, ಕೊಳೆರೋಗ, ಭಾರೀ ಮಳೆಯಿಂದ ಫಸಲು ನಷ್ಟದಂತಹ ಕಾರಣಗಳಿಂದಾಗಿ ಕಂಗೆಟ್ಟಿರುವ ಅಡಿಕೆ ಬೆಳೆಗಾರರ ಪಾಲಿಗೆ ಭೂತಾನ್‌ ಅಡಿಕೆ ಹೊಸ ಪೆಡಂಭೂತ. ಅಡಿಕೆ ಮಾರುಕಟ್ಟೆ ಎಂಬ ಜೂಜುಕಟ್ಟೆಯಲ್ಲಿ ಬಿರುಗಾಳಿ ಏಳಲು ಈ ಬೆಳವಣಿಗೆ ನೆಪವಾಗಲಿದೆ

“ಅಡಿಕೆಗೆ ಭಾರತದಲ್ಲಿ ಅತ್ಯಂತ ಪವಿತ್ರ ಸ್ಥಾನವಿದೆ. ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೂ ಅಡಿಕೆಯನ್ನು ಗೌರವ ಸೂಚಕವಾಗಿ ಬಳಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ಸಂಸ್ಕೃತಿಯ ಭಾಗವೇ ಆಗಿರುವ ಇಂತಹ ಅಡಿಕೆಯ ಮಾನ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ”.

Eedina App

2014ರ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಚಿಕ್ಕಮಗಳೂರಿಗೆ ಬಂದಿದ್ದ ಪ್ರಧಾನಿ ಮೋದಿಯವರು ಪ್ರಚಾರ ಸಭೆಯಲ್ಲಿ ಹೇಳಿದ ಮಾತಿದು.

ಮೋದಿಯವರ ಪಕ್ಷ ಆ ಚುನಾವಣೆಯಲ್ಲಿ ಗೆದ್ದು, ಅವರ ಪಕ್ಷವೂ ಭಾರೀ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದು, ಸ್ವತಃ ಅವರೇ ಪ್ರಧಾನಿಯಾಗಿ ಎಂಟು ವರ್ಷ ಉರುಳಿವೆ. ಈ ಎಂಟು ವರ್ಷದಲ್ಲಿ ಕನಿಷ್ಟ ನಾಲ್ಕು ಬಾರಿ ಅದೇ ಅಡಿಕೆಯ ಮಾನ ಕಳೆಯುವ, ಕಳಂಕ ಅಂಟಿಸುವ ಕೆಲಸಗಳು ಅದೇ ಬಿಜೆಪಿಯ ಕೇಂದ್ರ ಸರ್ಕಾರದಿಂದಲೇ ಆಗಿವೆ! ಮೋದಿಯವರು ಹೇಳಿದಂತೆ ಮಾನ ಹೆಚ್ಚಿಸುವುದಿರಲಿ, ಕನಿಷ್ಟ ಇರುವ ಮಾನ ಕಾಯುವ ಕೆಲಸಗಳೂ ಆಗಿಲ್ಲ. 

AV Eye Hospital ad

ಮೋದಿಯವರು ಮಲೆನಾಡು ಮತ್ತು ಕರಾವಳಿ ಭಾಗದ ಚುನಾವಣಾ ಪ್ರಚಾರ ಸಭೆಗಳಲ್ಲಿ ಅಡಿಕೆಯ ಮಾನದ ಬಗ್ಗೆ ಅಪಾರ ಕಾಳಜಿ ತೋರಿಸಲು ಕಾರಣವಾಗಿದ್ದು, ಕೇಂದ್ರದ ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರ ಅಡಿಕೆ ಬೆಳೆಗಾರರಲ್ಲಿ ಹುಟ್ಟಿಸಿದ್ದ ಆತಂಕ. ಕಾಂಗ್ರೆಸ್‌ ನೇತೃತ್ವದ ಸರ್ಕಾರ 2011ರಲ್ಲಿ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬ ಆ ಪ್ರಮಾಣಪತ್ರವನ್ನು ಸಲ್ಲಿಸಿತ್ತು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಡಿಕೆ ಬೆಳೆಗಾರರಿಗೆ ಮಾರಕವಾದ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂಬುದನ್ನೇ ಮುಂದಿಟ್ಟುಕೊಂಡು ರಾಜಕೀಯ ಲಾಭ ಬಾಚುವ ಉದ್ದೇಶದಿಂದ ಮೋದಿಯವರು ಆ ವಿಷಯವನ್ನು ಬಳಸಿಕೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ

ಆದರೆ, ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಎರಡೇ ವರ್ಷದಲ್ಲಿ ಅವರ ಸಂಪುಟದ ಆರೋಗ್ಯ ಸಚಿವರೇ, "ಅಡಿಕೆ ಕ್ಯಾನ್ಸರ್‌ ಕಾರಕ ಅಂಶಗಳಿರುವ ಬಗ್ಗೆ ಪರಿಶೀಲಿಸಿ ಅಡಿಕೆ ಬೆಳೆ ನಿಷೇಧದ ಬಗ್ಗೆ ಕ್ರಮಕೈಗೊಳ್ಳುವುದಾಗಿ" ಹೇಳಿಕೆ ನೀಡಿದ್ದರು.

2016ರಲ್ಲಿ ಅಂದಿನ ಆರೋಗ್ಯ ಸಚಿವರ ಈ ಹೇಳಿಕೆಯ ಬಳಿಕ, ಮತ್ತೆ 2017ರ ಡಿಸೆಂಬರಿನಲ್ಲಿ ಲೋಕಸಭಾ ಕಲಾಪದ ವೇಳೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಆರೋಗ್ಯ ಸಚಿವರಾದ ಅನುಪ್ರಿಯಾ ಪಟೇಲ್‌ ಅವರು, "ಅಡಿಕೆ ತಿನ್ನುವುದರಿಂದಾಗಿ ಮನುಷ್ಯನ ದೇಹದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮಗಳಾಗುತ್ತವೆ" ಎಂದು ಹೇಳಿಕೆ ನೀಡಿದ್ದರು. ಆ ಬಳಿಕ ಮತ್ತೆ 2019ರಲ್ಲಿ ಆರೋಗ್ಯ ಸಚಿವ ಅಶ್ವಿನಿ ಕುಮಾರ್‌ ಚೌಬೆ ಅವರು ಅಡಿಕೆಗೆ ಮತ್ತೊಂದು ಕಳಂಕ ಅಂಟಿಸಿದ್ದರು. "ಅಡಿಕೆ ಕ್ಯಾನ್ಸರ್‌ ಕಾರಕ. ಅದನ್ನು ತಿನ್ನುವುದರಿಂದ ವಿವಿಧ ಅಂಗಗಳ ಮೇಲೆ ಮಾತ್ರವಲ್ಲ; ಒಟ್ಟಾರೆ ಆರೋಗ್ಯದ ಮೇಲೆಯೇ ಅಪಾಯಕಾರಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ" ಎಂದು ಹೇಳಿದ್ದರು.

2019ರ ಫೆಬ್ರವರಿಯಲ್ಲಿ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಅಡಿಕೆಯಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮಗಳಿಲ್ಲ; ವಾಸ್ತವವಾಗಿ ಅದು ಮಾನವ ಆರೋಗ್ಯಕ್ಕೆ ಪೂರಕ ಎಂಬ ವರದಿಯನ್ನು ಸಲ್ಲಿಸಿದ ನಂತರವೂ ಬಿಜೆಪಿಯ ಸಚಿವರು ಅದಾವುದನ್ನೂ ಗಣನೆಗೆ ತೆಗೆದುಕೊಳ್ಳದೇ, ನಿರ್ದಿಷ್ಟವಾಗಿ ಯಾವ ಅಧ್ಯಯನ ಆರೋಗ್ಯಕ್ಕೆ ಅಡಿಕೆ ಹಾನಿಕರ ಎಂದು ಸಾಬೀತು ಮಾಡಿದೆ ಎಂಬುದನ್ನು ಉಲ್ಲೇಖಿಸದೆ ಬಿಡುಬೀಸು ಹೇಳಿಕೆ ನೀಡಿದ್ದರು. 

ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ

ಆ ಬಳಿಕ ಕಳೆದ ಮಾರ್ಚ್‌ನಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು, 'ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಹಿನ್ನೆಲೆಯಲ್ಲಿ ಅಡಿಕೆಯನ್ನು ನಿಷೇಧಿಸುವ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಬೇಕಿದೆ' ಎಂದು ಎಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು. ಅಲ್ಲದೆ, ಆ ವಿಷಯವನ್ನು ಸ್ವತಃ ಸಚಿವರೇ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದರು. 

ಹೀಗೆ ಅಡಿಕೆ ಮಾನ ಕಾಯುವುದಾಗಿ ಹೇಳಿ ಮಲೆನಾಡು ಮತ್ತು ಕರಾವಳಿ ಸೇರಿದಂತೆ ಅಡಿಕೆ ಬೆಳೆಗಾರರ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಮೇಲೆ ಮೋದಿಯವರ ಸರ್ಕಾರ ಅಡಿಕೆ ವಿಷಯದಲ್ಲಿ ನಿರಂತರ ಯೂಟರ್ನ್‌ ಹೊಡೆಯುತ್ತಲೇ ಇದೆ. ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೀಡುಮಾಡುವ ಸರಣಿ ಹೇಳಿಕೆಗಳ ಜೊತೆಗೆ ಇದೀಗ ಭೂತಾನ್‌ನಿಂದ ಭಾರೀ ಪ್ರಮಾಣದ ಅಡಿಕೆಯನ್ನು ಸುಂಕರಹಿತವಾಗಿ ಆಮದುಮಾಡಿಕೊಳ್ಳುವ ಮೂಲಕ ಮತ್ತೊಂದು ಆಘಾತ ನೀಡಿದೆ.

ಅಡಿಕೆ ಬೆಳೆಗಾರರ ಹಿತ ಕಾಯುವ ಉದ್ದೇಶದಿಂದ ಜಾರಿಗೆ ತಂದಿದ್ದ ಅಡಿಕೆ ಆಮದು ನಿರ್ಬಂಧ ನಿಯಮಗಳಿಗೆ ತಿದ್ದುಪಡಿ ತಂದಿರುವ ಕೇಂದ್ರ ಬಿಜೆಪಿ ಸರ್ಕಾರದ ವಾಣಿಜ್ಯ ಸಚಿವಾಲಯ, ಕನಿಷ್ಟ ಆಮದು ಬೆಲೆಯನ್ನು (ಮಿನಿಮಮ್‌ ಇಂಪೋರ್ಟ್‌ ಪ್ರೈಸ್-ಎಂಇಪಿ) ಪ್ರತಿ ಕೆಜಿ ಆಮದು ಅಡಿಕೆಗೆ ₹251ನಿಂದ ಶೂನ್ಯಕ್ಕೆ ಇಳಿಸಿದೆ.

ಹಾಗಾಗಿ ಈಗ ಭೂತಾನ್‌ನಿಂದ ನಯಾಪೈಸೆ ಆಮದು ಸುಂಕವಿಲ್ಲದೆ ಭಾರತಕ್ಕೆ ಅಡಿಕೆ ತರಬಹುದು. ವಾರ್ಷಿಕ 17 ಸಾವಿರ ಟನ್‌ ಅಡಿಕೆಯನ್ನು ಆ ದೇಶದಿಂದ ಹೀಗೆ ಸುಂಕರಹಿತವಾಗಿ ಆಮದು ಮಾಡಿಕೊಳ್ಳಬಹುದು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.

ಈ ಲೇಖನ ಓದಿದ್ದೀರಾ?: ಶತಾವರಿ | ನೀಲಕುರಿಂಜಿ; 12 ವರ್ಷಕ್ಕೊಮ್ಮೆ ಕಾಣುವ ಅತಿಥಿಯನ್ನು ನಡೆಸಿಕೊಳ್ಳುವ ರೀತಿಯೇ ಇದು?

ವಿಪರ್ಯಾಸವೆಂದರೆ, ವಾರ್ಷಿಕ ಕೇವಲ 17,400 ಟನ್‌ ಅಡಿಕೆ ಉತ್ಪಾದನೆ ಮಾಡುವ ಭೂತಾನ್‌ನಿಂದ ಆದೇಶದ ಬರೊಬ್ಬರಿ 17 ಸಾವಿರ ಟನ್‌ ಆಮದು ಅವಕಾಶ ನೀಡಿರುವುದು ಮತ್ತು ಸ್ವತಃ ಭೂತಾನ್‌ ನಮ್ಮ ಭಾರತದಿಂದಲೇ ವಾರ್ಷಿಕ 100 ಟನ್‌ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವಾಗ ಅಲ್ಲಿಂದ ಅಷ್ಟು ದೊಡ್ಡ ಪ್ರಮಾಣದ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ಯಾಕೆ? ಎಂಬ ಪ್ರಶ್ನೆಗಳಿವೆ.

ಅದರಲ್ಲೂ ಎಂಇಪಿಯನ್ನು ಈಗಿನ ಕೆಜಿಗೆ ₹251ನಿಂದ ₹360ಗೆ ಹೆಚ್ಚಿಸಿ ಎಂದು ಬೆಳೆಗಾರರು ಮತ್ತು ಅಡಿಕೆ ವರ್ತಕರ ಒಕ್ಕೂಟಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಹೊತ್ತಲ್ಲಿ, ಸಂಪೂರ್ಣ ವ್ಯತಿರಿಕ್ತ ತೀರ್ಮಾನ ಕೈಗೊಂಡು, ಅಡಿಕೆ ಬೆಳೆಗಾರರು ಮತ್ತು ವರ್ತಕರನ್ನು ಸರ್ಕಾರ ಸಂಕಷ್ಟಕ್ಕೆ ನೂಕಿದೆ.

ಅದರಲ್ಲೂ ಕರ್ನಾಟಕದ ಮಲೆನಾಡು, ಕರಾವಳಿ ಮತ್ತು ಮಧ್ಯಕರ್ನಾಟಕದ ಸುಮಾರು ಹತ್ತು ಜಿಲ್ಲೆಗಳ ಆರ್ಥಿಕತೆಯನ್ನು ನಿರ್ಧರಿಸುವ ವಾರ್ಷಿಕ ಸುಮಾರು ಹತ್ತು ಸಾವಿರ ಕೋಟಿ ವಹಿವಾಟಿನ ಅಡಿಕೆ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರಲಿದೆ. ಸದ್ಯ ದೇಶದಲ್ಲಿ ವಾರ್ಷಿಕ ಸುಮಾರು 8-10 ಲಕ್ಷ ಟನ್‌ ಅಡಿಕೆ ಉತ್ಪಾದನೆಯಾಗುತ್ತಿದ್ದು, ಆ ಪೈಕಿ ಶೇ. 60ರಷ್ಟು ಅಡಿಕೆ ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಹಾಸನ, ಮಡಿಕೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ಹತ್ತು ಜಿಲ್ಲೆಗಳಿಂದಲೇ ಉತ್ಪಾದನೆಯಾಗುತ್ತದೆ.

ಚಿತ್ರ ಕೃಪೆ: ತಿರು

ಆ ಪ್ರಮಾಣಕ್ಕೆ ಹೋಲಿಸಿದರೆ ಭೂತಾನ್‌ನಿಂದ ಆಮದಾಗುವ 17 ಸಾವಿರ ಟನ್‌ ತೀರಾ ದೊಡ್ಡ ಪ್ರಮಾಣವಲ್ಲ ಮತ್ತು ಆಮದಾಗುತ್ತಿರುವುದು ಹಸಿ ಅಡಿಕೆಯಾಗಿರುವುದರಿಂದ ಅದು ಸ್ಥಳೀಯ ಮಾರುಕಟ್ಟೆಯ ಮೇಲೆ ಹೆಚ್ಚೇನು ಪರಿಣಾಮ ಬೀರುವುದಿಲ್ಲ ಎಂಬುದು ಕಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಸೇರಿದಂತೆ ಕೆಲವು ಸಂಸ್ಥೆಗಳ ಮುಖ್ಯಸ್ಥರ ಅನಿಸಿಕೆ. ಆದರೆ, ಈಗಾಗಲೇ ದೇಶದಲ್ಲಿ ಕಳೆದ ಏಪ್ರಿಲ್- ಜುಲೈ ತ್ರೈಮಾಸಿಕದಲ್ಲೇ ಸುಮಾರು 40 ಸಾವಿರ ಟನ್‌ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ. ಕಳೆದ ವರ್ಷ, ಇಡೀ ವರ್ಷದ ಅವಧಿಯಲ್ಲಿ ಆಮದು ಮಾಡಿಕೊಂಡಿದ್ದ ಸುಮಾರು 26 ಸಾವಿರ ಟನ್‌ ಪ್ರಮಾಣಕ್ಕೆ ಹೋಲಿಸಿದರೆ ಇದು ಬಹುತೇಕ ದುಪ್ಪಟ್ಟು. ಈ ಆರ್ಥಿಕ ವರ್ಷದಲ್ಲಿ ಇನ್ನೂ ಎಂಟು ತಿಂಗಳು ಬಾಕಿ ಇರುವುದರಿಂದ ಒಟ್ಟಾರೆ ಈ ಬಾರಿಯ ಅಡಿಕೆ ಅಮದು ಪ್ರಮಾಣ ಕಳೆದ ವರ್ಷದ ದುಪ್ಪಟ್ಟಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಹಾಗಾಗಿ ಭೂತಾನ್‌ನಿಂದ ಬರುವುದು ಮಾತ್ರವಲ್ಲದೆ, ಒಟ್ಟಾರೆ ಈ ವರ್ಷ ದೇಶದೊಳಗೆ ಬಂದಿರುವ ಮತ್ತು ಬರಲಿರುವ ಅಡಿಕೆ ಪ್ರಮಾಣ ಇದೇ ಮೊದಲ ಬಾರಿಗೆ ವಾಡಿಕೆಯ ಹಲವು ಪಟ್ಟು ಹೆಚ್ಚಾಗಲಿದೆ. ಸಹಜವಾಗೇ ಆಮದು ಪ್ರಮಾಣದಲ್ಲಿ ಆಗುವ ಈ ದಿಢೀರ್‌ ಏರಿಕೆ ದೇಶೀ ಮಾರುಕಟ್ಟೆಯ ಸರಕಿನ ಮೌಲ್ಯವನ್ನು ಅಧೋಗತಿಗೆ ತರಲಿದೆ ಎಂಬುದು ಬೆಳೆಗಾರರು ಮತ್ತು ಅಡಿಕೆ ವರ್ತಕರ ಆತಂಕ.

ಅಲ್ಲದೆ, ವಾಸ್ತವವಾಗಿ ಅಡಿಕೆ ಆಮದು ಪ್ರಮಾಣ ಮತ್ತು ಅದು ನಿಜಕ್ಕೂ ಇಲ್ಲಿನ ಬೇಡಿಕೆ ಮತ್ತು ಸರಬರಾಜು ವ್ಯವಸ್ಥೆಯ ಮೇಲೆ ಬೀರುವ ಪರಿಣಾಮಗಳಿಂದಾಗಿ ಆಗುವ ಬೆಲೆ ಏರಿಳಿತಕ್ಕಿಂತ, ಇಂತಹ ಕಾರಣಗಳನ್ನೇ ಮುಂದಿಟ್ಟುಕೊಂಡು ಅಡಿಕೆ ಬೆಲೆಯನ್ನು ದಿಢೀರ್‌ ಇಳಿಸಿ ಬೆಳೆಗಾರರನ್ನು ದೋಚುವ ಅಡಿಕೆ ಮಾರುಕಟ್ಟೆ ಕುಳಗಳ ಕೈವಾಡಗಳೇ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಬಲ್ಲವು.

ಚಿತ್ರ ಕೃಪೆ: ದಿನೇಶ್ ವಾಳ್ಕೆ

ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ ಎ ರಮೇಶ್‌ ಹೆಗಡೆ ಇದೇ ಆತಂಕ ವ್ಯಕ್ತಪಡಿಸುತ್ತಾರೆ. “ದೇಶೀಯ ಅಡಿಕೆ ಮಾರುಕಟ್ಟೆಯಲ್ಲಿ ಲಕ್ಷಾಂತರ ಟನ್‌ ಅಡಿಕೆ ದಾಸ್ತಾನು ಇದ್ದರೂ ಲಕ್ಷಾಂತರ ಬೆಳೆಗಾರರ ಹಿತಾಸಕ್ತಿಗೆ ವಿರುದ್ಧವಾಗಿ ಉತ್ತರ ಭಾರತದ ಕೆಲವೇ ಮಂದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಬೂತಾನ್‌ನಿಂದ ತೆರಿಗೆ ವಿನಾಯಿತಿಯಲ್ಲಿ ಅಡಿಕೆ ಖರೀದಿಗೆ ಅವಕಾಶ ನೀಡಿದೆ. ಇದು ಅಡಿಕೆ ಬೆಳೆಗಾರರಿಗೆ ಬಗೆದ ದ್ರೋಹ. ಅಡಿಕೆ ಮಾರುಕಟ್ಟೆ ಎಂಬುದು ಒಂದು ಮಾಫಿಯಾ ಕೈಯಲ್ಲಿದೆ. ಕರ್ನಾಟಕ, ಕೇರಳ ಸೇರಿದಂತೆ ಅಡಿಕೆ ಬೆಳೆಗಾರರು ಬಹುತೇಕ ದಕ್ಷಿಣ ಕರ್ನಾಟಕದವರಾದರೂ, ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶದಂತಹ ಕೆಲವೇ ಕೆಲವು ಉತ್ತರಭಾರತದ ರಾಜ್ಯಗಳ ಪಾನ್‌ ಮಸಲಾ, ಸುಪಾರಿ ತಯಾರಕರು ಮತ್ತು ಅವರಿಗೆ ಅಡಿಕೆ ಸರಬರಾಜು ಮಾಡುವ ಅಲ್ಲಿನ ವ್ಯಾಪಾರಿಗಳೇ ಇಡೀ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗುವಂತೆ ಕೇಂದ್ರದ ಬಿಜೆಪಿ ಸರ್ಕಾರ ಕೂಡ ಇಂತಹ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂದರೆ; ಅಡಿಕೆ ಮಾರುಕಟ್ಟೆ ಎಂಬ ಜೂಜುಕಟ್ಟೆಯಲ್ಲಿ ಬಿರುಗಾಳಿ ಏಳಲು ಈ ಭೂತಾನ್‌ ಅಡಿಕೆ ನೆಪವಾಗಲಿದೆ. ಈಗಾಗಲೇ ಎಲೆ ಚುಕ್ಕೆ ರೋಗ ಎಂಬ ಹೊಸ ರೋಗ, ಹಳದಿ ರೋಗ ಎಂಬ ಹಳೆಯ ಬಾಧೆ, ಜೊತೆಗೆ ಬೇರು ಹುಳ, ಕೊಳೆರೋಗ, ಭಾರೀ ಮಳೆಯಿಂದಾದ ಫಸಲು ನಷ್ಟದಂತಹ ಕಾರಣಗಳಿಂದಾಗಿ ಕಂಗೆಟ್ಟಿರುವ ಅಡಿಕೆ ಬೆಳೆಗಾರರ ಪಾಲಿಗೆ ಈ ಭೂತಾನ್‌ ಅಡಿಕೆ ಹೊಸ ಪೆಡಂಭೂತವಾಗಿದೆ.

ಮಲೆನಾಡಿನ ಆರ್ಥಿಕತೆಯ ಬೆನ್ನುಮೂಳೆಯೇ ಅಡಿಕೆ. ಹಾಗಾಗಿ ಅಡಿಕೆಯ ಮಾರುಕಟ್ಟೆಯ ಬಿರುಗಾಳಿ ಎಂಬುದು ಕೇವಲ ಅಡಿಕೆ ಮಾರಾಟ ವರ್ತುಲ ಅಥವಾ ಅಡಿಕೆ ಬೆಳೆಗಾರರ ವಲಯಕ್ಕೇ ಮಾತ್ರ ಸೀಮಿತವಾಗಲಾರದು. ಬದಲಾಗಿ ನೇರವಾಗಿ ಇಡೀ ಮಲೆನಾಡಿನ ಬದುಕಿಗೇ ಬಿರುಗಾಳಿಯಾದರೂ ಅಚ್ಚರಿ ಇಲ್ಲ!

ನಿಮಗೆ ಏನು ಅನ್ನಿಸ್ತು?
9 ವೋಟ್
eedina app