ಸ್ವಧರ್ಮ | ದೇಶಕ್ಕೆ ತನ್ನದೇ ಆದ ಧರ್ಮವೊಂದು ಇರಬಹುದೇ? ಅದನ್ನು ಎಲ್ಲಿ ಹುಡುಕುವುದು ?

swadharma

ಒಂದು ದೇಶ ತನ್ನದೇ ಆದ ಧರ್ಮವನ್ನು ಹೊಂದಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೇಲ್ನೋಟಕ್ಕೆ ಈ ಕಲ್ಪನೆಯು ವಿಚಿತ್ರವಾಗಿ ತೋರುತ್ತದೆ. ಧರ್ಮವನ್ನು ಅಳವಡಿಸಿಕೊಂಡು ಅನುಸರಿಸಲು ಪ್ರಜ್ಞಾವಂತ ಧಾರಕನು ಬೇಕು. ಆದ್ದರಿಂದ ಧರ್ಮದ ಧಾರಕನು ಸಚೇತವಾದ ವ್ಯಕ್ತಿಯಷ್ಟೇ ಅಲ್ಲ, ಬಹುಶಃ ಪ್ರಾಣಿಗಳು, ಮರಗಳು ಮತ್ತು ಸಸ್ಯಗಳು ಕೂಡ ಆಗಬಹುದು

ಇಂದು ಭಾರತದ ಸ್ವಧರ್ಮದ ಮೇಲೆ ದಾಳಿ ನಡೆಯುತ್ತಿದೆ ಎಂದು ನಾವು ಯಾವ ಆಧಾರದ ಮೇಲೆ ಹೇಳಬಹುದು? ಈ ಯಕ್ಷ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಸಲುವಾಗಿ, ಈ ಲೇಖನದ ಮೊದಲ ಸಂಚಿಕೆಯಲ್ಲಿ, ನಾನು ಸ್ವಧರ್ಮವನ್ನು ವ್ಯಾಖ್ಯಾನಿಸಲು ಪ್ರಯತ್ನಿಸಿದೆ. ಅದರ ಬಗ್ಗೆ ನನ್ನ ಪ್ರಸ್ತಾವನೆ ಏನೆಂದರೆ, ನಮ್ಮ ಸ್ವಾಭಾವಿಕ ಪ್ರವೃತ್ತಿಯ ಯಾವ ಅಂಶವು ಉತ್ತಮವೆಂದು ಪರಿಗಣಿಸಿ ಅಳವಡಿಸಿಕೊಳ್ಳಲು, ತಮ್ಮದಾಗಿಸಿಕೊಳ್ಳಲು ಬಯಸುತ್ತೇವೆಯೋ ಅದೇ ಸ್ವಧರ್ಮ. ಈ ಅರ್ಥದ ಸ್ವಧರ್ಮದ ಹುಡುಕಾಟ ಮತ್ತು ನಂತರ ಅದರ ಪಾಲನೆಯೇ ಮಾನವ ಜೀವನದ ಆದರ್ಶವಾಗಿದೆ.

Eedina App

ಈಗ ಒಂದು ದೇಶ ತನ್ನದೇ ಆದ ಧರ್ಮವನ್ನು ಹೊಂದಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೇಲ್ನೋಟಕ್ಕೆ ಈ ರೀತಿಯ ಯೋಚನೆಗಳು, ಈ ಕಲ್ಪನೆಯು ವಿಚಿತ್ರವಾಗಿ ತೋರುತ್ತದೆ. ಧರ್ಮವು ಅಳವಡಿಸಿಕೊಳ್ಳುವಂಥದ್ದು.
ಅದನ್ನು ಅಳವಡಿಸಿಕೊಂಡು ಅನುಸರಿಸಲು ಪ್ರಜ್ಞಾವಂತ ಧಾರಕನು ಬೇಕು. ಆದ್ದರಿಂದ ಧರ್ಮದ ಧಾರಕನು ಸಚೇತವಾದ ವ್ಯಕ್ತಿಯಷ್ಟೇ ಅಲ್ಲ, ಬಹುಶಃ ಪ್ರಾಣಿಗಳು, ಮರಗಳು ಮತ್ತು ಸಸ್ಯಗಳು ಕೂಡ ಆಗಬಹುದು. ಆದರೆ ದೇಶದಂತಹ ನಿರ್ಜೀವ ಘಟಕವು ಸ್ವಧರ್ಮ ಹೊಂದುವುದು ಹೇಗೆ ಸಾಧ್ಯ? ದೇಶವು ನಕ್ಷೆಯಲ್ಲಿ ಗುರುತಿಸಲಾದ ರೇಖೆಗಳಿಂದಾಗಿದ್ದರೆ, ಅದಕ್ಕೆ ಇತಿಹಾಸ ಮತ್ತು ಹವಾಮಾನ ಇರಬಹುದು, ಆದರೆ ಧರ್ಮ ಇರಲು ಸಾಧ್ಯವಿಲ್ಲ.

ಧರ್ಮ ಎಂದರೆ ಕೇವಲ ಹಿಂದೂ /ಮುಸ್ಲಿಂ /ಕ್ರೈಸ್ತ ಎಂಬ ಸಂಪ್ರದಾಯಗಳ ಮೊತ್ತ ಎಂದಾದರೆ ದೇಶಕ್ಕೆ ಧರ್ಮವಿರಬಾರದು. "Religion" ಎಂಬ ಇಂಗ್ಲಿಷ್ ಪದವು "ಧರ್ಮ" ಎಂದು ಅನುವಾದಗೊಳ್ಳುವುದರಿಂದ ಈ ತಪ್ಪು ಕಲ್ಪನೆ ಹುಟ್ಟಿದೆ. ನಮ್ಮ ಇಷ್ಟದ ಯಾವುದೇ ದೇವತೆ ಅಥವಾ ಆರಾಧನಾ ವ್ಯವಸ್ಥೆಯೊಂದಿಗೆ ಗುರುತಿಸಿಕೊಳ್ಳುವಿಕೆಯನ್ನು ಪಂಥ ಎನ್ನಬೇಕು, ಧರ್ಮ ಎನ್ನಬಾರದು. ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ವಿವಿಧ ಪಂಥಗಳ ಹೆಸರುಗಳಾಗಿವೆ.

AV Eye Hospital ad

ನಿಸ್ಸಂಶಯವಾಗಿ, ಯಾವುದೇ ಒಂದು ಪಂಥದ ನಂಬಿಕೆಯ ಪ್ರಕಾರ, ಅದರ ಅನುಯಾಯಿಗಳು ತಮ್ಮದೇ ಆದ ಧರ್ಮವನ್ನು ಹೊಂದಲು ಸಾಧ್ಯ ಇದೆ. ಆದರೆ ಯಾವುದೇ ಒಂದು ಪಂಗಡ/ಪಂಥ ಅಥವಾ ಜಾತಿಯ ಧರ್ಮವನ್ನು ಇಡೀ ದೇಶದ ಮೇಲೆ ಹೇರಲು ಸಾಧ್ಯವಿಲ್ಲ. ಜಗತ್ತಿನ ಯಾವ್ಯಾವ ಬಹುಜನಾಂಗೀಯ ದೇಶಗಳಲ್ಲಿ  ಒಂದು ಪಂಥದ ನಂಬಿಕೆ /ಧರ್ಮವನ್ನು ದೇಶದ ಧರ್ಮ ಎಂದು ಗುರುತಿಸುವ ತಪ್ಪು ಮಾಡಲಾಗಿದೆಯೋ, ಆ ದೇಶ ದುರ್ಬಲವಾಗಿದೆ, ಮುರಿದುಹೋಗಿದೆ.

ಆದರೆ ವಿಶೇಷ ಅರ್ಥದಲ್ಲಿ ದೇಶವು ಸ್ವಧರ್ಮವೊಂದನ್ನು ಹೊಂದಬಹುದು. ದೇಶವು ರಾಜಕೀಯವಾಗಿ ಒಂದು ಸಮುದಾಯವಾಗಿದ್ದಲ್ಲಿ ಅದಕ್ಕೆ ತನ್ನದೇ ಆದ ಧರ್ಮವಿರಬಹುದು, ಇರಬೇಕು. ಜಾಗೃತ ವ್ಯಕ್ತಿಯೊಬ್ಬನ (ನಾಯಕನ) ಒಂದು ಧರ್ಮವು, ಪ್ರಜ್ಞಾವಂತರ ಗುಂಪಿನ ಧರ್ಮವೂ ಆಗಬಹುದು. ಆದ್ದರಿಂದ ಒಂದು ರಾಜಕೀಯ ಸಮುದಾಯವನ್ನು ನಿರ್ಮಿಸುವ ಪ್ರಕ್ರಿಯೆಯು ದೇಶಧರ್ಮ/ದೇಶಭಕ್ತಿಯನ್ನು ನಿರ್ಧರಿಸುವ ಕೀಲಿಯಾಗಿದೆ.

holy books

ವ್ಯಕ್ತಿಯ ಸ್ವಧರ್ಮದಲ್ಲಿ , 'ಸ್ವಯಂ'ನ ಆಯಾಮಗಳನ್ನು ಅವನ ಮರ್ತ್ಯ ದೇಹ, ಅವನು ಜನಿಸಿದ ಕುಟುಂಬ, ಜಾತಿ/ವರ್ಗಗಳ ಸಂಯೋಜನೆಯಿಂದ ವ್ಯಾಖ್ಯಾನಿಸಲಾಗುತ್ತದೆ ಮತ್ತು 'ಧರ್ಮ'ವು ಅವನ ಮನಸ್ಸು, ಮಾತು ಮತ್ತು ಕಾರ್ಯಗಳಿಗೆ ಸೀಮಿತವಾಗಿರುತ್ತದೆ. ಒಂದು ದೇಶದಂತಹ ಸಮುದಾಯದ ಸ್ವಧರ್ಮವು ದೀರ್ಘಾವಧಿಯದಾಗಿದ್ದು, ಸಮಯ ಮತ್ತು ಸ್ಥಳಕ್ಕನುಗುಣವಾಗಿ ರೂಪುಗೊಳ್ಳುತ್ತದೆ. ರಾಷ್ಟ್ರೀಯ ಘನತೆಯನ್ನು ವ್ಯಾಖ್ಯಾನಿಸುತ್ತದೆ. ದೇಶದ ಸ್ವಧರ್ಮವನ್ನು ಗುರುತಿಸುವುದು ಮತ್ತು ಅದಕ್ಕೆ ತಕ್ಕಂತೆ ಇತಿಹಾಸ ಚಕ್ರವನ್ನು ತಿರುಗಿಸುವುದು ನಿಜವಾದ “ಪುರುಷತ್ವ”ವಾಗಿದೆ. ಇಲ್ಲಿ ಪುರುಷತ್ವವನ್ನು ಕೇವಲ ಗಂಡು ಎಂದು ಲಿಂಗಸೂಚಕವಾಗಿ ಎಂಬ ಅರ್ಥದಲ್ಲಿ ಮಾತ್ರ ಬಳಸಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು.

ಈಗ ದೇಶದ ಸ್ವಧರ್ಮವನ್ನು ಎಲ್ಲಿ ಹುಡುಕುವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ತುಂಬಾ ಗಹನವಾದ  ಪ್ರಶ್ನೆ. ಯಾವುದೇ ದೇಶವು ರೂಪುಗೊಳ್ಳುವ ಸಮಯದಲ್ಲೇ ಅದರ ಕಲ್ಪನೆಯಿದ್ದರೆ, ಅದರ ಸ್ವಧರ್ಮವು ಸ್ಪಷ್ಟವಾಗಿ ಮತ್ತು ಲಿಖಿತ ರೂಪದಲ್ಲಿ ಲಭ್ಯವಾಗಬಹುದು. ಆದಾಗ್ಯೂ, ಅಲ್ಲಿಯೂ ವಿಷಯ ಸುಲಭವಲ್ಲ. ಇಸ್ರೇಲ್‌ನ ಉದಾಹರಣೆಯನ್ನು ತೆಗೆದುಕೊಳ್ಳಿ. ಈ ದೇಶವು ಯಹೂದಿ ಚಿಂತನೆ ಮತ್ತು ಜನಾಂಗೀಯ ಗುರುತಿನ ಸುತ್ತಲೂ ನಿರ್ಮಿಸಲ್ಪಟ್ಟಿದೆ. ಆದರೆ ಅಲ್ಲಿಯೂ ಆ ನೆಲದ ಮೂಲ ನಿವಾಸಿಗಳಾದ ಪ್ಯಾಲೆಸ್ತೀನ್ ಜನರು ಈ ಚಿಂತನೆಯಿಂದ ಅಸ್ಪೃಶ್ಯರಾಗಿದ್ದಾರೆ.

ಒಂದು ಕಾಲದಲ್ಲಿ, ಸೋವಿಯತ್ ಒಕ್ಕೂಟವು ಒಂದೇ ಸಿದ್ಧಾಂತ ಆಧಾರಿತ ದೇಶವಾಗಿತ್ತು, ಆದರೆ ಅದು ವಿಭಜನೆಯಾದಾಗ, ಆ ಆಲೋಚನೆ ಅವರನ್ನು ಬಂಧಿಸಿಡಲು ಸಾಧ್ಯವಾಗಲಿಲ್ಲ. ಇಸ್ಲಾಂ ಧರ್ಮದ ಹೆಸರಿನಲ್ಲಿ ನಿರ್ಮಿತ ಪಾಕಿಸ್ತಾನವು, ತನ್ನದೇ ಆದ ಬಂಗಾಳಿ ಭಾಷಿಕರನ್ನು ತನ್ನೊಟ್ಟಿಗೆ ಕೂಡಿಡಲು ಸಾಧ್ಯವಾಗಲಿಲ್ಲ. ಸ್ವಧರ್ಮವು ನಮಗೆ ಕೇವಲ ದಾಖಲೆಗಳು, ಲಿಖಿತ ಆದರ್ಶಗಳು ಅಥವಾ ಸಿದ್ಧಾಂತಗಳ ಭಾಷೆಯಲ್ಲಿ ಮಾತ್ರ ಕಂಡುಬರುವುದಿಲ್ಲ.

ದೇಶದ ಸ್ವಧರ್ಮದ ಹುಡುಕಾಟವನ್ನು ಜನರಿಂದ ಆರಂಭಿಸಬೇಕು. ಪ್ರತಿ ದೇಶದ ಸಾರ್ವಜನಿಕರ ಮನಸ್ಸಿನಲ್ಲಿ ಕೆಲವು ಆದರ್ಶದ ವಿನ್ಯಾಸವಿದೆ, ಅದು ವಿಶಿಷ್ಟತೆಯನ್ನು ನೀಡುತ್ತದೆ. ಇದು ಸಾಮಾನ್ಯ ಸಾರ್ವಜನಿಕ ಅಭಿಪ್ರಾಯವಲ್ಲ, ಏಕೆಂದರೆ ನಾಗರಿಕರು ಸಾಮಾನ್ಯವಾಗಿ ಈ ಆದರ್ಶಗಳಿಗನುಸಾರವಾಗಿ ಯೋಚಿಸುವುದಿಲ್ಲ ಮತ್ತು ವರ್ತಿಸುವುದಿಲ್ಲ.

ಹಾಗಾಗಿ ಕೇವಲ ಸಾರ್ವಜನಿಕ ಅಭಿಪ್ರಾಯ ಸಂಗ್ರಹಗಳು ಕೆಲಸ ಮಾಡುವುದಿಲ್ಲ. ಅವರ ಮನಸ್ಸಿನ ಮೇಲೆ ಶತಮಾನಗಳಿಂದ ಸಾಂಸ್ಕೃತಿಕ ಗುರುತು ಇದೆ. ಆದರೆ ಇದು ನೇರವಾಗಿ ಕೆಲವು ಪ್ರಾಚೀನ ಸನಾತನ ಸಂಪ್ರದಾಯ ಅಥವಾ ಗ್ರಂಥದಲ್ಲಿ ಲಿಖಿತ ರೂಪದಲ್ಲಿ ಸಿಗುವುದಿಲ್ಲ. ಅಥವಾ ನಮ್ಮ ಆಧುನಿಕ ರಾಷ್ಟ್ರ-ರಾಜ್ಯದ ಅನುಕರಣೆಯ ಭಾಷೆಯಲ್ಲಿ ನಿರ್ಮಿತವಾದ ಭಾರತದ ಸ್ವಧರ್ಮ ನಮಗೆ ಸಿಗುವುದಿಲ್ಲ.

ಭಾರತೀಯ ಗಣರಾಜ್ಯದ ಸ್ವಧರ್ಮದ ಬೇರುಗಳು ಭಾರತೀಯ ನಾಗರಿಕತೆಯ ಸಾಂಸ್ಕೃತಿಕ ಮೌಲ್ಯಗಳಲ್ಲಿವೆ. ಆದರೆ ಈ ಪ್ರಾಚೀನ ಸಾಂಸ್ಕೃತಿಕ ಆದರ್ಶಗಳು ಒಂದು ಆಧುನಿಕ ರಾಜಕೀಯ ಸಮುದಾಯದ ಆದರ್ಶಗಳಾಗಿರಲಿಲ್ಲ. ಆಧುನಿಕ ಭಾರತ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಪುರಾತನ ಆದರ್ಶಗಳನ್ನು ನವೀಕರಿಸಲಾಯಿತು ಮತ್ತು ಸಂಸ್ಕರಿಸಲಾಯಿತು.

ಇದನ್ನು ಓದಿದ್ದೀರಾ? ವ್ಯಕ್ತಿಗಿರುವಂತೆ ಒಂದು ದೇಶಕ್ಕೂ ಸ್ವಧರ್ಮ ಎಂಬುದಿದೆಯೇ ? | ಯೋಗೇಂದ್ರ ಯಾದವ್‌

ಆಧುನಿಕ ಭಾರತದ ರಚನೆಯ ಸಮಯದಲ್ಲಿ, ನಮ್ಮ ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಬಂಧ ಸಾಧಿಸಿದ  ನಮ್ಮ ಮನಸ್ಸು ಮತ್ತು ಯುರೋಪಿನ ಆಧುನಿಕ ಚಿಂತನೆಯ ನಡುವಿನ ಸಂಗಮದಲ್ಲಿ ಭಾರತ ಗಣರಾಜ್ಯವು ತನ್ನದೇ ಆದ ಧರ್ಮವನ್ನು ಪಡೆಯಿತು. ಸ್ಥಳೀಯ ಆಧುನಿಕತೆಯ ಯಾವ ವ್ಯಾಖ್ಯಾನವು ಆಧುನಿಕ ಭಾರತದ ರಾಜಕೀಯ ಚಿಂತನೆಯಿಂದಾಯಿತೋ ಅದರಲ್ಲಿ ಭಾರತದ ಸ್ವಧರ್ಮ ಕಾಣಸಿಗುತ್ತದೆ.

ನಮ್ಮಲ್ಲಿ ವಸಾಹತುಶಾಹಿ ಆಧುನಿಕತೆಯ ಹಸ್ತಕ್ಷೇಪದಿಂದ, ರಾಜಕೀಯ ಸಮುದಾಯದ ಸ್ವರೂಪ ಬದಲಾಯಿತು ಮತ್ತು ರಾಷ್ಟ್ರೀಯ ಪ್ರಜ್ಞೆ ಹುಟ್ಟಿತು. ಇಲ್ಲಿ ದೇಶ ಧರ್ಮದ ಮೂಲರೂಪವು ಬದಲಾಯಿತು. ನಾಗರಿಕತೆಯ ಧರ್ಮಕ್ಕೆ ದೇಶದ ಧರ್ಮದ ರೂಪವನ್ನು ನೀಡಲಾಯಿತು. ನಮ್ಮ ಸಂವಿಧಾನದ ನಿಜವಾದ ಪ್ರಾಮುಖ್ಯತೆ ಅದು ನಮ್ಮ ಗಣರಾಜ್ಯದ ಬುನಾದಿಯಾಗಿರುವ ಒಂದು ಮೂಲ ದಾಖಲೆಯಾಗಿದೆ ಎಂಬ ಅಂಶದಲ್ಲಿ ಮಾತ್ರವಲ್ಲ.

ಅನುವಾದ | ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
1 ವೋಟ್
eedina app