ತೇಜಸ್ವಿ ನೆನಪು | ಸಂಭ್ರಮಿಸುವ ತೇಜಸ್ವಿ ಮತ್ತು ಅದರಾಚೆಯ ವೈಚಾರಿಕ ಪೂರ್ಣಚಂದ್ರ!

ತೇಜಸ್ವಿ

ಒಬ್ಬ ಲೇಖಕರಾಗಿ ತೇಜಸ್ವಿ ಅವರು ತಮ್ಮ ಜೀವಿತಾವಧಿಯಲ್ಲಿ ಎಷ್ಟು ಜನಪ್ರಿಯರಾಗಿದ್ದರೋ ಅದಕ್ಕಿಂತ ದುಪ್ಪಟ್ಟು ಈಗ ಅವರು ಜನಪ್ರಿಯರು ಇರಬಹುದು. ಆದರೆ, ಹಾಗೆ ಅವರನ್ನು ಓದಿ, ಸಂಭ್ರಮಿಸುತ್ತಿರುವ ತಲೆಮಾರು ತೇಜಸ್ವಿ ಅವರನ್ನು ಸ್ವೀಕರಿಸುತ್ತಿರುವುದು ಹೇಗೆ? ಯಾವ ಸ್ತರದಲ್ಲಿ ಈ ಹೊಸ ಅಭಿಮಾನಿ ಓದುಗ ವರ್ಗ ಅವರನ್ನು ನೋಡುತ್ತಿದೆ?

ಲೇಖಕನೊಬ್ಬ ತನ್ನ ಕಾಲವನ್ನು ಮೀರಿ ಯೋಚಿಸುತ್ತಾನೆ ಮತ್ತು ಕಾಲದ ಆಚೆಯ ಸತ್ಯಗಳನ್ನು ತನ್ನ ಕೃತಿಗಳನ್ನು ಹಿಡಿಯುತ್ತಾನೆ ಎಂಬುದು ಪ್ರತಿಭಾವಂತ ಲೇಖಕರ ಕುರಿತು ಸಾಮಾನ್ಯವಾಗಿ ಕೇಳಿಬರುವ ಮಾತು. ಹಾಗೇ ಓದುಗರು ಕೂಡ ತಮ್ಮ ಕಾಲದ ಲೇಖಕರನ್ನು ಅವರ ನೈಜ ಕಾಳಜಿಗಳ ಮೂಲಕ ಅರಿತರೆ ಮಾತ್ರ ಅಂತಹ ಬರಹಗಳು ಸಾರ್ಥಕ. 

ಆದರೆ, ಬಹಳಷ್ಟು ಬಾರಿ ಒಬ್ಬ ದೃಷ್ಟಾರನಂತಹ ಲೇಖಕನಿಗೆ ತನ್ನ ಅಂತಹ ಮುಂಗಾಣ್ಕೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಆ ಬಗ್ಗೆ ಚರ್ಚಿಸುವ ಒಂದು ಓದುಗ ವರ್ಗ ಸಿಗುವುದು ವಿರಳ. ಹಾಗೇ ಒಂದು ಪ್ರಬುದ್ಧ ಮತ್ತು ಹುನ್ನಾರಗಳಿರದ ಓದುಗ ತಲೆಮಾರು ಸಿಕ್ಕರೆ ಆ ಲೇಖನ ನಿಜಕ್ಕೂ ಕಾಲವನ್ನು ಮೀರಬಲ್ಲ.

ಕನ್ನಡದ ಸ್ಪಷ್ಟ ವೈಚಾರಿಕತೆ ಮತ್ತು ಜೀವನದೃಷ್ಟಿ ಹೊಂದಿದ್ದ ಅಪರೂಪದ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳನ್ನು ಯಾವ ಪೂರ್ವಗ್ರಹವಿಲ್ಲದೆ, ಹುನ್ನಾರಗಳಿಲ್ಲದೆ ಓದುವ ಮತ್ತು ಚರ್ಚಿಸುವ ಒಂದು ಪ್ರಬುದ್ಧ ಓದುಗ ವರ್ಗ ಬಹಳ ಸೀಮಿತವಾಗಿದೆ. 

ಒಬ್ಬ ಲೇಖಕರಾಗಿ ತೇಜಸ್ವಿ ತಮ್ಮ ಜೀವಿತಾವಧಿಯಲ್ಲಿ ಎಷ್ಟು ಜನಪ್ರಿಯರಾಗಿದ್ದರೋ ಅದಕ್ಕಿಂತ ದುಪ್ಪಟ್ಟು ಈಗ ಅವರು ಜನಪ್ರಿಯರು ಇರಬಹುದು. ಆದರೆ, ಹಾಗೆ ಅವರನ್ನು ಓದಿ, ಸಂಭ್ರಮಿಸುತ್ತಿರುವ ತಲೆಮಾರು ತೇಜಸ್ವಿ ಅವರನ್ನು ಸ್ವೀಕರಿಸುತ್ತಿರುವುದು ಹೇಗೆ? ಅವರನ್ನು ಯಾವ ಸ್ತರದಲ್ಲಿ ಈ ಹೊಸ ಅಭಿಮಾನಿ ಓದುಗ ವರ್ಗ ಅವರನ್ನು ನೋಡುತ್ತಿದೆ? ಎಂಬ ಪ್ರಶ್ನೆಗಳನ್ನು ಕೇಳಿಕೊಂಡರೆ ತೇಜಸ್ವಿ ಅವರ ನಿಜವಾದ ಓದುಗ ವರ್ಗತೀರಾ ಸೀಮಿತ ಏಕೆ ಎಂಬುದು ಅರಿವಾಗಬಹುದು.

ಬಹುಶಃ ಕನ್ನಡದಲ್ಲಿ; ಅದರಲ್ಲೂ ಇವತ್ತಿನ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬ ಮತ್ತು ಅವರ ನಿಧನದ ದಿನದ ಸಂದರ್ಭಗಳಲ್ಲಿ ಪ್ರತಿ ಬಾರಿಯೂ ಅತಿಹೆಚ್ಚು ಚರ್ಚೆಯಾಗುವ ಲೇಖಕ ಎಂದರೆ ಅದು ತೇಜಸ್ವಿಯವರೇ. ಆದರೆ, ಹಾಗೇ ಅವರನ್ನು ನೆನೆಯುವಾಗ, ಅವರ ಬರಹ, ಮಾತು, ಫೋಟೋಗ್ರಫಿ, ಚಿತ್ರ, ಸಂಗೀತ, ಸಾಫ್ಟ್‌ವೇರ್‌ ತಂತ್ರಜ್ಞಾನದ ಅರಿವು, ಬೇಟೆ, ಮೀನು ಶಿಕಾರಿ, ಕೃಷಿ… ಹೀಗೆ ಎಲ್ಲವನ್ನೂ ಅತ್ಯಂತ ಸಂಭ್ರಮದಿಂದ ನೆನಪಿಸಿಕೊಳ್ಳುವ, ಅವರ ಜೊತೆಗಿನ ಒಡನಾಟವನ್ನು ನೆನೆದು ಸಂಭ್ರಮಿಸುವ ದೊಡ್ಡ ವರ್ಗವೇ ಇದೆ. 

ಆದರೆ, ಬಹುತೇಕ ಹಾಗೆ ಸಂಭ್ರಮಿಸುವ ಓದುಗರು, ಅವರ ಯಾವ ಸಾಹಿತ್ಯಕೃತಿಯನ್ನು, ಯಾವ ಮಾತನ್ನು, ಯಾವ ವಿಚಾರವನ್ನು, ಯಾವ ಆಸಕ್ತಿಯನ್ನು, ಯಾವ ಅಭಿರುಚಿಯನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ? ಎಂಬುದನ್ನು ಗಮನಿಸಿದರೆ, ಆ ಬಹುಸಂಖ್ಯಾತ ವರ್ಗ ತೇಜಸ್ವಿ ಅವರು ಸೃಷ್ಟಿಸಿರುವ ಸಾಹಿತ್ಯ, ವಿಚಾರಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಿದೆ ಮತ್ತು ಯಾವುದನ್ನು ಜಾಣ ಮರೆವಿನ ಮೂಲಕ ಬದಿಗೆ ಸರಿಸುತ್ತಿದೆ ಎಂಬುದು ಗಮನಕ್ಕೆ ಬಾರದೇ ಇರದು.

Image
ಪತ್ನಿ ರಾಜೇಶ್ವರಿ ಜೊತೆ ತೇಜಸ್ವಿ
ಪತ್ನಿ ರಾಜೇಶ್ವರಿ ಜೊತೆ ತೇಜಸ್ವಿ

ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿಕ್ರಾಸ್‌, ಮಹಾ ಪಲಾಯನ, ಪ್ಯಾಪಿಲಾನ್‌, ಪರಿಸರದ ಕಥೆ,.. ಹೀಗೆ ಒಂದು ಮಟ್ಟದ ಓದನ್ನು ಬೇಡುವ ಮತ್ತು ತಮಾಷೆ, ವ್ಯಂಗ್ಯ, ವಿಡಂಬನೆ ಮತ್ತು ತಿಳಿಹಾಸ್ಯದ ಮೂಲಕ ಒಂದು ರೀತಿಯ ರಂಜನೆ ಕೊಡುವ (ವಾಸ್ತವವಾಗಿ ಆಳದ ಓದಿನಲ್ಲಿ ಈ ಕೃತಿಗಳಲ್ಲೂ ಗಹನ ಸಂಗತಿಗಳನ್ನು ಕಂಡುಕೊಳ್ಳಲಾಗಿದೆ) ಕೃತಿಗಳು ಮತ್ತು ಅವರ ಆ ಕೃತಿಗಳಲ್ಲಿ ಬರುವ ಹಾರುವ ಓತಿ, ಮಂದಣ್ಣ, ಬಿರ್ಯಾನಿ ಕರಿಯಪ್ಪ, ಕಿವಿ, ಮರಿ, ಅಂಗಾಡಿ ಮುಂತಾದ ಪಾತ್ರ ಮತ್ತು ಅವುಗಳ ಸುತ್ತಲಿನ ಪ್ರಸಂಗಗಳು ಹೆಚ್ಚು ಪ್ರಸ್ತಾಪವಾಗುತ್ತಿವೆ. ಪರಿಸರದ ಕುರಿತ ತೇಜಸ್ವಿ ಅವರ ಬಹಳ ಪ್ರಬುದ್ಧ ಗ್ರಹಿಕೆ ಮತ್ತು ಚಿಂತನೆಗಳಿಗಿಂತ ಅವರು ಆ ಬಗ್ಗೆ ಯಾವಾಗಲೋ ವ್ಯಕ್ತಪಡಿಸಿದ ರೊಮ್ಯಾಂಟಿಕ್‌ ಆದ ಭಾವನೆಗಳನ್ನೇ ಹೆಚ್ಚು ಸಂಭ್ರಮಿಸಲಾಗುತ್ತಿದೆ. 

ತೇಜಸ್ವಿ ಅಂದ್ರೆ ಇಷ್ಟೇ ಅಲ್ಲ...

ಇಂತಹ ಸಂಭ್ರಮಗಳ ಮೂಲಕ ಪೂರ್ಣಚಂದ್ರ ತೇಜಸ್ವಿ ಎಂದರೆ ಇಷ್ಟೇ ಎಂಬಂತಹ ಒಂದು ಸಂದೇಶ ಹೊಸ ತಲೆಮಾರುಗಳಿಗೆ ವರ್ಗಾವಣೆಯಾಗುತ್ತಿದೆ. ಆದರೆ, ಅವರ ವ್ಯಕ್ತಿ ವಿಶಿಷ್ಟ ಸಿದ್ಧಾಂತ ಕೃತಿ, ಹೊಸ ವಿಚಾರಗಳು ಎಂಬ ಅವರ ಸಂದರ್ಶನ, ಲೇಖನ ಆಧಾರಿತ ಕೃತಿ, ಅವರ ಸೃಜನಶೀಲ ಸಾಹಿತ್ಯಕೃತಿಗಳಲ್ಲಿ ಅಲ್ಲಲ್ಲಿ ವ್ಯಕ್ತವಾಗುವ ಬೆಚ್ಚಿಬೀಳಿಸುವ ವೈಚಾರಿಕ ಸ್ಪಷ್ಟತೆಗಳ ಬಗ್ಗೆ ಈ ಬಹುಸಂಖ್ಯಾತ ಓದುಗ ವರ್ಗ ಅಪ್ಪಿತಪ್ಪಿಯೂ ಪ್ರಸ್ತಾಪಿಸುವುದು ವಿರಳಾತಿವಿರಳ! 

ಭಾರತೀಯ ಸಮಾಜಕ್ಕೆ ಅಂಟಿರುವ ರೋಗಗಳಾದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಅಸಮಾನತೆ, ಮೂಢನಂಬಿಕೆ, ಹಿಂದೂ ಧರ್ಮದ ವಿಕಾರಗಳು, ಜಾಗತೀಕರಣದ ಸಾಧಕ-ಬಾಧಕಗಳು, ರೈತರು, ದಲಿತರು, ಮಹಿಳೆಯರ ಸಮಸ್ಯೆಗಳ ಕುರಿತು ಅವರು ಎತ್ತುವ ಪ್ರಶ್ನೆಗಳ ಕುರಿತು ಆ ಓದುಗ ವರ್ಗ ಜಾಣಕಿವುಡು ಪ್ರದರ್ಶಿಸುತ್ತದೆ.

ಅದರಲ್ಲೂ ತೇಜಸ್ವಿ ಅವರ ರಂಜನೀಯ ತಮಾಷೆ, ಉಡಾಫೆ, ವ್ಯಂಗ್ಯ ಮತ್ತು ವಿಡಂಬನೆಗಳನ್ನು ಇನ್ನಿಲ್ಲದಂತೆ ಸಂಭ್ರಮಿಸುವ ಕನ್ನಡ ಸಾಹಿತ್ಯದ ಒಂದು ವಲಯ, ತಮಗೆ ವೈಚಾರಿಕವಾಗಿ ʼಅಹಿತʼ ಎಂದುಕೊಂಡಿರುವ ಅವರ ಪ್ರಖರ ವೈಚಾರಿಕ ವಿಚಾರಗಳ ಬಗ್ಗೆ ತುಟಿಬಿಚ್ಚದೇ ಇರುವ ಜಾಣತನ ಪ್ರದರ್ಶಿಸುತ್ತಿದೆ.

ಧರ್ಮ, ಕೋಮು ಮತ್ತು ವ್ಯಾವಹಾರಿಕ ಲಾಭದ ರಾಜಕಾರಣದಲ್ಲಿ ಇಡೀ ದೇಶದ ಭವಿಷ್ಯವೇ ಮಸುಕಾಗಿರುವಾಗ, ಜಾತಿ ಮತ್ತು ಕೋಮು ಭಾವನೆಗಳು ಹಿಂದೆಂದಿಗಿಂತ ಹೆಚ್ಚು ವಿಕೃತಗೊಂಡು ಜನಸಾಮಾನ್ಯರ ಬದುಕನ್ನು ನರಕ ಮಾಡುತ್ತಿರುವಾಗ ಅಂತಹ ವಿಕೃತಿಗಳನ್ನು ದಶಕಗಳ ಮುಂಚೆಯೇ ಗ್ರಹಿಸಿದ್ದ ಮತ್ತು ಅಂತಹ ಹುಚ್ಚಿನಿಂದ ಪಾರಾಗುವ ವಿವೇಕವನ್ನೂ ಸೂಚಿಸಿದ್ದ ತೇಜಸ್ವಿ ಅವರಂತಹ ದೃಷ್ಟಾರನನ್ನು ಹೀಗೆ, ಕೇವಲ ರಂಜನೀಯ ಸಂಗತಿಗಳಿಗೆ ಕಟ್ಟಿಹಾಕಿ ಹೊಸ ತಲೆಮಾರಿನ ಓದುಗರಿಗೆ ಅವರ ನಿಜ ಕಾಣ್ಕೆಯನ್ನು ಮರೆಮಾಚುವುದು ಒಂದು ವ್ಯವಸ್ಥಿತ ಹುನ್ನಾರ. ಒಂದು ಹಿತಾಸಕ್ತ ಗುಂಪಿನ ಸಾಹಿತ್ಯ ರಾಜಕಾರಣ.

ಇದು ಅರ್ಥವಾದರೆ ಮತ್ತು ಮುಂದಿನ ತಲೆಮಾರಿಗೆ ಅರ್ಥಮಾಡಿಸಲು ನಾವು ಶಕ್ತರಾದರೆ, ತೇಜಸ್ವಿ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸುವುದಕ್ಕೆ ಒಂದು ಅರ್ಥ. ಇಲ್ಲವಾದರೆ, ಇದೂ ಒಂದು ಪರಿಷೆ ಅಷ್ಟೇ..!

ನಿಮಗೆ ಏನು ಅನ್ನಿಸ್ತು?
2 ವೋಟ್