‘ಚಾಟ್ ಜಿಪಿಟಿ' ಚಾಲ್ತಿಗೆ ಬಂದರೆ; ಡೆಸ್ಕ್ ಪತ್ರಕರ್ತರಿಗೆ ಟಾಟಾ ಬೈಬೈ

ChatGPT

ನ್ಯೂರಲ್ ತಂತ್ರಜ್ಞಾನ ಬಳಸಿಕೊಂಡು ಬೆಳೆದಿರುವ ಕೃತಕ ಬುದ್ಧಿಮತ್ತೆ ಯಾವ ವೃತ್ತಿಪರ ಪತ್ರಕರ್ತರಿಗೂ ಕಡಿಮೆ ಇಲ್ಲದಂತೆ ಸುದ್ದಿ ಬರೆಯಬಲ್ಲುದು. ಇದು ಅಚ್ಚರಿಯ ಸಂಗತಿಯೇನಲ್ಲ. ಇದೇ ತಂತ್ರವನ್ನು ಬಳಸಿ, ಅದರ ಕೈಲಿ ಕಥೆ, ಕವನ, ಲೇಖನ, ಸಿನಿಮಾ/ಧಾರಾವಾಹಿ ಸ್ಕ್ರಿಪ್ಟ್ ಎಲ್ಲವನ್ನೂ ಬರೆಸಬಹುದು. ಸದ್ಯಕ್ಕೆ ಭಾರತೀಯ ಭಾಷೆಗಳಲ್ಲಿ ಅದು ಲಭ್ಯವಿಲ್ಲ ಎಂಬುದಷ್ಟೇ ಕೊರತೆ

ChatGPT ಪೂರ್ಣಪ್ರಮಾಣದಲ್ಲಿ ಚಾಲ್ತಿಗೆ ಬಂದರೆ ಅದು ರುಟೀನ್ ಸ್ವರೂಪದ ಹಲವು ಕೆಲಸಗಳಿಗೆ ಕುತ್ತು ಬರಲಿದೆ ಎಂಬುದು ಈಗ ಜೋರಾಗಿ ತಿರುಗಾಡುತ್ತಿರುವ ಗಾಳಿಸುದ್ದಿ. ಅದು ಹೌದು ಎಂದಾದರೆ, ನನ್ನ ಪ್ರಕಾರ ಈ ನ್ಯೂರಲ್ ನೆಟ್ವರ್ಕ್ ಆಧರಿತ ಕೃತಕ ಬುದ್ಧಿಮತ್ತೆ ಮೊತ್ತಮೊದಲಿಗೆ ಕಳಚಲಿರುವುದು ಪತ್ರಕರ್ತರ ಉದ್ಯೋಗಗಳನ್ನು. ನಾನು ಸ್ವತಃ ಪತ್ರಕರ್ತನಾಗಿದ್ದು, ವೃತ್ತಿಭಾಷಾಂತರಕಾರನಾಗಿದ್ದು ಕಳೆದ ಇಪ್ಪತ್ತು ವರ್ಷಗಳಿಂದ ಈ ಕಸುಬುಗಳ ಒಳಹೊರಗನ್ನು ತಕ್ಕಮಟ್ಟಿಗೆ ಬಲ್ಲೆನಾದ್ದರಿಂದ ಮತ್ತು ಇಲ್ಲಿ ನಡೆಯುತ್ತಾ ಬಂದಿರುವ ತಾಂತ್ರಿಕ ಬದಲಾವಣೆಗಳನ್ನು ಹತ್ತಿರದಿಂದ ನೋಡಿ, ಬಳಸಿ ಬಲ್ಲೆನಾದ್ದರಿಂದ ಇದನ್ನು ನಾನು ಖಚಿತವಾಗಿ ಹೇಳಬಲ್ಲೆ. ಸದ್ಯಕ್ಕೆ ಒಂದೇ ಆಶಾದಾಯಕ ಸಂಗತಿ ಎಂದರೆ ಈಗ ChatGPT ಕಾರ್ಯಾಚರಿಸುತ್ತಿರುವುದು ಇಂಗ್ಲೀಷಿನಲ್ಲಿ. ಅದು ಕನ್ನಡದಲ್ಲೂ ಕಾರ್ಯಾಚರಿಸತೊಡಗಿದರೆ (ಇನ್ನು ಐದರಿಂದ ಹತ್ತು ವರ್ಷಗಳಲ್ಲಿ ಇದು ಸಾಧ್ಯವಾಗಬಹುದು) ಅಲ್ಲಿಗೆ ಸುದ್ದಿಕೋಣೆಗಳಲ್ಲಿ ಪತ್ರಕರ್ತರ ಅಗತ್ಯ ಬಹುತೇಕ ಇರುವುದಿಲ್ಲ.

ಇದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸುತ್ತಲೇ ಈ ಹೊಸ ತಂತ್ರಜ್ಞಾನದ ಬಗ್ಗೆ ನಿಮ್ಮೊಂದಿಗೆ ನಾನೂ ಒಂದಿಷ್ಟು ತಿಳಿಯುವ ಕೆಲಸ ಮಾಡುತ್ತೇನೆ. 

ಅಮೆರಿಕದ ಓಪನ್ ಎಐ ಎಂಬ ಸಂಸ್ಥೆ ಸಿದ್ಧಪಡಿಸಿರುವ ಈ ಹೊಸ ಸಂವಾದ ಪ್ಲಾಟ್ ಫಾರಂ ತನ್ನೊಂದಿಗೆ ಸಂವಾದಕ್ಕಿಳಿಯುವವರ ಜೊತೆ ಬಹುತೇಕ ಮನುಷ್ಯರಂತೆಯೇ ಯೋಚಿಸಿ ಸಂವಾದಕ್ಕಿಳಿಯುವ ಪ್ರಯತ್ನ ನಡೆಸುತ್ತದೆ. ಇದರ ಪ್ರಾಯೋಗಿಕ ಆವೃತ್ತಿ ಕಳೆದ ನವೆಂಬರ್ ಅಂತ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ಇದರ ಬಗ್ಗೆ ಎದ್ದಿರುವ ಹಲವು ಊಹಾಪೋಹಗಳಲ್ಲಿ ನೀರು ಕಡಿಮೆ-ನೊರೆಯೇ ಹೆಚ್ಚು ಎಂಬುದು ಸದ್ಯದ ವಾಸ್ತವ ಮತ್ತು ಅದು ಹೀಗೇ ಉಳಿಯುವುದಿಲ್ಲ ಮತ್ತು ಸುಧಾರಿಸುತ್ತಾ ಹೋದಂತೆ ಎದ್ದಿರುವ ಊಹಾಪೋಹಗಳಲ್ಲಿ ಕೆಲವಾದರೂ ಸತ್ಯವಾಗಲಿವೆ ಎಂಬುದು ಭವಿಷ್ಯದ ವಾಸ್ತವ.

ChatGPT

ಈ ಕೃತಕ ಬುದ್ಧಿಮತ್ತೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನನ್ನ ಕಸುಬಿನ ಅನುಭವದ ವ್ಯಾಪ್ತಿಯೊಳಗೇ, ಯಾವುದೇ ಟೆಕ್ನಿಕಲ್ ಸಂಗತಿಗಳತ್ತ ಹೋಗದೇ, ಕೇವಲ ಬಳಕೆದಾರರ ದೃಷ್ಟಿಕೋನದಿಂದಲೇ ವಿವರಿಸಲು ಪ್ರಯತ್ನಿಸುತ್ತೇನೆ. ನಾನು ಒಬ್ಬ ಭಾಷಾಂತರಕಾರನಾಗಿ ವೃತ್ತಿ ಆರಂಭಿಸಿದ್ದು, 1999ರ ಹೊತ್ತಿಗೆ. ಆಗ ಭಾಷಾಂತರ ಎಂಬುದು ಮನುಷ್ಯರಿಲ್ಲದೇ ಸಾಧ್ಯವಿಲ್ಲದ ಕೌಶಲ ಆಗಿತ್ತು. 2005ರ ಹೊತ್ತಿಗೆ, ಜಾಗತೀಕರಣ ವೇಗ ಪಡೆದುಕೊಂಡು ಕಂಪ್ಯೂಟರ್ ತಂತ್ರಜ್ಞಾನ ಬಿಡುಬೀಸಾಗತೊಡಗಿದಂತೆ, ಮೊದಲ ಬಾರಿಗೆ ಕಂಪ್ಯೂಟರ್ ಸಹಕರಿತ ಭಾಷಾಂತರ ಟೂಲ್ ಗಳು ಮಾರುಕಟ್ಟೆಯಲ್ಲಿ ವೇಗ ಪಡೆಯತೊಡಗಿದವು. CAT ಟೂಲ್ಸ್ ಎಂದು ಕರೆಯಲಾಗುವ ಈ ಸಾಫ್ಟ್ ವೇರ್ ಗಳು ಒಮ್ಮೆ ಭಾಷಾಂತರ ಮಾಡಿದ ವಾಕ್ಯಗಳನ್ನು ತನ್ನ ನೆನಪಿನಲ್ಲಿ ಇರಿಸಿಕೊಂಡು, ಅದೇ ವಾಕ್ಯ ಮತ್ತೊಮ್ಮೆ ಕಾಣಿಸಿಕೊಂಡಾಗ ಅದನ್ನು ಮತ್ತೊಮ್ಮೆ ಭಾಷಾಂತರಿಸುವ ಕಷ್ಟವನ್ನು ತಪ್ಪಿಸುತ್ತದೆ. ಟೆಕ್ನಾಲಜಿ, ವೈದ್ಯಕೀಯ ರಂಗಗಳಲ್ಲಿ ಭಾಷೆಯ ಬಳಕೆಗೆ ನಿಖರತೆ ಅಗತ್ಯ ಇರುವಲ್ಲಿ (ಅಂದರೆ ಒಮ್ಮೆ ಬಳಸಿದ ಪದ/ವಾಕ್ಯ ಮತ್ತೊಮ್ಮೆ ಬಳಸುವಾಗ ಬೇರೊಂದು ಸಮಾನಾರ್ಥಕ ಪದವಾಗಿ/ವಾಕ್ಯವಾಗಿ ಬದಲಾಗದಂತೆ) ಈ ತಂತ್ರಜ್ಞಾನ ಬಹಳ ಉಪಕಾರಿ.

ಅಂದಹಾಗೆ, ಇದೇನೂ ಹೊಸತಂತ್ರಜ್ಞಾನ ಅಲ್ಲ. 1947ರಷ್ಟು ಹಿಂದೆಯೇ ಅಮೆರಿಕ-ರಷ್ಯಾಗಳು ಶೀತಲಸಮರದಲ್ಲಿ ತೊಡಗಿದ್ದಾಗ, ರಷ್ಯಾದ ಗೂಢಲಿಪಿ ಪತ್ರಗಳನ್ನು ಓದಲು ಮತ್ತು ಲಿಪಿಗಳನ್ನು ನೆನಪಿಟ್ಟುಕೊಂಡು ಪುನರಾವರ್ತಿಸಲು ಈ “ಮಷೀನ್ ಟ್ರಾನ್ಸ್ ಲೇಷನ್” ತಂತ್ರವನ್ನು ಬಳಸಲಾಗುತ್ತಿತ್ತು. 80ರ ದಶಕದಲ್ಲಿ ಈ ಕ್ಷೇತ್ರದತ್ತ ವಾಣಿಜ್ಯ ಆಸಕ್ತಿ ಬೆಳೆಯಿತು ಮತ್ತು 90ರ ದಶಕದಲ್ಲಿ ಜಗತ್ತು ಉದಾರೀಕರಣದತ್ತ ಹೊರಳಿಕೊಂಡು ಜಾಗತಿಕ ಹಳ್ಳಿ ಆಗತೊಡಗಿದಾಗ, ಸಂವಹನಗಳನ್ನು ಸುಲಭ ಮಾಡಿಕೊಳ್ಳಲು ಈ ತಂತ್ರಜ್ಞಾನದ ಬಳಕೆ ವೇಗ ಪಡೆಯತೊಡಗಿತ್ತು.
ಇದಕ್ಕೆಲ್ಲ ಆಗ ಕೃತಕ ಬುದ್ಧಿಮತ್ತೆ ಎಂಬ ಹೆಸರಿರಲಿಲ್ಲ ಅಷ್ಟೇ.

ಇದನ್ನು ಓದಿದ್ದೀರಾ?: 2023ರಲ್ಲಿ ಜಾಗತಿಕ ಆರ್ಥಿಕತೆಯ ಪ್ರಗತಿ ಕುಂಠಿತಗೊಳ್ಳಲಿದೆ; ಐಎಂಎಫ್‌ ನಿರ್ವಾಹಕ ನಿರ್ದೇಶಕಿ ಕ್ರಿಸ್ಟಲಿನ ಜಾರ್ಜಿವ

ಕೃತಕ ಬುದ್ಧಿಮತ್ತೆಯೆಂಬುದು ಸ್ಥೂಲವಾಗಿ ಹೇಳಬೇಕೆಂದರೆ, ಮನುಷ್ಯನ ಮೆದುಳು ಅಲ್ಲ. ಅದು ತಾನು ಗೃಹಿಸಿ ತನ್ನ ನೆನಪಿನಲ್ಲಿ ಇಟ್ಟುಕೊಂಡಿರುವ ಅಗಾಧ ಸರಕುಗಳನ್ನು ಅಗತ್ಯ ಇರುವಾಗ ಎತ್ತಿ ತೆಗೆದು ಮುಂದಿಡುವ ಸಾಧನ ಅಷ್ಟೇ. ಈವತ್ತು ಅದನ್ನು ನ್ಯೂರಲ್ ತಂತ್ರಜ್ಞಾನ ಎಂದು ಕರೆದರೂ, ಈ ನೆನಪಿಟ್ಟುಕೊಳ್ಳುವ- ಅಗತ್ಯಬಿದ್ದಾಗ ಎತ್ತಿಕೊಡುವ ಲಾಜಿಕ್ ಗಳು ಸುಧಾರಿಸಿವೆಯೇ ಹೊರತು ಮೂಲತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಗಳೇನಾಗಿಲ್ಲ.

ನಾನು ನನ್ನ ವೃತ್ತಿಸಂಬಂಧಿ ಆವಶ್ಯಕತೆಗಳಿಗಾಗಿ 2009ರಲ್ಲಿ ಒಂದು CAT ಟೂಲ್ ಖರೀದಿಸಿದ್ದೆ. ಅದು ಆಗ ತಂತ್ರಜ್ಞಾನದ ದೃಷ್ಟಿಕೋನದಿಂದ ತೀರಾ ಶೈಶವದಲ್ಲಿತ್ತು. ಆದರೆ ಇಂದು ಅದು ತನ್ನ ಕೌಶಲದಲ್ಲಿ ಬಹಳ ನುರಿತಿದೆ ಮತ್ತು ಬಹಳ ಬಳಕೆದಾರಸ್ನೇಹಿ ಆಗಿದೆ. ಅಂದರೆ ಅದೀಗ ಸುಮಾರಿಗೆ ಒಂದೇ ತೆರನಾಗಿರುವ ವಾಕ್ಯಗಳಲ್ಲಿ, ಬಹುತೇಕ ಸಾಮೀಪ್ಯ ಇರುವ ವಾಕ್ಯ ಸಾಧ್ಯತೆಗಳನ್ನು, ಸಮಾನಾರ್ಥಕ ಶಬ್ದಗಳನ್ನು ಒದಗಿಸಬಲ್ಲುದು. ಅದನ್ನು ಕಂಡಾಗಲೇ ನಾನು ರುಟೀನ್ ಸುದ್ದಿಗಳ ಪತ್ರಕರ್ತರಿಗೆ ಕಡೆಗಾಲ ಬರತೊಡಗಿದೆ ಎಂದುಕೊಂಡಿದ್ದೆ. ಈಗ ಬಹುತೇಕ ಎಲ್ಲ ಭಾರತೀಯ ಭಾಷೆಗಳಲ್ಲೂ ಲಭ್ಯವಿರುವ ಈ ತಂತ್ರಜ್ಞಾನದತ್ತ ದೇಶೀ ಭಾಷಾ ಮಾಧ್ಯಮಗಳು ಗಮನ ಹರಿಸಿದ್ದರೆ, ಈ ಹೊತ್ತಿಗೆ ಡೆಸ್ಕ್ ಪತ್ರಕರ್ತರ ಹೊರೆ ಬಹಳ ಕಡಿಮೆ ಆಗಿರುತ್ತಿತ್ತು! ಕಾರಣ ಏನೆಂದರೆ ಸುದ್ದಿಗಳಿಗೆ ಅಗತ್ಯವಿರುವ ಭಾಷಾ ಸಂಪತ್ತಿನ ಗಾತ್ರ ಬಹಳ ಸಣ್ಣದು ಮತ್ತು ಸೀಮಿತವಾದುದು.

ChatGPT

ಈಗ ನ್ಯೂರಲ್ ತಂತ್ರಜ್ಞಾನ ಬಳಸಿಕೊಂಡು ಬೆಳೆದಿರುವ ಕೃತಕ ಬುದ್ಧಿಮತ್ತೆ ತಾನೇ ಸುದ್ದಿಯನ್ನು ಬರೆಯಬಲ್ಲುದು. ಉದಾಹರಣೆಗೆ, ಒಂದು ಸ್ಥಳದಲ್ಲಿ ಒಂದು ರಸ್ತೆ ಅಪಘಾತ ಸಂಭವಿಸಿ ಇಂತಹವರು ಮೃತಪಟ್ಟರು ಎಂಬ ಮಾಹಿತಿಯನ್ನು ನೀಡಿ, ಸುದ್ದಿ ಸಿದ್ಧಪಡಿಸು ಎಂದು ನಾನು ChatGPTಯನ್ನು ಕೇಳಿದೆ. ಅದು ಎಷ್ಟು ಚೆನ್ನಾಗಿ ವರದಿ ಬರೆದಿದೆ ನೋಡಿ. ಅದಕ್ಕೆ ಕೊಡುವ ಮಾಹಿತಿಯನ್ನು ಇನ್ನಷ್ಟು ವಿವರವಾಗಿ ನೀಡಿದರೆ, ಯಾವ ವೃತ್ತಿಪರ ಪತ್ರಕರ್ತರಿಗೂ ಕಡಿಮೆ ಇಲ್ಲದಂತೆ ಅದು ಸುದ್ದಿ ಬರೆಯಬಲ್ಲುದು. ವೆಬ್ ಜಗತ್ತಿನಾದ್ಯಂತ ಇರುವ ಅಸಂಖ್ಯ ರಸ್ತೆ ಅಪಘಾತದ ಸುದ್ದಿಗಳನ್ನು ತನ್ನ ನೆನಪಿನಲ್ಲಿ ಹುದುಗಿಸಿಕೊಂಡಿರುವ ಅದಕ್ಕೆ, ಇಂತಹದೊಂದು ಸುದ್ದಿಯನ್ನು ಬರೆಯಲು ಸಾಧ್ಯವಾಗುವುದು ಅಚ್ಚರಿಯ ಸಂಗತಿಯೇನಲ್ಲ. ಇದೇ ತಂತ್ರವನ್ನು ಬಳಸಿ, ಅದರ ಕೈಲಿ ಕಥೆ, ಕವನ, ಲೇಖನ, ಸಿನಿಮಾ/ಧಾರಾವಾಹಿ ಸ್ಕ್ರಿಪ್ಟ್ ಎಲ್ಲವನ್ನೂ ಬರೆಸಬಹುದು. ಸದ್ಯಕ್ಕೆ ಭಾರತೀಯ ಭಾಷೆಗಳಲ್ಲಿ ಅದು ಲಭ್ಯವಿಲ್ಲ ಎಂಬುದಷ್ಟೇ ಕೊರತೆ.

ಸದ್ಯ ಈ ChatGPT ಜನರನ್ನು ಆಕರ್ಷಿಸಲು ಮತ್ತು ಆ ಮೂಲಕ ಜನರ ಆವಶ್ಯಕತೆಗಳನ್ನು ತಿಳಿದು, ಡೇಟಾಗಳನ್ನು ಬಿಟ್ಟಿಯಾಗಿ ಪಡೆದು ಬೆಳೆದುಕೊಳ್ಳಲು ಬಿಟ್ಟ ಮುಸುಕಿನ ಮಾರ್ಕೆಟಿಂಗ್ ಸರಕಿನಂತಿದೆ. ಅದರ ಅಪ್ಪ InstructGPT ಇನ್ನೂ ಹೊರಬಂದಿಲ್ಲ ಮತ್ತು ಬರುವುದಿದ್ದರೆ ಉಚಿತವಾಗಿ ಬರದು. ಈ ಹಿಂದೆ ಗೂಗಲ್ ಅಥವಾ ವಿಕಿಯಂತಹ ಸಾರ್ವಜನಿಕ ಮಾಹಿತಿಗಳು ಓಪನ್ ಸೋರ್ಸ್ ರೂಪದಲ್ಲೇ ಬಂದವು ಆದರೆ ಈ ಕೃತಕ ಬುದ್ಧಿಮತ್ತೆಯ ಮರಿ, ಓಪನ್ ಸೋರ್ಸ್ ರೂಪದಲ್ಲಿಲ್ಲ ಎಂಬುದಷ್ಟೇ ನನಗೆ ಚಿಂತೆಯ ವಿಷಯವಾಗಿ ಕಾಣಿಸುತ್ತಿದೆ.

ಅದು ಬಂದರೆ, ಸಹಜವಾಗಿಯೇ ಪುನರಾವರ್ತಿಸುವ ಕೆಲಸಗಳೆಲ್ಲ ಅಂತಹ ತಂತ್ರಜ್ಞಾನದ ಪಾಲಾಗಲಿವೆ. ಹಿಂದೊಮ್ಮೆ ಕಂಪ್ಯೂಟರ್ ತಂತ್ರಜ್ಞಾನ ಬಂದಾಗಲೂ ಹೀಗೇ ಆಗಿತ್ತು. ಬ್ಯಾಂಕಿನಂತಹ ಹಲವು ವ್ಯವಹಾರಗಳಲ್ಲಿ ಮಾನವ ಸಂಪನ್ಮೂಲದ ಆವಶ್ಯಕತೆ ಕಡಿಮೆ ಆಗಿತ್ತು. ಅದರ 2.0 ಆವೃತ್ತಿ ಇದು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app