ಮುಖ್ಯಮಂತ್ರಿಗಳು ತಲೆಬಾಗಬೇಕಾಗಿರುವುದು ರಾಜ್ಯದ ಜನತೆಗೆ

bommai with amit shah

ಆರೆಸ್ಸೆಸ್‌ ತರಹ ಹಲವು ಸಂಘಟನೆಗಳು ಕರ್ನಾಟಕದಲ್ಲಿವೆ. ದಲಿತ, ಬುಡಕಟ್ಟು, ಲಿಂಗಾಯತ, ಒಕ್ಕಲಿಗ, ಕುರುಬ, ಮುಸ್ಲಿಂ, ಕ್ರಿಶ್ಚಿಯನ್ನರು ಮತ್ತು ಇತರರ ಸಂಘಟನೆಗಳಿವೆ. ಅವೆಲ್ಲವುಗಳಿಗೆ ಹೋಲಿಸಿದರೆ ಆರೆಸ್ಸೆಸ್‌ ಹೆಚ್ಚು ಮುಖ್ಯ, ಮಹತ್ವದ ಸಂಘಟನೆ ಎನ್ನುವ ಸಂದೇಶವನ್ನು ಮುಖ್ಯಮಂತ್ರಿ ಬೊಮ್ಮಾ ಯಿ ಹೇಳಿಕೆ ಕೊಡುತ್ತಿದೆ. ಇದೊಂದು ಪಕ್ಷಪಾತಿ ಧೋರಣೆ

ಜನರಿಗೆ ಅಕ್ಕಿ, ಉದ್ಯೋಗ, ವಸತಿ, ಶೌಚಾಲಯ, ಕುಡಿಯುವ, ನೀರುಗಳ ಭರವಸೆ ನೀಡಿ ಚುನಾವಣೆ ಗೆಲ್ಲುವುದು. ಗೆದ್ದ ನಂತರ ಸಂವಿಧಾನದ ಮೇಲೆ ಆಣೆ ಮಾಡಿ ತನ್ನ ಹುದ್ದೆಯ ಕರ್ತವ್ಯಗಳನ್ನು ಭಯ ಅಥವಾ ಪಕ್ಷಪಾತ ಇಲ್ಲದೆ, ರಾಗ ದ್ವೇಷಗಳಿಲ್ಲದೆ ನಿಭಾಯಿಸುತ್ತೇನೆಂದು ಪ್ರತಿಜ್ಞೆ ಮಾಡುವುದು. ನಂತರ ಮಠ ಮಂದಿರಗಳಿಗೆ (ಮಸೀದಿ, ಚರ್ಚ್‍ಗಳನ್ನು ಸೇರಿಸಿಕೊಂಡು) ಹೋಗಿ ಸ್ವಾಮೀಜಿಗಳಿಗೆ ತಲೆ ಬಾಗುವುದು, ಕಾಲು ಹಿಡಿಯುವುದು ಇವೆಲ್ಲ ನಮ್ಮಲ್ಲಿ ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿದೆ.

ಇದನ್ನು ಇದೇ ರೀತಿ ಪ್ರತಿಜ್ಞೆ ಸ್ವೀಕರಿಸುವ ಇತರ ಅಧಿಕಾರ ಕೇಂದ್ರಗಳು, ಸಮಾಜದ ಗಣ್ಯರು, ಬುದ್ಧಿಜೀವಿಗಳು, ಜಾತ್ಯಾತೀತರೆನ್ನಿಸಿಕೊಂಡವರು ಪ್ರಶ್ನಿಸದೆ, ಪ್ರತಿಭಟಿಸಿದೆ ಇದ್ದ ಕಾರಣ ಇವತ್ತು ಒಂದು ರಾಜ್ಯದ ಮುಖ್ಯಮಂತ್ರಿ ಯಾವುದೋ ಒಂದು ಸಾಮಾಜಿಕ/ಸಾಂಸ್ಕೃತಿಕ ಸಂಘಟನೆಗೆ ತಲೆಬಾಗುತ್ತೇನೆಂದು ಸಾರ್ವಜನಿಕವಾಗಿ ಹೇಳಿ ಸಮರ್ಥಿಸಿಕೊಳ್ಳುವ ಸ್ಥಿತಿ ನಿರ್ಮಾಣ ಆಗಿದೆ.  

ಇನ್ನು ನಿರ್ಧಿಷ್ಟ , ‘ಆರೆಸ್ಸೆಸ್‌ಗೆ ತಲೆಬಾಗುವೆ,’ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಚರ್ಚಿಸುವುದಾದರೆ ಈ ಹೇಳಿಕೆಯನ್ನು ನಿಷ್ಠುರವಾಗಿ ಖಂಡಿಸುವ ಅಗತ್ಯ ಇದೆ. ಏಕೆಂದರೆ, ಕೆಳಗಿನ ಈ ನಾಲ್ಕು ಅಂಶಗಳಿಗಾಗಿ ಖಂಡಿಸಲೇಬೇಕು.

ಒಂದು: ಸಾಮಾನ್ಯ ವ್ಯಕ್ತಿಯೊಬ್ಬರಿಗೆ ತಮಗೆ ಇಷ್ಟ ಬಂದವರಿಗೆ ತಲೆಬಾಗುವ, ಕಾಲು ಹಿಡಿಯುವ ಸ್ವಾತಂತ್ರ್ಯ ಇದೆ. ಏಕೆಂದರೆ ಸಾಮಾನ್ಯ ವ್ಯಕ್ತಿಯ ಇಂತಹ ನಿರ್ಧಾರಗಳಿಂದ ಅವರ ಸುತ್ತಲಿರುವವರ ಮೇಲೆ ವಿಶೇಷ ಪರಿಣಾಮ ಬೀರುವುದಿಲ್ಲ. ಆದರೆ ಬಸವರಾಜ್ ಬೊಮ್ಮಾಯಿ ಸಾಮಾನ್ಯ ವ್ಯಕ್ತಿಯಲ್ಲ; ಅವರು ಈ ರಾಜ್ಯದ ಮುಖ್ಯಮಂತ್ರಿ. ಅವರ ಕೈ ಕೆಳಗೆ ಈ ರಾಜ್ಯದ ಜನತೆಯ ಭವಿಷ್ಯ ತೀರ್ಮಾನ ಮಾಡುವ ಹಲವು ಇಲಾಖೆಗಳು ಕೆಲಸ ಮಾಡುತ್ತಿವೆ. ಮುಖ್ಯಮಂತ್ರಿಗಳ ನಿರ್ಧಾರಗಳು, ನಡೆನುಡಿಗಳು, ಸಾರ್ವಜನಿಕ ಹೇಳಿಕೆಗಳು ಈ ಎಲ್ಲ ಇಲಾಖೆಗಳಲ್ಲಿ ಕರ್ತವ್ಯ ನಿಭಾಯಿಸುವವರ ಮೇಲೆ ಪ್ರಭಾವ ಬೀರುತ್ತವೆ. ಕರ್ನಾಟಕದ ಸಾಮಾನ್ಯ ಜನರ ಮೇಲೂ ಇವರ ಹೇಳಿಕೆ ಪ್ರಭಾವ ಬೀರುತ್ತವೆ. ಏನು ಪ್ರಭಾವ ಬೀರುತ್ತವೆ? ಆರೆಸ್ಸೆಸ್‌ ತರಹ ಕರ್ನಾಟಕದಲ್ಲಿ ಹಲವು ಸಂಘಟನೆಗಳಿವೆ. ದಲಿತರ, ಬುಡಕಟ್ಟುಗಳ, ಲಿಂಗಾಯತರ, ಒಕ್ಕಲಿಗರ, ಕುರುಬರ, ಮುಸ್ಲಿಮರ, ಕ್ರಿಶ್ಚಿಯನ್ನರ ಮತ್ತು ಇತರರ ಸಂಘಟನೆಗಳಿವೆ. ಅವೆಲ್ಲವಕ್ಕೆ ಹೋಲಿಸಿದರೆ ಆರೆಸ್ಸೆಸ್‌ ಹೆಚ್ಚು ಮುಖ್ಯ, ಮಹತ್ವದ್ದೆನ್ನುವ ಸಂದೇಶವನ್ನು ಮುಖ್ಯಮಂತ್ರಿ ಹೇಳಿಕೆ ಕೊಡುತ್ತಿದೆ. ಇದೊಂದು ಪಕ್ಷಪಾತಿ ಧೋರಣೆ. ಮುಖ್ಯಮಂತ್ರಿ ಕರ್ತವ್ಯಗಳನ್ನು ನಿರ್ವಹಿಸುವಾಗ ಪಕ್ಷಪಾತಿ ಆಗುವುದಿಲ್ಲ ಎಂದು ಪ್ರಮಾಣ ಮಾಡಿ ಈಗ ಸಾರ್ವಜನಿಕವಾಗಿ ತನ್ನ ಪಕ್ಷಪಾತಿ ಧೋರಣೆಯನ್ನು ವ್ಯಕ್ತ ಪಡಿಸಿದರೆ ಜನರನ್ನು  ನಂಬಿಸಿ ಮೋಸ ಮಾಡಿದಕ್ಕೆ ಸಮ.

ಎರಡು: ಒಂದು ವೇಳೆ ಕರ್ನಾಟಕದಲ್ಲಿ ಬಿಜೆಪಿ ಬಹುಮತ ಪಡೆದು ಶೇ. 60ಕ್ಕಿಂತಲೂ ಹೆಚ್ಚಿನವರು ಬಿಜೆಪಿಯನ್ನು ಬೆಂಬಲಿಸಿದ್ದರೆ ಮುಖ್ಯಮಂತ್ರಿ ಹೇಳಿಕೆಯಲ್ಲೂ ಅರ್ಥ ಹುಡುಕುವ ಸಾಧ್ಯತೆ ಇತ್ತು. ಏಕೆಂದರೆ ಬಿಜೆಪಿಯ ಸೋಲು ಗೆಲುವಿನಲ್ಲಿ ಆರೆಸ್ಸೆಸ್‌ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವ ನಂಬಿಕೆ ಇಂದು ಪ್ರಚಾರದಲ್ಲಿದೆ. ಆದರೆ 2018ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಕೇವಲ 104 ಸೀಟುಗಳು. 224 ಸೀಟುಗಳಿರುವ ನಮ್ಮ ವಿಧಾನ ಸಭೆಯಲ್ಲಿ ಸರ್ಕಾರ ರಚಿಸಲು ಕನಿಷ್ಠ 113 ಸೀಟುಗಳ ಅಗತ್ಯ ಇದೆ. ಅಷ್ಟು ಸೀಟುಗಳು ಬಿಜೆಪಿಗೆ ಇಲ್ಲದ ಕಾರಣ ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳು ಸೇರಿ ಸರಕಾರ ರಚಿಸಿದ್ದು.  ಒಂದು ವರ್ಷದ ನಂತರ ಈ ಎರಡು ಪಕ್ಷಗಳಿಂದ ಹಲವು ಶಾಸಕರನ್ನು ಪಕ್ಷಾಂತರ ಮಾಡಿಸಿ ಬಿಜೆಪಿ ಕರ್ನಾಟಕದಲ್ಲಿ ಸರ್ಕಾರ ರಚಿಸಿದ್ದು. ಹಾಗಾಗಿ ಇಂದು ಆಡಳಿತದಲ್ಲಿರುವ ಸರ್ಕಾರವನ್ನು ತಾಂತ್ರಿಕವಾಗಿ ಬಿಜೆಪಿ ಪಕ್ಷದ ಸರ್ಕಾರ ಎನ್ನಬಹುದೇ ಹೊರತು ತಾತ್ವಿಕವಾಗಿ ಬಿಜೆಪಿ ಪಕ್ಷದ ಸರ್ಕಾರ ಎನ್ನಲು ಸಾಧ್ಯವಿಲ್ಲ. ವಾಸ್ತವ ಹೀಗಿರುವಾಗ ಬಿಜೆಪಿ ಪಕ್ಷದ ವೈಚಾರಿಕ ಬೆನ್ನೆಲುಬು ಆಗಿರುವ ಆರೆಸ್ಸೆಸ್‌ ಗೆ ಮುಖ್ಯ ಮಂತ್ರಿ ಇಷ್ಟೊಂದು ಮಹತ್ವ ಕೊಡುವ ಅಗತ್ಯ ಇದೆಯೇ?

ಮೂರು: 2018ರಲ್ಲಿ 104 ಸೀಟುಗಳನ್ನು ಬಿಜೆಪಿ ಗೆದ್ದಿರುವುದು ಕೂಡ ಜನರಿಗೆ ಅಭಿವೃದ್ಧಿ ಭರವಸೆಗಳನ್ನು ನೀಡಿಯೇ. ಚುನಾವಣೆ ಸಂದರ್ಭದಲ್ಲಿ ಅಥವಾ ಪ್ರಣಾಳಿಕೆಯಲ್ಲಿ ಬಿಜೆಪಿ ತಮ್ಮ ಪಕ್ಷ ಗೆದ್ದ ನಂತರ ಮುಖ್ಯಮಂತ್ರಿಗಳು ಆರೆಸ್ಸೆಸ್‌ ವಿಚಾರಗಳಿಗೆ ತಲೆಬಾಗಲಿದ್ದಾರೆ ಎನ್ನುವ ಭರವಸೆ ನೀಡಿದ್ದು, ಈ  ಭರವಸೆಯನ್ನು ನಂಬಿ ಜನರು ಮತ ಚಲಾಯಿಸಿದ್ದು ಮತ್ತು ಆ ಭರವಸೆಯ ಕಾರಣದಿಂದಲೇ ಬಿಜೆಪಿಗೆ 104 ಸೀಟುಗಳು ಬಂದಿವೆ ಎನ್ನುವುದಕ್ಕೆ ಎಲ್ಲೂ ದಾಖಲೆಗಳಿಲ್ಲ. ವಾಸ್ತವ ಹೀಗಿರುವಾಗ  ಜನರು ತಮ್ಮ ಆಭಿವೃದ್ಧಿಗಾಗಿ ನೀಡಿದ ಬೆಂಬಲವನ್ನು ಯಾವುದೋ ಒಂದು ಸಂಘಟನೆಗೆ ಹತ್ತಿರವಾಗಲು ಅಥವಾ ಅದರ ನಂಬಿಕೆ ಗಳಿಸಲು ಬಳಸುವುದು ಎಷ್ಟು ಸರಿ?

Image
Bommai RSS

ನಾಲ್ಕು: ಮುಂದಿನ ಚುನಾವಣೆಗೆ ಜನರ ಮುಂದೆ ಹೋದಾಗ ಇದೇ ವಿಚಾರವನ್ನು ಮುಂದಿಡಬೇಕು. ʼನಾನು ಆರೆಸ್ಸೆಸ್‌ ವಿಚಾರಧಾರೆಯಿಂದ ಆಕರ್ಷಿತನಾಗಿದ್ದೇನೆ, ಇದೇ ವಿಚಾರಧಾರೆಗೆ ಅನುಗುಣವಾಗಿ ದೇಶ ಕಟ್ಟುತ್ತೇನೆʼ ಎಂದು ಮತ ಕೇಳಬೇಕು. ಆ ನಂತರ ಅವರು ತಲೆಬಾಗಿದ್ರೂ, ಕಾಲು ಹಿಡಿದರೂ ನಮಗೇನೂ ಬೇಸರವಿಲ್ಲ.

ಐದು:  ಬಿಜೆಪಿ 104 ಸೀಟು ಗೆದ್ದಿರುವುದು ಮತ್ತು ನಂತರ ಇತರ ಪಕ್ಷಗಳಿಂದ ಪ್ರತಿನಿಧಿಗಳನ್ನು ಸೆಳೆದು ಪಕ್ಷ ರಚಿಸಿದ್ದು ಇವೆಲ್ಲ ನಡೆದಿರುವುದು ಜನರ ಬೆಂಬಲದಿಂದ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಒಂದು ಪಕ್ಷವನ್ನು ಅಧಿಕಾರಕ್ಕೆ ಏರಿಸುವ ಮತ್ತು ಇಳಿಸುವ  ಎರಡೂ ಕೆಲಸಗಳನ್ನು ಜನರೇ ಮಾಡುವುದು. ಜಾತಿ, ಧರ್ಮ, ಹಣದ ಪ್ರಭಾವದಿಂದ ಜನರಿಗೆ ಇವತ್ತು ನಮ್ಮ ನಿಜವಾದ ಪ್ರತಿನಿಧಿಗಳು ಯಾರು ಬೋಗಸ್ ಪ್ರತಿನಿಧಿಗಳು ಯಾರು ಎನ್ನುವ ತಿಳಿವಳಿಕೆ ಇಲ್ಲ. ಆದರೆ ಇದೇ ಸ್ಥಿತಿ ಶಾಶ್ವತವಾಗಿ ಇರುತ್ತದೆ ಎಂದು ಯಾವ ರಾಜಕಾರಣಿಯೂ ತಿಳಿಯಬಾರದು. ಅದರಲ್ಲೂ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವವರಂತೂ ತಿಳಿಯಲೇ ಬಾರದು. ಆದುದರಿಂದ ನಮ್ಮ ಮುಖ್ಯಮಂತ್ರಿಗಳು ತಲೆಬಾಗಬೇಕಾಗಿರುವುದು ಈ ರಾಜ್ಯದ ಜನತೆಗೆ ಹೊರತು ಯಾವುದೋ ಒಂದು ಸಂಘಟನೆಗೆ ಅಥವಾ ಮಠ ಮಂದಿರಗಳಿಗಳಲ್ಲ.

ಆರು: ಆರೆಸ್ಸೆಸ್‌ ಮೇಲೆ ಬಹುದೊಡ್ಡ ಆರೋಪ ಒಂದು ಇದೆ. ಅದೇನೆಂದರೆ ಅದೊಂದು ಬ್ರಾಹ್ಮಣ್ಯವನ್ನು ಪ್ರತಿನಿಧಿಸುವ ಸಂಘಟನೆ. ಬ್ರಾಹ್ಮಣ್ಯ ಜಾತಿಯಲ್ಲ. ಅದೊಂದು ಸಿದ್ಧಾಂತ. ಆ ಸಿದ್ಧಾಂತದ ಬಹುದೊಡ್ಡ ಲಕ್ಷಣವೆಂದರೆ ಲಿಂಗ, ಜಾತಿ, ಧರ್ಮ ಸಮಾನತೆಯನ್ನು ಅಲ್ಲಗೆಳೆಯುವುದು. ಆದರೆ ನಮ್ಮ ಸಂವಿಧಾನ ಲಿಂಗ, ಜಾತಿ, ಧರ್ಮಗಳ ಸಮಾನತೆಯನ್ನು ಪ್ರತಿಪಾದಿಸುತ್ತಿದೆ. ಸಂವಿಧಾನದ ಹೆಸರಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಮುಖ್ಯ ಮಂತ್ರಿಗಳು ಸಂವಿಧಾನಿಕ ಮೌಲ್ಯಗಳನ್ನು ಒಪ್ಪುವುದಿಲ್ಲ ಎನ್ನುವ ಆರೋಪ ಇರುವ ಸಂಘಟನೆಗೆ ತಲೆ ಬಾಗುವುದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ?

ಇದನ್ನು ಓದಿದ್ದೀರಾ? ಸಾರ್ವಜನಿಕ ಲಜ್ಜೆ ಬಿಟ್ಟ ಮುಖ್ಯಮಂತ್ರಿ ಬೊಮ್ಮಾಯಿ

ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವವನ್ನು ಚುನಾವಣೆಗೆ ಸೀಮಿತಗೊಳಿಸಿವೆ. ಆ ಚುನಾವಣೆಯನ್ನೂ ನಿಷ್ಪಕ್ಷವಾಗಿ ನಡೆಸುತ್ತಿಲ್ಲ. ಜಾತಿ, ಧರ್ಮ, ಹಣದ ಪ್ರಭಾವಗಳನ್ನು ಬಳಸಿಕೊಂಡು ನಡೆಸುತ್ತಿವೆ. ಇವುಗಳ ಮುಂದೆ ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳು ನಾಶವಾಗಿವೆ. ಇವೆಲ್ಲ ಒಂದು ದಿನದಲ್ಲಿ ಮತ್ತು ಎಲ್ಲೋ ದೂರದಲ್ಲಿ  ನಡೆದಿಲ್ಲ. 75 ವರ್ಷಗಳಲ್ಲಿ ನಮ್ಮ ಕಣ್ಣ ಮುಂದೆಯೇ ನಡೆದಿದೆ. ಆದರೆ ನಾವು ಎಚ್ಚೆತ್ತು ಕೊಳ್ಳಲೇ ಇಲ್ಲ. ನಮಗೆ ಎಚ್ಚರವಾಗುವಾಗ ಪ್ರಜಾಪ್ರಭುತ್ವದ ಎಲ್ಲ ಸಂಸ್ಥೆಗಳು ಮಸುಕಾಗಿವೆ. ಅವು ಯಾವುದು ಕೂಡ ತಮ್ಮ ಮೂಲ ಉದ್ದೇಶಗಳಿಗೆ ಅನುಗುಣವಾಗಿ ಕೆಲಸ ನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ. ಆದರೆ ಕಾಲ ಮಿಂಚಿಲ್ಲ. ಇವತ್ತಾದರೂ ಎಚ್ಚೆತ್ತುಕೊಂಡು ಪ್ರಜೆಗಳಾಗಿ ನಮ್ಮ ಕರ್ತವ್ಯ ನಿಭಾಯಿಸಿದರೆ ಪ್ರಜಾಪ್ರಭುತ್ವವನ್ನು ಪುನಶ್ಚೇತನಗೊಳಿಸಬಹುದು.      

ನಿಮಗೆ ಏನು ಅನ್ನಿಸ್ತು?
0 ವೋಟ್