ಮುಖ್ಯಮಂತ್ರಿ ಪರಿಹಾರ ನಿಧಿ| ಪಕ್ಷದ ಕಾರ್ಯಕರ್ತರಿಗಷ್ಟೇ ಇರುವ ನಿಧಿಯೇ?

basavaraj bommai and yediyurappa

2018 ಜನವರಿ ತಿಂಗಳು, ಚುನಾವಣೆಗೆ ಮೂರು ತಿಂಗಳಷ್ಟೇ ಬಾಕಿ ಇತ್ತು. ಸುರತ್ಕಲ್‌ ಸಮೀಪದ ಕಾಟಿಪಳ್ಳದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್‌ ಕೊಲೆಯಾಗಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೀಪಕ್‌ ರಾವ್‌ ಕುಟುಂಬಕ್ಕೆ ರೂ 10 ಲಕ್ಷ ಪರಿಹಾರ ನೀಡಿದ್ದರು. ಆದರೆ ಬೊಮ್ಮಾಯಿ ಸರ್ಕಾರ ತಮ್ಮ ಕಾರ್ಯಕರ್ತರ ಕುಟುಂಬಕ್ಕೆ ಮಾತ್ರ ಪರಿಹಾರ ನೀಡುತ್ತಿದೆ

ನಿರಂತರವಾಗಿ ಕೇಳಿ ಬರುತ್ತಿದ್ದ ಭ್ರಷ್ಟಾಚಾರದ ಆರೋಪ- ಪ್ರತ್ಯಾರೋಪಗಳ ನಡುವೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ್ದಾರೆ. ಆರೆಸ್ಸೆಸ್‌ ಕೈಗೊಂಬೆಯಾಗಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಾಗದ ಮುಖ್ಯಮಂತ್ರಿ ಎಂಬ ಆರೋಪ ಬೊಮ್ಮಾಯಿ ಮೇಲಿದೆ. ಇದರ ಜೊತೆಗೆ ಅವರಿಗೆ ಆಯಿ (ತಾಯಿ) ಹೃದಯ, ಮನಸ್ಸು ಎರಡೂ ಇಲ್ಲ ಎಂಬುದು ಸಾಬೀತಾಗಿದೆ.

ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಮುಖ್ಯಮಂತ್ರಿಯಾದ ನಂತರ ಕರಾವಳಿಗೆ ನೀಡಿದ ಮೊದಲ ಭೇಟಿಯ ಸಂದರ್ಭದಲ್ಲಿ, ಆಗಷ್ಟೇ ನಡೆದಿದ್ದ ಅನೈತಿಕ ಪೊಲೀಸ್‌ಗಿರಿಗೆ ಸಂಬಂಧಿಸಿದಂತೆ ಮಾಧ್ಯಮದವರ ಜೊತೆ ಮಾತನಾಡುತ್ತಾ ಕ್ರೀಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆʼ ಎಂದು ಸ್ಥಾನದ ಘನತೆ ಮರೆತು ಹೇಳಿಕೆ ನೀಡಿದ್ದರು. ಅದಾದ ನಂತರ ಕರಾವಳಿ ಸೇರಿದಂತೆ ರಾಜ್ಯದ ಹಲವು ಕಡೆ ಸಾಲು ಸಾಲು ಕ್ರಿಮಿನಲ್‌ ಪ್ರಕರಣಗಳು ನಡೆದುವು. ಇದಕ್ಕೆ ಮುಖ್ಯಮಂತ್ರಿಗಳ ಹೇಳಿಕೆಯೇ ಕಾರಣ ಎಂದು ಹಲವು ಟೀಕಿಸಿದ್ದರು. ಅದಾದ ನಂತರ ಕರಾವಳಿಯನ್ನು ಶುರುವಾಗಿದ್ದು ಹಿಜಾಬ್‌ ವಿವಾದ,  ಮುಂದುವರಿದು ಅಲ್ಪಸಂಖ್ಯಾತರ ವಿರುದ್ಧ ಸಾಲು ಸಾಲು ಬಹಿಷ್ಕಾರದ ಅಭಿಯಾನಗಳು ನಡೆದವು. ಆಗಲೂ ಬಸವರಾಜ ಬೊಮ್ಮಾಯಿ ಸರ್ಕಾರ ಕೈಕಟ್ಟಿ ಕುಳಿತಿತ್ತು. ತಮ್ಮದೇ ಪಕ್ಷದ ಶಾಸಕರು ದ್ವೇಷದ ಅಭಿಯಾನಗಳನ್ನು ಸಮರ್ಥಿಸಿದರೂ, ಪ್ರಚೋದನಕಾರಿ ಹೇಳಿಕೆ ನೀಡಿದರೂ ಮುಖ್ಯಮಂತ್ರಿಯಾಗಿ ರಾಜ್ಯದ ಎಲ್ಲ ವರ್ಗದ ಜನರಿಗೆ ಧೈರ್ಯ ತುಂಬುವ ಬದ್ಧತೆಯನ್ನು ಅವರು ತೋರಿರಲಿಲ್ಲ.

ಪರಿಹಾರ ನೀಡುವಲ್ಲಿ ತಾರತಮ್ಯ
ಈ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಕೋಮು ದ್ವೇಷದ ಹತ್ಯೆಗಳ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ನಡೆದುಕೊಂಡಿರುವ ರೀತಿ ಈಗ ಬಹು ಚರ್ಚಿತ ವಿಷಯವಾಗಿದೆ. 2019ರಲ್ಲಿ ಡಿಸೆಂಬರ್‌ 19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹೋರಾಟ ಗಲಭೆಗೆ ತಿರುಗಿದಾಗ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಇಬ್ಬರು ಮುಸ್ಲಿಂ ಯುವಕರು ಮೃತಪಟ್ಟಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ಗುಂಡೇಟಿನಿಂದ ನಾಗರಿಕರು ಸತ್ತಾಗ ಸರ್ಕಾರ ಪರಿಹಾರ ನೀಡುವುದು ಹಿಂದಿನಿಂದಲೂ ನಡೆದು ಬಂದಿರುವ ನಡಾವಳಿ. ಅದರಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಇಬ್ಬರಿಗೂ ತಲಾ 5ಲಕ್ಷ ಪರಿಹಾರ ಘೋಷಿಸಿದ್ದರು. ಆದರೆ ತಮ್ಮದೇ ಶಾಸಕರು, ಸಂಪುಟ ಸಹೋದ್ಯೋಗಿಗಳ ವಿರೋಧಕ್ಕೆ ಮಣಿದು ಆದೇಶವನ್ನು ವಾಪಸ್‌ ಪಡೆದಿದ್ದರು. ಸತ್ತವರು ಗಲಭೆಯಲ್ಲಿ ಭಾಗಿಯಾಗಿದ್ದರೇ, ಇಲ್ಲವೇ ಎಂದು ತಿಳಿಯಲು ಮ್ಯಾಜಿಸ್ಟ್ರೇಟ್‌ ತನಿಖಾ ವರದಿ ಏನಾಯ್ತು, ವರದಿಯಲ್ಲಿ ಸತ್ತವರು ಅಪರಾಧಿಗಳಾ ಅಥವಾ ನಿರಪರಾಧಿಗಳಾ ಎಂಬುದು ಮೂರು ವರ್ಷಗಳಾದರೂ ಬಹಿರಂಗಪಡಿಸಿಲ್ಲ.

Image
2019ರಲ್ಲಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್‌
2019ರಲ್ಲಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್‌

ಈ ವರ್ಷ ಜನವರಿಯಲ್ಲಿ ಮೊದಲು ನರಗುಂದದ ಮುಸ್ಲಿಂ ಯುವಕ ಸಮೀರ್‌ ಶಹಾಪುರ್‌ ನನ್ನು ಹತ್ಯೆ ಮಾಡಲಾಗಿತ್ತು. ಬಂಧಿತ ಆರೋಪಿಗಳು ಬಿಜೆಪಿಪರ ಸಂಘಟನೆಯ ಕಾರ್ಯಕರ್ತರು. ಆತ ಕ್ರಿಮಿನಲ್‌ ಆಗಿರಲಿಲ್ಲ. ಆದರೆ, ಶಾಸಕರಾದಿಯಾಗಿ ಯಾವೊಬ್ಬ ನಾಯಕರೂ ಆತನ ಬಡ ಕುಟುಂಬದ ನೆರವಿಗೆ ಧಾವಿಸಿಲ್ಲ. 

ಫೆಬ್ರುವರಿ 20ರಂದು ಶಿವಮೊಗ್ಗದ ಬಿಜೆಪಿ ಕಾರ್ಯಕರ್ತ ಹರ್ಷನ ಕೊಲೆಯಾಗುತ್ತದೆ. ತಕ್ಷಣ ಬಿಜೆಪಿಯ ನಾಯಕರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಹರ್ಷನ ಮನೆಗೆ ಭೇಟಿ ನೀಡಿದ ಸಚಿವರು, ಶಾಸಕರು, ಹಿಂದೂಪರ ನಾಯಕರು, ಮಠಾಧೀಶರು ಲಕ್ಷಗಟ್ಟಲೆ  ಪರಿಹಾರದ ಚೆಕ್‌ ನೀಡಿದ್ದರು. ಹಾಗಿದ್ದೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ಪರಿಹಾರ ನೀಡಿದ್ದರು. ಹರ್ಷನ ಕುಟುಂಬಕ್ಕೆ ಹರಿದು ಬಂದ ಪರಿಹಾರ ಮೊತ್ತ ಹತ್ತಿರ ಹತ್ತಿರ ಮೂರು ಕೋಟಿ ಎಂದು ಅಂದಾಜಿಸಲಾಗಿದೆ.

ಫೆಬ್ರುವರಿ 25ರಂದು ಧರ್ಮಸ್ಥಳದ 45 ವರ್ಷದ ದಲಿತ ಯುವಕ ದಿನೇಶ್‌  ಬಜರಂಗದಳದ ಕಾರ್ಯಕರ್ತನಿಂದ ಥಳಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ ದಿನೇಶರ ಮನೆಗೆ ಆಡಳಿತ ಪಕ್ಷದ ಯಾವ ನಾಯಕರೂ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಮುಖ್ಯಮಂತ್ರಿಗಳು ಆ ಬಡ ಕುಟುಂಬ ಮೇಲೆ ಕನಿಕರಿಸಿ ಪರಿಹಾರ ನೀಡಲಿಲ್ಲ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ಅವಕಾಶವಿದ್ದರೂ ಪರಿಹಾರ ನೀಡಿಲ್ಲ. ಕರಾವಳಿಯ ದಲಿತ, ಹಿಂದುಳಿದ ವರ್ಗದ ಸಚಿವರು ಕೂಡಾ  ಆ ಕುಟುಂಬದ ಕಡೆ ಮುಖ ಮಾಡಿಲ್ಲ. ಕೊಲೆಗಾರನಿಗೆ 15 ದಿನದಲ್ಲೇ ಜಾಮೀನು ಕೂಡಾ ಸಿಕ್ಕಿದೆ. ಧಾರವಾಡದ ನಬೀಸಾಬ್‌ ಅವರ ಕಲ್ಲಂಗಡಿ ಹಣ್ಣಿನ ಅಂಗಡಿಯನ್ನು ಬಜರಂಗದಳದವರು ಪುಡಿಗಟ್ಟಿದ್ದರು. ಅದು ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಆದರೂ ಬೊಮ್ಮಾಯಿ ಸರ್ಕಾರದ ಯಾರ ಮನಸ್ಸೂ ಕರಗಿಲ್ಲ. 

ಇದೇ ಜುಲೈ 21 ರಂದು ದಕ್ಷಿಣಕನ್ನಡದ ಕಳಂಜದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಸೂದ್‌ ಎಂಬ 19 ವರ್ಷದ ಕೂಲಿ ಕಾರ್ಮಿಕ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಘಟನೆ ನಡೆದ ಮರುದಿನವೇ ಬಜರಂಗದಳ, ಗೋರಕ್ಷಕ್‌ ಸಂಘಟನೆಯ ಸಕ್ರಿಯ ಕಾರ್ಯಕರ್ತರಾದ  ಎಂಟು ಮಂದಿಯನ್ನು ಬಂಧಿಸಲಾಗಿದೆ. ಮಸೂದ್‌ನ ಮನೆಗೆ ಯಾವ ಬಿಜೆಪಿ ನಾಯಕರೂ ಭೇಟಿ ಕೊಟ್ಟಿಲ್ಲ. ಕ್ಷೇತ್ರದ ಶಾಸಕ, ಮೀನುಗಾರಿಕೆ ಸಚಿವ ಎಸ್‌ ಅಂಗಾರ ಕೂಡಾ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಿಲ್ಲ.

ಜುಲೈ 28ರ ರಾತ್ರಿ ಬಿಜೆಪಿ ಕಾರ್ಯಕರ್ತ ನಳಿನ್‌ ಕುಮಾರ್‌ ಅವರ ಮಾಜಿ ಡ್ರೈವರ್‌ , ಜಿಲ್ಲಾ ಯುವ ಬಿಜೆಪಿ ಉಪಾಧ್ಯಕ್ಷ ಪ್ರವೀಣ್‌ ನೆಟ್ಟಾರು ಹತ್ಯೆ ನಡೆದ ಮರುದಿನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ʼಜನೋತ್ಸವ ಕಾರ್ಯಕ್ರಮʼ ರದ್ದುಗೊಳಿಸಿ ಪ್ರವೀಣ್‌ ಮನೆಗೆ ಭೇಟಿ ನೀಡಿ ಸರ್ಕಾರದ ಪರವಾಗಿ 25ಲಕ್ಷ ಮತ್ತು ಪಕ್ಷದ ಪರವಾಗಿ ನಳಿನ್‌ ಕುಮಾರ್‌ ಕಟೀಲ್‌ ಅವರು 25 ಪರಿಹಾರದ ಚೆಕ್‌ ನೀಡಿದ್ದಾರೆ. ಸಚಿವ ಅಶ್ವತ್ಥನಾರಾಯಣ ರೂ 10ಲಕ್ಷ, ಅಂಗಾರ ಸೇರಿದಂತೆ ಅನೇಕರು ಹಣದ ನೆರವು ನೀಡಿದ್ದಾರೆ. ಅದೇ ದಿನ ಮುಖ್ಯಮಂತ್ರಿ ಮಂಗಳೂರಿನಲ್ಲಿರುವಾಗಲೇ ಸುರತ್ಕಲ್‌ನಲ್ಲಿ ಫಾಝಿಲ್‌ ಎಂಬ ಯುವಕನನ್ನು ಹತ್ಯೆ ಮಾಡಲಾಗಿದೆ. ಮಂಗಳೂರಿನಲ್ಲೇ ಇದ್ದ ಮುಖ್ಯಮಂತ್ರಿ ಆಸ್ಪತ್ರೆಗೂ ಭೇಟಿ ನೀಡಿಲ್ಲ. 

ಮುಖ್ಯಮಂತ್ರಿಗಳ ಈ ನಡೆ ಸಾರ್ವಜನಕರ ಆಕ್ರೋಶಕ್ಕೆ ಕಾರಣವಾದೆ. ಬಸವರಾಜ ಬೊಮ್ಮಾಯಿ ಬಿಜೆಪಿಗಷ್ಟೇ ಮುಖ್ಯಮಂತ್ರಿಯಾ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುವುದು ಎಷ್ಟು ಸರಿ ಎಂದು ಶಾಸಕ ಎಚ್‌ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ʼಹತ್ಯೆಯಾದ ಎಲ್ಲರ ದೇಹದಿಂದ ಚೆಲ್ಲಿದ್ದು ಕೆಂಪು ಬಣ್ಣದ ರಕ್ತ. ಎಲ್ಲ ಅಮ್ಮಂದಿರ ಕಣ್ಣೀರಿನ ಬಣ್ಣ ಒಂದೇʼ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

Image
ಹತ್ಯೆಯಾದ ಸುಳ್ಯದ ಪ್ರವೀಣ್‌ ಮತ್ತು ಮಸೂದ್‌
ಹತ್ಯೆಯಾದ ಸುಳ್ಯದ ಪ್ರವೀಣ್‌ ಮತ್ತು ಮಸೂದ್‌

ಹಿಂದೂವಿನಿಂದ ಹಿಂದೂವಿನ ಕೊಲೆಯಾದರೆ ಪರಿಹಾರ ಇಲ್ವೇ?
ಈ ಒಂದು ವರ್ಷದಲ್ಲಿ ನಡೆದ ಮುಸ್ಲಿಮರು ಮತ್ತು ದಲಿತರ ಮೇಲಿನ ಹಲ್ಲೆ ಮತ್ತು ಕೊಲೆಯಲ್ಲಿ ಭಾಗಿಯಾದವರು ಮತ್ತು ಬಂಧಿತರಾದವರೆಲ್ಲರೂ ಬಜರಂಗದಳ, ಶ್ರೀರಾಮಸೇನೆ, ಗೋರಕ್ಷಕ್‌ ಸಂಘಟನೆಯ ಕಾರ್ಯಕರ್ತರು ಎಂಬುದು ಗಮನಾರ್ಹ ಸಂಗತಿ. ಮತ್ತು ಈ ಯಾವ ಪ್ರಕರಣಗಳಲ್ಲಿಯೂ ಸಂತ್ರಸ್ತರಾದವರಿಗೆ ಬಿಜೆಪಿ ಸರ್ಕಾರ ಪರಿಹಾರ ನೀಡಿಲ್ಲ. ಆ ಕುಟುಂಬಗಳ ರಕ್ಷಣೆಗೆ ಮುಂದಾಗಿಲ್ಲ. ಈ ಮೂಲಕ ಬಿಜೆಪಿ ಸರ್ಕಾರ ನೀಡಿದ ಸಂದೇಶವಾದರೂ ಏನು?
ಪಕ್ಷದ ಕಾರ್ಯಕರ್ತರಲ್ಲದ ಹಿಂದೂಗಳ ಹತ್ಯೆಯಾದಾಗಲೂ ಆರೋಪಿ ಮುಸ್ಲಿಂ ಆಗಿದ್ದರೆ ಬಿಜೆಪಿ ನಾಯಕರು ತಕ್ಷಣ  ಧಾವಿಸಿ ಬರುತ್ತಾರೆ. ಜಿಹಾದಿಯಿಂದ ಹಿಂದೂವೊಬ್ಬನ ಕೊಲೆಯಾಗಿದೆ ಎಂದು ಬಿಂಬಿಸಿ ರಾಜಕೀಯ ಲಾಭಪಡೆಯಲು ಮುಂದಾಗುತ್ತಾರೆ. ಬೆಂಗಳೂರಿನ ಚಂದ್ರು ಕೊಲೆಯನ್ನು ಹಿಂದೂ ಮುಸ್ಲಿಂ ಸಂಘರ್ಷ ಎಂಬುದಾಗಿ ಬಿಂಬಿಸಲು ಗೃಹಸಚಿವರಾದಿಯಾಗಿ ಯತ್ನಿಸಿದ್ದರು. ಚಂದ್ರು ಕುಟುಂಬಕ್ಕೆ ಶಾಸಕ ಸಿ ಟಿ ರವಿ ರೂ 5 ಲಕ್ಷದ ಚೆಕ್‌ ನೀಡಿದ್ದರು. ಚಂದ್ರು ಪಕ್ಷದ ಕಾರ್ಯಕರ್ತನಲ್ಲದಿದ್ದರೂ ಕೊಲೆಗಾರರು ಮುಸ್ಲಿಮರಾಗಿದ್ದರು ಎಂಬುದೇ ಮುಖ್ಯವಾಗಿತ್ತು. 

ಕಳೆದ ವಿಧಾನಸಭಾ ಅಧಿವೇಶನ ನಡೆಯುವಾಗ ಶಾಸಕ ಯುಟಿ ಖಾದರ್‌ ಅವರು ನರಗುಂದದ ಸಮೀರ್‌ ಮತ್ತು ವಿರಾಜಪೇಟೆಯ ಹುತಾತ್ಮ ಯೋಧ ಅಲ್ತಾಫ್‌ ಅಹಮದ್‌ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು. ಕಾನೂನು ಸಚಿವ ಮಾಧುಸ್ವಾಮಿ ಅವರು ಗೃಹಸಚಿವರ ಜೊತೆ ಮಾತನಾಡಿ ಪರಿಹಾರ ಕೊಡುವುದಾಗಿ ಹೇಳಿದ್ದರು. ಅದಾಗಿ ನಾಲ್ಕು ತಿಂಗಳಾಯಿತು, ಪರಿಹಾರ ಘೋಷಣೆಯೇ ಆಗಿಲ್ಲ. ವಿಧಾನ ಪರಿಷತ್ತಿನಲ್ಲಿ ಸಿ ಎಂ ಇಬ್ರಾಹಿಂ ಒತ್ತಾಯಿಸಿದಾಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು.

ಈ ಬಗ್ಗೆ ಈದಿನ.ಕಾಮ್‌ ಜೊತೆ ಮಾತನಾಡಿದ ಮಂಗಳೂರು ಜಿಲ್ಲಾಧಿಕಾರಿ ಡಾ ರಾಜೇಂದ್ರಕುಮಾರ್‌, ʼಕಳಂಜದಲ್ಲಿ ಹತ್ಯೆಯಾದ ಮಸೂದ್‌ ಕುಟುಂಬದವರು ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆʼ ಎಂದು ತಿಳಿಸಿದರು.

2018 ಜನವರಿ ತಿಂಗಳು, ಚುನಾವಣೆಗೆ ಮೂರು ತಿಂಗಳಷ್ಟೇ ಬಾಕಿ ಇತ್ತು. ಸುರತ್ಕಲ್‌ ಸಮೀಪದ ಕಾಟಿಪಳ್ಳಿದಲ್ಲಿ ನಡು ಮಧ್ಯಾಹ್ನ ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್‌ ಕೊಲೆಯಾಗಿತ್ತು. ಆ ಕೊಲೆಯನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಸರ್ಕಾರದ ಮೇಲೆ ಮುಗಿಬಿದ್ದಿತ್ತು. ಆಗ ಸಿದ್ದರಾಮಯ್ಯನವರು ದೀಪಕ್‌ ರಾವ್‌ ಬಿಜೆಪಿ ಕಾರ್ಯಕರ್ತ ಎಂದು ಗೊತ್ತಿದ್ದೂ ಮಾನವೀಯತೆ ತೋರಿದ್ದರು. ತಕ್ಷಣ ರೂ 10 ಲಕ್ಷ ಪರಿಹಾರ ಘೋಷಿಸಿ ಜಿಲ್ಲಾಧಿಕಾರಿ ಮೂಲಕ ಚೆಕ್‌ ನೀಡಿದ್ದರು. ಮಂಗಳೂರು ಉತ್ತರ ಶಾಸಕ ಮೊಯ್ದಿನ್‌ ಭಾವ ವೈಯಕ್ತಿಕವಾಗಿ ರೂ5 ಲಕ್ಷ ಪರಿಹಾರ ನೀಡಿದ್ದರು. ಇದು ಬಿಜೆಪಿ ನಾಯಕರಿಗೆ ಮರೆತಿರಬಹುದು. ಆದರೆ ಇತಿಹಾಸದಲಿ ಇವೆಲ್ಲ ದಾಖಲಾಗಿದೆ.

ತನಿಖೆಯಲ್ಲೂ ತಾರತಮ್ಯ

ಬೊಮ್ಮಾಯಿ ಸರ್ಕಾರ ರಾಜ್ಯದಲ್ಲಿ ನಡೆದ ಹತ್ಯೆಗಳ ತನಿಖೆಯ ವಿಚಾರದಲ್ಲೂ ತಾರತಮ್ಯ ತೋರುತ್ತಿದೆ. ಪರಸ್ಪರ ಬೈಕ್‌ ಡಿಕ್ಕಿಯಿಂದಾದ ಗಲಾಟೆಯಲ್ಲಿ ಮೃತಪಟ್ಟ ಚಂದ್ರುವಿನ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸಿದೆ. ತಮ್ಮ ಕಾರ್ಯಕರ್ತರಾದ ಪ್ರವೀಣ್‌ ಮತ್ತು ಹರ್ಷನ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಒಪ್ಪಿಸಿದೆ. ಧರ್ಮಸ್ಥಳದ ದಿನೇಶ್‌, ಸುಳ್ಯದ ಮಸೂದ್‌ ಮತ್ತು ಸುರತ್ಕಲ್‌ನ ಫಾಝಿಲ್‌ ಹತ್ಯೆಯ ತನಿಖೆಯನ್ನು ಸ್ಥಳೀಯ ಪೊಲೀಸರೇ ನಡೆಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್