ಮಕ್ಕಳ ದಿನ | ಸಾಮಾಜಿಕ ತಲ್ಲಣಗಳ ನಡುವೆ ಎಳೆಯ ಬಾಲೆಯರು

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಶೇ. 600ರಷ್ಟು ಹೆಚ್ಚಾಗಿದೆ. ಇದು ’ಅತ್ಯಾಚಾರ ಭಾರತ’ವೆಂಬ ಅನ್ವರ್ಥನಾಮಕ್ಕೆ ಉದಾಹರಣೆಯಾಗಿರುವ ಘೋರ ತುರ್ತು ಪರಿಸ್ಥಿತಿ! ಮಕ್ಕಳಿಗೆ ಕನಿಷ್ಠ ಮಟ್ಟದ ಸುರಕ್ಷಿತತೆಯನ್ನೂ ಒದಗಿಸಲು ಸೋಲುತ್ತಿರುವ ಈ ದಾರುಣ ಹೊತ್ತಿನಲ್ಲಿ ನಾವು ಮತ್ತೊಂದು ಮಕ್ಕಳ ದಿನವನ್ನು ಆಚರಿಸಲು ಸಜ್ಜುಗೊಂಡಿದ್ದೇವೆ! ಕ್ಷಮಿಸಿ ಮಕ್ಕಳೇ!

ನಮ್ಮ ಸಮಾಜದಲ್ಲಿ ಅತ್ಯಂತ ನಿರ್ಲಕ್ಷಿತರು ಎಂದರೆ ಮಕ್ಕಳು. ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿವಳಿಕೆ, ಸಂಘಟನೆ ಹಾಗೂ ದನಿ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ನಮ್ಮ ಸಮಾಜದ ಕೆಳವರ್ಗ, ತಳಸಮುದಾಯ, ರೈತ, ಕಾರ್ಮಿಕ, ಮಹಿಳೆ ಹಾಗೂ ಅಸಹಾಯಕ ವರ್ಗಕ್ಕೆ ಇಂದು ತಮ್ಮ ಹಕ್ಕುಗಳ ಬಗ್ಗೆ ಒಂದಿಷ್ಟಾದರೂ ತಿಳಿವಳಿಕೆ, ಜಾಗೃತಿ ಮೂಡಿರುವುದರಿಂದ ಅವರು ಸಂಘಟಿತರಾಗಿ ಅದಕ್ಕಾಗಿ ದನಿಯೆತ್ತಿ ಕೇಳುವಂಥ, ಸಂಘಟಿತರಾಗುವಂಥ, ಹೋರಾಟ ಮಾಡುವಂಥ ಹಂತವನ್ನು ತಲುಪಿದ್ದಾರೆ. ಆದರೆ ಮಕ್ಕಳು ಮುಗ್ಧರು ಮತ್ತು ಅಸಹಾಯಕರು ಆಗಿರುವುದರಿಂದ ಅವರು ಸಮಾಜದಲ್ಲಿ ಇನ್ನೂ ನಿರ್ಲಕ್ಷಿತರಾಗೇ ಉಳಿದಿದ್ದಾರೆ.

Eedina App

ಮಕ್ಕಳು ನಿರ್ಲಕ್ಷಿತರಾಗಿರುವುದರಿಂದಲೇ ಮಾಧ್ಯಮಗಳಲ್ಲಿ ಮಕ್ಕಳ ಸಮಸ್ಯೆಗಳ ಬಗೆಗೆ ಗಮನ ಕೂಡ ಅತ್ಯಂತ ಕಡಿಮೆ ಇದೆ. ಅದರ ಮಧ್ಯೆಯೂ ಮಕ್ಕಳ ದಿನಾಚರಣೆಯಂದು ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಗಳಲ್ಲಿ, ಮಕ್ಕಳಿಗೆಂದೇ ಸಾಹಿತ್ಯ, ಚಿತ್ರಕಲೆ, ಸಾಂಸ್ಕೃತಿಕ ಆಯಾಮದಲ್ಲಿ ಒಂದಿಷ್ಟು ವಿಶೇಷವಾದುದನ್ನು ಕೊಡುವ ಪ್ರಯತ್ನಗಳಾಗುತ್ತಿರುವುದೇ ಬಹು ದೊಡ್ಡ ಪ್ರಯತ್ನವೆನಿಸಿಬಿಟ್ಟಿದೆ! ಆದರೆ ಯೂನಿಸೆಫ್‌ನ ವರದಿಯಂತೆ ಭಾರತದಲ್ಲಿ ಶೆ. 53ರಷ್ಟು ಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ನಮ್ಮ ಕಾಲದ ಮಕ್ಕಳು ಇಂದು ಬಹು ಬಗೆಯ ಸಾಮಾಜಿಕ ತಲ್ಲಣಗಳು, ಆತಂಕಗಳ ಮಧ್ಯೆ ಬದುಕಬೇಕಾಗಿ ಬಂದಿರುವ ದುರಂತಗಳೆಡೆಗೆ ಗಮನಹರಿಸಬೇಕಾಗಿರುವುದು ಇಂದಿನ ತುರ್ತು.

ತಿಂಗಳ ಹಿಂದೆ ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಪೀಠಾಧಿಕಾರಿ ತಮ್ಮದೇ ಮಠದ ಪ್ರೌಢಶಾಲೆಯಲ್ಲಿ ಓದುತ್ತಾ, ಅಲ್ಲಿನದೇ ಹೆಣ್ಣುಮಕ್ಕಳ ವಸತಿನಿಲಯದಲ್ಲಿದ್ದ ಕೆಲವು ಅಪ್ರಾಪ್ತ ಹೆಣ್ಣುಮಕ್ಕಳನ್ನು ನಿರಂತರವಾಗಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ. ಅದಕ್ಕೆ ಅವರ ನಾಲ್ವರು ಸಹಚರರು ಬೆಂಬಲ ನೀಡಿದ ಪ್ರಕರಣ ದಾಖಲಾಗಿ, ನಾಗರಿಕ ಸಮಾಜವನ್ನು ಆಘಾತಕ್ಕೀಡು ಮಾಡಿದೆ.

AV Eye Hospital ad

ನಿಜಕ್ಕೂ ಇದೊಂದು ಬೆಳಕಿಗೆ ಬಂದ ಅತ್ಯಂತ ಅಮಾನವೀಯ ಮತ್ತು ಕ್ರೂರ ಘಟನೆ. ಹೊರ ಬಂದಿಲ್ಲದ ಇನ್ನೂ ಅದೆಷ್ಟು ಪ್ರಕರಣ ಈ ಬಗೆಯ ವ್ಯವಸ್ಥೆಗಳ ಒಳಗಿವೆಯೋ! ಸರಪಣಿಯಂತೆ ಒಂದಕ್ಕೊಂದು ಹೆಣೆದುಕೊಂಡಿರುವ ಪ್ರಕರಣಗಳ ಸರಮಾಲೆಯ ಈ ಲೈಂಗಿಕ ಹಗರಣಗಳು ಮಠದಿಂದ ಹೊರ ಬರುತ್ತಿರುವಂತೆಯೇ ಈ ರೀತಿಯ ವಸತಿಯುತ ರಕ್ಷಣೆಯೊಳಗೆ ಅಪ್ರಾಪ್ತ ಮಕ್ಕಳನ್ನು ಇಟ್ಟುಕೊಂಡಿರುವ ಪ್ರತಿಯೊಂದು ವ್ಯವಸ್ಥೆಯ ಬಗೆಗೂ ಅನುಮಾನವನ್ನು ಮೂಡಿಸುತ್ತಿದೆ. ಮಕ್ಕಳ ಸುರಕ್ಷಿತತೆಯ ಬಗೆಗೆ ಆತಂಕಿತರಾಗುವಂತೆ ಮಾಡುತ್ತಿದೆ. ನಮ್ಮ ಸುತ್ತಲೂ ಈಗಾಗಲೇ ಹಲವು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಘಟಿಸುತ್ತಿರುವ ಈ ಬಗೆಯ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಗಳು ನಮ್ಮ ತುರ್ತು ಗಮನವನ್ನು ಬೇಡುತ್ತಿವೆ.

ಹಳ್ಳಿಯ ಬಡಕುಟುಂಬವೊಂದರ 11 ವರ್ಷಗಳ ಎಳೆಬಾಲೆ ಅವಳು. ಋತುಮತಿಯಾಗಿ ಆರು ತಿಂಗಳೂ ಕಳೆದಿಲ್ಲ. ಲೈಂಗಿಕತೆ ಎಂದರೇನೆಂದು ಇರಲಿ, ಪ್ರೀತಿ-ಪ್ರೇಮವೆಂದರೆ ಏನೆಂದೂ ಅರಿಯದ ಮುಗ್ಧಳು. ಶಾಲೆಗೆ ಬಿಡಲು ಕರೆದುಕೊಂಡು ಹೋದ ಸಂಬಂಧಿಯಿಂದಲೇ ಅವಳ ಅತ್ಯಾಚಾರವಾಗಿದೆ. ಮೈಮನಸುಗಳೆರಡೂ ಜರ್ಜರಿತವಾಗಿ ನಡುಗುತ್ತಿರುವ ಆ ಕಂದಮ್ಮ ಇದನ್ನು, ಅವನು ಕೊಟ್ಟ ಶಿಕ್ಷೆ ಎಂದೇ ಭಾವಿಸಿದ್ದಾಳೆ. ’ನಾನೇನೂ ತಪ್ಪು ಮಾಡಿಲ್ಲದಿದ್ದರೂ, ಮಾಮ ನನಗೆ ಈ ಶಿಕ್ಷೆ ಯಾಕೆ ಕೊಟ್ಟರು?’ ಎಂಬ ಪ್ರಶ್ನೆಗೆ ಏನೆಂದು ಉತ್ತರಿಸುವುದು? ಆ ವ್ಯಕ್ತಿಗೆ ರಾಜಕೀಯ ಪ್ರಮುಖರ ನಿಕಟ ಸಂಪರ್ಕವಿರುವುದರಿಂದ ಕೇಸು ದಾಖಲು ಮಾಡಿಕೊಳ್ಳಲೇ ಪೊಲೀಸರು ಹಿಂದೆಗೆದಿರುವುದರಿಂದ ಮಗುವನ್ನು ಒಳಗೊಂಡು ಕುಟುಂಬದವರು ಆತಂಕದಿಂದ ತಲ್ಲಣಿಸುತ್ತಿದ್ದಾರೆ! ತಪ್ಪು ಯಾರದ್ದು? ಯಾರಿಗೆ ಶಿಕ್ಷೆ?

ಈ ಸುದ್ದಿ ಓದಿದ್ದೀರಾ?: ಮಕ್ಕಳ ದಿನ | ʼನಮ್ಮ ಮಕ್ಕಳ ಬಾಲ್ಯವನ್ನು ನಾವೇ ಕಸಿದಿದ್ದೇವೆʼ

ಅವಳು 14 ವರ್ಷದ ಬಡ ಅಂಧ ಬಾಲೆ. ವಸತಿಯುತ ಶಾಲೆಯಲ್ಲಿ ಓದುತ್ತಿರುವ ಆ ಮಗುವಿನ ಮೇಲೆ ಮತ್ತೆ ಮತ್ತೆ ನಡೆದ ಬಲಾತ್ಕಾರದಿಂದಾಗಿ, ಎರಡು ಬಾರಿ ಗರ್ಭಪಾತಮಾಡಿಸಿದಾಗ, ವೈದ್ಯ ಮಹಾಶಯ ’ಗರ್ಭಕೋಶವನ್ನೇ ತೆಗೆಸಿಬಿಡಿ, ಹೇಗೋ ಉಪಯೋಗ ಆಗ್ತಾಳೆ. ಇಂಥಹವರಿಗೆ ಇವೆಲ್ಲ ಮಾಮೂಲು. ಸುಮ್ಮನೆ ಪದೇ ಪದೇ ರಗಳೆ ಯಾಕೆ ಅನುಭವಿಸ್ತೀರಾ?’ ಎಂದಾಗ ಬೆಚ್ಚಿ ಬಿದ್ದು, ಸಂಕಟದಿಂದ ಒಡಲು ಕುದಿಯುತ್ತದೆ. ರೋಗಿಯನ್ನು ರಕ್ಷಿಸುವ ದಯಾಳುವಾಗಿರಬೇಕೆಂದು ನಾವು ಭಾವಿಸುವ ವೈದ್ಯನೂ, ಅಸಹಾಯಕ ಹೆಣ್ಣುಮಕ್ಕಳ ಅತ್ಯಾಚಾರವನ್ನು ಜನಸಾಮಾನ್ಯರು ಇಂದು ’ಮಾಮೂಲು’ ಎಂದು ತಿಳಿದುಬಿಟ್ಟಿರುವಂತೆ ಭಾವಿಸುವುದಾದರೆ, ಮತ್ತೆ ಇನ್ಯಾರನ್ನು ನಂಬುವುದು?

ಇವು ಕೆಲವು ಸ್ವಾನುಭವದ ಉದಾಹರಣೆಗಳಷ್ಟೇ. ಇವೀಗ ಕೇವಲ ಪ್ರಕರಣ ಮಾತ್ರವಲ್ಲ. ಒಂದು ಪ್ರಕ್ರಿಯೆಯಾಗಿ ಬಿಟ್ಟಿರುವುದು ವಿಪರ್ಯಾಸ. ಹಿಂದೆಂದೂ ನಡೆಯದಷ್ಟು, ಅಥವಾ ದಾಖಲಾಗದಷ್ಟು ಪ್ರಮಾಣದಲ್ಲಿ ಅತ್ಯಾಚಾರಗಳು ಇಂದು ಅಪ್ರಾಪ್ತ ಮತ್ತು ಎಳೆಯ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವುದನ್ನು, ದಾಖಲಾಗುತ್ತಿರುವುದನ್ನು ಕಾಣುವಾಗ, ಕೇಳುವಾಗ ಹೃದಯ ದಹಿಸುತ್ತದೆ. ಸೀತಾಪುರದ 7 ವರ್ಷದ ಕಂದಮ್ಮ, ಕಥುವಾದ 8 ವರ್ಷದ ಕೂಸು, ಮುಜಾಫರ್‌ಪುರ್ ಮತ್ತು ಹಾಝೀಪುರದ ಅನಾಥ ಮಂದಿರಗಳ ಎಳೆಯ ಬಾಲೆಯರು, ಮಣಿಪುರದ ಮತ್ತು ಸೂರತ್‌ನ 11 ವರ್ಷದ ಕಂದಮ್ಮಗಳು, ಹತ್ರಾಸ್‌ನ ಎಳೆ ಜೀವ, ನಮ್ಮದೇ ಹಾವೇರಿಯ, ಬಿಜಾಪುರದ 14 ವರ್ಷದ ಹೆಣ್ಣುಮಕ್ಕಳು, ಹಾಸನದ ಎಳೆಯ ಬಾಲೆ, ಮೊನ್ನೆ ಟ್ಯೂಷನ್ ಮಾಸ್ತರನಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪಾಂಡವಪುರದ ಆರು ವರ್ಷದ ಕೂಸು, ಬೆಂಗಳೂರಿನಲ್ಲಿ ದೈಹಿಕ ಶಿಕ್ಷಕನಿಂದ ಲೈಂಗಿಕ ಕಿರುಕುಳ ಅನುಭವಿಸಿದ 53 ಶಾಲಾ ಬಾಲೆಯರು... ಒಂದೇ, ಎರಡೇ?  

ಗಟ್ಟಿ ಮನಸ್ಸು ಮಾಡಿ ಕೇವಲ ಹೆಣ್ಣು ಸಂಕುಲದ ಮೇಲೆ ನಡೆಯುತ್ತಿರುವ ಲೈಂಗಿಕ ಹಲ್ಲೆ, ದೌರ್ಜನ್ಯ, ಬಲಾತ್ಕಾರದ ಅಧ್ಯಯನ ಮಾಡುತ್ತಾ ಹೋದರೆ ಅದು ಅರ್ಧಕ್ಕಿಂತ ಹೆಚ್ಚಾಗಿ ಅಪ್ರಾಪ್ತ ಬಾಲೆಯರ ಮೇಲೆಯೇ ನಡೆದಿರುವುದನ್ನು ತಿಳಿದು ಭೀತಿಯುಂಟಾಗುತ್ತದೆ. ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಪ್ರತಿ 15 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆಯೆಂಬ, ದಾಖಲಾದ ಅತ್ಯಾಚಾರಗಳ ಅಧ್ಯಯನ ವರದಿ ಬೆಚ್ಚಿ ಬೀಳಿಸುವಷ್ಟರಲ್ಲೇ ಇನ್ನೂ ದಾಖಲಾಗದ ಪ್ರಮಾಣ ಇದರ ಎರಡು ಮೂರರಷ್ಟು ಹೆಚ್ಚಿರಬಹುದೆಂಬ ’ಕೆಂಪುಗೆರೆಯ ಎಚ್ಚರಿಕೆ’ ಜೀವ ನಡುಗಿಸುತ್ತದೆ. ಹಾಗೂ ಇಂತಹ ಬಾಲೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವಿಕೃತ ಕಾಮಿಗಳು ಹೆಚ್ಚಿನ ಸಂದರ್ಭದಲ್ಲಿ ಆ ಮಕ್ಕಳ ಸಂಬಂಧಿಕರು ಅಥವಾ ಪರಿಚಿತರೇ ಆಗಿರುತ್ತಾರೆಂಬುದು ಇನ್ನೂ ದೊಡ್ಡ ದುರಂತ. ಹಾಗಿದ್ದರೆ ನಂಬುವುದಾದರೂ ಯಾರನ್ನು? ಜೊತೆಗೆ ಅತ್ಯಾಚಾರಕ್ಕೊಳಗಾಗುವ ಅಥವಾ ದಾಖಲಾಗುತ್ತಿರುವ ಅಪ್ರಾಪ್ತ ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು ಬಡಕುಟುಂಬದವರು, ತಳಸಮುದಾಯಗಳವರು, ನಿರ್ಗತಿಕರು, ಪೋಷಕರಿಂದ ನಿರ್ಲಕ್ಷಿತರೆಂಬ ವಿಷಯ ಇನ್ನಷ್ಟು ಆತಂಕವನ್ನುಂಟುಮಾಡುವಂತದ್ದು. ಇಲ್ಲಿ ಹೆಣ್ಣುಮಕ್ಕಳಿಗೆ ನೆಮ್ಮದಿಯಾಗಿ ಬದುಕುವ ವಾತಾವರಣವಿರಲಿ, ಒಂದೇ ಒಂದು ಕ್ಷಣವಾದರೂ ತಮ್ಮ ದೇಹವನ್ನು ಮರೆತು, ನಿರಾತಂಕದಿಂದ ಇರಲು ಸಾಧ್ಯವಿದೆಯೇ? ಪ್ರತಿ ಕ್ಷಣ ಎಲ್ಲೋ ಒಂದಲ್ಲ ಒಂದು ಹೆಣ್ಣಿನ ದೌರ್ಜನ್ಯದ ಪ್ರಕರಣವನ್ನು ನೋಡುತ್ತಾ ಕೇಳುತ್ತಾ ಮೊದಲೇ ಹೆಚ್ಚಾಗಿದ್ದ ಕೌಟುಂಬಿಕ, ಸಾಮಾಜಿಕ ಕಟ್ಟುಪಾಡುಗಳ ಕಬಂಧ ಬಾಹುಗಳು, ಈಗೀಗ ಮತ್ತಷ್ಟು ಬಿಗಿಯಾಗಿ ಉಸಿರು ಕಟ್ಟಿಸುತ್ತಿವೆ.

ಅತ್ಯಾಚಾರ ಪ್ರಕರಣ ಒಂದು ದಶಕದಲ್ಲಿ ನಾಲ್ಕುಪಟ್ಟು ಏರಿಕೆ: ಅದರಲ್ಲೂ ಕಳೆದೊಂದು ದಶಕದಿಂದ ದೇಶಾದ್ಯಂತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಹಿಂದೆಂದಿಗಿಂತಾ ನಾಲ್ಕು ಪಟ್ಟು ಏರಿಕೆಯಾಗಿರುವುದನ್ನು ಅಂಕಿಅಂಶಗಳೇ ಸೂಚಿಸುತ್ತಿವೆ. ಕರ್ನಾಟಕದ್ದೇ ಉದಾಹರಣೆ ತೆಗೆದುಕೊಳ್ಳುವುದಾದರೆ... ನಮ್ಮ ರಾಜ್ಯದಲ್ಲಿಯೂ ಅತ್ಯಾಚಾರ ಪ್ರಮಾಣ ಅದರಲ್ಲೂ ಅಪ್ರಾಪ್ತರ ಮೇಲಿನ ಅತ್ಯಾಚಾರ ಮಿತಿಮೀರುತ್ತಿದೆ. ಈ ಅಂಕಿಅಂಶಗಳು ಅದಕದಕೆ ಉದಾಹರಣೆಯಾಗಿವೆ- 2018ರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ನಡೆದ 1410 ಅತ್ಯಾಚಾರ ಹಾಗೂ 651 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ನಡೆದ 1613 ಅತ್ಯಾಚಾರ ಹಾಗೂ 583 ಲೈಂಗಿಕ ದೌರ್ಜನ್ಯ ದಾಖಲಾಗಿವೆ. 2020ರಲ್ಲಿ 1574 ಅತ್ಯಾಚಾರ ಹಾಗೂ 567 ಲೈಂಗಿಕ ದೌರ್ಜನ್ಯಗಳು ದಾಖಲಾಗಿವೆ. 2021ರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ  ನಡೆದ 1761 ಅತ್ಯಾಚಾರ ಮತ್ತು 709 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದು ಭೀತಿ ಹುಟ್ಟಿಸುವಂತಿದೆ.

ನಿಜಕ್ಕೂ ಈ ದೇಶ, ಮಕ್ಕಳು ನೆಮ್ಮದಿಯಿಂದ, ಸುರಕ್ಷಿತವಾಗಿ ಬದುಕಗೊಡುವ ನಾಗರಿಕ ಸಮಾಜವನ್ನು ನಿರ್ಮಿಸುವಲ್ಲಿ ಸೋತಿಲ್ಲವೇ? ಮಕ್ಕಳ ಹಕ್ಕುಗಳಿಗಾಗಿ ತಳಹಂತದಿಂದ ಕೆಲಸ ಮಾಡುತ್ತಿರುವ ರಾಷ್ಟ್ರಮಟ್ಟದ ಕ್ರೈ ಸಂಸ್ಥೆಯು  ಇತ್ತೀಚೆಗೆ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ, ’ಭಾರತದಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಪ್ರತಿ 15 ನಿಮಿಷಕ್ಕೊಂದು ಲೈಂಗಿಕ ಹಲ್ಲೆ ನಡೆಯುತ್ತಿದೆ, ಮತ್ತು ಕಳೆದ ಹತ್ತು ವರ್ಷಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಶೇ. 600ರಷ್ಟು ಹೆಚ್ಚಾಗಿದೆ’ ಎಂಬ ಆಘಾತಕಾರಿ ಸುದ್ದಿಯನ್ನು ದಾಖಲಿಸಿದೆ. ನಿಜಕ್ಕೂ ಇದು ’ಅತ್ಯಾಚಾರ ಭಾರತ’ವೆಂಬ ಅನ್ವರ್ಥನಾಮಕ್ಕೆ ಉದಾಹರಣೆಯಾಗಿರುವ ಘೋರ ತುರ್ತು ಪರಿಸ್ಥಿತಿ! ಮಕ್ಕಳಿಗೆ ಕನಿಷ್ಠ ಮಟ್ಟದ ಸುರಕ್ಷಿತತೆಯನ್ನೂ ಒದಗಿಸಲು ಸೋಲುತ್ತಿರುವ ಈ ದಾರುಣ ಹೊತ್ತಿನಲ್ಲಿ ನಾವು ಮತ್ತೊಂದು ಮಕ್ಕಳ ದಿನಾಚರಣೆಯನ್ನು ಆಚರಿಸಲು ಸಜ್ಜುಗೊಂಡಿದ್ದೇವೆ! ಕ್ಷಮಿಸಿ ಮಕ್ಕಳೇ!

ಅಪ್ರಾಪ್ತ ಮಕ್ಕಳ ಅತ್ಯಾಚಾರ- ಸರ್ಕಾರ ಮತ್ತು ಇಲಾಖೆಗಳು ತೆಗೆದುಕೊಳ್ಳಬೇಕಿರುವ ಕ್ರಮ

ಅಪ್ರಾಪ್ತ, ಎಳೆಯ ಹೆಣ್ಣು ಜೀವಗಳ ಮೇಲೆ ಅತ್ಯಾಚಾರಗಳು ಅತ್ಯಂತ ಸಾಮಾನ್ಯವೆನಿಸುತ್ತಿರುವ ಇಂದಿನ ದಿನಗಳಲ್ಲಿ, ಪ್ರಕರಣ ಭೀಕರವಾಗಿದ್ದು, ದಾಖಲಾಗಿದ್ದು, ಮಾಧ್ಯಮಗಳ ಕೈಗೆ ಸಿಕ್ಕಿದ್ದು ಮಾತ್ರ ಸುದ್ದಿಯಾಗುತ್ತವೆ. ಅವುಗಳ ಸಂಬಂಧಿತ ಪ್ರಕರಣವನ್ನು ಮತ್ತು ಸಂತ್ರಸ್ತ ಬಾಲೆಯರನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯವಹಿಸುತ್ತಿವೆ. ಹೀಗಾಗಿ ದೌರ್ಜನ್ಯದಿಂದ ನೊಂದ ಎಳೆಯ ಬಾಲೆಯರ ಬದುಕು ಸದ್ದಿಲ್ಲದೇ ಕಮರಿ ಹೋಗುತ್ತಿವೆ. ಈ ಬಗ್ಗೆ ವಿವಿಧ ಇಲಾಖೆಗಳು ತೆಗೆದುಕೊಳ್ಳಲೇಬೇಕಿರುವ ಕ್ರಮದ ಕುರಿತು, ಈಗ್ಗೆ ಎಂಟು ವರ್ಷಗಳ ಹಿಂದೆ ರಾಜ್ಯ ಸರ್ಕಾರಕ್ಕೆ, ಮಹಿಳಾ ಮತ್ತು ಮಕ್ಕಳ ನಿರ್ದೇಶನಾಲಯಕ್ಕೆ, ಅಡ್ವೊಕೇಟ್ ಜನರಲ್ ಅವರಿಗೆ ಸಲ್ಲಿಸಿದ ಮನವಿಯು ಮತ್ತೊಮ್ಮೆ ಎಲ್ಲರ ಗಮನಕ್ಕೆ...

ಈ ಸುದ್ದಿ ಓದಿದ್ದೀರಾ?: ನವಭಾರತದ ಉದಯಕ್ಕೆ ನೆಹರು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 1. ಅತ್ಯಾಚಾರದಂತಹ ಪ್ರಕರಣದಲ್ಲಿ ಕಾನೂನುಬದ್ಧ ವೈದ್ಯಕೀಯ ಗರ್ಭಪಾತ[ಎಮ್‌ಟಿಪಿ] ಮಾಡಿಸಲು ಸಂತ್ರಸ್ತೆ ಮನವಿ ಮಾಡಿಕೊಂಡಾಗ ವೈದ್ಯಕೀಯ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಲು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗೆ ಲಿಖಿತ ಸೂಚನೆ ನೀಡಬೇಕು. ಈ ಕುರಿತು ತಕ್ಷಣವೇ ಮಾರ್ಗಸೂಚಿ ನಿಯಮ ರೂಪಿಸಬೇಕು.
 2. ಹೆಣ್ಣುಮಕ್ಕಳ ಮೇಲಾಗುವ ಯಾವುದೇ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳ ಮಾಹಿತಿ, ಯಾವ, ಯಾರ ಮೂಲಕವೇ ಲಭ್ಯವಾದರೂ ಪೊಲೀಸ್ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿ ’ಸ್ವಯಂಪ್ರೇರಿತ’ವಾಗಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಬೇಕು. ಸಂತ್ರಸ್ತೆಯ ಪರವಾಗಿ ಕುಟುಂಬದವರು ದೂರು ನೀಡಬೇಕೆಂದು, ಪ್ರಕರಣ ದಾಖಲಾದರಷ್ಟೇ ವಿಚಾರಣೆ ನಡೆಸುವುದು ಎಂಬ ಸಬೂಬು ಹೇಳುತ್ತಿರುವುದರಿಂದ ಅಸಹಾಯಕ ಮಕ್ಕಳ ಪ್ರಕರಣಗಳು ನ್ಯಾಯ ಕಾಣದೇ ಮುಚ್ಚಿ ಹೋಗುತ್ತಿವೆ. 
 3. ಮಕ್ಕಳಿಗಾಗಿ ನಡೆಯುತ್ತಿರುವ ಯಾವುದೇ ಪ್ಲೇಹೋಮ್, ಕಿಂಡರ್‌ಗಾರ್ಟನ್, ಬೇಬಿ ಸಿಟ್ಟಿಂಗ್‌ಗಳು, ಪೂರ್ವ ಪ್ರಾಥಮಿಕ ಶಾಲಾ ವ್ಯವಸ್ಥೆ, ವಸತಿಯುತ ಶಾಲೆ, ಅನಾಥಾಶ್ರಮ, ಪೇಯಿಂಗ್ ಗೆಸ್ಟ್ ವ್ಯವಸ್ಥೆಗಳನ್ನು ನೋಂದವಣಿ ಮಾಡುವ ಕೆಲಸ ತುರ್ತಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಗಬೇಕು. ಇಲ್ಲೆಲ್ಲಾ ಮಹಿಳಾ ಸಿಬ್ಬಂದಿಯೇ ಕಡ್ಡಾಯವಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ಇದರ ಮೇಲೆ ನಿಯಮಿತವಾಗಿ ನಿಗಾ ಇಡುವ, ವರ್ಷಕ್ಕೊಮ್ಮೆ ಪುನರ್ ನವೀಕರಿಸುವ ವ್ಯವಸ್ಥೆಯೂ ಆಗಬೇಕು. ನಿಗದಿತ ಅವಧಿಯಲ್ಲಿ ದಾಖಲಾಗದ್ದವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ಜಾಗಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು. ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಅನುಮಾನ ಬಂದರೆ, ತಕ್ಷಣವೇ ಪೊಲೀಸರಲ್ಲಿ ದೂರು ದಾಖಲಿಸಿ, ಕೂಲಂಕಷ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು.
 4. ಅಪ್ರಾಪ್ತ ಮಕ್ಕಳ ಯಾವುದೇ ಲೈಂಗಿಕ ದೌರ್ಜನ್ಯದ ಅಥವಾ ಇತರೆ ಪ್ರಕರಣ ಪೊಲೀಸ್ ಇಲಾಖೆಯ ಮೆಟ್ಟಿಲೇರಿದರೆ ಅದನ್ನು ವಿಶೇಷ ಮುತುವರ್ಜಿ ವಹಿಸಿ ತಕ್ಷಣವೇ ತನಿಖೆ ಪ್ರಾರಂಭಿಸಿ, ಇತ್ಯರ್ಥಗೊಳಿಸಬೇಕು.
 5. ಅತ್ಯಾಚಾರದಂತಹ ಪ್ರಕರಣಗಳ ತನಿಖೆ ಮಾಡುವಾಗ ಅನುಸರಿಸಬೇಕಾದ ಸುಧಾರಿತ ಕ್ರಮಗಳ [ಸುಪ್ರೀಂಕೋರ್ಟ್ ಆದೇಶದಂತೆ] ಮತ್ತು ನಿರ್ದಿಷ್ಟ ಮಕ್ಕಳ ಕಾನೂನುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವ ಅವಶ್ಯಕತೆಯಿದೆ. ವೈದ್ಯರು, ಪೊಲೀಸ್ ಅಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಬಂದಿ ಮತ್ತು ಇದರಡಿ ಬರುವ ಎಲ್ಲಾ ಸಮಿತಿಗಳಿಗೂ ತರಬೇತಿ ಅಗತ್ಯ. ಅದರಲ್ಲೂ ತಳಹಂತದ ಅಧಿಕಾರಿಗಳು, ಸಿಬ್ಬಂದಿಗಳಲ್ಲಿ ಹೆಚ್ಚಿನವರಿಗೆ ಈ ನಿಯಮಗಳ, ಕಾನೂನುಗಳ ಅರಿವೇ ಇಲ್ಲದೇ ಅಕ್ರಮಗಳು ಹೆಚ್ಚುತ್ತಿವೆ. ಪ್ರಕರಣ ಮುಚ್ಚಿ ಹೋಗುತ್ತಿವೆ.
 6. ಅತ್ಯಾಚಾರ ಪ್ರಕರಣಗಳಲ್ಲಿ ಪರೀಕ್ಷೆಗಾಗಿ ಈಗಲೂ ಕಾನೂನುಬಾಹಿರವಾದ ಕನ್ಯತ್ವ ಪರೀಕ್ಷೆ (ಟೂ ಫಿಂಗರ್ ಟೆಸ್ಟ್) ಎಗ್ಗಿಲ್ಲದೇ ನಡೆಯುತ್ತಿದೆ. ಇದರ ವಿರುದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಹೀಗೆ ಪರೀಕ್ಷಿಸುವ ವೈದ್ಯರಿಗೆ, ನರ್ಸ್‌ಗಳಿಗೆ ಶಿಕ್ಷೆಯಾಗುವಂತೆ ಪ್ರಕರಣ ದಾಖಲಿಸಬೇಕು.
 7. ಅತ್ಯಾಚಾರಿಯನ್ನು ನಿಗದಿತ ಸಮಯದೊಳಗೆ ಹಿಡಿಯಲು ಕಾಲಾವಧಿಯನ್ನು ಕಾನೂನಿನಲ್ಲಿ ಸ್ಪಷ್ಟವಾಗಿ ನಿಗದಿಗೊಳಿಸಬೇಕು. ಅಷ್ಟರೊಳಗೆ ಅತ್ಯಾಚಾರಿಯನ್ನು ಹಿಡಿಯದಿದ್ದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಾರ್ಹರನ್ನಾಗಿಸಬೇಕು. ಇದಾಗದಿದ್ದಕ್ಕೆ ಪ್ರಕರಣಗಳು ಬೇರೆ ಬೇರೆ ಆಮಿಷ, ಒತ್ತಡ, ಜಾತಿ, ರಾಜಕೀಯ, ಅಧಿಕಾರ, ಹಣದ ಪ್ರಭಾವಗಳಿಂದಾಗಿ ಮುಚ್ಚಿಹೋಗುತ್ತಿವೆ.
 8. ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ವೈದ್ಯಕೀಯ ಪರೀಕ್ಷಾ ವರದಿ[ಡಿಎನ್‌ಎ ಟೆಸ್ಟ್ ರಿಪೋರ್ಟ್] ವಿಧಿವಿಜ್ಞಾನ ಪ್ರಯೋಗಾಲಯದಿಂದ ಬರುವುದು ವರ್ಷಗಟ್ಟಲೆ ಹಿಡಿಯುತ್ತಿರುವುದರಿಂದ ಅತ್ಯಾಚಾರ ಮೊಕದ್ದಮೆಗಳ ಶೀಘ್ರ ಇತ್ಯರ್ಥವಾಗುತ್ತಿಲ್ಲ. ಹೀಗಾಗಿ ಸಾಧ್ಯವಾದಷ್ಟೂ ಪ್ರದೇಶಾವಾರು ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು. ಸಾಧ್ಯವಾದಷ್ಟೂ ತಿಂಗಳೊಳಗೆ ವರದಿ ಬರುವಂತೆ ಗಮನ ಹರಿಸಬೇಕು.
 9. ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳ ಜೊತೆಗೆ ವಿಚಾರಣೆಯ ಸಂದರ್ಭದಲ್ಲಿ ಪೊಲೀಸ್ ಮತ್ತು ವೈದ್ಯ ಸಿಬ್ಬಂದಿ ಅಸಭ್ಯವಾಗಿ, ಅನಾಗರಿಕವಾಗಿ ಮಾತನಾಡುವ ಮೂಲಕ ಮಗುವನ್ನು ಮತ್ತೊಮ್ಮೆ ಮೌಖಿಕವಾಗಿ ಅತ್ಯಾಚಾರಗೊಳಿಸುವಂತಹ ಕೆಲಸವಾಗುತ್ತಿದೆ. ಹೀಗಾಗಿ ಅವರಿಗೆ ಮಹಿಳಾ ಹಾಗೂ ಮಕ್ಕಳ ಸ್ನೇಹಿ ಸಂವೇದನಾಶೀಲತೆಯ, ಅಂತಃಕರಣದಿಂದ ವ್ಯವಹರಿಸುವಂತೆ, ನಿರಂತರ ತರಬೇತಿಯಾಗಬೇಕಿದೆ.
 10. ಯಾವುದೇ ವಸತಿಯುತ ಶಾಲೆಗಳಲ್ಲಿ, ಮುಖ್ಯವಾಗಿ ವಿವಿಧ ಬಗೆಯ ಅಂಗವೈಕಲ್ಯತೆಗೆ ತುತ್ತಾದ ಅಂಗವಿಕಲ ಮಕ್ಕಳ ವಸತಿಯುತ ಶಾಲೆಗಳಲ್ಲಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿ, ಮಹಿಳೆಯರೇ ಇರುವುದು ಸೂಕ್ತ. ಇಲ್ಲಿ ಹೆಣ್ಣುಮಕ್ಕಳು ದುರ್ಬಳಕೆಯಾಗುವ ಸಾಧ್ಯತೆ ಮತ್ತು ಪ್ರಮಾಣ ಹೆಚ್ಚಾಗಿರುತ್ತದೆ. ಈ ಕುರಿತು ಸಿಬ್ಬಂದಿಯ ಆಯ್ಕೆಯಲ್ಲಿಯೇ ಸ್ಪಷ್ಟ ಹಾಗೂ ನಿರ್ದಿಷ್ಟ ಮಾರ್ಗಸೂಚಿ ನಿಗದಿಗೊಳಿಸಬೇಕು. ಯಾವುದೇ ರೀತಿಯ ಅಂಗವಿಕಲತೆ ಹೊಂದಿರುವ ಹೆಣ್ಣುಮಕ್ಕಳನ್ನು, ಗಂಡುಮಕ್ಕಳಿಂದ ಪ್ರತ್ಯೇಕವಾದ ವಸತಿಮಂದಿರಗಳಲ್ಲಿಯೇ ಇರಿಸಬೇಕು. 
 11. ಲೈಂಗಿಕ ದೌರ್ಜನ್ಯದ ಪ್ರಕರಣದೊಂದಿಗೆ ಯಾವುದೇ ಮಗು ಪೊಲೀಸ್ ಠಾಣೆಯ ಮೆಟ್ಟಿಲೇರಿದರೂ ಅದಕ್ಕೆ ಸಂಬಂಧಿಸಿದ ಸರಿಯಾದ, ಸಮರ್ಪಕವಾದ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಿಕೊಳ್ಳುವಂತೆ ಆದೇಶ ಜಾರಿಯಾಗಬೇಕು. ಹೀಗೆ ಮಾಡದೇ, ತೀರ ಅಲ್ಪ ಪ್ರಮಾಣದ, ಸಂಬಂಧಿಸಿರದ, ಕಠಿಣವಲ್ಲದ ಸೆಕ್ಷನ್‌ಗಳನ್ನು ಹಾಕಿ ಪ್ರಕರಣದ ಗಂಭೀರತೆಯನ್ನು ತೆಳುಗೊಳಿಸುವ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕಾನೂನಿಗೆ ತಿದ್ದುಪಡಿ ಆಗಬೇಕು.
 12. ಅತ್ಯಾಚಾರದಂತಹ ಪ್ರಕರಣಗಳನ್ನು ನಿರ್ವಹಿಸುವ ಪ್ರತಿಯೊಂದು ಇಲಾಖೆ, ಸಮಿತಿ, ಆಯೋಗಗಳು ಪರಸ್ಪರ ಸಮಾಲೋಚಿಸಿ, ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕು. ಇದಾಗದಿರುವುದರಿಂದ ಪರಸ್ಪರ ಒಬ್ಬರ ಮೇಲೆ ಮತ್ತೊಬ್ಬರು ಜವಾಬ್ದಾರಿಯನ್ನು ಹೊರಿಸುವ ಕೆಲಸವಾಗುತ್ತಿದೆಯೇ ಹೊರತು ಹೆಣ್ಣುಮಕ್ಕಳಿಗೆ ನ್ಯಾಯ ಮರೀಚಿಕೆಯಾಗಿದೆ.
 13. ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಪರಿಹಾರಧನ ತಕ್ಷಣದಲ್ಲಿ ಬಿಡುಗಡೆಯಾಗದೇ ವರ್ಷಗಟ್ಟಲೆ ಹಿಡಿಯುತ್ತಿರುವುದರಿಂದ, ಒಂದೆಡೆ ಸಾಮಾಜಿಕ ಕಳಂಕ ಇನ್ನೊಂದೆಡೆ ಬದುಕಿಗೆ ಬೇರೆ ದಾರಿಯನ್ನೂ ಕಾಣದೇ ಬಡ ಸಂತ್ರಸ್ತ ಹೆಣ್ಣುಮಕ್ಕಳು ಋಣಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ತಕ್ಷಣ ಪರಿಹಾರಧನ ಪಾವತಿಯಾಗಲು ಕ್ರಮ ಕೈಗೊಳ್ಳಬೇಕು. ಮತ್ತು ಅವರ ಶಾಶ್ವತವಾದ ಮತ್ತು ಸಮರ್ಪಕವಾದ ಪುನರ್ವಸತಿ ಆಗುವವರೆಗೂ ಸಂಬಂಧಿಸಿದ ಇಲಾಖೆಗಳು ಫಾಲೋ ಅಪ್ ಕೆಲಸಗಳನ್ನು ಮಾಡುತ್ತಿರಬೇಕು.
 14. ಕಳ್ಳಸಾಗಾಣಿಕೆ ಅಥವಾ ಮಾರಾಟಕ್ಕೊಳಗಾಗಿ ತಪ್ಪಿಸಿಕೊಂಡು ಇಲ್ಲವೇ ಪೊಲೀಸರು ಹುಡುಕಿ ವಾಪಸ್ ಕರೆತಂದ ಹೆಣ್ಣುಮಗಳ ಪರ ಪ್ರಕರಣ ದಾಖಲಿಸುವಾಗ ಕಡ್ಡಾಯವಾಗಿ ಅತ್ಯಾಚಾರ ಪ್ರಕರಣವನ್ನೂ ದಾಖಲಿಸಿ ಪರಿಹಾರವನ್ನು ನೀಡುವ, ಪುನರ್ವಸತಿ ನೀಡುವ ಕೆಲಸವಾಗಬೇಕು. ಸದ್ಯ ಅತ್ಯಾಚಾರ ಪ್ರಕರಣವೆಂದು ನಮೂದಿಸುವ ಕೆಲಸವಾಗುತ್ತಿಲ್ಲ. ಹೀಗಾಗಿ ಇವರಿಗೆ ಪರಿಹಾರವೂ ದೊರಕದೇ ಗುರುತರ ಲೋಪ ಉಂಟಾಗುತ್ತಿದೆ.
 15. ಅಪ್ರಾಪ್ತ ಹೆಣ್ಣುಮಕ್ಕಳ ಅತ್ಯಾಚಾರ ಪ್ರಕರಣಗಳನ್ನು ನಿರ್ವಹಿಸಲೆಂದೇ ಶೀಘ್ರವಾಗಿ ಫಾಸ್ಟ್‌ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸಬೇಕು. ಅವು ಸದ್ಯ ಬೆರಳೆಣಿಕೆಯಷ್ಟು ಮಾತ್ರ ಕೆಲಸ ಮಾಡುತ್ತಿವೆ. ಮಕ್ಕಳಿಗೆಂದೇ ಪ್ರತ್ಯೇಕ ಸಶಕ್ತ ನ್ಯಾಯಾಲಯಗಳನ್ನು ರೂಪಿಸುವ ತುರ್ತು ದೇಶದಲ್ಲಿ ಹೆಚ್ಚಿದ್ದು, ಈ ಬಗ್ಗೆ ಇನ್ನೂ ಸಾಕಷ್ಟು ಗಮನಹರಿಸಲಾಗಿಲ್ಲದಿರುವುದು ದೊಡ್ಡ ಕೊರತೆಯಾಗಿದೆ.
ನಿಮಗೆ ಏನು ಅನ್ನಿಸ್ತು?
1 ವೋಟ್
eedina app