
ದ್ವೇಷ ಭಾವನೆ ಬಿತ್ತುವ ಸರಕನ್ನು ಪಠ್ಯದಲ್ಲಿ ಸೇರಿಸುವ ಸರ್ಕಾರಕ್ಕೆ ಮಕ್ಕಳ ವಿಚಾರ ಸ್ವಾತಂತ್ರ್ಯದ ಬಗ್ಗೆ ಕಿಂಚಿತ್ತಾದರೂ ಗೌರವ ಇದೆಯೇ? ಜಾತಿ ಮತ್ತು ಧರ್ಮ ಮುಖ್ಯವೆಂದಾಗಿಸಿ, ಮಕ್ಕಳ ಹೆಸರು, ವೇಷ, ಭಾಷೆ, ಆಹಾರ, ಗೆಳೆತನ ಇವೆಲ್ಲವೂ ನಿರ್ಬಂಧಿಸುವ ಸಾಮಾಜಿಕ ಪ್ರಕ್ರಿಯೆಗೆ ಮನ್ನಣೆ ನೀಡುವ ರಾಜಕಾರಣದಿಂದ ಮಕ್ಕಳ ಮೇಲೆ ಗೌರವ ಬೆಳೆಯುತ್ತಾ?
ಮಕ್ಕಳ ದಿನ ಬಂದಾಗ ಅವರ ಹಕ್ಕುಗಳ ಬಗ್ಗೆ ಬಾಯಿ ತುಂಬಾ ಮಾತನಾಡುವುದು ಸುಲಭ. ಆದರೆ, ಅವುಗಳ ಪೈಕಿ ಒಂದಾದರೂ ಮಕ್ಕಳಿಗೆ ದಯಪಾಲಿಸುವುದು ಅಷ್ಟೇನು ಸುಲಭವೇನಲ್ಲ. ಮಕ್ಕಳ ಹಕ್ಕುಗಳನ್ನು ಜಾಗತಿಕವಾಗಿ 1989ರಲ್ಲೇ ಘೋಷಿಸಿದ ವಿಶ್ವಸಂಸ್ಥೆಯೇ ಈ ವಿಚಾರದಲ್ಲಿ ಸುಸ್ತಾಗಿ ಕುಳಿತಿದೆ. ಎಷ್ಟೇ ಚಾಟಿ ಬೀಸಿದರೂ ಕೇಳದ ಸರ್ಕಾರಗಳಿದ್ದರೆ, ವಿಶ್ವಸಂಸ್ಥೆ ಏನು ತಾನೇ ಮಾಡಿಯಾತು! 2000ನೇ ಇಸವಿಯಲ್ಲಿ ಘೋಷಣೆಯಾದ ಸಹಸ್ರಮಾನ ಅಭಿವೃದ್ಧಿ ಗುರಿಗಳು (ಎಸ್ಡಿಜಿ- Sustainable Development Goals) ಕೂಡಾ ಕುಂಟುತ್ತಾ ಕುಂಟುತಾ ಬದಿಯಲ್ಲಿ ಮಲಗಿವೆ.
ಈ ಬೆಳವಣಿಗೆಗಳು ಏನನ್ನು ತೋರಿಸುತ್ತವೆ? ಬದ್ಧತೆ ಇಲ್ಲದ ಪಕ್ಷಗಳು ಮತ್ತು ವ್ಯಕ್ತಿಗಳು ಆಳ್ವಿಕೆಯಲ್ಲಿದ್ದರೆ ಯಾವ ಹಕ್ಕುಗಳಿಗೂ ಮನ್ನಣೆ ಸಿಗುವುದಿಲ್ಲ ಎಂದರ್ಥ. ಭಾರತ ದೇಶದ ಕಥೆಯೂ ಇದರಿಂದ ಹೊರತಲ್ಲ. 54 ಹಕ್ಕುಗಳನ್ನೊಳಗೊಂಡ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು 1992ರಲ್ಲಿ ಅಂಗೀಕರಿಸಿ ಸಹಿ ಮಾಡಿದ ಭಾರತ ಸರ್ಕಾರವು, ಮೂರು ದಶಕಗಳಲ್ಲಿ ಮಕ್ಕಳ ಹಕ್ಕುಗಳಿಗೆ ಮಾಡಿದ್ದೇನು? ಮಕ್ಕಳ ಹಕ್ಕುಗಳೆಂದರೆ ಮಾನವ ಹಕ್ಕುಗಳೆಂದು ವಿಶ್ವಸಂಸ್ಥೆಯೇ ಪ್ರತಿಪಾದಿಸಿದೆ. ಈ ಹಕ್ಕುಗಳನ್ನು ತಳಮಟ್ಟದಲ್ಲಿ ಆಗಲೇ ಜಾರಿಗೆ ತಂದಿದ್ದರೆ, ಮಾನವ ಹಕ್ಕುಗಳ ಬಗ್ಗೆ ಅದೆಷ್ಟೋ ಗೌರವವನ್ನು ನಮ್ಮ ಪೀಳಿಗೆಯಲ್ಲಿ ಈಗಾಗಲೇ ತಂದುಬಿಡಬಹುದಿತ್ತು. ಈಗಿನ ಯುವಕರಲ್ಲಿ ಇಷ್ಟು ಮದ, ಮತ್ಸರ, ಕೊಲೆ, ಸುಲಿಗೆ, ದ್ವೇಷ, ಕೋಪ, ಹಿಂಸೆ ಕಾಣಿಸುತ್ತಿರಲಿಲ್ಲ. ಹಕ್ಕುಗಳ ಬಗ್ಗೆ ಯಾರಲ್ಲಿದೆ ಗೌರವ? ಇನ್ನೊಬ್ಬ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸುವುದೇ ಮಾನವ ಹಕ್ಕು. ಭಾರತದ ಪ್ರಜೆಗಳಾಗಿ ನಮ್ಮ 70ರ ಹರೆಯದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಬಗ್ಗೆಯೇ ನಮ್ಮ ಪೀಳಿಗೆಗಳು ತಿಳಿದಿಲ್ಲ ಅಂತ ಮೇಲೆ ಮಕ್ಕಳ ಹಕ್ಕುಗಳ ಘೋಷಣೆಯ ಪಾಡೇನು?

ವಾಸ್ತವದಲ್ಲಿ, ನಮಗೆ ಮಕ್ಕಳ ಬಗ್ಗೆ ಗೌರವ ಇದೆಯೇ? ಈ ಪ್ರಶ್ನೆ ಹಲವು ಬಾರಿ ನನ್ನನ್ನು ಕಾಡಿದುಂಟು. ಮಕ್ಕಳ ಬಗ್ಗೆ ನಮಗೆ ಕಾಳಜಿ, ಪ್ರೀತಿ, ಗೌರವ ಇತ್ಯಾದಿ ಇವೆ ಎನ್ನುವುದು ಬರೀ ನಾಟಕ ಎಂದೇ ನನ್ನ ಅನುಭವ. ದಿನಾ 5ರಿಂದ 15 ಕೆಜಿ ತೂಕದ ಪಾಟಿಚೀಲ ಹೊತ್ತು ಮಕ್ಕಳನ್ನು ಶಾಲೆಗೆ ದೌಡಾಯಿಸುವ ಪೋಷಕರಿಗೆ ಮಕ್ಕಳ ಮೇಲೆ ಪ್ರೀತಿ, ಗೌರವ ಇದೆಯೇ? ಗಿಣಿಪಾಠ ಮಾಡಿಸಿ ಅಂಕಪಟ್ಟಿ ತಯಾರಿಸುವ ಶಿಕ್ಷಕ-ಶಾಲಾಡಳಿತಕ್ಕೆ ಮಕ್ಕಳ ಮೇಲೆ ನಿಜವಾಗಲೂ ಗೌರವ ಇದೆಯೇ? ದ್ವೇಷ ಭಾವನೆ ಬಿತ್ತುವ ಸರಕನ್ನು ಪಠ್ಯದಲ್ಲಿ ಸೇರಿಸುವ ಸರ್ಕಾರಕ್ಕೆ ಮಕ್ಕಳ ವಿಚಾರ ಸ್ವಾತಂತ್ರ್ಯದ ಬಗ್ಗೆ ಕಿಂಚಿತ್ತಾದರೂ ಗೌರವ ಇದೆಯೇ? ಜಾತಿ ಮತ್ತು ಧರ್ಮ ಮುಖ್ಯವೆಂದಾಗಿಸಿ, ಮಕ್ಕಳ ಹೆಸರು, ವೇಷ, ಭಾಷೆ, ಆಹಾರ, ಗೆಳೆತನ ಇವೆಲ್ಲವೂ ನಿರ್ಬಂಧಿಸುವ ಸಾಮಾಜಿಕ ಪ್ರಕ್ರಿಯೆಗೆ ಮನ್ನಣೆ ನೀಡುವ ರಾಜಕಾರಣದಿಂದ ಮಕ್ಕಳ ಮೇಲೆ ಗೌರವ ಬೆಳೆಯುತ್ತಾ?
ಇನ್ನೂ ಬಾಲ್ಯವನ್ನು ಸವಿಯಲು ವರ್ಷಗಳೇ ಬಾಕಿ ಇರುವಾಗ ಆ ಎಳೆ ಕೂಸನ್ನು ವೈವಾಹಿಕ ಜೀವನಕ್ಕೆ ತಳ್ಳುವಂತಹ ನಮ್ಮ ಸಮಾಜಕ್ಕೆ ನಿಜವಾಗಲೂ ಮಕ್ಕಳ ಮೇಲೆ ಗೌರವ ಇದೆಯೇ? ಅಕ್ಷರ ಲೋಕದಿಂದ ವಂಚಿತರಾಗಿ ದುಡಿಮೆಯ ಸಂಕೋಲೆಯಲ್ಲಿ ಸಿಲುಕಿರುವ ಮಕ್ಕಳನ್ನು ರಕ್ಷಿಸಲು ವಿಫಲವಾಗುವ ಸಮಾಜವು ನಿಜವಾಗಲೂ ಮಕ್ಕಳ ಪ್ರೇಮಿ ಎಂದು ಹೇಳಲು ಸಾಧ್ಯವೇ? ಒಂದು ಹೊತ್ತು ಹೊಟ್ಟೆ ತುಂಬಿಸಲು ರಸ್ತೆಬದಿಯಲ್ಲಿ ಭಿಕ್ಷೆ ಎತ್ತಬೇಕಾದ ಪರಿಸ್ಥಿತಿಗೆ ಅವರನ್ನು ದೂಡುವ ಸಮಾಜದಲ್ಲಿ ಮಕ್ಕಳ ಬಗ್ಗೆ ಗೌರವ ಇದೆ ಎಂದು ಸಮರ್ಥಿಸಲು ಸಾಧ್ಯವೇ? ಆಟವಾಡಿ ನಲಿಯಬೇಕಾದ ಮುದ್ದು ಮಕ್ಕಳ ಮೇಲೆ ಕಾಮದ ಕಣ್ಣು ತೆರೆಯುವ ಸಮಾಜಕ್ಕೆ ಏನನ್ನಬೇಕು?
ಹಿರಿಯರ ಲೈಂಗಿಕ ದಾಹಕ್ಕೆ ಹೆಣ್ಣು ಮಕ್ಕಳು ಬಲಿ: ಈ ಸೂಚ್ಯಂಕಗಳು ನಮ್ಮ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ. ಭಾಷಣವೇ ಸರ್ವಸ್ವ ಎಂದು ನಂಬಿರುವ ‘ಸ್ಯೂಡೋ’ ರಾಜಕಾರಣದ ಬಲಿಪಶುಗಳು ನಮ್ಮ ಮಕ್ಕಳು. ಕಳೆದ ಮುವತ್ತು ವರುಷಗಳು ಮಕ್ಕಳ ಹಕ್ಕುಗಳ ಕುರಿತ ಭಾಷಣದಲ್ಲೇ ಮುಗಿದುಹೋಯಿತು! ಆದರೆ, ಹಕ್ಕುಗಳು ನಮ್ಮ ಮಕ್ಕಳ ಪಾಲಿಗೆ ದಯಪಾಲಿಸಲೇ ಇಲ್ಲ. ಮಕ್ಕಳ ಹಕ್ಕುಗಳ ಹೆಸರಿನಲ್ಲಿ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿದೆವು- ಮಕ್ಕಳ ಹಕ್ಕುಗಳ ಆಯೋಗ, ಬಾಲಕಾರ್ಮಿಕ ಯೋಜನಾ ಸೊಸೈಟಿ, ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ಗ್ರಾಮಸಭೆ..... ಆದರೆ, ವಾಸ್ತವದಲ್ಲಿ ಬಾಲ್ಯವನ್ನು ಸವಿಯಲಾಗದೆ ಅದನ್ನು ಕಳೆದುಕೊಳ್ಳುವ ಮಕ್ಕಳ ಸಂಖ್ಯೆ ಕಳೆದ ಮೂವತ್ತು ವರ್ಷಗಳಲ್ಲಿ ಗಗನಕ್ಕೇರಿದೆ. ಬಾಲ್ಯವಿವಾಹ, ಬಾಲದುಡಿಮೆ, ಅಪೌಷ್ಟಿಕ ಬದುಕು, ಹಿರಿಯರ ಲೈಂಗಿಕದಾಹಕ್ಕೆ ಬಲಿಯಾಗುವ ಬಾಲಕಿಯರು, ಭಿಕ್ಷಾಟನೆ, ಹೊರೆಯಾದ ಪಠ್ಯ, ಕೊಮು ವಿಭಜನೆಗೆ ಗುರಿಯಾದ ಬಾಲ್ಯ.... ಇವೆಲ್ಲವೂ ಬಾಲ್ಯವನ್ನು ಕಸಿಯುವ ಸೂಚ್ಯಂಕಗಳು. ಇವೆಲ್ಲವೂ ಸುಳಿದಾಡುವ ಸಮಾಜದೊಳಗೆ ಮಕ್ಕಳಿಗೆ ಹೇಗೆ ಗೌರವ ಸಿಗಲು ಸಾಧ್ಯ?

ಮಕ್ಕಳ ಮೇಲಿನ ಬದ್ಧತೆ ಮತ್ತು ಗೌರವ ಇಲ್ಲದ ಸರ್ಕಾರದಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ? ಬದ್ಧತೆ ಇದ್ದರೆ, ವಾರ್ಷಿಕ ಬಜೆಟಿನಲ್ಲಿ ಅದು ಪ್ರತಿಫಲಿಸಬೇಕಿತ್ತು. ಪ್ರತಿಯೊಂದು ಯೋಜನೆಯಲ್ಲೂ ಮಕ್ಕಳ ಬಗ್ಗೆ ಪ್ರತಿಪಾದನೆ ಇರುತ್ತಿತ್ತು. ’ಇಂದಿನ ಮಕ್ಕಳು ಇಂದಿನ ಪ್ರಜೆಗಳು’ ಎನ್ನುವ ಪರಿಕಲ್ಪನೆಯನ್ನು ಮುಂದಿಡುವ ಹೆಜ್ಜೆಯನ್ನು ಕಾಣಬಹುದಿತ್ತು. ಇಡೀ ಸಮಾಜದಲ್ಲಿ ಎಲ್ಲ ಸ್ಥರಗಳಲ್ಲೂ ಮಕ್ಕಳಿದ್ದಾರೆ; ಆದರೆ, ಸರ್ಕಾರ ಮಂಡಿಸುವ ಬಜೆಟಿನಲ್ಲಿ ಮಕ್ಕಳು ಮರೆಯಾಗುತ್ತಾರೆ! ಮಕ್ಕಳ ರಕ್ಷಣೆಗೆ ದೃಢ ಸಂಕಲ್ಪವಿಲ್ಲ; ದೃಢ ಹೆಜ್ಜೆಯಿಲ್ಲ. ಮಕ್ಕಳನ್ನು ಸರ್ವ ಸ್ವತಂತ್ರ ಮಾನವರಾಗಿ, ವಿಚಾರವಂತರಾಗಿ, ಕರುಣಾಮೂರ್ತಿಗಳಾಗಿ, ಮಾನವ ಹಕ್ಕುಗಳ ಪ್ರತಿಪಾದಕರಾಗಿ ರೂಪಿಸುವ ಯೋಜನೆ ಎಲ್ಲಿದೆ? ವಿಶ್ವಸಂಸ್ಥೆಯು ಮೂರು ದಶಕಗಳ ಹಿಂದೆ ಘೋಷಿಸಿದ ಈ ಪರಿಕಲ್ಪನೆಯನ್ನು ಜಾರಿಗೆ ತರಲು ಸಾಧ್ಯವಾಗುವುದು ಯಾವಾಗ?
ಈ ಸುದ್ದಿ ಓದಿದ್ದೀರಾ?: ಪಂಡಿತ್ ಜವಾಹರಲಾಲ್ ನೆಹರು ಜನ್ಮದಿನ; ಮಕ್ಕಳ ದಿನಾಚರಣೆ ಹಿಂದಿನ ಇತಿಹಾಸವೇನು?
ಕ್ರೈಂ ಮಾಡುವವರಲ್ಲಿ ನಮ್ಮ ಮಕ್ಕಳ ಸಂಖ್ಯೆ ಗಣನೀಯವಾಗಿ ಮೇಲೇರುತ್ತಿರುವುದು ಇಂದಿನ ನಮ್ಮ ಬದ್ಧತೆಯ ಬ್ಯಾಲನ್ಸ್ ಶೀಟ್. ನಾಳಿನ ದಿನಗಳಲ್ಲಿ ಮಕ್ಕಳ ಕ್ರೈಂ ಸಿಂಡಿಕೇಟ್ ನಾಡಿನುದ್ದಕ್ಕೂ ಬೆಳೆದರೆ ಅದನ್ನು ಟೀಕೆ ಮಾಡುವ ಅಧಿಕಾರವನ್ನು ನಾವು ಕಳೆದುಕೊಂಡಿರುತ್ತೇವೆ. ಮಕ್ಕಳ ಹಕ್ಕುಗಳನ್ನು ಕಸಿದುಕೊಂಡ ಸಮಾಜವು ಅದನ್ನು ಹೇಳಲು ಅನರ್ಹ. ಮುಂದಿನ ದಿನಮಾನಗಳ ಈ ಅಪಾಯವನ್ನು ತಪ್ಪಿಸುವುದೇ ಇಂದಿನ ತುರ್ತು. ಅದನ್ನು ಮನಗಂಡು ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳೂ ಸೇರಿದಂತೆ ಎಲ್ಲರ ಸಹಭಾಗಿತ್ವದಲ್ಲಿ ಜಾರಿಗೆ ತರುವುದೇ ಈ ದಿನದ ತುರ್ತು.