ಕರ್ನಾಟಕದ ಪೌರಕಾರ್ಮಿಕರಿಗೆ ಅಭಿನಂದನೆಗಳು: ಈ ಮಹತ್ವದ ಗೆಲುವು ಗುತ್ತಿಗೆ ಕಾರ್ಮಿಕರೆಲ್ಲರನ್ನೂ ಮುನ್ನಡೆಸಲಿ

BBMP workers 1

ಈ ಸಾರಿ ಕಾಲನಿಗದಿತವಾಗಿ ನಿರ್ಣಯ ಜಾರಿಯಾಗಲು ಕೇಳಿರುವುದು ಹಾಗೂ ಸರ್ಕಾರ ಅದನ್ನು ಲಿಖಿತವಾಗಿ ಬರೆದುಕೊಡುವಂತೆ ಮಾಡಿದ್ದು ಶ್ಲಾಘನೀಯ. ಅಂದರೆ ಈ ಸರ್ಕಾರ ಇರುವ ಅವಧಿಯಲ್ಲೇ ಈ ಪ್ರಕ್ರಿಯೆ ನಡೆಯುವಂತೆ ಲಿಖಿತ ಭರವಸೆ ಪಡೆದುಕೊಂಡಿರುವುದು ವಿಶೇಷ. 3 ತಿಂಗಳೊಳಗೆ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ

ನಿನ್ನೆ ಒಂದು ಮಹತ್ವದ ಬೆಳವಣಿಗೆ ನಡೆದಿದೆ. ಜುಲೈ 1ರಿಂದ ಕರ್ನಾಟಕದ ಹಲವು ಪೌರಕಾರ್ಮಿಕ ಸಂಘಟನೆಗಳು ಒಟ್ಟಾಗಿ ನಡೆಸಿದ ಮುಷ್ಕರವು ಫಲ ನೀಡಿದೆ. ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂ ಮಾಡಿಕೊಳ್ಳುವುದಾಗಿ ಸರ್ಕಾರವು ಲಿಖಿತವಾಗಿ ಭರವಸೆ ನೀಡಿದೆ. ಈ ಸರ್ಕಾರವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತದೆಯಾ ಇಲ್ಲವಾ ಎಂಬುದಕ್ಕೆ ಕಾಲವೇ ಉತ್ತರ ನೀಡುತ್ತದಾದರೂ, ಈ ಪ್ರಮಾಣದ ಗೆಲುವನ್ನು ಈಚಿನ ವರ್ಷಗಳಲ್ಲಿ ಯಾವ ಗುತ್ತಿಗೆ ನೌಕರರೂ ಪಡೆದುಕೊಂಡಿರಲಿಲ್ಲ. ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿರುವವರನ್ನು ಖಾಯಂ ಮಾಡುವ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಲೇ ಸರ್ಕಾರಗಳು ಸಿದ್ಧರಿರಲಿಲ್ಲ. ನಿನ್ನೆ ಸರ್ಕಾರವು ಲಿಖಿತವಾಗಿ ಈ ಭರವಸೆಯನ್ನು ನೀಡಿದ ನಂತರವೇ ಮುಷ್ಕರವು ಕೊನೆಗೊಂಡಿದೆ. ಇದಕ್ಕಾಗಿ ಮುಷ್ಕರ ನಡೆಸಿದ ಪೌರಕಾರ್ಮಿಕರೂ ಮತ್ತು ಅದನ್ನು ಮುನ್ನಡೆಸಿದ ಮುಂದಾಳುಗಳೂ ಅಭಿನಂದನೆಗೆ ಅರ್ಹರು.

ಈ ಒಟ್ಟೂ ವಿದ್ಯಮಾನದ ಹಿನ್ನೆಲೆ ತಿಳಿಯದೇ ಇರುವವರಿಗೆ ಇದೇಕೆ ಅಷ್ಟು ಮಹತ್ವದ್ದು ಎಂದು ಅರ್ಥವಾಗುವುದು ಸ್ವಲ್ಪ ಕಷ್ಟವೇ. ಕಾರ್ಮಿಕರನ್ನು (ಸರ್ಕಾರೀ ವಲಯದಲ್ಲಿ ಇವರು ತಮ್ಮನ್ನು ನೌಕರರು ಎಂದು ಕರೆದುಕೊಳ್ಳುತ್ತಾರೆ) ಅವರಿಗೆ ಸಲ್ಲಬೇಕಾದ ಯಾವುದೇ ಸೌಲಭ್ಯಗಳನ್ನು ನೀಡದೇ ತೆಗೆದುಹಾಕುವ ಪದ್ಧತಿಗೆ ಕಡಿವಾಣ ಹಾಕಲೆಂದೇ 1969ರಲ್ಲಿ ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ರದ್ಧತಿ) ಕಾಯ್ದೆ ಜಾರಿಗೆ ಬಂದಿತ್ತು. ಆದರೆ ಸರ್ಕಾರೀ ವಲಯದಲ್ಲೇ ದಿನಗೂಲಿ ನೌಕರರನ್ನು ದೊಡ್ಡ ಪ್ರಮಾಣದಲ್ಲಿ ನೇಮಕ ಮಾಡುತ್ತಾ ಬರಲಾಗಿತ್ತು. 1991ರ ಹೊತ್ತಿಗೆ ನಡೆದ ದಿನಗೂಲಿ ನೌಕರರ ಮಹಾಮಂಡಳದ ಐತಿಹಾಸಿಕ ಹೋರಾಟದ ನಂತರ ಹೆಚ್ಚು ಕಡಿಮೆ 1 ಲಕ್ಷದಷ್ಟು ನೌಕರರು ಖಾಯಂ ಆಗಿದ್ದರು. ಆದರೆ, 2006ರಲ್ಲಿ ಸುಪ್ರೀಂಕೋರ್ಟು ನೀಡಿದ ಉಮಾದೇವಿ ವರ್ಸಸ್ ಕರ್ನಾಟಕ ಸರ್ಕಾರ ಮೊಕದ್ದಮೆಯ ತೀರ್ಪು ಸರ್ಕಾರೀ ವಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು ಖಾಯಂ ಮಾಡುವಂತಿಲ್ಲ ಎಂದಿತು. ಆನಂತರ ಅಂತಹ ಖಾಯಮಾತಿ ಸಾಧ್ಯವೇ ಇಲ್ಲವೆಂದು ಎಲ್ಲಾ ಸರ್ಕಾರಗಳು ತಾರಮ್ಮಯ್ಯ ಆಡಿಸಿಬಿಟ್ಟವು.

ಯಾವುದೇ ನೇಮಕಾತಿ ನಿಯಮಾವಳಿ, ರೋಸ್ಟರ್ ಇಲ್ಲದೇ ಗುತ್ತಿಗೆಯಲ್ಲಿ ನೇಮಿಸಿಕೊಳ್ಳಲಾದವರನ್ನು ಇದ್ದಕ್ಕಿದ್ದಂತೆ ಖಾಯಂ ಮಾಡಿಕೊಳ್ಳುವುದು ಸಂವಿಧಾನದ ಕಲಂ 16ಕ್ಕೆ ವಿರುದ್ಧ ಎಂದು ಕೋರ್ಟು ಹೇಳಿತ್ತು. ಈ ವಾದದಲ್ಲಿ ಹುರುಳಿದ್ದರೂ, ಗುತ್ತಿಗೆ ಪದ್ಧತಿಯನ್ನು ಈ ರೀತಿ ಮುಂದುವರೆಸುವುದೇ ಕಾನೂನುಬಾಹಿರ ಎಂಬುದನ್ನು ಕೋರ್ಟು ಗಮನಿಸಲೂ ಇಲ್ಲ; ಅದಕ್ಕೆ ಪರಿಹಾರವನ್ನೂ ಸೂಚಿಸಿರಲಿಲ್ಲ.

ಆದರೆ, ಕರ್ನಾಟಕದಲ್ಲಿ ಅದೇ ದಿನಗೂಲಿ ನೌಕರರು ಪಟ್ಟು ಬಿಡದೇ ಹೋರಾಟ ನಡೆಸಿ 2013ರಲ್ಲಿ ತಂದುಕೊಂಡ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆಯಡಿ ಒಂದಷ್ಟು ಭದ್ರತೆ ಪಡೆದುಕೊಂಡರು. ಆದರೆ ಈ ಭದ್ರತೆಯೂ ಎಲ್ಲರಿಗೆ ಅನ್ವಯವಾಗುತ್ತಿಲ್ಲ. ಹೊರಗುತ್ತಿಗೆ ಮತ್ತು ಒಳಗುತ್ತಿಗೆಯಲ್ಲಿ ಲಕ್ಷಾಂತರ ಜನ ಗುತ್ತಿಗೆ ನೌಕರರು ಒಂದು ರೀತಿಯ ಜೀತ ನಡೆಸುತ್ತಲೇ ಇದ್ದಾರೆ. ಇದು ಇಡೀ ವ್ಯವಸ್ಥೆಯ ಅತ್ಯಂತ ತಳದಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಇನ್ನೂ ದಾರುಣವಾಗಿದೆ. ಶೇ.99ರಷ್ಟು ದಲಿತ ಸಮುದಾಯದವರೇ ಇರುವ ಈ ವಲಯದಲ್ಲಿ ಕನಿಷ್ಠ ವೇತನವೂ ಜಾರಿಗೆ ಬಂದಿರಲಿಲ್ಲ.

ಜಾರಿಯಾಗದ ಐಪಿಡಿ ಸಾಲಪ್ಪನವರ ವರದಿ

70ರ ದಶಕದಲ್ಲಿ ಪೌರಕಾರ್ಮಿಕರ ಬಹುದೊಡ್ಡ ನಾಯಕ ಐಪಿಡಿ ಸಾಲಪ್ಪನವರ ಪ್ರಯತ್ನದಿಂದ ಅವರನ್ನು ಗುರುತಿಸಲು ಆರಂಭವಾಯಿತಾದರೂ ದೊಡ್ಡ ಬದಲಾವಣೆಗಳು ಬರಲಿಲ್ಲ. ನಿಜಕ್ಕೂ ಕ್ರಾಂತಿಕಾರಿ ಎನ್ನಬಹುದಾದ ‘ಐಪಿಡಿ ಸಾಲಪ್ಪನವರ ವರದಿ’ಯ ಶೇ.10ರಷ್ಟೂ ಜಾರಿಯಾಗಲಿಲ್ಲ. 2000ನೇ ಇಸವಿಯ ನಂತರ ಪೌರಕಾರ್ಮಿಕರನ್ನು ಸಂಘಟಿಸುವ, ಅವರ ಹಕ್ಕುಗಳಿಗಾಗಿ ಹೋರಾಡುವ ಪ್ರಯತ್ನಗಳು ಶುರುವಾದವು. 2011ರಿಂದ 2014ರ ನಡುವೆ ನಡೆದ ಹಲವು ಹೋರಾಟಗಳ ಪರಿಣಾಮವಾಗಿ ಕನಿಷ್ಠ ವೇತನ (ಸುಮಾರು 5,000 ರೂ.ಗಳ ಆಸುಪಾಸು)ವಷ್ಟೇ ಖಾತರಿಯಾಯಿತು. ಬ್ಯಾಂಕ್ ಖಾತೆಗೆ ವೇತನ ಪಾವತಿಯೂ ಸೇರಿದಂತೆ ಕೆಲವು ಸೌಲಭ್ಯಗಳು ಶುರುವಾದವು.

Image
AICCTU 1

ಗುತ್ತಿಗೆ ಪೌರಕಾರ್ಮಿಕರ ವಿಚಾರದಲ್ಲಿ ಇದ್ದುದರಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು ಸಿದ್ದರಾಮಯ್ಯನವರ ಸರ್ಕಾರ. ಆರಂಭದಲ್ಲಿ ಖಾಯಂ ಮಾಡುತ್ತೇವೆ ಎಂದು ಹೇಳಿದರಾದರೂ, ಅಧಿಕಾರಶಾಹಿಯು ಮುಂದಿಟ್ಟ ಕಾನೂನಿನ ತೊಡಕಿನ ನೆಪವೊಡ್ಡಿ ಆ ದಿಕ್ಕಿನಲ್ಲಿ ಮುಂದಾಗಲಿಲ್ಲ. ಆದರೆ, ಕನಿಷ್ಠ ವೇತನವನ್ನು ಹೆಚ್ಚು ಕಡಿಮೆ ಎರಡು ಪಟ್ಟು ಮಾಡಿದ್ದು ಆಗಲೇ. ಅಷ್ಟೇ ಅಲ್ಲದೇ, ಬಹುತೇಕ ಪೌರಕಾರ್ಮಿಕರಿಗೆ ಗುತ್ತಿಗೆದಾರರ ಜೀತವನ್ನು ತಪ್ಪಿಸಿ ನೇರ ಸಂಬಳ ಪಾವತಿ ಮಾಡಲು ನಿರ್ಧಾರ ಮಾಡಿದರು. ನೇರ ನೇಮಕಾತಿಯ ಮೂಲಕ ಇದೇ ಪೌರಕಾರ್ಮಿಕರನ್ನು ಖಾಯಂ ಸ್ಥಾನಕ್ಕೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದರಾದರೂ, ಅದೂ ಪೂರ್ಣಗೊಳ್ಳಲಿಲ್ಲ.

ಲಿಖಿತ ಭರವಸೆ ಪಡೆದಿರುವುದು ವಿಶೇಷ ಸಾಧನೆ

ಇದೀಗ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘವು (ಎಐಸಿಸಿಟಿಯು ಸಂಯೋಜಿತ) ಉಳಿದ ಹಲವು ಪೌರಕಾರ್ಮಿಕರ ಸಂಘಗಳನ್ನೂ ಒಗ್ಗೂಡಿಸಿಕೊಂಡು ನಡೆಸಿದ ಹೋರಾಟವು ಆ ನಿಟ್ಟಿನಲ್ಲಿ ಮಹತ್ವದ್ದನ್ನು ಸಾಧಿಸಿದೆ. ಸರ್ಕಾರವು ನೇರ ವೇತನ ಪಾವತಿಯಡಿ ಇರುವ ಎಲ್ಲಾ ಗುತ್ತಿಗೆ ಪೌರಕಾರ್ಮಿಕರನ್ನೂ ಖಾಯಂ ಮಾಡಿಕೊಳ್ಳುತ್ತೇವೆಂದು ಲಿಖಿತ ಭರವಸೆ ನೀಡಿದೆ. 3 ತಿಂಗಳೊಳಗೆ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿರುವುದು ಇನ್ನೂ ವಿಶೇಷವಾದ ಸಂಗತಿಯಾಗಿದೆ. ಏಕೆಂದರೆ ಮುಖ್ಯಮಂತ್ರಿಯವರ ಕಚೇರಿಯಲ್ಲಿ ನಡೆಯುವ ಇಂತಹ ಚರ್ಚೆಯು ಕಾನೂನು ಇಲಾಖೆಯ ಬಳಿಗೆ ಹೋಗುವಷ್ಟರಲ್ಲಿ ಜೀವ ಕಳೆದುಕೊಂಡಿರುತ್ತದೆ; ಹಾಗೆಯೇ ಆರ್ಥಿಕ ಇಲಾಖೆಯಂತೂ ಇಂಥದನ್ನು ಒಪ್ಪುವುದೇ ಇಲ್ಲ. ಅವೆಲ್ಲಾ ಮುಗಿಯುವಷ್ಟರಲ್ಲಿ ಸರ್ಕಾರವೇ ಬದಲಾಗಿರುತ್ತದೆ. ಆದರೆ, ಈ ಸಾರಿ ಕಾಲನಿಗದಿತವಾಗಿ ಆ ನಿರ್ಣಯ ಜಾರಿಯಾಗಲು ಕೇಳಿರುವುದು ಹಾಗೂ ಸರ್ಕಾರ ಅದನ್ನು ಲಿಖಿತವಾಗಿ ಬರೆದುಕೊಡುವಂತೆ ಮಾಡಿದ್ದು ಶ್ಲಾಘನೀಯ. ಅಂದರೆ ಈ ಸರ್ಕಾರ ಇರುವ ಅವಧಿಯಲ್ಲೇ ಈ ಪ್ರಕ್ರಿಯೆ ನಡೆಯುವಂತೆ ಲಿಖಿತ ಭರವಸೆ ಪಡೆದುಕೊಂಡಿರುವುದು ವಿಶೇಷ ಸಾಧನೆಯಾಗಿದೆ.

ಇದನ್ನು ಓದಿದ್ದೀರಾ? ಮುಷ್ಕರದ ನಂತರ ಎಂದಿನಂತೆ ಕೆಲಸಕ್ಕೆ ಮರಳಿದ ಪೌರಕಾರ್ಮಿಕರು

2006ರ ಸುಪ್ರೀಂಕೋರ್ಟು ತೀರ್ಪು ಏನೇ ಇದ್ದರೂ, ಆ ನಂತರ ಅದಕ್ಕಿಂತ ಭಿನ್ನವಾದ ತೀರ್ಪುಗಳೂ ಬಂದಿವೆ; ಕರ್ನಾಟಕದ ದಿನಗೂಲಿ ನೌಕರರಿಗೆ ಉದ್ಯೋಗ ಭದ್ರತೆ ನೀಡಿದ ಉದಾಹರಣೆ ನಮ್ಮ ಕಣ್ಣ ಮುಂದೇ ಇದೆ. ವಿವಿಧ ರಾಜ್ಯ ಸರ್ಕಾರಗಳೂ ಈ ನಿಟ್ಟಿನಲ್ಲಿ ತಮ್ಮದೇ ರೀತಿಯಲ್ಲಿ ದಾರಿ ಕಂಡುಕೊಂಡಿವೆ. ಈ ಸರ್ಕಾರವೂ ಸಹಾ ಮುಂದಿನ ಅಧಿವೇಶನದಲ್ಲಿ ವಿಶೇಷ ಕಾನೂನೊಂದನ್ನು ತರುತ್ತೇವೆಂಬ ಭರವಸೆ ಕೊಡಲಾಗಿದೆಯೆಂದು ಕಾರ್ಮಿಕ ಸಂಘವು ಹೇಳಿದೆ. ಇದು ಸಂತೋಷವೇ. ಹಾಗಾದಲ್ಲಿ ಪೌರಕಾರ್ಮಿಕರಿಗೆ ಮಾತ್ರವಲ್ಲದೇ, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ, ಒಳಗುತ್ತಿಗೆ, ಅತಿಥಿ, ದಿನಗೂಲಿ, ಸ್ಕೀಂ ಕೆಲಸಗಾರರೆಲ್ಲರ ಬದುಕಿನಲ್ಲಿ ದೊಡ್ಡ ಬದಲಾವಣೆ ತರುತ್ತದೆ.

ಮುಂದಿನ ಮೂರು ತಿಂಗಳಲ್ಲಿ ಸರ್ಕಾರದ ಕ್ರಮಗಳು ಅಂತಹ ಬದಲಾವಣೆಗೆ ದಾರಿ ಮಾಡಿಕೊಡಲಿ, ಗುತ್ತಿಗೆದಾರ ಮಾಫಿಯಾ ಎಲ್ಲಾ ಇಲಾಖೆಗಳಲ್ಲೂ ಇಲ್ಲವಾಗಲಿ.

ನಿಮಗೆ ಏನು ಅನ್ನಿಸ್ತು?
6 ವೋಟ್