ಚಿಲುಮೆ ಹಗರಣ ಬಯಲಿಗೆಳೆದ ‘ಪ್ರತಿಧ್ವನಿ’ ಮತ್ತು ‘ನ್ಯೂಸ್ ಮಿನಿಟ್’ಗೆ ಅಭಿನಂದನೆ!

ರಾಜಧಾನಿ ಬೆಂಗಳೂರಿನಲ್ಲಿ ನೂರಾರು ಸುದ್ದಿ ಚಾನೆಲ್‌ಗಳು, ವೆಬ್‌ಸೈಟ್‌ಗಳಿವೆ. ಇವುಗಳ ನಡುವೆ ಮತದಾರರ ಮಾಹಿತಿ ಕಳವಿನ ಹಗರಣವನ್ನು ಬಯಲಿಗೆಳೆದ ಶ್ರೇಯಸ್ಸು 'ಪ್ರತಿಧ್ವನಿ' ಎಂಬ ಪುಟ್ಟ ಜಾಲತಾಣ ಮತ್ತು 'ದಿ ನ್ಯೂಸ್ ಮಿನಿಟ್' ಎಂಬ ಯೂಟ್ಯೂಬ್ ಮತ್ತು ಜಾಲತಾಣ ಡಿಜಿಟಲ್ ಸುದ್ದಿ ಸಂಸ್ಥೆಗೆ ಸಲ್ಲಬೇಕು. ಅವರಿಗೆ ಅಭಿನಂದನೆ.
PRATIDVANI AND NEWS MINUTES

ಬೆಂಗಳೂರು ನಗರದ ಕೆಲ ಪ್ರದೇಶಗಳ ಮತದಾರರ ಮಾಹಿತಿಗಳನ್ನು 'ಚಿಲುಮೆ' ಎಂಬ ಸಂಸ್ಥೆ ಸರ್ಕಾರದ ಮೂಗಿನ ಕೆಳಗೇ ಕದ್ದಿರುವುದು ನಿಗೂಢ ಹಗರಣ.

ಶಾಸಕರು ಮತ್ತು ಹಿತಾಸಕ್ತರಿಂದ ಹಣ ಪಡೆದು ಮತದಾರರ ಒಲವು ನಿಲುವುಗಳನ್ನೂ ಸಂಗ್ರಹಿಸಲಾಗಿದೆ. ಚುನಾವಣಾ ಅಕ್ರಮಗಳಿಗೆ ದುರ್ಬಳಕೆ ಮಾಡಿಕೊಳ್ಳಲೆಂದೇ ಈ ಮಾಹಿತಿಯ ಖರೀದಿ-ಮಾರಾಟ ನಡೆದಿದೆ. ಜನತಂತ್ರವನ್ನು ಅಪಹರಿಸಿ ಅಧಿಕಾರ ಗಳಿಸುವ ಬಗೆಬಗೆಯ ಹುನ್ನಾರಗಳಲ್ಲಿ ನಿರತವಾಗಿವೆ ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು.

ಕನ್ನಡ, ಇಂಗ್ಲಿಷ್ ಸೇರಿದಂತೆ ನಾನಾ ಭಾಷೆಗಳ ಹತ್ತಾರು ದೊಡ್ಡ ಪತ್ರಿಕೆಗಳು ಮತ್ತು ಹೆಚ್ಚು ಕಡಿಮೆ ಹದಿನೆಂಟು ಟೀವಿ ಸುದ್ದಿ ವಾಹಿನಿಗಳು ಹಾಗೂ ನೂರಾರು ಅಂತರ್ಜಾಲ ಸುದ್ದಿ ತಾಣಗಳನ್ನು ಹೊಂದಿರುವ ಮಹಾನಗರ ಬೆಂಗಳೂರು. ಇವುಗಳ ನಡುವೆ ಮಾಹಿತಿ ಕಳವಿನ ಹಗರಣವನ್ನು ಬಯಲಿಗೆಳೆದ ಶ್ರೇಯಸ್ಸು  ‘’ಪ್ರತಿಧ್ವನಿ" ಎಂಬ ಪುಟ್ಟ ಜಾಲತಾಣ ಮತ್ತು "ದಿ ನ್ಯೂಸ್ ಮಿನಿಟ್" ಎಂಬ ಯೂಟ್ಯೂಬ್ ಮತ್ತು ಜಾಲತಾಣ ಡಿಜಿಟಲ್ ಸುದ್ದಿ ಸಂಸ್ಥೆಯದು.

‘ಬಿಚ್ಚಿಟ್ಟದ್ದು ಜಾಹೀರಾತು, ಬಚ್ಚಿಟ್ಟದ್ದು ಸುದ್ದಿ’ ಎಂಬ ಮಾತೊಂದಿದೆ ಪತ್ರಿಕಾವೃತ್ತಿಯಲ್ಲಿ. ಜನತಂತ್ರದ ಜ್ಯೋತಿ ಹೊಳಪಾಗಿ ಬೆಳಗಬೇಕೆಂಬ ಕಳಕಳಿಯಿಂದ ಈ ಹಗರಣವನ್ನು ಜಾಲಾಡಿ ಹೊರಗೆಳೆದಿವೆ ‘ಪ್ರತಿಧ್ವನಿ’ ಮತ್ತು ‘ದಿ ನ್ಯೂಸ್ ಮಿನಿಟ್’. ಈ ಎರಡೂ ಸುದ್ದಿಸಂಸ್ಥೆಗಳಿಗೆ ಅಭಿನಂದನೆಗಳು ಸಲ್ಲಬೇಕು.

ಪ್ರಸಿದ್ಧವಲ್ಲದ, ಸಣ್ಣಪುಟ್ಟ ಸುದ್ದಿ ಸಂಸ್ಥೆಗಳು ಬಯಲಿಗೆಳೆಯುವ ನಿಜ ಹಗರಣಗಳನ್ನು ಕೂಡ ದೊಡ್ಡ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಪ್ರಧಾನಧಾರೆಯ ಮೀಡಿಯಾ ನಿರ್ಲಕ್ಷಿಸುವುದು ಹಳೆಯ ರೂಢಿ. ಅಹಮಿಕೆಯ ಇಂತಹ ಸಮರವು ಜನತಂತ್ರದ ಹಿತವನ್ನು ಸಾಧಿಸುವುದಿಲ್ಲ. ಚಿಲುಮೆ ಹಗರಣದಲ್ಲಿ ಈ ರೂಢಿ ಮುರಿದು ಬಿದ್ದಿರುವುದು ಸ್ವಾಗತಾರ್ಹ.

Image
exposing the Chilume scam!

ಅಂತರ್ಜಾಲ ಸೇವೆಯ ದರಗಳು ಅಗ್ಗವಾದಂತೆಲ್ಲ ಹೆಚ್ಚು ಹೆಚ್ಚು ಮೊಬೈಲ್ ಫೋನ್ ಕೇಂದ್ರಿತ ಆಗತೊಡಗಿದೆ ಭಾರತೀಯ ಸಮಾಜ. ಡಿಜಿಟಲ್ ಮಾಧ್ಯಮ ಅಥವಾ ಆನ್‌ಲೈನ್ ಮಾಧ್ಯಮ ಎಂದು ಕರೆಯಲಾಗುವ ಹೊಸ ಪತ್ರಿಕಾ ಮಾಧ್ಯಮವಿದು. ಮುದ್ರಣ ಕಾಗದ, ಮುದ್ರಣ ಯಂತ್ರಗಳು, ಪ್ರಸಾರ ಸಿಬ್ಬಂದಿ, ಏಜೆಂಟರು ಹಾಗೂ ವಿತರಣಾ ಸಿಬ್ಬಂದಿ ಇತ್ಯಾದಿ ಬಹುದೊಡ್ಡ ಖರ್ಚು ವೆಚ್ಚದ ವ್ಯವಸ್ಥೆಯನ್ನು ದಾಟಿ ನೇರ ಓದುಗನನ್ನು ತಲುಪುವ ಮಾಧ್ಯಮ. ಆಗಿಂದಾಗಿನ ವಿದ್ಯಮಾನಗಳನ್ನು ಮುದ್ರಣ ಮತ್ತು ದೃಶ್ಯಗಳೆರಡರಲ್ಲೂ ಆಗಿಂದಾಗಲೇ ಓದುಗರಿಗೆ ಕಟ್ಟಿಕೊಡುವ ವಿಶಿಷ್ಟ ಮಾಧ್ಯಮ.

ಮಾಧ್ಯಮ ಕ್ಷೇತ್ರವನ್ನು ಭಾರೀ ಬಂಡವಾಳದ ಕಪಿಮುಷ್ಠಿ- ಏಕಸ್ವಾಮ್ಯ- ಹಿತಾಸಕ್ತಿಗಳಿಂದ ಬಿಡಿಸಿ ಜನರನ್ನು ತಲುಪಲು ಹೊಸ ದಾರಿ ತೆರೆದದ್ದು ಡಿಜಿಟಲ್ ಮಾಧ್ಯಮ. ಮಾಧ್ಯಮಗಳ ವಿಕೇಂದ್ರೀಕರಣಕ್ಕೆ ಮತ್ತು ತಕ್ಕಮಟ್ಟಿಗೆ ಜನತಾಂತ್ರೀಕರಣಕ್ಕೆ ಕಾರಣವಾದ ಎಲೆಕ್ಟ್ರಾನಿಕ್ ಯುಗದ ಹೊಸ ವಿದ್ಯಮಾನ. ದಾಪುಗಾಲಿಟ್ಟು ಆವರಿಸಿರುವ ಈ ಮಾಧ್ಯಮ ಈಗಾಗಲೆ ಸುದ್ದಿ ಮಾಧ್ಯಮಗಳ ಜಾಹೀರಾತು ಆದಾಯದ ಮೂರನೆಯ ಒಂದರಷ್ಟನ್ನು ಆಕರ್ಷಿಸಿದೆ.

ಮುದ್ರಣ ಮತ್ತು ಟೆಲಿವಿಷನ್ ಮಾಧ್ಯಮಗಳನ್ನು ಹೊಂದಿರುವ ಭಾರೀ ಬಂಡವಾಳದ ಸಾಂಪ್ರದಾಯಿಕ ಮೀಡಿಯಾ ಕುಳಗಳು ಡಿಜಿಟಲ್ ಮಾಧ್ಯಮವನ್ನೂ ತಮ್ಮ ತೆಕ್ಕೆಗೆ ಬಾಚಿಕೊಳ್ಳತೊಡಗಿವೆ. ಈ ಆಸಕ್ತಿ ಮತ್ತು ವಿಸ್ತರಣೆಯ ಹಿಂದಿರುವ ದೊಡ್ಡ ಪ್ರೇರಣಾ ಶಕ್ತಿ  ಜಾಹೀರಾತು ಆದಾಯ. ಈಗಾಗಲೆ ಶಕ್ತಿ ಸಂಪನ್ಮೂಲ ಪ್ರಭಾವಗಳನ್ನು ಹೇರಳವಾಗಿ ಹೊಂದಿವೆ ಈ ಭಾರೀ ಬಂಡವಾಳದ ಮೀಡಿಯಾ ಸಂಸ್ಥೆಗಳು.

ಈ ಸುದ್ದಿ ಓದಿದ್ದೀರಾ? ಶೀಘ್ರದಲ್ಲಿ ಕೇಂದ್ರದಿಂದ ಡಿಜಿಟಲ್ ಮಾಧ್ಯಮ ನಿಯಂತ್ರಣಕ್ಕೆ ಹೊಸ ಕಾನೂನು: ಸಚಿವ ಅನುರಾಗ್‌ ಠಾಕೂರ್

ಆನ್‌ಲೈನ್ ಪತ್ರಿಕೋದ್ಯಮದ ಆವರಣವನ್ನು ಹಂಚಿಕೊಳ್ಳಲು ಕೈಕಾಲು ಬಡಿಯುತ್ತಿರುವ ಸಣ್ಣ ಬಂಡವಾಳ ಸಾಮರ್ಥ್ಯದ ವ್ಯಕ್ತಿಗಳು- ಸಂಸ್ಥೆಗಳಿವೆ. ಸಾರ್ವಜನಿಕರ ದೇಣಿಗೆ ಪಡೆದು ಜನನಿಷ್ಠರಾಗಿ ಜನಪರ ದನಿಗೆ ಅಭಿವ್ಯಕ್ತಿ ನೀಡುವುದು ಈ ವ್ಯಕ್ತಿಗಳು- ಸಂಸ್ಥೆಗಳ ಧ್ಯೇಯೋದ್ದೇಶ. ಇವುಗಳನ್ನು ಸಾಕಿ ಸಲುಹಬೇಕಾದದ್ದು ಜೀವಂತ ಸಮಾಜದ ನೈತಿಕ ಹೊಣೆ.
ಇಂತಹ ಡಿಜಿಟಲ್ ಮಾಧ್ಯಮಗಳಿಗೆ ಮೂಗುದಾರ ಹಾಕಿ ತನ್ನ ಮುಂದೆ ಮಂಡಿಯೂರುವಂತೆ ಪಳಗಿಸಲು ಸರ್ಕಾರ ಮುಂದಾಗಿದೆ. ‘ಸರಿಯಾದ ಸುದ್ದಿ’ಯನ್ನು ‘ಸರಿಯಾದ ಸಮಯ’ದಲ್ಲಿ ಜನರ ಮುಂದೆ ತರಬೇಕೆಂದು ಕೇಂದ್ರ ವಾರ್ತಾ ಮಂತ್ರಿ ಪತ್ರಿಕೆಗಳಿಗೆ ತಾಕೀತು ಮಾಡಿದ್ದಾರೆ. ಸರಿಯಾದ ಸುದ್ದಿ ಮತ್ತು ಸರಿಯಾದ ಸಮಯ ಏನೆಂಬುದನ್ನು ವಿಧೇಯಕದಲ್ಲಿ ವ್ಯಾಖ್ಯಾನ ಮಾಡಿ ಹೇರುವ ದಿನಗಳು ಸನಿಹದಲ್ಲೇ ಕದ ಬಡಿಯಲಿವೆ.

ನಿಮಗೆ ಏನು ಅನ್ನಿಸ್ತು?
5 ವೋಟ್
Image
av 930X180