ಪಠ್ಯಪರಿಷ್ಕರಣೆ ಸಾಂಸ್ಕೃತಿಕ ರಾಜಕೀಯದ ಒಂದು ಭಾಗ: ಎಂ.ಚಂದ್ರ ಪೂಜಾರಿ

Textbook Controversy symbolic art

ಜನರೇನು ಓದಬೇಕು, ನೋಡಬೇಕು, ಕೇಳಬೇಕು, ಎನ್ನುವುದನ್ನು ತೀರ್ಮಾನಿಸುವ ಪ್ರಕ್ರಿಯೆ ಸಾಂಸ್ಕೃತಿಕ ರಾಜಕೀಯ. ನಮ್ಮಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನರೇನು ತಿನ್ನಬೇಕು, ಪೂಜಿಸಬೇಕು, ಯಾರನ್ನು ಪ್ರೀತಿಸಬೇಕು, ಇವೆಲ್ಲವೂ ಸಾಂಸ್ಕೃತಿಕ ರಾಜಕೀಯದೊಳಗೆ ಸೇರಿಕೊಂಡಿವೆ. ಇದರ ಮುಂದುವರಿದ ಭಾಗವೇ ಪಠ್ಯಪುಸ್ತಕ ಪರಿಷ್ಕರಣೆ.

ಕರ್ನಾಟಕದ ಬಿಜೆಪಿ ಪಕ್ಷ ಮತ್ತು ಸರಕಾರ ಉತ್ತರ ಪ್ರದೇಶದ ಮಾದರಿಯಿಂದ ಪ್ರಭಾವಿತವಾದಂತೆ ಕಾಣುತ್ತದೆ. ಆ ಮಾದರಿಯ ಸ್ಪೆಷಾಲಿಟಿ ಏನೆಂದರೆ ಚುನಾವಣೆ ಗೆಲ್ಲಲು ಭ್ರಷ್ಟಾಚಾರರಹಿತ ಉತ್ತಮ ಆಡಳಿತ ಅಥವಾ ಜನರ ಜೀವನ ಮಟ್ಟ ಸುಧಾರಿಸುವ ಅಭಿವೃದ್ಧಿ ಕೆಲಸಗಳು ಅಥವಾ ಪತ್ರಿಕಾ ಸ್ವಾತಂತ್ರ್ಯ ಇವು ಯಾವುವು ಮುಖ್ಯವಲ್ಲ. ಜನರನ್ನು ಸತತವಾಗಿ ಜಾತಿ/ಧರ್ಮದ ಹೆಸರಲ್ಲಿ ಧ್ರುವೀಕರಿಸಿದರೆ ಚುನಾವಣೆ ಗೆಲ್ಲುವುದು ಸಾಧ್ಯ ಎನ್ನುವುದನ್ನು ಯುಪಿ ಮಾದರಿ ತೋರಿಸಿದೆ. ಜನರನ್ನು ಧರ್ಮದ ಹೆಸರಲ್ಲಿ ಧ್ರುವೀಕರಿಸಲು ಸಂಪನ್ಮೂಲ ವಿನಿಯೋಜಿಸುವ ಅಗತ್ಯವಿಲ್ಲ. ಕೆಲವು ಮಸೂದೆಗಳನ್ನು ಜಾರಿಗೆ ತರುವುದು ಮತ್ತು ದಿನನಿತ್ಯ ಒಂದಲ್ಲ ಒಂದು ನೆಪದಲ್ಲಿ ಅಲ್ಪಸಂಖ್ಯಾತರನ್ನು ಸಾರ್ವಜನಿಕವಾಗಿ ಶಿಕ್ಷಿಸಿದರೆ ಸಾಕು.

ಹೀಗೆ ನಮ್ಮಲ್ಲೂ ʼದಿ ಕರ್ನಾಟಕ ಪ್ರಿವೆನ್ಶನ್ ಆಫ್ ಸ್ಲೌವುಟರ್ ಅಂಡ್ ಪ್ರಿಸರ್ವೇಷನ್ ಆಫ್ ಕ್ಯಾಟ್ಲ್ ಆಕ್ಟ್‌ ʼ ನ್ನು 2020ರಲ್ಲಿ ಜಾರಿಗೆ ತರಲಾಯಿತು. ʼಕರ್ನಾಟಕ ಪ್ರೊಟೆಕ್ಷನ್ ಆಫ್ ರೈಟ್ ಟು ಫ್ರೀಡಂ ಆಫ್ ರಿಲಿಜಿಯನ್ ಬಿಲ್ 2021ʼ ನ್ನು ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿದೆ. ಕಾಯ್ದೆಯ ಹೆಸರು ʼರಿಲೀಜಿಯಸ್ ಫ್ರೀಡಂʼ ಎಂದಿದ್ದರೂ ಮತಾಂತರ ನಿಷೇಧ ಇದರ ಉದ್ದೇಶ. ದಿನನಿತ್ಯ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಮರನ್ನು ಶಿಕ್ಷಿಸಲು ಹಿಜಾಬ್, ಅಜಾನ್, ಹಲಾಲ್, ದೇವಸ್ಥಾನದ ಸುತ್ತ ಮುಸ್ಲಿಮ್ ವ್ಯಾಪಾರಿಗಳನ್ನು ನಿಷೇಧಿಸುವ ಕಾರ್ಯಕ್ರಮಗಳು ನಡೆದವು. ಇವೆಲ್ಲವೂ ಸಾಲದೆಂದು ಈಗ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವ ಕಾರ್ಯಕ್ರಮ ನಡೆದಿದೆ.

ಮೇಲಿನ ಅಭಿಪ್ರಾಯ ನೋಡಿದವರಿಗೆ ಪಠ್ಯ ಪುಸ್ತಕ ಪರಿಷ್ಕರಣೆಗೂ ಚುನಾವಣಾ ರಾಜಕೀಯಕ್ಕೂ ಸಂಬಂಧ ಇದೆಯೇ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ನೇರ ಸಂಬಂಧ ಇಲ್ಲ, ಆದರೆ ಪರೋಕ್ಷ ಸಂಬಂಧ ಇದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಾಂಸ್ಕೃತಿಕ ರಾಜಕೀಯದ ಭಾಗ. ಸಾಂಸ್ಕೃತಿಕ ರಾಜಕೀಯ ಚುನಾವಣಾ ರಾಜಕೀಯದ ಭಾಗ. ಆದುದರಿಂದ ಪಠ್ಯ ಪುಸ್ತಕದ ಪರಿಷ್ಕರಣೆ ಮತ್ತು ಚುನಾವಣಾ ರಾಜಕೀಯದ ನಡುವೆ ಪರೋಕ್ಷ ಸಂಬಂಧ ಇದೆ. ಈ ಸಂಬಂಧ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದ್ದೇನೆ.

ಸಾಂಸ್ಕೃತಿಕ ರಾಜಕೀಯದ ಉದ್ದೇಶ
ಜನರೇನು ಓದಬೇಕು, ನೋಡಬೇಕು, ಕೇಳಬೇಕು, ಎನ್ನುವುದನ್ನು ತೀರ್ಮಾನಿಸುವ ಪ್ರಕ್ರಿಯೆ ಸಾಂಸ್ಕೃತಿಕ ರಾಜಕೀಯ. ನಮ್ಮಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನರೇನು ತಿನ್ನಬೇಕು, ಪೂಜಿಸಬೇಕು, ಯಾರನ್ನು ಪ್ರೀತಿಸಬೇಕು, ಇವೆಲ್ಲವೂ ಸಾಂಸ್ಕೃತಿಕ ರಾಜಕೀಯದೊಳಗೆ ಸೇರಿಕೊಂಡಿವೆ. ಜನರನ್ನು ಬಲಾತ್ಕಾರದಿಂದ ಅಥವಾ ಹೊಡೆದು ಬಡಿದು ಹತೋಟಿಯಲ್ಲಿಟ್ಟುಕೊಳ್ಳುವ ಬದಲು ಒಪ್ಪಿಸಿ ಅಥವಾ ಮನವರಿಕೆ ಮಾಡಿ ಹತೋಟಿಯಲ್ಲಿಟ್ಟುಕೊಳ್ಳುವುದು ಸಾಂಸ್ಕೃತಿಕ ರಾಜಕೀಯದ ಉದ್ದೇಶ. ಎರಡು ರೀತಿಯಲ್ಲಿ ಈ ಒಪ್ಪಿಸುವ ಕೆಲಸ ನಡೆಯುತ್ತದೆ. ಒಂದು, ಜನರು ಈಗಾಗಲೇ ನಂಬಿರುವುದಕ್ಕಿಂತ ಭಿನ್ನವಾದ ವಿಚಾರಗಳು ಅವರ ಪ್ರಜ್ಞೆಯ ಭಾಗವಾದಂತೆ ನೋಡಿಕೊಳ್ಳುವುದು. ಎರಡನೆಯದು ಜನರು ತಮ್ಮ ಊಟ, ದೇವರುಗಳ ಬಗ್ಗೆ ಕೇಳರಿಮೆ ಬೆಳೆಸಿಕೊಳ್ಳುವಂತೆ ಮಾಡುವುದು. ಪ್ರೀತಿ, ಪ್ರೇಮ, ಮದುವೆಗಳನ್ನು ತೀರ್ಮಾನಿಸಲು ಯೋಗ್ಯರಲ್ಲ ಎನ್ನುವ ಪ್ರಜ್ಞೆ ಮೂಡಿಸುವುದು.

ಸಸ್ಯಹಾರ ಶ್ರೇಷ್ಠ,  ಮಾಂಸಹಾರ ಕನಿಷ್ಠ ಎಂದು ಬೇರೆ ಬೇರೆ ರೂಪದಲ್ಲಿ ಸಂದೇಶ ಕೊಟ್ಟು ಜನರು ತಮ್ಮ ಊಟ, ದೇವರುಗಳ ಬಗ್ಗೆ ಕೀಳರಿಮೆ ಹೊಂದುವಂತೆ ಮಾಡುವುದು. ದೇವರ ಸ್ಥಳಗಳಲ್ಲಿ, ಶಾಲೆ ಕಾಲೇಜುಗಳಲ್ಲಿ, ಪೂಜೆ ಪುನಸ್ಕಾರಗಳಲ್ಲಿ ಸಸ್ಯಹಾರ ಕೊಡುವುದು, ಊರ ಜಾತ್ರೆ ಸಂದರ್ಭದಲ್ಲಿ ಮಾಂಸಹಾರವನ್ನು ಬ್ಯಾನ್ ಮಾಡುವುದು. ದೇವರನ್ನು ಸಸ್ಯಹಾರಿ, ಮಾಂಸಹಾರಿ ದೇವರೆಂದು ವಿಂಗಡಿಸುವುದು, ಸಸ್ಯಹಾರಿ ದೇವರು ಶ್ರೇಷ್ಠ ಎಂದು ಬಿಂಬಿಸುವುದು, ಸಸ್ಯಹಾರಿ ದೇವರನ್ನು ನಂಬುವವರು ಮಾಂಸಹಾರಿ ದೇವರಿಗೆ ನಡೆದುಕೊಳ್ಳದಿರುವುದು, ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಯಿತೆಂದು ಹೇಳುವುದು ಇತ್ಯಾದಿ ಆಚರಣೆಗಳ ಮೂಲಕ ದೇವರ ಮೇಲುಕೀಳುಗಳನ್ನು ಜನರ ಪ್ರಜ್ಞೆಯ ಭಾಗ ಮಾಡುವುದು. ಇದೇ ರೀತಿ ಅಂತರ ಧರ್ಮೀಯ ಮದುವೆಗಳನ್ನು ಕಾನೂನು ಮೂಲಕ ನಿಯಂತ್ರಿಸುವುದು. ಮತಾಂತರ ವಿರೋಧಿ ಕಾನೂನು ಅಂತರ ಧರ್ಮೀಯ ಮದುವೆಯನ್ನು ಆಮೀಷದ ವ್ಯಾಪ್ತಿಗೆ ತಂದಿದೆ. ಅಂದರೆ ಬಹುಸಂಖ್ಯಾತರ ಪ್ರೀತಿಸುವ, ಮದುವೆ ಹಕ್ಕಿನ ಮೇಲೆ ಹತೋಟಿ ಸಾಧಿಸಲಾಗಿದೆ.

ಭಿನ್ನ ಸತ್ಯವನ್ನು ಪ್ರತಿಪಾದಿಸುವ ಪಠ್ಯ ಈ ಸರ್ಕಾರಕ್ಕೆ ಬೇಡ
ರಾಜಕೀಯ ಪಕ್ಷವೊಂದು ಪ್ರಚಾರ ಪಡಿಸುವ ಸತ್ಯಕ್ಕಿಂತ ಭಿನ್ನವಾದ ಸತ್ಯವನ್ನು ಪ್ರತಿಪಾದಿಸುವ ಪಠ್ಯ, ಕತೆ, ಕಾದಂಬರಿ, ಸಿನಿಮಾ ಬ್ಯಾನ್ ಮಾಡಿ ಅಥವಾ ಪರಿಷ್ಕರಿಸಿ ಅವು ಜನರ ಪ್ರಜ್ಞೆಯ ಭಾಗವಾಗದಂತೆ ನೋಡಿಕೊಳ್ಳುವುದು ಸಾಂಸ್ಕೃತಿಕ ರಾಜಕೀಯ ಮತ್ತೊಂದು ಗುರಿ. ಉದಾಹರಣೆಗೆ ರಾಜಕೀಯ ಪಕ್ಷವೊಂದು  1) ಮೊಗಲರು ಅಥವಾ ಮುಸ್ಲಿಮ್ ರಾಜರು ಬರುವ ಮುನ್ನ ನಮ್ಮಲ್ಲಿ ರಾಮರಾಜ್ಯ ಇತ್ತು. ಅಲ್ಲಿ ಎಲ್ಲರೂ ಸುಖ ನೆಮ್ಮದಿಯಿಂದ ಬದುಕುತ್ತಿದ್ದರು. ಮೊಗಲರು ಬಂದ ನಂತರ ಸರ್ವನಾಶ ಆಯಿತು. ಇವತ್ತು ಕೂಡ ಮುಸ್ಲಿಮರು ನಮ್ಮೆಲ್ಲ ಸಮಸ್ಯೆಗಳಿಗೆ ಕಾರಣವಾಗಿದ್ದಾರೆ.  2) ವೇದ ಪುರಾಣಗಳಲ್ಲಿ ಎಲ್ಲ ಸತ್ಯಗಳು ಅಡಗಿವೆ. ಅವನ್ನು ಭಕ್ತಿಯಿಂದ ನಂಬಿ ನಡೆದರೆ ಎಲ್ಲರಿಗೂ ಶ್ರೇಯಸ್ಸು.  3) ವರ್ಣಾಶ್ರಮ ಅತ್ಯುತ್ತಮ ಸಾಮಾಜಿಕ ವ್ಯವಸ್ಥೆ. ಎಲ್ಲರೂ ಅವರವರ ಯೋಗ್ಯತೆಗೆ ಅನುಸಾರ ಸ್ಥಾನಮಾನ ಪಡೆಯುತ್ತಾರೆ, ಇತ್ಯಾದಿ ವಿಚಾರಗಳನ್ನು ಜನರ ಪ್ರಜ್ಞೆಯ ಭಾಗ ಮಾಡಿ ಅಧಿಕಾರಕ್ಕೆ ಬಂದಿದ್ದಾರೆಂದು ಊಹಿಸುವ. ಈ ಪಕ್ಷದ ಸರ್ಕಾರ ಪ್ರಕಟಿಸುವ ಪಠ್ಯಪುಸ್ತಕಗಳಲ್ಲಿ ಮೇಲಿನ ವಿಚಾರಗಳಿಗೆ ವಿರುದ್ಧವಾದ ವಿಚಾರಗಳಿರುವುದು ಅದರ ಸಾಂಸ್ಕೃತಿಕ ರಾಜಕೀಯಕ್ಕೆ ವಿರುದ್ಧವಾಗುತ್ತದೆ.

ಹಿಂದಿನ ಸರ್ಕಾರ ಪ್ರಕಟಿಸಿದ ಕೆಲವು ಪಠ್ಯಗಳು ಇಂದಿನ ಪಕ್ಷ/ಸರ್ಕಾರದ ಸಾಂಸ್ಕೃತಿಕ ರಾಜಕೀಯ ಪ್ರತಿಪಾದಿಸುವ ವಿಚಾರಗಳಿಂದ ಭಿನ್ನವಾದವನ್ನು ಹೇಳುತ್ತಿವೆ. ಮೊಗಲರ ನಂತರವೇ ನಮ್ಮ ಕಷ್ಟನಷ್ಟಗಳೆಲ್ಲ ಆರಂಭವಾಯಿತೆನ್ನುವ ವಿಚಾರಕ್ಕೆ ಭಿನ್ನವಾಗಿ ಮುಸ್ಲಿಮ್ ರಾಜರು ಬರುವ ಮುನ್ನ ಹಿಂದೂ ರಾಜರುಗಳ ಕಾಲದಲ್ಲೂ ಎಲ್ಲರೂ ಸುಖ ನೆಮ್ಮದಿಯಿಂದ ಬಾಳುತ್ತಿರಲಿಲ್ಲ. ನಮ್ಮದೇ ನೆರೆ ರಾಜ್ಯ ಕೇರಳದಲ್ಲಿ ಅತೀ ಕೆಟ್ಟ ಸಾಮಾಜಿಕ ಪದ್ಧತಿ ಇತ್ತು. ಆ ಸಾಮಾಜಿಕ ಪದ್ಧತಿಯಲ್ಲಿ ಬ್ರಾಹ್ಮಣರು ಅತೀ ಹೆಚ್ಚಿನ ಸ್ಥಾನಮಾನ ಪಡೆದು ಕೆಳಗಿನ ಶ್ರೇಣಿಯಲ್ಲಿರುವವರು ಅತೀ ಹೆಚ್ಚು ಅವಮಾನ, ಅಸಮಾನತೆಗಳನ್ನು ಎದುರಿಸುತ್ತಿದ್ದರು. ಆ ಪದ್ಧತಿ ಪ್ರಕಾರ ಬ್ರಾಹ್ಮಣೇತರ ಮಹಿಳೆ ರವಿಕೆ ಧರಿಸುವುದು, ದಲಿತ, ಬುಡಕಟ್ಟು, ಹಿಂದುಳಿದ ಜಾತಿಗಳು ಬಿಳಿ ಬಟ್ಟೆ ಧರಿಸುವುದು, ಚಪ್ಪಲಿ ಧರಿಸುವುದು ನಿಷಿದ್ಧವಾಗಿತ್ತು. ಮಹಿಳೆ ತನ್ನ ಮಗುವಿಗೆ ಮೊಲೆ ಹಾಲು ಉಣಿಸಬೇಕಾದರೆ ತೆರಿಗೆ ಕೊಡಬೇಕಿತ್ತು. ಹಿಂದೂಗಳಲ್ಲೇ ಕೆಲವು ಸಮುದಾಯದ ಜನರಿಗೆ ದೇವಸ್ಥಾನಕ್ಕೆ ಪ್ರವೇಶ ಇರಲಿಲ್ಲ. ಇವೆಲ್ಲವನ್ನು ಪ್ರತಿಭಟಿಸಿ ಹಿಂದುಳಿದ ಜಾತಿಗಳು ತಮ್ಮದೇ ದೇವಸ್ಥಾನ ಕಟ್ಟಿಕೊಂಡರು ಎನ್ನುವ ಪಾಠವನ್ನು ನಾರಾಯಣಗುರು ಪಠ್ಯ ಹೇಳುತ್ತಿದೆ.

ಎಲ್ಲ ಸತ್ಯಗಳು ವೇದ, ಪುರಾಣಗಳಲ್ಲಿ ಅಡಗಿದೆ ಅವನ್ನು ಭಕ್ತಿಯಿಂದ ನಂಬಿ ನಡೆದರೆ ಉತ್ತಮ ಸಮಾಜ ಸಾಧ್ಯವ ಎನ್ನುವ ಕಲ್ಪನೆಯನ್ನು ವಿವೇಕಾನಂದರ ಕುರಿತ ಪಠ್ಯ ಅಲ್ಲಗೆಳೆಯುತ್ತದೆ. ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು. ಇದನ್ನು ಕೂಡ ವೇದಗಳು, ಬೈಬಲ್, ಕುರಾನ್‍ಗಳ ಐಕ್ಯತೆಯಿಂದ ಸಾಧಿಸಬೇಕಾಗಿದೆ. ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸ್ಲಿಮ್ ಧರ್ಮಗಳೆರಡು ಮಿಲನವಾಗಬೇಕೆಂದು ವಿವೇಕಾನಂದರ ಪಠ್ಯ ಹೇಳುತ್ತದೆ. ಇದೇ ರೀತಿ ಪೆರಿಯಾರ್ ಕುರಿತ ಪಠ್ಯ ವರ್ಣಾಶ್ರಮದ ದೋಷಗಳನ್ನು ಪಟ್ಟಿ ಮಾಡುತ್ತಿದೆ. ಬ್ರಾಹ್ಮಣ್ಯ ಅಥವಾ ವೈದಿಕ ಆಚಾರ ವಿಚಾರಗಳು ಸಮಾಜದ ತಳವರ್ಗಗಳ ಸಮಸ್ಯೆಗೆ ಕಾರಣ ಎಂದು ಬ್ರಾಹ್ಮಣೇತರ ಚಳವಳಿ ಆರಂಭಿಸಿದರು. ಆರ್ಯ, ಬ್ರಾಹ್ಮಣ ಎನ್ನುವ ಜನಾಂಗೀಯ ಶ್ರೇಷ್ಟತೆಯನ್ನು ಸಾರುವ ಆಲೋಚನೆಗಳನ್ನು ತಿಸ್ಕರಿಸಿ ದ್ರಾವಿಡ ಸಾಂಸ್ಕೃತಿಕ ಕಲ್ಪನೆಯನ್ನು ಮುಂದಕ್ಕೆ ತಂದರು. ದ್ರಾವಿಡ ಸಂಸ್ಕೃತಿಯಲ್ಲಿ ಸಂಸ್ಕೃತ ಭಾಷೆ ಬದಲು ತಮಿಳು ಭಾಷೆ ಮುಖ್ಯ, ರಾಮನ ಬದಲು ರಾವಣ ದ್ರಾವಿಡ ಸಾಂಸ್ಕೃತಿಕ ನಾಯಕರೆಂದು ಪ್ರತಿಪಾದಿಸಿದರು. ಈ ಪಠ್ಯಗಳು ರಾಜಕೀಯ ಪಕ್ಷದ ಸಾಂಸ್ಕೃತಿಕ ರಾಜಕೀಯ ಪ್ರತಿಪಾದಿಸುವ ಮೌಲ್ಯಗಳಿಂದ ಭಿನ್ನವಾದ ಮೌಲ್ಯಗಳನ್ನು ಪ್ರತಿಪಾದಿಸುವುದರಿಂದ ಅವನ್ನು ಪರಿಷ್ಕರಣೆಗೆ ಒಳಪಡಿಸಲಾಗಿದೆ.

ಇದನ್ನು ಓದಿದ್ದೀರಾ: ಪಠ್ಯಪರಿಷ್ಕರಣೆ: ಬಲಪಂಥೀಯರಲ್ಲಿ ಬೇರೆ ವಿದ್ವಾಂಸರಿಲ್ಲವೇ? ಭಾಗ 2- ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಯುಪಿ ಆಗುವ ದಿನಗಳು ದೂರವಿಲ್ಲ

ಮತ್ತೊಂದು ರೀತಿಯಲ್ಲೂ ಸಾಂಸ್ಕೃತಿಕ ರಾಜಕೀಯ ಚುನಾವಣಾ ರಾಜಕೀಯದ ಮೇಲೆ ಪ್ರಭಾವ ಬೀರುತ್ತದೆ.  ಜನರ ಊಟ, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಆದಾಯ ಇತ್ಯಾದಿಗಳ ಚರ್ಚೆಯನ್ನು ಮೂಲೆಗುಂಪು ಮಾಡಲು ಸಾಂಸ್ಕೃತಿಕ ರಾಜಕೀಯ ಪರಿಸರ ಸೃಷ್ಟಿಸುತ್ತದೆ. ಈ ಮೂಲಸೌಕರ್ಯಗಳನ್ನು ಜನರಿಗೆ ನೀಡಬೇಕಾದರೆ ಸರ್ಕಾರ ಕೋಟಿಗಟ್ಟಲೆ ಮೊತ್ತದ ಸಂಪನ್ಮೂಲ ವಿನಿಯೋಗಿಸಬೇಕು. ಆದರೆ ಮತಾಂತರ ವಿರೋಧಿ ಕಾನೂನು ಅಥವಾ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಏನೇನೂ ವಿನಿಯೋಗಿಸುವ ಅಗತ್ಯ ಇಲ್ಲ.

ಅದೇ ರೀತಿಯಲ್ಲಿ ಅಲ್ಪಸಂಖ್ಯಾತರನ್ನು ಹಿಜಾಬ್, ಹಲಾಲ್, ಅಝಾನ್ ಹೆಸರಲ್ಲಿ ಹಿಂಸಿಸಲು ಅಥವಾ ಪಠ್ಯ ಪರಿಷ್ಕರಣೆ ನಡೆಸಲು ಸರ್ಕಾರ ಹೆಚ್ಚೇನು ವಿನಿಯೋಗಿಸಬೇಕಾಗಿಲ್ಲ. ಅಷ್ಟು ಮಾತ್ರವಲ್ಲ ಇಂತಹ ಕಾರ್ಯಕ್ರಮಗಳು ಜನರನ್ನು ಪರ ವಿರೋಧ ಗುಂಪುಗಳಾಗಿ ಧ್ರುವೀಕರಿಸುತ್ತವೆ. ಶಿಕ್ಷಣ ಕೊಡಿ, ಆರೋಗ್ಯ ಕೊಡಿ, ಉದ್ಯೋಗ ಕೊಡಿ ಎಂದು ಸರ್ಕಾರವನ್ನು ಒಟ್ಟಾಗಿ ಕೇಳಬೇಕಾದ ಜನ ಪರಸ್ಪರ ಕಚ್ಚಾಡಲು ಶುರು ಮಾಡುತ್ತಾರೆ. ಈ ಕಚ್ಚಾಟ ಚುನಾವಣೆ ಸಂದರ್ಭದವರೆಗೂ ನಡೆದರೆ ಈ ಕಾರ್ಯಕ್ರಮಗಳ ಪರ ಇರುವ ಜನರು ಸರಕಾರ ನಡೆಸುವ ಪಕ್ಷವನ್ನು ಬೆಂಬಲಿಸಬಹುದು. ಇವರ ಬೆಂಬಲಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ಬೇಕಾಗಿಲ್ಲ, ಉತ್ತಮ ಅಭಿವೃದ್ದಿ ಕಾರ್ಯಕ್ರಮಗಳು ಬೇಕಾಗಿಲ್ಲ ಅಥವಾ ಪತ್ರಿಕಾ ಸ್ವಾತಂತ್ರ್ಯ ಬೇಕಾಗಿಲ್ಲ. ಇವೆಲ್ಲವೂ ನಡೆದರೆ ಕರ್ನಾಟಕ ಉತ್ತರಪ್ರದೇಶ ಆಗುವ ದಿನಗಳು ದೂರ ಇಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್