ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ| ಆರೆಸ್ಸೆಸ್‌ನಲ್ಲಿ ದಲಿತರು ಕಾಲಾಳುಗಳು (ಭಾಗ 1) -ಮಂಜುನಾಥ ದಾಸನಪುರ

RSS sangha

ಆರೆಸ್ಸೆಸ್‌ ಕುರಿತ ಪ್ರಚಾರಕ್ಕೆ ಹಳ್ಳಿಯೊಂದಕ್ಕೆ ಹೋಗಿದ್ದಾಗ ಯುವಕನೊಬ್ಬ ʼದಲಿತರನ್ನು ಮೇಲ್ಜಾತಿಯ ಮನೆಗಳಿಗೆ, ದೇವಸ್ಥಾನಕ್ಕೆ ಸೇರಿಸಿಕೊಳ್ಳುತ್ತಾರಾ, ಬಾಯಾರಿಕೆಯಾದರೆ ತಮ್ಮ ಮನೆಗಳಲ್ಲಿರುವ ಚೊಂಬಿನಿಂದ ಕುಡಿಯಲು ನೀರು ಕೊಡುತ್ತಾರಾ... ಇಲ್ವಲ್ಲ. ಹಾಗಾಗಿ ನಾವು ಹಿಂದೂಗಳಲ್ಲ, ನಾವು ದಲಿತರು ಅಂದ. ಆತನ ಮಾತನ್ನು ಕೇಳಿ ಕ್ಷಣಕಾಲ ತಬ್ಬಿಬ್ಬಾದೆ

ಅದು 2002ನೇ ಇಸವಿ. ಮೊದಲ ಪಿಯುಸಿ ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದಿತ್ತು. ನಾನು ವಾಸವಿದ್ದ ಬೇಗೂರಿನಲ್ಲಿ ಇದ್ದ ಬದ್ದ ಹೊಲ-ತೋಟಗಳು ಶೇ 90ರಷ್ಟು ಭಾಗ ಅದಾಗಲೇ ಮಾರಾಟವಾಗಿತ್ತು. ಬೇಗೂರಿನ ಸುತ್ತಮುತ್ತ ಅಕ್ಷಯನಗರ, ವಿಶ್ವಪ್ರಿಯನಗರ ಸೇರಿದಂತೆ ಹತ್ತಾರು ಬಡಾವಣೆಗಳು ತಲೆ ಎತ್ತುತ್ತಿದ್ದವು. ಹೀಗಾಗಿ ಬೇಗೂರಿನ ಹೆಚ್ಚಿನ ದಲಿತ ಸಮುದಾಯದ ಜನತೆ ಗಾರ್ಮೆಂಟ್ಸ್, ಸಾಫ್ಟ್‌ವೇರ್ ಕಂಪೆನಿಗಳಿಗೆ ಕಾರ್ ಚಾಲಕರು, ಸೇಂಟ್‌ ಜಾನ್ಸ್ ಆಸ್ಪತ್ರೆ ಸೇರಿದಂತೆ ಮಡಿವಾಳ, ಕೋರಮಂಗಲ, ಜಯನಗರದ ಭಾಗದ ಕಂಪೆನಿಗಳಿಗೆ ದಿನಕೂಲಿ ಸೇರಿದಂತೆ ವಿವಿಧ ಕೆಲಸಗಳಿಗೆ ಹೋಗುತ್ತಿದ್ದರು. ಮನೆಯಲ್ಲಿ ಮಾಡಲು ಯಾವುದೇ ಕೆಲಸವಿಲ್ಲದ ದಲಿತ ಸಮುದಾಯದ ವಿದ್ಯಾರ್ಥಿಗಳಾದ ನಾವು ರಜಾ ದಿನಗಳಲ್ಲಿ ದಿನಪೂರ್ತಿ ಕ್ರಿಕೆಟ್ ಆಡುವುದರಲ್ಲಿ, ಬಾವಿಯಲ್ಲಿ ಈಜು ಹೊಡೆಯುತ್ತಾ ಕಾಲ ಕಳೆಯುತ್ತಿದ್ದೆವು.

ಇದೇ ವೇಳೆ ಆರ್‌ಎಸ್‍ಎಸ್ ವತಿಯಿಂದ ಶಿವಾಜಿನಗರದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಸಮಾವೇಶವನ್ನು ಆಯೋಜನೆಗೊಂಡಿತ್ತು. ಇದಕ್ಕಾಗಿ ಬೇಗೂರು ಸೇರಿದಂತೆ ಸುತ್ತಮುತ್ತಲ ಊರುಗಳಿಂದ ಒಂದೆರಡು ಮೂರು ಲಾರಿಯಷ್ಟು ಜನಗಳನ್ನಾದರು ಕರೆದುಕೊಂಡು ಹೋಗಬೇಕೆಂದು ನಮ್ಮ ಭಾಗದ ಆರೆಸ್ಸೆಸ್ ಕಾರ್ಯವಾಹಕರಾಗಿದ್ದ ಗೋಪಿ ಜಿ ಎಂಬುವವರು ಹೇಳಿ, ಗೋ ಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧಕ್ಕೆ ಸಂಬಂಧಿಸಿದಂತಹ ಕರಪತ್ರವೊಂದನ್ನು ನಮಗೆ ನೀಡಿದ್ದರು. ಈ ಕರಪತ್ರದಲ್ಲಿ ಏನಿತ್ತು ಎಂಬುದನ್ನು ನಾವು ಗಂಭೀರವಾಗಿ ಓದಿರಲಿಲ್ಲ. ಆದರೆ, ಅವರು ಆ ಮೊದಲೇ ಹೇಳಿದ್ದ ಗೋ ಮಾತೆಯಲ್ಲಿ ಕೋಟ್ಯಂತರ ದೇವತೆಗಳಿವೆ. ಗೋವುಗಳು ನಮ್ಮ ದೇವತೆಗಳ ಜೀವಂತ ಪ್ರತಿರೂಪವಿದ್ದಂತೆ. ಹೀಗಾಗಿ ನಾವು ಪೂಜಿಸುವ ದೇವತೆಗಳನ್ನೆ ಕೊಲ್ಲುವುದು ಸರಿಯೇ. ಹಾಗೂ ಹಿಂದೂಗಳಿಗಂತ ಇರುವುದು ಭಾರತವೊಂದೆ. ಈಗ ದೇಶದಲ್ಲಿ ನಡೆಯುತ್ತಿರುವ ಮತಾಂತರ ಹಾಗೆಯೇ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತೇವೆ. ಹೀಗಾಗಿ ದೇಶದಲ್ಲಿ ಗೋಹತ್ಯೆ ಮತ್ತು ಮತಾಂತರವನ್ನು ಸಂಪೂರ್ಣವಾಗಿ ನಿಲ್ಲಿಸುವ ನಿಟ್ಟಿನಲ್ಲಿ ಜನಜಾಗೃತಿಯ ಅಗತ್ಯವಿದೆ ಎಂಬುದನ್ನು ಆಗಾಗ ಅವರು ನಮಗೆ ಹೇಳುತ್ತಿದ್ದರು.

ಇವರ ಮಾತನ್ನೆ ವೇದವಾಕ್ಯವೆಂದು ನಂಬಿದ್ದ ನಾನೂ ಸೇರಿದಂತೆ, ಪಾಂಡುರಂಗ, ಆನಂದ್ ಹಾಗೂ ಮಂಜೇಶ್ವರ್ ನಾಲ್ಕು ಮಂದಿಗೆ ಮೈಲಸಂದ್ರ, ಎಳೇನಹಳ್ಳಿ, ಸಕಲವಾರ, ಸಿ.ಕೆ.ಪಾಳ್ಯ, ಹುಲ್ಲಹಳ್ಳಿ, ಬೆಟ್ಟದಾಸನಪುರ, ವಿಟ್ಟಸಂದ್ರ ಗ್ರಾಮಗಳಲ್ಲಿ ಹಿಂದೂ ಸಮಾಜೋತ್ಸವದ ಕುರಿತು ಪ್ರಚಾರ ಮಾಡಲು ಸೂಚಿಸಿದ್ದರು. ನಾವು ನಾಲ್ಕು ಮಂದಿಯೂ ಸೈಕಲ್ ಏರಿ ಊರೂರು ಸುತ್ತಿ ಪ್ರಚಾರ ಮಾಡಲು ನಿರ್ಧರಿಸಿದೆವು. ಸಂಘದಲ್ಲಿದ್ದವರು ನಮ್ಮನ್ನು ಏಳು ಊರಿನ ಒಡೆಯರೆಂದು ಹೇಳಿ ತಮಾಷೆ ಮಾಡುತ್ತಿದ್ದರು. ಇದರಲ್ಲಿ ಕೊರಮ ಜಾತಿಗೆ ಸೇರಿದ ನಾನು, ಆನಂದ ವಿದ್ಯಾರ್ಥಿಗಳಾಗಿದ್ದೆವು. ಈಡಿಗ ಸಮುದಾಯದ ಪಾಂಡುರಂಗ ಕಂಪೆನಿಯೊಂದರಲ್ಲಿ ಸೆಕ್ಯುರಿಟಿಯಾಗಿದ್ದ. ಹೊಲೆಯ ಸಮುದಾಯದ ಮಂಜೇಶ್ವರ್ ಹಸುಗಳನ್ನು ಮೇಯಿಸುತ್ತಿದ್ದ. ನಾಲ್ಕು ಜನರು ಬಿಡುವು ಮಾಡಿಕೊಂಡು ವಿರಾಟ್ ಹಿಂದೂ ಸಮಾಜೋತ್ಸವ ಹಾಗೂ ಗೋ ಹತ್ಯೆ ನಿಷೇಧ, ಮತಾಂತರ ನಿಷೇಧದ ಕುರಿತು ಜನರಲ್ಲಿ ಪ್ರಚಾರ ಮಾಡಲು ಶುರು ಮಾಡಿದೆವು.

Image
ಹಿಂದೂ ಸಮಾಜೋತ್ಸವ ಮೆರವಣಿಗೆ (ಸಾಂದರ್ಭಿಕ ಚಿತ್ರ)
ಹಿಂದೂ ಸಮಾಜೋತ್ಸವ ಮೆರವಣಿಗೆ (ಸಾಂದರ್ಭಿಕ ಚಿತ್ರ)

ನಾವು ಹಿಂದೂಗಳಲ್ಲ , ದಲಿತರು

ನಾವು ಮೊದಲಿಗೆ ಮೈಲಸಂದ್ರ, ಎಳೇನಹಳ್ಳಿಯಲ್ಲಿ ಪ್ರಚಾರ ಮಾಡಿದೆವು. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿತ್ತು. ಗೋ ಹತ್ಯೆ ಹಾಗೂ ಮತಾಂತರ ನಿಷೇಧ ಕುರಿತು ಗೋಪಿ ಜಿ ಅವರು ನಮಗೆ ಹೇಳಿ ಕೊಟ್ಟಿದ್ದನ್ನೇ ಪುನರಾವರ್ತಿಸುತ್ತಿದ್ದರು. ಜನರು ನಮ್ಮ ಮಾತಿಗೆ ತಲೆ ತೂಗುತ್ತಿದ್ದರು. ಇದರಿಂದ ನಮಗೂ ಹುಮ್ಮಸ್ಸು ಹೆಚ್ಚಾಯಿತು. ಸ್ನೇಹಿತ ಮಂಜೇಶ್ವರ್ ಪ್ರತಿದಿನ ಬೆಳಗ್ಗೆ ಮನೆ ಮನೆಗಳಿಗೆ ಹೋಗಿ ಹಾಲು ಹಾಕುತ್ತಿದ್ದ. ಹೀಗಾಗಿ ಅವನತ್ರ ಯಾವಾಗಲು ಒಂದಷ್ಟು ಹಣ ಇರುತ್ತಿತ್ತು. ಮಧ್ಯಾಹ್ನ ಸಮಯದಲ್ಲಿ ಅವನೇ ಊಟ ಕೊಡಿಸುತ್ತಿದ್ದ. ಹೀಗೆ ಒಂದು ದಿನ ಬೇಗೂರಿನ ಹೋಟೆಲ್ ಒಂದರಲ್ಲಿ ಊಟ ಮಾಡಿ, ನಾಲ್ಕು ಮಂದಿಯೂ ಸೈಕಲ್ ಏರಿದೆವು. ಬಿರು ಬೇಸಿಗೆ ಒಂದು ಕಿಮೀ ತುಳಿಯುವಷ್ಟರಲ್ಲಿ ಬೆವರು ಧಾರಾಕಾರವಾಗಿ ಸುರಿಯಲಾರಂಭಿಸಿತು. ತುಳಿಯುತ್ತಾ ತುಳಿಯುತ್ತಾ ಸಕಲವಾರ ಮುಟ್ಟಿದೆವು. ಅಲ್ಲಿಯೇ ಮರದಡಿ ನಿಲ್ಲಿಸಿ, ಸಮೀಪದ ಮನೆಗಳ ಬಳಿ ನಾಲ್ಕೈದು ಮಂದಿ ಮಹಿಳೆಯರು ಕೂತಿದ್ದರು. ನಮ್ಮಲ್ಲಿದ್ದ ಕರಪತ್ರಗಳನ್ನು ಅವರಿಗೆ ಕೊಟ್ಟು, ʼಹಿಂದೂಗಳಿಗೆ ಹಸುಗಳು ದೇವರು ಇದ್ದಂಗೆ. ಅವುಗಳನ್ನು ನಿರಂತರವಾಗಿ ಸಾಯಿಸಲಾಗುತ್ತಿದೆ. ಇದು ಆಗಬಾರದು. ಹಂಗೇನೆ ಇಲ್ಲಿ ಕೆಲವು ಕ್ರಿಶ್ಚಿಯನ್ ಗುಂಪುಗಳು ಬಡ ಹಿಂದೂಗಳಿಗೆ ಹಣಕೊಟ್ಟು ಮತಾಂತರ ಮಾಡುತ್ತಿದ್ದಾರೆ. ಇದರಿಂದ ನಮ್ಮ ಹಿಂದೂಧರ್ಮ ನಾಶ ಆಗುತ್ತದೆ. ಈ ಎರಡರ ವಿರುದ್ಧ ಹಿಂದೂಗಳಾದ ನಾವು ಜಾಗೃತರಾಗಬೇಕುʼ ಎಂದು ನಮ್ಮದೇ ಭಾಷೆಯಲ್ಲಿ ಬಡಬಡಿಸಿದೆವು.

ನಾವು ಹೇಳಿದ್ದು ಆ ಮಹಿಳೆಯರಿಗೆ ಅರ್ಥವಾಯಿತೊ, ಇಲ್ವೊ ಗೊತ್ತಿಲ್ಲ. ಅವರು ನಗುತ್ತಾ ಆಯ್ತು, ಆಯ್ತು ಮನೆಯವರಿಗೆ ಕೊಡ್ತೀನಿ ಅಂತ ಹೇಳಿದರು. ನಂತರ ನಾವು ಅಲ್ಲಿಯೇ ನೀರಿನ ಟ್ಯಾಂಕ್‍ನ ಬಳಿ ನಾಲ್ಕೈದು ಮಂದಿ ಯುವಕರು ಕುಳಿತಿದ್ದರು. ನಮಗೆ ಹುಮ್ಮಸ್ಸು ಹೆಚ್ಚಾಯ್ತು. ನಮ್ಮ ತರನೇ ಇರುವ ಯುವಕರು ಕುಳಿತಿದ್ದಾರೆ. ಅವರಿಗೆ ನಮ್ಮ ವಿಷಯವನ್ನು ಮನವರಿಕೆ ಮಾಡಿ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗಬೇಕೆಂದು ನಿರ್ಧಾರ ಮಾಡಿದೆವು. ಅವರಿಗೆ ಕರ ಪತ್ರ ಕೊಟ್ಟು ಗೋ ಹತ್ಯೆ, ಮತಾಂತರ ವಿಷಯದ ಕುರಿತು ಬಡಬಡಾಯಿಸಿದೆವು. ಅವರು ಮೊದಲಿಗೆ ನಮ್ಮ ಮಾತನ್ನು ಶಾಂತವಾಗಿ ಕೇಳಿ ʼನಾವು ಹಸುವನ್ನು ತಿನ್ನುತ್ತೇವೆ. ಅದು ನಮ್ಮ ಆಹಾರʼ ಎಂದರು. ನಾನು ʼಸರ್ ನಾವು ಹಿಂದೂಗಳು ಅದನ್ನು ಪೂಜಿಸುತ್ತೇವೆ. ಅದಕ್ಕಾಗಿ ತಿನ್ನಬಾರದುʼ ಎಂದೆವು. ಅದಕ್ಕೆ ಅಲ್ಲಿದ್ದವನೊಬ್ಬ ʼನೀನು ಹಿಂದೂನ ದನ ತಿನ್ನಲ್ವ, ತಿನ್ನಬೇಡ. ನಾನು ಹಿಂದೂ ಅಲ್ಲ. ನನಗೆ ದನದ ಮಾಂಸ ಇಷ್ಟ ಅದ್ಕೆ ತಿನ್ತೀನಿʼ ಅಂದ. ಈತನ ಮಾತು ಕೇಳಿ ನನಗಂತೂ ಪರಮಾಶ್ಚರ್ಯ ಆಯ್ತು. ʼನೀವು ಹಿಂದೂಗಳಲ್ವ ಹಾಗಾದರೆ ಮುಸ್ಲಿಮಾ, ಕ್ರಿಶ್ಚಿಯನ್ನಾ ʼಅಂದೆ. ಅಲ್ಲ ಅಂದ. ಮತ್ಯಾರು ಅಂದೆ. ʼನಾವು ದಲಿತರುʼ ಅಂದ. ನನಗೆ ದಲಿತ ಎಂಬ ಶಬ್ದ ಸ್ಪಷ್ಟವಾಗಿ ಕಿವಿಗೆ ಅಪ್ಪಳಿಸುವಂತೆ ಕಿವಿಗೆ ಬಿದ್ದಿದ್ದು ಆಗಲೇ. ಎಸ್ಸಿಗಳನ್ನು ದಲಿತರೆಂದು ಕರೆಯುತ್ತಾರೆಂದು ನನಗೆ ಅಲ್ಲಿಯವರೆಗೂ ಗೊತ್ತಿರಲಿಲ್ಲ.

ಮತ್ತೊಮ್ಮೆ ನಾನು ʼದಲಿತರು ಹಿಂದೂಗಳಲ್ವಾʼ ಅಂದೆ. ಅದಕ್ಕೆ ಮತ್ತೊಬ್ಬ ಸ್ವಲ್ಪ ಕೋಪದಿಂದಲೇ, ʼದಲಿತರನ್ನು ಮೇಲ್ಜಾತಿಯ ಮನೆಗಳಿಗೆ, ದೇವಸ್ಥಾನಕ್ಕೆ ಸೇರಿಸಿಕೊಳ್ಳುತ್ತಾರಾ, ಬಾಯಾರಿಕೆಯಾದರೆ ತಮ್ಮ ಮನೆಗಳಲ್ಲಿರುವ ಚೊಂಬಿನಿಂದ ಕುಡಿಯುಲು ನೀರು ಕೊಡುತ್ತಾರಾ... ಇಲ್ವಲ್ಲ. ಹಾಗಾಗಿ ನಾವು ಹಿಂದೂಗಳಲ್ಲʼ ಅಂದ. ಆತನ ಮಾತನ್ನು ಕೇಳಿ ಕ್ಷಣಕಾಲ ತಬ್ಬಿಬ್ಬಾದೆ. ಏನು ಮಾತಾಡಬೇಕೆಂದು ಗೊತ್ತಾಗಲಿಲ್ಲ. ಪುನಃ ಏನೋ ಹೇಳಲು ಹೊರಟೆ. ನನ್ನ ಮಾತನ್ನು ಅಲ್ಲಿಗೆ ನಿಲ್ಲಿಸಿದ ಅವರು ʼನಾವು ದನ ತಿನ್ತೀವಿ, ಇಲಿ ತಿನ್ತೀವಿ, ಸಾರಾಯಿ ಕುಡಿತ್ತೀವಿ. ಅದೆಲ್ಲವನ್ನು ಕೇಳೋದಕ್ಕೆ ನೀವ್ಯಾರು. ನೀವು ಇದನ್ನು ಬೇರೆ ಊರಿನಲ್ಲಿ ಪ್ರಚಾರ ಮಾಡಿಕೊಳ್ಳಿ, ಇಲ್ಲಿ ಮಾಡಕೂಡದುʼ ಎಂದು ಕಟುವಾಗಿ ಹೇಳಿದರು. ನಾವು ಅವರ ಮಾತಿಗೆ ಏನು ಹೇಳುವುದೆಂದು ತಿಳಿಯದೆ ವಾಪಾಸ್ ಆದೆವು.

ಆರೆಸ್ಸೆಸ್‍ನ್ನು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಬಿಟ್ರೆ ಮತ್ಯಾರೂ ವಿರೋಧಿಸುವುದಿಲ್ಲ. ಎಲ್ಲರು ನಮ್ಮ ನಿಸ್ವಾರ್ಥ ಕೆಲಸ ನೋಡಿ ಖುಷಿ ಪಡ್ತಾರೆ. ಬೆನ್ನು ತಟ್ಟುತ್ತಾರೆಂದೇ ಭಾವಿಸಿದ್ದೆವು. ಆದರೆ, ಈ ರೀತಿಯ ಪ್ರತಿರೋಧ ಬರುತ್ತದೆಯೆಂದು ಅಂದುಕೊಂಡಿರಲಿಲ್ಲ. ದಲಿತರಾದ್ರು ನಾವೆಲ್ಲಾ ಹಿಂದೂಗಳೇ ಅಲ್ವ. ಹಿಂದಿನ ಕಾಲದಲ್ಲಿ ಆಹಾರ ಸಿಗುತ್ತಿರಲಿಲ್ಲ. ಹೀಗಾಗಿ ದನದ ಮಾಂಸ ತಿನ್ನುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ವಲ್ಲ ಅಂದ ಆನಂದ. ನಮ್ಮಲ್ಲಿಯೂ ಮೊದಲು ದನದ ಮಾಂಸ ತಿನ್ನುತ್ತಿದ್ದರು. ಈಗ ತಿನ್ನುವುದಿಲ್ಲವೆಂದ ಮಂಜೇಶ್ವರ್. ಹೀಗಾಗಿ ಮುಂದಿನ ಭಾನುವಾರ ಗೋಪಿ ಜೀ ಅವರನ್ನು ಕರೆದುಕೊಂಡು ಬಂದು ಇವರಿಗೆ ಹಿಂದೂ ಧರ್ಮ, ಆರ್‌ಎಸ್‍ಎಸ್ ಕುರಿತು ಮನವರಿಕೆ ಮಾಡಿಸಬೇಕೆಂದು ನಿರ್ಧರಿಸಿದೆವು.

ದಲಿತರ ಮೇಲಿನ ಹಲ್ಲೆ, ಕೊಲೆಗಳ ಬಗ್ಗೆ ಮೌನ

ಮುಂದಿನ ಭಾನುವಾರ ಬಹಳ ಲವಲವಿಕೆಯಿಂದ ಗೋಪಿ ಜೀ, ಇನ್ನೊಬ್ಬ ಆರ್‌ಎಸ್‍ಎಸ್ ನಾಯಕರು ಸೇರಿದಂತೆ ನಾವು ನಾಲ್ಕು ಮಂದಿ ಹೋದೆವು. ನಾವು ನಾಲ್ಕು ಮಂದಿ ಅಲ್ಲಿಯೇ ಇದ್ದ ಮಹಿಳೆಯರನ್ನು ನಮ್ಮ ನಾಯಕರು ಬಂದಿದ್ದಾರೆ. ಹಿಂದೂ ಸಂಸ್ಕೃತಿಯ ಕುರಿತು ನಿಮ್ಮೊಂದಿಗೆ ಮಾತಾಡ್ತಾರೆ. ಅಲ್ಲಿರುವ ದೇವಸ್ಥಾನದ ಹತ್ರ ಬನ್ನಿ ಅಂದು ಮನವಿ ಮಾಡಿದೆವು. ಆ ಮಹಿಳೆಯರು ನಮ್ಮ ಒತ್ತಾಯಕ್ಕೆ ಕಟ್ಟುಬಿದ್ದು ಹದಿನೈದರಿಂದ ಇಪ್ಪತ್ತು ಮಹಿಳೆಯರು ಬಂದು ಕುಳಿತರು. ಗೋಪಿ ಜಿ ಅವರ ಜೊತೆಗೆ ಬಂದಿದ್ದ ಮುಖಂಡರು ತಮ್ಮ ಪರಿಚಯ ಮಾಡಿಕೊಂಡು ಮಾತು ಶುರುವಾಗುತ್ತಿದ್ದಂತೆ ಹಿಂದಿನ ದಿನ ನಮ್ಮ ಬಾಯಿ ಮುಚ್ಚಿಸಿದ್ದ ಹುಡುಗರು ದೇವಸ್ಥಾನದ ಆಚೆಯೇ ನಿಂತು ಆರ್‌ಎಸ್‍ಎಸ್ ನಾಯಕರ ಮಾತನ್ನು ನಿಲ್ಲಿಸಿ, ಇಲ್ಲಿಂದ ಹೊರಕ್ಕೆ ಹೋಗುವಂತೆ ಹೇಳಿದರು. ಇದಕ್ಕೆ ಗೋಪಿ ಜಿ ಹಾಗೂ ಆರ್‌ಎಸ್‍ಎಸ್ ನಾಯಕರು ಆ ಹುಡುಗರ ಬಳಿ ಮಾತನಾಡಲು ಶುರು ಮಾಡಿದರಷ್ಟೆ. ಆದರೆ, ಆ ಹುಡುಗರು ಜಾತಿ ಪದ್ಧತಿ, ಜಾತಿ ದೌರ್ಜನ್ಯ, ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆಗಳ ಕುರಿತು ಕೇಳುತ್ತಿದ್ದ ಪ್ರಶ್ನೆಗೆ ಆರ್‌ಎಸ್‍ಎಸ್ ನಾಯಕರಿಂದ ಯಾವುದೇ ಸಮಂಜಸವಾದ ಉತ್ತರ ಬರಲಿಲ್ಲ. ಕೊನೆಗೆ ಅವರೊಂದಿಗೆ ಮಾತುಕತೆಯನ್ನು ಅಲ್ಲಿಗೆ ಮೊಟಕುಗೊಳಿಸಿ ಬಂದ ದಾರಿಗೆ ಸುಂಕವಿಲ್ಲವೆಂದು ಭಾವಿಸಿ ಅಲ್ಲಿಂದ ವಾಪಸ್ ಆದೆವು.

ನಮಗೆ ಆ ಹಳ್ಳಿಯಲ್ಲಿ ನಡೆದ ಚರ್ಚೆಯ ಕುರಿತು ಗೋಪಿ ಜೀ ಅವರು ಏನು ಹೇಳುತ್ತಾರೆ ಎಂಬ ಕುತೂಹಲವಿತ್ತು. ಆ ಹಳ್ಳಿಯಿಂದ ಸ್ವಲ್ಪ ದೂರಕ್ಕೆ ಬರುತ್ತಿದ್ದಂತೆ ಸಕಲವಾರ ಹಾಗೂ ಸಿ.ಕೆ.ಪಾಳ್ಯದಲ್ಲಿ ಪ್ರಚಾರ ಮಾಡುವುದು ಬೇಡ. ಉಳಿದ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಸಾಕು ಎಂದೇಳುತ್ತಾ ಮೌನವಹಿಸಿದರು. ಯಾಕೆ ಗೋಪಿ ಜೀ ಮತ್ತೊಮ್ಮೆ ಆ ಹುಡುಗರ ಜತೆಗೆ ಮಾತಾಡೋಣ. ಅವರೆಲ್ಲರೂ ಹಿಂದೂಗಳೆ ಅಲ್ವ. ಅವರಿಗೆ ಆರ್‌ಎಸ್‍ಎಸ್ ಕುರಿತು ಮತ್ತೊಮ್ಮೆ ಮನವರಿಕೆ ಮಾಡಿಕೊಡೋಣ ಅಂದೆ. ಆ ಹುಡುಗರ ಮಾತನ್ನು ಕೇಳಿದರೆ ಆರ್‌ಎಸ್‍ಎಸ್ ಕುರಿತು ಅವರಿಗೆ ಎಳ್ಳಷ್ಟು ನಂಬಿಕೆ ಬರುವುದಿಲ್ಲ. ಸುಮ್ಮನೆ ಸಮಯ ವ್ಯರ್ಥ. ಅದರ ಬದಲು ಬೇರೆ ಹಳ್ಳಿಗಳಲ್ಲಿ ಪ್ರಚಾರ ಮಾಡಿದರೆ ಹಿಂದೂ ಸಮಾಜೋತ್ಸವಕ್ಕೆ ಒಂದಷ್ಟು ಹುಡುಗರಾದರೂ ಸಿಗುತ್ತಾರೆ. ಹೀಗಾಗಿ ಸಕಲವಾರ, ಸಿ.ಕೆ.ಪಾಳ್ಯದಲ್ಲಿ ಪ್ರಚಾರ ಮಾಡುವುದು ಬೇಡವೇ ಬೇಡವೆಂದು ಖಂಡತುಂಡವಾಗಿ ಹೇಳಿದರು. ನಮ್ಮ ಗೋಪಿ ಜೀ ಹೀಗೆ ಮಾತನಾಡಿದವರಲ್ಲ ಅಲ್ವ. ಇವತ್ತು ಯಾಕೀಗೆ. ಇಷ್ಟು ಉತ್ಸಾಹ ಕಳೆದುಕೊಂಡಿದ್ದಾರೆ ಎಂದೆನಿಸಿತು ನಮ್ಮೆಲ್ಲರಿಗೂ. ಅವರ ಮಾತಿಗೆ ಸಮ್ಮತಿಸಿ ನಾವು ಬಿಂಗಿಪುರಕ್ಕೆ ಪ್ರಚಾರಕ್ಕೆ ಹೋದೆವು.

ಆವತ್ತು ಸಂಜೆ ನಾನು ಹಾಗೂ ಪಾಂಡುರಂಗ ಬೆಳಗ್ಗೆ ಸಕಲವಾರದಲ್ಲಿ ನಡೆದ ಚರ್ಚೆ, ಆ ನಂತರ ಗೋಪಿ ಜೀ ಬೇಸರ ಮಾಡಿಕೊಂಡಿದ್ದೆಲ್ಲವನ್ನು ಮತ್ತೊಮ್ಮೆ ಯೋಚಿಸಿದೆವು. ನಾವು ಮತ್ತೊಮ್ಮೆ ಸಕಲವಾರಕ್ಕೆ ಹೋಗಿ ಆ ಹುಡುಗರಿಗೆ ಆರ್‌ಎಸ್‍ಎಸ್ ಕುರಿತು ನಿಧಾನವಾಗಿ ಹೇಳೋಣ. ಸಂಘದಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವುದು ಅವರಿಗೆ ಗೊತ್ತಾದರೆ ಖಂಡಿತ ನಮ್ಮ ಜೊತೆ ಕೈ ಜೋಡಿಸುತ್ತಾರೆಂದು ಭಾವಿಸಿ, ಮುಂದಿನ ದಿನ ಸಂಜೆಯೇ ಆ ಹಳ್ಳಿಗೆ ಹೋಗುವುದಾಗಿ ನಿರ್ಧರಿಸಿದೆವು.

ಇದನ್ನು ಓದಿದ್ದೀರಾ? ಪಾದ್ರಿ ಮೊಳಗಿಸಿದ ಎಚ್ಚರಿಕೆಯ ಗಂಟೆ, ಇದು ಹೆಚ್ಚೂ ಕಡಿಮೆ ನಮ್ಮದೇ ದೇಶದ ಕತೆ

ಅದರಂತೆ ಅಂದು ಸಂಜೆ ಸಕಲವಾರಕ್ಕೆ ಹೋದೆವು. ನಮ್ಮ ಅದೃಷ್ಟದಂತೆ ಆ ಹುಡುಗರು ಅಲ್ಲಿಯೇ ಕುಳಿತಿದ್ದರು. ನಾವಿಬ್ಬರು ಅವರ ಬಳಿ ಹೋದೆವು. ನಮ್ಮನ್ನು ನೋಡಿ ʼನಿಮಗೆ ಎಷ್ಟು ಹೇಳಿದರೂ ಅರ್ಥ ಆಗಲ್ವ. ಬೇಡವೆಂದರೆ ಯಾಕೆ ಪ್ರಚಾರ ಮಾಡಲು ಬರ್ತಿದ್ದೀರʼ ಅಂದರು. ʼನಾವು ಪ್ರಚಾರಕ್ಕೆ ಬಂದಿಲ್ಲ. ಆರ್‌ಎಸ್‍ಎಸ್ ಕುರಿತು ಮಾತನಾಡಲು ಬಂದಿದ್ದೇವೆʼ ಅಂದೆವು. ʼಆರ್‌ಎಸ್‍ಎಸ್ ಬಗ್ಗೆ ಎಲ್ಲವೂ ಗೊತ್ತಾ ನಿಮಗೆʼ ಎಂದು ಕೇಳಿದರು. ʼಹೂಂ ನಿಮಗೆ ಗೊತ್ತಾ.... ಅದೊಂದು ದೇಶಭಕ್ತ ಸಂಘಟನೆ. ದೇಶದ ಸನಾತನ ಸಂಸ್ಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಂಘಟನೆʼ ಎಂದೆವು.

Image
ಆರೆಸ್ಸೆಸ್‌ ಬೈಠಕ್‌ (ಸಾಂದರ್ಭಿಕ ಚಿತ್ರ)
ಆರೆಸ್ಸೆಸ್‌ ಬೈಠಕ್‌ (ಸಾಂದರ್ಭಿಕ ಚಿತ್ರ)

ಹೀಗೆ ಹೇಳುತ್ತಿದ್ದಂತೆ ಆ ಹುಡುಗರಲ್ಲಿ ಒಬ್ಬ ಜೋರಾಗಿ ಸನಾತನ ಸಂಸ್ಕೃತಿಯೆಂದರೆ ಜಾತಿ ಭೇದ ಮಾಡುವುದು, ದಲಿತರನ್ನು ಗುಲಾಮರಂತೆ ಕಾಣುವುದು ತಾನೆಯೆಂದ. ನಾವು ಖಂಡಿತವಾಗಿಯೂ ಇಲ್ಲ. ನಮ್ಮ ಸಂಘಟನೆಯ ಮೂಲ ಘೋಷಣೆಯೇ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬುದಾಗಿದೆಯೆಂದೆವು. ಆ ಹುಡುಗರಲ್ಲಿ ಒಬ್ಬಾತ ʼನಿಮಗೆ ಜಾತಿ ಇರಬೇಕೊ, ನಿರ್ಮೂಲನೆ ಆಗಬೇಕೊʼ ಎಂದು ಪ್ರಶ್ನಿಸಿದ. ನಾವು ʼಜಾತಿ ಹೋಗಬೇಕು. ಜಾತಿ ನಿರ್ಮೂಲನೆ ಆಗಿ, ಹಿಂದೂ ಎಂಬ ಹೆಸರು ಮಾತ್ರ ಇರಬೇಕೆಂಬುದೆ ನಮ್ಮ ಆಸೆʼ ಎಂದೆವು. ʼನಿಮ್ಮ ಆರ್‌ಎಸ್‍ಎಸ್ ಸಂಘಟನೆಯು ಇದನ್ನು ನಂಬುತ್ತದೆಯೇʼ ಎಂದರು. ʼಹೌದು ಅದಕ್ಕಾಗಿಯೇ ನಾವು ಆ ಸಂಘಟನೆಯಲ್ಲಿರುವುದು. ಹಿಂದೂ ಹೆಸರಿನಲ್ಲಿ ಎಲ್ಲ ಜಾತಿ ಸಮುದಾಯವನ್ನು ಒಂದು ಗೂಡಿಸುವ ಸಲುವಾಗಿʼ ಎಂದೆವು. ʼಹಾಗಾದರೆ ಆರ್‌ಎಸ್‍ಎಸ್ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹಿಸುತ್ತದೆಯೇʼ ಎಂದು ಕೇಳಿದರು. ʼಹೌದು ಅದರಲ್ಲಿ ಅನುಮಾನವೇ ಇಲ್ಲ ಎಂದೆವು. ಈ ಮಾತನ್ನು ನೀವು ಹೇಳುವುದಲ್ಲ. ಮೊನ್ನೆ ಬಂದಿದ್ದರಲ್ಲ ನಿಮ್ಮ ನಾಯಕರು ಅವರನ್ನು ಕೇಳಿ, ಅವರೇನಾದರು ಅಂತರ್ಜಾತಿ  ವಿವಾಹಗಳಿಗೆ ನಮ್ಮ ಬೆಂಬಲವಿದೆ ಎಂದರೆ ನಾಳೆಯಿಂದಲೇ ನಾವು ಆರ್‌ಎಸ್‍ಎಸ್ ಚಡ್ಡಿ ಹಾಕುತ್ತೇವೆʼ ಎಂದರು. ಇವರ ಮಾತು ಕೇಳಿ ನಮಗೆ ಮತ್ತಷ್ಟು ಹುಮ್ಮಸ್ಸು ಬಂತು. ಸರಿ ಸರ್ ನಾವು ಮುಂದಿನ ಭಾನುವಾರ ಬರುತ್ತೇವೆಂದು ಹೇಳಿ ಅಲ್ಲಿಂದ ಹೊರಟೆವು.

(ಮುಂದುವರಿಯುವುದು)

ನಿಮಗೆ ಏನು ಅನ್ನಿಸ್ತು?
13 ವೋಟ್