ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ| ದಲಿತರ ನಂಬಿಕೆ, ವಿನಯವಂತಿಕೆಯೇ ಅವರಿಗೆ ಅಸ್ತ್ರ (ಭಾಗ 2)- ಮಂಜುನಾಥ ದಾಸನಪುರ

RSS

ಗೋಪಿ ಜೀ ನಿಮಗೊಂದು ಪ್ರಶ್ನೆ ಕೇಳಬೇಕು ಎಂದೆ. ಅವರು ನನ್ನ ಮುಖ ಸ್ವಲ್ಪ ಹೊತ್ತು ದಿಟ್ಟಿಸಿ ʼಕೇಳು ಮಂಜುʼ ಅಂದರು. ʼಜೀ ನಾನು ಬ್ರಾಹ್ಮಣ ಹುಡುಗಿಯನ್ನು ಮದುವೆ ಆಗಬಹುದೇʼ ಅಂದೆ. ಅವರು ನಕ್ಕು ʼಏನ್ ಇಷ್ಟು ಬೇಗ ಮದುವೆ ಚಿಂತೆʼ ಎಂದರು. ಅದಲ್ಲ ಜೀ, ನನ್ನ ಮಾತಿನ ಅರ್ಥ. ಅಂತರ್ಜಾತಿ ವಿವಾಹಗಳನ್ನು ಆರ್‌ಎಸ್‍ಎಸ್ ಬೆಂಬಲಿಸುತ್ತದೆಯೇ ಎಂದು ಕೇಳಿದೆ...

ಆ ಹಳ್ಳಿಯಿಂದ ಹಿಂದಿರುಗಿ ಬರುವಾಗ ಈ ಹುಡುಗರು ನಮ್ಮ ದಾರಿಗೆ ಬಂದಿದ್ದಾರೆ. ಗೋಪಿ ಜೀ ಅವರನ್ನು ಅಂತರ್ಜಾತಿ ವಿವಾಹದ ಕುರಿತು ಮತ್ತೊಮ್ಮೆ ಸ್ಪಷ್ಟಪಡಿಸಿಕೊಂಡು ಮುಂದಿನ ವಾರ ಬಂದು ಇವರಿಗೂ ಆರ್‌ಎಸ್‍ಎಸ್ ಚಡ್ಡಿ ತೊಡಿಸಲೇಬೇಕೆಂದೆ. ಅದಕ್ಕೆ ಪಾಂಡುರಂಗ ಭಾನುವಾರ ಬರುವಾಗ ಒಂದೆರಡು ಚಡ್ಡಿಗಳನ್ನು ನಾವೇ ತೆಗೆದುಕೊಂಡು ಬರೋಣವೆಂದು ತಮಾಷೆ ಮಾಡಿದ. ಎಂದಿನಂತೆ ಗೋಪಿ ಜೀ ಅವರು ಶನಿವಾರ ಸಂಜೆ ಪ್ರಚಾರ ಮಾಡಲು ಬೇಗೂರಿಗೆ ಬಂದರು. ನಾನು ಅವರ ಬರುವಿಕೆಗಾಗಿಯೇ ಕಾಯುತ್ತಿದ್ದೆ. ಹೀಗೆ ಮನೆ ಮನೆಗೆ ಪ್ರಚಾರ ಮಾಡುವ ಸಂದರ್ಭದಲ್ಲಿ ನಾನು ಗೋಪಿ ಜೀ ನಿಮಗೊಂದು ಪ್ರಶ್ನೆ ಕೇಳ ಬೇಕೆಂದೆ. ಅವರು ನನ್ನ ಮುಖ ಸ್ವಲ್ಪ ಹೊತ್ತು ದಿಟ್ಟಿಸಿ ಕೇಳು ಮಂಜು ಅಂದರು. ಜೀ ನಾನು ಬ್ರಾಹ್ಮಣ ಹುಡುಗಿಯನ್ನು ಮದುವೆ ಆಗಬಹುದೆ ಅಂದೆ. ಅವರು ನಕ್ಕು ಏನ್ ಇಷ್ಟ ಬೇಗ ಮದುವೆ ಚಿಂತೆ ಎಂದರು. ಅದಲ್ಲ ಜೀ ನನ್ನ ಮಾತಿನ ಅರ್ಥ. ಅಂತರ್ಜಾತಿ ವಿವಾಹಗಳನ್ನು ಆರ್‌ಎಸ್‍ಎಸ್ ಬೆಂಬಲಿಸುತ್ತದೆಯೇ ಎಂದೆ. ಈಗ ಅವರಿಗೆ ನನ್ನ ಮಾತಿನ ಒಳಾರ್ಥ ಅರಿವಾಯಿತು. ಆಮೇಲೆ ಮಾತನಾಡೋಣವೆಂದರು.

ನಾಲ್ಕೈದು ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮಾತನಾಡಿ ಬರುವಷ್ಟರಲ್ಲಿ ಸಂಜೆ 7 ಆಗಿತ್ತು. ಅವರು ಹೊರಡಲು ಅನುವಾಗಿ ಬೈಕ್ ಮೇಲೆ ಕುಳಿತು, ʼಹಿಂದೂ ಧರ್ಮಕ್ಕೆ ಕಳಂಕವಾಗಿರುವ ಜಾತಿ-ಜಾತಿಗಳ ನಡುವಿರುವ ತಾರತಮ್ಯ, ಶೋಷಣೆ, ಅಸ್ಪೃಶ್ಯತೆ ಹೋಗಬೇಕು. ಆದರೆ, ಅನಾದಿ ಕಾಲದಿಂದಲೂ ಜಾರಿಯಲ್ಲಿರುವ ಜಾತಿ ವೈಶಿಷ್ಟ್ಯಗಳೇ ಹಿಂದೂ ಧರ್ಮದ ಬುನಾದಿʼ ಎಂಬ ದಾಟಿಯಲ್ಲಿ ಹೇಳಿದರು. ಹಾಗೂ ರೈತರಿಗೆ, ಜಾತಿ ಆಧಾರಿತ ಕುಲ ಕಸುಬುದಾರರಿಗೆ ಸಮಾನವಾದ ಮಾನ್ಯತೆ ಸಿಗಬೇಕೆಂದು ಹೇಳಿದರು. ನಾನು ಏನೊ ಮಾತನಾಡಲು ಹೋಗುತ್ತಿದ್ದಂತೆ ಈ ಕುರಿತು ಮತ್ತೊಮ್ಮೆ ಮಾತನಾಡೋಣ ಬಿಡು. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡವೆಂದು ಹೇಳಿ ಬೈಕ್ ಏರಿ ಹೋದರು. ನಾನು ಅವರನ್ನು ನೋಡುತ್ತಾ ಕಕ್ಕಾಬಿಕ್ಕಿಯಾಗಿ ಸ್ವಲ್ಪಹೊತ್ತು ನಿಂತು ಮನೆ ಕಡೆಗೆ ಹೆಜ್ಜೆ ಹಾಕಿದೆ.

ಸಾಫ್ಟ್‌ವೇರ್ ಎಂಜಿನಿಯರ್ ಗೋಪಿ ಜೀ

ಇಲ್ಲಿ ನಾನು ಗೋಪಿಜೀ ಅವರ ಬಗ್ಗೆ ಹೇಳಲೇಬೇಕು. ಅವರು ಆರ್‌ಎಸ್‍ಎಸ್ ಸಂಘಟನೆಗೆ ತಮ್ಮನ್ನು ತಾವು ತೇಯ್ದುಕೊಂಡ ವಿಷಯವನ್ನು ಪ್ರಸ್ತಾಪಿಸುವುದು ಸೂಕ್ತ ಎಂದೆನಿಸುತ್ತದೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಅವರು, ಬಿಟಿಎಂ ಲೇಔಟ್‍ನಲ್ಲಿ ವಾಸವಿದ್ದರು. ಆರ್‌ಎಸ್‍ಎಸ್ ಕುರಿತ ಅವರ ಭಾವನೆ ಹೇಗಿತ್ತೆಂದರೆ ಯಾವಾಗ ಶನಿವಾರ, ಭಾನುವಾರ ಬರುತ್ತದೆಯೋ, ಯಾವಾಗ ಬೇಗೂರಿಗೆ ಹೋಗಿ ಶಾಖೆ ಮಾಡುತ್ತೇನೆಯೋ ಎಂಬ ರೀತಿಯಲ್ಲಿ ಇರುತ್ತಿತ್ತು. ಏಕೆಂದರೆ, ಪ್ರತಿ ಶನಿವಾರ ಬೆಳಗ್ಗೆ 6 ಗಂಟೆಗೆಲ್ಲ ಬಿಟಿಎಂ ಲೇಔಟ್‍ನಿಂದ ಹೊರಟು ಬೇಗೂರಿನಲ್ಲಿ ಪ್ರತ್ಯಕ್ಷರಾಗುತ್ತಿದ್ದರು. ನಮ್ಮ ಮನೆಯ ಎಲ್ಲರೂ ಇನ್ನೂ ಚಳಿಗೆ ರಗ್ಗನ್ನು ಹೊದ್ದಿಕೊಂಡು ನಿದ್ದೆಯ ಮಂಪರಿನಲ್ಲಿ ಇರುವಾಗಲೇ ನಮ್ಮ ಮನೆಯ ಬಾಗಿಲನ್ನು ಟಕ ಟಕನೆಯೆಂದು ಹೊಡೆಯುತ್ತಿದ್ದರು. ನನ್ನಜ್ಜಿ ಬಾಗಿಲು ತೆರೆಯುತ್ತಲೇ ನಮಸ್ಕಾರ ಅಜ್ಜಿ, ಮಂಜುನ ಕರಿತ್ತೀರಾ ಎನ್ನುತ್ತಿದ್ದರು. ನನ್ನಜ್ಜಿ ಜೋರಾಗಿಯೇ ʼಚಡ್ಡಿಯಪ್ಪ ಬಂದಿದ್ದಾರೆ ನೋಡೋʼ ಎನ್ನುತ್ತಿದ್ದರು. ನಾನು ಲಗುಬಗನೆ ಎದ್ದು ಮುಖ ತೊಳೆದುಕೊಂಡು ಅವರೆದುರು ನಿಲ್ಲುತ್ತಿದ್ದೆ.

ಅವರು ಕೈ ಕುಲುಕುತ್ತಾ ಹೇಗಿದ್ದೀಯ ಮಂಜು ಎನ್ನುತ್ತಿದ್ದರು. ನಾನು ಚೆನ್ನಾಗಿದ್ದೇನೆ ಜೀ ಎಂದು ಹೇಳುತ್ತಲೇ ಬೇರೆ ಹುಡುಗರನ್ನು ಕರೆಯಲು ಹೋಗುತ್ತಿದ್ದೆ. ಒಂದು ಐದು ಹುಡುಗರು ಒಟ್ಟಾದರೆ ಸಾಕೆಂದು ನಮ್ಮ ಬೀದಿಯ ಹಿಂಭಾಗದಲ್ಲಿದ್ದ ಮಣ್ಣಿನ ಕೋಟೆಯಲ್ಲಿ ಶಾಖೆ ಆರಂಭಿಸುತ್ತಿದ್ದರು. ವ್ಯಾಯಾಮ, ಕಬಡ್ಡಿ ಸೇರಿದಂತೆ ಹಲವು ಆಟಗಳನ್ನು ಆಡಿಸುತ್ತಿದ್ದರು. ಕೊನೆಗೆ ಆರ್‌ಎಸ್‍ಎಸ್ ಚಿಂತನೆಗೆ ಸಂಬಂಧಿಸಿದ ಯಾವುದಾದರು ಒಂದು ಹಾಡನ್ನು ಹೇಳಿಕೊಡುತ್ತಿದ್ದರು. ಶಾಖೆಯ ನಂತರ ಹೊಸ ಹುಡುಗರನ್ನು ಭೇಟಿ ಮಾಡುವುದು, ಅವರೊಂದಿಗೆ ಆರ್‌ಎಸ್‍ಎಸ್‍ಗೆ ಸಂಬಂಧಿಸಿದ್ದು, ಮತಾಂತರ ಇಲ್ಲವೇ ಗೋಹತ್ಯೆ ನಿಷೇಧ ಸೇರಿದಂತೆ ಯಾವುದಾದರು ಒಂದು ವಿಷಯವನ್ನು ಚರ್ಚಿಸಿ ಹೋಗುತ್ತಿದ್ದರು.

Image
ಆರೆಸ್ಸೆಸ್‌ನಲ್ಲಿ ಅಪ್ರಾಪ್ತ ಮಕ್ಕಳು
ಆರೆಸ್ಸೆಸ್‌ನಲ್ಲಿ ಅಪ್ರಾಪ್ತ ಮಕ್ಕಳು

ಬೆಳ್ಳಂಬೆಳಿಗ್ಗೆಯೇ ಮನೆ ಮುಂದೆ ಹಾಜರ್

ತಮ್ಮ ಇಡೀ ಬಿಡುವಿನ ಸಮಯವನ್ನು ಆರ್‌ಎಸ್‍ಎಸ್‍ಗೆ ಮೀಸಲಿಟ್ಟಿದ್ದ ಅವರು, ಬೆಳಗ್ಗೆಯೇ ನಮ್ಮ ಮನೆ ಹತ್ರ ಬಂದು ನನ್ನನ್ನು ಕರೆಯುತ್ತಿದ್ದಾಗ ಎಷ್ಟೊ ಸಲ ನನ್ನಜ್ಜಿ, ನನ್ನ ತಾತಾ ಅವರ ಎದುರಿಗೆಯೇ ನೇರವಾಗಿ ನಿಮಗೆ ಮಾಡಲು ಬೇರೆ ಕೆಲಸ ಇಲ್ವೇ ಎನ್ನುತ್ತಿದ್ದರು. ಅದ್ಕೆ ಅವರ ಪ್ರತಿಕ್ರಿಯೆ ನಗುವೇ ಆಗಿತ್ತು. ನನ್ನ ತಾತಾ ಪ್ಯಾರಾಲಿಸಿಸ್‍ನಿಂದ ಹಾಸಿಗೆ ಹಿಡಿದಿದ್ದರು. ಇದನ್ನು ತಿಳಿದ ಅವರು, ನನ್ನ ತಾತಾನ ಬಳಿ ಬಂದು ಆರೋಗ್ಯ ವಿಚಾರಿಸಿ ಇಂತಹದ್ದೆಲ್ಲ ಮಾಡಿ, ಬೇಗನೇ ಹುಷಾರಾಗ್ತೀರಾ ಅಂತ ಹೇಳಿ ಹೋದರು. ಅಂದಿನಿಂದ ನನ್ನ ತಾತಾ ಗೋಪಿ ಜಿ ಬಂದಾಗಲೆಲ್ಲ ಸನ್ನೆ ಮೂಲಕವೇ ಮನೆಗೆ ಕರೆದು ಮಾತನಾಡಿಸುತ್ತಿದ್ದರು. ಹೀಗೆ ಗೋಪಿ ಜೀ ಅವರ ನಡವಳಿಕೆಯಿಂದ ಬೇಗೂರಿನಲ್ಲಿ ಬಹುಬೇಗ ಚಿರಪರಿಚಿತರಾದರು.

ಆ ಸಂದರ್ಭದಲ್ಲಿ ಅವರ ಹಾಗೂ ಆರ್‌ಎಸ್‍ಎಸ್ ಸಂಘಟನೆಯ ಹಿಡನ್ ಅಜೆಂಡಾಗಳು ನಮಗೆ ತಿಳಿಯುತ್ತಿರಲಿಲ್ಲ. ಆದರೆ, ಅವರು ಬಾಹ್ಯವಾಗಿ ನಡೆದುಕೊಳ್ಳುತ್ತಿದ್ದ ರೀತಿಯಲ್ಲಿ ನಮಗೆ ಇಷ್ಟವಾಗುತ್ತಿದ್ದರು. ಅವರು ಎಂದಿಗೂ ಮುಸ್ಲಿಂ, ಕ್ರಿಶ್ಚಿಯನ್ ವ್ಯಕ್ತಿಗಳನ್ನು ಹೊಡೆಯಿರಿ ಎನ್ನಲಿಲ್ಲ. ಆದರೆ, ಅವರು ಮಾತನಾಡುವಾಗಲೆಲ್ಲ ಗೋ ಹತ್ಯೆಯಿಂದ ನಮ್ಮ ಸಂಸ್ಕೃತಿ ಹೇಗೆ ನಾಶವಾಗುತ್ತೆ, ಮತಾಂತರದಿಂದ ಹಿಂದೂ ಜನಸಂಖ್ಯೆ ಮುಂದೊಂದು ದಿನ ನಶಿಸಿ ಹೋಗುತ್ತೆ ಅಂತ ಆತಂಕ ವ್ಯಕ್ತಪಡಿಸುವ ಮೂಲಕ ನಮ್ಮೊಳಗೆ ಪರೋಕ್ಷವಾಗಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಮೇಲೆ ಅಸಹನೆ ಹುಟ್ಟುವಂತೆ ಮಾಡುತ್ತಿದ್ದರು.

ದಲಿತರ ಕಾಲೊನಿಯಲ್ಲಿ ಪಾದಪೂಜೆ

ಆರ್‌ಎಸ್‍ಎಸ್‍ನ ಷಡ್ಯಂತ್ರಕ್ಕೆ ನಾವು ಕಕ್ಕಾಬಿಕ್ಕಿಯಾದ ಮತ್ತೊಂದು ಪ್ರಸಂಗವನ್ನು ನೆನೆಪಿಸಿಕೊಳ್ಳುವುದಾದರೆ ಒಂದು ದಿನ ಬೇಗೂರಿನ ಮಣ್ಣಿನ ಕೋಟೆಯಿರುವ ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿ ಗೋಪಿ ಜೀ ಅವರು ಒಂದು ಸಭೆ ಕರೆದಿದ್ದರು. ಅದರಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಗಾ.ರಾ.ಸುರೇಶ್ ಅವರ ನೇತೃತ್ವದಲ್ಲಿ ನಡೆದ ಸಭೆ ಆದಾಗಿತ್ತು. ಗೋಪಿ ಜೀ ಮಾತನಾಡುತ್ತಾ, ಸ್ವಾಮೀಜಿಯೊಬ್ಬರನ್ನು ಕರೆದುಕೊಂಡು ಬಂದು ಹರಿಜನ ಕಾಲೊನಿಯಲ್ಲಿ ಪಾದ ಪೂಜೆ ಮಾಡಿಸಬೇಕೆಂದಿದ್ದೇವೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕೆಂದು ತಿಳಿಸಿದರು. ನನ್ನ ಸ್ನೇಹಿತ ಒಬ್ಬ ಹರಿಜನ ಅಂದ್ರೆ ಯಾರು ಜೀ ಅಂದ. ಹೊಲೆಯ ಜನಾಂಗವನ್ನು ಸಂಘದ ಪದ್ಧತಿಯ ಪ್ರಕಾರ ಹರಿಜನ ಅಂತ ಕರಿತ್ತೀವಿ ಅಂದರು. ಹೋ ಹಾಗೆಯೇ ಎಂದು ಆತ ಮೌನವಾದ. ಮತ್ತೊಬ್ಬ ಯಾವ ಸ್ವಾಮೀಜಿಯನ್ನ ಕರೆಸ್ತಿದ್ದೀರ ಜೀ ಅಂದ. ಆ ಸ್ವಾಮೀಜಿಯ ಹೆಸರು ಈಗ ನೆನಪಿಲ್ಲ. ಆದರೆ ಆ ಸ್ವಾಮೀಜಿ ಕುರಿತು ಗೋಪಿ ಜೀ ಮಾಡಿದ ಗುಣಗಾನ ನೆನಪಿದೆ. ಆ ಸ್ವಾಮೀಜಿ ತಪಸ್ಸು ಮಾಡುತ್ತಾ ಎರಡು-ಮೂರು ಅಡಿ ಮೇಲೆ ಏಳುತ್ತಾರೆ, ಮಹಾ ತಪಸ್ವಿಗಳು ಅಂದರು. ನಾವು ಓ ಒಳ್ಳೆಯ ಪವಾಡ ಪುರುಷರನ್ನೆ ಕರೆಸ್ತಿದ್ದೀರ ಜೀ, ನಮ್ಮೆಲ್ಲರ ಸಹಕಾರ ಇರುತ್ತೆ ಎಂದು ಎಲ್ಲರು ಹೇಳಿದೆವು. ಪಾದ ಪೂಜೆ ದಿನ ಇಡೀ ಬೇಗೂರಿನಲ್ಲಿ ಕೇಸರಿ ಬ್ಯಾನರ್‌ಗಳನ್ನು ಕಟ್ಟಬೇಕಾಗುತ್ತೆ. ಹರಿಜನ ಕಾಲೋನಿಯಲ್ಲಿ ಪ್ರಚಾರ ಮಾಡಿ ಆ ದಿನ ಪ್ರತಿ ಮನೆಯ ಮುಂಭಾಗ ಸೆಗಣಿಯಿಂದ ತೊಳೆದು ರಂಗೋಲಿ ಹಾಕುವಂತೆ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ನನಗೆ, ಪಾಂಡುರಂಗ ಅವರಿಗೆ ವಹಿಸಲಾಯಿತು. ನಾಳೆ ಪಾದ ಪೂಜೆ ಅಂದ್ರೆ ಹಿಂದಿನ ಮಧ್ಯರಾತ್ರಿವರೆಗೆ ಏಣಿಯನ್ನು ಹೆಗಲಲ್ಲಿ ತೂಗಿ ಹಾಕಿಕೊಂಡು ಬಂಟಿಂಗ್ಸ್ ಗಳನ್ನು ಕಟ್ಟುವ ಮೂಲಕ ಊರಿನ ಮುಖ್ಯರಸ್ತೆಯನ್ನು ಕೇಸರಿಮಯಗೊಳಿಸಿದೆವು.

ಹಿಂದೂ ಜಾಗರಣ ವೇದಿಕೆಯ ಗಾ.ರಾ.ಸುರೇಶ್ ಜೊತೆಗೆ ಇಬ್ಬರು ಸ್ವಾಮೀಜಿಗಳು ಕಾರಿನಲ್ಲಿ ಬಂದಿಳಿದರು. ನಾವು ಬೇಗೂರನ್ನು ಕೇಸರಿಮಯಗೊಳಿಸಿದ್ದನ್ನು ನೋಡಿ ಗಾ.ರಾ.ಸುರೇಶ್ ನನ್ನ ಬೆನ್ನು ತಟ್ಟಿ ಭೇಷ್‌ ಎಂದರು. ನಾನು ನನ್ನ ಶ್ರಮ ಸಾರ್ಥಕವಾಯ್ತೆಂದು ಪುಳಕಿತನಾದೆ. ಬೆಳಗ್ಗೆ 9, 10ಗಂಟೆಗೆಲ್ಲ ಹರಿಜನ ಕಾಲೋನಿಯಲ್ಲಿ ಸ್ವಾಮೀಜಿಗಳ ಪಾದಪೂಜೆ ಪ್ರಾರಂಭವಾಯಿತು. ಆದರೆ ಅದು ಪಾದ ಪೂಜೆ ಅಷ್ಟಕ್ಕೆ ಸೀಮಿತವಾಗಿರಲಿಲ್ಲ. ಹೊಲೆಯರು ತಮ್ಮ ಮಾರಮ್ಮ, ಮದ್ದೂರಮ್ಮ, ಯಲ್ಲಮ್ಮ ದೇವರ ಪೋಟೋ ಜೊತೆಗೆ ಯೇಸು, ಮೇರಿ ಫೋಟೊವನ್ನು ಇಟ್ಟು ಪೂಜಿಸುತ್ತಿದ್ದರು. ಕೆಲ ಸಂಘದ ಹುಡುಗರು ಸ್ವಾಮೀಜಿ ಮನೆಯೊಳಗೆ ಹೋಗಿ ಪಾದ ಪೂಜೆ ಮಾಡಿಸಿಕೊಳ್ಳುತ್ತಿದ್ದಂತೆ ಇವರು ಯೇಸು, ಮೇರಿ ಪೋಟೊಗಳನ್ನು ಅಲ್ಲಿಂದ ಎತ್ತಿ ತಮ್ಮ ಚೀಲದಲ್ಲಿ ಹಾಕಿಕೊಳ್ಳುತ್ತಿದ್ದರು. ಇದು ನಮಗೆ ಆಶ್ಚರ್ಯವಾಗಿ ಕಂಡಿತು. ಯಾಕ್ ಹೀಗೆ ಮಾಡ್ತಾರೆಯೆಂದು ನಾನು ಪಾಂಡುರಂಗ ಬೇಸರ ಪಟ್ಟೆವು. ಆದರೆ ಇದನ್ನು ಕೇಳುವಂತಹ ಮನಸ್ಥಿತಿ ನಮಗೆ ಆಗ ಇರಲಿಲ್ಲ.

ಸಂಜೆವರೆಗೂ ಪಾದಪೂಜೆ ಆಯಿತು. ಈ ಸ್ವಾಮೀಜಿಗಳು ಇನ್ನೇನು ಹೊರಡುತ್ತಾರೆಂದು ನಾನು, ಪಾಂಡುರಂಗ ಭಾವಿಸಿದ್ದೆವು. ಆದ್ರೆ, ಗೋಪಿ ಜಿ ನಮಗೆ ಗೊತ್ತಿಲ್ಲದಂತೆ ಊರಿನ ಹಿರಿಯ ಬಿಜೆಪಿ ಮುಖಂಡರೊಂದಿಗೆ ಮತ್ತೊಂದು ಸಭೆ ನಡೆಸಿ ಆ ದಿನ ಸಂಜೆ ಬಹಿರಂಗ ಭಾಷಣ ಕಾರ್ಯಕ್ರಮವನ್ನು ಮಸೀದಿ, ಚರ್ಚ್ ನಡುವಿನ ಮಧ್ಯಭಾಗವಾದ ಮಾರಮ್ಮನ ಗುಡಿಯ ಬಳಿ ಆಯೋಜಿಸಿದ್ದರು. ಆ ಕಾರ್ಯಕ್ರಮ ನಮಗೆ ಗೊತ್ತಾಗಿದ್ದು ಆ ದಿನ ಸಂಜೆ. ಇನ್ನೇನು ಮಾಡುವುದೆಂದು ನಾವು ಭಾಗವಹಿಸಿದೆವು. ಬೆಳಗ್ಗೆಲ್ಲ ಪಾದ ಪೂಜೆ ಆಗಿದೆ. ಅದರ ಮುಂದುವರೆದ ಭಾಗವಾಗಿ ಆಧ್ಯಾತ್ಮಿಕ ವಿಷಯದ ಕುರಿತು ಮಾತನಾಡುತ್ತಾರೆಂದು ನಾವು ಭಾವಿಸಿದ್ದೆವು. ಆದರೆ, ಭಾಷಣ ಮಾಡುವುದಕ್ಕಾಗಿಯೇ ಬಂದಿದ್ದ ಒಬ್ಬ ಸಂಘದ ಮುಖಂಡ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷದ ಭಾಷಣವನ್ನು ಮಾಡಿದರು. ಅವರ ಮಾತನ್ನು ಕೇಳಿ ನಿಜಕ್ಕೂ ನನಗೆ ನಡುಕ ಶುರು ಆಯಿತು. ಆದರೆ, ನಮ್ಮ ಅದೃಷ್ಟಕ್ಕೆ ಊರಿನ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯ ಅವರ ಭಾಷಣವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಾವು ನಿಟ್ಟುಸಿರು ಬಿಟ್ಟೆವು.

Image
ಯುವ ಕಾರ್ಯಕರ್ತರ ಜೊತೆ ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್
ಯುವ ಕಾರ್ಯಕರ್ತರ ಜೊತೆ ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್

ಮಾತಿನ ಮಾಯಾಜಾಲ

ಈ ಪ್ರಸಂಗವನ್ನು ಈಗ ಕುಳಿತು ಯೋಚಿಸಿದಾಗ ಆರ್‌ಎಸ್‍ಎಸ್‍ನಲ್ಲಿ ದಲಿತ ಹುಡುಗರನ್ನು ಕಾಲಾಳುಗಳಾಗಿ ಕೆಲಸ ಮಾಡಲು ಪ್ರೇರೇಪಿಸುವುದಕ್ಕಾಗಿಯೇ ಸಂಘದ ಮುಖಂಡರು ತಮ್ಮದೇ ಆದ ರೀತಿಯಲ್ಲಿ ಮಾತಿನ ಮಾಯಾಜಾಲ ಹಾಗೂ ಕಾರ್ಯತಂತ್ರವನ್ನು ಸೃಷ್ಟಿಸುತ್ತಾರೆ ಎಂದೆನಿಸುತ್ತದೆ. ಏಕೆಂದರೆ, ಬೇಗೂರಿನಲ್ಲಿ ಶಾಖೆ ಪ್ರಾರಂಭವಾಗುವುದಕ್ಕೂ ಹತ್ತು ದಿನದ ಹಿಂದೆ ಊರಿನ ನಾಗೇಶ್ವರ ದೇವಸ್ಥಾನದಲ್ಲಿ ಮುಖಂಡರೊಬ್ಬರು ಭಾರತದ ಆಚಾರ, ವಿಚಾರ, ಸಂಸ್ಕೃತಿಯ ಕುರಿತು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ಆ ಭಾಷಣಕ್ಕೆ ಪಾಂಡುರಂಗ ನನ್ನನ್ನು ಕರೆದುಕೊಂಡು ಹೋದ. ಊರಿನ ಬ್ರಾಹ್ಮಣರು ಸೇರಿದಂತೆ ಎಲ್ಲ ಜಾತಿ ಸಮುದಾಯದವರು ಭಾಗವಹಿಸಿದ್ದರು.

ಇದನ್ನು ಓದಿದ್ದೀರಾ? ಸಂಘ ಬಿಟ್ಟವರು ಬಿಚ್ಚಿಟ್ಟ ಸತ್ಯ| ಆರೆಸ್ಸೆಸ್‌ನಲ್ಲಿ ದಲಿತರು ಕಾಲಾಳುಗಳು (ಭಾಗ-1)- ಮಂಜುನಾಥ ದಾಸನಪುರ

ಹತ್ತು ದಿನದ ನಂತರ ಗೋಪಿ ಜೀ ಅವರು ನನ್ನ ಮತ್ತು ಪಾಂಡುರಂಗ ಅವರನ್ನು ಹುಡುಕಿಕೊಂಡು ಬಂದು, ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹಕನೆಂದು ಪರಿಚಯ ಮಾಡಿಕೊಂಡು, ಹುಡುಗರಿಗೆ ದೇಶಭಕ್ತಿಯ ಕುರಿತು ಜಾಗೃತಿ ಮೂಡಿಸುವುದು ನಮ್ಮ ಕೆಲಸ. ಅದು ಆಟ ಆಡುವುದರ ಮೂಲಕ ಕಲಿಸುತ್ತೇನೆ. ನಿಮ್ಮ ಸ್ನೇಹಿತರನ್ನು ಕರೆದುಕೊಂಡು ಬನ್ನಿ ಪ್ರತಿ ಭಾನುವಾರ ಕೋಟೆ ದೇವಸ್ಥಾನದ ಬಳಿಯೇ ಶಾಖೆ ಮಾಡೋಣ ಅಂದರು. ಗೋಪಿ ಜೀ ಅವರು ಬ್ರಾಹ್ಮಣ, ಲಿಂಗಾಯತ, ಸೇಠು, ಒಕ್ಕಲಿಗ, ಗಾಣಿಗ, ರೆಡ್ಡಿ ಸಮುದಾಯವನ್ನು ಬಿಟ್ಟು ಕೊರಮ ಪಾಳ್ಯ, ಹೊಲೆಯರ ಬೀದಿಗಳಿಗೆ ಯಾಕೆ ಬಂದರು ಎಂಬುದು ಕೂಡ ಆರ್‌ಎಸ್‍ಎಸ್ ಕಾರ್ಯತಂತ್ರದ ಭಾಗವೇ ಆಗಿದೆ.

ನಮ್ಮ ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಬಹುತೇಕ ಮೇಲ್ಜಾತಿ ಕುಟುಂಬಗಳು ವಿದ್ಯಾವಂತರು, ಆರ್ಥಿಕವಾಗಿ ಸದೃಢರಾಗಿರುತ್ತಾರೆ. ಹಾಗೂ ತಮ್ಮ ಮಕ್ಕಳ ಬಗ್ಗೆ ಸದಾ ಲಕ್ಷ್ಯ ವಹಿಸಿರುತ್ತಾರೆ. ಮಕ್ಕಳು ಯಾರ ಜೊತೆ ಸೇರುತ್ತಾರೆ. ಅದರಿಂದ ವೈಯಕ್ತಿಕವಾಗಿ ತಮ್ಮ ಮಕ್ಕಳಿಗೆ ಲಾಭ ಆಗುತ್ತದೆಯೇ ಎಂಬುದನ್ನು ಜಾಗ್ರತೆ ವಹಿಸುತ್ತಾರೆ. ಯಾರಿಂದಲಾದರು ಸ್ವಲ್ಪ ಅಪಾಯದ ಮುನ್ಸೂಚನೆ ಸಿಕ್ಕರೂ ಅಂತವರಿಂದ ದೂರ ಮಾಡಿಬಿಡುತ್ತಾರೆ. ಹೀಗಾಗಿ ಆರ್‌ಎಸ್‍ಎಸ್ ಮೇಲ್ಜಾತಿ ಸಮುದಾಯದ ಮಕ್ಕಳಿಗೆ ಮತೀಯ ಭಾವನೆ ತುಂಬಿ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ವಿರುದ್ಧ ಪ್ರತಿಭಟನೆ, ಗಲಾಟೆ ಮಾಡಿಸುವಂತಹ ದುಸ್ಸಾಹಸಕ್ಕೆ ಕೈ ಹಾಕಲಾರರು. ಆದರೆ, ದಲಿತ ಸಮುದಾಯದ ಪೋಷಕರು ಹಗಲು ರಾತ್ರಿ ದುಡಿದರೂ ತಮ್ಮ ಹೊಟ್ಟೆ, ಬಟ್ಟೆಗಳಿಗೆ ಸರಿಹೊಂದಿಸಲು ಸಾಧ್ಯವಾಗಲಾರದೆ ಪರದಾಡುತ್ತಿರುತ್ತಾರೆ. ಇದರ ಲಾಭ ಪಡೆಯುವ ಆರ್‌ಎಸ್‍ಎಸ್‌ನಂತಹ ಮತೀಯ ಸಂಘಟನೆಗಳು, ದಲಿತ, ಶೋಷಿತ ಸಮುದಾಯದ ಮಕ್ಕಳನ್ನು ಟಾರ್ಗೆಟ್ ಮಾಡುತ್ತಾರೆ. ಅವರನ್ನು ಇಂದ್ರ ಚಂದ್ರನೆಂದು ಅಟ್ಟಕ್ಕೆ ಏರಿಸುತ್ತಾರೆ. ಮೇಲ್ಜಾತಿ ಸಮುದಾಯ ಮುಖಂಡರು ದಲಿತ ಹುಡುಗನ ಹೆಗಲ ಮೇಲೆ ಕೈ ಹಾಕಿ ಒಂದೊಳ್ಳೆಯ ಮಾತು ಆಡಿದರೂ ಅವರು ಸಂಪೂರ್ಣವಾಗಿ ಶರಣಾಗಿ ಬಿಡುತ್ತಾರೆ. ದಲಿತರ ನಂಬಿಕೆ, ವಿನಯವಂತಿಕೆಗಳನ್ನೆ ಮತೀಯ ಶಕ್ತಿಗಳು ಅಸ್ತ್ರಗಳಾಗಿ ಬಳಕೆ ಮಾಡುತ್ತಾರೆ.

(ಮುಂದುವರಿಯುವುದು)

ನಿಮಗೆ ಏನು ಅನ್ನಿಸ್ತು?
13 ವೋಟ್