ವಿಶೇಷ ಲೇಖನ | ಸ್ಟಾನ್‍ಫೋರ್ಡ್ ಯುನಿವರ್ಸಿಟಿಯಿಂದ ಹಿಡಿದು ಫೇಸ್‌ಬುಕ್‌ವರೆಗೆ ಬೃಹತ್ ಉದ್ಯಮಗಳದ್ದು ಕರಾಳ ಮುಖ

ಉದ್ಯಮಿಗಳನ್ನು ಮಹಾನ್ ಸಾಹಸಿಗಳೆಂದು ಬಣ್ಣಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಉದಾಹರಣೆಗೆ ಗಮನಿಸಿ... ತೈಲ ಕಂಪನಿಗಳು ತಮ್ಮಿಂದ ಪರಿಸರ ಮಾಲಿನ್ಯ ಆಗುತ್ತಿಲ್ಲ ಎಂದೇ ವಾದಿಸುತ್ತವೆ. ಟೆಕ್ ಕೈಗಾರಿಕೆಗಳು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ರೂಪಿಸುತ್ತೇವೆಂದು ಸಾರುತ್ತವೆ. ಇವರ ಪ್ರವರ ಹೀಗೆಯೇ ಮುಂದುವರಿಯುತ್ತವೆ. ನಂಬುವವರು ಬೇಕಷ್ಟೆ!

ಯಶಸ್ವಿ ಉದ್ಯಮಿಗಳು ನಾಯಕರೋ ಅಥವಾ ಖಳನಾಯಕರೋ? ಕತೆ, ಕಾದಂಬರಿಗಳಲ್ಲಿ ಈ ಎರಡಕ್ಕೂ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಸಮಾಜ ವಿಜ್ಞಾನದಲ್ಲೂ ವಿಭಿನ್ನ ಅಭಿಪ್ರಾಯಗಳಿವೆ. ಉದಾಹರಣೆಗೆ, ಜೋಸೆಫ್ ಷಂಪೀಟರ್ ಮತ್ತು ಅವನ ಅನುಯಾಯಿಗಳು ಉದ್ಯಮಿಗಳನ್ನು 'ಬೆಳವಣಿಗೆಯ ಎಂಜಿನ್‍'ಗಳಾಗಿ ನೋಡುತ್ತಾರೆ. ಫ್ರೆಡ್ರಿಕ್ - ಏಂಗೆಲ್ಸ್ ಅವರ ಮೇಲೆ ಬೈಗುಳದ ಸುರಿಮಳೆಯನ್ನೇ ಸುರಿಸುತ್ತಾನೆ. "ಬ್ರಿಟಿಷ್ ಕೈಗಾರಿಕೋದ್ಯಮಿಗಳು ಕಾರ್ಮಿಕರನ್ನು ದಾರಿದ್ರ್ಯದ ಕೂಪಕ್ಕೆ ತಳ್ಳಿದ್ದು ಮಾತ್ರವಲ್ಲ, ಅವರನ್ನು ಅಮಾನವೀಯವಾಗಿ ದುಡಿಸಿಕೊಂಡಿದ್ದಾರೆ. ಮನುಷ್ಯ ಮಾತ್ರದವರು ದುಡಿಯಲಾಗದ ಪರಿಸ್ಥಿತಿಯಲ್ಲಿ ಅವರನ್ನು ದುಡಿಸುತ್ತಾರೆ," ಎಂದು ದೂರಿದ್ದಾನೆ. "ನಿಷ್ಕರುಣಿಯಾದ ಉದ್ಯಮಿಗಳು ಕೆಲಸಗಾರರನ್ನು ಶೋಷಿಸುತ್ತಾರೆ," ಎನ್ನುತ್ತಾನೆ ಕಾರ್ಲ್ ಮಾರ್ಕ್ಸ್. "ಆದರೆ, ಅವರಿಂದಾಗಿ ಹೊಸ-ಹೊಸ ಆವಿಷ್ಕಾರಗಳು ಆಗುತ್ತವೆ ಎನ್ನುವುದೂ ನಿಜ. ಆ ಆವಿಷ್ಕಾರಗಳಿಂದ ಸಮಾಜದ ಪರಿವರ್ತನೆಯೂ ಆಗುತ್ತದೆ," ಎಂದೂ ಹೇಳುತ್ತಾನೆ.  

Eedina App

ಒಟ್ಟಾರೆ, ಉದ್ಯಮಿಗಳನ್ನು ಕುರಿತಂತೆ ಸಮಾಜದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಹಾಗಾಗಿ, ಚಿಂತಕರಲ್ಲೂ ವಿಭಿನ್ನ ನಿಲುವುಗಳು ಕಾಣುತ್ತವೆ. ಉದ್ಯಮಿಗಳೆಲ್ಲರನ್ನೂ ನಾಯಕರೆಂದೋ ಅಥವಾ ಖಳನಾಯಕರೆಂದೋ ಹೇಳಿಬಿಡುವುದು ತೀರಾ ಬಾಲಿಶವಾಗುತ್ತದೆ. ನಮ್ಮಂತೆಯೇ ಅವರಲ್ಲಿ ಹೆಚ್ಚಿನವರು ಎರಡೂ ಆಗಿರುತ್ತಾರೆ. ನಾವಿಂದು ಲೋಕೋಪಕಾರಿಗಳೆಂದು ಕರೆಯುವ ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದವರೆಂದು ಕೊಂಡಾಡುವ ಎಷ್ಟೋ ಜನ 19ನೇ ಶತಮಾನದ ಕೊನೆ ಮತ್ತು ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ದರೋಡೆಕೋರ ಉದ್ಯಮಿಗಳಾಗಿದ್ದವರು. ದೊಡ್ಡ ಕೈಗಾರಿಕೋದ್ಯಮಿಗಳಾದ ಜಾನ್ ಡಿ ರಾಕ್ ಫೆಲ್ಲರ್, ಅಂಡ್ರ್ಯೂ ಕಾರ್ನಗಿ, ಕಾರ್ನೆಲಿಯಸ್ ವಂಡರ್‌ಬಿಲ್ಟ್ ಮುಂತಾದವರು ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವುದಕ್ಕೆ, ತಮ್ಮ ಪ್ರತಿಸ್ಪರ್ಧಿಯ ಉದ್ಯಮಗಳನ್ನು ಆಕ್ರಮಿಸಿಕೊಳ್ಳುವುದಕ್ಕೆ, ಬೆಲೆಗಳನ್ನು ಏರಿಸುವುದಕ್ಕೆ ಎಂದೂ ಹಿಂಜರಿದವರಲ್ಲ. ಅಷ್ಟೇ ಅಲ್ಲ, ಯಾರಾದರೂ ಕಾರ್ಮಿಕರು ಹೆಚ್ಚಿನ ಕೂಲಿಯನ್ನೋ, ಒಂದಿಷ್ಟು ಅನುಕೂಲಗಳನ್ನೋ ಕೇಳಿಬಿಟ್ಟರೆ, ಕ್ರೂರವಾಗಿ ನಡೆದುಕೊಳ್ಳುತ್ತಿದ್ದರು. ಕೊಲ್ಲುವುದಕ್ಕೂ ಹಿಂದೇಟು ಹಾಕುತ್ತಿರಲಿಲ್ಲ.

ಲೆಲ್ಯಾಂಡ್ ಸ್ಟಾನ್‍ಫೋರ್ಡ್

ಸ್ಟಾನ್‍ಫೋರ್ಡ್ ವಿಶ್ವವಿದ್ಯಾನಿಲಯದ ಸ್ಥಾಪಕ ಲೆಲ್ಯಾಂಡ್ ಸ್ಟಾನ್‍ಫೋರ್ಡ್ ಅಂತೂ ಇನ್ನೂ ಹೊಲಸು. ಪೆಸಿಫಿಕ್ ತೀರದಲ್ಲಿದ್ದ ರೈಲ್ವೆ ನಿರ್ಮಾಣದ ಕೈಗಾರಿಕೆಯನ್ನು ಅವನು ಮತ್ತವನ ಸಂಗಡಿಗರು ಲಪಟಾಯಿಸಿದರು. ಅಷ್ಟೇ ಅಲ್ಲ, ಅದನ್ನು ಬೆಳೆಸುವುದಕ್ಕೆ ಬೇಕಾದ ಹಣವನ್ನು ಅಮೆರಿಕದ ತೆರಿಗೆದಾರರಿಂದ ವಸೂಲಿ ಮಾಡಿದರು. ಅದಕ್ಕೆಂದೇ ವಿಶೇಷ ಯೋಜನೆಯನ್ನು ರೂಪಿಸಿದರು. ಸ್ಟಾನ್‍ಫೋರ್ಡ್ ವಲಸೆ ಕಾರ್ಮಿಕರನ್ನು, ಅದರಲ್ಲೂ ಚೀನಾದಿಂದ ಬಂದ ಜನರನ್ನು ಅತ್ಯಂತ ಕ್ರೂರವಾಗಿ, ಅಮಾನವೀಯವಾಗಿ ದುಡಿಸಿಕೊಂಡು ಬೆಳೆದ. ಅವರಿಗೆ ಕೊಡುತ್ತಿದ್ದ ಕೂಲಿ ವಿಪರೀತ ಕಡಿಮೆ. ಅವರು ದುಡಿಯುತ್ತಿದ್ದ ಪರಿಸರವಂತೂ ಭಯಂಕರವಾಗಿತ್ತು. ಯಾವುದೇ ಒಬ್ಬ ಅಮೆರಿಕದವ ಅಷ್ಟು ಕಡಿಮೆ ಹಣಕ್ಕೆ, ಅಂತಹ ಪರಿಸ್ಥಿತಿಯಲ್ಲಿ ದುಡಿಯುತ್ತಿರಲಿಲ್ಲ.

AV Eye Hospital ad

ನಂತರ ಸ್ಟಾನ್‍ಫೋರ್ಡ್ ರಾಜಕೀಯಕ್ಕೆ ಧುಮುಕಿದ. ತೆರಿಗೆದಾರರ ಹಣವನ್ನು ಕಬಳಿಸಿಕೊಂಡು ತನ್ನ ಸಂಪತ್ತು ಮತ್ತು ಲಾಭವನ್ನು ವೃದ್ಧಿಸಿಕೊಂಡ. ತನ್ನ ರೈಲುರಸ್ತೆಗಳ ನಿರ್ಮಾಣಕ್ಕೆ ಬೇಕಾದ ಬಂಡವಾಳಕ್ಕೂ ಸರ್ಕಾರದಿಂದ ಬಾಂಡುಗಳನ್ನು ಬಿಡುಗಡೆ ಮಾಡಿಸಿದ. ಸಾರ್ವಜನಿಕ ಹಣವನ್ನು ತನ್ನ ಸ್ವಂತ ಅನುಕೂಲಕ್ಕೆ ಬಳಸಿಕೊಂಡ. ಗವರ್ನರ್ ಆಗಿದ್ದಾಗ ಅಮೆರಿಕದ ಮೂಲನಿವಾಸಿಗಳ ಮೇಲೆ ದಾಳಿ ನಡೆಸಿದ. ತನ್ನ ಯಶಸ್ಸಿಗೆ ದುಡಿದಿದ್ದ ಚೀನಿಯರ ವಿರುದ್ಧ ದ್ವೇಷದ ದಳ್ಳುರಿಯನ್ನು ಹರಿಬಿಟ್ಟ.

ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್

ಇಂದು ಉದ್ಯಮಿಗಳನ್ನು ಮಹಾನ್ ಸಾಹಸಿಗಳೆಂದು ಬಣ್ಣಿಸುವುದರಲ್ಲಿ ಯಾವುದೇ ಅರ್ಥವೂ ಇಲ್ಲ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಒಂದು ಕಾಲದಲ್ಲಿ ಗ್ರಾಹಕರ ಹಿತವನ್ನು ರಕ್ಷಿಸುತ್ತದೆ ಎಂದು ಮೆಚ್ಚುಗೆ ಗಳಿಸಿತ್ತು. ಇಂದು ಅದರ ಪೌಡರ್ ಬಳಸಿ ಸಾವಿರಾರು ಜನ ತೊಂದರೆಗೊಳಗಾದಾಗ ಅವರಿಗೆ ಪರಿಹಾರ ಕೊಡುವುದರಿಂದ ತಪ್ಪಿಸಿಕೊಳ್ಳಲು ಅದು ಕಾನೂನಿನ ಅಪಬಳಕೆಗೆ ಪ್ರಯತ್ನಿಸಿತು. ತೈಲ ಕಂಪನಿಗಳು ತಮ್ಮಿಂದ ಯಾವುದೇ ಪರಿಸರ ಮಾಲಿನ್ಯ ಆಗುತ್ತಿಲ್ಲ ಎಂದೇ ದಶಕಗಳಿಂದ ವಾದಿಸಿಕೊಂಡು ಬಂದಿವೆ. ಈಗ ಪರಿಸರ ರಕ್ಷಕರಂತೆ ಸೋಗು ಹಾಕುತ್ತಿವೆ. ನಂಬುವವರು ಬೇಕಷ್ಟೆ!

ಇನ್ನು, ಟೆಕ್ ಕೈಗಾರಿಕೆಗಳು ಇದಕ್ಕೆ ಹೊರತಲ್ಲ. ಅವರು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ರೂಪಿಸುತ್ತೇವೆ ಅಂತ ಹೇಳಿಕೊಂಡು ಬಂದವರು. ಗೂಗಲ್ ಘೋಷಣೆಯೇ 'ಪಾಪಿಗಳಾಗಬೇಡಿ' ಎಂಬುದಾಗಿತ್ತು. ಆದರೆ, ಈಗ 'ಬೃಹತ್ ಟೆಕ್' ಅನ್ನುವುದು ಮಾರುಕಟ್ಟೆಯ ಅಧಿಪತ್ಯ, ಗ್ರಾಹಕರನ್ನು ಮರುಳು ಮಾಡುವುದು, ತೆರಿಗೆ ತಪ್ಪಿಸುವುದು ಹಾಗೂ ಇತರ ಅಕ್ರಮಗಳಿಗೆ ಮತ್ತೊಂದು ಹೆಸರಾಗಿಬಿಟ್ಟಿದೆ.

ಗೂಗಲ್ ಕಂಪನಿಯ ಕಚೇರಿ ಒಳಾಂಗಣ

ಟೆಕ್ ಕ್ಷೇತ್ರದ ದೊಡ್ಡ ಉದ್ಯಮಗಳು ಹೊಸದಾಗಿ ಕ್ಷೇತ್ರಕ್ಕೆ ಕಾಲಿಟ್ಟ ಉದ್ದಿಮೆಗಳನ್ನು ಖರೀದಿ ಮಾಡಿಬಿಡುತ್ತವೆ ಅಥವಾ ಅವರ ಉತ್ಪನ್ನಗಳನ್ನು ನಕಲು ಮಾಡುತ್ತವೆ. ಹೀಗೆ, ಏನೇನೋ ಕಸರತ್ತು ಮಾಡಿ ತಮ್ಮ ಅಧಿಪತ್ಯವನ್ನು ಗಟ್ಟಿ ಮಾಡಿಕೊಳ್ಳುತ್ತವೆ. ಫೇಸ್‍ಬುಕ್ 2012ರಲ್ಲಿ ಇನ್ಸ್ಟಾಗ್ರಾಂ ಅನ್ನು, 2014ರಲ್ಲಿ ವಾಟ್ಸಾಪ್ ಅನ್ನು ತನ್ನದು ಮಾಡಿಕೊಂಡದ್ದು ಇದಕ್ಕೆ ಒಂದು ಉದಾಹರಣೆ. ಇವೆಲ್ಲ ಮುಂದೆ ಅದಕ್ಕೆ ಪ್ರತಿಸ್ಪರ್ಧಿಗಳು ಇಲ್ಲದಂತೆ ನೋಡಿಕೊಳ್ಳುವುದಕ್ಕಾಗಿ ಅಲ್ಲಿಯ ಹಿರಿಯ ಅಧಿಕಾರಿಗಳು ಮಾಡಿದ್ದು ಅಂತ ಆಂತರಿಕ ದಾಖಲೆಗಳು ಹೇಳುತ್ತವೆ.

ಇನ್ನೂ ಪ್ರಶ್ನಾರ್ಹವಾದ ವಿಚಾರವೆಂದರೆ, 'ಕೊಲೆಗಡುಕ ಸ್ವಾಧೀನಪಡಿಸಿಕೊಳ್ಳುವಿಕೆ.' ಒಂದು ಹೊಸ ತಂತ್ರಜ್ಞಾನ ಹುಟ್ಟಿಕೊಂಡರೆ, ಅದನ್ನು ಉತ್ಪಾದನೆಗೆ ಬಳಸಿಕೊಳ್ಳುತ್ತೇವೆ ಎಂದು ಹೇಳಿ ಈ ದೊಡ್ಡ ಸಂಸ್ಥೆಗಳು ಕೊಂಡುಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ ಹಾಗೆ ಖರೀದಿಸಿದ ತಂತ್ರಜ್ಞಾನವನ್ನು ನಾಶ ಮಾಡುತ್ತಾರೆ. ಅದನ್ನು ಇನ್ನು ಯಾರೂ ಬಳಸಲು ಸಾಧ್ಯವಿಲ್ಲ. ಇದು ಏಕಸ್ವಾಮ್ಯ ಸ್ಥಾಪಿಸುವ ಒಂದು ಕ್ರಮ ಅಷ್ಟೆ. ನೆಟ್ ಸ್ಕೇಪ್ ಸಂಸ್ಥೆಯನ್ನು ಮೈಕ್ರೋಸಾಫ್ಟ್ ಕೊಂದಿದ್ದು ಮತ್ತು ಐಯೋಸ್ ಕಂಪನಿಯನ್ನು ಆ್ಯಪಲ್ ಕೊಂದಿದ್ದು... ಇವೆಲ್ಲ ಇಂತಹುದೇ ಪ್ರಕರಣಗಳು.

ಬಿಲ್ ಗೇಟ್ಸ್

ಕೊನೆಯದಾಗಿ, ಈಗ ಮಾಹಿತಿ ಸಂಗ್ರಹಣೆ ವಿಪರೀತವಾಗಿ ನಡೆಯುತ್ತಿದೆ. ದೊಡ್ಡ ಟೆಕ್‍ಗಳು ಇವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತವೆ. ಗ್ರಾಹಕರ ಬಗ್ಗೆ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಹಾಗಾಗಿ, ಹೊಸಬರಿಗೆ ಮಾರುಕಟ್ಟೆ ಪ್ರವೇಶಿಸುವುದು ಕಷ್ಟವಾಗುತ್ತದೆ. ಮಾರುಕಟ್ಟೆ ಇವರ ನಿಯಂತ್ರಣದಲ್ಲಿರುತ್ತದೆ. ಡಿಜಿಟಲ್ ಮಾಧ್ಯಮಗಳ ಮೂಲಕ ಗ್ರಾಹಕರಿಗೆ ಸುಳ್ಳು ಭರವಸೆಗಳನ್ನು ತಲುಪಿಸುತ್ತವೆ. ಡಿಜಿಟಲ್ ಜಾಹೀರಾತುಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತವೆ.

ಆದರೆ, ಉದ್ದಿಮೆಗಳ ಈ ಕೆಟ್ಟ ಚಾಳಿ ನಿಯಂತ್ರಿಸುವುದು ಅಸಾಧ್ಯವೇನಲ್ಲ. 19ನೇ ಶತಮಾನದ ಕೈಗಾರಿಕೋದ್ಯಮಿಗಳಿಂದ ಹಿಡಿದು ಇಂದಿನ ಕೆಟ್ಟ ಕಾರ್ಪೋರೇಟುಗಳವರೆಗೆ ದುರ್ನಡತೆಯನ್ನು ಹದ್ದುಬಸ್ತಿನಲ್ಲಿಡುವ ಕ್ರಮಗಳಿಲ್ಲದೆ ಇರುವುದರಿಂದ ಹೀಗಾಗುತ್ತಿದೆ. ಕಂಪನಿಗಳು ಸರಿಯಾಗಿ ನಡೆದುಕೊಳ್ಳುವಂತೆ ಮಾಡುವುದಕ್ಕೆ, ಮತ್ತು ಉಪಯುಕ್ತ ಅನ್ವೇಷಣೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದಕ್ಕೆ ಸರಿಯಾದ ಸಾಂಸ್ಥಿಕ ಪರಿಸರ, ಸೂಕ್ತ ರೀತಿಯ ನಿಯಂತ್ರಣಗಳು ಅವಶ್ಯ. 'ವೈ ನೇಷನ್ಸ್ ಫೇಲ್' ಪುಸ್ತಕದಲ್ಲಿ ಬಿಲ್ ಗೇಟ್ಸ್ ಮತ್ತು ಮೆಕ್ಸಿಕನ್ ಟಿಲಿ ಸಂಹವನದ ಕಾರ್ಲೊಸ್ ಸ್ಲಿಂ ಇಬ್ಬರನ್ನೂ ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿದೆ. ಇಬ್ಬರ ಗುರಿಯೂ ಒಂದೇ. ಹೇಗಾದರೂ ಮಾಡಿ ಸಾಕಷ್ಟು ದುಡ್ಡು ಮಾಡಿಕೊಳ್ಳಬೇಕು. ಮೆಕ್ಸಿಕೋ ಮತ್ತು ಅಮೆರಿಕದ ಕಾನೂನು ಮತ್ತು ನಿಯಂತ್ರಣದ ವ್ಯವಸ್ಥೆಯಲ್ಲಿ ವ್ಯತ್ಯಾಸವಿತ್ತು. ಹಾಗಾಗಿ, ಕಾರ್ಲೊಸ್ ಸ್ಲಿಂ ಗೇಟ್ಸ್‌ಗಿಂತ ಕೆಟ್ಟದಾಗಿ ನಡೆದುಕೊಂಡರೂ ಪಾರಾಗಿಬಿಡುತ್ತಿದ್ದ ಅಂತ ಭಾವಿಸಲಾಗಿತ್ತು. ಆದರೆ, ಅದು ಪೂರ್ತಿ ನಿಜವಲ್ಲ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಯರವಾಡಾ ಜೈಲಿನಿಂದ ಗಾಂಧಿ ಬರೆದ ಉರ್ದು ಪತ್ರ ಮತ್ತು ನಾಲ್ವಡಿಯವರ ಮೂರು ಭಾಷೆಯ ಆಹ್ವಾನ ಪತ್ರ

ಮೆಕ್ಸಿಕೋಗೆ ಹೋಲಿಸಿದರೆ ಅಮೆರಿಕದಲ್ಲಿ ಅನ್ವೇಷಣೆಗೆ ಹೆಚ್ಚಿನ ಪ್ರೋತ್ಸಾಹ ಇರುವುದು ನಿಜ. ಆದರೆ, ಅಲ್ಲೂ ವಂಚನೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಬೇಕಾದಷ್ಟು ದಾರಿಗಳಿವೆ. ಮೈಕ್ರೋಸಾಫ್ಟ್ ಪ್ರಮುಖ ಕಂಪನಿಯಾಗಿ ಬೆಳೆಯುವ ವೇಳೆಗೆ ಅಲ್ಲಿ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವ ಅವಕಾಶಗಳು ಹಲವು ಪಟ್ಟು ಹೆಚ್ಚಿದ್ದವು. ಈಗ ಅದು ಅಮೆರಿಕದಲ್ಲಿ ಒಂದು ದೊಡ್ಡ ಸಾಂಕ್ರಾಮಿಕವಾಗಿದೆ. ದೇಶದ ಆರ್ಥಿಕತೆಗೆ ಮುಳುವಾಗಿದೆ.

ಆದರೆ, ಬಹುಮಟ್ಟಿಗೆ ಇವರ ದುರ್ನಡತೆಯನ್ನು ನಿಯಂತ್ರಿಸುವುದಕ್ಕೆ ಸಾಧ್ಯ. ನಿಯಂತ್ರಣ ಮತ್ತು ಉತ್ತೇಜನಗಳ ನಡುವೆ ಸರಿಯಾದ ಸಮತೋಲನ ಸಾಧ್ಯವಾಗಬೇಕು ಅಷ್ಟೆ. ಮೊದಲಿಗೆ, ನಾವು ಉದ್ದಿಮೆದಾರರು ಮಹಾನ್ ಸಾಹಸಿಗಳು ಎಂಬ ಮಿಥ್ಯೆಯಿಂದ ಹೊರಬರಬೇಕು. ಬೆಳವಣಿಗೆ ಅನ್ನುವುದು ತನ್ನಷ್ಟಕ್ಕೆ ಆಗಿಬಿಡುವುದಿಲ್ಲ ಅನ್ನುವುದನ್ನೂ ಅರ್ಥ ಮಾಡಿಕೊಳ್ಳಬೇಕು. ವ್ಯವಸ್ಥೆಯ ಅಪಬಳಕೆಯಾಗದಂತೆ ನೋಡಿಕೊಳ್ಳಲು ಸೂಕ್ತವಾದ ನಿಯಂತ್ರಣ ಬೇಕು. ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಸಂಸ್ಥೆಗಳನ್ನು ಸದೃಢಗೊಳಿಸಬೇಕು. ಆಗ ಮಾತ್ರ ದೇಶದ ಸಮೃದ್ಧಿ ಸಾಧ್ಯ. ಆಗ ಮಾತ್ರ ಸಮಾಜದ ಈ ಬಲಾಢ್ಯರನ್ನು ಸಮಾಜಕ್ಕೆ ಹಕ್ಕುಬಾಧ್ಯರನ್ನಾಗಿಸುವುದಕ್ಕೆ ಸಾಧ್ಯ.

* * *

ಡರನ್ ಅಸಿಮೊಗ್ಲು ಎಂಐಟಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ಅರ್ಥಶಾಸ್ತ್ರದಲ್ಲಿ ತುಂಬಾ ದೊಡ್ಡ ಹೆಸರು. 'ವೈ ನೇಷನ್ಸ್ ಫೇಲ್' ಪುಸ್ತಕದಿಂದ ಪ್ರಖ್ಯಾತರಾದವರು. 2022ರಲ್ಲಿ ಅವರಿಗೆ ನೋಬೆಲ್ ಬಹುಮಾನ ಬರಬಹುದೆಂಬ ನಿರೀಕ್ಷೆ ಇತ್ತು. ಅವರು 'ಪ್ರಾಜೆಕ್ಟ್ ಸಿಂಡಿಕೇಟ್‌'ನಲ್ಲಿ ಬರೆದಿರುವ ‘ವೈ ಬಿಸಿನೆಸಸ್ ಮಿಸ್ ಬಿಹೇವ್’ ಲೇಖನದ ಸಂಗ್ರಹ ರೂಪವಿದು.

ಸಾರ ಸಂಗ್ರಹ ಮತ್ತು ಅನುವಾದ: ಟಿ ಎಸ್ ವೇಣುಗೋಪಾಲ್
ನಿಮಗೆ ಏನು ಅನ್ನಿಸ್ತು?
4 ವೋಟ್
eedina app