ಸುದ್ದಿ ಪ್ಲಸ್ | ಬಡವರ ಸಂಖ್ಯೆ ನಿಜಕ್ಕೂ ಕಡಿಮೆ ಆಗುತ್ತಿದೆಯೇ?

Poverty Rate in India 6

ಭಾರತದಲ್ಲಿ ಬಡತನ ಇಳಿಮುಖವಾಗಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಕೆಲವರು ಇದನ್ನು ಸಾರಾಸಗಟಾಗಿ ತಳ್ಳಿಹಾಕುತ್ತಿದ್ದಾರೆ. ಇನ್ನು ಕೆಲವರು ಬೆಂಬಲ ಸಾರಿದ್ದಾರೆ. ಇಷ್ಟೆಲ್ಲ ಗೊಂದಲ ಆಗಿದ್ದೇಕೆ? ನಿಜಕ್ಕೂ ಬಡತನ ಪ್ರಮಾಣ ಕಡಿಮೆ ಆಗಿದೆಯೇ? ಈ ಕುರಿತ ಸಮೀಕ್ಷೆಗಳು ಏನು ಹೇಳುತ್ತವೆ? ಆರ್ಥಿಕ ತಜ್ಞರು ಏನು ಹೇಳುತ್ತಾರೆ?

ಇತ್ತೀಚಿನ ದಿನಗಳಲ್ಲಿ ಬಡತನ ಹಾಗೂ ಅಸಮಾನತೆ ತುಂಬಾ ಸುದ್ದಿ ಮಾಡುತ್ತಿವೆ. ದಿನಪತ್ರಿಕೆಗಳ ಮುಖಪುಟಗಳಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿವೆ. ಪತ್ರಿಕೆಗಳು ಸಂಪಾದಕೀಯ ಬರೆಯುತ್ತಿವೆ. ತರಹೇವಾರಿ ವಿಶ್ಲೇಷಣೆಗಳು ಪ್ರಕಟಗೊಳ್ಳುತ್ತಿವೆ. 'ಬಡತನ ನಿರ್ಮೂಲನವಾಗಿದೆ' ಅಂತ ಒಂದು ಸುದ್ದಿ ಹೇಳಿದರೆ. 'ಬಡತನದ ಪ್ರಮಾಣದಲ್ಲಿ ಎಂದೂ ಇಲ್ಲದ ಹೆಚ್ಚಳ' ಅಂತ ಮತ್ತೊಂದು ಸುದ್ದಿ ಹೇಳುತ್ತದೆ. ಒಂದೊಂದು ಅಧ್ಯಯನಗಳು ಒಂದೊಂದು ಬಗೆಯ ತೀರ್ಮಾನಕ್ಕೆ ಬರುತ್ತಿವೆ. ಯಾಕೆ ಇಷ್ಟೊಂದು ವೈಪರೀತ್ಯ?

ಕಾರಣ ತುಂಬಾ ಸರಳ. ಅಧ್ಯಯನಕ್ಕೆ ಅವು ಬಳಸಿರುವ ಕ್ರಮಗಳು ಬೇರೆ-ಬೇರೆ. ಹಾಗೆಯೇ, ಅವುಗಳು ಬಳಸುತ್ತಿರುವ ಅಂಕಿ-ಅಂಶಗಳೂ ಬೇರೆ-ಬೇರೆ. ಹಾಗಾಗಿ, ಸ್ವಾಭಾವಿಕವಾಗಿಯೇ ತೀರ್ಮಾನಗಳೂ ಬೇರೆ-ಬೇರೆ ಇರಲೇಬೇಕು. ಈ ಮೊದಲು ಬಡತನದ ಪ್ರಮಾಣವನ್ನು ಲೆಕ್ಕ ಹಾಕುವುದಕ್ಕೆ, ಸಾಮಾನ್ಯವಾಗಿ ನ್ಯಾಷನಲ್ ಸ್ಯಾಂಪ್ಲಿಂಗ್ ಸರ್ವೇ ಆರ್ಗನೈಸೇಷನ್ (ಎನ್‌ಎಸ್‌ಎಸ್‌ಒ) ನಡೆಸುತ್ತಿದ್ದ ಕನ್ಸ್ಯೂಮರ್ ಎಕ್ಸ್‌ಪೆಂಡಿಚರ್ ಸರ್ವೆ (ಸಿಇಎಸ್) ಅಂದರೆ, ಬಳಕೆದಾರರ ಖರ್ಚಿನ ಸಮೀಕ್ಷೆಯನ್ನು ಬಳಸಲಾಗುತ್ತಿತ್ತು. ಆದರೆ, ಸರ್ಕಾರ 2011-12ರ ನಂತರ ಅಂತಹ ವರದಿ ಪ್ರಕಟಿಸಿಲ್ಲ. 2017ರಲ್ಲಿ ನಡೆಸಿದ ಸಮೀಕ್ಷೆಯ ವರದಿಯನ್ನು ತಡೆಹಿಡಿದಿದೆ. ಆಮೇಲೆ ಯಾವುದೇ ಸಮೀಕ್ಷೆಯನ್ನೂ ನಡೆಸಿಲ್ಲ. ಹಾಗಾಗಿ, ಸಂಶೋಧಕರು ತಮ್ಮದೇ ಆದ ಕ್ರಮಗಳನ್ನು ಬಳಸಿ ಬಡತನದ ದರ ಹಾಗೂ ಪ್ರಮಾಣವನ್ನು ಅಂದಾಜು ಮಾಡುತ್ತಿದ್ದಾರೆ. ಸ್ವಾಭಾವಿಕವಾಗಿಯೇ ವ್ಯತ್ಯಾಸಗಳು ಕಾಣಿಸುತ್ತಿವೆ. ಈ ಅಧ್ಯಯನಗಳನ್ನು ಗಮನಿಸಿದರೆ ಇರುವ ಸಮಸ್ಯೆ ಅರ್ಥವಾಗುತ್ತದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ಜಾಗತಿಕ ಬ್ಯಾಂಕಿನ (ವರ್ಲ್ಡ್ ಬ್ಯಾಂಕ್) ಸಂಶೋಧಕರು ನಡೆಸಿರುವ ಅಧ್ಯಯನಗಳು ಸುಮಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವು ಭಾರತದ ಜನಸಂಖ್ಯೆಯಲ್ಲಿ ಬಡವರ ಪ್ರಮಾಣ ಕಡಿಮೆಯಾಗಿದೆ ಎಂದು ವರದಿ ಮಾಡಿವೆ. ಜಾಗತಿಕ ಬ್ಯಾಂಕಿನ ಸಂಶೋಧಕರು ನಡೆಸಿರುವ ಅಧ್ಯಯನದ ಪ್ರಕಾರ, ಭಾರತದಲ್ಲಿ ಪ್ರತಿದಿನ 1.9 ಡಾಲರಿಗಿಂತ ಕಡಿಮೆ ವರಮಾನ ಇರುವವರ ಸಂಖ್ಯೆ 2011ರಲ್ಲಿ ಶೇಕಡ 22.5 ಇತ್ತು. 2019ರಲ್ಲಿ ಅದು ಶೇಕಡ 10.2ಕ್ಕೆ ಇಳಿದಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಒಂದು ಸಂಶೋಧಕರ ತಂಡದ ಅಧ್ಯಯನವು, ಭಾರತದಲ್ಲಿ ಬಡತನ ನಿರ್ಮೂಲ ಆಗಿಬಿಟ್ಟಿದೆ, ಕೊರೋನ ಪಿಡುಗಿನ ಸಮಯದಲ್ಲೂ ಅದು ಅಂತಹ ಏರಿಕೆಯನ್ನು ಕಂಡಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಆದರೆ, ಇನ್ನೂ ಕೆಲವು ಅಧ್ಯಯನಗಳು ಈ ಆವಧಿಯಲ್ಲಿ ಬಡತನ ತೀವ್ರವಾಗಿದೆ, ಬಡವರ ಸಂಖ್ಯೆ ಹೆಚ್ಚಾಗಿದೆ ಎಂದು ಅಂದಾಜು ಮಾಡಿವೆ.

Image
Poverty Rate in India 5
ಸಾಂದರ್ಭಿಕ ಚಿತ್ರ

ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ಸಂಶೋಧಕರು ಎರಡು ಸಂಶೋಧನೆಗಳನ್ನು ಪ್ರಕಟಿಸಿದ್ದಾರೆ. ಅವುಗಳ ಪ್ರಕಾರ, ಕೋವಿಡ್‌ನ ಮೊದಲ ಅಲೆಯೊಂದೇ 230 ಮಿಲಿಯನ್ ಜನರನ್ನು ನಿರ್ಗತಿಕರನ್ನಾಗಿ ಮಾಡಿದೆ. ಎಸ್ ಸುಬ್ರಮಣ್ಯ ಅವರ ಅಧ್ಯಯನದ ಪ್ರಕಾರ, 2011-12ರಲ್ಲಿ ಶೇಕಡ 31ರಷ್ಟು ಇದ್ದ ಬಡತನ 2017-18ರ ವೇಳೆಗೆ ಶೇಕಡ 35ರಷ್ಟು ಆಗಿದೆ. ಅವರು ಈ ಅವಧಿಯಲ್ಲಿ ಬಡವರ ಸಂಖ್ಯೆ 52 ಮಿಲಿಯನ್‌ಗಳಷ್ಟು ಹೆಚ್ಚಾಗಿದೆ ಎಂದು ಅಂದಾಜು ಮಾಡಿದ್ದಾರೆ. ಸಂತೋಷ್ ಮೆಹರೋತ್ರ ಹಾಗೂ ಜಜತಿ ಪರಿದ ಅವರು ತಮ್ಮ ಅಧ್ಯಯನದಲ್ಲಿ, 2011-12ರಲ್ಲಿ ಶೇಕಡ 22 ಇದ್ದ ಬಡವರ ಸಂಖ್ಯೆ 2019-20ರಲ್ಲಿ ಶೇಕಡ 26ರಷ್ಟಾಗಿದೆ ಎಂದು ಅಂದಾಜು ಮಾಡಿದ್ದಾರೆ.

ಸರ್ಕಾರದ ಕನ್ಸ್ಯೂಮರ್ ಎಕ್ಸ್‌ಪೆಂಡಿಚರ್ ಸರ್ವೆ, ಅಂದರೆ, ಜನರು ಮಾಡುವ ಖರ್ಚಿಗೆ ಸಂಬಂಧಿಸಿದಂತೆ ಕೊನೆಯ ಸಮೀಕ್ಷೆ ನಡೆದದ್ದು 2017-18ರಲ್ಲಿ. ಆದರೆ, ಸರ್ಕಾರ ಆ ಸಮೀಕ್ಷೆಯನ್ನು ಪ್ರಕಟಿಸಲಿಲ್ಲ. ವರದಿಯ ಕೆಲವು ಭಾಗ ಸೋರಿಕೆಯಾಗಿ ಅಲ್ಲಿ-ಇಲ್ಲಿ ಪ್ರಕಟವಾಗಿದೆ. ಕೆಲವರು ತಮ್ಮ ಅಧ್ಯಯನಕ್ಕೆ 2011-12ರಲ್ಲಿ ಸರ್ಕಾರ ಪ್ರಕಟಿಸಿದ್ದ ಅಂಕಿ-ಅಂಶಗಳನ್ನು ಬಳಸಿಕೊಂಡಿದ್ದಾರೆ. ಇನ್ನು ಕೆಲವರು ಸೋರಿಕೆಯಾದ 2017-18ರ ಅಂಕಿ-ಅಂಶಗಳನ್ನು ಬಳಸಿಕೊಂಡಿದ್ದಾರೆ. ಅದಕ್ಕೆ ಇನ್ನಿತರ ಮೂಲಗಳಿಂದ ದೊರೆಯುವ ಇತ್ತೀಚಿನ ಅಂಕಿ-ಅಂಶಗಳನ್ನು ಬಳಸಿಕೊಂಡು ಪರಿಷ್ಕರಿಸಿ, ಇಂದಿನ ಪರಿಸ್ಥಿತಿಯನ್ನು ಅಂದಾಜು ಮಾಡುವ ಪ್ರಯತ್ನ ಮಾಡಿದ್ದಾರೆ.

ಉದಾಹರಣೆಗೆ, ಎಸ್ ಸುಬ್ರಮಣ್ಯ ಅವರು ಈ ಸೋರಿಕೆಯ ಅಂಕಿ-ಅಂಶವನ್ನು ಬಳಸಿಕೊಂಡು ಬಡತನದ ಪ್ರಮಾಣವನ್ನು ಅಂದಾಜು ಮಾಡಿದ್ದಾರೆ. ಅವರ ಅಂದಾಜಿನ ಪ್ರಕಾರ, ಬಡತನದ ಪ್ರಮಾಣ ಅವರ ಅಧ್ಯಯನದ ಅವಧಿಯಲ್ಲಿ ಶೇಕಡ ನಾಲ್ಕರಷ್ಟು ಹೆಚ್ಚಾಗಿದೆ. ಸಂತೋಷ್ ಮೆಹರೋತ್ರ ಮತ್ತು ಜಜತಿ ಪರಿದ ಅವರ ಅಧ್ಯಯನ ಕೂಡ, ಬಡವರ ಸಂಖ್ಯೆ ಹೆಚ್ಚಾಗಿದೆ ಅಂತಲೇ ಹೇಳುತ್ತದೆ. ಅವರು ಲೇಬರ್ ಫೋರ‍್ಸ್ ಸರ್ವೆಯಲ್ಲಿ, ಜನರ ಬಳಕೆಗೆ ಸಂಬಂಧಿಸಿದಂತೆ ದೊರೆಯುವ ಮಾಹಿತಿಯನ್ನು ಬಳಸಿಕೊಂಡು ಬಡತನದ ಪ್ರಮಾಣದ ಅಂದಾಜು ಮಾಡಿದ್ದಾರೆ. ಅವರ ಅಧ್ಯಯನದ ಪ್ರಕಾರ, 2011-20ರ ಅವಧಿಯಲ್ಲಿ ಬಡವರ ಸಂಖ್ಯೆ 78 ಮಿಲಿಯನ್‌ನಷ್ಟು ಜಾಸ್ತಿ ಆಗಿದೆ. 

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಅಧ್ಯಯನವು ಎನ್‌ಎಸ್‌ಒ ಸಮೀಕ್ಷೆಯಲ್ಲಿ ಸಿಗುವ ಬಳಕೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಬಳಸಿಕೊಂಡಿದೆ. ಈ ಅಧ್ಯಯನ ಮಾಡಿರುವ ಸುರ್ಜಿತ್ ಭಲ್ಲ, ಅರವಿಂದ್ ವಿರಮನಿ ಹಾಗೂ ಕರನ್ ಭಾಸಿನ್, ಬಡತನದ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಇದು ಭಲ್ಲ ಅವರ ಹಿಂದಿನ ಪ್ರಕಟಣೆಯ ಮಾದರಿಯಲ್ಲೇ ಇದೆ. ಅದೇ ವಿಧಾನವನ್ನು ಬಳಸಿದ್ದಾರೆ, ತೀರ್ಮಾನವೂ ಸುಮಾರಾಗಿ ಅದೇ ಇದೆ. ಭಲ್ಲ ಅವರ ಪ್ರಕಾರ, ಬಳಕೆದಾರರ ಖರ್ಚಿನ ಸಮೀಕ್ಷೆಗಳು (ಸಿಇಎಸ್) ಬಳಕೆಯ ಖರ್ಚಿನ ಅಂದಾಜನ್ನು ಸರಿಯಾಗಿ ತಿಳಿಸುವುದಿಲ್ಲ. ಹಾಗಾಗಿ, ಬಡತನದ ಲೆಕ್ಕಾಚಾರಕ್ಕೆ ಅದು ಯೋಗ್ಯವಲ್ಲ. ಸಿಇಎಸ್ ಕುರಿತಂತೆ ಭಲ್ಲ ಅವರು ಈ ಅಧ್ಯಯನದಲ್ಲೂ ಅದೇ ನಿಲುವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಸರ್ಕಾರ 2017-18ರ ಸಮೀಕ್ಷೆಯ ವರದಿಯನ್ನು ತಡೆಹಿಡಿದಿರುವುದನ್ನು ಅವರು ಸರಿ ಎಂದು ಸಮರ್ಥಿಸುತ್ತಾರೆ. ಅದರ ಬದಲು ಅವರು ರಾಷ್ಟ್ರೀಯ ಅಕೌಂಟ್ಸ್‌ನ ಅಂತಿಮ ಖಾಸಗಿ ಖರ್ಚಿನಲ್ಲಿ (PFCE) ದೊರೆಯುವ ಅಂಕಿ-ಅಂಶವನ್ನು ಬಳಸುತ್ತಾರೆ. ಸಿಇಎಸ್ ಹಾಗೂ ಪಿಎಫ್‌ಸಿಇ ಅಂದಾಜಿನಲ್ಲಿ ವ್ಯತ್ಯಾಸ ಇರುವುದು ತಿಳಿದ ವಿಷಯ. ಇದು ಭಾರತಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ಜಗತ್ತಿನ ಎಲ್ಲೆಡೆಯಲ್ಲೂ ಇದನ್ನು ಕಾಣಬಹುದು.

Image
Poverty Rate in India 4
ಸಾಂದರ್ಭಿಕ ಚಿತ್ರ

ಇದನ್ನು ಓದಿದ್ದೀರಾ?: ಸುದ್ದಿ ಪ್ಲಸ್ | ತನಗೆ ತೊಂದರೆ ಮಾಡಿಕೊಳ್ಳದೆ ರಷ್ಯಾಗೆ ತೊಂದರೆ ಕೊಡಲು ಅಮೆರಿಕಗೆ ಅಸಾಧ್ಯ

ಮತ್ತೊಬ್ಬ ಅರ್ಥಶಾಸ್ತ್ರಜ್ಞರಾದ ಹಿಮಾಂಶು ಅವರು ಗುರುತಿಸುವಂತೆ, ಪಿಎಫ್‌ಸಿಇ ಮಾಡಿರುವ ಅಂದಾಜಿನಲ್ಲಿ ವಿಭಿನ್ನ ಬಗೆಯ ಕುಟುಂಬಗಳಿಗೆ ಸಂಬಂಧಿಸಿದಂತೆ ಬಳಕೆಯ ವಿವರ ಸಿಗುವುದಿಲ್ಲ. ಬಡತನದ ಲೆಕ್ಕಾಚಾರ ಹಾಕುವಾಗ ಆ ವಿವರ ಅವಶ್ಯವಾಗಿ ಬೇಕು. ಆ ಸಮೀಕ್ಷೆಯಲ್ಲಿ ನಿಮಗೆ ಸಿಗುವುದು ಒಟ್ಟಾರೆಯಾಗಿ ರಾಷ್ಟ್ರ ಮಟ್ಟದ ಮೊತ್ತಗಳ ಅಂದಾಜು. ಅದರಲ್ಲಿ ಪಟ್ಟಣ, ಗ್ರಾಮ, ರಾಜ್ಯಗಳಿಗೆ ಸಂಬಂಧಿಸಿದ ಮಾಹಿತಿಗಳು ಪ್ರತ್ಯೇಕವಾಗಿ ಸಿಗುವುದಿಲ್ಲ. ಹಾಗಾಗಿ, ಎಲ್ಲರೂ ಭಲ್ಲ ಅವರಾಗಲೀ ಅಥವಾ ಇನ್ಯಾರೇ ಆಗಲಿ, ಸಿಇಎಸ್ ಸಮೀಕ್ಷೆಯನ್ನೇ ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಇವರು ಸಿಇಎಸ್ ಸಮೀಕ್ಷೆಯನ್ನು ದೋಷಪೂರ್ಣ ಎಂದು ತಿರಸ್ಕರಿಸಿದರೂ, ಆ ಸಮೀಕ್ಷೆ ಮಾಡಿರುವ ಕುಟುಂಬದ ಶ್ರೇಣೀಕರಣವನ್ನೇ ಬಳಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, 2011-12ರ ಸಮೀಕ್ಷೆಯನ್ನು ಒಪ್ಪಿಕೊಳ್ಳುತ್ತಾರೆ. ತಮಾಷೆಯೆಂದರೆ, ಅಲ್ಲಿ ಬಳಸಿರುವ ಸ್ಯಾಂಪ್ಲಿಂಗ್ ಕ್ರಮ, ಪರಿಕಲ್ಪನೆಗಳನ್ನೇ 2017-18ರಲ್ಲಿ ನಡೆಸಿರುವ ಸಮೀಕ್ಷೆಯಲ್ಲೂ ಬಳಸಿರುವುದು. ಅಷ್ಟೇ ಅಲ್ಲ, ಎರಡೂ ಸಮೀಕ್ಷೆಯನ್ನು ನಡೆಸಿರುವ ಸಂಸ್ಥೆಯೂ ಒಂದೇ. ಆದರೂ ಅವರಿಗೆ ಅದು ದೋಷಪೂರ್ಣ ಅನಿಸುತ್ತದೆ. 

ಪಿಎಫ್‌ಸಿಇ ಅಂದಾಜನ್ನು ಬಳಿಸಿಕೊಂಡು ಎನ್‌ಎಸ್‌ಎಸ್ ಸಮೀಕ್ಷೆಯ ಅಂದಾಜನ್ನು ಪರಿಷ್ಕರಿಸಿ, ಇಂದಿನ ಬಡತನದ ಪ್ರಮಾಣವನ್ನು ಅಂದಾಜು ಮಾಡುವ ಕ್ರಮ ಹೊಸದೇನಲ್ಲ. ಆದರೆ, ಹಾಗೆ ಮಾಡುವುದು ಸರಿಯಾದ ಕ್ರಮವಲ್ಲ ಅನ್ನುವುದು ಪರಿಣತರ ಅಭಿಪ್ರಾಯ. ಹಿಮಾಂಶು ಹೇಳುವಂತೆ, “ಈ ಎರಡೂ ಅಂದಾಜುಗಳನ್ನು ಹೋಲಿಸುವುದಕ್ಕೆ ಸಾಧ್ಯವಿಲ್ಲ, ಯಾಕೆಂದರೆ, ಎರಡೂ ಸಮೀಕ್ಷೆಗಳ ವಿನ್ಯಾಸ, ಬಳಸಿರುವ ಕ್ರಮ ಸಂಪೂರ್ಣ ಬೇರೆ.” ಈ ಕ್ರಮವನ್ನು ಭಾರತದಲ್ಲಾಗಲೀ ಅಥವಾ ಇನ್ನೆಲ್ಲೇ ಆಗಲಿ ಬಳಸುತ್ತಿಲ್ಲ. ಹಾಗಾಗಿಯೇ, ಭಲ್ಲ ಅವರ ತೀರ್ಮಾನವನ್ನು ಹಲವರು ತಿರಸ್ಕರಿಸುತ್ತಾರೆ.  

ಜಾಗತಿಕ ಬ್ಯಾಂಕಿನ ಸಂಶೋಧಕರು ಕೂಡ ಭಲ್ಲ ಅವರ ವಿಧಾನವನ್ನು ಒಪ್ಪುವುದಿಲ್ಲ. ಅವರ ಅಧ್ಯಯನವೂ ಬಡತನ ಇಳಿಮುಖವಾಗಿದೆ ಎನ್ನುತ್ತದೆ. ಅವರು ತಮ್ಮ ಅಧ್ಯಯನಕ್ಕೆ 'ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ' ನಡೆಸುವ ಕುಟುಂಬಗಳ ಬಳಕೆಯ ಪಿರಮಿಡ್ಡಿನ ಸಮೀಕ್ಷೆಯಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಇಲ್ಲಿ ಬಳಕೆಯಾಗಿರುವ ಕ್ರಮದ ಬಗ್ಗೆಯೂ ಸಾಕಷ್ಟು ಟೀಕೆಗಳಿವೆ. 

Image
Poverty Rate in India 7
ಸಾಂದರ್ಭಿಕ ಚಿತ್ರ

ಬಡತನದ ಪ್ರಮಾಣದ ಬಗ್ಗೆ ತುಂಬಾ ಭಿನ್ನಾಭಿಪ್ರಾಯ ಇದ್ದರೂ, ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಸಹಮತವೂ ಇದೆ. ಹೀಗೆ ಸಹಮತ ಇರುವ ಅಂಶಗಳು ಕೂಡ ಮಹತ್ವದ ಅಂಶಗಳೇ. ಅವುಗಳನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಕೆಲವು ಸಮಾನ ಅಂಶಗಳನ್ನು ಸ್ಥೂಲವಾಗಿ ಕೆಳಗೆ ಕೊಡಲಾಗಿದೆ.

1. 2004-2014ರ ಯುಪಿಎ ಸರ್ಕಾರದ ಅವಧಿಗೆ ಹೋಲಿಸಿದರೆ, ಎನ್‌ಡಿಎ ಆಳ್ವಿಕೆಯಲ್ಲಿ ಅದರಲ್ಲೂ, ಕಳೆದ ಏಳು ವರ್ಷಗಳಲ್ಲಿ ಬಡತನದ ಇಳಿಕೆಯ ವೇಗ ಕಮ್ಮಿಯಾಗುತ್ತಿದೆ ಎನ್ನುವುದನ್ನು ಎಲ್ಲ ಅಧ್ಯಯನಗಳು ಒಪ್ಪಿಕೊಳ್ಳುತ್ತವೆ. ಭಲ್ಲ ಪ್ರಕಾರ, ಯುಪಿಎ ಸರ್ಕಾರದ ಆಳ್ವಿಕೆಯಲ್ಲಿ ಪ್ರತೀ ವರ್ಷ 26 ಮಿಲಿಯನ್ ಜನ ಬಡತನದ ರೇಖೆಯಿಂದ ಹೊರಕ್ಕೆ ಬರುತ್ತಿದ್ದರು. ಆದರೆ, ಎನ್‌ಡಿಎ ಆಳ್ವಿಕೆಯಲ್ಲಿ ಪ್ರತೀ ವರ್ಷ ಅದರ ಮೂರನೇ ಒಂದು ಭಾಗ ಅಂದರೆ, 8.6 ಮಿಲಿಯನ್ ಜನ ಬಡತನದ ರೇಖೆಯಿಂದ ಹೊರಬರುತ್ತಿದ್ದಾರೆ. ಜಾಗತಿಕ ಬ್ಯಾಂಕಿನ ಅಂದಾಜು ಸುಮಾರಾಗಿ ಇದರ ಆಸುಪಾಸಿನಲ್ಲೇ ಇದೆ. ಅಂದರೆ, ಬಡತನ ಕಡಿಮೆ ಆಗುತ್ತಿರುವ ದರ ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಈಗ ಸಾಕಷ್ಟು ನಿಧಾನವಾಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. 

2. ಬಡತನದ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆಯೂ ಒಮ್ಮತವನ್ನು ಕಾಣಬಹುದು. ಯುಪಿಎ ಆಳ್ವಿಕೆಯ ಕಾಲದಲ್ಲಿ ಜಾರಿಯಲ್ಲಿದ್ದ ನರೇಗ, ಆಹಾರ ಸುರಕ್ಷಾ ಕಾಯ್ದೆ, ಸಾರ್ವಜನಿಕ ಪಡಿತರ ಪದ್ಧತಿ ಇವೆಲ್ಲ ಬಡತನದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ ಎಂಬುದು ಕೂಡ ಎಲ್ಲರೂ ಒಪ್ಪಿಕೊಂಡಿರುವ ಅಂಶ. ಅಂದರೆ, ಬಡತನ ನಿವಾರಣೆಗೆ ಸಾಮಾಜಿಕ ಸುರಕ್ಷಣಾ ಕ್ರಮಗಳನ್ನು ಬಲಗೊಳಿಸುವುದು ಅವಶ್ಯ ಅನ್ನುವುದರ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಹಾಗಾಗಿ, ಆಹಾರ ಮತ್ತು ಸುರಕ್ಷಾ ಯೋಜನೆಗಳಿಗೆ ಸರ್ಕಾರ ಹೆಚ್ಚೆಚ್ಚು ಹಣ ಹೂಡಬೇಕು ಅನ್ನುವುದರಲ್ಲಿ ಗೊಂದಲವಿದ್ದಂತಿಲ್ಲ. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಇದು ತುರ್ತಾಗಿ ಆಗಬೇಕಾಗಿದೆ.

3. ಈ ಎಲ್ಲ ಅಧ್ಯಯನಗಳು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆ ಅಂದರೆ, ಸೂಕ್ತ ಅಂಕಿ-ಅಂಶಗಳ ಕೊರತೆ. ಹಾಗಾಗಿ, ಸರಿಯಾದ ಅಂಕಿ-ಅಂಶಗಳನ್ನು ನೀಡಬಲ್ಲ ಸಾಂಖ್ಯಿಕ ವ್ಯವಸ್ಥೆಯನ್ನು ಬಲಗೊಳಿಸಬೇಕು ಅನ್ನುವುದು ಕೂಡ ಸ್ಪಷ್ಟ. ಜೊತೆಗೆ, ಸರ್ಕಾರ ಅದರಲ್ಲಿ ಹಸ್ತಕ್ಷೇಪ ಮಾಡಬಾರದು. ಹಿಮಾಂಶು ಅವರು ಹೇಳುವಂತೆ, “ಬಡತನ ಮತ್ತು ಅಸಮಾನತೆ ನಿವಾರಣೆಗೆ ಯಾವ ನೀತಿಗಳನ್ನು ರೂಪಿಸಬೇಕು, ಯಾವುದು ಪರಿಣಾಮಕಾರಿಯಾಗಬಲ್ಲದು ಮುಂತಾದುವೆಲ್ಲ ಕೇವಲ ಶೈಕ್ಷಣಿಕ ವಿಚಾರಗಳಲ್ಲ. ಬಡತನ ನಿವಾರಣೆಯ ಉದ್ದೇಶಕ್ಕೆ ನಿಖರವಾದ ನೀತಿಗಳನ್ನು ರೂಪಿಸುವುದು ಮತ್ತು ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಸಿಇಎಸ್ ಸಮೀಕ್ಷೆಯನ್ನು ಆದಷ್ಟು ಬೇಗ ನಡೆಸಬೇಕು. ಬಡತನದ ಪ್ರಮಾಣವನ್ನು ಲೆಕ್ಕ ಮಾಡಲು ಅಂದರೆ, ಬಡತನ ರೇಖೆಯನ್ನು ನಿರ್ಧರಿಸಲು ಅಳತೆಗೋಲನ್ನು ನಿರ್ಧರಿಸಬೇಕು.” ಆಗಷ್ಟೇ ಈ ವಿವಾದಗಳು ಬಗೆಹರಿಯುತ್ತವೆ. ಆಗಷ್ಟೇ ದೇಶದ ದೃಢ ಆರ್ಥಿಕತೆಗೆ ಬೇಕಾದ ನೀತಿಗಳನ್ನು ರೂಪಿಸುವುದಕ್ಕೆ ಸಾಧ್ಯ.

ಅರ್ಥಶಾಸ್ತ್ರಜ್ಞ ಹಿಮಾಂಶು ಅವರ ವಿಶ್ಲೇಷಣೆ ಆಧರಿಸಿದ ಬರಹ
ನಿಮಗೆ ಏನು ಅನ್ನಿಸ್ತು?
1 ವೋಟ್