ಪಠ್ಯಪರಿಷ್ಕರಣೆ ವಿವಾದ| ಕಿವುಡಾದ ಮುಖ್ಯಮಂತ್ರಿ: ನಾಗರಾಜ್‌ ಹರಪನಹಳ್ಳಿ

Bommai

ಹಿಂದುತ್ವದ ರಾಷ್ಟ್ರೀಯವಾದದಲ್ಲಿ ಬಹುತ್ವಕ್ಕೆ ಸ್ಥಾನವಿಲ್ಲ. ಅಲ್ಲಿ ದೇಶ ಮುಖ್ಯ. ‌ದೇಶದ ದುಡಿಯುವ ಜನರಲ್ಲ ; ಒಂದು ಜನಾಂಗ, ಒಂದು ಭಾಷೆ. ಒಂದೇ ಸಂಸ್ಕೃತಿ.‌ ಹೀಗೆ ಒಂದನ್ನು ಮಾತ್ರ ಮುನ್ನೆಲೆಗೆ ತಂದು,‌ ಹಲವರನ್ನು ಮೆಟ್ಟಿಲಾಗಿಸಿ‌ ತುಳಿಯುವುದು, ಒಂದು ಧರ್ಮ ‌ಮಾತ್ರ ಶ್ರೇಷ್ಠ. ಉಳಿದವು ಎರಡನೇ ದರ್ಜೆ, ಮೂರನೇ ದರ್ಜೆ ಎಂದು ಭಾವಿಸುವುದು

ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಪ್ರೌಢ  ಶಾಲಾ ಶಿಕ್ಷಣದ ಪಠ್ಯ ಪರಿಷ್ಕರಣೆ ಸಂಗತಿ ದೊಡ್ಡ ವಿವಾದವಾಗಿದೆ. ಇದಕ್ಕೆ ಕಾರಣರಾದವರು ಏನೇನೋ ಸಮರ್ಥನೆ ಮಾಡಿಕೊಳ್ಳಲು ಹೋಗಿ ನಗೆಪಾಟಲಿಗೆ ಈಡಾಗಿದ್ದಾರೆ‌. ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರ ಶೈಕ್ಷಣಿಕ ಅರ್ಹತೆಯೇ ಬಹುದೊಡ್ಡ ಪ್ರಶ್ನೆಯಾಗಿದೆ. ಇವರು ಏನು ಕಲಿತಿದ್ದಾರೆ ಎಂಬ ಕುತೂಹಲ ರಾಜ್ಯದ ವಿದ್ಯಾರ್ಥಿ ಪೋಷಕರಿಗಿದೆ‌. ಆದರೆ ಆತನ ಸಮರ್ಥನೆಗೆ ರಾಜ್ಯದ ಕನ್ನಡ ದೃಶ್ಯ ವಾಹಿನಿಯೊಂದರ ವೆಬ್ ನ್ಯೂಸ್ ಮಾಹಿತಿ ಪ್ರಕಟಿಸಿದೆ. ಪರೋಕ್ಷವಾಗಿ ಆತನ ಸಮರ್ಥನೆಗೆ ಸಹ ಇಳಿದಿದೆ. ಆತ ನಾಡಿನ ಪತ್ರಿಕೆಗಳಿಗೆ ಅಂಕಣ ಬರೆದಿದ್ದಾನೆ. ಪುಸ್ತಕ ಪ್ರಕಟಿಸಿದ್ದಾನೆ. ಐಐಟಿ ಮತ್ತು ಸಿಇಟಿ ಕಲಿಯುವವರಿಗೆ ತರಬೇತಿ ಕೊಟ್ಟಿದ್ದಾನೆ ಎಂದು ವಾದಕ್ಕೆ ಇಳಿದಿದೆ. ಗಣಿತದಲ್ಲಿ ಪರಿಣಿತ ಎಂಬ ಬಿರುದನ್ನು ಸಹ ದಯಪಾಲಿಸಿದೆ.

ಹಿಂದುತ್ವದ ರಾಷ್ಟ್ರೀಯವಾದದಲ್ಲಿ ಬಹುತ್ವಕ್ಕೆ ಸ್ಥಾನವಿಲ್ಲ. ಅಲ್ಲಿ ದೇಶ ಮುಖ್ಯ. ‌ದೇಶದ ದುಡಿಯುವ ಜನರಲ್ಲ ; ಅಲ್ಲಿ ಒಂದು ಜನಾಂಗ, ಒಂದು ಭಾಷೆ . ಒಂದೇ ಸಂಸ್ಕೃತಿ.‌ ಹೀಗೆ ಒಂದನ್ನು ಮಾತ್ರ ಮುನ್ನೆಲೆಗೆ ತಂದು,‌ ಹಲವರನ್ನು ಮೆಟ್ಟಿಲಾಗಿಸಿ‌ ತುಳಿಯುವುದು. ಮತ್ತು ಒಂದು ಧರ್ಮ ‌ಮಾತ್ರ ಶ್ರೇಷ್ಠ. ಉಳಿದವು ಎರಡನೇ ದರ್ಜೆ, ಮೂರನೇ ದರ್ಜೆ ಎಂದು ಭಾವಿಸುವುದು. ಹಾಗೂ 600 ವರ್ಷದ ಹಿಂದಿನ ಇತಿಹಾಸಕ್ಕೆ ಪ್ರಸ್ತುತ ಅವರ ಜನಾಂಗದ‌ ಮೇಲೆ‌ ದ್ವೇಷ ಕಾರುವುದು,‌ ಅವರ ಊಟ,‌ ಬಟ್ಟೆ,‌ ಪ್ರಾರ್ಥನಾ ಮಂದಿರಗಳನ್ನು ‌ಗುರಿಯಾಗಿಸಿ ಗುಲ್ಲೆಬ್ಬಿಸುವುದು,‌ ತುಚ್ಛವಾಗಿ ಕಾಣುವುದು ನಡೆದಿದೆ.‌ ಇದಕ್ಕೆ ಪೂರಕ ಪಠ್ಯ ಇಟ್ಟು ಶಾಶ್ವತ ದ್ವೇಷ ಬಿತ್ತನೆಯೇ ಸದ್ಯದ ಪಠ್ಯ ಪರಿಷ್ಕರಣೆಯ ನಾಟಕವಾಗಿದೆ.

ಲಜ್ಜೆಯೇ ಇಲ್ಲದ ಪಠ್ಯ ಪುಸ್ತಕ ಪರಿಷ್ಕರಣೆ ಅಧ್ಯಕ್ಷ
ʼಶಬ್ದಲಜ್ಜೆʼ ಎಂಬ ಮಾತು ಕನ್ನಡ ಸಾಹಿತ್ಯದಲ್ಲಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರು ವಚನ ಸಾಹಿತ್ಯ ಅರಿತಿದ್ದರೆ, ಹೀಗೆ ಆಡುತ್ತಿರಲಿಲ್ಲ. ಅವರ ಹಿನ್ನೆಲೆ ವಚನ ಸಾಹಿತ್ಯ , ಚಳವಳಿ ಹಾಗೂ ದುಡಿದು ತಿನ್ನುವ ಸಿದ್ಧಾಂತಕ್ಕೆ ವಿರುದ್ಧವಾದದ್ದು. ಹಾಗಾಗಿ ಇನ್ನು ಒಂದೆಜ್ಜೆ ಮುಂದೆ ಹೋಗಿ ತಮ್ಮ ಪಠ್ಯ ಪಾಂಡಿತ್ಯವನ್ನು ತುರುಕಿ, ಇಂತಹ ಸ್ಥಿತಿ ಕರ್ನಾಟಕ ಪ್ರಾಥಮಿಕ ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿದೆ ಎಂದು ಪಕ್ಕದ ರಾಜ್ಯಗಳು ಆಡಿಕೊಳ್ಳುವಂತೆ ಮಾಡಿದ್ದಾರೆ. ಹಾಲಿ ಸರ್ಕಾರದ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರು, 'ಪೋಷಕರು ಪಠ್ಯವನ್ನು ಪ್ರಶ್ನಿಸಿಲ್ಲ. ಬರುತ್ತಿರುವ ಪ್ರತಿಭಟನೆ ಚಿಕ್ಕದು. ಅದನ್ನು ವಿರೋಧಿಸುವವರು ಒಂದು ಪಕ್ಷದ ಸಮರ್ಥಕರು ಹಾಗೂ ಆ ಪಕ್ಷದ ಸಿದ್ಧಾಂತಗಳ ಮೇಲೆ ನಿಂತವರು' ಎಂದಿದ್ದಾರೆ. ಹಾಗಾದರೆ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರು ಒಂದು ಪಕ್ಷದ ಸಮರ್ಥಕರಲ್ಲವೆ? ಆಳುವ ಪಕ್ಷದ ಸಿದ್ಧಾಂತದ ಪ್ರಬಲ ಪ್ರತಿರೂಪ ಅಲ್ಲವೇ? ಆ ಬಗ್ಗೆ ಅವರು ತಮ್ಮನ್ನು ತಾವು ಬಗೆದು ಆಳಕ್ಕೆ ಇಳಿಯಬಲ್ಲರೇ?

Image
Nagesh Rohith

ತನ್ನದು ಮಾತ್ರ ಶ್ರೇಷ್ಠ ಎಂಬ ಅಹಂಕಾರದಿಂದ ತಾನೇ ಪಠ್ಯದಲ್ಲಿ ಬ್ರಾಹ್ಮಣ್ಯವನ್ನು ತುರುಕಿದ್ದು ಹಾಲಿ ಪರಿಷ್ಕರಣೆಯ ಸಮಿತಿ? ಕುವೆಂಪು ದೇವನೂರರ ಪರಿಚಯದಲ್ಲೂ ಸಹ ಜಾತಿ ದ್ವೇಷವನ್ನು ಅಕ್ಷರ ರೂಪದಲ್ಲಿ ಕಾಣಿಸಿಕೊಂಡದ್ದು? ನಾರಾಯಣಗುರು ಮತ್ತು ವಿವೇಕಾನಂದರನ್ನು ಪಠ್ಯದಿಂದ‌ ಕೈ ಬಿಡುವ ಅತೀ ಬುದ್ಧಿವಂತಿಕೆ ತೋರಿದ್ದು. ಹಿಂದುತ್ವದ ರಾಷ್ಟ್ರೀಯವಾದದ ಅಜೆ‌ಂಡಾ ಹೇರುವುದನ್ನು ಜಾತಿ ಮೇಲರಿಮೆಯ ಅತೀ ಜಾಣತನ ಪ್ರಯೋಗಿಸಿದ್ದು ?

ಸರಕಾರ ತಮ್ಮದು. ಸಿಎಂ ನಮ್ಮ ಮರ್ಜಿಯಲ್ಲಿದ್ದಾರೆಂದು ಪಠ್ಯದಿಂದ ವಚನಗಳನ್ನು ಕೈಬಿಡುವುದು, ಹೆಡಗೇವಾರರನ್ನು ಪರಮ ದೇಶಭಕ್ತ ರಾಷ್ಟ್ರೀಯವಾದಿ ಎಂದು ಬಿಂಬಿಸಲು ಪ್ರಯತ್ನಿಸಿದ್ದು, ಸ್ತ್ರೀ ವಿರೋಧಿ, ಪುರುಷಾಹಂಕಾರದ ಬನ್ನಂಜೆ ಗೋವಿಂದಚಾರ್ಯರ ಸನಾತನ ಪ್ರಭ ಬಿತ್ತರಿಸಿ, ಹಿಂದುಳಿದ, ಶೂದ್ರ, ದಲಿತ ಮಕ್ಕಳ ಮೇಲೆ ಪುರೋಹಿತ ಶಾಹಿ ಸಿದ್ಧಾಂತ ಹೇರುವುದು ಯಾವ ಸಾಧನೆಗಾಗಿ ಎಂದು ಸರ್ಕಾರ ನೇಮಿಸಿದ ಸೋಕಾಲ್ಡ್ ಶಿಕ್ಷಣ ತಜ್ಞ ಹೇಳಬೇಕು‌.

ಜನ ಬೀದಿ ಬೀದಿಯಲ್ಲಿ ಪ್ರಶ್ನಿಸುವ ದಿನಗಳು ಬರಲಿವೆ ಎಂಬುದನ್ನು ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರು ಊಹಿಸಿರಲಿಲ್ಲ ಪಾಪ. ಹಿಂದು ಧರ್ಮದ ಉದ್ಧಾರಕರು, ಸದ್ಯ ಅಂಬೇಡ್ಕರ್ ಪಾಠ ಪಠ್ಯಕ್ಕೆ ಕೈಹಚ್ಚಿಲ್ಲ. ಅದು ಸುಡುವ ಬೆಂಕಿ ಎಂಬ ಎಚ್ಚರವಿದೆ. ಆದರೆ ಲಂಕೇಶ್, ಸಾರಾ ಅಬೂಬಕ್ಕರ್, ಪಾಪದ ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಮಗ್ಗದ ಸಾಹೇಬ), ಎ.ಎನ್.ಮೂರ್ತಿರಾಯರು, ಒಗಟುಗಳು ಇವುಗಳಿಗೆ ಮಾತ್ರ ಕೈ ಹಚ್ಚಿ ಸೇಡು ತೀರಿಸಿಕೊಳ್ಳಲಾಗಿದೆ. ಇದನ್ನು ಸೋಕಾಲ್ಡ್ ಶಿಕ್ಷಣ ತಜ್ಞನ ತೀಟೆ ತೀರಿಸಿಕೊಳ್ಳುವಿಕೆ ಎನ್ನಬಹುದು.

ಸೋಶಿಯಲ್ ಮೀಡಿಯಾದ ಮೂರನೇ ದರ್ಜೆಯ ಒಬ್ಬ ಬರಹಗಾರನನ್ನು ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನನ್ನಾಗಿಸಿದ್ದೇ ಈ ನಾಡಿನ‌ ದೊಡ್ಡ ದುರಂತ. ಅಷ್ಟೇ ಅಲ್ಲದೆ ಇಂಥ ವ್ಯಕ್ತಿಯ ಸಮರ್ಥನೆಗೆ ಶಿಕ್ಷಣ ಸಚಿವರು ಇಳಿದದ್ದು ಸ್ವಯಂ ಆತ್ಮಘಾತುಕತನ ಎನ್ನದೆ ವಿಧಿಯಿಲ್ಲ. ಆಳುವ ಸರ್ಕಾರದ ಅಹಂಕಾರ ಸ್ವಯಂ ನಾಶಕ್ಕೆ ಬೇಕಾದ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿರುವುದು ಒಂದು ವಿಷಾದ ವ್ಯಂಗ್ಯದಂತಿದೆ.

ದ್ವೇಷಕ್ಕೂ ಒಂದು ಮಿತಿ ಬೇಕು

ಹಾಲಿ ಸರ್ಕಾರದ ಮಾಜಿ ಸಚಿವರೊಬ್ಬರು ಮಾಧ್ಯಮಗಳ ಎದುರು ಜಿನ್ನಾ ಅವರ ಪಠ್ಯ ಇಡಬೇಕಿತ್ತಾ ಎಂದಿದ್ದಾರೆ‌. (ಪುರಾಣವನ್ನು ಇತಿಹಾಸ ಮಾಡುವುದು, ಇತಿಹಾಸವನ್ನು ಕಸದ ಬುಟ್ಟಿಗೆ ಹಾಕುವುದು ನಾಗಪುರ ಅಜೆಂಡಾದಲ್ಲಿ ನಡೆದು ಕೊಂಡೇ ಬಂದಿದೆ). ಈ ಮಾಜಿ ಸಚಿವರ ಮಾತಲ್ಲೇ ಸತ್ಯ ಒಂದು ಹೊರಬಿದ್ದಿದೆ. ಈಗ ಇಟ್ಟಿರುವ ಪಠ್ಯ ಬಿಜೆಪಿ ಸಿದ್ಧಾಂತ ಪ್ರಚೋದಿತ, ಪ್ರತಿಪಾದಿತ ಅಜೆಂಡಾದ ಭಾಗ ಎಂದು ಅವರು ಒಪ್ಪಿಕೊಂಡಂತಾಗಿದೆ. ಮಾತಾಡುವಾಗ ನಾವು ಏನು ಪ್ರಸೆಂಟ್ ಮಾಡುತ್ತಿದ್ದೇವೆ ಎಂದು ಅರಿಯದಷ್ಟು ಕನ್ನಡಿಗರು ಮುಠ್ಠಾಳರಲ್ಲ. ನಾಲಿಗೆಯಲ್ಲಿ ವಿಷ ತುಂಬಿಕೊಂಡವರು ಸರ್ಕಾರವನ್ನು ಕುಣಿಸಿದರೆ ಆಗಬಾರದ್ದು ಆಗುತ್ತದೆ.

ಕರ್ನಾಟಕ ಮತ್ತು ಕನ್ನಡಕ್ಕೆ ವಚನ ಪರಂಪರೆ ಇದೆ‌. ಅದು ಸೌಹಾರ್ದವನ್ನು, ಕಾಯಕವನ್ನು ಉಸಿರಾಡಿದೆ ಎಂಬುದನ್ನು ಸರ್ಕಾರದ ಸುತ್ತ‌ ಇರುವ ನೊಣಗಳು ಮರೆತಿವೆ. ಕವಿರಾಜ ಮಾರ್ಗದಲ್ಲೇ 'ಕಸವರಮೆಂಬುದು ನೆರೆ ಸರೈಸಲಾರ್ಪೋಡೆ ಪರ ವಿಚಾರಮಮಂ, ಪರಧರ್ಮಮಂ' (ಕನ್ನಡಿಗರ ಬಂಗಾರದಂಥ ಗುಣವೆಂದರೆ ಪರರ ಧರ್ಮವನ್ನು, ಪರರ ವಿಚಾರವನ್ನು ಸಹಿಸುವುದು, ಕೇಳುವುದು, ಸಹನೆಯಿಂದ ಆಲಿಸುವುದು' ಎನ್ನುತ್ತಾನೆ ಕವಿರಾಜ ಮಾರ್ಗದ ಕವಿ ಶ್ರೀವಿಜಯ). ಇದನ್ನು ಮುನ್ನೆಲೆಗೆ ತರದ ಮುಠ್ಠಾಳ ಸರ್ಕಾರ ಮಾತ್ರ ದುರಂತ ಕೃತ್ಯಕ್ಕೆ ಕೈಹಾಕುತ್ತದೆ ಅಷ್ಟೇ.

ಹಾಗೆ ಮಾಡಲೇ ಬೇಕೆಂದರೆ ಬಲಪಂಥೀಯರಲ್ಲಿ ಕೆಲ ಜೀವಪರ ಸಾಹಿತಿಗಳು, ಅಕ್ಷರ ತಜ್ಞರು, ಬಿಜೆಪಿಗೆ ಚುನಾವಣಾ ಪ್ರಣಾಳಿಕೆ ಸಾಹಿತ್ಯ ಬರೆದು ಕೊಡುವವರು, ಬಿಜೆಪಿ ಸರ್ಕಾರಕ್ಕೆ, ಸಚಿವ ನಾಗೇಶಗೆ ಸಿಗುತ್ತಿದ್ದರು. ಆದರೆ ಅಷ್ಟು ತಾಳ್ಮೆ ಸರ್ಕಾರಕ್ಕೆ ಉಳಿದಿಲ್ಲ. ಅದಕ್ಕೆ ಇರುವ ತುರ್ತು ಮಕ್ಕಳ ಮನಸ್ಸಲ್ಲಿ ದ್ವೇಷ ಬಿತ್ತುವುದು ಮಾತ್ರ. ಚುನಾವಣಾ ವರ್ಷಕ್ಕೆ ಮುನ್ನ ತನ್ನ ಅಜೆಂಡಾ ಜಾರಿ ಮಾಡುವ ಅವಸರ ಇತ್ತು. ಸರ್ವಜನಾಂಗದ ತೋಟ ನಾಶ ಮಾಡುವುದು‌ ಮತ್ತೊಂದು ಅಜೆಂಡಾ.

ಬಿಜ್ಜಳನ ಸ್ಥಿತಿ ಮುಖ್ಯಮಂತ್ರಿಗಳದ್ದು

ನಮ್ಮ ಸಿಎಂ ಬಸವಣ್ಣನ ಪರಂಪರೆಯವರು ಎಂದು ಹೇಳಲಾಗುತ್ತದೆ. ಅವರು ಈಚೆಗೆ ಬಸವನ (ಎತ್ತು ಆಕಳ) ಪೂಜೆ ಮಾಡ್ತಿರುತ್ತಾರೆ. ಮೂಕ ಪ್ರಾಣಿ ಅಂದರೆ ಇಷ್ಟ ಅವರಿಗೆ. ಆದರೆ ಅವರು ಬಸವಣ್ಣನ ನಡೆ ನುಡಿ ಮರೆತದ್ದು ದುಃಖಕರ. ಅವರೂ ಸಹ ಮೂಕ ಪ್ರಾಣಿಯಂತಾದುದು ವಿಷಾದನೀಯ. ಒಬ್ಬ ಮುಖ್ಯಮಂತ್ರಿಗೆ ತನ್ನ ಸುತ್ತ ಮುತ್ತ ಯಾರಿದ್ದಾರೆ, ಏನಾಗುತ್ತದೆ ಎಂಬುದು ಅರಿಯದಿದ್ದರೆ ಅಥವಾ ಸನ್ನಿವೇಶಕ್ಕೆ ಕುರುಡಾದರೆ 12ನೇ ಶತಮಾನದಲ್ಲಿದ್ದ ಬಿಜ್ಜಳನ ಸ್ಥಿತಿ ಅನುಭವಿಸಬೇಕಾಗುತ್ತದೆ.

ಇದನ್ನು ಓದಿದ್ದೀರಾ?: ಪಠ್ಯಪರಿಷ್ಕರಣೆ| ಚಕ್ರತೀರ್ಥ ಕತ್ತರಿ ಹಾಕಿದರೂ ಬರಗೂರು ಪಠ್ಯವನ್ನೇ ಒಪ್ಪಿದ ಸಿಬಿಎಸ್‌ಸಿ

ಕೇವಲ ಅಧಿಕಾರವೇ ಮುಖ್ಯವಾಗಿ, ಜನರ ಆಶೋತ್ತರ ಹಿನ್ನೆಲೆಗೆ ಸರಿದರೆ, ಸರ್ಕಾರದ ಪತನದ ದಿನಗಳು ಸಮೀಪಿಸಿವೆ ಎಂದೇ ಅರ್ಥ. ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್. ಆರ್.ಬೊಮ್ಮಾಯಿ ಅವರಿಗಿದ್ದ ಎಂ.ಎನ್‌. ರಾಯ್ ಸಿದ್ಧಾಂತದ ಪ್ರಭಾವ, ಸಾಹಿತ್ಯದ ಸೊಗಡು ಒಂಚೂರಾದರೂ ಬಸವರಾಜ ಬೊಮ್ಮಾಯಿಗೆ ಇದ್ದಿದ್ದರೆ, ಕನಿಷ್ಠ ಪಕ್ಷ, ಶಿಕ್ಷಣ ಕ್ಷೇತ್ರದಲ್ಲಿ ಕೇಸರೀಕರಣ‌ ಸುಳಿಯಲು ಬಿಡುತ್ತಿರಲಿಲ್ಲ. ದುರಂತ ಅಂದರೆ ಬೊಮ್ಮಾಯಿ ಸುತ್ತ ಬಿಜ್ಜಳನ‌ ಕಾಲದ ಪುರೋಹಿತಶಾಹಿ ದಂಡು ಮುತ್ತಿಕೊಂಡಿದೆ. ಹಾಗಾಗಿ ಮುಖ್ಯಮಂತ್ರಿ ಇನ್ನೂ  ದೇವನೂರು, ಬರಗೂರು, ಹಂಪನಾ ಪ್ರಶ್ನೆಗೆ, ಉತ್ತರಿಸಿಲ್ಲ. ಹಿಂದೆ ಜಾರಿಯಲ್ಲಿದ್ದ ಬರಗೂರು ಸಮಿತಿ ಪಠ್ಯ ಉಳಿಸಿಕೊಂಡರೆ,‌ ಒಂದು ವಿವಾದಕ್ಕೆ ಮುಕ್ತಾಯ ಹಾಡಿದಂತೆ‌. ಅದರೆ ಸರ್ಕಾರ ತನಗೆ ಏನೂ ಕೇಳಿಸಿಯೇ ಇಲ್ಲ ಎಂಬ ಮೊಂಡುತನ ತೋರುತ್ತಿದೆ. ಹಿಂದುತ್ವದ ಕೊರಳ ಸುತ್ತಿಗೆ ಮುಖ್ಯಮಂತ್ರಿ ಬಲಿಯಾಗುತ್ತಿದ್ದಾರೆ‌.

ಪಠ್ಯ ವಿವಾದ ನಾಡಿನ ವೈವಿಧ್ಯ ಮತ್ತು ಬಹುತ್ವದ ಸಂಸ್ಕೃತಿಯ ಪ್ರತೀಕ.‌ ಈ ಸೂಕ್ಷ್ಮ ಅರಿಯದೆ ಹೋದರೆ ಭಾಷೆ ಹೆಸರಲ್ಲಿ ನಡೆವ ಕಿಚ್ಚು, ಪಠ್ಯ ಅಳವಡಿಕೆ ವಿಷಯದಲ್ಲಿ ಸಹ ಆಗಲಿದೆ. 'ಆರ್ಯ ವರ್ಸಸ್ ದ್ರಾವಿಡ ಪಠ್ಯ ಪರಿಷ್ಕರಣೆ' ಎಂಬ ಹೊಸ ಕಿಡಿ ನಾಳೆ ಬೆಂಕಿಯಾಗಿ ರಾಜ್ಯ ಆಳುವವರನ್ನು ಬಲಿ ತೆಗೆದುಕೊಂಡರೆ ಅಚ್ಚರಿಪಡಬೇಕಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್