ದೆಹಲಿ ರೈತ ಹೋರಾಟ | ಎರಡನೇ ವರ್ಷದ ನೆನಪಿನಲ್ಲಿ ರೈತ ಚಳವಳಿಯಿಂದ ಕಲಿಯಬೇಕಾದ ಪಾಠಗಳು

ದೆಹಲಿ ರೈತ ಹೋರಾಟ

ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೇನೆಂದರೆ, ಈ ಚಳವಳಿ ಪ್ರಾರಂಭವಾದಾಗ ಇದೇ ಸರ್ಕಾರದ ಪ್ರತಿನಿಧಿಗಳು ಚಳವಳಿ ನಡೆಸುತ್ತಿರುವವರು ರೈತರೇ ಅಲ್ಲಾ ಎಂದಿದ್ದರು. ಈಗ ಕಾಯ್ದೆಗಳ ಕುರಿತು ರೈತರಿಗೆ ಅರ್ಥಮಾಡಿಸುವಲ್ಲಿ ನಾವು ಸೋತಿದ್ದೇವೆ ಎನ್ನುವ ಮೂಲಕ ಚಳವಳಿ ನಡೆಸಿದವರು “ರೈತರು” ಎಂಬುದನ್ನು ಆಳುವ ಸರ್ಕಾರ ಒಪ್ಪಿಕೊಂಡಿತು

ಜಗತ್ತಿನ ಗಮನ ಸೆಳೆದು, ನಿರಂತರವಾಗಿ ಒಂದು ವರ್ಷಗಳ ಕಾಲ ಮುನ್ನಡೆದು ಯಶಸ್ವಿಯಾದ ದೆಹಲಿಯ ಗಡಿಭಾಗಗಳಲ್ಲಿ ನಡೆದ ದೆಹಲಿ ರೈತ ಚಳವಳಿಗೆ ಈಗ ಎರಡು ವರ್ಷಗಳ ನೆನಪು.

ಇತಿಹಾಸದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ ಈ ಹೋರಾಟ 2020 ನವೆಂಬರ್ 26 ರಂದು ದೆಹಲಿಗೆ ಪ್ರವೇಶ ಪಡೆಯುವ ರಾಷ್ಟೀಯ ಹೆದ್ದಾರಿಗಳ ಗಡಿಗಳಲ್ಲಿ ಪ್ರಾರಂಭವಾಯಿತು. ಈ ರೈತ ಚಳವಳಿ 2021 ಡಿಸೆಂಬರ್ 11ರಂದು ಸ್ಥಗಿತಗೊಂಡಿದೆ. ಜೂನ್ 2020ರಲ್ಲಿ ಸುಗ್ರೀವಾಜ್ಞೆಯ ಮೂಲಕ ತಂದ, ನಂತರ ಸೆಪ್ಟಂಬರ್ 2020ರಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ರೀತಿಯಲ್ಲಿ ಸಂಸತ್ತಿನಲ್ಲಿ ಚರ್ಚಿಸದೇ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು.

ಸತತ 12 ತಿಂಗಳ ಧೀರೋದ್ದಾತ ಹೋರಾಟಕ್ಕೆ ಮಣಿದ ಸರ್ಕಾರ “ಈ ಕಾಯ್ದೆಯನ್ನು ರೈತರಿಗೆ ಅರ್ಥ ಮಾಡಿಸುವಲ್ಲಿ ನಾವು ಸೋತಿದ್ದೇವೆ” ಎಂದು ಹೇಳುವ ಮೂಲಕ ಮತ್ತೆ ಯಾವುದೇ ರೀತಿಯ ಚರ್ಚೆಗೂ ಅವಕಾಶವನ್ನು ಕಲ್ಪಿಸದೆ ಸಂಸತ್ತಿನಲ್ಲಿ ಮೂರೂ ಕೃಷಿ ಕಾಯ್ದೆಗಳನ್ನು ಕೆಲವೇ ನಿಮಿಷಗಳಲ್ಲಿ ವಾಪಸ್ ಪಡೆಯಿತು.

ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೇನೆಂದರೆ, ಈ ಚಳವಳಿ ಪ್ರಾರಂಭವಾದಾಗ ಇದೇ ಸರ್ಕಾರದ ಪ್ರತಿನಿಧಿಗಳು ಚಳವಳಿ ನಡೆಸುತ್ತಿರುವವರು ರೈತರೇ ಅಲ್ಲಾ ಎಂದಿದ್ದರು. ಈಗ ಕಾಯ್ದೆಗಳ ಕುರಿತು ರೈತರಿಗೆ ಅರ್ಥ ಮಾಡಿಸುವಲ್ಲಿ ನಾವು ಸೋತಿದ್ದೇವೆ ಎನ್ನುವ ಮೂಲಕ ಚಳವಳಿ ನಡೆಸಿದವರು “ರೈತರು” ಎಂಬುದನ್ನು ಆಳುವ ಸರ್ಕಾರ ಒಪ್ಪಿಕೊಂಡಿತು.

ಈ ಜಯ ಚಳವಳಿಯ ಸಾಧನೆಗಳಲ್ಲಿ ಒಂದಾದರೆ, ಸಂಸದರ ಬಲದಿಂದ ಸಂಸತ್ತಿನಲ್ಲಿ, ನ್ಯಾಯಾಲಯಗಳಲ್ಲಿ ಅಥವಾ ಬೇರಾವ ದಾರಿಗಳ ಮೂಲಕವೂ ಸೋಲಿಸಲಾಗದ ಹಾಗೂ ಬೀದಿ ಚಳವಳಿ’ ಮೂಲಕ ಕೇಂದ್ರ ಸರ್ಕಾರವನ್ನು ಮಣಿಸಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆವಂತೆ ಮಾಡಿದ್ದು ಈ ರೈತ ಚಳವಳಿಯ ದೊಡ್ಡ ಸಾಧನೆ.

ಈ ರೈತ ಚಳವಳಿ ಹಲವು ರೀತಿಯ ಸಾಧನೆಗಳನ್ನು ಮಾಡುವ ಮೂಲಕ ಚಳವಳಿಯ ಇತಿಹಾಸದಲ್ಲೇ ಹೊಸ ರೀತಿಯ ಮಾದರಿಗಳನ್ನು ಹುಟ್ಟು ಹಾಕಿದೆ. ಕೆಲವು ಚಿಂತಕರು ವಿಶ್ಲೇಷಿಸುವ ರೀತಿಯಲ್ಲಿ ಇದು ಜಗತ್ತಿಗೆ ಶಾಂತಿ, ತಾಳ್ಮೆ ಮತ್ತು ಒಗ್ಗಟ್ಟಿನ ಗೆಲುವಿನ ಪಾಠವನ್ನು ಕಲಿಸಿದೆ.

ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳುವಂತೆ, “ಈ ಚಳವಳಿಯು ಅತ್ಯಂತ ದೊಡ್ಡ ಬಯಲು ವಿಶ್ವವಿದ್ಯಾಲಯವಾಗಿದ್ದು ಇಲ್ಲಿ ಪ್ರತಿ ದಿನ ಕಲಿಯಲು ಸಾವಿರಾರು ಜನ ವಿದ್ಯಾರ್ಥಿಗಳಾಗಿ ಬರುತ್ತಿದ್ದಾರೆ. ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬಂತೆ, ದೆಹಲಿಯ ಗಡಿಭಾಗಗಳಲ್ಲಿ ಚಳವಳಿ ನಿಂತಿದ್ದರೂ ಅದರ ಪ್ರಭಾವ, ಅದು ಹುಟ್ಟುಹಾಕಿದ ಮಾದರಿಗಳ ಕುರಿತು ದೇಶ ಮತ್ತು ಜಗತ್ತಿನಾದ್ಯಂತ ಪರ-ವಿರೋಧಿಗಳಿಬ್ಬರೂ ನಿರಂತರ ಚರ್ಚೆ ಮತ್ತು ಅಧ್ಯಯನದಲ್ಲಿ ತೊಡಗಿದ್ದಾರೆ."

Image
ರೈತ ಹೋರಾಟ

ಸಂಘಟಿಸಿದ ರೀತಿ, ಕೈಗೊಂಡ ಕ್ರಮಗಳು, ಅನುಸರಿಸಿದ ವಿಧಾನಗಳು

ಈ ಚಳವಳಿ ಕೇವಲ ಒಂದು ವರ್ಷದ ಹಿಂದೆ ಪ್ರಾರಂಭವಾದದ್ದಲ್ಲ, ಇದಕ್ಕೆ ತನ್ನದೇ ಆದ ಇತಿಹಾಸವಿದೆ. ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ 2018ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ʼಎಕ್ಸ್‌ಪ್ರೆಸ್‌ ಕಾರಿಡಾರ್ʼ ಯೋಜನೆಗಳಿಗಾಗಿ ರೈತರ ಸಾವಿರಾರು ಎಕ್ಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ “ಭೂಸ್ವಾಧೀನ ಕಾಯ್ದೆ ತಿದ್ದುಪಡಿ” ಕಾನೂನನ್ನು ವಿರೋಧಿಸಿ “ಭೂಮಿ ಅಧಿಕಾರ್ ಆಂದೋಲನ್” ಎಂಬ ಹೆಸರಿನಲ್ಲಿ ದೇಶಾದ್ಯಂತ ರೈತರ ಭೂಮಿ ಉಳಿಸಲು 300ಕ್ಕೂ ಹೆಚ್ಚು ರೈತ ಸಂಘಟನೆಗಳ ಜಂಟಿ ಚಳವಳಿ ಆರಂಭವಾಗಿತ್ತು.

ಅದರ ಮುಂದುವರೆದ ಭಾಗವಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟ ಕೃಷಿ ಕಾಯ್ದೆಗಳ ಮುನ್ಸೂಚನೆ ಮತ್ತು ಈ ಪ್ರದೇಶದ ಗೋಧಿಯನ್ನು ಖರೀದಿಸಿ ಅದನ್ನು ಶೇಖರಿಸಿಡಲು ಅದಾನಿ ಕಂಪನಿ ನಿರ್ಮಿಸುತ್ತಿದ್ದ ಬೃಹದಾಕಾರದ ಗೋದಾಮುಗಳನ್ನು ನೋಡಿ ದಿಗ್ಭ್ರಾಂತರಾದ ರೈತ ಸಮುದಾಯ ದೆಹಲಿ ಚಳವಳಿ ಪ್ರಾರಂಭವಾಗುವ ಒಂದು ವರ್ಷ ಮೊದಲೇ ಪಂಜಾಬ್ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿತ್ತು. 

ಕೇಂದ್ರ ಸರ್ಕಾರ ಜೂನ್ 2020 ರಲ್ಲಿ ಈ ಕಾಯ್ದೆಗಳ ಕುರಿತು ಸುಗ್ರೀವಾಜ್ಞೆ ಹೊರಡಿಸಿದ ಮೇಲೆ ರೈತರು ತಮ್ಮ ಅಹವಾಲುಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲು ದೆಹಲಿ ಕಡೆಗೆ ತಮ್ಮ ಹೆಜ್ಜೆಗಳನ್ನಾಕಿದರು. ಅದೇ ಸಂದರ್ಭದಲ್ಲಿ ಇಡೀ ದೇಶಾದ್ಯಂತ ಎಐಕೆಸಿಸಿ (ಆಲ್ ಇಂಡಿಯಾ ಕಿಸಾನ್ ಕರ‍್ಡಿನೇಷನ್ ಕಮಿಟಿ) ದೇಶದಾದ್ಯಂತ ವಿವಿಧ ಭಾಗಗಳಿಂದ ಕೇಂದ್ರದ ಈ ನೀತಿಯನ್ನು ವಿರೋಧಿಸಿ ಜಾಥಾಗಳನ್ನು ಸಂಘಟಿಸಿತ್ತು. ಆ ಜಾಥಾಗಳು 2020 ನವೆಂಬರ್ 26 ರಂದು ದೆಹಲಿಗೆ ತಲುಪುವಂತೆ ಯೋಜನೆ ರೂಪಿಸಲಾಗಿತ್ತು.

ದೆಹಲಿಯ ಗಡಿಗಳಿಗೆ ರೈತರು ತಲುಪುತ್ತಿದ್ದಂತೆ ಅವರನ್ನು ಐದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸ್ ಮತ್ತು ಪ್ಯಾರಾ ಮಿಲಿಟರಿ ಪಡೆಯನ್ನು ಬಳಸಿ ರೈತರ ಮೇಲೆ ದೌರ್ಜನ್ಯ ನಡೆಸಿ, ಲಾಠಿ ಚಾರ್ಜ್, ಜಲಫಿರಂಗಿ, ಅಶ್ರುವಾಯುಗಳನ್ನು ಸಿಡಿಸಿ ರೈತರನ್ನು ಓಡಿಸಲು ಕೇಂದ್ರ ಸರ್ಕಾರ ಯತ್ನಿಸಿತು. ಆದರೆ ರೈತರು ಬೇಡಿಕೆ ಈಡೇರಿಸಿಕೊಂಡೇ ಜೀವಂತವಾಗಿ ವಾಪಸ್ ಹೋಗುತ್ತೇವೆ ಇಲ್ಲದಿದ್ದರೆ ‘ಕದನ ಕಣ’ದಲ್ಲೇ ಪ್ರಾಣ ಅರ್ಪಿಸುತ್ತೇವೆ ಎಂಬ ದೃಢ ನಿರ್ಧಾರದೊಂದಿಗೆ ಚಳುವಳಿಗೆ ದುಮುಕಿದ್ದರು.

ಈ ಚಳವಳಿಯಲ್ಲಿ ಭಾಗವಹಿಸಿದವರು ತಮ್ಮ ಪ್ರಾಣ ಹೋದರೂ ಪರವಾಗಿಲ್ಲ, ಈ ಕೃಷಿ ಕಾಯ್ದೆಗಳು ವಾಪಸ್ ಮಾಡಿಯೇ ನಾವು ತೆರಳುತ್ತೇವೆ ಎನ್ನುವಷ್ಟು ಈ ಕಾಯ್ದೆಗಳ ಬಗ್ಗೆ ಪಂಜಾಬ್, ಹರಿಯಾಣ, ಮತ್ತು ಪಶ್ಚಿಮ ಉತ್ತರ ಪ್ರದೇಶ ರಾಜ್ಯದ ರೈತರಿಗೆ ಬಲವಾಗಿ ಅನಿಸಲು ಕೆಲವು ಕಾರಣಗಳಿವೆ.

Image
ರೈತ ಹೋರಾಟ

ಈ ಭಾಗದ ಬಹುತೇಕ ರೈತರು ಬೆಳೆಯುವುದು ಗೋಧಿ ಮತ್ತು ಭತ್ತವನ್ನ, ಈ ಗೋಧಿ, ಭತ್ತವನ್ನು ಸರ್ಕಾರಿ ಎಪಿಎಂಸಿಗಳ ಮೂಲಕವೇ ಎಲ್ಲವನ್ನೂ ಮಾರಾಟ ಮಾಡಲಾಗುತ್ತದೆ. ಒಮ್ಮೆ ಈ ಕೃಷಿ ಕಾಯ್ದೆಗಳ ಮೂಲಕ ಸರ್ಕಾರಿ ಎಪಿಎಂಸಿಗಳು ದುರ್ಬಲವಾಗಿ ಖಾಸಗೀ ಮಾರುಕಟ್ಟೆ ಪ್ರಾಬಲ್ಯವನ್ನು ಮೆರೆದರೆ ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ ಎಂಬುದು ರೈತರಿಗೆ ಖಾತ್ರಿಯಾಗಿತ್ತು.

ಅಲ್ಲದೆ, ರೈತ ಸಂಘಟನೆಗಳು ತಮ್ಮ ಸಂಘಟನಾ ಜಾಲವನ್ನು ಬಳಸಿ ಹಳ್ಳಿ-ಹಳ್ಳಿಗಳಲ್ಲಿ ಈ ಕಾಯ್ದೆಗಳ ಕರಾಳತೆಯನ್ನು ರೈತ ಸಮುದಾಯಕ್ಕೆ ಅರ್ಥ ಮಾಡಿಸುವ ಕೆಲಸವನ್ನು ಮಾಡಿದ್ದವು. ಈ ಕಾಯ್ದೆಗಳು ಜಾರಿಯಾದರೆ ನಾವುಗಳು ನೆಮ್ಮದಿಯಿಂದ ಕೃಷಿ ಮಾಡಿ ಬದುಕಲು ಸಾಧ್ಯವಿಲ್ಲ ಎನ್ನುವುದು ತಿಳಿವಳಿಕೆಯ ಮೂಲಕ ಗೊತ್ತಾದ ಮೇಲೆ ಅದನ್ನು ಬದಲಾಯಿಸಲು ಅವರು ದೃಢ ಸಂಕಲ್ಪ ತೊಟ್ಟರು. ಮಾತ್ರವಲ್ಲ ತಮ್ಮ ಕಾರ್ಯ ಕ್ಷೇತ್ರವನ್ನು ದೆಹಲಿಯ ಗಡಿಗಳಿಗೆ ವರ್ಗಾಯಿಸಿದರು.

ಕರ್ನಾಟಕದಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳೂ ಸೇರಿದಂತೆ ಯಡಿಯೂರಪ್ಪ ಸರ್ಕಾರ ಜಾರಿಗೆ ತಂದ “ಕರ್ನಾಟಕ ಭೂಧಾರಣಾ ಕಾಯ್ದೆ ತಿದ್ದುಪಡಿ 2020”, “ಜಾನುವಾರು ಹತ್ಯೆ ನಿಷೇಧ ಕಾಯ್ದೆ-2020”, “ಎಪಿಎಂಸಿ ತಿದ್ದುಪಡಿ ಕಾಯ್ದೆ-2020”ರ ಅಪಾಯಗಳನ್ನು ರೈತ ಸಮುದಾಯಕ್ಕೆ ಅರ್ಥಮಾಡಿಸುವ ಪ್ರಯತ್ನ ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ, ರೈತ ಸಂಘಟನೆಗಳ ನಾಯಕತ್ವದ ಹಂತಕ್ಕೆ ಮಾತ್ರ ಸೀಮಿತವಾದವು. ಸಾಮಾನ್ಯ ರೈತರ ಮಟ್ಟಕ್ಕೆ ತಲುಪಿ ಅವರನ್ನು ಪ್ರಭಾವಿಸಲು ವಿಫಲವಾಯಿತು. ಇದರಿಂದಾಗಿ ಈ ಕಾಯ್ದೆಗಳ ಕುರಿತು ಸರಿಯಾದ ತಿಳಿವಳಿಕೆ ಇಲ್ಲದ ರೈತರು ದೃಢ ಸಂಕಲ್ಪದಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರಾಜ್ಯದ ರೀತಿಯಲ್ಲಿ ಕರ್ನಾಟಕದ ಯಾವ ಚಳವಳಿಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲಿಲ್ಲ.

ದೆಹಲಿ ಹೋರಾಟದಲ್ಲಿ ರೈತರಿಗೆ ಜಾಗೃತಿ ಮೂಡಿಸಲು ಕೇವಲ ಭಾಷಣಗಳು ಮಾತ್ರವಲ್ಲದೆ, ಹಾಡುಗಳು, ನಾಟಕಗಳ ಮೂಲಕ ಸಾಂಸ್ಕೃತಿಕವಾಗಿಯೂ ಅವರನ್ನು ಮುಟ್ಟುವ ಕೆಲಸವನ್ನು ಮಾಡಲಾಯಿತು. ಒಂದು ಅಂದಾಜಿನ ಪ್ರಕಾರ ಪಂಜಾಬ್ ಮತ್ತು ಹಿಂದಿ ಭಾಷೆಯಲ್ಲಿ ಈ ಹೋರಾಟಕ್ಕೆಂದೇ ಸುಮಾರು 80ಕ್ಕೂ ಹೆಚ್ಚು ಹಾಡುಗಳು ರಚನೆಗೊಂಡಿದ್ದು, ಅವುಗಳನ್ನು ಆ ಭಾಗದ ಪ್ರಸಿದ್ದ ಗಾಯಕರು ಹಾಡಿದ್ದಾರೆ.

Image
ದೆಹಲಿ ರೈತರ ಹೋರಾಟಕ್ಕೆ ಎರಡು ವರ್ಷ

ಈ ಹಿಂದೆ ಕರ್ನಾಟಕದಲ್ಲಿ 80ರ ದಶಕರದಲ್ಲಿ ನಡೆದ ರೈತ ಮತ್ತು ದಲಿತ ಚಳವಳಿಯಲ್ಲಿ ಸಾಂಸ್ಕೃತಿಕ ಮಧ್ಯಪ್ರವೇಶ ನಡೆದದ್ದು ಬಿಟ್ಟರೆ (ಸಮುದಾಯ ಸಾಂಸ್ಕೃತಿಕ ಸಂಘಟನೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಿತ್ತು) ಆನಂತರದ ದಿನಗಳಲ್ಲಿ ಚಳವಳಿಗಳಲ್ಲಿ ಸಾಂಸ್ಕೃತಿಕ ಒಳನೋಟದ ಶೂನ್ಯ ಆವರಿಸಿದೆ. ಇಡೀ ದೆಹಲಿ ಗಡಿಗಳಲ್ಲಿನ ಚಳವಳಿಯನ್ನು ಸಂಯುಕ್ತ ಕಿಸಾನ್ ಮೋರ್ಚ (ಎಸ್‌ಕೆಎಂ) ಎಂಬ ವೇದಿಕೆಯ ಮೂಲಕ 547ಕ್ಕೂ ಹೆಚ್ಚು ಸಂಘಟನೆಗಳು ಸೇರಿ ನಿರ್ವಹಿಸಿದವು.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ರೈತ ಸಂಘಟನೆಗಳು ಆರಂಭಿಸಿದ ಈ ಹೋರಾಟವನ್ನು ದೇಶಾದ್ಯಂತ ವಿಸ್ತರಿಸಿ ಸರ್ಕಾರದ ಮೇಲೆ ಒತ್ತಡವನ್ನು ನಿರ್ಮಿಸಲು ಕಾರ್ಮಿಕರು, ಕೃಷಿ ಕೂಲಿಕಾರರು, ಮಹಿಳೆಯರು, ದಲಿತರು, ವಿದ್ಯಾರ್ಥಿ, ಯುವಜನ ಸಂಘಟನೆಗಳನ್ನು ಇದರ ಭಾಗವಾಗಿಸಲಾಯಿತು. ಈ ಎಲ್ಲರ ಸಹಕಾರದೊಂದಿಗೆ ಒಂದು ವರ್ಷದ ಅವಧಿಯಲ್ಲಿ ಮೂರು ಭಾರತ್ ಬಂದ್, ಹಲವು ರಾಷ್ಟ್ರಮಟ್ಟದ ಹೋರಾಟಗಳನ್ನು ಯಶಸ್ವಿಗೊಳಿಸಲಾಯಿತು. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಒಂದು ಪ್ರಯತ್ನ ನಡೆದಿದ್ದು, ಎಲ್ಲ ಹಂತಗಳಲ್ಲೂ ವ್ಯಾಪಕತೆಯನ್ನು ಪಡೆದುಕೊಳ್ಳಬೇಕಿದೆ.

ʼಅನ್ನದ ಋಣದಲ್ಲಿರುವರೆಲ್ಲ, ಋಣ ತೀರಿಸಲು ಈ ಹೋರಾಟದಲ್ಲಿ ಕೈಜೋಡಿಸಿ’ ಎಂದು ಕರೆ ಕೊಡಲಾಯಿತು. ಪಂಜಾಬ್, ಹರಿಯಾಣ ರಾಜ್ಯಗಳಲ್ಲಂತೂ ಈ ಹೋರಾಟ ಕೇವಲ ರೈತರ ಹೋರಾಟವಾಗಿ ಉಳಿಯಲಿಲ್ಲ. ಇದು ಇಡೀ ಪಂಜಾಬ್ ಜನತೆಯ, ಸಿಖ್ಖರ ಮತ್ತು ಜಾಟರ ಹೋರಾಟವಾಗಿ ಪರಿಣಮಿಸಿತು. ಅಲ್ಲಿ ರೈತರ ಪರ ಇರುವವರು, ಇಲ್ಲವೇ ರೈತರ ವಿರುದ್ದ ಇರುವವರು ಎಂದು ಇಡೀ ಜನ ಸಮುದಾಯವೇ ವಿಭಾಗವಾಯಿತು.

ಸಿಖ್ ಸಮುದಾಯದಲ್ಲಿ ಇರುವ ಸೇವಾ ಮನೋಭಾವ

ರೈತರ ಪರ ಇರುವ ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು, ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು, ಸಂಗೀತಗಾರರೆಲ್ಲರೂ ಚಳವಳಿ ಜೊತೆ ಗುರುತಿಸಿಕೊಂಡು ತಮ್ಮ ಕ್ಷೇತ್ರಗಳ ಮೂಲಕವೇ ಹೋರಾಟಕ್ಕೆ ಕಾಣಿಕೆಗಳನ್ನು ನೀಡಿದರು. ಕರ್ನಾಟಕದಂತಹ ರಾಜ್ಯಗಳಲ್ಲಿ ರೈತ ಚಳವಳಿಗಳು ನಡೆದರೆ ಅದರ ಬಗ್ಗೆ ಬೇರೆ ಕ್ಷೇತ್ರದ ಗಣ್ಯರು ಮಾತನಾಡದೇ ಇರುವುದು ಸಮಾಜದ ಮೇಲೆ ಈ ಚಳವಳಿಯ ಪ್ರಭಾವ ಮತ್ತು ಸರ್ಕಾರದ ಮೇಲೆ ಒತ್ತಡ ಉಂಟುಮಾಡುವಲ್ಲಿ ಹಿನ್ನಡೆಯಾಗಿದೆ. 

Image
ರೈತ ಹೋರಾಟ

ಮೂಲಭೂತವಾಗಿ ಸಿಖ್ ಸಮುದಾಯದಲ್ಲಿ ಇರುವ ಸೇವಾ ಮನೋಭಾವ ಇಡೀ ಚಳವಳಿಯಲ್ಲಿ ಎದ್ದು ಕಾಣುತ್ತಿತ್ತು. ರೈತರಾದಿಯಾಗಿ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ಸಿಖ್ ಸಮುದಾಯದ ಜನ, ಯುವಕರು, ಮಹಿಳೆಯರು, ಮಕ್ಕಳು, ವೃದ್ಧರೂ ಎಲ್ಲರೂ ಸೇವೆ ಮಾಡುವ ಸಲುವಾಗಿಯೇ ಇಲ್ಲಿಗೆ ಬರುತ್ತಿದ್ದರು. ತಮ್ಮ ಕೈಲಾದ ಸಹಾಯವನ್ನು ಮಾಡಿ ರೈತರಿಗೆ ಬೆಂಬಲವನ್ನು ಸೂಚಿಸಿ ಅವರಿಗೆ ಸ್ಪೂರ್ತಿ ನೀಡಿ ಹೋಗುತ್ತಿದ್ದರು.

ಒಂದು ವರ್ಷದ ಕಾಲ ದೆಹಲಿಯ ಐದು ಗಡಿಗಳಲ್ಲಿ ಬೀಡುಬಿಟ್ಟಿದ್ದ ಲಕ್ಷಾಂತರ ರೈತರಿಗೆ ಆಹಾರದ ವ್ಯವಸ್ಥೆ ಮಾಡುವುದೆಂದರೆ ಅದು ಸಾಮಾನ್ಯದ ಮಾತಲ್ಲ. ಬಹುತೇಕ ಒಂದೊಂದು ಗ್ರಾಮಗಳಿಂದ ಬಂದಿದ್ದ ರೈತರು ಗುಂಪುಗಳನ್ನು ಮಾಡಿಕೊಂಡು ಸ್ವತಃ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು. ಜೊತೆಗೆ ಸಾಮೂಹಿಕ ಭೋಜನಕ್ಕೆಂದು ಅಲ್ಲಲ್ಲಿ ಗುರುದ್ವಾರಗಳು ನಿರ್ಮಿಸಿದ ಲಂಗರ್‌ಗಳು ಇದ್ದವು. ದಿನದ 24 ಗಂಟೆಗಳೂ ಆಹಾರವನ್ನು ತಯಾರಿಸಿ ಬಂದವರಿಗೆ ಹೊಟ್ಟೆ ತುಂಬ ಅನ್ನವನ್ನು ನೀಡುತ್ತಿದ್ದರು.

ಇದುವರೆಗೂ ಗುರುದ್ವಾರಗಳನ್ನು ನಡೆಸಲು ಅಲ್ಲಿ ಉಚಿತ ಆಹಾರವನ್ನು ವಿತರಿಸಲು ಪಂಜಾಬಿನ ರೈತರು ಕೊಟ್ಟಿದ್ದ ಉದಾರ ಕೊಡುಗೆಯನ್ನು ಈ ರೈತ ಚಳವಳಿಯಲ್ಲಿ ಲಂಗರ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಗುರುದ್ವಾರಗಳು ರೈತರ ಋಣವನ್ನು ತೀರಿಸುವ ಕೆಲಸವನ್ನು ಮಾಡಿದವು. ಕರ್ನಾಟಕದಂತಹ ರಾಜ್ಯಗಳಲ್ಲಿ ರೈತರು ಬೆಳೆದ ಆಹಾರ ಧಾನ್ಯಗಳಿಂದಲೇ ತಮ್ಮ ಮಠಗಳನ್ನು ನಡೆಸುತ್ತಿರುವ ಮಠಾಧೀಶರು ಇಂತಹ ರೈತ ಚಳವಳಿಗಳು ನಡೆದಾಗ ಅಲ್ಲಿ ಉಚಿತ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡುವುದನ್ನು ಇದುವರೆಗೂ ನೋಡಿಲ್ಲ. ರಾಜ್ಯದ ಮಠಗಳು ಗುರುದ್ವಾರಗಳಿಂದ ಕಲಿಯಬೇಕಾದ್ದು ಸಾಕಷ್ಟಿದೆ.

ಚಳವಳಿಯ ಜೊತೆ ಕೃಷಿಯನ್ನೂ ನಿಭಾಯಿಸಿದ ಮಹಿಳೆಯರು

ಈ ಚಳವಳಿಗಳಲ್ಲಿ ಭಾಗವಹಿಸಿದ್ದವರಿಗೆ ಜಾತಿ ಪ್ರಜ್ಞೆಯನ್ನು ಮೀರಿದ “ನಾವೆಲ್ಲ ರೈತರು” ಎನ್ನುವ ವರ್ಗ ಪ್ರಜ್ಞೆ ಜಾಗೃತಗೊಂಡಿದೆ. ಸಿಖ್ ಮತ್ತು ಜಾಟರಲ್ಲಿ ಹಲವು ಪಂಗಡಗಳಿದ್ದರೂ ಅವರೆಲ್ಲ ಈ ಚಳವಳಿಯಲ್ಲಿ ಕೇವಲ ರೈತರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಕರ್ನಾಟಕದ ವಾಸ್ತವ ಪರಿಸ್ಥಿತಿಯೇ ಬೇರೆ. ದೇಶದ ಇತರೆ ರಾಜ್ಯಗಳಿಗಿಂತ ಒಂದು ಪಾಲು ಹೆಚ್ಚು ಎನ್ನುವಂತೆ ಇಲ್ಲಿ ಜಾತಿ ಪ್ರಜ್ಞೆ ಎಲ್ಲ ಹಂತಗಳಲ್ಲೂ ಜಾಗೃತವಾಗಿರುತ್ತದೆ.

Image
ದೆಹಲಿ ರೈತ ಚಳವಳಿಗೆ ಎರಡು ವರ್ಷ

ರಾಜ್ಯದಲ್ಲಿ ಅಂದಾಜು ಒಟ್ಟು 25 ಲಕ್ಷ ರೈತ ಕುಟುಂಬಗಳಿವೆ. ವೀರಶೈವ ಲಿಂಗಾಯತರು ಶೇ.30, ಒಕ್ಕಲಿಗರು (ರೆಡ್ಡಿ, ಬಂಟ್ಸ್, ಗೌಡ) ಶೇ.29, ಹಿಂದುಳಿದ ವರ್ಗ ಶೇ.14, ಬ್ರಾಹ್ಮಣರು ಶೇ.9, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಶೇ.8 ಅಲ್ಪಸಂಖ್ಯಾತರು ಮತ್ತು ಇತರೆ ವರ್ಗದವರು ಶೇ.9 ರಷ್ಟಿದ್ದಾರೆ. ಇವರೆಲ್ಲರೂ ತಮ್ಮ ತಮ್ಮ ಜಾತಿಯ ಅಸ್ಮಿತೆಗಳ ಆಧಾರದಲ್ಲಿ ಒಂದೊಂದು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದು, “ನಾವೆಲ್ಲರೂ ರೈತರು” ಎಂಬ ವರ್ಗ ಪ್ರಜ್ಞೆ ಇನ್ನೂ ಜಾಗೃತವಾಗಿಲ್ಲ. ವಿಷಯಾಧಾರಿತವಾಗಿ ಅಂತಹ ಜಾಗೃತಿ ಮೂಡಿಸುವ ಸವಾಲಿನ ಕೆಲಸವನ್ನು ರಾಜ್ಯದ ಎಲ್ಲ ರೈತ ಚಳವಳಿಗಳು ಒಕ್ಕೊರಲಿನಿಂದ ತಮ್ಮ ಎಲ್ಲ ಭಿನ್ನಾಬಿಪ್ರಾಯಗಳನ್ನು ಬದಿಗಿಟ್ಟು ಒಟ್ಟಿಗೆ ಕೆಲಸ ಮಾಡಬೇಕಾಗಿದೆ.

ಕೃಷಿ ಕೆಲಸಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುವವರು ರೈತ ಮಹಿಳೆಯರು ಮತ್ತು ಕೃಷಿ ಬಿಕ್ಕಟ್ಟಿಗೆ ಸಿಲುಕಿದಂತೆಲ್ಲ ಅದರ ನೇರ ಪರಿಣಾಮ ಮೊದಲು ರೈತ ಮಹಿಳೆಗೆ ತಟ್ಟುತ್ತದೆ. ಆದರೆ, ಕರ್ನಾಟಕದಂತಹ ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೈತ ಮಹಿಳೆಯರು ಅಷ್ಟೇ ಪ್ರಮಾಣದಲ್ಲಿ ರೈತ ಚಳವಳಿಗಳಲ್ಲಿ ಭಾಗವಹಿಸುವುದು ಕಂಡುಬರುವುದಿಲ್ಲ. ಇದೂ ಕೂಡ ರೈತ ಚಳವಳಿಗಳ ಮುಂದಿರುವ ಬಹು ದೊಡ್ಡ ಸವಾಲು.

ದೆಹಲಿಯ ಗಡಿಗಳಲ್ಲಿ ನಡೆದ ಚಳವಳಿಗಳಲ್ಲಿ ಭಾಗವಹಿಸಿದ್ದ ರೈತ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಮಾತ್ರವಲ್ಲದೆ, ಚಳವಳಿಯನ್ನೂ ನಿಭಾಯಿಸುತ್ತಾ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳನ್ನೂ ನಿಭಾಯಿಸುತ್ತಿದ್ದರು. ಇಂತಹ ಸಾಮರ್ಥ್ಯವಿರುವ ದೊಡ್ಡ ವಿಭಾಗವನ್ನು ನಾವು ಚಳವಳಿಯಿಂದ ದೂರವಿಟ್ಟರೆ ಆ ಚಳುವಳಿ ಯಶಸ್ವಿಯಾಗಲು ಸಾಧ್ಯವಿಲ್ಲ. ರಾಜ್ಯದ ರೈತ ಚಳವಳಿಗೆ ಲಿಂಗ ಸಂವೇದಿ ಕಣ್ಣೋಟದ ಅವಶ್ಯಕತೆ ಇದೆ.

ಇದರ ಜೊತೆಗೆ ದೆಹಲಿ ರೈತ ಚಳವಳಿಯಲ್ಲಿ ಗಮನಿಸಿದ ಇನ್ನೊಂದು ಅಂಶ, ಹೋರಾಟದಲ್ಲಿ  ಮನೆಯ ಯಜಮಾನ ಮಾತ್ರ ಭಾಗವಹಿಸುವ ಬದಲು ಇಡೀ ಕುಟುಂಬವನ್ನೇ ತೊಡಗಿಸುವುದು ವಿಶೇಷವಾಗಿತ್ತು. ಇದು ಚಳವಳಿಯನ್ನು ದೀರ್ಘಾವಧಿವರೆಗೆ ಮುಂದುವರೆಸಲು ಸಹಾಯ ಮಾಡುತ್ತದೆ. ಒಂದು ಚಳವಳಿಯನ್ನು ನಡೆಸಬೇಕಾದರೆ, ಅದರ ವಿರುದ್ಧ ಆಳುವ ವರ್ಗ ನಡೆಸುವ ಪಿತೂರಿ, ಸುಳ್ಳು ಸುದ್ದಿಗಳನ್ನು ಸಮರ್ಥವಾಗಿ ಎದುರಿಸಲು ಚಳುವಳಿಗೆ ತನ್ನದೇ ಆದ ಪ್ರಬಲ ಮಾಧ್ಯಮದ ಅವಶ್ಯಕತೆ ಇರುತ್ತದೆ ಎಂಬುದನ್ನು ದೆಹಲಿ ಗಡಿಗಳಲ್ಲಿ ನಡೆದ ರೈತ ಚಳವಳಿ ತೋರಿಸಿಕೊಟ್ಟಿದೆ.

ಪ್ರಮುಖವಾಗಿ ಪ್ರಧಾನ ಮಾಧ್ಯಮಗಳಿಂದ ಹಿಡಿದು ಸರ್ಕಾರದವರೆಗೆ ನಡೆಸಿದ ಎಲ್ಲ ರೀತಿಯ ಅಪಪ್ರಚಾರಗಳನ್ನು “ಸಾಮಾಜಿಕ ಮಾಧ್ಯಮಗಳು” ಮತ್ತು ತಮ್ಮದೇ ಆದ ಪತ್ರಿಕೆಗಳ ಮೂಲಕ ವ್ಯವಸ್ಥಿತವಾಗಿ ಹಿಮ್ಮೆಟ್ಟಿಸಲಾಗುತ್ತಿತ್ತು. ಸಂಯುಕ್ತ ಕಿಸಾನ್ ಮೋರ್ಚಾವು “ಕಿಸಾನ್ ಏಕ್ತಾ ಮೋರ್ಚ” ಹೆಸರಿನಲ್ಲಿ ಫೇಸ್ ಬುಕ್ ಪೇಜ್, ಯೂಟ್ಯೂಬ್ ಚಾನಲ್, ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸಪ್ ಗುಂಪುಗಳನ್ನು ರಚಿಸಿ ಕಾಲಕಾಲಕ್ಕೆ ನೈಜ ಸುದ್ದಿಗಳನ್ನು ಪ್ರತಿಭಟನಾ ನಿರತ ರೈತರಿಗೆ ಮತ್ತು ದೇಶದ ಜನತೆಗೆ ನೀಡಲಾಗುತ್ತಿತ್ತು.

Image
ರೈತರ ಹೋರಾಟಕ್ಕೆ ಎರಡು ವರ್ಷ

ಸತ್ಯದ ಪ್ರಚಾರಕ್ಕಾಗಿ ಪಂಜಾಬಿನ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನೊಳಗೊಂಡ ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗಿತ್ತು. ಹಾಗಾಗಿ ಯಾವುದೇ ಗೋದಿ ಮಾಧ್ಯಮಗಳು, ಸಚಿವರು ಎಷ್ಟೇ ಸುಳ್ಳು ಸುದ್ದಿಗಳನ್ನು ಹರಡಿದರೂ ಚಳವಳಿ ನಿರತ ರೈತರನ್ನು ದಾರಿತಪ್ಪಿಸಲು ಸಾಧ್ಯವಾಗಲಿಲ್ಲ. 

ಪ್ರಸಿದ್ದ ಅರ್ಥಶಾಸ್ತ್ರಜ್ಞ, ಜನಪರ ಚಿಂತಕ ಪ್ರೊ. ಪ್ರಭಾತ್ ಪಟ್ನಾಯಕ್‌, “ರೈತರು ಪ್ರದರ್ಶಿಸಿದ ಅಪ್ರತಿಮ ದೃಢನಿಶ್ಚಯದ ಎದುರಿನಲ್ಲಿ ಮೋದಿ ಸರ್ಕಾರವು ತಲೆಬಾಗಿತು ಎಂದು ಒಂದು ಮಟ್ಟದಲ್ಲಿ ಹೇಳಲಾಗುತ್ತಿದ್ದರೆ, ಮತ್ತೊಂದು ಮಟ್ಟದಲ್ಲಿ, ಇದನ್ನು ನವ ಉದಾರವಾದ ನೀತಿಗಳಿಗೆ ಎದುರಾದ ಒಂದು ಹಿನ್ನಡೆ ಎಂದು ನೋಡಲಾಗಿದೆ. ಈ ಎರಡೂ ಮಟ್ಟಗಳ ಗ್ರಹಿಕೆಗಳಾಚೆಗೆ, ಮೂರನೆಯ ಮಟ್ಟದ ಒಂದು ಗ್ರಹಿಕೆಯೂ ಇದೆ. ಅದೆಂದರೆ, ಇದು ಅತ್ಯಂತ ಮೂಲಭೂತ ಅರ್ಥದಲ್ಲಿ ಸಾಮ್ರಾಜ್ಯಶಾಹಿಯನ್ನು ಹಿಮ್ಮೆಟ್ಟಿಸಿದೆ. ಇಡೀ ವರ್ಷ ದೆಹಲಿಯ ಗಡಿ ಭಾಗಗಳಲ್ಲಿ ಬಿಡಾರ ಹೂಡಿದ ರೈತರು, ಇಂಥಹ ಒಂದು ಅದ್ಭುತ ಯಶಸ್ಸನ್ನು ಪಡೆದ ಬಗೆಯನ್ನು ಭವಿಷ್ಯದಲ್ಲಿ ಸಂಶೋಧಕರು ಬಯಲು ಮಾಡುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಇದು, ಸಂಭ್ರಮಿಸಿ ಆಚರಿಸಬೇಕಾದ ಸಾಧನೆ" ಎಂದು ವಿಶ್ಲೇಶಿಸಿದ್ದಾರೆ.

ಇದನ್ನು ಓದಿದ್ದೀರಾ? ಬಾಗಲಕೋಟೆ | ಕಬ್ಬಿನ ದರ ನಿಗದಿ ವಾಗ್ವಾದ: ಸಚಿವರ ಸಂಧಾನ ಸಭೆ ವಿಫಲ; ರೈತರಿಂದ ರಸ್ತೆ ತಡೆ

ನಾವು ಎತ್ತುತ್ತಿರುವ ಪ್ರಶ್ನೆಗಳ ಕುರಿತು ಸರಿಯಾದ ತಿಳಿವಳಿಕೆ ಮತ್ತು ಅದನ್ನು ಸಾಧಿಸಿಕೊಳ್ಳುವ ಬದ್ಧತೆ, ಎದುರಾಳಿ ಪ್ರಭಲವಾಗಿರುವಾಗ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲ ಮಿತ್ರರನ್ನೂ ಒಳಗೊಳ್ಳಬೇಕು. ಬೇಡಿಕೆ ಈಡೇರಿಸಿಕೊಳ್ಳಲು ಎಂತಹ ತ್ಯಾಗಕ್ಕಾದರೂ ಸಿದ್ದ, ಅದರಿಂದ ದೇಶ, ಕೃಷಿ ಮತ್ತು ರೈತ ಸಂಕುಲ ಉಳಿಯುತ್ತದೆ ಎಂಬ ದೃಢ ವಿಶ್ವಾಸ ದೆಹಲಿ ರೈತ ಚಳವಳಿಯ ಮೂಲಕ ಜಗತ್ತಿಗೆ ತುಂಬ ಸ್ಪಷ್ಟವಾಗಿ ಅರ್ಥವಾಗಿದೆ. ಹಾಗಾಗಿ ಜನ ವಿರೋಧಿ ಆಳುವ ವರ್ಗದ ನೀತಿಗಳ ವಿರುದ್ಧ ಜನ ಚಳುವಳಿಯನ್ನು ಬಲಪಡಿಸಬೇಕಾದ ತುರ್ತು ಅಗತ್ಯವಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180