
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮೂಲಕ ಜನರಿಗೆ ಬೇಕೆಂದೇ ತೊಂದರೆ ಕೊಡಲಾಗುತ್ತಿದೆ ಎಂಬರ್ಥದಲ್ಲಿ ಪ್ರಧಾನಿ ಮೋದಿಯವರು, ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳನ್ನು ಟೀಕಿಸಿದ್ದರು. ಇದಕ್ಕೆ ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ಕೆ ಚಂದ್ರಶೇಖರ ರಾವ್ ಮೊದಲಾದವರು ಪ್ರತಿಕ್ರಿಯಿಸಿ, ಕೇಂದ್ರದ್ದೇ ತಪ್ಪು ಎಂದಿದ್ದಾರೆ. ಇವರಲ್ಲಿ ಯಾರ ಮಾತು ನಿಜ?
ನಮ್ಮ ಪ್ರಧಾನ ಮಂತ್ರಿಗಳು ಕೋವಿಡ್ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಪೆಟ್ರೋಲ್ ಕುರಿತು ಮಾತನಾಡಿ ಒಂದು ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ. "ಕೆಲವು ರಾಜ್ಯಗಳು ಪೆಟ್ರೋಲ್ ಬೆಲೆ ಇಳಿಸುವಲ್ಲಿ ಸಹಕರಿಸಿಲ್ಲ," ಎಂಬುದು ಅವರ ಆರೋಪ.
“ಮಹಾರಾಷ್ಟ್ರ, ಪಶ್ವಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಜಾರ್ಖಂಡ್ (ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು) ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಮ್ಮಿ ಮಾಡಿಲ್ಲ. ಇದರಿಂದ ಅಲ್ಲಿಯ ಜನರಿಗೆ ತೊಂದರೆಯಾಗಿದೆ,” ಎಂದು ಹೇಳಿರುವ ಪ್ರಧಾನಿ, ಈ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಜೊತೆಗೆ, "ಇಂತಹ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲ ರಾಜ್ಯಗಳೂ ಸಹಕಾರ ಒಕ್ಕೂಟದ ಭಾವನೆಯಿಂದ ಒಂದು ತಂಡವಾಗಿ ಕೆಲಸ ಮಾಡಬೇಕು,” ಎಂದೂ ಸಲಹೆ ನೀಡಿದ್ದಾರೆ.
ಇದಕ್ಕೆ ಉತ್ತರವಾಗಿ, “ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ 97,000 ಕೋಟಿ ರುಪಾಯಿ ಬಾಕಿ ಕೊಡಬೇಕಾಗಿದೆ. ಅದನ್ನು ಮೊದಲು ಕೊಡಲು ವ್ಯವಸ್ಥೆ ಮಾಡಿ. ನಮಗೆ ಸಬ್ಸಿಡಿ ಕೊಡುವುದಕ್ಕೆ ಯಾವ ಸಮಸ್ಯೆಯೂ ಇಲ್ಲ,” ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಮಹಾರಾಷ್ಟ್ರದ ಉದ್ದವ್ ಠಾಕ್ರೆ ಕೂಡ ಇದನ್ನೆ ಪುನರುಚ್ಚರಿಸುತ್ತ, "ಕೇಂದ್ರದಿಂದ 26,500 ಕೋಟಿ ರುಪಾಯಿ ಬಾಕಿ ಇದೆ," ಎಂದಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್, "2014ರಿಂದ ರಾಜ್ಯ ಸರ್ಕಾರವು ಪೆಟ್ರೋಲ್ ಬೆಲೆಯನ್ನು ಏರಿಸಿಯೇ ಇಲ್ಲ," ಎಂದು ತಿಳಿಸಿದ್ದಾರೆ. ಕೇರಳದ ವಿತ್ತ ಮಂತ್ರಿ ಕೆ ಎನ್ ಬಾಲಗೋಪಾಲ್, "ಪೆಟ್ರೋಲ್ ಬೆಲೆ ಏರಿಕೆಗೆ ಕೇಂದ್ರ ವಿಧಿಸಿರುವ ಸೆಸ್ ಹಾಗೂ ಸರ್ಚಾರ್ಜ್ ಕಾರಣ," ಎಂದಿದ್ದಾರೆ.

ಇನ್ನು ಪ್ರಧಾನ ಮಂತ್ರಿಗಳ ಹೇಳಿಕೆಯನ್ನು ಗಮನಿಸೋಣ. ಅದು ಮೇಲುನೋಟಕ್ಕೆ ಸರಿಯಾಗಿಯೇ ತೋರುತ್ತದೆ. ಸ್ವಲ್ಪ ಒಳಹೊಕ್ಕು ನೋಡಿದರೆ, ಆ ಹೇಳಿಕೆಯಲ್ಲಿ ಹಲವಾರು ಸಮಸ್ಯೆಗಳು ಕಾಣಿಸುತ್ತವೆ. ಪೆಟ್ರೋಲ್ ಬೆಲೆ 2014ರಿಂದಲೇ ನಿರಂತರವಾಗಿ ಏರುತ್ತಿದೆ. ಮದ್ಯೆ ಎರಡು ವರ್ಷ ಸ್ವಲ್ಪ ಮಟ್ಟಿಗೆ ಸ್ಥಗಿತವಾಗಿದ್ದು, 2019ರಿಂದ ಮತ್ತೆ ಏರುತ್ತ ಹೋಗಿರುವುದನ್ನು ಕಾಣಬಹುದು. ಹಾಗೆಯೇ, ಪೆಟ್ರೋಲಿನ ಮೇಲಿನ ಅಬ್ಕಾರಿ ಶುಲ್ಕವೂ ಏರುತ್ತ ಹೋಗಿದೆ. ಒಂದು ಅಂದಾಜಿನ ಪ್ರಕಾರ, ಅಬ್ಕಾರಿ ಶುಲ್ಕ ಒಂದು ರುಪಾಯಿ ಜಾಸ್ತಿಯಾದರೆ, ಕೇಂದ್ರಕ್ಕೆ ವರ್ಷಕ್ಕೆ 13,000-14,000 ಕೋಟಿ ರುಪಾಯಿ ಹೆಚ್ಚುವರಿ ತೆರಿಗೆ ಸಂಗ್ರಹಣೆಯಾಗುತ್ತದೆ.
2020-21ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ತುಂಬಾ ಇಳಿದಿತ್ತು. ಆದರೆ, ಆಗ ಕೇಂದ್ರ ಸರ್ಕಾರ ಅದರ ಲಾಭವನ್ನು ಜನರಿಗೆ ವರ್ಗಾಯಿಸಲಿಲ್ಲ. ಪೆಟ್ರೋಲ್ ಮೇಲೆ 13 ರುಪಾಯಿ ಮತ್ತು ಡಿಸೇಲ್ ಮೇಲೆ 16 ರುಪಾಯಿ ಅಬ್ಕಾರಿ ಸುಂಕ ಹಾಕಿತು. ನಂತರದಲ್ಲಿ ಕೇಂದ್ರ ಸರ್ಕಾರ, ಅಬ್ಕಾರಿ ಸುಂಕದಲ್ಲಿ ಪೆಟ್ರೋಲ್ ಮೇಲೆ ಐದು ರುಪಾಯಿ, ಡಿಸೇಲ್ ಮೇಲೆ ಹತ್ತು ರುಪಾಯಿ ಕಡಿಮೆ ಮಾಡಿತು. ಪ್ರಧಾನ ಮಂತ್ರಿಯವರು ಹೇಳಿದ, 'ಕೇಂದ್ರ ಸರ್ಕಾರ ಮಾಡಿದ ಕಡಿತ' ಇಷ್ಟೇ. ಆದರೆ ಇದನ್ನು ಜನರ ಉಪಕಾರಕ್ಕೆ ಮಾಡಿದ್ದಲ್ಲ. ಇದು ಮುಂಬರಲಿದ್ದ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ ಕಡಿತ ಅನ್ನೋ ಆರೋಪವನ್ನು ಸುಳ್ಳು ಅಂತ ತಳ್ಳಿಹಾಕೋದು ಕಷ್ಟ.
ಇದನ್ನು ಓದಿದ್ದೀರಾ?: ಅರ್ಥ ಪಥ | ಢಾಕಾದ ಖಾದರ್ ಮಿಯಾ ಮತ್ತು ದೆಹಲಿಯ ಹಿಂದು ವ್ಯಾಪಾರಿ
ಇದನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸೋಣ. ಒಂದು ವರದಿಯ ಪ್ರಕಾರ, 21 ರಾಜ್ಯಗಳು ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳು ಮೌಲ್ಯವರ್ಧಿತ ತೆರಿಗೆಯನ್ನು ಪ್ರತಿ ಲೀಟರ್ಗೆ 1.80 ರುಪಾಯಿಯಿಂದ 10 ರುಪಾಯಿವರೆಗೆ ಕಡಿತ ಮಾಡಿದವು. ಹಾಗೆಯೇ, ಪ್ರತೀ ಲೀಟರ್ ಡಿಸೇಲ್ಗೆ ಎರಡರಿಂದ ಏಳು ರುಪಾಯಿವರಗೆ ಕಡಿತ ಮಾಡಿದವು. "ಇದರಿಂದ ರಾಜ್ಯಗಳಿಗೆ ಕಂದಾಯ ಸಂಗ್ರಹಣೆಯಲ್ಲಿ ಆದ ನಷ್ಟ ಜಿಡಿಪಿಯ ಶೇಕಡ 0.08ರಷ್ಟು," ಎಂದು ಆರ್ಬಿಐ ರಾಜ್ಯ ಹಣಕಾಸು ವರದಿ ಹೇಳಿದೆ.
ಇಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ಚುನಾವಣೆಗೆ ಮುಂಚೆ ಸುಮಾರು 137 ದಿನಗಳು ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಏರಿಸಿರಲಿಲ್ಲ. ಚುನಾವಣೆ ಮುಗಿದ ಮೇಲೆ ಅವುಗಳು ಕೇವಲ 16 ದಿನಗಳಲ್ಲಿ 14 ಸಲ ಬೆಲೆ ಏರಿಸಿವೆ. ಪೆಟ್ರೋಲ್ ಬೆಲೆಯನ್ನು ಲೀಟರಿಗೆ 12 ರುಪಾಯಿಯಷ್ಟು ಮತ್ತು ಡಿಸೇಲ್ ಬೆಲೆಯನ್ನು ಲೀಟರಿಗೆ 10 ರುಪಾಯಿಯಷ್ಟು ಏರಿಸಲಾಗಿದೆ. ಎಲ್ಪಿಜಿ ಬೆಲೆಯೂ ಏರಿಕೆ ಕಂಡಿದ್ದು, 15 ಕೆ.ಜಿ ಸಿಲಿಂಡರಿಗೆ 15 ರುಪಾಯಿಯಷ್ಟು ಹೆಚ್ಚಿದೆ. ಸಾಮಾನ್ಯವಾಗಿ ದೇಶದೊಳಗಿನ ಚಿಲ್ಲರೆ ಬೆಲೆ ಜಾಗತಿಕ ಮಾರುಕಟ್ಟೆಯ ಬೆಲೆಯೊಂದಿಗೆ ತೆಕ್ಕೆ ಹಾಕಿಕೊಂಡಿರುತ್ತದೆ. ಈ ಕ್ರಮವನ್ನು ಚುನಾವಣೆಯ ಸಮಯದಲ್ಲಿ ಕೈಬಿಡಲಾಯಿತು. ಹೀಗೆ ಮಾರುಕಟ್ಟೆಯ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವುದರ ಬಗ್ಗೆಯೂ ಕೆಲವರ ಟೀಕೆ ಇದೆ. ಅದೇನೇ ಇರಲಿ, ಈ ಹೆಚ್ಚಳದಿಂದ ಮತ್ತು ಸುಂಕದ ಕಡಿತದಿಂದ ಆಗಿದ್ದ ಲಾಭವೆಲ್ಲ ಕೊಚ್ಚಿಕೊಂಡು ಹೋಗಿದ್ದಂತೂ ನಿಜ.

ಇಲ್ಲಿ ಇನ್ನೊಂದು ಕುತೂಹಲಕಾರಿ ಅಂಶ ಇದೆ. ಕೆಲವು ರಾಜ್ಯಗಳು ಪೆಟ್ರೋಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿವೆ. ಆದರೆ, ಅವುಗಳಲ್ಲಿ ಹೆಚ್ಚಿನ ರಾಜ್ಯಗಳು ಸಂಗ್ರಹಿಸುತ್ತಿರುವ ತೆರಿಗೆ ಉಳಿದ ರಾಜ್ಯಗಳು ಸಂಗ್ರಹಿಸುತ್ತಿರುವ ತೆರಿಗೆಗಿಂತ ಕಡಿಮೆ ಏನೂ ಇಲ್ಲ. ಉದಾಹರಣೆಗೆ, ಒಂದು ಲೀಟರ್ ಪೆಟ್ರೋಲಿಗೆ ಬಿಹಾರ 27.06 ರುಪಾಯಿ, ಮಧ್ಯಪ್ರದೇಶ 28.38 ರುಪಾಯಿ ತೆರಿಗೆ ಸಂಗ್ರಹಿಸುತ್ತಿದೆ. ಬಿಜೆಪಿಯೇತರ ರಾಜ್ಯಗಳು ಸಂಗ್ರಹಿಸುತ್ತಿರುವ ತೆರಿಗೆಗಿಂತ ಇದು ಕಡಿಮೆ ಏನಲ್ಲ. ಹಾಗಾಗಿ, ಈ ವಿಷಯದಲ್ಲಿ ಬಿಜೆಪಿ ಮತ್ತು ಬಿಜೆಪಿಯೇತರ ರಾಜ್ಯಗಳು ಎಂಬ ವಿಂಗಡನೆ ಸರಿಯಾಗಿ ತೋರುವುದಿಲ್ಲ. ಪ್ರಧಾನಿಯವರು ಭಾವಿಸಿರುವಂತೆ, ಜನರು ಕಟ್ಟುವ ತೆರಿಗೆಯಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ.
ಕೇಂದ್ರ, ರಾಜ್ಯಗಳೆರಡೂ ಆದಾಯಕ್ಕೆ ಮುಖ್ಯವಾಗಿ ಪೆಟ್ರೋಲಿನ ಮೇಲಿನ ತೆರಿಗೆಯನ್ನೇ ಅವಲಂಬಿಸಿವೆ ಅನ್ನೋದು ನಿಜ. ಜೊತೆಗೆ, ಆ ಅವಲಂಬನೆ ಹೆಚ್ಚೆಚ್ಚು ಆಗುತ್ತಿದೆ. 2014-15ರಲ್ಲಿ ಕೇಂದ್ರ ಈ ಬಾಬ್ತಿನಲ್ಲಿ 1.72 ಲಕ್ಷ ಕೋಟಿ ರುಪಾಯಿ ಸಂಗ್ರಹಿಸುತ್ತಿತ್ತು. 2020-21ರ ವೇಳೆಗೆ ಸುಂಕದ ಸಂಗ್ರಹಣೆ 4.55 ಲಕ್ಷ ಕೋಟಿ ಮುಟ್ಟಿದೆ. ರಾಜ್ಯಗಳಲ್ಲಿ ಅದರ ಸಂಗ್ರಹಣೆ ಅದೇ ಅವಧಿಯಲ್ಲಿ 1.6 ಲಕ್ಷ ಕೋಟಿ ರುಪಾಯಿಯಿಂದ 2.17 ಲಕ್ಷ ಕೋಟಿ ರುಪಾಯಿಗೆ ಏರಿದೆ. ತೈಲದ ಮೇಲಿನ ಅಬ್ಕಾರಿ ಶುಲ್ಕವು, ಕೇಂದ್ರದ ಒಟ್ಟು ತೆರಿಗೆ ಸಂಗ್ರಹಣೆಯಲ್ಲಿ ಶೇಕಡ 18.4ರಷ್ಟಾಗುತ್ತದೆ. ಜೊತೆಗೆ, ಕೇಂದ್ರವು ಪೆಟ್ರೋಲ್ ಮೇಲೆ ಹಾಕುವ ಸೆಸ್ ಇತ್ಯಾದಿಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ.

ರಾಜ್ಯಗಳ ವಿಷಯಕ್ಕೆ ಬಂದರೆ, ಪೆಟ್ರೋಲಿಯಂ ಮತ್ತು ಮದ್ಯದ ಮೇಲಿನ ಸುಂಕ ಮಾತ್ರವೇ ಅವುಗಳಿಗೆ ಇರುವ ಆದಾಯದ ಮೂಲಗಳು. ಮುಂಬರುವ ಜೂನ್ನಿಂದ ಜಿಎಸ್ಟಿಗೆ ಸಂಬಂಧಿಸಿದಂತೆ ಕೇಂದ್ರದಿಂದ ಬರಲಿರುವ ಪರಿಹಾರವೂ ನಿಂತುಹೋಗುವ ಸಾಧ್ಯತೆ ಇದೆ. ಅಲ್ಲದೆ, ಆರೋಗ್ಯ, ಶಿಕ್ಷಣ ಇತ್ಯಾದಿ ಬಹುತೇಕ ಜನಕಲ್ಯಾಣ ಕಾರ್ಯಕ್ರಮಗಳು ಅವುಗಳ ಜವಾಬ್ದಾರಿ. ಹಾಗಾಗಿ, ರಾಜ್ಯಗಳಿಗೆ ವ್ಯಾಟ್ ಅನ್ನು ಕಡಿಮೆ ಮಾಡುವುದು ಕಷ್ಟ. ಕೇಂದ್ರಕ್ಕಾದರೋ, ತೆರಿಗೆ ಸಂಗ್ರಹಣೆಗೆ ಹಲವು ಮೂಲಗಳಿವೆ. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ರಾಜಕೀಯ ಲೆಕ್ಕಾಚಾರ ಅನುಕೂಲ ಮಾಡಿಕೊಡುವುದಿಲ್ಲ. 'ಸಹಕಾರ ಒಕ್ಕೂಟದ' ಮುಂದಾಳತ್ವವನ್ನು ಕೇಂದ್ರವೇ ವಹಿಸಿಕೊಂಡು, ತೆರಿಗೆ ಕಡಿತಕ್ಕೆ ಅದು ಮೊದಲು ಮುಂದಾಗಬೇಕು. ಸಂಪನ್ಮೂಲ ಸಂಗ್ರಹಣೆಗೆ ಸಂಪತ್ತಿನ ಮೇಲಿನ ತೆರಿಗೆಯನ್ನು ಪರ್ಯಾಯವಾಗಿ ಯೋಚಿಸಬೇಕು. ವರಮಾನವನ್ನು ಹಲವು ಪಟ್ಟು ಹೆಚ್ಚಿಸಿಕೊಂಡಿರುವ ಹಲವು ಕಾರ್ಪೋರೇಟ್ ಕಂಪನಿಗಳು ಈ ಸಮಯದಲ್ಲಿ ಹೆಚ್ಚಿನ ತೆರಿಗೆಯ ಭಾರವನ್ನು ಹೊತ್ತು ತಮ್ಮ ಆರ್ಥಿಕ ಪ್ರಗತಿಯ ಜೊತೆಗೆ ದೇಶದ, ಜನರ ಆರ್ಥಿಕ ಪ್ರಗತಿಯ ಕಡೆಯೂ ಯೋಚಿಸಬೇಕು.
ಭಾರತ ಜಗತ್ತಿನಲ್ಲಿ ಅತಿ ಹೆಚ್ಚು ಪೆಟ್ರೋಲ್ ಬೆಲೆ (ರುಪಾಯಿಯ ಕೊಳ್ಳುವ ಶಕ್ತಿಯನ್ನು ಆಧರಿಸಿ ಮಾಡಿರುವ ಅಂದಾಜು) ಇರುವ ರಾಷ್ಟ್ರಗಳಲ್ಲಿ ಮೊದಲ ನಾಲ್ಕೈದು ಸ್ಥಾನಗಳಲ್ಲಿದೆ ಎಂದು ಅಂದಾಜು ಮಾಡಲಾಗಿದೆ. ಇದು ನಿಜವಾಗಿಯೂ ಜನರ ಮೇಲಿನ ದೊಡ್ಡ ಹೊರೆ. ಅಷ್ಟೇ ಅಲ್ಲ, ಹಣದುಬ್ಬರದ ಏರಿಕೆಯಲ್ಲೂ ಇದರ ಪಾತ್ರ ದೊಡ್ಡದು. ಹಾಗಾಗಿ, ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಈಗ ಪ್ರದಾನ ಮಂತ್ರಿಗಳು ಮಾತನಾಡುತ್ತಿರುವುದು ನೋಡಿದರೆ, ಪೆಟ್ರೋಲ್ ಬೆಲೆಯನ್ನು ಇಳಿಸುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಇದು ನಿಜವಾದರೆ, ಆರ್ಥಿಕತೆಗೆ ಒಳ್ಳೆಯದಲ್ಲ. ಹಣದುಬ್ಬರ ಇಳಿಯುವ ಸಾಧ್ಯತೆಯೂ ಕಡಿಮೆ. ಯುದ್ಧ ಮುಗಿದು, ಪೆಟ್ರೋಲ್ ಸಲೀಸಾಗಿ ಸಿಗುವಂತಾದರೂ, ಅದರ ಲಾಭವನ್ನು ಸರ್ಕಾರ ಜನರಿಗೆ ವರ್ಗಾಯಿಸುವ ಸಾಧ್ಯತೆಗಳೂ ಕಡಿಮೆ.