ಮೊಟ್ಟೆ ಸೇವನೆಯಿಂದ ಜೀವನಶೈಲಿ ತಾರುಮಾರಾಗುತ್ತದೆಯೇ?

eggs in school meals

ಶಾಲಾಮಕ್ಕಳಿಗೆ ಮೊಟ್ಟೆ ನೀಡುವುದರಿಂದ ಮಕ್ಕಳಲ್ಲಿ ಮನೋವಿಕಾರಗಳನ್ನು (ಕಾಂಪ್ಲೆಕ್ಸ್‌) ಉಂಟುಮಾಡುತ್ತವೆ ಎಂದು ನಿಮ್ಹಾನ್ಸ್‌ ಸಂಸ್ಥೆಯ ಮಕ್ಕಳು ಮತ್ತು ಹರೆಯದವರ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ  ಮತ್ತು ಪ್ರಾಧ್ಯಾಪಕ ಜಾನ್‌ ವಿಜಯಸಾಗರ್‌ ನೇತೃತ್ವದ ತಜ್ಞರ ಸಮಿತಿ ಸಲ್ಲಿಸಿರುವ ʼಪೊಸಿಷನ್‌ ಪೇಪರ್‌ʼ ನಲ್ಲಿ ಹೇಳಿಲಾಗಿದೆ

ರಾಷ್ಟ್ರೀಯ ಶಿಕ್ಷಣ (ಎನ್‌ಇಪಿ) ನೀತಿಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಶಾಲಾಶಿಕ್ಷಣಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಬಗೆಗೆ 26 ಸಮಿತಿಗಳನ್ನು ರಚಿಸಿತ್ತು. ಈ ಸಮಿತಿಗಳು ʼಪೊಸಿಷನ್‌ ಪೇಪರ್ಸ್‌ʼ (ಅಭಿಪ್ರಾಯಗಳುಳ್ಳ ನಿಲುವು ಪತ್ರಗಳು)ಗಳನ್ನು ಎನ್‌ಸಿಆರ್‌ಇಟಿಗೆ ನೀಡಬೇಕೆಂಬ ನಿರ್ದೇಶನವನ್ನು ನೀಡಲಾಗಿತ್ತು.  ಭಾರತದ ಜ್ಞಾನ, ಮೌಲ್ಯಗಳ ಶಿಕ್ಷಣ, ಸಮಾಜ ವಿಜ್ಞಾನದ ಶಿಕ್ಷಣ, ತಳಪಾಯದ ಸಾಕ್ಷರತೆ, ಆರೋಗ್ಯ ಮತ್ತು ಯೋಗಕ್ಷೇಮ, ಪರ್ಯಾವರಣ ಶಿಕ್ಷಣ ಮುಂತಾದ ವಿಚಾರಗಳ ಬಗೆಗೆ ʼಪೊಸಿಷನ್‌ ಪೇಪರ್ಸ್‌ʼಗಳನ್ನು ತಯಾರಿಸಬೇಕಿತ್ತು.

ಕೆಲವು ದಿನಗಳ ಹಿಂದೆ, ಮೇಲೆ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ನಿಮ್ಹಾನ್ಸ್‌ ಸಂಸ್ಥೆಯ ಮಕ್ಕಳು ಮತ್ತು ಹರೆಯದವರ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಜಾನ್‌ ವಿಜಯಸಾಗರ್‌ ನೇತೃತ್ವದ ಆರೋಗ್ಯ ಮತ್ತು ಯೋಗಕ್ಷೇಮ ತಜ್ಞರ ಸಮಿತಿ ಒಂದು ʼಪೊಸಿಷನ್‌ ಪೇಪರ್‌ʼನ್ನು ಬಿಡುಗಡೆ ಮಾಡಿದೆ. ಇದರ ಮುಖ್ಯಾಂಶಗಳು ಕೆಳಗಂಡಂತಿವೆ:

ಅ) ಒಂದೇ ತರಗತಿ(ಕಲಿಕಾ ಹಂತ)ಯಲ್ಲಿರುವ ಮಕ್ಕಳಿಗೆ ಭಿನ್ನ ಆಹಾರವನ್ನು ನೀಡಿದರೇ, ಅದು ಪೋಷಕಾಂಶಗಳ ಅಸಮತೋಲನಕ್ಕೆ ದಾರಿಯಾಗುತ್ತದೆ.  ಉದಾ: ಕೆಲವು ಮಕ್ಕಳಿಗೆ ಮೊಟ್ಟೆಗಳು, ಇನ್ನು ಕೆಲವರಿಗೆ ಬಾಳೆಹಣ್ಣುಗಳನ್ನು ನೀಡುವುದು. ಅಲ್ಲದೆ ಇದು ಮಕ್ಕಳಲ್ಲಿ ಮನೋವಿಕಾರಗಳನ್ನು (ಕಾಂಪ್ಲೆಕ್ಸ್‌) ಉಂಟುಮಾಡುತ್ತವೆ. ಇವುಗಳಿಂದ ಸಹಪಾಠಿಗಳ ನಡುವೆ ಭಾವನಾತ್ಮಕ ಕ್ಷೋಭೆ ತಲೆದೋರುತ್ತದೆ. ಎಲ್ಲ ಮಕ್ಕಳನ್ನು ಸಮಾನವಾಗಿ, ತಾರತಮ್ಯರಹಿತವಾಗಿ ಕಾಣುವುದೇ ಭಾರತೀಯ ತತ್ವ ಅಥವಾ ಧರ್ಮ.

ಆ) ಅಧಿಕ ಪೋಷಣೆಗೆ (ನ್ಯೂಟ್ರಿಶನ್)‌ ಸಂಬಂಧಿಸಿದಂತೆ ಬೇಕಿರುವುದು ಕಡಿಮೆ ಮಟ್ಟದ ಕೊಬ್ಬಿನ ಮತ್ತು ಝೀರೊ ಟ್ರಾನ್ಸ್‌ಫ್ಯಾಟ್ ಆಹಾರ ಸೇವನೆ. ಆದುದರಿಂದ ಮಧ್ಯಾಹ್ನ ಊಟವನ್ನು ಯೋಜಿಸಬೇಕಾದರೆ ಕೊಲೆಸ್ಟ್ರಾಲ್‌ ಮತ್ತು ಸಂಯೋಜಕ (ಅಡಿಟಿವ್ಸ್-‌ ಆಹಾರ ಪದಾರ್ಥಗಳಿಗೆ ಸಣ್ಣ ಪ್ರಮಾಣದಲ್ಲಿ ಸೇರಿಸುವ ವಸ್ತು) ರಹಿತ ಆಹಾರಗಳನ್ನು ಪರಿಗಣಿಸಬೇಕು. ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಿಂದ ಉಂಟಾಗುವ ಅತಿತೂಕ ಮತ್ತು ಹಾರ್ಮೋನುಗಳ ಅಸಮತೋಲನಗಳಿಗೆ ಕಾರಣವಾಗುವ ಮೊಟ್ಟೆಗಳು, ಬಿಸ್ಕತ್ತುಗಳು ಮತ್ತು ಸುವಾಸನೆಭರಿತ (ಫ್ಲೇವರ್ಡ್)‌ ಹಾಲನ್ನು ನಿಷೇಧಿಸಬೇಕು. ಪ್ರಾಣಿಜನ್ಯ ಆಹಾರ ಹಾರ್ಮೋನ್‌ ಅಸಮತೋಲನಕ್ಕೆ ಎಡೆಮಾಡಿಕೊಡುತ್ತದೆ ಎಂದು ಅನೇಕ ದೇಶಗಳಲ್ಲಿ ಜರುಗಿರುವ ಅಧ್ಯಯನಗಳು ತಿಳಿಸುತ್ತವೆ. ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು.

ಇ) ಮಕ್ಕಳಲ್ಲಿ ರಕ್ತಹೀನತೆ ಮತ್ತು ಕುಂಠಿತ ಬೆಳವಣಿಗೆಯನ್ನು ತಡೆಯಲು ಅವರಿಗೆ ಕಡಲೆಕಾಯಿ, ಎಳ್ಳಿನುಂಡೆ, ಬೆಲ್ಲದ ಕಡಲೆಕಾಯಿ ಮಿಠಾಯಿ ಮುಂತಾದ ʼಸಾತ್ವಿಕʼ ಆಹಾರ ಪದಾರ್ಥಗಳನ್ನು ನೀಡಬೇಕೆಂಬ ಶಿಫಾರಸ್ಸನ್ನು ಈ ಸಮಿತಿ ಮಾಡಿದೆ.

ಈ)  ಧೈರ್ಯ, ಸಫಲತೆಗಾಗಿ  ಮಕ್ಕಳು ಸರಿಯಾದ ಆಹಾರಗಳನ್ನು ಸೇವಿಸಬೇಕು. ಈ ನಿಟ್ಟಿನಲ್ಲಿ ಭೀಮ ಮತ್ತು ಹನುಮಂತರ ಆಹಾರ ಸೇವನೆಯ ಪದ್ಧತಿಯ ಕಥೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು.  ಆರೋಗ್ಯರಕ್ಷಣೆಯ ಬಗೆಗೆ ಬೆಳಕನ್ನು ಚೆಲ್ಲುವ ಪಂಚತಂತ್ರ ಮತ್ತು ಜಾನಪದೀಯ ಕಥೆಗಳು ಕೂಡ.

ಪ್ರಾಣಿಜನ್ಯ ಆಹಾರಗಳಿಂದ ಉತ್ತಮ ಮೂಲದ ಪ್ರೋಟೀನ್‌ಗಳು, ವಿಟಮಿನ್‌ಗಳು ಮತ್ತು ಮಿನಿರಲ್‌ಗಳು ದೊರಕುತ್ತವೆ ಎಂದು ಸಾರ್ವಜನಿಕ ಆರೋಗ್ಯ ತಜ್ಞೆ ಹಾಗೂ ಸಂಶೋಧಕಿಯಾಗಿರುವ ಡಾ. ಸಿಲ್ವಿಯಾ ಕರ್ಪಗಮ್‌ ಅವರು ತಿಳಿಸಿದ್ದಾರೆ.  ಸಸ್ಯಗಳಲ್ಲೂ ಕಬ್ಬಿಣಾಂಶವಿರುತ್ತದೆ. ಆದರೆ ಅದರಲ್ಲಿ ರಕ್ತದ ಹಿಮೋಗ್ಲೋಬಿನ್‌ಗೆ ಪುಷ್ಟಿ ನೀಡುವ ಅಂಶ(haem)ವಿರುವುದಿಲ್ಲ. ಆದರೆ ಪ್ರಾಣಿಜನ್ಯ ಮೂಲದ ಆಹಾರಗಳಲ್ಲಿ ಉತ್ತಮ ಮಟ್ಟದ haem ಇದ್ದು, ಇದರ ಬಹಳಷ್ಟು ಭಾಗವನ್ನು ದೇಹಗಳು ಹೀರಿಕೊಳ್ಳುತ್ತವೆ; ಪಚನವೂ ಆಗುತ್ತದೆ. ಈ ಪ್ರಕ್ರಿಯೆಯನ್ನು ʼಬಯೋ-ಅವೈಲಬಿಲಿಟಿʼ ಎಂದು ಬಣ್ಣಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಆಹಾರವನ್ನು ʼಸಾತ್ವಿಕ ʼಎಂದು ವಿಂಗಡಿಸುವುದರ ಹಿಂದೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ ಎಂಬುದು ಅವರ ನಿಲುವು.

ಪುರಾಣವನ್ನು ಸಾರಾಸಗಟಾಗಿ ಇತಿಹಾಸದ ಜೊತೆ ಸಮೀಕರಿಸುವುದು ಸರಿಯೇ? ಪೌರಾಣಿಕ ಬಲಿಷ್ಠ ವ್ಯಕ್ತಿಗಳಾಗಿರುವ ಭೀಮ, ಹನುಮಂತರು ಅಸ್ತಿತ್ವದಲ್ಲಿದ್ದರು ಎಂದು ಊಹಿಸಿಕೊಳ್ಳೋಣ. ಅದರ ಪ್ರಕಾರ, ಅವರ ಆಹಾರಕ್ರಮ ಏನಾಗಿತ್ತು ಎಂಬುದನ್ನು ನಿಖರವಾಗಿ ಅರಿತುಕೊಳ್ಳಬಹುದೇ? ಇಂತಹ ಕಪೋಲಕಲ್ಪಿತ ವಿಚಾರಗಳುಳ್ಳ ಈ ಅಭಿಪ್ರಾಯಗಳ ನಿಲುವಿನ ಪತ್ರ ವಸ್ತುನಿಷ್ಠವಾಗಿಲ್ಲ ಎಂದು ಕೆಲವು ತಜ್ಞರು ಬೊಟ್ಟುಮಾಡಿ ತೋರಿಸುತ್ತಾರೆ.

Image
egg for school childrens

ರಾಜ್ಯದಲ್ಲಿ ಮೊಟ್ಟೆ ಯೋಜನೆ ಕೈ ಬಿಡುವ ಆತಂಕ

ಮೇಲ್ಕಂಡ ಸಮಿತಿಯ ವರದಿ( ಅಭಿಪ್ರಾಯಗಳ ನಿಲುವಿನ ಪತ್ರ)ಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕಳೆದ ವರ್ಷದ ನವೆಂಬರ್‌ನಲ್ಲಿ ಕಲ್ಯಾಣ ಕರ್ನಾಟಕದ ಯಾದಗಿರಿ, ಕಲ್ಬುರ್ಗಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಮಕ್ಕಳ ಅಪೌಷ್ಟಿಕತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಜಾರಿಗೊಳಿಸಿದ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳು ಭಾಗವಾಗಿರಬೇಕೆಂಬ ಕ್ರಮವನ್ನು(ಪ್ರಸ್ತುತ ಇದನ್ನು ರಾಜ್ಯಾದ್ಯಂತ ವಿಸ್ತರಿಸುವ ಯೋಜನೆ ಸರ್ಕಾರಕ್ಕಿದೆ) ಕೈಬಿಡಲಾಗುತ್ತದೆಯೇ ಎಂಬ ಆತಂಕ ಆಹಾರ ಹಕ್ಕಿನ ಚಳವಳಿಯ ಕಾರ್ಯಕರ್ತರು ಮತ್ತು ಕೆಲವು ವಿಶೇಷತಜ್ಞರನ್ನು ಕಾಡುತ್ತಿದೆ. ಅಲ್ಲದೆ ಈಗಾಗಲೇ ಅನೇಕ ಮಠಗಳ ಸ್ವಾಮಿಗಳು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಊಟದ ಭಾಗವಾಗಿ ಮೊಟ್ಟೆಗಳ ನೀಡುವಿಕೆ ಬಗೆಗೆ ಅಪಸ್ವರವನ್ನು ಎತ್ತಿದ್ದಾರೆ. ಜೊತೆಗೆ ಜಾತಿ ಶ್ರೇಣೀಕರಣವನ್ನು ಎತ್ತಿಹಿಡಿಯುವ ಮಂದಿ ಕೂಡ ಇದಕ್ಕೆ ದನಿಗೂಡಿಸಿದ್ದಾರೆ.  

ಈ ವಿಷಯವನ್ನು ಪ್ರಸ್ತಾಪಿಸುತ್ತ ʼಎನ್‌ ಇ ಪಿ-2020ರ ಕರಡು ಪ್ರತಿ ಹೊರಬಿದ್ದ ಮೇಲೆ ನಮ್ಮ ಭಾರತೀಯ ಜ್ಞಾನ ವ್ಯವಸ್ಥೆಯಡಿ ನಮ್ಮ ಸಂಸ್ಕೃತಿ, ಮೌಲ್ಯಗಳು, ಸಂಪ್ರದಾಯಗಳು ಇತ್ಯಾದಿಗಳನ್ನು ವ್ಯಾಖ್ಯಾನಿಸಲಾಗುತ್ತಿದೆ.  ಇವು ನಮ್ಮ ಭಾರತೀಯ ವ್ಯವಸ್ಥೆಯಲ್ಲ,  ಬ್ರಾಹ್ಮಣ್ಯದ ಜ್ಞಾನ ವ್ಯವಸ್ಥೆ.  ಇವು ನಮ್ಮ ಭಾರತೀಯ ಸಂಸ್ಕೃತಿಯ ಬಹುತ್ವದ ವಿರುದ್ಧವಾಗಿವೆ.  ಆದುದರಿಂದ ಸಂಸ್ಥೆಗಳು ಮತ್ತು ವಿಚಾರವಂತರು ಇಂತಹ ವಿಷಯದ ವಿರುದ್ಧ ತಮ್ಮ ದನಿಯನ್ನು ಎತ್ತಬೇಕುʼ ಎಂದು ಅಭಿವೃದ್ಧಿ ಶಿಕ್ಷಣತಜ್ಞರಾದ ವಿ ಪಿ ನಿರಂಜನಾರಾಧ್ಯರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ, ಎಕನಾಮಿಕ್‌ ಅಂಡ್‌ ಪೊಲಿಟಿಕಲ್‌ ವೀಕ್ಲಿಯ ಸಂಪಾದಕರು ಮತ್ತು ರಾಜಕೀಯ ವಿಜ್ಞಾನಿಯೂ ಆಗಿರುವ ಪ್ರೊ. ಗೋಪಾಲ್‌ ಗುರು, 2009ರಲ್ಲಿ ಅಮೆರಿಕದ ಪೆನ್‌ಸಿಲ್ವೆನಿಯಾದ ವಿಶ್ವವಿದ್ಯಾನಿಲಯದ ವಿಚಾರ ಸಂಕಿರಣವೊಂದರಲ್ಲಿ ʼಸಾಂಸ್ಕೃತಿಕ ಶ್ರೇಣೀಕರಣದ ರೂಪಕವಾಗಿ ಆಹಾರ ʼ ಎಂಬ ಪ್ರಬಂಧ(ಪೇಪರ್)ವನ್ನು ಮಂಡಿಸಿದಾಗ ʼಸಮಾಜದಲ್ಲಿ ಒಂದು ನಿರ್ದಿಷ್ಟ ಸಾಂಸ್ಕೃತಿಕ ಅಸ್ಮಿತೆಯನ್ನು ಒಂದು ಸಾಮಾಜಿಕ ವಿಭಾಗಕ್ಕೆ ತಳಕು ಹಾಕುವಾಗ, ಬೇಯಿಸಿದ ಆಹಾರ ಅಥವಾ ಆಹಾರ ಪದ್ಧತಿಗಳು ಸಾಂಸ್ಕೃತಿಕ ಮಾನದಂಡವಾಗುತ್ತವೆ. 

ಇದನ್ನು ಓದಿದ್ದೀರಾ?  ವಸತಿಶಾಲೆಗಳಿಗೆ ಬಿಡುಗಡೆಯಾಗಿಲ್ಲ ಅನುದಾನ: 8500 ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕುತ್ತು

ಮಾಂಸವನ್ನು ಅದರಲ್ಲೂ ಬೀಫನ್ನು ಸೇವಿಸುವವರಿಗೆ ಈ ಸಾಂಸ್ಕೃತಿಕ ಶ್ರೇಣೀಕರಣಗಳು ಒಂದು ʼಕಿರಾತಕ ಅಸ್ಮಿತೆʼಯನ್ನು ರೂಪಿಸುತ್ತದೆ. ಆದರೆ ಸಸ್ಯಾಹಾರವನ್ನು ಸೇವಿಸುವ, ಜಾತಿ ಶ್ರೇಣಿಕರಣದಲ್ಲಿ ಉನ್ನತ ಸ್ಥಾನಗಳಲ್ಲಿರುವವರಿಗೆ ಅವು ʼನಾಗರಿಕ ಅಸ್ಮಿತೆʼಯನ್ನು ದಯಪಾಲಿಸುತ್ತವೆ! ಅಂತೆಯೇ ʼತಾಮಸಿಕ ಆಹಾರʼವನ್ನು ಸೇವಿಸುವ ಸಮುದಾಯಗಳಿಗೆ ʼಕೀಳಾದ ಅವಗುಣʼಗಳನ್ನು ಆರೋಪಿಸಲ್ಪಡುತ್ತವೆ. ಹೀಗೆ ಆಹಾರ ಎನ್ನುವುದು ಸಾಂಸ್ಕೃತಿಕ ಶ್ರೇಣೀಕರಣಗಳು ಮತ್ತು ವ್ಯಕ್ತಿನಿಷ್ಠ ಪ್ರವೃತ್ತಿಗಳಿಗೆ ಕಾರಣವಾಗಿ ಅದೊಂದು ಮಾನವ ಹಕ್ಕುಗಳ ದಮನದ ಮತ್ತು ಅವಮಾನದ ಕೇಂದ್ರವಾಗುತ್ತದೆʼ ಎಂಬ ವಾದಗಳನ್ನು ಮುಂದಿಟ್ಟರು. ಅವು ಮನನಯೋಗ್ಯ.

ನಿಮಗೆ ಏನು ಅನ್ನಿಸ್ತು?
3 ವೋಟ್