EWS ತೀರ್ಪಿನ ಅರ್ಥ, ಮೆರಿಟ್ 'ಮೇಲ್ವರ್ಗದ' ಮಕ್ಕಳ ಭವಿಷ್ಯಕ್ಕಾಗಿ ಮಾತ್ರ ಮುಖ್ಯ, ನಮ್ಮ 'ಮಕ್ಕಳ’ ಬಗ್ಗೆ ಅಲ್ಲ ಎಂದೇ ?

EWS

ಮೊದಲನೆಯದಾಗಿ ಫಲಾನುಭವಿ ಗುಂಪನ್ನು ಸಮಂಜಸವಾಗಿ ವ್ಯಾಖ್ಯಾನಿಸಬೇಕು. ಎರಡನೆಯದಾಗಿ, ಕಡಿಮೆ ಪ್ರಾತಿನಿಧ್ಯದಿಂದ ಬಳಲುತ್ತಿದ್ದು, ಮೀಸಲಾತಿಯ ಅಗತ್ಯವಿದೆ ಎಂಬುದಕ್ಕೆ ದೃಢವಾದ ಪುರಾವೆಗಳನ್ನು ಒದಗಿಸಬೇಕು. ಮೂರನೆಯದಾಗಿ, ಮೀಸಲಾತಿ ವ್ಯವಸ್ಥೆಗೆ ಮಾಡಿದ ಯಾವುದೇ ಬದಲಾವಣೆಗಳು ಒಟ್ಟಾರೆ ಮಿತಿಯನ್ನು ಉಲ್ಲಂಘಿಸಬಾರದು

ಹಿಂದೂ ಮೇಲ್ಜಾತಿಯ ಗಣ್ಯರು ಬಹಳ ಹಿಂದಿನಿಂದಲೂ ಮೀಸಲಾತಿ ವ್ಯವಸ್ಥೆಯಿಂದ ನೋವು ತಿಂದೆವೆಂಬ ವಿಚಿತ್ರವಾದ ಐತಿಹಾಸಿಕ ಪ್ರಜ್ಞೆಯಿಂದ ಬಳಲಿದ್ದಾರೆ. ಇತ್ತೀಚಿನ ತೀರ್ಪು, ಸವಲತ್ತುಳ್ಳ ವರ್ಗದ ಸಾಮಾಜಿಕ ದೃಷ್ಟಿಕೋನದಲ್ಲಿನ ಈ ಬದಲಾವಣೆಯನ್ನು ಕಾನೂನುಬದ್ಧ ಸಿದ್ಧಾಂತವಾಗಿ ಪರಿವರ್ತಿಸಿದೆ. ಇದು ದೂರಗಾಮಿ ಪರಿಣಾಮಗಳನ್ನುಂಟು ಮಾಡಬಹುದು.

Eedina App

ಆರ್ಥಿಕವಾಗಿ ದುರ್ಬಲ ವರ್ಗಗಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು, ಸಕಾರಾತ್ಮಕ ಕ್ರಿಯಾ ಯೋಜನೆಯ (Affirmative action) ಕುರಿತು ಪ್ರಗತಿಶೀಲವೂ, ಸೂಕ್ಷ್ಮತೆಯುಳ್ಳದ್ದೂ ಆಗಿದ್ದ ನ್ಯಾಯಾಂಗ ಒಮ್ಮತದ ತೀರ್ಪು ನೀಡಿದೆ. ಇದುವರೆಗೆ, ಹಿಂದೂ ಮೇಲ್ಜಾತಿ ಪ್ರಾಬಲ್ಯದ ಉನ್ನತ ನ್ಯಾಯಾಂಗವು ಅನುವಂಶಿಕವಾಗಿ ಬಂದಿರುವ ಜಾತಿ ಆಧಾರಿತ ಸಾಮಾಜಿಕ ಅಸಮಾನತೆಗಳ ಪರಿಹಾರಕ್ಕಾಗಿ ಮೀಸಲಾತಿ ವ್ಯವಸ್ಥೆಯನ್ನು ಎತ್ತಿಹಿಡಿಯುವುದಲ್ಲದೆ ತನ್ನದೇ ಆದ ಸಾಮಾಜಿಕ ಪೂರ್ವಾಗ್ರಹಗಳನ್ನು ವಿರೋಧಿಸುತ್ತಾ ಬಂದಿತ್ತು.  

ಇತ್ತೀಚಿನ ಜನಹಿತ್ ಅಭಿಯಾನ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದ ಬಹುಮತದ ತೀರ್ಪು, (2019 ರ WP 55) ಪ್ರಮುಖ ಹಾಗೂ ಪ್ರತಿಗಾಮಿಯದ್ದಾಗಿದೆ. ಇದು ಬಹುಶಃ ಮುಂದೊದಗಲಿರುವ ಸಮಸ್ಯೆಗಳ ಬಗ್ಗೆಯ ಒಂದು ಕಿರು ನೋಟವಿರಬಹುದೆನಿಸುತ್ತದೆ. ಏಕೆಂದರೆ ಇದು ನ್ಯಾಯಾಂಗ ತಾರ್ಕಿಕತೆಯಿಂದ ನಿಯಂತ್ರಿಸಲ್ಪಟ್ಟ ಸಾಂವಿಧಾನಿಕ ತತ್ವಗಳ ಮೇಲೆ, ಸಾಮಾಜಿಕ ಸವಲತ್ತುಳ್ಳ (Privilaged) ವ್ಯಕ್ತಿಗಳ ಸಾಮಾನ್ಯ ಪೂರ್ವಾಗ್ರಹಗಳನ್ನು ಬೆಂಬಲಿಸುತ್ತದೆ. ಅಲ್ಪಸಂಖ್ಯಾತರ ಹಕ್ಕುಗಳ ಕುರಿತ ಇತ್ತೀಚಿನ ತೀರ್ಪುಗಳಂತೆ, ನ್ಯಾಯಾಧೀಶರು ಅವರ ಸಾಮಾಜಿಕ ಪರಿಸರದೊಂದಿಗೆ ಅನುವಂಶಿಕವಾಗಿ ಹೊಂದಿಕೆಯಾಗುವಂತೆ ಹಾಗೂ ಆಡಳಿತ ಸರ್ಕಾರದ ಸಿದ್ಧಾಂತಕ್ಕೆ ಅನುಗುಣವಾಗಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕುವ ಮೂಲಕ ತಮ್ಮ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ವಿಪರ್ಯಾಸವೆಂದರೆ, ಜನಹಿತ್ ಅಭಿಯಾನ ಪ್ರಕರಣದ ತೀರ್ಪು ಯಾವ ಜನ (ಸಾರ್ವಜನಿಕ) ರ ‘ಹಿತ ‘(ಹಿತಾಸಕ್ತಿ) ಕಾಯಬೇಕೆನ್ನುವುದರ ಬಗ್ಗೆ ನ್ಯಾಯಾಲಯದ ತಿಳಿವಳಿಕೆಯು ತಿರುಚಲ್ಪಟ್ಟಿರುವುದರ ಕುರಿತ ಪ್ರಕರಣವಾಗಿ ನೆನಪಿನಲ್ಲುಳಿಯಲಿದೆ.  

AV Eye Hospital ad

ಔಪಚಾರಿಕವಾಗಿ ಹೇಳುವುದಾದರೆ, ಈ ತೀರ್ಪು ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಹಿನ್ನೆಲೆಯ ಅಭ್ಯರ್ಥಿಗಳಿಗಾಗಿ EWS  ಮೀಸಲಾತಿಯನ್ನು ಪರಿಚಯಿಸಿದ 103 ನೇ ಸಂವಿಧಾನ ತಿದ್ದುಪಡಿ ಕಾಯಿದೆ-2019 ಸಾಂವಿಧಾನಿಕತೆಯ [ನಿರ್ಧಾರಕ್ಕೆ ]ಸೀಮಿತವಾಗಿದೆ. ಆರ್ಥಿಕ ಅಭಾವ-ಆಧಾರಿತ ಸಕಾರತ್ಮಕ ಕ್ರಿಯಾ ಯೋಜನೆ (Affirmative action) ಯನ್ನು ಎತ್ತಿಹಿಡಿಯುವಲ್ಲಿ ಸಾಂವಿಧಾನಿಕ ಪೀಠವು ಸರ್ವಾನುಮತದಿಂದ ಕೂಡಿದೆ. ಇಲ್ಲಿರುವ ಪ್ರಮುಖ ಭಿನ್ನಾಭಿಪ್ರಾಯವೆಂದರೆ SC, ST, ಮತ್ತು OBC ವರ್ಗಗಳಲ್ಲಿನ ಆರ್ಥಿಕವಾಗಿ ದುರ್ಬಲ ಅಭ್ಯರ್ಥಿಗಳನ್ನು ಈ ತಿದ್ದುಪಡಿಯಲ್ಲಿ ಹೇಳಿರುವಂತೆ EWS ಕೋಟಾದಿಂದ ಹೊರಗಿಡಬಹುದೇ ಎಂಬುದು.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ತೀರ್ಪಿಗೆ ಅಸಮ್ಮತಿ ವ್ಯಕ್ತಪಡಿಸಿದ ನ್ಯಾಯಾಧೀಶರು ಈ ತಿದ್ದುಪಡಿಯು 'ಬೇರ್ಪಡಿಸುವಿಕೆ ಮತ್ತು ತಾರತಮ್ಯದ ತತ್ವವನ್ನು' ಅನುಸರಿಸುತ್ತಿದೆ ಎಂದು ರದ್ದುಗೊಳಿಸಲಿಚ್ಛಿಸಿದರೆ ಪೀಠದ ಬಹುಸಂಖ್ಯಾತರ ಅಭಿಪ್ರಾಯಗಳು SC, ST ಮತ್ತು OBC ಕೋಟಾದ ಅಭ್ಯರ್ಥಿಗಳನ್ನು ಭಿನ್ನವಾಗಿ ಪರಿಗಣಿಸಬಹುದೆಂದು ವಾದಿಸಲು ತಾರ್ಕಿಕ ವರ್ಗೀಕರಣದ ಸಿದ್ಧಾಂತ (doctrine of reasonable classification)ವನ್ನು ಅವಲಂಬಿಸಿವೆ. ಇದು ತಾಂತ್ರಿಕ ಸೂಕ್ಷ್ಮತೆಯಲ್ಲ. ಸಾಮಾಜಿಕ ನ್ಯಾಯದ ಸಾಂವಿಧಾನಿಕ ತತ್ವವನ್ನು ವ್ಯಾಖ್ಯಾನಿಸುವಲ್ಲಿನ ಈ ಭಿನ್ನತೆಯು, ದೀರ್ಘಕಾಲದಿಂದ ಸ್ಥಾಪಿತವಾದ ನ್ಯಾಯಯುತ ಸಕಾರತ್ಮಕ ಕ್ರಿಯಾ ಯೋಜನೆಯನ್ನು ತೀವ್ರವಾಗಿ ಘಾಸಿಗೊಳಿಸಬಹುದು.

ನಿಖರತೆಯ ಕೊರತೆಯು ಗಂಭೀರ ಅನ್ಯಾಯಗಳಿಗೆ ಸಮಾನಾಂತರ ಎನ್ನಿಸಿಕೊಳ್ಳುತ್ತದೆ

ಈ ಹಲವು ವರ್ಷಗಳಲ್ಲಿ, ಭಾರತೀಯ ನ್ಯಾಯಾಲಯಗಳು (ವಿಶೇಷವಾಗಿ ಎನ್‌ಎಂ ಥಾಮಸ್‌-1976 ಮತ್ತು ಇಂದ್ರ ಸಾಹ್ನಿ -1992 ತೀರ್ಪುಗಳ ಮೂಲಕ) ನೀವು ಸಮಾನತೆಯ ಸಾಂವಿಧಾನಿಕ ತತ್ವಕ್ಕೆ ಅನುಗುಣವಾಗಿರಲು ಬಯಸಿದರೆ- ಸಕಾರಾತ್ಮಕ ಕ್ರಿಯಾ ಯೋಜನೆ ಅಥವಾ ಸಮಾಧಾನಕರ ತಾರತಮ್ಯ ನೀತಿಯನ್ನು ಎತ್ತಿ ಹಿಡಿದಿವೆ. ಆದರೆ ನ್ಯಾಯಾಲಯಗಳು ಈ ಅಂತಿಮ ದಾಳದ ಬಳಕೆಗೆ ಕೆಲವು ಕಟ್ಟುನಿಟ್ಟಾದ ಷರತ್ತುಗಳನ್ನು ಹಾಕಿವೆ.

ಮೊದಲನೆಯದಾಗಿ ಫಲಾನುಭವಿ ಗುಂಪನ್ನು ತಾರ್ಕಿಕವಾಗಿ ಮತ್ತು ಸಮಂಜಸವಾಗಿ ವ್ಯಾಖ್ಯಾನಿಸಬೇಕು. ಎರಡನೆಯದಾಗಿ, ಗುರುತಿಸಲ್ಪಟ್ಟ ಗುಂಪು, ಅನನುಕೂಲತೆ ಮತ್ತು ಕಡಿಮೆ ಪ್ರಾತಿನಿಧ್ಯದಿಂದ ಬಳಲುತ್ತಿದ್ದು ಮೀಸಲಾತಿಯ ಅತ್ಯಗತ್ಯವಿದೆ ಎಂಬುದಕ್ಕೆ ದೃಢವಾದ ಪುರಾವೆಗಳನ್ನು ಒದಗಿಸಬೇಕು. ಮೂರನೆಯದಾಗಿ, ಮೀಸಲಾತಿ ವ್ಯವಸ್ಥೆಗೆ ಮಾಡಿದ ಯಾವುದೇ ಬದಲಾವಣೆಗಳು ಒಟ್ಟಾರೆ ಮಿತಿಯನ್ನು ಉಲ್ಲಂಘಿಸಬಾರದು. ಅಂತಿಮವಾಗಿ, 'ಮೆರಿಟ್' ಅಥವಾ 'ದಕ್ಷತೆ' ಯ ಮೇಲೆ ಸ್ವೀಕಾರಾರ್ಹವಲ್ಲದ ಪರಿಣಾಮ ಬೀರುವಂತಿರಬಾರದು.  

ಜನಹಿತ ಅಭಿಯಾನದ ತೀರ್ಪಿನ ಅಸಾಧಾರಣ ಸಂಗತಿಯೆಂದರೆ EWS ಮೀಸಲಾತಿಯ ಸಮರ್ಥನೆಗೆ ಈ ಎಲ್ಲಾ ನಾಲ್ಕು ತತ್ವಗಳನ್ನು ತ್ಯಜಿಸಲು ನ್ಯಾಯಾಲಯವು ಸಮ್ಮತಿಸಿರುವುದು. ನ್ಯಾಯಾಲಯವು ‘ಅವರಿಗೆ‘ ಮೀಸಲಾತಿ ಕೊಡಲು ಒಂದು ಬಗೆಯ ಬಿಗಿ ಷರತ್ತುಗಳನ್ನು ಪ್ರತಿಪಾದಿಸುತ್ತದೆ ಆದರೆ 'ನಮ್ಮಂತಹವರಿಗೆ' ಮೀಸಲಾತಿ ಕೊಡಲು ಸಂಪೂರ್ಣ ವಿಭಿನ್ನವಾದ ಅಳತೆಗೋಲನ್ನು ಸಂತೋಷವಾಗಿಯೇ ಅಳವಡಿಸಿಕೊಳ್ಳತ್ತಿದೆ ಎಂಬ ಅನಿಸಿಕೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ.

ಮೊದಲು ವ್ಯಾಖ್ಯಾನದ ಸಮಸ್ಯೆಯನ್ನೇ ನೋಡಿ. ಸಕಾರಾತ್ಮಕ ಕ್ರಿಯಾ ಯೋಜನೆ ಎಂಬ ವ್ಯವಸ್ಥೆಯನ್ನು  ಜಾತಿ ಆಧಾರಿತ ಹಿಂದುಳಿದಿರುವಿಕೆ ಸರಿದೂಗಿಸಲು ಮೀರಿದ ಉದ್ದೇಶಗಳಿಗೆ ವಿಸ್ತರಿಸಬಹುದು ಎಂದು ಎಲ್ಲಾ ಐವರು ನ್ಯಾಯಾಧೀಶರು ಒಪ್ಪುತ್ತಾರೆ. ತಾತ್ವಿಕವಾಗಿ ಇದು ಉತ್ತಮವಾಗಿದೆ. ನಿಮ್ಮ ಪೋಷಕರಿಗೆ ಉತ್ತಮ ಶಾಲೆಗಳು ಮತ್ತು ದುಬಾರಿ ತರಬೇತಿ ವೆಚ್ಚಗಳನ್ನು ಭರಿಸಲು ಸಾಧ್ಯವಾಗದಿದ್ದರೆ ನೀವು ಉನ್ನತ ಶಿಕ್ಷಣ ಮತ್ತು ಉದ್ಯೋಗಗಳ ಸ್ಪರ್ಧೆಯಲ್ಲಿ ಗಂಭೀರ ಅನಾನುಕೂಲತೆಯಿಂದ ಬಳಲುತ್ತೀರಿ. ಈ ನ್ಯೂನತೆಗೆ ಪರಿಹಾರ ನೀಡಬೇಕು. ಆದರೆ ಈ ಕೊರತೆಯನ್ನು ಹೇಗೆ ವ್ಯಾಖ್ಯಾನಿಸಲಾಗುವುದು, ಕಾರ್ಯಗತಗೊಳಿಸುವುದು ಮತ್ತು ಸರಿದೂಗಿಸುವ ಕಾರ್ಯವಿಧಾನದ ರೂಪ ನಿಖರವಾಗಿ ಏನಾಗಿರಬೇಕು ಎಂಬುದೇ ನಿಜವಾದ ಪ್ರಶ್ನೆ.

ಬಹುಮತದ ಅಭಿಪ್ರಾಯವು ಈ ನಿರ್ಣಾಯಕ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಹುಮತದ ತೀರ್ಪು 'ಆರ್ಥಿಕ ನ್ಯಾಯವು ಈಗ ಸಾಮಾಜಿಕ ನ್ಯಾಯದ ತತ್ವಗಳಿಗೆ ಸರಿಸಮಾನ ಗಮನವನ್ನು ಪಡೆದುಕೊಂಡಿದೆ’ ಎಂದು ನಮಗೆ ತಿಳಿಸುತ್ತಲೇ EWS ಮೀಸಲಾತಿ ಸೃಷ್ಟಿಸಬಹುದಾದ ಮೂಲಭೂತ ವೈಪರೀತ್ಯಗಳನ್ನು ನಿರ್ಧರಿಸುವಲ್ಲಿ ವಿಫಲವಾಗಿದೆ.

ಬದಲಾಯಿಸಬಲ್ಲ ಮತ್ತು ಅನೇಕ ವೇಳೆ ತಾತ್ಕಾಲಿಕವೂ ಆಗಿರಬಹುದಾದ ಆರ್ಥಿಕ ಸಂಕಷ್ಟಗಳಿಗೆ ಪರಿಹಾರವಾಗಿ, ಜಾತಿಯಂತಹ ತೀವ್ರ ರಚನಾತ್ಮಕ ಮತ್ತು ನಿರಂತರ ಅನಾನುಕೂಲಗಳನ್ನೊಳಗೊಂಡ ಸಮಸ್ಯೆಗೆ ಅನುಸರಿಸುವ ಅದೇ ಕಾರ್ಯವಿಧಾನದ ಅಗತ್ಯವಿದೆಯೇ ಎಂದು ವಿವರಿಸಲು ಇದು ವಿಫಲವಾಗಿದೆ.

ಜಾತಿ ಆಧಾರಿತ ಮೀಸಲಾತಿಯ ಬಗ್ಗೆ ತಾನು ಸಾಮಾನ್ಯವಾಗಿ ತೋರುವ ಜಾಗರೂಕತೆಗೆ ಭಿನ್ನವಾಗಿ, ಇಲ್ಲಿ ನ್ಯಾಯಾಲಯವು ಪರಿಣಾಮಕಾರಿ ಪರೀಕ್ಷೆಗೆ ಒತ್ತಾಯ ಮಾಡುತ್ತಿಲ್ಲ. ಅಂದರೆ ಇತರ ಮೀಸಲಾತಿಯ ಫಲಾನುಭವಿಗಳಿಗೆ (SC /ST/OBC) ಸರಿ ಸಮಾನವಾದ ತೀವ್ರ ಆರ್ಥಿಕ ಅನಾನುಕೂಲತೆಗಳಿಂದ ಈ ಮೀಸಲಾತಿ ಫಲಾನುಭವಿ ಗುಂಪು ತೊಂದರೆ ಅನುಭವಿಸಿರಬೇಕು ಎಂಬ ಪರೀಕ್ಷೆ.

ಇದನ್ನು ಓದಿದ್ದೀರಾ? ʼವಂದೇ ಭಾರತ್ʼ ಕೇವಲ ಪ್ರಚಾರದ ರೈಲಾಗದಿರಲಿ

ಪ್ರಯೋಜನ ಪಡೆಯಲು ಗುರುತಿಸಲ್ಪಡುವ ಗುಂಪು ಒಂದೇ ರೀತಿಯ ಅನಾನುಕೂಲಗಳನ್ನು ಹೊಂದಿರಬೇಕಾದ ಅಗತ್ಯವನ್ನು ಸೂಚಿಸುವ ಏಕರೂಪತೆಯ ಪರೀಕ್ಷೆಯನ್ನು ನ್ಯಾಯಾಲಯವೂ ಕೈಬಿಟ್ಟಂತೆ ಕಾಣುತ್ತಿದೆ. EWS ವರ್ಗವು ಅತ್ಯಂತ ವೈವಿಧ್ಯಮಯವಾಗಿರಲು ಬದ್ಧವಾಗಿದೆ, ವಿಶೇಷವಾಗಿ ಆರ್ಥಿಕ ಪರಿಸ್ಥಿತಿಗಳ ವಿಷಯದಲ್ಲಿ, ನ್ಯಾಯಾಂಗ ಪೂರ್ವನಿದರ್ಶನಗಳು ಏಕರೂಪದ ವರ್ಗದ ಸೀಮಿತ ಗುರುತಿಸುವಿಕೆಗೆ ಅನುಕೂಲಕರವಾಗಿವೆ. ಇದನ್ನು ನಿರ್ಧರಿಸುವಲ್ಲಿ  ನಿಖರತೆಯ ಕೊರತೆಯು ಅತಿಯಾದ ಅಥವಾ ಅತಿ ಕಡಿಮೆ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಗಂಭೀರ ಅನ್ಯಾಯಕ್ಕೆ ದಾರಿಯಾಗಬಹುದು.

“ವ್ಯಾಖ್ಯಾನಿಸಲಾಗದ ವೈಯಕ್ತಿಕ ತೊಂದರೆಯನ್ನು ತಗ್ಗಿಸುವ ಉದ್ದೇಶದ ನಿಬಂಧನೆಯು (provision), ವಿರಳ ಸಾರ್ವಜನಿಕ ಸೇವಾ ನೇಮಕಾತಿಗಳಲ್ಲಿ ಆದ್ಯತೆಯ ಅನುದಾನಕ್ಕೆ ಹೇಗೆ ಅರ್ಹತೆ ಪಡೆಯಬಹುದು ಎಂಬುದು ಗೊಂದಲಕಾರಿಯಾಗಿದೆ. ಆರ್ಥಿಕ ಅನನುಕೂಲತೆಯ ಮಾರ್ಗಸೂಚಿ, ಗುರುತಿಸುವಿಕೆಯ ಮಾನದಂಡದ ಕುರಿತ ಪ್ರಶ್ನೆಗಳೊಂದಿಗೆ ಸುಪ್ರೀಂ ಕೋರ್ಟ್‌ ತನ್ನನ್ನು ತೊಡಗಿಸಿಕೊಳ್ಳಲಾಗುವುದಿಲ್ಲ ಮತ್ತು ‘ಅವಶ್ಯಕತೆ ಉದ್ಭವಿಸಿದಂತೆ ಅವನ್ನು ಪರಿಗಣಿಸಲು’ ಮುಕ್ತವಾಗಿದೆ ಎಂಬುದು ವಿಷಾದನೀಯ“ (ಪ್ಯಾರಾ 96-97, ಮಹೇಶ್ವರಿ ಜೆ).

(ಮುಂದುವರಿಯುವುದು)

ಅನುವಾದ | ರಂಜಿತಾ ಜಿ ಹೆಚ್‌
ನಿಮಗೆ ಏನು ಅನ್ನಿಸ್ತು?
1 ವೋಟ್
eedina app