ಸರ್ಕಾರಕ್ಕೆ ಡಬಲ್ ದೋಖಾ ಒಳ್ಳೆಯದೇ; ಆದರೆ, ರಾಜ್ಯದ ಪಾಲಿನ ಜಿಎಸ್‌ಟಿ, ಪರಿಹಾರ ಎಲ್ಲವೂ ಹುಸಿ!

Karnataka GST

15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,335 ಕೋಟಿ ರೂ. ಪರಿಹಾರದ ಹಣವೂ ಈವರೆಗೆ ಕರ್ನಾಟಕಕ್ಕೆ ಸಂದಾಯವಾಗಿಲ್ಲ. ಈ ನಡುವೆ ಕಳೆದ ಜೂನ್ 30ರಿಂದ ರಾಜ್ಯಗಳಿಗೆ ಪರಿಹಾರ ನೀಡಲಾಗದು ಎಂದು ಕೇಂದ್ರ ಸರ್ಕಾರ ಏಕಾಏಕಿ ನಿರ್ಧಾರ ಘೋಷಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಾಕಿ ಇರುವ ಜಿಎಸ್ ಟಿ ಪಾಲು ಚರ್ಚೆಯ ಮುನ್ನೆಲೆಗೆ ಬಂದಿದೆ

'ಜಿಎಸ್‌ಟಿ’ ಜಾರಿಯಾಗಿ ಐದು ವರ್ಷಗಳಾಗಿವೆ. ಆದರೆ, ಈ ಐದು ವರ್ಷದಲ್ಲಿ ತೆರಿಗೆ, ನಷ್ಟ ಪರಿಹಾರ ಮತ್ತು ಅನುದಾನ ಸೇರಿದಂತೆ ಕರ್ನಾಟಕದ ಖಜಾನೆಗೆ ಕನಿಷ್ಟ ₹1.9 ಲಕ್ಷ ಕೋಟಿ ತೆರಿಗೆ ಹಣ ಖೋತಾ ಆಗಿದೆ.  

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’, 'ಒಂದು ದೇಶ, ಒಂದು ತೆರಿಗೆ' ಎಂಬ ಕೇಂದ್ರ ಸರ್ಕಾರದ ಘೋಷಣೆಯೊಂದಿಗೆ ಜಾರಿಯಾದ ಮಹತ್ವಾಕಾಂಕ್ಷೆಯ ಯೋಜನೆಯೇ ‘ಜಿಎಸ್‌ಟಿ'. ಏಕರೂಪಿ ತೆರಿಗೆ ನೀತಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ಬಿಜೆಪಿ ನಾಯಕರ ಬಲವಾದ ನಂಬಿಕೆಯಾಗಿತ್ತು. ಆದರೆ, ‘ಜಿಎಸ್‌ಟಿ' ಜಾರಿಯಾದ ಕಳೆದ ಆರು ವರ್ಷಗಳಲ್ಲಿ ಕರ್ನಾಟಕದ ಆರ್ಥಿಕ ಸಾರ್ವಭೌಮತೆಗೆ ಪೆಟ್ಟು ಬಿದ್ದಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದ ರಾಜ್ಯ ಇಂದು ಸಾಲಕ್ಕಾಗಿ ಕೈಚಾಚುವ ಸ್ಥಿತಿ ಎದುರಾಗಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. 

ಆರ್ಥಿಕ ತಜ್ಞರು ಮತ್ತು ವಿರೋಧ ಪಕ್ಷದ ನಾಯಕರು ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಇಂತಹದ್ದೇ ಆರೋಪಗಳನ್ನು ಮುಂದಿಡುತ್ತಾ ಬಂದಿದ್ದಾರೆ. ಈ ಆರೋಪಕ್ಕೆ ಹಲವು ಅಂಕಿ-ಅಂಶಗಳು ಸಾಕ್ಷಿ ನುಡಿಯುತ್ತಲೇ ಇವೆ. ವರ್ಷದಿಂದ ವರ್ಷಕ್ಕೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲಿನಲ್ಲಿ ಕಡಿತವಾಗುತ್ತಲೇ ಇದೆ.

15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,335 ಕೋಟಿ ರೂ. ಪರಿಹಾರದ ಹಣವೂ ಈವರೆಗೆ ಕರ್ನಾಟಕಕ್ಕೆ ಸಂದಾಯವಾಗಿಲ್ಲ. ಈ ನಡುವೆ ಕಳೆದ ಜೂನ್ 30 ರಿಂದ ರಾಜ್ಯಗಳಿಗೆ ಪರಿಹಾರ ನೀಡಲಾಗದು ಎಂದು ಕೇಂದ್ರ ಸರ್ಕಾರ ಏಕಾಏಕಿ ನಿರ್ಧಾರ ಘೋಷಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಾಕಿ ಇರುವ ಜಿಎಸ್ ಟಿ ಪಾಲು ಸೇರಿದಂತೆ ಹಲವು ವಿಷಯಗಳು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿವೆ.

ರಾಜ್ಯದಿಂದ ಸಂಗ್ರಹವಾಗುವ ಜಿಎಸ್‌ಟಿ ಪ್ರಮಾಣ ಎಷ್ಟು?

ಕೇಂದ್ರ ಹಣಕಾಸು ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ಭಾರತದಲ್ಲೇ ಅತ್ಯಧಿಕ ಜಿಎಸ್‌ಟಿ ಸಂಗ್ರಹವಾಗುವ ರಾಜ್ಯ ಮಹಾರಾಷ್ಟ್ರ. ದೇಶದ ವಾಣಿಜ್ಯ ರಾಜಧಾನಿ ಎನಿಸಿಕೊಂಡಿರುವ ಮಹಾರಾಷ್ಟ್ರದಿಂದ ಪ್ರತಿ ತಿಂಗಳು ಸರಾಸರಿ ₹16,000 ಕೋಟಿ ಹಣ ಜಿಎಸ್‌ಟಿ ರೂಪದಲ್ಲಿ ಕೇಂದ್ರ ಸರ್ಕಾರದ ಖಜಾನೆಗೆ ಸೇರುತ್ತದೆ. ಮಹಾರಾಷ್ಟ್ರದ ಬಳಿಕ ಜಿಎಸ್‌ಟಿ ಸಂಗ್ರಹದಲ್ಲಿ ಮುಂಚೂಣಿಯಲ್ಲಿರುವುದೇ ಕರ್ನಾಟಕ.

ಕರ್ನಾಟಕದಲ್ಲಿ ಪ್ರತಿ ತಿಂಗಳು ಸರಾಸರಿ ₹8,335 ಕೋಟಿ ಜಿಎಸ್‌ಟಿ ಸಂಗ್ರಹವಾಗುತ್ತದೆ. ಈ ಪ್ರಮಾಣ ಪ್ರತಿವರ್ಷ ಶೇ.12ರಷ್ಟು ಏರಿಕೆಯಾಗುತ್ತಿದೆ. ಈ ವರ್ಷದ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ₹9,176 ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಶೇ.21ರಷ್ಟು ಏರಿಕೆಯಾಗಿದೆ. ಬೆಂಗಳೂರೊಂದರಲ್ಲೇ ಪ್ರತಿವರ್ಷ ಲಕ್ಷಾಂತರ ಕೋಟಿ ರೂ. ಐಟಿ (Infermation Technology) ರಫ್ತು ಮಾಡಲಾಗುತ್ತಿದೆ. ಹೀಗಾಗಿ ಕೇಂದ್ರದ ಪಾಲಿಗೆ ಕರ್ನಾಟಕ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ ಎಂಬುದು ಈ ಎಲ್ಲ ಅಂಕಿಅಂಶಗಳಿಂದ ದೃಢವಾಗುತ್ತದೆ.

ಜಿಎಸ್‌ಟಿಯಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

ಪಿಆರ್‍‌ಎಸ್‌ ಸಂಸ್ಥೆ ನಡೆಸಿರುವ ರಾಜ್ಯ ಹಣಕಾಸಿನ ಅವಲೋಕನ ವರದಿಯ ಪ್ರಕಾರ, ಜಿಎಸ್‌ಟಿ ಜಾರಿಯಾಗುವ ಮುನ್ನ 2010-11ರಿಂದ 2013-14ರ ಅವಧಿಯಲ್ಲಿ ಕೇಂದ್ರದಿಂದ ರಾಜ್ಯದ ತೆರಿಗೆ ಪಾಲಿನ ನಿರೀಕ್ಷೆ ಇದ್ದದ್ದು ₹45,713 ಕೋಟಿ. ಆದರೆ, ಆ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ₹47,036 ಕೋಟಿ. ಈ ಅವಧಿಯಲ್ಲಿ ರಾಜ್ಯಕ್ಕೆ ನಿರೀಕ್ಷೆಗೂ ಮೀರಿದ ಲಾಭವಾಗಿತ್ತು. ಆದರೆ, ಜಿಎಸ್‌ಟಿ ಜಾರಿಯ ನಂತರ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಾಗೂ ಅನುದಾನದಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ.

2015-16ರಿಂದ 2019-20ರ ಅವಧಿಯಲ್ಲಿ; ಅಂದರೆ ಜಿಎಸ್‌ಟಿ ಜಾರಿಯ ಬಳಿಕ ರಾಜ್ಯದ ನಿರೀಕ್ಷೆ ಇದ್ದದ್ದು ₹2.37 ಲಕ್ಷ ಕೋಟಿ ಜಿಎಸ್‌ಟಿ ಪಾಲು. ಆದರೆ, ವಾಸ್ತವವಾಗಿ ಬಂದದ್ದು ಕೇವಲ ₹1.47 ಲಕ್ಷ ಕೋಟಿ! ಅಂದರೆ ರಾಜ್ಯದ ನಿರೀಕ್ಷೆಗಿಂತ ₹90 ಸಾವಿರ ಕೋಟಿ ಕಡಿಮೆ ಹಣ ಕೇಂದ್ರದಿಂದ ಸಂದಾಯವಾಗಿದೆ. 2020-22ರ ಅವಧಿಯಲ್ಲೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಒಟ್ಟು ₹14,000 ಕೋಟಿ ಬಾಕಿ ಉಳಿಸಿದೆ. ಬಾಕಿ ಹಣ ಸದ್ಯಕ್ಕಂತೂ ಸಂದಾಯವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಜಿಎಸ್‌ಟಿ ಪರಿಹಾರವೂ ಖೋತಾ

ಜಿಎಸ್‌ಟಿ ಜಾರಿಯಾದ ನಂತರ ದೇಶದ ಇತರೆ ಎಲ್ಲ ರಾಜ್ಯಗಳಿಗಿಂತಲೂ ಕರ್ನಾಟಕಕ್ಕೆ ಹೆಚ್ಚು ನಷ್ಟವಾಗಿದೆ. ಅಂಕಿಅಂಶಗಳ ಪ್ರಕಾರ ಎಲ್ಲ ತೆರಿಗೆಯೂ ಸೇರಿದಂತೆ ಕರ್ನಾಟಕದಿಂದ ಕೇಂದ್ರಕ್ಕೆ ಪ್ರತಿವರ್ಷ 3.75 ಲಕ್ಷ ಕೋಟಿ ತೆರಿಗೆ ಹಣ ಸಂಗ್ರಹವಾಗುತ್ತದೆ. ಆದರೆ, ರಾಜ್ಯಕ್ಕೆ ಇದರಿಂದ ವಾಪಾಸ್ ಸಿಗುವುದು ಕೇವಲ 70,000 ಕೋಟಿ ಮಾತ್ರ. ಇದೇ ಕಾರಣಕ್ಕೆ ರಾಜ್ಯವಾರು ನಷ್ಟ ತುಂಬಿಕೊಡುವ ನಿಟ್ಟಿನಲ್ಲಿ 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಪ್ರತಿವರ್ಷ ₹5,335 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. 

ಆದರೆ, ಪರಿಹಾರ ಘೋಷಿಸಿ ಎರಡು ವರ್ಷ ಕಳೆದರೂ ಈವರೆಗೆ ರಾಜ್ಯದ ಖಾತೆಗೆ ಪರಿಹಾರದ ಹಣ ಜಮಾ ಆಗಿಲ್ಲ. ಹಣಕಾಸು ಆಯೋಗ ಒಂದು ಸ್ವಾಯತ್ತ ಸಂಸ್ಥೆ. ನಿಯಮದ ಪ್ರಕಾರ ಈ ಸಂಸ್ಥೆ ಕೇಂದ್ರ ಸರ್ಕಾರಕ್ಕೆ ಯಾವ ಶಿಫಾರಸನ್ನು ನೀಡಿದರೂ ಸಹ ಕೇಂದ್ರ ಸರ್ಕಾರ ಅದನ್ನು ತಳ್ಳಿ ಹಾಕುವಂತಿಲ್ಲ. ಶಿಫಾರಸಿನಂತೆ ಪರಿಹಾರದ ಹಣವನ್ನು ನೀಡಲೇಬೇಕು. ಆದರೆ, ಕರ್ನಾಟಕದಿಂದಲೇ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯೆ ಸಚಿವೆ ನಿರ್ಮಲಾ ಸೀತಾರಾಮನ್ ಪರಿಹಾರ ನೀಡುವ ನಿಮ್ಮ ಶಿಫಾರಸನ್ನು ಹಿಂಪಡೆಯಿರಿ ಎಂದು ಸ್ವತಃ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಈ ಮೂಲಕ ನಮ್ಮ ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತ ಪಾಲನ್ನೂ ತಡೆಹಿಡಿದಿದ್ದಾರೆ. ಇಂತಹ ಕೆಲವು ಕರ್ನಾಟಕ ವಿರೋಧಿ ನಿಲುವುಗಳ ಕಾರಣದಿಂದಲೂ ರಾಜ್ಯದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ ಎಂಬ ಅಭಿಪ್ರಾಯವಿದೆ.

ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ರಸ್ತೆ ಸಂಪರ್ಕ ಅತ್ಯಂತ ದುರ್ಗತಿಗೆ ತಲುಪಿದೆ. ಮಿಂಚಿನ ವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿನ ವಾಹನ ದಟ್ಟಣೆ ನಿರ್ವಹಣೆಗೆ ಪೆರಿಪೆರಲ್ ರಿಂಗ್ ರೋಡ್, ಮೆಟ್ರೋ ಮೂರನೇ ಹಂತದ ಕಾಮಗಾರಿ, ನಗರದಲ್ಲಿ ಎಲಿವೇಟೆಡ್ ಸಂಪರ್ಕ ವ್ಯವಸ್ಥೆ ಸೇರಿದಂತೆ ನಾನಾ ಯೋಜನೆಗಳಿಗೆ ಅಡಿಗಲ್ಲು ಹಾಕಲಾಗಿದೆ. ತುರ್ತಾಗಿ ನೆರವೇರಬೇಕಾದ ನೀರಾವರಿ ಯೋಜನೆಗಳ ದೊಡ್ಡ ಪಟ್ಟಿಯೇ ಸರ್ಕಾರದ ಮುಂದಿದೆ.

ಇದನ್ನು ಓದಿದ್ದೀರಾ? ಜಿಎಸ್‌ಟಿ| ಸರ್ಕಾರಿ ನೌಕರರು ಸುಸ್ತೋ ಸುಸ್ತು, ಇನ್ನು ಬಡವರ ಪಾಡು ಕೇಳುವವರಾರು!

ಆದರೆ, ಕೇಂದ್ರ ಸರ್ಕಾರದಿಂದ ಬರಬೇಕಾದ ನಮ್ಮ ನ್ಯಾಯಯುತ ಜಿಎಸ್‌ಟಿ ಪಾಲು, ಪರಿಹಾರದ ಹಣ ಮತ್ತು ಅನುದಾನಗಳು ಬರದೇ ಇರುವ ಕಾರಣಕ್ಕೆ ಈ ಎಲ್ಲ ಯೋಜನೆಗಳು ನೆನೆಗುದಿಗೆ ಬಿದ್ದಿದೆ. ರಾಜ್ಯದ ಮತದಾರರು ಆರಿಸಿ ಕಳಿಸಿರುವ 26 ಜನ ಬಿಜೆಪಿ ಸಂಸದರು ಮಾತ್ರ ಈ ಬಗ್ಗೆ ಸಂಸತ್‌ನಲ್ಲಿ ಈವರೆಗೆ ತುಟಿ ಬಿಚ್ಚಿಲ್ಲ. ಇನ್ನೂ ಮುಖ್ಯಮಂತ್ರಿಗಳ ಆದಿಯಾಗಿ ಇಡೀ ಸಚಿವ ಸಂಪುಟವೇ ಮೌನ ವ್ರತ ಆಚರಿಸುತ್ತಿದ್ದು, ಕೇಂದ್ರದ ಮುಂದೆ ತಲೆಬಾಗಿ ನಿಂತಿದೆ. ಪರಿಣಾಮ ಕರ್ನಾಟಕದ ಆರ್ಥಿಕತೆ ಅಥಃಪತನದತ್ತ ಸಾಗಿದೆ ಎನ್ನಲಾಗುತ್ತಿದೆ.

ನಿಮಗೆ ಏನು ಅನ್ನಿಸ್ತು?
10 ವೋಟ್