ಮೋದಿ 8 | ಭಾರತದ ಆರ್ಥಿಕತೆಯನ್ನು ಹಳ್ಳಕ್ಕೆ ದೂಡಿದ ಎಂಟು ಎಡವಟ್ಟುಗಳು

Economy 3

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕತೆ ವಿಷಯದಲ್ಲಿ ಒಂದಲ್ಲ ಒಂದು ಎಡವಟ್ಟು ಸಾಮಾನ್ಯ ಎನಿಸಿದೆ. ಆದರೆ, ಸರ್ಕಾರದ ಮಂದಿ ಇದನ್ನು ಒಪ್ಪಿಕೊಳ್ಳುವುದು ಹಾಗಿರಲಿ, 'ಸ್ವಾತಂತ್ರ್ಯಾ ನಂತರದ ಕ್ರಾಂತಿಕಾರಕ ಸುಧಾರಣೆ' ಎಂದೇ ಸಾರುತ್ತಿದ್ದಾರೆ. ಹಾಗಾದರೆ, ಆ ಎಡವಟ್ಟುಗಳೇನು? ಇಲ್ಲಿದೆ ಅವಲೋಕನ

ಹಣಕಾಸು ಸಚಿವಾಲಯದ ಮಾಜಿ ಸಲಹೆಗಾರರಾದ ಅರವಿಂದ ಸುಬ್ರಮಣಿಯನ್, ಭಾರತ ಸರ್ಕಾರದ ನಿವೃತ್ತ ಸಾಂಖ್ಯಿಕ ಅಧಿಕಾರಿ ಪ್ರಣಬ್ ಸೇನ್ ಮೊದಲಾದ ಹಲವು ಮಂದಿ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುವಂತೆ, ಕೋವಿಡ್ ಪೂರ್ವದಲ್ಲಿನ ಆರ್ಥಿಕ ಬಿಕ್ಕಟ್ಟಿಗೆ ಒಕ್ಕೂಟ ಸರ್ಕಾರ ಅನುಸರಿಸಿದ ತಪ್ಪು-ತಪ್ಪು ನೀತಿಗಳು, ಕಾರ್ಯಕ್ರಮಗಳು ಕಾರಣ. ಇದರಲ್ಲಿ ಮುಖ್ಯವಾಗಿ ಎರಡು ಸಂಗತಿಗಳನ್ನು ಉಲ್ಲೇಖಿಸಬಹುದಾಗಿದೆ; ಡಿಮಾನಿಟೈಸೇಶನ್ (ನೋಟು ಅಮಾನ್ಯ) ಮತ್ತು ಜಿಎಸ್‍ಟಿ (ಗೂಡ್ಸ್ ಅಂಡ್ ಸರ್ವೀಸಸ್ ಟ್ಯಾಕ್ಸ್). ಈ ಎರಡು ಕ್ರಮಗಳು ನಮ್ಮ ಆರ್ಥಿಕತೆಗೆ ಮಾತ್ರ ಬಿಕ್ಕಟ್ಟನ್ನು ಉಂಟುಮಾಡಲಿಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಸಾಂವಿಧಾನಿಕ ಒಕ್ಕೂಟ ತತ್ವಕ್ಕೂ ಧಕ್ಕೆ ಉಂಟುಮಾಡಿದವು.

ರಾಮಚಂದ್ರ ಗುಹಾ ಹೇಳಿದಂತೆ, ಮೋದಿ ಅವರಿಗೆ ಮತ್ತು ಅವರ ಸರ್ಕಾರಕ್ಕೆ 'ತಜ್ಞ'ರ ಬಗ್ಗೆ, 'ತಜ್ಞರ ಸಲಹೆ'ಗಳ ಬಗ್ಗೆ ವಿಶ್ವಾಸವಿಲ್ಲ. 'ಹಾರ್ವರ್ಡ್ ಮತ್ತು ಹಾರ್ಡ್‍ ವರ್ಕ್' ಎಂಬ ಮಾತಿನ ಮೂಲಕ ಮಾಜಿ ಪ್ರಧಾನಿ ಮನಮೋಹನ್‍ ಸಿಂಗ್ ಅವರನ್ನು ಮೋದಿ ಹೀಯಾಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದೊಂದು ಮಾನಸಿಕ ರೋಗ. ತನ್ನಲ್ಲಿ ಯಾವುದು ಇಲ್ಲವೋ ಅದನ್ನು ಅವರು ಬೇರೆಯವರಲ್ಲಿಯೂ ಕಾಣಲು ಇಷ್ಟಪಡುವುದಿಲ್ಲ. ಸ್ವಾತಂತ್ರ್ಯಾ ನಂತರ ಯಾವ ಸಂದರ್ಭದಲ್ಲಿಯೂ ಈ ಸರ್ಕಾರದಲ್ಲಿ ಕಂಡುಬರುವಂತಹ 'ಬುದ್ಧಿಜೀವಿ' ವಿರೋಧಿ ಮನೋವ್ಯಾಧಿಯನ್ನು ಭಾರತ ಕಂಡಿರಲಿಲ್ಲ. ವಿದ್ವಾಂಸರು, ಕವಿಗಳು, ಬರಹಗಾರರು, ಸಮಾಜ ವಿಜ್ಞಾನಿಗಳು ಎಂದರೆ ಮೋದಿ ಅವರಿಗೆ ಮತ್ತು ಅವರ ಸರ್ಕಾರಕ್ಕೆ ಇನ್ನಿಲ್ಲದ ಅಸೂಯೆ, ಅಪಥ್ಯ. (ಕರಣ್ ಥಾಪರ್ ಅವರ ಸಂದರ್ಶನದ ವೇಳೆ, ನರೇಂದ್ರ ಮೋದಿ ಅವರು ಪ್ರಶ್ನೆಗಳನ್ನು ಎದುರಿಸಲಾಗದೆ ಅರ್ಧದಲ್ಲಿಯೇ ಎದ್ದುಹೋದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು).

ಇಂದಿನ ಕರ್ನಾಟಕದಲ್ಲಿ ನಡೆದಿರುವ ಕವಿ-ಬರಹಗಾರರನ್ನು ಹೀಯಾಳಿಸುವ (‘ಪೆನ್ನು ಬಿಟ್ಟು ಮೈಕು ಹಿಡಿದವರು’ ಎನ್ನುವ, ‘ಬರಗೂರು ಗ್ಯಾಂಗ್’ ಎನ್ನುವ) ಪ್ರವೃತ್ತಿ ಕೂಡ ಅಂಥದ್ದೇ ಬೆಳವಣಿಗೆಗೆ ಸಾಕ್ಷಿ. ಹೊಗಳುಭಟ್ಟರು, ವಂದಿಮಾಗಧರನ್ನು ಮಾತ್ರ ಇವರು ಸಹಿಸಿಕೊಳ್ಳುತ್ತಾರೆ. ಇಂತಹ ನರೇಂದ್ರ ಮೋದಿ ಅವರ ಎಂಟು ಸಂವತ್ಸರಗಳ ಆಳ್ವಿಕೆಯಲ್ಲಿ ಆರ್ಥಿಕತೆ ಎದುರಿಸಿದ ಮತ್ತು ಎದುರಿಸುತ್ತಿರುವ ಅಪಾಯಗಳನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ.

ಉಳ್ಳವರ ಪರವಾದ ತೆರಿಗೆ ನೀತಿ

Image
Economy 11
ಸಾಂದರ್ಭಿಕ ಚಿತ್ರ

ಒಂದು ಸರ್ಕಾರದ ಆರ್ಥಿಕ ನೀತಿಯಲ್ಲಿ ನಿರ್ಣಾಯಕವಾದ ಸಂಗತಿಯೆಂದರೆ ಅದರ ತೆರಿಗೆ ನೀತಿ. ಸರ್ಕಾರವೊಂದು ನಡೆಯುವುದೇ ತೆರಿಗೆ ಹಣದಲ್ಲಿ ಎಂಬುದನ್ನು ಪ್ರತ್ಯೇಕ ಹೇಳುವ ಅಗತ್ಯವಿಲ್ಲ. ತೆರಿಗೆಗಳಿಗೆ ಸಂಬಂಧಿಸಿದ ಮುಖ್ಯ ನಿಯಮವೆಂದರೆ ಸಮಾನತೆ. ಯಾರಿಗೆ ತೆರಿಗೆ ಹೊರುವ ಸಾಮರ್ಥ್ಯ ಉತ್ತಮವಾಗಿರುತ್ತದೋ ಅವರು ಹೆಚ್ಚಿನ ತೆರಿಗೆ ಭಾರ ಹೊರಬೇಕು ಎಂಬುದು ನಿಯಮ. ಇದು ಜನರ ವರಮಾನವನ್ನು ಅವಲಂಬಿಸಿದೆ. ಮೋದಿ ಸರ್ಕಾರದ ತೆರಿಗೆ ನೀತಿಯು ಪ್ರತಿಗಾಮಿಯಾಗಿದೆ. ಏಕೆಂದರೆ, ಅಪ್ರತ್ಯಕ್ಷ ತೆರಿಗೆಗಳ ಬಗ್ಗೆ ತೋರುತ್ತಿರುವಷ್ಟು ಆಸಕ್ತಿಯನ್ನು ಪ್ರತ್ಯಕ್ಷ ತೆರಿಗೆಗಳ ಬಗ್ಗೆ ತೋರುತ್ತಿಲ್ಲ. ಪ್ರತ್ಯಕ್ಷ ತೆರಿಗೆಗಳಿಂದ ಹೆಚ್ಚಿನ ಆದಾಯ ಸಂಗ್ರಹಿಸುವ ಇರಾದೆಯೂ ಇದ್ದಂತೆ ಕಾಣುವುದಿಲ್ಲ. ಜಿಎಸ್‍ಟಿ ಒಂದು ಅಪ್ರತ್ಯಕ್ಷ ತೆರಿಗೆ. ಈ ತೆರಿಗೆಯನ್ನು ಜಾರಿಗೊಳಿಸಿದ್ದನ್ನೇ ಮೋದಿ ಸರ್ಕಾರ, ‘ಸ್ವಾತಂತ್ರ್ಯಾ ನಂತರ ತಂದ ಕ್ರಾತಿಕಾರಕ ಸುಧಾರಣೆ’ ಎಂದು ಹೇಳಿಕೊಳ್ಳುತ್ತಿದೆ. ನಿಜಕ್ಕೂ ಇವರದ್ದು ಬಡವರ, ಕೆಳ ವರ್ಗದ, ಕೆಳ ಮಧ್ಯಮ ವರ್ಗಗಳ ರಕ್ತ ಹೀರುವಂತಹ ತೆರಿಗೆ ನೀತಿ. ಉಳ್ಳವರಿಗೆ ಪ್ರತ್ಯಕ್ಷ ತೆರಿಗೆಯಲ್ಲಿ ವಿನಾಯಿತಿ ಮೇಲೆ ವಿನಾಯಿತಿ; ಉಳಿದವರಿಗೆ ತೆರಿಗೆ ಮೇಲೆ ತೆರಿಗೆ.

ಕಾರ್ಪೊರೇಟೀಕರಣ-ಖಾಸಗೀಕರಣಗಳಿಗೆ ಬಿಡಿಬೀಸು ಆಹ್ವಾನ

Image
Economy 12
ಉದ್ಯಮಿ ಗೌತಮ್ ಅದಾನಿ

ಈ ಸರ್ಕಾರದ ಮಹತ್ವದ ಸಾಧನೆಯೆಂದರೆ, ಬಂಡವಾಳಿಗರಿಗೆ ಗೌರವ ದೊರೆಯುವಂತೆ ಮಾಡಿದ್ದು. ಬಂಡವಾಳಿಗರಿಗೆ ಮೋದಿ ಸರ್ಕಾರವು ‘ವೆಲ್ತ್ ಕ್ರಿಯೇಟರ್ಸ್’ ಎಂಬ ಅಭಿದಾನ ನೀಡಿದೆ. ಅರ್ಥಶಾಸ್ತ್ರದಲ್ಲಿನ ಮೊದಲ ಪಾಠವೆಂದರೆ, ‘ಸಂಪತ್ತಿನ ಮೂಲ ಶ್ರಮಶಕ್ತಿ’ ಎಂಬುದಾಗಿದೆ. ಆದರೆ, ಈ ಸರ್ಕಾರಕ್ಕೆ ಕಾರ್ಮಿಕ ವರ್ಗದ ಬಗ್ಗೆ ಗೌರವವಿಲ್ಲ. ಜೊತೆಗೆ, ಭಾರತವು ಹಿಂದುಳಿದಿರುವುದಕ್ಕೆ ಅಂತಹ ವರ್ಗಗಳೇ ಕಾರಣ ಎಂಬ ಪ್ರಣಾಳಿಕೆಯನ್ನು ಪ್ರಚುರಪಡಿಸುತ್ತದೆ. ಬಂಡವಾಳ ಹೂಡಿಕೆಗೆ, ಅಧಿಕ ಉತ್ಪಾದನೆಗೆ, ಕೈಗಾರಿಕಾ ಕ್ರಾಂತಿಗೆ ಕಾರ್ಮಿಕ ಸಂಘಗಳು ಅಡ್ಡಿ ಎಂಬುದು ಇವರ ನಂಬಿಕೆ. ಈ ಕಾರಣಕ್ಕೆ ಅನೇಕ ದಶಕಗಳ ಕಾಲ ಹೋರಾಟ ಮಾಡಿ ಗಳಿಸಿಕೊಂಡಿದ್ದ ವಿವಿಧ ರೀತಿಯ ಕಾರ್ಮಿಕ ಕಾಯಿದೆಗಳನ್ನು ತೆಗೆದು ಹಾಕಿ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರೂಪಿಸಲಾಗಿದೆ. ಇದನ್ನು ಮೋದಿ ಸರ್ಕಾರವು ‘ಗೇಮ್ ಚೇಂಜರ್’ ಎಂದು ಬಣ್ಣಿಸಿಕೊಳ್ಳುತ್ತಿದೆ. ಈ ಸಂಹಿತೆಗಳಲ್ಲಿ ಬಂಡವಾಳಿಗರ ಅಗತ್ಯಗಳನ್ನು ತಕ್ಕಂತೆ ನಿಯಮ ಸೇರಿಸಲಾಗಿದೆಯೇ ವಿನಾ ಕಾರ್ಮಿಕರ ಬೇಡಿಕೆಗಳನ್ನು ಗಮನಕ್ಕೆ ತೆಗೆದುಕೊಂಡಿಲ್ಲ.

ಮಿತಿ ಮೀರಿ ಬೆಳೆದ ಸಾಲ

Image
Economy 10
ಸಾಂದರ್ಭಿಕ ಚಿತ್ರ

ಸರ್ಕಾರಗಳು ಸಾಲ ಎತ್ತದೆ ಆಡಳಿತ-ಅಭಿವೃದ್ಧಿ ನಿರ್ವಹಣೆ ಮಾಡುವುದು ಸಾಧ್ಯವಿಲ್ಲ. ಆದರೆ, ಸಾಲಕ್ಕೆ ಸಂಬಂಧಿಸಿದ ನಿಯಮವೆಂದರೆ, ಸಾಲವನ್ನು ಬಂಡವಾಳ ನಿರ್ಮಾಣಕ್ಕೆ ಬಳಸಿಕೊಂಡರೆ ಮಾತ್ರ ಉಪಯುಕ್ತವಾಗುತ್ತದೆ. ಬದಲಿಗೆ, ಆದಾಯ (ಕೋಶೀಯ) ಕೊರತೆಯನ್ನು ತುಂಬಿಕೊಳ್ಳಲು ಬಳಸಿದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರ್ಥ. ಮೋದಿ ಸರ್ಕಾರವು ಸಾಲ ಎತ್ತಿದ ಮೊತ್ತವನ್ನು ಚಾಲ್ತಿ ವೆಚ್ಚಗಳಿಗೆ ಬಳಸುತ್ತಿದೆಯೇ ವಿನಾ ಭೌತಿಕ ಬಂಡವಾಳ ನಿರ್ಮಾಣಕ್ಕೆ ಬಳಸುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, 1950-51ರಿಂದ 2012-13ರವರೆಗೆ ಸರ್ಕಾರಗಳು ಮಾಡಿದ ಸಾಲ 50.70 ಲಕ್ಷ ಕೋಟಿ ರೂಪಾಯಿ. ಆದರೆ, 2014ರಿಂದ 2022ರ ನಡುವಿನ ಮೋದಿ ಆಳ್ವಿಕೆಯ ಎಂಟು ವರ್ಷಗಳಲ್ಲಿ ಮಾಡಿರುವ ಸಾಲ 102 ಲಕ್ಷ ಕೋಟಿ ರೂಪಾಯಿ. ಈಗ ಭಾರತ ಸರ್ಕಾರದ ಒಟ್ಟು ಸಾಲ 152.76 ಲಕ್ಷ ಕೋಟಿ ರೂಪಾಯಿಯಾಗಿದೆ. ಸ್ವಾತಂತ್ರ್ಯಾ ನಂತರದ 65 ವರ್ಷಗಳಲ್ಲಿ ಸರ್ಕಾರಗಳು ಮಾಡಿದ ಸಾಲ ಎಷ್ಟಿತ್ತೋ ಅದರ ಎರಡು ಪಟ್ಟು ಸಾಲವನ್ನು ಮೋದಿ ಸರ್ಕಾರವು ಕೇವಲ ಎಂಟು ವರ್ಷದಲ್ಲಿ ಮಾಡಿದೆ. ಇದೇ ಅದರ ಸಾಧನೆ.

ಸಾರ್ವಜನಿಕ ಉದ್ದಿಮೆಗಳ ಮಾರಾಟ

Image
Economy 13
ಸಾಂದರ್ಭಿಕ ಚಿತ್ರ

ಕಳೆದ 70 ವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯರ ತೆರಿಗೆ ಹಣದಿಂದ ನಿರ್ಮಿಸಿರುವ ಸಾರ್ವಜನಿಕ ಉದ್ದಿಮೆಗಳನ್ನು ಮೋದಿ ಅವರು ಒಂದೋ ಮಾರುತ್ತಿದ್ದಾರೆ, ಇಲ್ಲವೇ ಗುತ್ತಿಗೆ ನೀಡುತ್ತಿದ್ದಾರೆ. ಆಸ್ತಿ ಮಾರಾಟವು ಗೌರವದ ಸಂಗತಿಯಲ್ಲ. ಇದು ದಿವಾಳಿತನವನ್ನು ಸೂಚಿಸುತ್ತದೆ. ನಮ್ಮ ಆರ್ಥಿಕತೆಯನ್ನು ದಿವಾಳಿ ಹಂತಕ್ಕೆ ತಂದು ನಿಲ್ಲಿಸಿರುವುದೇ ಈ ಸರ್ಕಾರದ ಸಾಧನೆ ಎನ್ನಬಹುದೇನೋ. ತೆರಿಗೆಗಳ ಮೂಲಕ ಸಂಪನ್ಮೂಲವನ್ನು ಸಂಗ್ರಹಿಸಿಕೊಳ್ಳುವುದು ಒಂದು ಸಮರ್ಥ ಸರ್ಕಾರದ ಲಕ್ಷಣ. ಅದನ್ನು ಬಿಟ್ಟು, ಆಸ್ತಿಯನ್ನು - ರಸ್ತೆಗಳು, ಬಂದರುಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಕ್ರೀಡಾಂಗಣಗಳು, ಹೆದ್ದಾರಿಗಳು, ವಿದ್ಯುತ್ ಸ್ಥಾವರಗಳು, ಕಲ್ಲಿದ್ದಲು ಗಣಿಗಳು, ಬ್ಯಾಂಕುಗಳು, ಸಾರ್ವಜನಿಕ ಭೂಮಿ ಮುಂತಾದವುಗಳನ್ನು ಮಾರಾಟ ಮಾಡುತ್ತಿದ್ದಾರೆ ಇಲ್ಲವೇ, 50-60 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡುತ್ತಿದ್ದಾರೆ. ಈ ಬಗೆಯ ತೆರಿಗೆ ನೀತಿಗಳು ಅಭಿವೃದ್ಧಿಗೂ ಪೂರಕವಲ್ಲ, ಸಮಾನತೆಗೂ ಸಹಾಯಕವಲ್ಲ.

ಅಸಮಾನತೆಯು ಬಡವರನ್ನು ಕೊಲ್ಲುತ್ತಿದೆ

Image
Economy 8
ಸಾಂದರ್ಭಿಕ ಚಿತ್ರ

ಆಕ್ಸ್‌ಫಾಮ್ ಅಂತಾರಾಷ್ಟ್ರೀಯ ಸಂಸ್ಥೆಯು ಅಸಮಾನತೆಯನ್ನು ಕುರಿತಂತೆ ಪ್ರಕಟಿಸಿರುವ 2022ರ ವರದಿಯ ಶೀರ್ಷಿಕೆ 'ಅಸಮಾನತೆಯು ಕೊಲ್ಲುತ್ತದೆ.' ಇದರಲ್ಲಿ ಭಾರತವನ್ನು ‘ಅತಿ ಹೆಚ್ಚು ಅಸಮಾನತೆಯ ದೇಶ’ ಎಂದು ಕರೆಯಲಾಗಿದೆ. ನಮ್ಮ ದೇಶದಲ್ಲಿ 2020-21 ಮತ್ತು 2021-22ರಲ್ಲಿ ಒಟ್ಟು ಜನಸಂಖ್ಯೆಯ ಶೇಕಡ 84ರಷ್ಟು ಜನರು ಕಡುಬಡತನಕ್ಕೆ ಒಳಗಾದರೆ, ಅತಿ ಶ್ರೀಮಂತರ ಸಂಖ್ಯೆಯು ಇದೇ ಅವಧಿಯಲ್ಲಿ 102ರಿಂದ 140ಕ್ಕೇರಿದೆ. ಈ ವರದಿಯ ಪ್ರಕಾರ, ಅತಿ ಶ್ರೀಮಂತರ ಸಂಪತ್ತು 2021ರಲ್ಲಿ 53.3 ಲಕ್ಷ ಕೋಟಿ ರೂಪಾಯಿಗೇರಿದೆ. ಇದು ನಮ್ಮ ದೇಶದ 2020-21ರಲ್ಲಿನ ನಿವ್ವಳ ರಾಷ್ಟ್ರೀಯ ವರಮಾನವಾದ 174.61 ಲಕ್ಷ ಕೋಟಿ ರೂಪಾಯಿಯಲ್ಲಿ ಶೇಕಡ 32.81ರಷ್ಟಾಗುತ್ತದೆ. ದೇಶದ ಅತಿ ಶ್ರೀಮಂತರ ಮೇಲೆ ಶೇ.1ರಷ್ಟು ಸಂಪತ್ತಿನ ತೆರಿಗೆ ವಿಧಿಸಿದರೆ, ಅದರಿಂದ ಸಿಗುವ ಆದಾಯದಿಂದ, ಆರೋಗ್ಯ ವಿಮಾ ಯೋಜನೆಯಾದ 'ಆಯುಷ್ಮಾನ್ ಭಾರತ'ವನ್ನು ಐದು ವರ್ಷಗಳ ಕಾಲ ನಿರ್ವಹಿಸಬಹುದು ಎನ್ನಲಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5ರ ಪ್ರಕಾರ, 6ರಿಂದ 59 ತಿಂಗಳ ವಯೋಮಾನದ ಒಟ್ಟು ಮಕ್ಕಳಲ್ಲಿನ ರಕ್ತಹೀನತೆ 2015-16ರಲ್ಲಿದ್ದ ಶೇಕಡ 58.6ರಿಂದ 2019-2021ರಲ್ಲಿ ಶೇಕಡ 67.1ಕ್ಕೇರಿದೆ. ಇದೇ ರೀತಿಯಲ್ಲಿ 15ರಿಂದ 49 ವರ್ಷಗಳ ವಯೋಮಾನದ ಒಟ್ಟು ಮಹಿಳೆಯರಲ್ಲಿ ರಕ್ತಹೀನತೆ ಎದುರಿಸುತ್ತಿರುವವರ ಪ್ರಮಾಣ 2015-16ರಲ್ಲಿ ಶೇಕಡ 53.2ರಷ್ಟಿದ್ದರೆ, 2019-2021ರಲ್ಲಿ ಇದು ಶೇಕಡ 57.2ಕ್ಕೇರಿದೆ.

ಈ ಲೇಖನ ಓದಿದ್ದೀರಾ?: ಮೋದಿ 8 | ಹೆಣ್ಣು ಜೀವಗಳ ಕೊರಳಿಗೆ ಬಿಗಿದ ದುರಾಡಳಿತದ ಗಂಟು

'ಭಾರತದಲ್ಲಿನ ಅಸಮಾನತೆಯ ಸ್ಥಿತಿಗತಿ - 2022' ಎಂಬ ಹೆಸರಿನಲ್ಲಿ ಪ್ರಧಾನಮಂತ್ರಿಗಳ ಆರ್ಥಿಕ ಸಮಾಲೋಚಕ ಮಂಡಳಿಯು ಸಿದ್ಧಪಡಿಸಿರುವ ವರದಿ ಪ್ರಕಾರ, ದೇಶದಲ್ಲಿನ ಒಟ್ಟು ದುಡಿಮೆಗಾರರಲ್ಲಿ ಸ್ವಯಂ ಉದ್ಯೋಗದಲ್ಲಿ ನಿರತರಾಗಿರುವವರ ಪ್ರಮಾಣ 2019-20ರಲ್ಲಿ ಶೇಕಡ 45.78ರಷ್ಟಿದ್ದರೆ, ಕಾಯಂ ಉದ್ಯೋಗಿಗಳ ಪ್ರಮಾಣ ಶೇಕಡ 33.5 ಹಾಗೂ ಹಂಗಾಮಿ ಉದ್ಯೋಗಿಗಳ ಪ್ರಮಾಣ ಶೇಕಡ 20.17. ಈ ವರದಿಯಲ್ಲಿಯೇ ಹೇಳಿರುವಂತೆ, ಅತ್ಯಂತ ಕಡಿಮೆ ವರಮಾನದ ವರ್ಗವೆಂದರೆ ಸ್ವಯಂ ಉದ್ಯೋಗಿಗಳು. ಸ್ವಯಂ ಉದ್ಯೋಗಿಗಳು ಮತ್ತು ಹಂಗಾಮಿ ಉದ್ಯೋಗಿಗಳನ್ನು ಕೂಡಿಸಿದರೆ ಒಟ್ಟು ಪ್ರಮಾಣ ಶೇಕಡ 65.95ರಷ್ಟಾಗುತ್ತದೆ. ಈ ವರ್ಗವು ಅತಿ ಕೆಳಮಟ್ಟದ ವರಮಾನದ ವರ್ಗವಾಗಿದೆ. ಇವೆಲ್ಲವೂ ದೇಶದಲ್ಲಿ 2013-14ರ ನಂತರ ಅಸಮಾನತೆಯು ಉಲ್ಬಣಗೊಂಡಿರುವುದನ್ನು ಸೂಚಿಸುತ್ತವೆ.

ಅಸಮಾನತೆಯ ಲಿಂಗ ಸಂಬಂಧದ ಸ್ವರೂಪವನ್ನು ಕೂಡ ನಾವು ಅರ್ಥ ಮಾಡಿಕೊಳ್ಳಬೇಕಾದ ಜರೂರಿದೆ. ಅಸಮಾನತೆ ತೀವ್ರಗೊಂಡಾಗ, ಅದನ್ನು ನಿರ್ವಹಿಸುವುದು ಸಾಧ್ಯವಾಗದಿದ್ದಾಗ ಗಂಡಸರು ಕುಟುಂಬಗಳಿಂದ ದೂರವಾಗುತ್ತಾರೆ. ಅಸಮಾನತೆಯೆಂಬ ಆರ್ಥಿಕ ದೌರ್ಜನ್ಯವು ಮಹಿಳೆಯರ ಬದುಕನ್ನು ಇನ್ನಿಲ್ಲದಂತೆ ಮೂರಾಬಟ್ಟೆಯಾಗಿಸುತ್ತದೆ. ಈ ದೃಷ್ಟಿಯಿಂದ ಲಿಂಗತ್ವ ದೃಷ್ಟಿಯೇ ಇಲ್ಲದ ಇಂದಿನ ಸರ್ಕಾರದಿಂದ ಲಿಂಗ ನ್ಯಾಯವನ್ನು ಬಯಸುವುದು ಸಾಧ್ಯವಿಲ್ಲ. ಅಸಮಾನತೆಯು ಏರಿಕೆಯಾದಾಗ ಶ್ರೀಮಂತರ ವರಮಾನದಲ್ಲಿ ತೀವ್ರ ಏರಿಕೆಯಾದರೆ, ಇನ್ನೊಂದೆಡೆ ಬಡವರ, ಕಾರ್ಮಿಕರ, ರೈತರ ವರಮಾನ ಕುಸಿಯುತ್ತದೆ. ಹಾಗಾಗಿ ಈ ಅಸಮಾನತೆಯನ್ನು 'ಆರ್ಥಿಕ ದೌರ್ಜನ್ಯ' ಎಂದು ಹೇಳಬಹುದು.

ಮಾರುಕಟ್ಟೆ ಪರ ನೀತಿಯೋ, ವ್ಯಾಪಾರಿ ವರ್ಗದ ಪರ ನೀತಿಯೋ?

Image
Economy 5
ಸಾಂದರ್ಭಿಕ ಚಿತ್ರ

ಭಾರತೀಯ ಆರ್ಥಿಕತೆಯು 1991ರಲ್ಲಿ 'ಮಾರುಕಟ್ಟೆ ಪೂರಕ' ಸ್ವರೂಪ ಪಡೆಯಿತು. ಪರಿಣಾಮವಾಗಿ, 2000ರಿಂದ 2010-11ರವರೆಗೆ ತನ್ನದೇ ಇತಿಮಿತಿಯಲ್ಲಿ ಆರ್ಥಿಕ ಸಮೃದ್ಧತೆಯನ್ನು ಭಾರತವು ಅನುಭವಿಸಿತು. ಆದರೆ, 2013-14ರ ನಂತರ ಬಿಜೆಪಿ ಸರ್ಕಾರದಲ್ಲಿ ಆರ್ಥಿಕ ನೀತಿಯು ಮಾರುಕಟ್ಟೆ ಪರವಾಗಿದ್ದುದನ್ನು ‘ಮಾರುಕಟ್ಟೆ ಪೂರಕ’ ಸ್ವರೂಪಕ್ಕೆ ಬದಲಾಯಿಸಿತು. ಮಾರುಕಟ್ಟೆ ನೀತಿ ಬೇರೆ, ವ್ಯಾಪಾರ-ಉದ್ಯಮಿಗಳ ಪರವಾದ ನೀತಿ ಬೇರೆ. ಮಾರುಕಟ್ಟೆ ವಿಸ್ತರಣೆಗೊಂಡರೆ ಅದರಿಂದ ಉದ್ಯೋಗದ ಅವಕಾಶಗಳು ಹೆಚ್ಚುತ್ತವೆ. ಜನರ ವರಮಾನದ ಮೂಲಗಳು ವಿಸ್ತೃತಗೊಳ್ಳುತ್ತವೆ. ಬದುಕನ್ನು ಉತ್ತಮಪಡಿಸಿಕೊಳ್ಳಬಲ್ಲ ಅವಕಾಶಗಳ ವ್ಯಾಪ್ತಿ ಹಿಗ್ಗುತ್ತದೆ.

ಆದರೆ, ಮೋದಿ ಸರ್ಕಾರ ಅನುಸರಿಸುತ್ತಿರುವ ಆರ್ಥಿಕ ನೀತಿ ಮಾರುಕಟ್ಟೆ ಪರವಾದುದಲ್ಲ. ಬದಲಿಗೆ, ಉದ್ಯಮಿಗಳ ಪರವಾದ ನೀತಿ. ಇದರ ಪರಿಣಾಮಗಳನ್ನು ಕೋವಿಡ್ ಸಂದರ್ಭದಲ್ಲಿ ನಿಚ್ಚಳವಾಗಿ ಕಾಣಬಹುದಾಗಿತ್ತು. ಈ ಸಾಂಕ್ರಾಮಿಕದ ಅವಧಿಯಲ್ಲಿ ಸಿರಿವಂತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದನ್ನು ಮತ್ತು ಇವರ ಸಂಪತ್ತು ದುಪ್ಪಟ್ಟು-ಮೂರು ಪಟ್ಟು ಏರಿಕೆಯಾಗಿದ್ದು ಸುದ್ದಿಯಾಗಿತ್ತು. ಅನೇಕ ಇತಿಮಿತಿಗಳಲ್ಲಿ ಮಾರುಕಟ್ಟೆ ಅರ್ಥಶಾಸ್ತ್ರವು ಜನರ ಪರವಾಗಿ ಇಲ್ಲದಿದ್ದರೂ ಅವರಿಗೆ ವಿರುದ್ಧವಾಗಿರುವುದಿಲ್ಲ. ಆದರೆ, ಉದ್ಯಮಿಗಳ-ವ್ಯಾಪಾರ ಪರವಾದ ಮೋದಿ ಸರ್ಕಾರದ ಆರ್ಥಿಕ ನೀತಿಗಳು ಸಮಾಜದ ಅಂಚಿನಲ್ಲಿ ಬದುಕು ದೂಡುತ್ತಿರುವ ವಂಚಿತರಿಗೆ, ಕೆಳಮಟ್ಟದ ಒಬಿಸಿ ವರ್ಗದವರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಂದಿಗೆ ವಿಷಪ್ರಾಯವಾಗಿಬಿಟ್ಟಿದೆ.  

ಉತ್ಪೇಕ್ಷಿತ ಜಿಡಿಪಿ ಬೆಳವಣಿಗೆ ದರಗಳು

Image
Economy 7
ಸಾಂದರ್ಭಿಕ ಚಿತ್ರ

ಜಿಡಿಪಿ ಮಾಪನವನ್ನು ಒಂದು ನಿರ್ದಿಷ್ಟ ವರ್ಷದ ಬೆಲೆಗಳನ್ನು ಆಧಾರವಾಗಿಟ್ಟುಕೊಂಡು ರೂಪಿಸಲಾಗುತ್ತದೆ. ನಮ್ಮ ಜಿಡಿಪಿ ಲೆಕ್ಕಾಚಾರದ ಮೂಲ ವರ್ಷವನ್ನು 2004-05ರಿಂದ 2011-12ಕ್ಕೆ ಬದಲಾಯಿಸಲಾಯಿತು (2015ರಲ್ಲಿ). ಇದರಿಂದಾಗಿ ಜಿಡಿಪಿ ಬೆಳವಣಿಗೆ ಪ್ರಮಾಣದಲ್ಲಿ ಕೃತಕವಾಗಿ ಏರಿಕೆಯಾಯಿತು. ಉದಾಹರಣೆಗೆ, ಹಳೆಯ 2004-05ರ ಸ್ಥಿರ ಬೆಲೆ ಆಧಾರದಲ್ಲಿನ ಲೆಕ್ಕಾಚಾರದಲ್ಲಿ 2013-14ರ ಜಿಡಿಪಿ ಬೆಳವಣಿಗೆ ಪ್ರಮಾಣ ಶೇಕಡ 4.7ರಷ್ಟಿತ್ತು. ಆದರೆ, 2011-12ರ ಸ್ಥಿರ ಬೆಲೆಗಳಲ್ಲಿ ಇದು ಶೇಕಡ 6.7ರಷ್ಟಾಯಿತು. ಅಂದಿನ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್, "ಭಾರತದ ಜಿಡಿಪಿ ಲೆಕ್ಕಾಚಾರವು ಶೇಕಡ 1ರಿಂದ 2ರಷ್ಟು ಉತ್ಪೇಕ್ಷೆಯಿಂದ ಕೂಡಿದೆ," ಎಂಬುದನ್ನು ಬಹಿರಂಗಪಡಿಸಿದ್ದರು. ಇದರ ನಂತರ, ಕೋವಿಡ್ ಆಘಾತದ ಸಂದರ್ಭದಲ್ಲಿನ ಜಿಡಿಪಿ ಲೆಕ್ಕಾಚಾರದ ವಿಶ್ವಾಸಾರ್ಹತೆಯನ್ನು ಭಾರತದ ಮಾಜಿ ಸಾಂಖ್ಯಿಕ ಅಧಿಕಾರಿ ಪ್ರಣಬ್‍ ಸೆನ್ ಪ್ರಶ್ನಿಸಿದ್ದಾರೆ. ಇಂದಿಗೂ ನಮ್ಮ ಜಿಡಿಪಿ ಬೆಳವಣಿಗೆಯ ಲೆಕ್ಕಾಚಾರದ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳಿವೆ.

ನೈಸರ್ಗಿಕ ಸಂಪನ್ಮೂಲಗಳ ಲೂಟಿ

Image
Economy 4
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಬಂಡವಾಳಸ್ನೇಹಿ ಆರ್ಥಿಕ ನೀತಿಯಲ್ಲಿ ಸರ್ಕಾರಗಳು ಅತ್ಯಂತ ಸೋವಿ ಬೆಲೆಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಉದ್ಯಮಿಗಳಿಗೆ ನೀಡುವುದು ವ್ಯಾಪಕವಾಗಿದೆ. ಜಮೀನು, ನೀರು, ಇಂಧನ, ಖನಿಜ ಸಂಪತ್ತು ಮುಂತಾದ ಸಂಪನ್ಮೂಲಗಳನ್ನು, ಪರಿಸರ ರಕ್ಷಣಾ ಕಾಯಿದೆಗಳನ್ನು ಉಲ್ಲಂಘಿಸಿ ಕಾರ್ಪೊರೇಟ್ ಕಂಪನಿಗಳಿಗೆ ಅಥವಾ ಖಾಸಗಿ ಕಂಪನಿಗಳಿಗೆ ನೀಡುವ ಕ್ರಮ ಪಾಲಿಸುತ್ತವೆ. ಇದರಿಂದ ಮೈದಾಳುವ ಹಾನಿಕಾರಕ ಪರಿಣಾಮಗಳು ಬಡವರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಇದರ ಲಾಭ ಮಾತ್ರ ಬಂಡವಾಳಿಗರಿಗೆ ದೊರೆಯುತ್ತದೆ. ಕಳೆದ ಎಂಟು ವರ್ಷಗಳಿಂದ ನಮ್ಮ ದೇಶದಲ್ಲಿ ಕಾರ್ಪೊರೇಟ್ ಕಂಪನಿಗಳ ಸಂಪತ್ತು ಮಿತಿಮೀರಿದ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದಕ್ಕೆ ಮುಖ್ಯ ಕಾರಣ - ಅವರಿಗೆ ಸೋವಿ ಬೆಲೆಯಲ್ಲಿ ದೊರೆಯುತ್ತಿರುವ ನೈಸರ್ಗಿಕ ಸಂಪನ್ಮೂಲಗಳು. ಪರಿಣಾಮವಾಗಿ ಜಲಮೂಲಗಳು ಮರೆಯಾಗುತ್ತಿವೆ. ಹವಾಮಾನ ವೈಪರೀತ್ಯದ ಹೊಡೆತಕ್ಕೆ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಈಡಾಗುತ್ತಿದೆ.

ಈ ಎಲ್ಲ ಕಾರಣಗಳಿಂದಾಗಿ, ಇಂದು ಭಾರತವು ಸಂಭ್ರಮಾಚರಣೆ ಮಾಡುವ ಸ್ಥಿತಿಯಲ್ಲಿಲ್ಲ. ಅತಿಯಾದ ಬೆಲೆ ಏರಿಕೆ ಸ್ಥಿತಿಯಲ್ಲಿ, ನಿರುದ್ಯೋಗವು ಜನರ ಬದುಕನ್ನು ಕಿತ್ತು ತಿನ್ನುತ್ತಿರುವಾಗ, ಕೋಮು ದಳ್ಳುರಿಯಲ್ಲಿ ಸಮಾಜ ಹತ್ತಿ ಉರಿಯುತ್ತಿರುವಾಗ ಯಾವುದೇ ಸರ್ಕಾರಕ್ಕೆ ಸಂಭ್ರಮ ಆಚರಿಸುವ ಮನಸ್ಸಾದರೂ ಹೇಗೆ ಬರುತ್ತದೆ? ಮೋದಿ ಅವರು ಆಡಳಿತಕ್ಕೆ ಪ್ರತಿಯಾಗಿ 'ಆಳ್ವಿಕೆ' ಮಾಡುತ್ತಿದ್ದಾರಷ್ಟೆ. ಕಳೆದೆಂಟು ವರ್ಷಗಳ ಬಿಜೆಪಿ ಸರ್ಕಾರದ ನಡೆಗಳನ್ನು ಆಳ್ವಿಕೆ ಎನ್ನುವುದೇ ಸೂಕ್ತ. ಏಕೆಂದರೆ, ಇವರು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ತಿಲಾಂಜಲಿ ಕೊಟ್ಟು, ಅರಸೊತ್ತಿಗೆ ಮೌಲ್ಯಗಳ ಪುನರುತ್ಥಾನದಲ್ಲಿ ನಿರತರಾಗಿದ್ದಾರೆ. 'ಆಳ್ವಿಕೆ’ ಎನ್ನುವುದು ವಸಾಹತುಶಾಹಿ-ಊಳಿಗಮಾನ್ಯ ಮೌಲ್ಯವಾಗಿದೆ. ಈ ಹಿನ್ನೆಲೆಯಲ್ಲಿ, ನರೇಂದ್ರ ಮೋದಿ ಅವರು ಒಬ್ಬ ಚಕ್ರಾಧಿಪತಿ ಆಗಬಹುದೇ ವಿನಾ ಜನತಂತ್ರ ರಾಜಕಾರಣಿ ಆಗುವುದು ಸಾಧ್ಯವಿಲ್ಲ.

ನಿಮಗೆ ಏನು ಅನ್ನಿಸ್ತು?
10 ವೋಟ್