ಮಾದಾರ ಚೆನ್ನಯ್ಯ ಸ್ವಾಮೀಜಿಯವರಿಗೆ ಎಂಟು ಪ್ರಶ್ನೆಗಳು

ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಾದಾರ ಚನ್ನಯ್ಯ ಗುರುಪೀಠಕ್ಕೆ ತೆರಳಿ ‘ಸಂಸ್ಕಾರ’ ಕಲಿಸಿ ಎಂದು ಹೇಳಿ ಹೋಗಿರುವುದರ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳು

ಮಾದಿಗ ಸಮುದಾಯಕ್ಕೆ ಸಾಕಷ್ಟು ಗುರುಪೀಠಗಳಿವೆ. ಸಂವಿಧಾನವೇ ಅಂತಿಮವೆಂದೂ, ವೈಚಾರಿಕತೆಯೇ ತಳಹದಿಯೆಂದು ಭಾವಿಸಿ ಯಾವ ಗುರುಪೀಠಕ್ಕೆ ನಡೆದುಕೊಳ್ಳದವರೇ ಬೇಕಾದಷ್ಟಿದ್ದಾರೆ. ಅಷ್ಟಕ್ಕೂ ಮೀರಿ ತಮ್ಮ ತಮ್ಮ ಭಾಗದ ಅವೈದಿಕ ದೇವರುಗಳಿಗೆ ನಡೆದುಕೊಳ್ಳುತ್ತಾ, ಬದುಕು ಸಾಗಿಸುತ್ತಿರುವವರದ್ದೇ ಮೆಜಾರಿಟಿ. ಇಂದಿಗೂ ತಪ್ಪದ ಅವಮಾನ, ತಾರತಮ್ಯ, ಕಠಿಣ ಶ್ರಮದ ಬದುಕಿನೊಟ್ಟಿಗೆ ಅವರಿಗೆ ಬೇಕಾದ ಧರ್ಮವನ್ನೋ, ಅಧ್ಯಾತ್ಮವನ್ನೋ ಅನುಸರಿಸಿಕೊಳ್ಳುತ್ತಾ ಮಾದಿಗ ಸಮುದಾಯವು ನಾಡಿಗೆ ಕೊಡುಗೆಯನ್ನು ನೀಡುತ್ತಿದೆ. ಹೀಗಿರುವಾಗ ನಿಮ್ಮ ಪೀಠವು ಸ್ಥಾಪನೆಯಾದಾಗ ಸಮುದಾಯಕ್ಕೆ ಇನ್ನೂ ಒಂದು ಹೊಸ ಆಯಾಮ ಸಿಗಬಹುದು ಎಂಬ ನಿರೀಕ್ಷೆ ಕೆಲವರಲ್ಲಿ ಇದ್ದರೆ ತಪ್ಪೇನಿಲ್ಲ.

ತಾವು ಸಾಕಷ್ಟು ಕಾಲದಿಂದ ಆರ್‌ಎಸ್‌ಎಸ್‌ ಹಾಗೂ ಅದರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದೀರಿ ಮತ್ತು ಆ ವಿಚಾರದಲ್ಲಿ ಹೆಚ್ಚೇನೂ ಹಿಂಜರಿಕೆಯನ್ನಿಟ್ಟುಕೊಂಡಿಲ್ಲ. ಅದನ್ನೂ ಸಮುದಾಯದ ಹಿತಾಸಕ್ತಿಯಿಂದಲೇ ಮಾಡಿದ್ದೇನೆಂಬ ಭಾವ ನಿಮ್ಮದಿರಬಹುದು. ಆದರೆ, ನಿಮ್ಮ ಈ ನಡೆಯಿಂದ ಶೋಷಿತರಲ್ಲಿ ಶೋಷಿತರಾದ ಮಾದಿಗ ಸಮುದಾಯಕ್ಕೆ ಹೊಸ ಆಯಾಮವು ಸಿಕ್ಕಿತೇ ಎಂಬುದಷ್ಟೇ ಸ್ಪಷ್ಟವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಹಿತದೃಷ್ಟಿಯಿಂದ ಕೆಲವು ಪ್ರಶ್ನೆಗಳನ್ನು ನಿಮ್ಮಲ್ಲಿ ಕೇಳಬೇಕಿದೆ. ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಿಮ್ಮ ಮಠಕ್ಕೆ ಬಂದು ‘ಸಂಸ್ಕಾರ’ ಕಲಿಸಿ ಎಂದು ಹೇಳಿಹೋಗಿರುವುದರ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳು ಎಂಬುದನ್ನೂ ಇಲ್ಲಿ ಕಾಣಿಸಬೇಕಿದೆ,.

1. ಆರ್‌ಎಸ್‌ಎಸ್‌ನ ಅಖಂಡ ಬೆಂಬಲ ಹಾಗೂ ಯೋಜನೆಯ ಭಾಗವಾಗಿಯೇ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಆಡಳಿತದಲ್ಲಿ ದಲಿತ ಸಮುದಾಯದ ಮೇಲೆ ಶೋಷಣೆ ಕಡಿಮೆಯಾಗಿದೆಯೇ? ಹೆಚ್ಚಾಗಿದೆಯೇ? ನೀವು ಆ ಕುರಿತ ಅಂಕಿ-ಅಂಶಗಳನ್ನೇನಾದರೂ ಹೊಂದಿದ್ದೀರಾ?

 

2. ಸತ್ತ ದನದ ಚರ್ಮ ಸುಲಿಯುತ್ತಾರೆನ್ನುವ ಕಾರಣಕ್ಕೆ ಗುಜರಾತಿನ ಊನಾದಲ್ಲಿ ದಲಿತರನ್ನು ಅಮಾನುಷವಾಗಿ ಥಳಿಸಿ ವಿಡಿಯೋ ಮಾಡಲಾಯಿತು. ಅತ್ಯಂತ ಅಮಾನವೀಯವಾಗಿ ನಡೆದುಕೊಂಡ ಬಿಜೆಪಿ ಮನಸ್ಥಿತಿಯ ಆ ಅಪರಾಧಿಗಳ ವಿಚಾರದಲ್ಲಿ ಅಲ್ಲಿನ ಸರ್ಕಾರ ಏನು ನಿಲುವು ತಾಳಿತು ಎಂಬುದರ ಬಗ್ಗೆ ನಿಮಗೆ ಗೊತ್ತಿದೆಯೇ?

Image

3. ಗುಜರಾತಿನ ಊನಾ ಘಟನೆಯ ನಂತರ ‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ, ನಮಗೆ ನಮ್ಮ ಭೂಮಿ ಕೊಡಿ’ ಎಂಬ ಆಂದೋಲನ ನಡೆಯಿತು. ಆ ನಂತರದಲ್ಲಿ ಶೋಷಿತ ಸಮುದಾಯಗಳಿಗೆ ಭೂಮಿ ಕೊಡುವ ವಿಚಾರದಲ್ಲಿ ಸರ್ಕಾರ ಎಷ್ಟು ಮುತುವರ್ಜಿ ವಹಿಸಿತು, ಹೋರಾಟದ ನಾಯಕ ಜಿಗ್ನೇಶ್ ಮೇವಾನಿಗೆ ಏನೆಲ್ಲಾ ತೊಂದರೆ ಕೊಟ್ಟಿತು ಎಂಬುದನ್ನು ಗಮನಿಸಿದ್ದೀರಾ? ಒಂದು ವೇಳೆ ಗಮನಿಸಿದ್ದರೆ ಆರೆಸ್ಸೆಸ್‌ ಬೆಂಬಲಿತ ಬಿಜೆಪಿ ಪಕ್ಷದ ಸರ್ಕಾರದಲ್ಲಿ ಸಮುದಾಯಕ್ಕಾದ ಅವಮಾನದ ವಿರುದ್ಧ ನೀವೇಕೆ ಸಿಡಿದೇಳಲಿಲ್ಲ?

 

4. ಒಳಮೀಸಲಾತಿಯೆಂಬ ನ್ಯಾಯಯುತ ಪ್ರಶ್ನೆಯನ್ನು ಬಗೆಹರಿಸದೇ ಇರುವುದರಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಅನ್ಯಾಯವಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜ್ಯ ಸರ್ಕಾರವು ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವಿಲ್ಲವಾದರೂ, ಆ ಪ್ರಕ್ರಿಯೆಯ ಆರಂಭವನ್ನು ಅವರೂ ಮಾಡಬಹುದು. ಅಂತಿಮವಾಗಿ ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿಯಿಂದ ಸಿಗಬೇಕಿರುವ ನ್ಯಾಯ ಇದು. ಶೇ.4ರಷ್ಟಿರುವ ಮೇಲ್ಜಾತಿಗಳಿಗೆ (ಅದರಲ್ಲೂ ನಿರ್ದಿಷ್ಟವಾಗಿ ಬ್ರಾಹ್ಮಣರಿಗೆ) ಶೇ.10ರಷ್ಟು ಮೀಸಲಾತಿಯನ್ನು ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡಲಾಯಿತು. ಆ ಪ್ರಕ್ರಿಯೆ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನಡೆದು ಹೋಯಿತೇನೋ ಎಂಬಷ್ಟು ವೇಗವಾಗಿ ನಡೆಯಿತು. ಹಾಗಿದ್ದ ಮೇಲೆ ನಿರಂತರವಾಗಿ ಮಾದಿಗ ಸಮುದಾಯದ ನ್ಯಾಯಯುತ ಬೇಡಿಕೆಯ ವಿಚಾರದಲ್ಲಿ ಒಂದು ಕಲ್ಲೂ ಅಲ್ಲಾಡಿಲ್ಲ. ಏಕೆ? ಇದರ ಲಾಭ ಯಾರಿಗೆ?

 

5. ಸಂವಿಧಾನವನ್ನು ಈ ದೇಶ ತನಗೆ ತಾನೇ ಅರ್ಪಿಸಿಕೊಂಡಿದ್ದು ನವೆಂಬರ್ 26, 1949ರಂದು. ನವೆಂಬರ್ 30, 1949ರಂದು ಆರ್‌ಎಸ್‌ಎಸ್‌ ಮುಖಪತ್ರಿಕೆ ಆರ್ಗನೈಸರ್ ನಲ್ಲಿ ಈ ಸಂವಿಧಾನ ಸರಿಯಿಲ್ಲವೆಂದೂ, ಮನುಸ್ಮೃತಿಯೆಂಬ ಗ್ರಂಥದಲ್ಲಿನ ಸಂಗತಿಗಳೇ ಸಂವಿಧಾನದೊಳಗೆ ಸೇರಬೇಕಿತ್ತೆಂದೂ ಬರೆಯಲಾಯಿತು. ಈ ಕುರಿತು ತಾವೇನಾದರೂ ಮೋಹನ್ ಭಾಗವತ್ ಅವರೊಡನೆ ಚರ್ಚಿಸಿದಿರಾ?

Image

6. 70 ವರ್ಷಗಳ ಹಿಂದೆ ಜಾರಿಗೆ ಬಂದ ಸಂವಿಧಾನವು ನೀಡಿದಷ್ಟು ಹಕ್ಕುಗಳನ್ನು, ನಂತರದಲ್ಲಿ ಸ್ವತಃ ದಲಿತ ಸಮುದಾಯ ಹೋರಾಡಿ ಪಡೆದುಕೊಂಡ ಹಕ್ಕುಗಳನ್ನು ಈಗ ಕಿತ್ತುಕೊಳ್ಳಲಾಗುತ್ತಿದೆ. ಆದರೆ, ಈಗಲೂ ‘ನಾವೂ ಅಸ್ಪೃಶ್ಯತೆಯ ನಿವಾರಣೆಗೆ ಕೆಲಸ ಮಾಡುತ್ತೇವೆ’ ಎಂದು ಹೇಳುವ ಆರೆಸ್ಸೆಸ್ ಅದರಲ್ಲಿ ಶೇ.೧ರಷ್ಟನ್ನೂ ಮಾಡುತ್ತಿಲ್ಲ. ಬದಲಿಗೆ ಸಂವಿಧಾನವನ್ನೇ ಅಪ್ರಸ್ತುತಗೊಳಿಸಲು ಹೊರಟಿದ್ದಾರೆ. ಕಳೆದ ವಾರವಷ್ಟೇ ಅದರ ಸಿದ್ಧಾಂತಿ ಆರ್ ಜಗನ್ನಾಥನ್ ಸ್ವರಾಜ್ಯಮ್ಯಾಗ್ ಎಂಬ ಬಲಪಂಥೀಯ ಡಿಜಿಟಲ್ ಪತ್ರಿಕೆಯಲ್ಲಿ ‘ಧರ್ಮಾಧಾರಿತ ಸಂವಿಧಾನ ಜಾರಿಗೆ ಬರುವ ಸಂದರ್ಭ’ ಬಂದಿದೆ ಎಂದು ಬರೆದಿದ್ದಾರೆ. ಇದು ಎತ್ತಕಡೆಗೆ ಸಾಗುತ್ತಿದೆ ಎಂದು ನೀವು ಮೋಹನ್ ಭಾಗವತರನ್ನು ಪ್ರಶ್ನೆ ಮಾಡಿದಿರಾ?

Image

7. ಹಸಿದಾಗ ಅನ್ನ ನೀಡುವವರು, ನೋವಿದ್ದಾಗ ಸಾಂತ್ವನ ಮಾಡುವವರು, ನಮ್ಮನ್ನು ಆದರಿಸುವವರ ಕುರಿತು ಕೃತಜ್ಞತೆ ತೋರುವುದು ಪ್ರಕೃತಿ ಸಹಜ, ಮನುಷ್ಯ ಸಹಜ. ಆದರೆ ಸಾಂತ್ವನ ಮಾಡುವಂತೆ ನಟಿಸುವವರು, ನಮ್ಮ ಪರವಾಗಿದ್ದಂತೆ ತೋರಿಸಿಕೊಂಡು ಬೆನ್ನಿಗೆ ಚೂರಿ ಹಾಕುವವರ ಕುರಿತು ಸಾಮಾನ್ಯ ಜನರಿಗೂ ಗೊತ್ತಾಗುತ್ತದೆ. ಅದರಲ್ಲೂ ಸಮುದಾಯದ ಪ್ರಜ್ಞಾವಂತರು, ತಮ್ಮಂತಹ ಪ್ರಾಜ್ಞರು ಇಂತಹ ಹುನ್ನಾರದ ಕುರಿತು ಮುಂಚೆಯೇ ಎಚ್ಚರಿಸಬೇಕು. ದೂರದಲ್ಲೆಲ್ಲೋ ಬರುತ್ತಿರುವ ಅಪಾಯದ ಕುರಿತು ಮರದ ಮೇಲಿನ ಪಕ್ಷಿಗಳು ಉಳಿದ ಪ್ರಾಣಿಗಳಿಗೆ ಎಚ್ಚರಿಸುವಂತೆ. ಆದರೆ, ತಾವೇ ಮುಂದೆ ನಿಂತು ಬಲಿಕೊಡಲು ಬೇಕಾದ ವ್ಯವಸ್ಥೆ ಮಾಡಿದರೆ ಅದನ್ನು ಏನೆನ್ನಬೇಕು ಎಂದು ವಿವರಿಸುತ್ತೀರಾ?

 

8. ಅಂತಿಮವಾಗಿ, ಕರ್ನಾಟಕದಲ್ಲಿ ಸಮುದಾಯ ನಿಮ್ಮೊಟ್ಟಿಗಿಲ್ಲ. ಹಾಗೆ ನೋಡಿದರೆ ಯಾವ ಸಮುದಾಯವೂ ಇಡಿಯಾಗಿ ಮಠಪೀಠಗಳ ಜೊತೆಗಿಲ್ಲ. ಅದರಲ್ಲೂ ನಿರಂತರವಾಗಿ ನೋವುಣ್ಣುತ್ತಿರುವ ಮಾದಿಗ ಸಮುದಾಯಕ್ಕೂ ಮಠಕ್ಕೂ ಯಾವ ಸಂಬಂಧವೂ ಇಲ್ಲ. ಅವರವರು ಅವರವರ ಅಗತ್ಯಗಳಿಗೆ ಮಠಗಳನ್ನು ಕಟ್ಟಿಕೊಳ್ಳುವುದು, ವಿವಿಧ ವೇಷಗಳನ್ನು ಧರಿಸುವುದು ಇದ್ದೇ ಇರುತ್ತದೆ. ಆದರೆ ಇದನ್ನು ನೀವು ಸಮುದಾಯದ ಹೆಸರಿಟ್ಟುಕೊಂಡು ಮಾಡುತ್ತಿರುವುದರಿಂದಷ್ಟೇ ಈ ಪ್ರಶ್ನೆಗಳು. ಆ ಹೆಸರನ್ನು ತೆಗೆದು ವರ್ಣಾಶ್ರಮ ಪರಿಪಾಲನೆಗೆ ಅಗತ್ಯವಿರುವ ಹೆಸರೊಂದನ್ನು ಇಟ್ಟುಕೊಳ್ಳಲು ಯಾವಾಗ ಮುಂದಾಗುತ್ತೀರಿ?

ನಿಮಗೆ ಏನು ಅನ್ನಿಸ್ತು?
23 ವೋಟ್