ತೋಳ ಬಂತು ತೋಳ-2 | ಅಷ್ಟಕ್ಕೂ ಕಸ್ತೂರಿ ರಂಗನ್‌ ಹೆಸರು ಕೇಳಿದರೆ ಮಲೆನಾಡಿನ ಜನ ಬೆಚ್ಚಿಬೀಳೋದು ಯಾಕೆ?

ಅಷ್ಟಕ್ಕೂ ಕಸ್ತೂರಿ ರಂಗನ್‌ ವರದಿಗೆ ಈ ಪರಿಯ ವಿರೋಧ ಯಾಕೆ? ಯಾವ ಆತಂಕ ಜನರನ್ನು ಹೀಗೆ ಬೆಚ್ಚಿಬೀಳಿಸಿದೆ? ವರದಿಯಲ್ಲಿ ಅಂತಹ ಆತಂಕದ ಸಂಗತಿಗಳೇನಿವೆ? ಎಂಟು ವರ್ಷಗಳಿಂದ ಸರ್ಕಾರ ಜನರ ಆತಂಕ ದೂರ ಮಾಡಲು ಏನಾದರೂ ಮಾಡಿದೆಯೇ? ಎಂಬ ಪ್ರಶ್ನೆಗಳಿವೆ.
wildlife area

ಕಸ್ತೂರಿ ರಂಗನ್‌ ವರದಿ ಶಿಫಾರಸಿನಂತೆ ಪಶ್ಚಿಮಘಟ್ಟ ವ್ಯಾಪ್ತಿಯ ಆರು ರಾಜ್ಯಗಳ ಸುಮಾರು 56 ಸಾವಿರ ಚದರ ಕಿಲೋ ಮೀಟರ್‌ ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸಿ ಕೇಂದ್ರ ಪರಿಸರ ಸಚಿವಾಲಯ ಐದನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. 

ರಾಜ್ಯದ ಒಂಭತ್ತು ಜಿಲ್ಲೆಗಳ (ಧಾರವಾಡ ಜಿಲ್ಲೆಯ ಹೆಸರು ಪಟ್ಟಿಯಲ್ಲಿದ್ದರೂ ಆ ಜಿಲ್ಲೆಯ ಯಾವುದೇ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿಲ್ಲ) 1576 ಹಳ್ಳಿಗಳ ವ್ಯಾಪ್ತಿಯ ಒಟ್ಟು 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ 2014ರ ಮೊಟ್ಟ ಮೊದಲ ಕರಡು ಅಧಿಸೂಚನೆಗೂ ಇದೀಗ ಹೊರಬಿದ್ದಿರುವ ಐದನೇ ಅಧಿಸೂಚನೆಗೆ ಯಾವ ವ್ಯತ್ಯಾಸವೂ ಇಲ್ಲ. 

ಮೊದಲ ಕರಡು ಅಧಿಸೂಚನೆ ಹೊರಬಿದ್ದಾಗ ಮಲೆನಾಡು ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲಿ ವರದಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬೀದಿ ಹೋರಾಟ, ಜಾಥಾ, ವಿಚಾರ ಸಂಕಿರಣಗಳ ಮೂಲಕ ಆ ಭಾಗದ ಜನ ಪಕ್ಷಾತೀತವಾಗಿ ಈ ಪ್ರಸ್ತಾವನೆಗೆ ಪ್ರತಿರೋಧ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿದ್ದ ಅಂದಿನ ಕಾಂಗ್ರೆಸ್‌ ಸರ್ಕಾರ ಅಂದಿನ ಕಾನೂನು ಸಚಿವ ಟಿ ಬಿ ಜಯಚಂದ್ರ ಅವರ ನೇತೃತ್ವದಲ್ಲಿ ಸದನ ಸಮಿತಿ ರಚಿಸಿ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ಜನರ ಅಹವಾಲು ಆಲಿಸಿ, ಅಧಿಸೂಚನೆಗೆ ಆಕ್ಷೇಪ ಸಲ್ಲಿಸಲು ತಯಾರಿ ಮಾಡಿತ್ತು. ಆ ಸದನ ಸಮಿತಿಯ ವರದಿ ಆಧರಿಸಿ ಅಧಿಸೂಚಿತ ಪ್ರದೇಶದಲ್ಲಿ ರಾಜ್ಯದ 400 ಚದರ ಕಿ.ಮೀ ಪ್ರದೇಶವನ್ನು ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು 2016ರಲ್ಲೇ ರಾಜ್ಯ ಸರ್ಕಾರ ಹೇಳಿತ್ತು.

ಇಎಸ್‌ಎ ಕಡಿತಕ್ಕೆ ರಾಜ್ಯ ಸರ್ಕಾರ ಕೋರಿದ್ದು ಎಷ್ಟು?

ಆ ಬಳಿಕ ಕೂಡ ರಾಜ್ಯಗಳ ಅರಣ್ಯ ಸಚಿವರು, ಸಂಸದರು ಮತ್ತು ಮುಖ್ಯಮಂತ್ರಿಗಳ ಸಾಲು ಸಾಲು ಸಭೆಗಳನ್ನು ಮಾಡಿರುವುದಾಗಿ ಕೇಂದ್ರ ಪರಿಸರ ಸಚಿವಾಲಯ ಹೇಳಿದೆ. ಆದರೆ, ಅಂತಹ ಎಷ್ಟು ಸಭೆಗಳಿಗೆ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಮತ್ತು ಸಂಸದರು ಹಾಜರಾಗಿದ್ದರು? ಅಲ್ಲಿ ಮಲೆನಾಡಿನ ಜನರ ಆತಂಕದ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರೆ, ರಾಜ್ಯ ಸರ್ಕಾರ ಕಳಿಸಿರುವುದಾಗಿ ಹೇಳಿದ 400 ಚದರ ಕಿ.ಮೀ ಪ್ರದೇಶದ ಕಡಿತದ ಕೋರಿಕೆಗೆ ಕೇಂದ್ರ ಸರ್ಕಾರ ಯಾಕೆ ಸೊಪ್ಪು ಹಾಕಲಿಲ್ಲ ಎಂಬ ಪ್ರಶ್ನೆಗಳಿಗೆ ಈವರೆಗೆ ರಾಜ್ಯ ಸರ್ಕಾರವಾಗಲೀ, ಸಂಸದರಾಗಲೀ ಅಥವಾ ಅರಣ್ಯ ಸಚಿವರಾಗಲೀ ಮಲೆನಾಡಿಗರಿಗೆ ಯಾವ ಉತ್ತರವನ್ನೂ ನೀಡಿಲ್ಲ.

Image
westernghats

ಬದಲಾಗಿ ಪ್ರತಿ ಬಾರಿ ಅಧಿಸೂಚನೆ ಹೊರಬಿದ್ದಾಗಲೂ ತಿಂಗಳೊಪ್ಪತ್ತು ಹೇಳಿಕೆ, ವಾಗ್ವಾದ, ಆರೋಪ, ಪ್ರತ್ಯೋರೋಪಗಳ ವಿಷಯದಲ್ಲಿ ಮಾತ್ರ ರಾಜಕೀಯ ಮುಖಂಡರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಈ ಬಾರಿ ಕೂಡ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ನಾಯಕರು ಹೋರಾಟದ ದನಿ ಎತ್ತಿದ್ದಾರೆ. 

ವಿಪರ್ಯಾಸವೆಂದರೆ ಮೊದಲ ಅಧಿಸೂಚನೆ ಹೊರಬಿದ್ದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್‌ ಸರ್ಕಾರ. ಆ ಬಳಿಕ ಕಳೆದ ಎಂಟು ವರ್ಷಗಳಲ್ಲಿ ನಾಲ್ಕು ಬಾರಿ ಅಧಿಸೂಚನೆ ಹೊರಡಿಸಲಾಗಿದೆ. ಈ ಎಂಟು ವರ್ಷದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಹೊರಬಿದ್ದ ಅಧಿಸೂಚನೆಯ ವಿರುದ್ಧ ರಾಜ್ಯ ಬಿಜೆಪಿ ನಾಯಕರು ದೊಡ್ಡ ದನಿ ಎತ್ತಿ ಹೋರಾಟ ನಡೆಸಿದ್ದರು. ಅದಾದ ಬಳಿಕ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ ನಾಯಕರು ಅಧಿಸೂಚನೆಯ ವಿರುದ್ಧ ದನಿ ಎತ್ತಿದ್ದರು. ಇದೀಗ ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೂ ಮಲೆನಾಡಿನ ಜನರ ಆತಂಕ ದೂರ ಮಾಡುವ ಕೆಲಸವಾಗಿಲ್ಲ.

ಮತ್ತೆ ಹೋರಾಟದ ಕೂಗು ಏನು?

ಈಗಲೂ ರಾಜ್ಯ ಗೃಹ ಸಚಿವರು ಕಳೆದ ವಾರ ಮಲೆನಾಡು ಭಾಗದ ಶಾಸಕರ ಸಭೆ ಕರೆದು ಮತ್ತೆ ಹೋರಾಟದ ಮಾತನ್ನಾಡಿದ್ದಾರೆ. ಕೇಂದ್ರಕ್ಕೆ ಮಲೆನಾಡು ಭಾಗದ ಜನಪ್ರತಿನಿಧಿಗಳ ನಿಯೋಗ ಕೊಂಡೊಯ್ಯುವ ಭರವಸೆ ನೀಡಿದ್ದಾರೆ. 
ಈ ನಡುವೆ, ಕಸ್ತೂರಿ ರಂಗನ್‌ ವರದಿಯನ್ನು ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಆಗ್ರಹಿಸಿ ಈಗಾಗಲೇ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಂದ್‌, ರ್ಯಾಲಿಗಳು ಆರಂಭವಾಗಿವೆ. ಬಹುತೇಕ ಇಂತಹ ಹೋರಾಟಗಳಲ್ಲಿ ರಾಜಕೀಯ ಪಕ್ಷಗಳ ನಾಯಕರು ಕೂಡ ಪಕ್ಷಾತೀತವಾಗಿ ಮುಂದಾಳತ್ವ ವಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ತೋಳ ಬಂತು ತೋಳ- 1| ಕಸ್ತೂರಿ ರಂಗನ್‌ ವರದಿ ಹೇಳಿದ್ದೇನು? ಘೋಷಿತ ಪರಿಸರ ಸೂಕ್ಷ್ಮ ಪ್ರದೇಶವೆಷ್ಟು?

ಅಷ್ಟಕ್ಕೂ ಕಸ್ತೂರಿ ರಂಗನ್‌ ವರದಿಗೆ ಈ ಪರಿಯ ವಿರೋಧ ಯಾಕೆ? ಯಾವ ಆತಂಕ ಜನರನ್ನು ಹೀಗೆ ಬೆಚ್ಚಿಬೀಳಿಸಿದೆ? ವರದಿಯಲ್ಲಿ ಅಂತಹ ಆತಂಕದ ಸಂಗತಿಗಳೇನಿವೆ? ಎಂಟು ವರ್ಷಗಳಿಂದ ಸರ್ಕಾರ ಜನರ ಆತಂಕ ದೂರ ಮಾಡಲು ಏನಾದರೂ ಮಾಡಿದೆಯೇ? ಎಂಬ ಪ್ರಶ್ನೆಗಳಿವೆ.

ಒಂದೊಂದಾಗಿ ಈ ಪ್ರಶ್ನೆಗಳನ್ನು ಒಂದೊಂದಾಗಿ ಗಮನಿಸುವುದಾದರೆ;

ಕಸ್ತೂರಿ ರಂಗನ್‌ ವರದಿಗೆ ಈ ಪರಿಯ ವಿರೋಧ ಯಾಕೆ?
ಸಾಮಾನ್ಯವಾಗಿ ಮಲೆನಾಡಿನ ಭಾಗದಲ್ಲಿ ಕಸ್ತೂರಿ ರಂಗನ್‌ ವರದಿಯ ಕುರಿತು ಪ್ರಮುಖವಾಗಿ ಕೇಳಿಬರುತ್ತಿರುವ ಮಾತು, ಈ ವರದಿಯನ್ನು ಜಾರಿಗೊಳಿಸಿದರೆ ಮಲೆನಾಡಿನ ಕಾಡಂಚಿನ ಹಳ್ಳಿಗಳನ್ನು ಇಡಿಯಾಗಿ ಎತ್ತಂಗಡಿ ಮಾಡಲಾಗುತ್ತದೆ. ರೈತರ ಕೃಷಿ ಜಮೀನನ್ನು ಕಿತ್ತುಕೊಳ್ಳಲಾಗುತ್ತದೆ. ಕೃಷಿಯಲ್ಲಿ ಯಂತ್ರೋಪಕರಣ ಬಳಕೆ, ರಾಸಾಯನಿಕ ಬಳಕೆಗೆ ಅವಕಾಶ ಇರುವುದಿಲ್ಲ. ರಸ್ತೆ ನಿರ್ಮಿಸುವಂತಿಲ್ಲ ಎಂಬುದರಿಂದ ಹಿಡಿದು ಮನೆಗಳಿಗೆ ಹಸಿರು ಬಣ್ಣವನ್ನೇ ಬಳಿಯಬೇಕು, ರಾತ್ರಿ ಒಂಭತ್ತು ಗಂಟೆಗೇ ಎಲ್ಲಾ ಮನೆ- ಬೀದಿ ದೀಪಗಳನ್ನು ಆರಿಸಬೇಕು ಎಂಬಂತಹ ಮಾತುಗಳೂ ಕೇಳಿಬರುತ್ತಿವೆ!
ಇಂತಹ ಭಯ ಹುಟ್ಟಿಸುವ ಸಂಗತಿಗಳು ವರದಿಯ ಕುರಿತು ಮಲೆನಾಡಿನ ಹಳ್ಳಿಹಳ್ಳಿಗಳಲ್ಲಿ ಕೇಳಿಬರುತ್ತಿವೆ. ಹಾಗಾಗಿಯೇ ಮಲೆನಾಡಿನುದ್ದಕ್ಕೂ ಬಹಳ ದೊಡ್ಡ ಪ್ರಮಾಣದ ಪ್ರತಿರೋಧ ವ್ಯಕ್ತವಾಗುತ್ತಿದೆ. 

ಜನರು ಇಷ್ಟು ಆತಂಕ ಪಡಲು ಕಾರಣವೇನು?
ಮುಖ್ಯವಾಗಿ ಇಂತಹ ಆತಂಕಕ್ಕೆ ಕಾರಣ ಅಭಯಾರಣ್ಯಗಳ ವಿಷಯದಲ್ಲಿ ಅರಣ್ಯ ಇಲಾಖೆ ಜನರನ್ನು ನಡೆಸಿಕೊಂಡ ಇತಿಹಾಸ. ಅದು ನಾಗರಹೊಳೆ ರಾಷ್ಟ್ರೀಯ ಉದ್ಯಾನವಿರಬಹುದು, ಶರಾವತಿ ಅಭಯಾರಣ್ಯವಿರಬಹುದು ಅಥವಾ ಕುದುರೆಮುಖ ರಾಷ್ಟ್ರೀಯ ಉದ್ಯಾನವೇ ಇರಬಹುದು. ಆ ಪ್ರದೇಶಗಳನ್ನು ಅಭಯಾರಣ್ಯಗಳಾಗಿ ಮೊದಲು ಅಧಿಸೂಚನೆ ಹೊರಡಿಸುವಾಗ, ಆ ಹೊತ್ತಿಗಾಗಲೇ ಇದ್ದ ಜನವಸತಿ, ಕೃಷಿ ಸೇರಿದಂತೆ ಎಲ್ಲಾ ಮಾನವ ಚಟುವಟಿಕೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬಹುದು ಮತ್ತು ಆ ವ್ಯಾಪ್ತಿಯ ನಾಗರಿಕ ಮೂಲಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್‌ನಂತಹ ವಿಷಯಗಳಿಗೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಆಯಾ ಅಧಿಸೂಚನೆಗಳಲ್ಲಿ ಹೇಳಲಾಗಿತ್ತು. 

“ಮೊದಲು ಇಲ್ಲಿ ಅಭಯಾರಣ್ಯ ಅಂತ ಘೋಷಣೆ ಮಾಡೋವಾಗ ಕಾಡಿನ ನಡುವೆ ಇರೋ ನಮ್ಗೆ ಯಾವ ಮಾಹಿತಿಯನ್ನೂ ನೀಡಲಿಲ್ಲ. ಘೋಷಣೆಯಾದ ಮೇಲೆ ಮೊದಮೊದಲು ನಿಮಗೇನು ತೊಂದರೆಯಾಗಲ್ಲ, ನೀವು ನಿಮ್ಮ ಪಾಡಿಗೆ ನೀವು ಜೀವನ ನಡೆಸಿಕೊಂಡುಹೋಗಬಹುದು ಎಂದು ಇಲಾಖೆ(ಅರಣ್ಯ) ಹೇಳ್ತಿತ್ತು. ಆದರೆ, ಇತ್ತೀಚೆಗೆ ನಮ್ಮೂರಿನ ಮಣ್ಣಿನ ರಸ್ತೆ, ಮನೆಗೆ ತರುವ ಅಬ್ಬಿ ನೀರು, ವಿದ್ಯುತ್‌ ಮಾರ್ಗ, ಕೊನೆಗೆ ಜಮೀನು ಸಮತಟ್ಟು ಮಾಡೋಕೆ ಜೆಸಿಬಿ ಬಳಸಲೂ ಬಿಡುತ್ತಿಲ್ಲ. ಎಲ್ಲಕ್ಕೂ ಅಡ್ಡಗಾಲು ಹಾಕ್ತಿದಾರೆ. ಅದನ್ನೂ ಪ್ರಶ್ನಿಸಿದರೆ, ನಿಮಗೆ ಇಲ್ಲಿರೋದು ಕಷ್ಟವಾದ್ರೆ ಒಳ್ಳೇ ಪ್ಯಾಕೇಜ್‌ ಪರಿಹಾರ ಕೊಡ್ತೀವಿ ಹೊರಗೆ ಹೋಗಿ ಅಂತಾರೆ. ನಮಗೆ ಯಾವ ಸೌಕರ್ಯ ಕೊಡದೆ, ಕೃಷಿ ಮಾಡಲು ಬಿಡದೆ ನಮ್ಮನ್ನು ಕಟ್ಟಿಹಾಕಿ ನಾವಾಗೇ ಅಭಯಾರಣ್ಯದಿಂದ ಅವರು ಕೊಟ್ಟಷ್ಟು ಪರಿಹಾರ ತಗೊಂಡು ಹೊರಗೆ ಹೋಗಲಿ ಎಂಬುದು ಇಲಾಖೆ ಲೆಕ್ಕಾಚಾರ. ಇಂತಹ ಮೋಸದ ಹೊಡೆತಗಳಿಂದಾಗೇ ನಮ್ಮ ಕಡೆ ಈಗ ಈ ಕಸ್ತೂರಿ ರಂಗನ್‌ ವರದಿ ಬಗ್ಗೆ ಜನರ ಹೆದರ್ತಿರೋದು”.
-    ನಾಗರಾಜ್‌ ಸಾಲ್ಕೋಡು, ಶರಾವತಿ ಅಭಯಾರಣ್ಯ

ಆದರೆ, ಕಾಲಕ್ರಮೇಣ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಅಭಯಾರಣ್ಯ ವ್ಯಾಪ್ತಿಯಲ್ಲಿ ರೈತಾಪಿ ಚಟುವಟಿಕೆಗಳಿಗೆ, ಕುಡಿಯುವ ನೀರು, ರಸ್ತೆ, ವಿದ್ಯುತ್‌ ನಂತಹ ಮೂಲ ಸೌಕರ್ಯ ಪಡೆಯಲು ವನ್ಯಜೀವಿ ಸಂರಕ್ಷಣೆ ಕಾಯ್ದೆಯನ್ನೇ ಮುಂದಿಟ್ಟು ಅಡ್ಡಗಾಲು ಹಾಕತೊಡಗಿತು. ಹಾಗಾಗಿ ಶರಾವತಿ ಕಣಿವೆ ಸೇರಿದಂತೆ ಇಂದಿಗೂ ಹಲವು ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ಜನ ರಸ್ತೆ, ವಿದ್ಯುತ್‌, ಕುಡಿಯುವ ನೀರಿನಂತಹ ಸೌಲಭ್ಯಗಳೇ ಇಲ್ಲದೆ ಬದುಕುವಂತಾಗಿದೆ. ಇನ್ನೂ ಕೆಲವು ಕಡೆ ಕೃಷಿ ಚಟುವಟಿಕೆಗೆ ಟ್ರ್ಯಾಕ್ಟರ್‌, ಟಿಲ್ಲರ್‌ ಮತ್ತು ಜೆಸಿಬಿ ಬಳಕೆಗೂ ಅವಕಾಶ ನೀಡದೆ ರೈತರನ್ನು ಬೆದರಿಸಲಾಗುತ್ತಿದೆ. ಹೀಗೆ ಅಧಿಸೂಚನೆ ಹೊರಡಿಸುವಾಗ ಒಂದು ಹೇಳಿ, ಒಮ್ಮೆ ಅಧಿಸೂಚನೆ ಹೊರಡಿಸಿ ಘೋಷಣೆ ಜಾರಿಯಾದ ಮೇಲೆ ಸರ್ಕಾರ ಅರಣ್ಯ ಇಲಾಖೆಯ ಮೂಲಕ ಅಸಲೀ ಆಟ ಶುರು ಮಾಡುತ್ತದೆ. ಆ ಅನುಭವ ಮಲೆನಾಡಿನ ಬಹುತೇಕ ಕಾಡಂಚಿನ ಜನರಿಗೆ ಕಳೆದ 15-20 ವರ್ಷಗಳಲ್ಲಿ ಮೇಲಿಂದ ಮೇಲೆ ಆಗುತ್ತಿದೆ. ಹಾಗಾಗಿಯೇ ಇದೀಗ ಅಧಿಸೂಚನೆಯನ್ನು ಕಂಡೇ ಜನ ಬೆಚ್ಚಿಬಿದ್ದಿದ್ದಾರೆ!

ಇದು ಶರಾವತಿ ಕಣಿವೆಯ ಭಾಗದಲ್ಲಿ ಸಾಮಾನ್ಯವಾಗಿ ಯಾರನ್ನು ಕೇಳಿದರೂ ಕೇಳಿಬರುವ ಮಾತು. ಈ ಮಾತು ಕೇವಲ ಶರಾವತಿ ಕಣಿವೆಯಲ್ಲಿ ಮಾತ್ರವಲ್ಲದೆ, ಕುದುರೆಮುಖ, ನಾಗರಹೊಳೆ, ಅಣಶಿ, ಶೆಟ್ಟಿಹಳ್ಳಿ ಸೇರಿದಂತೆ ಬಹುತೇಕ ಅಭಯಾರಣ್ಯಗಳಲ್ಲೂ ಪ್ರತಿಧ್ವನಿಸುತ್ತಿದೆ. ಪರಿಸರ ರಕ್ಷಣೆ ಸಂಬಂಧಿ ಅಧಿಸೂಚನೆ, ವರದಿ ಎಂದ ಕೂಡಲೇ ಜನ ಬೆಚ್ಚಿಬೀಳುವುದರ ಹಿಂದಿನ ಅಸಲೀ ಹಕೀಕತ್ತು ಇದು!

(ಮುಂದುವರಿಯುವುದು)

ನಿಮಗೆ ಏನು ಅನ್ನಿಸ್ತು?
3 ವೋಟ್