ವಿಶೇಷ ಲೇಖನ | ಪರಿಸರ ರಕ್ಷಣೆಯ ಕ್ರಮಗಳು ಕೂಡ ಬಡವರಿಗೆ ಅಪಾಯಕಾರಿ ಆಗಬಹುದು!

ಅಸಮಾನತೆಯನ್ನು ಅರ್ಥಶಾಸ್ತ್ರ ಅಧ್ಯಯನದ ಮುನ್ನೆಲೆಗೆ ತಂದ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ. ಅವರದೇ ಬ್ಲಾಗ್‌ನ ಇತ್ತೀಚಿನ ಲೇಖನವೊಂದರ ಭಾವಾನುವಾದ ಇಲ್ಲುಂಟು. ಅಸಮಾನತೆಯ ಅಂತರ ಕಡಿಮೆ ಮಾಡದಿದ್ದರೆ ಪರಿಸರ ರಕ್ಷಣೆಯ ಹೆಸರಿನಲ್ಲಿ ನಡೆಯುವ ಕ್ರಮಗಳು ಸಹ ಬಡವರಿಗೆ ಅಪಾಯಕಾರಿ ಆಗಬಹುದು ಎಂಬುದು ಅವರ ಪ್ರತಿಪಾದನೆ

ನೇರವಾಗಿ ಹೇಳುವುದಾದರೆ, ಸಂಪತ್ತಿನ ಸರಿಯಾದ ಮರುಹಂಚಿಕೆ ಆಗದೆ ಜಾಗತಿಕ ತಾಪಮಾನದ ವಿರುದ್ಧ ಗಂಭೀರವಾದ ಹೋರಾಟ ಸಾಧ್ಯವಿಲ್ಲ. ಮರುಹಂಚಿಕೆ ಅನ್ನುವುದು ದೇಶದೊಳಗೆ ಆಗಬೇಕು ಮತ್ತು ಅಂತಾರಾಷ್ಟ್ರೀಯವಾಗಿಯೂ ಆಗಬೇಕು. ಇಲ್ಲ ಅನ್ನುವವರು ಸುಳ್ಳು ಹೇಳುತ್ತಿದ್ದಾರೆ. ಹಾಗೆಯೇ, ಸಂಪತ್ತಿನ ಮರುಹಂಚಿಕೆ ಅವಶ್ಯ, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ನಿಜ. ಆದರೆ, ಅದು ತಾಂತ್ರಿಕ, ರಾಜಕೀಯ ಕಾರಣದಿಂದಾಗಿ ಸಾಧ್ಯವಾಗೋದಿಲ್ಲ ಅಂತ ಹೇಳ್ತಾ ಇರೋರು ಸುಳ್ಳು ಹೇಳುತ್ತಿದ್ದಾರೆ, ಅಷ್ಟೆ.

ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಲ ಕೃಷಿ ಉದ್ದಿಮೆಗಳ ಮೇಲೆ ಸಾಧಿಸಿದ ಗೆಲುವು ಖಂಡಿತ ಒಂದಿಷ್ಟು ಭರವಸೆಯನ್ನು ಮೂಡಿಸುತ್ತದೆ. ಆದರೆ, ಬಹುತೇಕ ಮತದಾರರಿಗೆ ಸಾಮಾಜಿಕ-ಪರಿಸರ ಕಾಳಜಿ ಹೊಂದಿರುವ ಎಡಪಂಥೀಯರ ಬಗ್ಗೆ ಅಂತಹ ವಿಶ್ವಾಸವಿಲ್ಲ ಅನ್ನುವುದು ವಾಸ್ತವ. ಅವರು ರಾಷ್ಟ್ರೀಯವಾದಿ, ವಲಸೆ ವಿರೋಧಿ ಬಲಪಂಥೀಯರನ್ನು ನಂಬುತ್ತಾರೆ. ಸ್ವೀಡನ್ ಮತ್ತು ಇಟಲಿಯ ಚುನಾವಣೆ ಇದನ್ನು ಸಾಬೀತು ಮಾಡಿ ತೋರಿಸಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ಆಗಬೇಕು. ಹಾಗೆಯೇ, ಸಂಪತ್ತಿನ ವಿತರಣೆಯೂ ಪರಿಣಾಮಕಾರಿಯಾಗಿ ಆಗಬೇಕು. ಇಲ್ಲದೆಹೋದರೆ ಸಾಮಾಜಿಕ-ಪರಿಸರಾತ್ಮಕ ಕಾರ್ಯಕ್ರಮಗಳಿಂದ ಮಧ್ಯಮ ವರ್ಗದವರಿಗೆ, ಕಾರ್ಮಿಕರಿಗೆ ತೊಂದರೆಯಾಗುವ ಅಪಾಯ ಹೆಚ್ಚು.

Image
ಥಾಮಸ್ ಪಿಕೆಟ್ಟಿ

ಒಳ್ಳೆಯ ಸುದ್ದಿಯೆಂದರೆ, ಕೆಲವೇ ಕೆಲವು ಅತಿ ಶ್ರೀಮಂತರ ಬಳಿ ಎಷ್ಟೊಂದು ಸಂಪತ್ತು ಸೇರಿಕೊಂಡಿದೆಯೆಂದರೆ, ಹವಾಮಾನ ವೈಪರೀತ್ಯವನ್ನು ಸರಿಪಡಿಸುತ್ತಲೇ ಬಹುಸಂಖ್ಯಾತ ಸಾಮಾನ್ಯರ ಜೀವನಸ್ಥಿತಿಯನ್ನು ಸುಧಾರಿಸುವುದಕ್ಕೆ ಅವಕಾಶವಿದೆ. ಸಂಪತ್ತನ್ನು ಸರಿಯಾಗಿ ಮರುಹಂಚಿಕೆ ಮಾಡುವುದಕ್ಕೆ ಬೇಕಾದ ಸರಿಯಾದ ಮಾರ್ಗವನ್ನು ಕಂಡುಕೊಳ್ಳಬೇಕು ಅಷ್ಟೆ. ಅದಕ್ಕೆ ಪ್ರತಿಯೊಬ್ಬರೂ ತಮ್ಮ ಜೀವನಶೈಲಿಯನ್ನು ಪೂರ್ಣವಾಗಿ ಬದಲಿಸಿಕೊಳ್ಳಬೇಕಾಗುತ್ತದೆ. ಈ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಕಾರ್ಮಿಕರಿಗೆ, ಮಧ್ಯಮ ವರ್ಗದವರಿಗೆ ಹಣಕಾಸಿನ ನೆರವನ್ನು ನೀಡುವುದಕ್ಕೆ ಸಾಧ್ಯವಿದೆ. ಅಷ್ಟಾಗಿ ಇಂಧನವನ್ನು ಬೇಡದ, ಈ ಭೂಮಿಯ ಉಳಿವಿಗೆ ಪೂರಕವಾದ ಸರಕು ಮತ್ತು ಸೇವೆಗಳನ್ನು (ಶಿಕ್ಷಣ, ಆರೋಗ್ಯ, ಮನೆ, ಸಾರಿಗೆ ಇತ್ಯಾದಿ) ಒದಗಿಸುವುದಕ್ಕೆ ಸಾಧ್ಯ. ಆದರೆ, ಇದಕ್ಕೆ ಅತಿ ಶ್ರೀಮಂತರ ಸಂಪತ್ತು ಮತ್ತು ವರಮಾನದ ಮಟ್ಟದಲ್ಲಿ ತೀವ್ರವಾದ ಕಡಿತ ಆಗಬೇಕು. ಈ ಗ್ರಹವನ್ನು ಉಳಿಸುವುದಕ್ಕೆ ಬೇಕಾದ ರಾಜಕೀಯ ಬಹುಮತವನ್ನು ಕಟ್ಟುವುದಕ್ಕೆ ಇದೊಂದೇ ದಾರಿ.

Image

ಅಂಕಿ-ಅಂಶಗಳು ಸ್ಪಷ್ಟವಾಗಿವೆ; ಜಗತ್ತಿನ ಕೋಟ್ಯಾಧಿಪತಿಗಳು 2008ರ ಬಿಕ್ಕಟ್ಟಿನಲ್ಲಿ ಮತ್ತು ಕೋವಿಡ್ ಸಂದರ್ಭದಲ್ಲಿ ಹಿಂದೆಂದೂ ಕಾಣದಷ್ಟು ಸಂಪತ್ತನ್ನು ಗೋರಿಕೊಂಡರು. 'ಜಾಗತಿಕ ಅಸಮಾನತೆಯ ವರದಿ-2022' ಹೇಳುವಂತೆ, ಜಗತ್ತಿನ ಅತ್ಯಂತ ಶ್ರೀಮಂತ ಶೇಕಡ 0.1ರಷ್ಟು ಜನ ಈಗ 80 ಟ್ರಿಲಿಯನ್ ಯೂರೋ (66,95,03,990 ಕೋಟಿ ರೂಪಾಯಿ) ಮೌಲ್ಯದ ಸಂಪತ್ತು ಹೊಂದಿದ್ದಾರೆ. ಅವೆಲ್ಲ ಹಣಕಾಸು ಮತ್ತು ರಿಯಲ್ ಎಸ್ಟೇಟ್ ಸ್ವತ್ತಿನ ರೂಪದಲ್ಲಿದೆ. ಅದು ಜಗತ್ತಿನ ಒಟ್ಟು ಸಂಪತ್ತಿನ ಶೇಕಡ 19ಕ್ಕಿಂತ ಹೆಚ್ಚು. ಒಂದು ವರ್ಷದ ಜಾಗತಿಕ ಜಿಡಿಪಿಗೆ ಸಮ. ಜಗತ್ತಿನ ಅತ್ಯಂತ ಶ್ರೀಮಂತ ಶೇಕಡ 10 ಜನರನ್ನು ತೆಗೆದುಕೊಂಡರೆ, ಅವರ ಬಳಿ ಜಗತ್ತಿನ ಒಟ್ಟು ಸಂಪತ್ತಿನ ಶೇಕಡ 77ರಷ್ಟಿದೆ. ಆದರೆ, ಕೆಳಸ್ತರದಲ್ಲಿರುವ ಶೇಕಡ 50ರಷ್ಟು ಜನರನ್ನು ತೆಗೆದುಕೊಂಡರೆ, ಅವರ ಬಳಿ ಇರುವುದು ಕೇವಲ ಶೇಕಡ 2ರಷ್ಟು ಸಂಪತ್ತು. ಆರ್ಥಿಕ ಎಲೈಟುಗಳು (ಶ್ರೀಮಂತ ಮೇಲ್ವರ್ಗ) ಯುರೋಪನ್ನು 'ಸಮಾನತೆಯ ಸ್ವರ್ಗ' ಎಂದು ಬಣ್ಣಿಸುತ್ತಾರೆ. ಅಲ್ಲಿನ ಒಟ್ಟಾರೆ ಶೇಕಡ 61ರಷ್ಟು ಸಂಪತ್ತು ಅತ್ಯಂತ ಶ್ರೀಮಂತ ಎನಿಸಿಕೊಂಡ ಶೇಕಡ 10ರಷ್ಟು ಜನರ ಕೈಯಲ್ಲಿದೆ. ಶೇಕಡ 50ರಷ್ಟು ಬಡಜನರ ಬಳಿ ಇರುವುದು ಕೇವಲ ಶೇಕಡ 4ರಷ್ಟು ಸಂಪತ್ತು ಮಾತ್ರ.

ಫ್ರಾನ್ಸಿನಲ್ಲಿ ಅತ್ಯಂತ ಶ್ರೀಮಂತ 500 ಜನರ ಸಂಪತ್ತು 2010ರಲ್ಲಿ 200 ಶತಕೋಟಿ ಇದ್ದುದು, 2022ರ ವೇಳೆಗೆ 1,000 ಶತಕೋಟಿ ಆಗಿದೆ. ಅಂದರೆ, ಜಿಡಿಪಿಯ ಶೇಕಡ 10ರಷ್ಟು ಇದ್ದುದು ಶೇಕಡ 50ರಷ್ಟಾಗಿದೆ. ಅಂದರೆ, 800 ದಶಕೋಟಿಯಷ್ಟು ಜಾಸ್ತಿಯಾಗಿದೆ. ಆದರೆ, ಅವರು ಕಟ್ಟಿರುವ ಒಟ್ಟು ಆದಾಯ ತೆರಿಗೆ ಅದರ ಶೇಕಡ 5ರಷ್ಟೂ ಆಗುವುದಿಲ್ಲ. ಅಮೆರಿಕದಲ್ಲೂ ಈ ಸಂಖ್ಯೆ ಹೆಚ್ಚೂಕಡಿಮೆ ಅಷ್ಟೇ ಇದೆ. 'ಪ್ರೊ ಪಬ್ಲಿಕ್' ವರದಿ ಇದನ್ನು ಸ್ಪಷ್ಟಪಡಿಸಿದೆ.

ಈ ಲೇಖನ ಓದಿದ್ದೀರಾ?: ಕಾಲದಾರಿ | ಧಾರವಾಡ-ದಾಂಡೇಲಿ ರಸ್ತೆ ಕತೆ ಕೇಳಿಸಿಕೊಂಡಿದ್ದರೆ ಆ ಸೀತೆಗೆ ಮಂಡೂಕದ ಮಾತು ನೆನಪಾಗಿರುತ್ತಿತ್ತು!

ಈ ಹೆಚ್ಚುವರಿ ಸಂಪತ್ತಿನ ಮೇಲೆ ಒಮ್ಮೆ ಶೇಕಡ 50ರಷ್ಟು ತೆರಿಗೆ ಹಾಕಿದರೆ ಫ್ರೆಂಚ್ ಸರ್ಕಾರ 400 ಶತಕೋಟಿ ಯುರೋ ಸಂಗ್ರಹಿಸಬಹುದು. ಸಾಮಾನ್ಯ ಜನ ಕಷ್ಟಪಟ್ಟು ಉಳಿಸಿದ ಹಣದ ಮೇಲೆ ಪ್ರತಿವರ್ಷ ಬೀಳುತ್ತಿರುವ ಶೇಕಡ 10ರಷ್ಟು ಹಣದುಬ್ಬರದ ತೆರಿಗೆಗೆ ಹೋಲಿಸಿದರೆ ಇದು ಹೆಚ್ಚಲ್ಲ. ಆದರೆ, ಈ ಹಣದಿಂದ ಹೆಚ್ಚೇನನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ ಅನ್ನುವವರನ್ನು ಬಿಟ್ಟುಬಿಡೋಣ. ಯಾಕೆಂದರೆ, ಇತ್ತೀಚೆಗಷ್ಟೇ ಎರಡು ಯೋಜನೆಗಳನ್ನು ಅಷ್ಟೊಂದು ದುಡ್ಡು ಭರಿಸುವುದಕ್ಕೆ ಸಾಧ್ಯವಿಲ್ಲ ಅನ್ನುವ ಕಾರಣಕ್ಕೆ ಫ್ರೆಂಚ್ ಸರ್ಕಾರ ಸಂಸತ್ತಿನಲ್ಲಿ ತಿರಸ್ಕರಿಸಿತು. ಮೊದಲನೆಯದು, ಕಟ್ಟಡಗಳಲ್ಲಿ ತಾಪಮಾನವನ್ನು ಕಾಪಾಡಿಕೊಳ್ಳುವ ಮೂಲಕ ಇಂಧನ ಉಳಿಸುವ ಯೋಜನೆ (12 ಶತಕೋಟಿ ಯುರೊ) ಮತ್ತು ಎರಡನೆಯದು, ರೈಲು ದಾರಿಗಳ ನಿರ್ಮಾಣ (3 ಶತಕೋಟಿ ಯುರೊ). ಈ ಯೋಜನೆಗಳಿಗೆ ಖರ್ಚು ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿತು ಸರ್ಕಾರ. ಈ ಭೂಮಿ ಮತ್ತು ಜನತೆಯ ಹಿತಾಸಕ್ತಿಗಿಂತ ಕೆಲವೇ ಜನರ ಹಿತಾಸಕ್ತಿಗೆ ಸರ್ಕಾರ ಆದ್ಯತೆ ನೀಡುತ್ತಿದೆಯೇ ಎನ್ನುವ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ. ಏಕೆಂದರೆ, ಇಂದು ಮರುವಿನ್ಯಾಸಗೊಂಡ ಮನೆಗಳು ಮತ್ತು ಸಮಯಕ್ಕೆ ಸರಿಯಾಗಿ ಬರುವ ರೈಲು ಜನರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ.

Image

500 ಬೃಹತ್ ಉದ್ದಿಮೆಗಳ ಮೇಲೆ ವಿಶೇಷವಾದ ತೆರಿಗೆ ಹಾಕುವುದರ ಜೊತೆಗೆ, ಇಡೀ ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸಬೇಕಾಗಿದೆ. ಜಗತ್ತಿನ ಎಲ್ಲ ದೇಶಗಳಂತೆ ಫ್ರಾನ್ಸಿನಲ್ಲಿಯೂ ಇದು ಆಗಬೇಕಾಗಿದೆ. 20ನೇ ಶತಮಾನದಲ್ಲಿ ಪ್ರಗತಿಪರ ತೆರಿಗೆ ಅಂದರೆ, ಆದಾಯ ಹೆಚ್ಚಿದಂತೆ ಹೆಚ್ಚಿನ ತೆರಿಗೆಯನ್ನು ವಿಧಿಸುವ ಕ್ರಮವು ತೀರಾ ಯಶಸ್ವಿಯಾದ ಕಾರ್ಯಕ್ರಮವಾಗಿತ್ತು. ರೂಸ್‍ವೆಲ್ಟ್ ಕಾಲದಲ್ಲಿ ಶೇಕಡ 80ರಿಂದ 90ರವರೆಗೆ ತೆರಿಗೆ ಹಾಕಲಾಗಿತ್ತು. 1930ರಿಂದ 1980ರವರಗಿನ 50 ವರ್ಷಗಳ ಅವಧಿಯಲ್ಲಿ ಅಮೆರಿಕದಲ್ಲಿ ಗರಿಷ್ಠ ಮಟ್ಟದ ಅಭಿವೃದ್ಧಿ, ಆವಿಷ್ಕಾರ ಸಾಧ್ಯವಾಗಿತ್ತು. ಅದಕ್ಕೆ ಕಾರಣ ಸರಳ - ಸಮೃದ್ಧಿ ಅನ್ನುವುದು ಮುಖ್ಯವಾಗಿ ಶಿಕ್ಷಣವನ್ನು ಅವಲಂಬಿಸಿರುತ್ತದೆ. ಆಗ ಶಿಕ್ಷಣದ ವಿಷಯದಲ್ಲಿ ಅಮೆರಿಕ ಜಗತ್ತಿನಲ್ಲಿ ತುಂಬಾ ಮುಂದಿತ್ತು. ಪ್ರಗತಿ ಬೇಕೆಂದರೆ ಅಸಮಾನತೆಯನ್ನೂ ಒಪ್ಪಿಕೊಳ್ಳಬೇಕಾಗುತ್ತದೆ ಅನ್ನುವುದು ಸರಿಯಾದ ವಾದವಲ್ಲ.

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಮಧ್ಯಂತರ ಚುನಾವಣೆಯ ದೊಣ್ಣೆ ಏಟು ತಪ್ಪಿಸಿಕೊಂಡ ಬಿಡೆನ್, ಟ್ರಂಪ್‌ಗೆ ಹೆಚ್ಚಿದ ತಲೆನೋವು

ಈಗ 21ನೇ ಶತಮಾನದಲ್ಲಿ ಕೇವಲ ಆದಾಯಕ್ಕೆ ಮಾತ್ರವಲ್ಲ, ಸಂಪತ್ತಿಗೂ ಪ್ರಗತಿಪರ ತೆರಿಗೆಯನ್ನು ವಿಧಿಸಬೇಕಾಗುತ್ತದೆ. ಶತಕೋಟಿ ಶ್ರೀಮಂತರುಗಳ ಮೇಲೆ ಶೇಕಡ 80ರಿಂದ 90ರವರೆಗೆ ತೆರಿಗೆ ಹಾಕಬೇಕು. ಅತ್ಯಂತ ಶ್ರೀಮಂತ ಶೇಕಡ 10ರಷ್ಟು ಜನರನ್ನು ತೆರಿಗೆ ಪಟ್ಟಿಯಲ್ಲಿ ಸೇರಿಸಬೇಕು. ಹಾಗೆ ಸಂಗ್ರಹಿಸಿದ ಹಣದಲ್ಲಿ ಗಣನೀಯ ಭಾಗವನ್ನು ಬಡದೇಶಗಳಿಗೆ ನೇರವಾಗಿ ಕೊಡಬಹುದು. ಅದನ್ನು ನಿರ್ಧರಿಸುವಾಗ ಅವರ ಜನಸಂಖ್ಯೆಯನ್ನು, ಹವಾಮಾನ ವೈಪರೀತ್ಯದಿಂದ ಅವರಿಗಾದ ತೊಂದರೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ದಕ್ಷಿಣದ ದೇಶಗಳು ತಾವು ನೀಡಿದ ಭರವಸೆಗಳನ್ನು ಪೂರೈಸಲೆಂದು ಪ್ರತಿವರ್ಷ ಕಾಯುತ್ತ ಕೂರುವ ಅವಶ್ಯಕತೆ ಇಲ್ಲ. ನಮ್ಮ ಭವಿಷ್ಯದ ಜಗತ್ತಿನ ಬಗ್ಗೆ ಈಗಲಾದರೂ ಯೋಚಿಸಬೇಕಾಗಿದೆ. ಇಲ್ಲದೆಹೋದರೆ ಮುಂಬರುವ ದಿನಗಳು ಕೆಟ್ಟ ಸ್ವಪ್ನದಂತಿರುತ್ತವೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180