EWS | ಶೇ.10ರ ಮೀಸಲಾತಿಯ ಒಳನೋಟದ ಚರ್ಚೆಯಾಗಲಿ, ಜನರಲ್ ಮೆರಿಟ್ ವ್ಯಾಪ್ತಿಯ ಜಾತಿಗಳನ್ನು ಬಹಿರಂಗಪಡಿಸಲಿ

ಮೀಸಲಾತಿ ಒಳನೋಟ ಚರ್ಚೆಯಾಗಲಿ

ಜಾತಿಯಿಂದಾಗುವ ಶೋಷಣೆ, ಅದರಿಂದ ತಪ್ಪುವ ಅವಕಾಶಗಳು ಆರ್ಥಿಕ ಆಧಾರಿತ ಮೀಸಲಾತಿಯಲ್ಲಿ ಮಾನದಂಡವಾಗುವುದಿಲ್ಲ. ಸಮಾಜದಲ್ಲಿ ಎಲ್ಲ ಕಡೆಯು ಮುಕ್ತವಾಗಿ ಬಾಗಿಲು ತೆರೆದಿರುವ ಒಬ್ಬ ಬಡಬ್ರಾಹ್ಮಣ ಹುಡುಗನನ್ನೂ, ಜಾತಿಯಿಂದ ತುಳಿತಕ್ಕೊಳಗಾದ ದಲಿತ ಹುಡುಗನನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ವ್ಯವಸ್ಥೆಗೆ ಮನ್ನಣೆ ದೊರೆಯುತ್ತಿದೆ

ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರವು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಶೇ.10 ಮೀಸಲಾತಿ ಜಾರಿಗೊಳಿಸಿದ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಊರ್ಜಿತಗೊಳಿಸಿರುವ ಕ್ರಮವು ಈಗ ಬಿಸಿ ಬಿಸಿ ಚರ್ಚೆಗೆ ಅವಕಾಶ ಒದಗಿಸಿದೆ. 2019ರಲ್ಲಿ ಸಂಸತ್ ಅಂಗೀಕರಿಸಿದ ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆಯು ಮುಖ್ಯನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ವಿಚಾರಣೆ ಮಾಡಿ ವಿವಾದಿತ ತೀರ್ಪು ನೀಡಿದೆ.

Eedina App

ಅಚ್ಚರಿ ಎಂದರೆ ಈ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಅವರಿಗೇ ಈ ತಿದ್ದುಪಡಿ ಒಪ್ಪಿಗೆ ಆಗಿಲ್ಲ. ಮುಖ್ಯ ನ್ಯಾಯಮೂರ್ತಿ ಇದ್ದಾರೆ ಎಂದರೆ ಆ ಪೀಠದಲ್ಲಿ ಹೆಚ್ಚಿಗೆ ತೂಕ ಇದ್ದಂತೆ. ಅವರ ನಿವೃತ್ತಿಯ ಕೊನೆಯ ದಿನದಲ್ಲಿ ಹೊರಬಿದ್ದ ಈ ತೀರ್ಪಿನಲ್ಲಿ ಅವರ ಅಭಿಪ್ರಾಯಕ್ಕೇ ಕಿಮ್ಮತ್ತು ಇಲ್ಲದೇ ಹೋದುದು ವಿಪರ್ಯಾಸ.

ದೇಶದಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಜಾರಿಗೆ ಬಂದ ಬಿ.ಪಿ. ಮಂಡಲ್‌ ಆಯೋಗಕ್ಕೂ ಮುಂಚೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಇದ್ದ ಲಾಗಾಯತ್ತಿನಿಂದ ಇದುವರೆಗೂ ಸಾಮಾನ್ಯವಾಗಿ ಕೇಳಿ ಬರುತ್ತಿದ್ದ ಮಾತು "ಮೇಲ್ಜಾತಿಗಳಲ್ಲಿ ಬಡವರಿಲ್ಲವೇ? ಮೀಸಲಾತಿಯು ಆರ್ಥಿಕ ಪರಿಸ್ಥಿತಿಯನ್ನು ಆಧರಿಸಬೇಕು. ಪರಿಶಿಷ್ಟ ಜಾತಿಯಲ್ಲಿ ಶ್ರೀಮಂತರೂ ಮೀಸಲಾತಿಯ ಸೌಲಭ್ಯ ಪಡೆಯುತ್ತಿದ್ದು ಮೀಸಲಾತಿ ಉದ್ದೇಶವೇ ಹಾಳಾಗುತ್ತಿದೆ" ಎನ್ನುವ ಸಿಟ್ಟು ವ್ಯಕ್ತವಾಗುತ್ತಿತ್ತು. ಈ ಸಿಟ್ಟು, ಕೊಂಕು ಅಥವಾ ಅಸೂಯೆಯ ಮಾತುಗಳಲ್ಲಿ ಸ್ವಲ್ಪಮಟ್ಟಿಗೆ ನಿಜ ಇರುವುದನ್ನು ನಿರಾಕರಿಸಲಾಗದು.

AV Eye Hospital ad

ಇಂತಹ ಅಸೂಯೆಯ ಮಾತು ಕೇವಲ ಬ್ರಾಹ್ಮಣರು ಮತ್ತು ಬಲಿಷ್ಠ ಜಾತಿಗಳು ಮಾತ್ರವಲ್ಲ ಈವೊತ್ತು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಅತಿ ಹಿಂದುಳಿದ ಜಾತಿಗಳ ಜನರು ವಿಶೇಷವಾಗಿ ವಿದ್ಯಾರ್ಥಿಗಳ ಬಾಯಲ್ಲಿ ಕೇಳಿ ಬರುತ್ತಿದೆ. ಹಾಗಿದ್ದರೆ ಈ ಮಾತಿನ ಒಳಮರ್ಮವೇನು ಎನ್ನುವುದನ್ನು ಆಳವಾಗಿ ಚಿಂತಿಸಿದಾಗ ಥಟ್ಟನೆ ಹೊಳೆಯುವುದು ದಲಿತರ ಬಗೆಗಿನ ಅಸೂಯೆ. ಅಂದರೆ ಸಾವಿರಾರು ವರ್ಷಗಳಿಂದ ಬೇರೆ ಜಾತಿಗಳ ಸೇವೆ ಮಾಡಿಕೊಂಡು ಕೀಳುಮಟ್ಟದ ಸ್ಥಿತಿಯಲ್ಲಿದ್ದ ಈ ಜನಾಂಗದ ಮಕ್ಕಳು ಇಂದು ಶಿಕ್ಷಣ ಕಲಿತು ಮೀಸಲಾತಿ ಹೆಸರಿನಲ್ಲಿ ಉದ್ಯೋಗ ಪಡೆದು ತಮ್ಮ ಲೆವೆಲ್ಲಿಗೆ ಬರುತ್ತಿದ್ದಾರಲ್ಲ ಎನ್ನುವ ಹೊಟ್ಟೆ ಕಿಚ್ಚು ಮತ್ತು ಅವರು ನಮ್ಮ ಮಟ್ಟಕ್ಕೆ ಬರಕೂಡದು ಎನ್ನುವ ಮನಃಸ್ಥಿತಿ. ಇಂತಹ ಕೊಳಕು ಮನಃಸ್ಥಿತಿ ಬದಲಾಗದ ಹೊರತು ಯಾರಿಗೇ ಮೀಸಲಾತಿ ನೀಡಿದರೂ ಮಾನಸಿಕವಾಗಿ ಸಮಾಜ ಶುದ್ಧವಾಗದು.

ಇದನ್ನು ಓದಿದ್ದೀರಾ? EWS | ಬಡತನದ ಕಾಯಿಲೆಗೆ ಮೀಸಲಾತಿ ಸರಿಯಾದ ಔಷಧವೇ?

ಇರಲಿ ಈಗ ನೇರವಾಗಿ ಆರ್ಥಿಕ ಆಧಾರಿತ ಮೀಸಲಾತಿ ವಿಷಯಕ್ಕೆ ಬರೋಣ. 1992ರಲ್ಲಿ ಇಂದ್ರಾ ಸಾಹ್ನಿ ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ಪ್ರಕರಣ ಮತ್ತು ಈಗ ಐವರು ನ್ಯಾಯಮೂರ್ತಿಗಳ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ನೀಡಿದ ತೀರ್ಪಿನ ಬಗೆಗೆ ಗಮನ ಹರಿಸೋಣ.

1. ಸುಪ್ರೀಂಕೋರ್ಟು ವಿಚಾರಣೆ ನಡೆಸುವ ಸಂದರ್ಭದಲ್ಲಿ ಮುಖ್ಯವಾಗಿ ಚರ್ಚೆಗೆ ಬಂದ ವಿಷಯಗಳೆಂದರೆ: ಆರ್ಥಿಕ ಹಿಂದುಳಿದಿರುವಿಕೆಯೊಂದನ್ನೇ ಮೀಸಲಾತಿ ನೀಡಿಕೆಗೆ ಮಾನದಂಡವೇ?

2. ಆರ್ಥಿಕ ಆಧಾರದ ಮೀಸಲಾತಿಯ ವ್ಯಾಪ್ತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಸಾಮಾಜಿಕ ಹಾಗು ಆರ್ಥಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಹೊರಗಿಡಬೇಕೆ?

3. 1992ರಲ್ಲಿ ಸುಪ್ರೀಂ ಕೋರ್ಟ್ ಇಂದ್ರಾಸಾಹ್ನಿ ಪ್ರಕರಣದಲ್ಲಿ ಮೀಸಲಾತಿಯು ಶೇ. 50ನ್ನು ಮೀರಬಾರದು ಎನ್ನುವ ಗೆರೆಯನ್ನು ಈ ಆರ್ಥಿಕ ಆಧಾರಿತ ಮೀಸಲಾತಿ ಮೀರಬಹುದೇ?

4. ಸರ್ಕಾರದ ಅನುದಾನ ಪಡೆಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಮೀಸಲಾತಿಯನ್ನು ನೀಡಬಹುದೇ? ಎನ್ನುವುದು ಬಹುಚರ್ಚಿತ ವಿಷಯವಾಗಿತ್ತು.

ಆರ್ಥಿಕ ಆಧಾರಿತ ಶೇ. 10ರಷ್ಟು ಮೀಸಲಾತಿ ನೀತಿಯು 1991ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದ ಅಲ್ಪ ಬಹುಮತದ ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೂಸು. ಈ ಮೀಸಲಾತಿಯನ್ನು  ನರಸಿಂಹರಾವ್ ಸರ್ಕಾರ ಕೇವಲ ಪ್ರೆಸಿಡೆನ್ಷಿಯಲ್ ಆರ್ಡರ್ ಮೂಲಕ ಜಾರಿಗೊಳಿಸಿದ್ದನ್ನು ಇಂದ್ರಾಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆಗಿನ ಆದೇಶವನ್ನು ಅನೂರ್ಜಿತ ಗೊಳಿಸಿದ್ದರಿಂದ ಆರ್ಥಿಕ ಆಧಾರಿತ ಮೀಸಲಾತಿ ವಿಷಯ ತನ್ನ ಮಹತ್ವವನ್ನು ಕಳೆದುಕೊಂಡಿತ್ತು.

ಆದರೆ ಈಗಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂವಿಧಾನದ 103ನೇ ತಿದ್ದುಪಡಿ ತರುವ ಮೂಲಕ ಎಚ್ಚರಿಕೆಯಿಂದ ಈ ಮೀಸಲಾತಿಯನ್ನು ಜಾರಿಗೊಳಿಸಿರುವುದು ಜಾಣತನ.

 ೧೦% ಮೀಸಲಾತಿಯನ್ನು ಸ್ವಾಗತಿಸಿದ ಖರ್ಗೆ

ಪಿ.ವಿ. ನರಸಿಂಹರಾವ್ ಸರ್ಕಾರ ಆರ್ಥಿಕವಾಗಿ ದುರ್ಬಲರಿಗೆ ಮೀಸಲಾತಿ ನೀಡುವ ಆದೇಶ ಹೊರಡಿಸಿದ್ದರಿಂದಲೇ ಈಗಿನ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಸುಪ್ರೀಂ ಕೋರ್ಟ್ ಈ ಬಗೆಗೆ ತೀರ್ಪು ನೀಡಿದ್ದನ್ನು ಹಿಂದು ಮುಂದು ನೋಡದೆ ಅತುರದಲ್ಲಿ ಸ್ವಾಗತಿಸಿದರು. ಆದರೆ ಈ ತೀರ್ಪಿನಿಂದ ಜಾರಿಗೆ ಬಂದಿರುವ ಶೇ. 10ರಷ್ಟು ಮೀಸಲಾತಿ ನೀತಿಯಿಂದ ಮೀಸಲಾತಿ ವ್ಯವಸ್ಥೆಯ ಮೇಲಾಗುವ ಹಲವು ದುಷ್ಪರಿಣಾಮಗಳನ್ನು ತಮಿಳುನಾಡು ಡಿಎಂಕೆ ಸರ್ಕಾರ ಮತ್ತು ಇತರೆ ಸಾಮಾಜಿಕ ವಲಯದಲ್ಲಿ ವಿವಾದವಾಗಿ ಚರ್ಚೆಗೆ ಒಳಪಟ್ಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ಶೇ. 10ರ ಮೀಸಲಾತಿಯ ಪರಿಣಾಮ ಕುರಿತು ವ್ಯಾಪಕವಾಗಿ ಚರ್ಚಿಸಿ ಪುನರ್‌ ವಿಮರ್ಶೆ ಮಾಡಿ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.

ಮೀಸಲಾತಿ ಪರಿಕಲ್ಪನೆಯನ್ನೇ ಬದಲಾಯಿಸುವ ಈ ತೀರ್ಪಿನ ಬಗೆಗೆ ಸಾಮಾಜಿಕ ವಲಯ ಮಾತ್ರವಲ್ಲ ನ್ಯಾಯಾಂಗ ವ್ಯವಸ್ಥೆಯ ಅಂಗಳದಲ್ಲೂ ಚರ್ಚೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ.

ಸಂವಿಧಾನ ರಚನೆಯ ಚರ್ಚೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಎಂದರೆ "ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ಕೀಳಾಗಿ ಪರಿಗಣಿಸಿ ಅವರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ತುಳಿಯಲಾಗಿರುವ ಪರಿಶಿಷ್ಟ ಜಾತಿಗಳಿಗೆ ನೀಡುವ ಮೀಸಲಾತಿಯು ಕೇವಲ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯಕ್ರಮ ಮಾತ್ರವಲ್ಲ. ಅದು ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಅವರೂ ದನಿಗೂಡಿಸಲು ಅವರ ಇರುವಿಕೆಯನ್ನು ಸಾಬೀತುಪಡಿಸಲು ನೀಡಲಾಗುವ ಪ್ರಾತಿನಿಧ್ಯ" ಎನ್ನುವ ವಾದವನ್ನು ಮನವರಿಕೆ ಮಾಡಿರುವುದನ್ನು ಮೀಸಲಾತಿ ಪ್ರಶ್ನೆ ಬಂದಾಗ ಮುಖ್ಯವಾಗಿ ಗಮನಿಸಬೇಕಾಗುತ್ತದೆ.

ಈವೊಂದು ಪರಿಕಲ್ಪನೆಗೆ ಈಗ ಶೇ. 10ರ ಆರ್ಥಿಕ ಆಧಾರಿತ ಮೀಸಲಾತಿ ಎಳ್ಳುನೀರು ಬಿಟ್ಟಿದೆ. ಇದನ್ನೇ ಸಂವಿಧಾನ, ಸರ್ಕಾರ ಮತ್ತು ಸಮಾಜ ಮಾನ್ಯ ಮಾಡುತ್ತಾ ಹೋದರೆ ಇಷ್ಟು ವರ್ಷ ಪರಿಶಿಷ್ಟ ಜಾತಿಯ ಜನರು ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾದ ಜನರ ಪರವಾದ ಕಾಯ್ದೆ ಕಾನೂನುಗಳಲ್ಲಿ ಬರುವ "ಸಾಮಾಜಿಕ ಹಿಂದುಳಿದಿರುವಿಕೆ" ಎನ್ನುವ ಪದ ಮತ್ತು ವ್ಯಾಖ್ಯಾನ ಅರ್ಥ ಕಳೆದುಕೊಳ್ಳುತ್ತದೆ. ಆ ಸ್ಥಾನವನ್ನು ಕೇವಲ "ಆರ್ಥಿಕ ಹಿಂದುಳಿದಿರುವಿಕೆ" ಎನ್ನುವ ಅಂಶ ಮಾನ್ಯತೆ ಪಡೆದುಕೊಳ್ಳುವ ಸಂಭವ ಇದೆ. ಇದರ ಪರಿಣಾಮದಿಂದ ಮುಂದಿನ ದಿನಗಳಲ್ಲಿ ಮೀಸಲಾತಿಯ ನಿಜವಾದ ಮೌಲ್ಯ ಅರ್ಥ ಕಳೆದುಕೊಳ್ಳುವ ಅಪಾಯವೇ ಹೆಚ್ಚು.

ಜಾತಿಯಿಂದಾಗುವ ಶೋಷಣೆ ಅದರಿಂದ ತಪ್ಪುವ ಅವಕಾಶಗಳು ಆರ್ಥಿಕ ಆಧಾರಿತ ಮೀಸಲಾತಿಯಲ್ಲಿ ಮಾನದಂಡವಾಗುವುದಿಲ್ಲ. ಸಮಾಜದಲ್ಲಿ ಎಲ್ಲ ಕಡೆಯು ಮುಕ್ತವಾಗಿ ಬಾಗಿಲು ತೆರೆದಿರುವ ಒಬ್ಬ ಬಡಬ್ರಾಹ್ಮಣ ಹುಡುಗನೂ ಒಂದೇ, ಜಾತಿಯಿಂದ ತುಳಿತಕ್ಕೊಳಗಾದ ದಲಿತ ಹುಡುಗನನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ವ್ಯವಸ್ಥೆಗೆ ಮನ್ನಣೆ ದೊರೆಯುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ.

ಇದನ್ನು ಓದಿದ್ದೀರಾ? 'ಪ್ರಗತಿಶೀಲ ರಾಜ್ಯಧರ್ಮ'ದ ಅನಾವರಣ ಪ್ರಧಾನಿಯ ಪರಮ ಕರ್ತವ್ಯವಾಗಬೇಕು

ಏಕೆಂದರೆ ಈ ಶೇ. 10ರಷ್ಟು ಮೀಸಲಾತಿ ವ್ಯಾಪ್ತಿಯಿಂದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಜಾತಿಗಳನ್ನು  ಹೊರಗಿಡಲಾಗಿದೆ. ಅಂದರೆ ಪ್ರತಿಭಾವಂತರಾಗಿದ್ದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಜಾತಿಗಳ ಮಕ್ಕಳು ತಮಗಿರುವ ಈಗಿನ ಶೇ. 18 ಮತ್ತು ಶೇ. 27ರ ಮೀಸಲಾತಿಯಲ್ಲೇ ಹೊರಳಾಡಬೇಕಿದೆ. ಈಗ ಈ ಮೀಸಲಾತಿಯ ಹೆಚ್ಚಳದಿಂದ ಆಗಿರುವ ಶೇ.60 ಮೀಸಲಾತಿಯ ನಂತರ ಉಳಿದ ಶೇ. 40ರಷ್ಟು ಜನರಲ್ ಮೆರಿಟ್ ವ್ಯಾಪ್ತಿಯಲ್ಲಿ ಯಾವ ಯಾವ ಜಾತಿಗಳು ಮತ್ತು ಜನರು ಬರುತ್ತಾರೆ ಎನ್ನುವ ರಹಸ್ಯವನ್ನು ಸರ್ಕಾರ ಬಹಿರಂಗಪಡಿಸಬೇಕಿದೆ.

ಇಂತಹ ಒಳನೋಟದ ಬಗೆಗೆ ಸರ್ಕಾರ ಮತ್ತು ಸಮಾಜ ಶೇ. 10ರಷ್ಟು ಮೀಸಲಾತಿಯ ಜಾರಿಯಿಂದಾಗುವ ಪರಿಣಾಮದ ಬಗ್ಗೆ ಮುಕ್ತಮನಸ್ಸಿನಿಂದ ಪುನರಾವಲೋಕನ ಮಾಡಬೇಕಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app