EWS ಮೀಸಲಾತಿ ಕೂಡಾ ಜಾತಿ ಆಧಾರಿತ ಕೋಟಾವೇ ಆಗಿದೆ: ಅರ್ಥಶಾಸ್ತ್ರಜ್ಞೆ ಅಶ್ವಿನಿ ದೇಶಪಾಂಡೆ

ಅಶ್ವಿನಿ ದೇಶಪಾಂಡೆ ಸಂದರ್ಶನ

 ಸುಪ್ರೀಂಕೋರ್ಟ್, EWS ಮೀಸಲಾತಿಯ ಮಾನ್ಯತೆಯನ್ನು ಎತ್ತಿಹಿಡಿದಿದೆ. ಈ ತೀರ್ಪಿನಿಂದ ಆಗಬಹುದಾದ ಪರಿಣಾಮಗಳ ಕುರಿತು ಅರ್ಥಶಾಸ್ತ್ರಜ್ಞೆ ಮತ್ತು ದೆಹಲಿಯ ಅಶೋಕ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎಕನಾಮಿಕ್ ಡೇಟಾ ಮತ್ತು ಅನಾಲಿಸಿಸ್ (CEDA) ನ ಸ್ಥಾಪಕ ನಿರ್ದೇಶಕಿ ಅಶ್ವಿನಿ ದೇಶಪಾಂಡೆಯವರೊಂದಿಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ

ಪ್ರಶ್ನೆ : ಭಾರತದ ಜಾತಿ ಆಧಾರಿತ ಮೀಸಲಾತಿ ನೀತಿಯನ್ನು ಬದಲಿಸುವ EWS ಮೀಸಲಾತಿ ಅಥವಾ '10% ಕೋಟಾ'ದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ 3:2 ಅನುಪಾತದ ತೀರ್ಪಿನ ಮೂಲಕ ಎತ್ತಿ ಹಿಡಿದಿದೆ. ನಿಮ್ಮ ಪ್ರಕಾರ ತೀರ್ಪಿನ ಪ್ರಮುಖ ಪರಿಣಾಮಗಳೇನು ?

Eedina App

SC-ST-OBC ಅಲ್ಲದ, ವಾರ್ಷಿಕ ರೂ. 8 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ಗಳಿಸುವ ಕುಟುಂಬಗಳಿಗೆ ಸರ್ಕಾರವು ಈ ಕೋಟಾವನ್ನು ನಿಗದಿಪಡಿಸಿದೆ. 8 ಲಕ್ಷಕ್ಕಿಂತ ಕಡಿಮೆ ಆದಾಯದವರೆಲ್ಲರೂ ಈ ಮೀಸಲಾತಿ ಪಡೆಯಬಹುದು ಎಂದರೆ, ಸಿಕ್ಕಾಪಟ್ಟೆ ಶ್ರೀಮಂತರಾಗಿರುವ ಅತ್ಯಂತ ಮೇಲಿನ 1% ಜನರನ್ನು ಮಾತ್ರ ಹೊರತುಪಡಿಸಿ ಉಳಿದ ಮೇಲ್ಜಾತಿಗಳಿಗೆ ಪ್ರತ್ಯೇಕವಾಗಿ ಒಂದು ವಿಶೇಷ ಕೋಟಾ ಕೊಟ್ಟಂತಾಗಿದೆ. ಅಷ್ಟೇ ಅಲ್ಲ ಈ ಕೋಟಾವನ್ನು ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಪ್ರಸ್ತುತಪಡಿಸಲಾಗಿದ್ದರೂ, ಇದು ಜಾತಿ ಆಧಾರಿತ ಕೋಟಾವಾಗಿದೆ, ಆದರೆ ಇದನ್ನು ಯಾವುದೇ ಸಾಮಾಜಿಕ ತಾರತಮ್ಯವನ್ನು ಅನುಭವಿಸದ ಜಾತಿಗಳಿಗಾಗಿ ಕೊಡಲಾಗಿದೆ ಎಂಬುದನ್ನು ಗಮನಿಸಬೇಕು.

ಇದು ಅತ್ಯಂತ ದೊಡ್ಡ ಅಪಹಾಸ್ಯ ಏಕೆಂದರೆ - ಜಾತಿಯನ್ನು ಲೆಕ್ಕಿಸದೆ ಬಡತನವನ್ನು ಪರಿಹರಿಸುವ ಉದ್ದೇಶದ ಒಂದು ಕೋಟಾದಿಂದ ವಿಪರೀತ ಬಡವಾಗಿರುವ (ಅಂದರೆ ಹೆಚ್ಚಿನ ಸಂಖ್ಯೆಯ ಬಡತನ ರೇಖೆಗಿಂತ ಕೆಳಗಿರುವ/ BPL ವ್ಯಕ್ತಿಗಳನ್ನು ಹೊಂದಿರುವ) ಗುಂಪುಗಳನ್ನು ಭಾರತದಲ್ಲಿ ಮೊದಲ ಬಾರಿಗೆ ಹೊರಗಿಡಲಾಗಿದೆ. ಏಕೆಂದರೆ ನೀವು ಬಡವರಿಗೆ ಮೀಸಲಾತಿ ಎನ್ನುವುದಾದರೆ ಎಲ್ಲಾ ಜಾತಿಗಳ ಬಡವರಿಗೂ ಮೀಸಲಾತಿ ಕೊಡಬೇಕಿತ್ತು.

AV Eye Hospital ad

ಪ್ರಶ್ನೆ: ಭಾರತದಲ್ಲಿ ಕೌಟುಂಬಿಕ  ಆದಾಯದ  ಬಗ್ಗೆ ಇತ್ತೀಚಿಗೆ ನಿಖರ  ಮಾಹಿತಿಯಿಲ್ಲ. ಈ ಕೊರತೆಯನ್ನು ಗಮನಿಸಿದಾಗ, EWS ಮಾನದಂಡದ ಅಡಿಯಲ್ಲಿ ಬರುವ ಬಡವರಿಗೆ ತೀರ್ಪು ಸಹಾಯ ಮಾಡುತ್ತದೆಯೇ? ಪ್ರಸ್ತುತ ನಿಯಮಗಳ ಅಡಿಯಲ್ಲಿ ಎಷ್ಟು ಕುಟುಂಬಗಳು ಅರ್ಹತೆ ಪಡೆಯುತ್ತವೆ?

ಉತ್ತರ: (ಈಗ ಸರ್ಕಾರ ಹೇಳುತ್ತಿರುವ) EWS ಕಟ್-ಆಫ್ ಎಂದರೆ ಅದರಲ್ಲಿ ಕೇವಲ BPL ಕುಟುಂಬಗಳು ಬರುವುದಿಲ್ಲ. ಅದಕ್ಕಿಂತ ಮೇಲ್‌ಸ್ತರದ ಎಷ್ಟೋ ಹೆಚ್ಚಿನ ಜನರು ಬರುತ್ತಾರೆ. ಹಾಗೆ ನೋಡಿದರೆ ಇಲ್ಲಿ 'EWS' ಪದವೇ ಸಂಪೂರ್ಣ ತಪ್ಪು ನಾಮಕರಣವಾಗಿದೆ. ನಿಜವಾದ ಬಡವರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದರಲ್ಲಿ ಇಲ್ಲ ಎಂಬ ವಾಸ್ತವ ಅಂಶದಿಂದ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು ಈ ಪದ ಬಳಸಲಾಗಿದೆ ಎನಿಸುತ್ತದೆ.

ಮೊದಲನೆಯದಾಗಿ, 'EWS ಕೋಟಾ' ಎಂದು ಕರೆಯಲ್ಪಡುವ ಇದು ನಿಜವಾಗಿ ಏನೆಂದು ನಾವು ನೋಡೋಣ. ವಾರ್ಷಿಕ ರೂ 8,00,000 ಆದಾಯದ ಮಿತಿಯನ್ನು ಅದು ಹೇಳುತ್ತದೆ. ವರ್ಷಕ್ಕೆ ಎಂಟು ಲಕ್ಷ ಆದಾಯ (ಅಂದರೆ ತಿಂಗಳಿಗೆ 66,000 ರೂ.) ಪಡೆಯುವವರು ಬಡವರಾ? ಇದು ನಿಜವಾಗಲೂ "ಆರ್ಥಿಕವಾಗಿ ದುರ್ಬಲ ವರ್ಗ”ಗಳಿಗೆ ಮಾತ್ರ ಕೊಡಲು ಮಾಡಲಾದ ತಿದ್ದುಪಡಿ ಅಲ್ಲ. ಭಾರತವು ವಿಶ್ವಾಸಾರ್ಹ ಆದಾಯದ ಡೇಟಾವನ್ನು ಹೊಂದಿಲ್ಲ. ಹಾಗಾಗಿ ನಾನು ಸಂಶೋಧಕ ಜಿತೇಂದ್ರ ಸಿಂಗ್ ರ ಜೊತೆಗೆ, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE )ಯ, ಗ್ರಾಹಕ ಪಿರಮಿಡ್‌ಗಳ ಕೌಟುಂಬಿಕ ಆದಾಯ ಸಮೀಕ್ಷೆಯ ಡೇಟಾವನ್ನು ಬಳಸುತ್ತಿದ್ದೇನೆ. 2019 ರಲ್ಲಿ ಕೇವಲ 2.3% ಕುಟುಂಬಗಳ ಒಟ್ಟು ಕೌಟುಂಬಿಕ ಆದಾಯವು ರೂ 8,00,000ಕ್ಕಿಂತ ಹೆಚ್ಚಿವೆ ಎಂದು ನಾವು ಕಂಡುಕೊಂಡಿದ್ದೇವೆ. 2015ರಲ್ಲಿ ಬಂದ ಮತ್ತೊಂದು ಅಂಕಿ ಅಂಶವೂ, ಎಲ್ಲಾ ಜಾತಿಗಳಿಗೆ ಸೇರಿದ 98% ಕುಟುಂಬಗಳು ವಾರ್ಷಿಕ ಆದಾಯ ರೂ 600,000 ಅಥವಾ ಅದಕ್ಕಿಂತ ಕಡಿಮೆ ಗಳಿಸಿವೆ ಎಂದು ಸೂಚಿಸುವ ಅದನ್ನೇ ಸೂಚಿಸುತ್ತದೆ.

ಬಡತನವು ತೀವ್ರವಾದ ಒಂದು ಸಂಕಷ್ಟವಾಗಿದ್ದು ಅದನ್ನು ನಿವಾರಿಸಬೇಕಿದೆ ಎಂಬುದರಲ್ಲಿ ಸಂಶಯವಿಲ್ಲ. ಇಲ್ಲಿ ಪ್ರಶ್ನೆಯೆಂದರೆ: ಉನ್ನತ ಶಿಕ್ಷಣ ಮತ್ತು ಸಾರ್ವಜನಿಕ ವಲಯದ ಉದ್ಯೋಗಗಳಿರುವ ಸರ್ಕಾರಿ ಸಂಸ್ಥೆಗಳಲ್ಲಿ ಮೀಸಲಾತಿಯು ಬಡತನವನ್ನು ನಿವಾರಿಸಲು ಸರಿಯಾದ ಸಾಧನವೇ? ಇಲ್ಲ. ಬಡತನವು ಒಂದು ಆರ್ಥಿಕ ಲಕ್ಷಣ ಮತ್ತು ಇದನ್ನು ಆರ್ಥಿಕ ಕ್ರಮಗಳ ಮೂಲಕ ಪರಿಹರಿಸಬಹುದು. ಉದಾಹರಣೆಗೆ, 1991ರ ನಂತರ ಉತ್ತಮ ಆರ್ಥಿಕ ಬೆಳವಣಿಗೆಯು ಬಡತನದಿಂದ ಹೆಚ್ಚಿನ ಸಂಖ್ಯೆಯ ಜನರನ್ನು ಮೇಲಕ್ಕೆತ್ತಿದೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಥವಾ BPL ವ್ಯಕ್ತಿಗಳಿಗೆ ಸಹಾಯವನ್ನು ಒದಗಿಸುವ ಸಾರ್ವಜನಿಕ ವಿತರಣಾ ವ್ಯವಸ್ಥೆಯಂತಹ ಕಲ್ಯಾಣ ಕ್ರಮಗಳಿವೆ. ಈ ಕ್ರಮಗಳು ಸಾಕೇ? ಭಾರತಕ್ಕೆ ಬಡತನವನ್ನು ನಿವಾರಿಸಲು ಇನ್ನೂ ಹೆಚ್ಚಿನ ಕಲ್ಯಾಣ ಕಾರ್ಯಕ್ರಮಗಳ ಅಗತ್ಯವಿದೆಯೇ? ಹೌದು ಖಂಡಿತಾ! ಅಲ್ಲದೆ, ಜನರನ್ನು ಬಡತನಕ್ಕೆ ತಳ್ಳುವ ಅಂಶಗಳೇನು ಎಂಬುದನ್ನು ನಾವು ಸರಿಯಾಗಿ ಗುರುತಿಸಬೇಕಾಗಿದೆ. ರಾಜಕೀಯ ವಿಜ್ಞಾನಿ ಅನಿರುದ್ಧ್ ಕೃಷ್ಣ ಅವರು “(ಮಧ್ಯಮ ವರ್ಗವನ್ನು) ಒಂದೇ ಒಂದು ತೀವ್ರವಾದ ಅನಾರೋಗ್ಯವು ಭಾರತದಲ್ಲಿ ಬಡತನ ರೇಖೆಗಿಂತ ಕೆಳಕ್ಕೆ ತಳ್ಳಬಹುದು’ ಎಂದು ನಿರೂಪಿಸಿದ್ದಾರೆ  
ಆಹಾರ, ಬಟ್ಟೆ, ವಸತಿ, ಆರೋಗ್ಯ ರಕ್ಷಣೆ, ಶಿಕ್ಷಣ, ನೈರ್ಮಲ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಯೋಗ್ಯ ಜೀವನೋಪಾಯದ ಆಯ್ಕೆಗಳು ಮತ್ತು ಘನತೆಯ ಜೀವನದ ಹಕ್ಕನ್ನು ಖಾತರಿಪಡಿಸುವ ಅಂಶಗಳ ಮಹತ್ವವನ್ನು ಎಷ್ಟು ಒತ್ತಿ  ಹೇಳಿದರೂ ಕಡಿಮೆಯೇ. ಯಾವುದೇ ಜಾತಿಯ ಬಡವರಾದರೂ ಅವರಿಗೆ ಇವೆಲ್ಲವನ್ನೂ ನೀಡಬೇಕು. ಇಲ್ಲಿ ಪ್ರಶ್ನೆಯೆಂದರೆ: 10% ಕೋಟಾವು ಬಡತನ ನಿವಾರಣೆಯ ಈ ಗುರಿಗಳ ಹತ್ತಿರಕ್ಕೆ ನಮ್ಮನ್ನು ಕರೆದೊಯ್ಯುತ್ತದೆಯೇ? ಖಂಡಿತಾ ಇಲ್ಲ.

ಪ್ರಶ್ನೆ: ನೀವು ಹೇಳುತ್ತಿರುವುದು ಸರಿಯಲ್ಲ ಎನಿಸುತ್ತದೆ. ಈಗ ನೋಡಿ, ರೂ 8,00,000ದ EWS ಆದಾಯದ ಮಾನದಂಡದಲ್ಲಿ 5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ಕುಟುಂಬಗಳು, 1,000 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ  ಫ್ಲಾಟ್, ಪುರಸಭೆಯೊಂದರಲ್ಲಿ 100 ಚದರ ಗಜಗಳಷ್ಟು ಪ್ರದೇಶ ಮತ್ತು ಅಧಿಸೂಚಿತ ಪುರಸಭೆಗಳಡಿಯಲ್ಲಿ 200 ಚದರ ಗಜಗಳು ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ ವಸತಿ ನಿವೇಶನ  ಹೊಂದಿರುವವರನ್ನು EWS ಮೀಸಲಾತಿಯಿಂದ ಹೊರಗಿಡಲಾಗಿದೆ. ಇದು ಬಡ ಜನರಿಗಷ್ಟೇ EWS ಮೀಸಲಾತಿಯನ್ನು ತಲುಪಿಸಲು ಹೆಚ್ಚು ಸಹಾಯ ಮಾಡುವುದಿಲ್ಲವೇ?

ಉತ್ತರ: ಆಗಲಾರದು. ಅವರು ಕೊಟ್ಟಿರುವ ಪ್ರಶ್ನೋತ್ತರಗಳ (FAQ) ದಾಖಲೆಯಲ್ಲಿ ಅರ್ಹತೆ/ವಿನಾಯಿತಿ ಮಾನದಂಡದ ವಿವರಗಳನ್ನು ನೀವು ನೋಡಿದರೆ, ಯಾರನ್ನು ಹೊರಗಿಡಬೇಕು ಎಂಬ ಕಟ್‌-ಆಫ್‌ಗಳು ತುಂಬಾ ಮೇಲಕ್ಕೆ ಇದೆ. ಅಂದರೆ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರಿಗೂ ಈ ಸೌಲಭ್ಯ ಸಿಗುವಂತೆಯೇ ಇದೆ. ಉದಾಹರಣೆಗೆ ಐದು ಎಕರೆ ಜಮೀನಿರುವವರು ನಮ್ಮಲ್ಲಿ ಬಹಳ ಬಹಳ ಕಡಿಮೆ. ಮತ್ತು ಈ ಕೋಟಾ ಪಡೆಯಲು ದಾಖಲೆಗಳನ್ನು ಹೊಂದಿಸುವ ಪ್ರಯತ್ನಗಳು ತುಂಬಾ ಶ್ರಮದಾಯಕವಾಗಿರುತ್ತವೆ. ಇದರಿಂದ ನಿಜವಾದ EWS ವ್ಯಕ್ತಿಗಳು ಹೊರಗುಳಿಯುವ ಸಾಧ್ಯತೆಯೇ ಹೆಚ್ಚು. ಹಾಗೆಯೇ ಅನರ್ಹರ ಸೇರ್ಪಡೆಯ ದೋಷಗಳೂ ಇರುತ್ತವೆ. ಇದು ಹೇಗೆಂದು ನಾನು ವಿವರಿಸುತ್ತೇನೆ.

ಅಶ್ವಿನಿ ದೇಶಪಾಂಡೆ ಸಂದರ್ಶನ

ಆದಾಯ ಪ್ರಮಾಣಪತ್ರ, ಆಸ್ತಿ ಪ್ರಮಾಣಪತ್ರ,"ಕುಟುಂಬ" ಎಂದು ವ್ಯಾಖ್ಯಾನಿಸಿಲ್ಪಟ್ಟವರ ಒಡೆತನದ ಎಲ್ಲಾ ಆಸ್ತಿಗಳನ್ನ ಒಟ್ಟುಗೂಡಿಸಿ ಮುಂದಿಡುವ ಈ ಎಲ್ಲಾ ದಾಖಲೆ ಪತ್ರಗಳನ್ನು ತರುವುದು ಅಧಿಕೃತವಾಗಿಯೇ ಎಂಟು ಲಕ್ಷದಷ್ಟು ಆದಾಯ ಹೊಂದಿರುವವರಿಗೆ ಸುಲಭ ಸಾಧ್ಯ. ಹೀಗಿರುವಾಗ, ನಿಜಕ್ಕೂ ಬಡವರಾಗಿರುವವರಿಗೆ ಅಂತಹ ಕಾಗದ ಪತ್ರಗಳನ್ನು ಹೊಂದಿಸಿ ಎಂಟು ಲಕ್ಷ ಆದಾಯ ಇರುವವರ ಜೊತೆಗೆ ಸ್ಪರ್ಧಿಸಲಾದೀತೇ? ಒಬ್ಬರು X ಅಥವಾ Y ಆಸ್ತಿಯನ್ನು ಹೊಂದಿಲ್ಲ ಎಂದು ಸಾಬೀತುಪಡಿಸುವುದು ಆ ಆಸ್ತಿಯನ್ನು ಹೊಂದಿದ್ದಾರೆ ಎಂದು ಸಾಬೀತುಪಡಿಸುವುದಕ್ಕಿಂತ ಹೆಚ್ಚು ಕಷ್ಟವಿದೆ. (ವೈಯಕ್ತಿಕ ಟಿಪ್ಪಣಿ: ನನ್ನ ತಂದೆ ತೀರಿಕೊಂಡಾಗ, ನಾವು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳು ಎಂದು ಪ್ರಮಾಣೀಕರಿಸಲು ನನ್ನ ಸಹೋದರ ಮತ್ತು ನಾನು ಬ್ಯಾಂಕ್‌ಗೆ ಅಫಿಡವಿಟ್‌ಗಳನ್ನು ನೀಡಿದ್ದೆವು. ಕಾನೂನುಬದ್ಧ ಉತ್ತರಾಧಿಕಾರಿ ಎಂದು ಹೇಳಿಕೊಳ್ಳುವ ಇನ್ನೊಬ್ಬ ಸಹೋದರ ಇಲ್ಲ ಎಂದು ಸಾಬೀತುಪಡಿಸಲು ಬ್ಯಾಂಕ್ ನಮ್ಮನ್ನು ಕೇಳಿತ್ತು ಹಾಗೂ ಅದನ್ನು ಸಾಬೀತುಪಡಿಸುವದು ನಮಗೊಂದು ದುಸ್ವಪ್ನವಾದ ಕೆಲಸವಾಗಿತ್ತು!)

ಪ್ರಸ್ತುತ ಮಾನದಂಡಗಳ ಅಡಿಯಲ್ಲಿ ಅರ್ಹತೆ ಪಡೆಯದ ವ್ಯಕ್ತಿಗಳ ಸೇರ್ಪಡೆಗೆ ಕಾರಣವಾಗುವ ಹಲವಾರು ಲೋಪದೋಷಗಳು ಮತ್ತು ಅಸ್ಪಷ್ಟತೆಗಳಿವೆ. ಉದಾಹರಣೆಗೆ, ಪ್ರಶ್ನೋತ್ತರಗಳ (FAQ) ದಾಖಲೆಯಲ್ಲಿ ಪ್ರಶ್ನೆ 4ರ ಉತ್ತರವು ಅಜ್ಜ/ಅಜ್ಜಿ ಅಭ್ಯರ್ಥಿಯ ಪೋಷಕರಿಗೆ ಆಸ್ತಿ ವಿತರಿಸದೆ  ಮಾಲೀಕರಾಗಿದ್ದಲ್ಲಿ, ಆ ಆಸ್ತಿಯನ್ನು "ಕುಟುಂಬದ" ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳುತ್ತದೆ. ಕಾಲೇಜು ವಿದ್ಯಾರ್ಥಿಯೊಬ್ಬನ ಅಜ್ಜ ಅಜ್ಜಿಯರು ಜೀವಂತವಾಗಿದ್ದರೆ, ಅವರು ಕಾನೂನುಬದ್ಧವಾಗಿ ತಮ್ಮ ಮಕ್ಕಳಿಗೆ (ವಿದ್ಯಾರ್ಥಿಯ ಪೋಷಕರು) ಆಸ್ತಿ ವಿತರಿಸಿಲ್ಲದಿದ್ದರೆ, ಮತ್ತು ಸಾಮಾನ್ಯವಾಗಿ  ವಿದ್ಯಾರ್ಥಿಯ ಪೋಷಕರು ಮತ್ತು ಅಜ್ಜ ಅಜ್ಜಿಯ ಆಸ್ತಿಯ ಮೊತ್ತ ತಿದ್ದುಪಡಿಯಲ್ಲಿನ ಷರತ್ತುಗಳನ್ನು ಮೀರಿದರೂ ಅಂತಹ ಅರ್ಜಿದಾರರನ್ನು EWS ಎಂದು ಪರಿಗಣಿಸಲಾಗುತ್ತದೆ. ಅಜ್ಜ ಅಜ್ಜಿಯರ ಆಸ್ತಿ ಸೇರಿದರೆ ಇಡೀ ಕುಟುಂಬ ಭಾರೀ ಶ್ರೀಮಂತರಾಗಿದ್ದರೂ, ವಿದ್ಯಾರ್ಥಿಯ ತಂದೆ ತಾಯಿಯ ಹೆಸರಿಗೆ ಅದು ವರ್ಗಾವಣೆಯಾಗಿರದಿದ್ದಲ್ಲಿ, ಆ ವಿದ್ಯಾರ್ಥಿ ಬಡವ!

ಹೀಗಾಗಿ, ನಿಖರತೆಯ ಕೊರತೆ ಹಾಗೂ ಬಹು ಅರ್ಹತೆಯ ಮಾನದಂಡಗಳು ಫಲಾನುಭವಿಗಳನ್ನು ಗುರುತಿಸುವುದನ್ನು ಹೆಚ್ಚು ಕಷ್ಟಕರವಾಗಿಸುತ್ತದೆ.

ಪ್ರಶ್ನೆ: 1950ರಲ್ಲಿ ಮೀಸಲಾತಿಯನ್ನು ಪರಿಚಯಿಸಿದಾಗ ಅದರ ಉದ್ದೇಶವು, ದಮನಿತ  ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದಾಗಿದ್ದು, ಸಕಾರಾತ್ಮಕ ತಾರತಮ್ಯದ ಕಲ್ಪನೆ (Idea of compensatory discrimination) ಯನ್ನು ಆಧರಿಸಿತ್ತು. EWS ಮೀಸಲಾತಿಯು ಸಹ ಈ ಆಲೋಚನೆಗಳಿಗೆ ಬದ್ಧವಾಗಿದೆಯೇ?

ಉತ್ತರ: ನಾನು ಇದನ್ನು 10% ಕೋಟಾ ಎಂದೇ  ಕರೆಯುತ್ತೇನೆ, ಏಕೆಂದರೆ ನಾನು ಮೊದಲೇ ವಿವರಿಸಿದ ಕಾರಣಗಳಿಗಾಗಿ, ಇದನ್ನು EWS ಕೋಟಾ ಎಂದು ಕರೆಯುವುದು ತಪ್ಪಾಗಿದೆ. ಈ ನಡೆಯು  ಐತಿಹಾಸಿಕ ಪ್ರಮಾದವಾಗಿದೆ- ಇದು ಅಂಚಿನಲ್ಲಿರುವ ಮತ್ತು ದಮನಿತ ಗುಂಪುಗಳಿಗೆ ಅತಿ  ಮುಖ್ಯ ಅಸ್ತಿತ್ವದ ಆಧಾರವಾಗಿರುವ ಕೋಟಾಗಳನ್ನು ಮುನ್ನಡೆಸುವುದಿಲ್ಲ. ಬದಲಿಗೆ ಇದು ಮೀಸಲಾತಿಗಳ ಮೂಲ ತರ್ಕವನ್ನು ಸಂಪೂರ್ಣವಾಗಿ ರದ್ದುಗೊಳಿಸುತ್ತದೆ. 2019ರಲ್ಲಿ, ನನ್ನ ದೀರ್ಘಕಾಲದ ಸಹ-ಲೇಖಕ ರಾಜೇಶ್ ರಾಮಚಂದ್ರನ್ ಮತ್ತು ನಾನು "ಅತ್ಯಂತ ದಮನಿತ  ಗುಂಪುಗಳಿಗೆ ಅವರ ಅಸ್ಪೃಶ್ಯ ಜಾತಿ ಸ್ಥಿತಿಯ ಕಾರಣದಿಂದಾಗಿ, ಮೀಸಲಾತಿಯನ್ನು ಸಕಾರಾತ್ಮಕ ತಾರತಮ್ಯದ ನೀತಿಯಾಗಿ ಪರಿಕಲ್ಪಿಸಲಾಗಿದೆ; ಐತಿಹಾಸಿಕ ತಾರತಮ್ಯ ಮತ್ತು ಆಳವಾದ ಕಳಂಕದಿಂದಾಗಿ ವ್ಯಕ್ತಿಗಳು ಎದುರಿಸುತ್ತಿರುವ ಸಮಕಾಲೀನ ಕೊರತೆಗಳಿಗೆ ಪರಿಹಾರ ಕ್ರಮವಾಗಿ ಇದನ್ನು ಪರಿಗಣಿಸಲಾಗಿದೆ" ಎಂದು ಎಕನಾಮಿಕ್ & ಪೊಲಿಟಿಕಲ್ ವೀಕ್ಲಿಯ ಲೇಖನವೊಂದರಲ್ಲಿ ವಿವರಿಸಿದ್ದೇವೆ.

ಇದನ್ನು ಓದಿದ್ದೀರಾ? EWS | ಶೇ.10ರ ಮೀಸಲಾತಿಯ ಒಳನೋಟದ ಚರ್ಚೆಯಾಗಲಿ, ಜನರಲ್ ಮೆರಿಟ್ ವ್ಯಾಪ್ತಿಯ ಜಾತಿಗಳನ್ನು ಬಹಿರಂಗಪಡಿಸಲಿ

10% ಕೋಟಾದ ಆಧಾರವಾದ  ಬಡತನವು ಒಂದು ಸಾಂದರ್ಭಿಕ ಅಂಶವಾಗಿದೆ- ಅಂದರೆ ವ್ಯಕ್ತಿಗಳು ಬಡತನಕ್ಕೆ ಗುರಿಯಾಗಬಹುದು ಅಥವಾ ಹೊರಬರಬಹುದು. ಇದು ಭಾರತಕ್ಕೆ ಜಾತಿ-ಆಧಾರಿತ ಪರಿಹಾರ ನೀತಿ ಏಕೆ ಬೇಕು ಎಂಬುದರ ಕುರಿತ ಬಿ.ಆರ್. ಅಂಬೇಡ್ಕರರ ಯೋಚನೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ: ಔಪಚಾರಿಕ ಸಮಾನತೆಯ ವ್ಯವಸ್ಥೆಯೊಂದನ್ನು (ಒಬ್ಬ ವ್ಯಕ್ತಿ, ಒಂದು ಮತ) ಆಳವಾದ ಅಸಮಾನತೆಯ (ಜಾತಿ ವ್ಯವಸ್ಥೆಯಿಂದ ಪ್ರತಿನಿಧಿಸಲ್ಪಟ್ಟ) ಸಾಮಾಜಿಕ ರಚನೆಯ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದ್ದ ಕಾರಣ ಇದು ಅಗತ್ಯವಾಗಿತ್ತು. ಜಾತಿ ವ್ಯವಸ್ಥೆಯ ಪ್ರಮುಖ ಲಕ್ಷಣವೆಂದರೆ ಅತ್ಯಂತ ಕೆಳಸ್ತರದವರೆಂದು  ಪರಿಗಣಿಸಲ್ಪಟ್ಟವರು ತಮ್ಮ ಹುಟ್ಟಿನ ಕಾರಣದಿಂದ ತೀವ್ರ ಕಳಂಕಿತರಾಗಿ ಗುರುತಿಸಲ್ಪಟ್ಟಿದ್ದ್ದರು. ಅವರಿಗೆ, ಅಸ್ಪೃಶ್ಯತೆಯು ಹೊರಬರುವ ಆಯ್ಕೆಯಿರುವ ಸಾಂದರ್ಭಿಕ ಅಂಶ /ಸ್ಥಿತಿಯಾಗಿರಲಿಲ್ಲ. ಇದು ‘ಅವಕಾಶದ ಅಸಮಾನತೆ’ಯ ಒಂದು ಸ್ಪಷ್ಟ ನಿದರ್ಶನವಾಗಿತ್ತು, ಮತ್ತು ಮೀಸಲಾತಿಯು ಸಮಾನ ಅವಕಾಶ ಕಲ್ಪಿಸುವ ಸಾಧನವಾಗಿ ಪರಿಗಣಿಸಲ್ಪಟ್ಟಿತ್ತು.

ಪ್ರಶ್ನೆ: ಮಂಡಲ್ ಆಯೋಗದ ಶಿಫಾರಸ್ಸುಗಳ ವಿರುದ್ಧದ ಪ್ರತಿಭಟನೆಗಳು ಜಾತಿ ಆಧಾರಿತ ಮೀಸಲಾತಿಯನ್ನು 'ಮೆರಿಟ್ ಗೆ ತೊಂದರೆಯಾಗುತ್ತದೆ' ಎನ್ನುತ್ತಿದ್ದವು. ಆದರೆ ಆರ್ಥಿಕ ಮಾನದಂಡಗಳನ್ನು ಆಧರಿಸಿದ EWS ಕೋಟಾವು ರಾಜಕೀಯ ಪಕ್ಷಗಳಿಂದ  ಬೆಂಬಲ ಪಡೆಯುತ್ತಿರುವುದು ಏಕೆ ಎಂದು ನಿಮಗನ್ನಿಸುತ್ತದೆ?

ಉತ್ತರ: ಪ್ರತಿಭಟನೆ ಇಲ್ಲದಿರುವುದೇ ಈ ಕೋಟಾದ ನಿಜವಾದ ಉದ್ದೇಶವನ್ನು ಬಹಿರಂಗಪಡಿಸುತ್ತಿದೆ. ಮಂಡಲ್ ಆಯೋಗದ ಶಿಫಾರಸುಗಳನ್ನು ಹಿಂಸಾತ್ಮಕವಾಗಿ ವಿರೋಧಿಸಲಾಯಿತು. ಏಕೆಂದರೆ ಅವು ಇಲ್ಲಿಯವರೆಗೆ ಉತ್ತಮ ಪ್ರಾತಿನಿಧ್ಯ ಕಾಣದ  ಗುಂಪುಗಳಿಗೆ, ಸವಲತ್ತುಳ್ಳ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಿಗೆ ಪ್ರವೇಶ ನೀಡಿದವು. ಅತ್ಯಂತ ಹಿಂದುಳಿದ ಜಾತಿ ಮತ್ತು ಬುಡಕಟ್ಟು ಗುಂಪುಗಳ ಕಡಿಮೆ ಪ್ರಾತಿನಿಧ್ಯ ಅಥವಾ ಹಲವು  ಸಂದರ್ಭಗಳಲ್ಲಿ ಶೂನ್ಯ ಪ್ರಾತಿನಿಧ್ಯವು, ಆಕಸ್ಮಿಕವಲ್ಲ ಮತ್ತು 'ಮೆರಿಟ್ʼ  ಕೆಲವು ಅಂತರ್ಗತ ಕೊರತೆಯಿಂದಾಗಿಯಂತೂ ಅಲ್ಲ ಎಂದು ತೋರಿಸುವ ಸಾಕಷ್ಟು ಸಂಶೋಧನೆಗಳಿವೆ. ‘ಮೆರಿಟ್’ ಎಂಬುದು ಎತ್ತರ ಅಥವಾ ತೂಕದಂತಹ ವಸ್ತುನಿಷ್ಠ ಅಳತೆಯಲ್ಲ ಎಂಬುದನ್ನು ನಾವು ಗಮನಿಸಬೇಕು. 'ಮೆರಿಟ್' ಏನನ್ನು ಒಳಗೊಂಡಿದೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಇದು ಬಗೆಹರಿಯುತ್ತದೆ.

ಸವಲತ್ತು ಪಡೆದ ಕುಟುಂಬಗಳಲ್ಲಿ ಜನಿಸಿದ ವ್ಯಕ್ತಿಗಳು ಅತ್ಯುತ್ತಮ ಶಿಕ್ಷಣ ಉತ್ತಮ ಆರೋಗ್ಯ ಸೌಲಭ್ಯ ಪಡೆಯುತ್ತಾರೆ. ಪ್ರಯಾಣ, ಪುಸ್ತಕಗಳಿಗೆ - ಎಲ್ಲಕ್ಕಿಂತ ಹೆಚ್ಚಾಗಿ, ನೆಟ್‌ವರ್ಕ್‌ಗಳು ಮತ್ತು ಸಾಮಾಜಿಕ ಬಂಡವಾಳಕ್ಕೆ -ತೆರೆದುಕೊಳ್ಳುತ್ತಾರೆ. ಇವುಗಳೆಲ್ಲಾ ವ್ಯಕ್ತಿಗಳನ್ನು ಹೆಚ್ಚು 'ಅರ್ಹರನ್ನಾಗಿ’ ಮಾಡುವ ಅಂಶಗಳಾಗಿವೆ. ಹುಟ್ಟಿನಿಂದಾಗಿ ಈ ಅವಕಾಶಗಳನ್ನು ನಿರಾಕರಿಸಲ್ಪಟ್ಟವರು ಸ್ವಾಭಾವಿಕವಾಗಿ ಕೀಳಾಗಿರುವುದಿಲ್ಲ. ಇದೇ ರೀತಿಯ ಪರಿಸ್ಥಿತಿಗಳಲ್ಲಿ, ಹಿಂದುಳಿದ ಸಮುದಾಯಗಳಲ್ಲಿ ಜನಿಸಿದ ಮಕ್ಕಳು ಕಡಿಮೆ ಅರ್ಹತೆಯುಳ್ಳವವರಾಗಿ ಬೆಳೆಯುತ್ತಾರೆ ಎಂದು ನಂಬಲು ಯಾವುದೇ ಕಾರಣವಿಲ್ಲ. ಹಾಗೆಯೇ ಸವಲತ್ತು ಹೊಂದಿರುವ ಕುಟುಂಬಗಳಲ್ಲಿ ಜನಿಸಿದವರಿಗೆ ಅವರು ಆಂತರಿಕ ಅರ್ಹತೆ ಅಥವಾ ಸಾಮರ್ಥ್ಯದಲ್ಲಿ ಕಡಿಮೆ ಇದ್ದರೂ ಸಹ, ಆನುವಂಶಿಕ  ಮೀಸಲಾತಿಗಳು ಅಥವಾ ಸ್ವಜನಪಕ್ಷಪಾತವು ಅನುಕೂಲಕಾರಿಯಾಗಬಹುದು ಎಂದು ನಾವು ಗುರುತಿಸಬೇಕು.

ಪ್ರಬಲವಾದ ಮೇಲ್ಜಾತಿಯ ಯೋಚನೆಯ ಧಾಟಿಯು, ದಮನಿತ ಮತ್ತು ಕಳಂಕಿತ ಸಮುದಾಯದ ವ್ಯಕ್ತಿಗಳನ್ನು ಅಂತರ್ಗತವಾಗಿ  ಕಡಿಮೆ ಸಾಮರ್ಥ್ಯ/ಅರ್ಹತೆಯವರೆಂಬಂತೆ ನೋಡುತ್ತದೆ. ಈ ಧಾಟಿಯು "ಮೆರಿಟ್" ಅನ್ನು ಹೊಂದುವ ಅನುಕೂಲ ಮತ್ತು ಅವಕಾಶದ ರಚನೆಗಳೆಡೆಗೆ ಸಂಪೂರ್ಣವಾಗಿ ಕುರುಡಾಗಿದೆ. ಇದು ಅವಕಾಶದ ಅಸಮಾನತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ.

ಕಡಿಮೆ ಸಾಮರ್ಥ್ಯವಿರುವ ವ್ಯಕ್ತಿಗಳ ಪ್ರವೇಶವನ್ನು ಅನುಮತಿಸಿದಲ್ಲಿ ಸಂಸ್ಥೆಗಳ ದಕ್ಷತೆಯ ಅರ್ಹತೆ/ಮೆರಿಟ್ ಕುಸಿಯುತ್ತದೆ ಎಂಬ ಆಧಾರದ ಮೇಲೆ ಹಿಂದಿನ ಮೀಸಲಾತಿಗಳನ್ನು ವಿರೋಧಿಸಲಾಯಿತು. 10% ಕೋಟಾವು ಮೇಲ್ಜಾತಿಗಳಿಗೆ ಮೀಸಲಾಗಿರುವ ಕಾರಣ, ಸಾರ್ವಜನಿಕ ಸಂವಹನದಲ್ಲಿ ಪ್ರಾಬಲ್ಯ ಹೊಂದಿರುವ ಮೇಲ್ಜಾತಿಗಳು ನಕಾರಾತ್ಮಕ ಪ್ರತಿಕ್ರಿಯೆಯು ಕಾಣಲು ಬಿಡುವುದಿಲ್ಲ. ಇಲ್ಲಿನ ‘ಬಡವರನ್ನು’ (ಹಲವರು ಅಂತರ್ಗತವಾಗಿ ಅಸಮರ್ಥರಾಗಿದ್ದರೂ) ಸನ್ನಿವೇಶಗಳ ದುರದೃಷ್ಟಕರ ಬಲಿಪಶುಗಳಾಗಿ ನೋಡಲಾಗುತ್ತದೆ, ಆದ್ದರಿಂದ ಅವರು ಸಹಾನುಭೂತಿ ಮತ್ತು ಸಹಾಯಕ್ಕೆ ಅರ್ಹರು ಎನ್ನಲಾಗುತ್ತದೆ.

ಇದನ್ನು ಓದಿದ್ದೀರಾ? EWS | ಬಡತನದ ಕಾಯಿಲೆಗೆ ಮೀಸಲಾತಿ ಸರಿಯಾದ ಔಷಧವೇ?

ಪ್ರಶ್ನೆ: ಮೀಸಲಾತಿಯು "ಪಟ್ಟಭದ್ರ ಹಿತಾಸಕ್ತಿಯಾಗಲು ಅನಿರ್ದಿಷ್ಟ ಅವಧಿಯವರೆಗೆ" ಮುಂದುವರಿಯದಂತೆ ನೋಡಿಕೊಳ್ಳುವ  ಮತ್ತು 'ಜಾತಿರಹಿತ ಮತ್ತು ವರ್ಗರಹಿತ ಸಮಾಜ'ವನ್ನು ರಚಿಸುವ ಅಗತ್ಯವನ್ನು ತೀರ್ಪು ಒತ್ತಿಹೇಳುತ್ತದೆ. ತೀರ್ಪು ಈ ಗುರಿಗಳನ್ನು ಸಾಧಿಸುತ್ತದೆಯೇ?

ಉತ್ತರ: ವಾಸ್ತವವಾಗಿ, 10% ಕೋಟಾವು, ಪರಿಹಾರಾತ್ಮಕ/ಸಕಾರಾತ್ಮಕ ತಾರತಮ್ಯದ ತತ್ವದಿಂದ ಹೊರಗುಳಿಯುವುದರಿಂದ, ಭಾರತವನ್ನು ಜಾತಿರಹಿತ ಸಮಾಜದ ದಿಕ್ಕಿನಲ್ಲಿ ನಡೆಸುವುದಿಲ್ಲ. ಇದು ಕೆಲವು ಜಾತಿ ವರ್ಗಗಳಿಂದ, ಬಡ ವ್ಯಕ್ತಿಗಳನ್ನು ಹೊರಗಿಡುವ ಮೂಲಕ ಜಾತಿಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

10% ಕೋಟಾ ಬರುವವರೆಗೆ ಇದ್ದ - ಇದು ಜಾತಿ ಆಧಾರಿತ - ಪರಿಹಾರಾತ್ಮಕ  ತಾರತಮ್ಯ ನೀತಿಯನ್ನು ಸಮರ್ಥಿಸಬಹುದು. ಇದು ಜನನದ ಕಾರಣದಿಂದ ವ್ಯಕ್ತಿಗಳನ್ನು ಬಾಧಿಸುವ ಆಳವಾದ ಮತ್ತು ಮಹತ್ವದ ಸಾಮಾಜಿಕ ಅಸಾಮರ್ಥ್ಯಗಳನ್ನು ತೋರಿಸುತ್ತದೆ. ನಾವು ಹುಟ್ಟಿದ ಜಾತಿ/ಕುಟುಂಬವು ನಮ್ಮ ಹುಟ್ಟಿನ ಸಂದರ್ಭಗಳನ್ನು ವ್ಯಾಖ್ಯಾನಿಸುತ್ತದೆ. ಅದರ ಮೇಲೆ ನಮಗೆ ಯಾವುದೇ ನಿಯಂತ್ರಣವಿಲ್ಲ ಮತ್ತು ಆದ್ಯತೆಯ ನೀತಿಗಳ ಮೂಲಕ ಆ ಅನನುಕೂಲತೆಯನ್ನು ಸರಿದೂಗಿಸುತ್ತದೆ. ಮೀಸಲಾತಿ ವ್ಯವಸ್ಥೆಯು ಸಣ್ಣ ಪ್ರಮಾಣದ ಉದ್ಯೋಗಗಳಿಗೆ (ಔಪಚಾರಿಕ, ಶಾಶ್ವತ ಸಾರ್ವಜನಿಕ ವಲಯದ ಉದ್ಯೋಗಗಳು) ಮತ್ತು ಸಾರ್ವಜನಿಕ ಕಾಲೇಜುಗಳು/ ವಿಶ್ವವಿದ್ಯಾಲಯಗಳಿಗೆ ಅನ್ವಯಿಸುತ್ತದೆ ಎಂಬುದನ್ನು ನಾವು ಗಮನಿಸಬೇಕು. ಹೀಗಾಗಿ, ಅದು ಒದಗಿಸುವ ಸಹಾಯವು ಚಿಕ್ಕದಾಗಿದೆ.  ಆದರೆ ಇದು ಸಣ್ಣ, ಗೋಚರಿಸುವ ಪ್ರಮಾಣದ ದಲಿತ ಮತ್ತು ಆದಿವಾಸಿ ಮಧ್ಯಮ ವರ್ಗವನ್ನು ಸೃಷ್ಟಿಸಲು ಯಶಸ್ವಿಯಾಗಿದೆ. ಅವರ ಸಾಮೂಹಿಕ ಧ್ವನಿ ಜಾತಿ ಆಧಾರಿತ ತಾರತಮ್ಯದ ಸುತ್ತಲಿನ ಸಮಸ್ಯೆಗಳ ಗಂಭೀರತೆಯ ಬಗ್ಗೆ ಸೂಕ್ತ ಎಚ್ಚರಿಕೆ ನೀಡುವ  ಕಾರ್ಯನಿರ್ವಹಿಸುತ್ತಿವೆ ಮತ್ತು ಸಮಸ್ಯೆಗಳನ್ನು ಸಾರ್ವಜನಿಕ ದೃಷ್ಟಿಯಲ್ಲಿ ಇಡುತ್ತವೆ. ಸಮಸ್ಯೆಯ ಗುರುತಿಸುವಿಕೆಯು, ಅದಕ್ಕೆ ಪರಿಹಾರ ಹುಡುಕುವ ನಡೆಯ ಮೊದಲ ಹೆಜ್ಜೆಯಾಗಿರುತ್ತದೆ ಮತ್ತು ಮೀಸಲಾತಿಯು ಅಂತಹ ಒಂದು ಜನರ ಗುಂಪನ್ನು ಸೃಷ್ಟಿಸಿದೆ.

ಜಾತಿರಹಿತ ಸಮಾಜದೆಡೆಗೆ ಸಾಗಲು, ತಾರತಮ್ಯ ಮತ್ತು ದೋಷಪೂರಿತ ವರ್ಣ ವ್ಯವಸ್ಥೆಯ ಅಸಂಖ್ಯಾತ ರೂಪರೇಖೆಗಳ ಸ್ಪಷ್ಟವಾದ ಮತ್ತು ನಿರ್ಲಿಪ್ತ ವಿಶ್ಲೇಷಣೆಯ ಅಗತ್ಯವಿದೆ: ಇವುಗಳು ಹೇಗೆ ವ್ಯಕ್ತವಾಗುತ್ತವೆ? ಯಾವ ಕ್ಷೇತ್ರಗಳಲ್ಲಿ? ಬಹುರೂಪದ ಈ ಜೀವಂತ ಸಮಸ್ಯೆಯ ಮೇಲೆ ದಾಳಿ ಮಾಡುವ ಅತ್ಯುತ್ತಮ (ಮೀಸಲಾತಿಗಳನ್ನು  ಕೂಡ ಒಂದು ಸಣ್ಣ ಭಾಗವಾಗಿ ಹೊಂದಿರುವ) ನೀತಿ ಮಿಶ್ರಣ ಯಾವುದು ?

ಮೀಸಲಾತಿಯು ಅನನುಕೂಲತೆ, ತಾರತಮ್ಯ ಮತ್ತು ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾದ ಮಂತ್ರದಂಡವಲ್ಲ ಎಂದು ನಮ್ಮನ್ನು ನಾವು ನೆನಪಿಸಿಕೊಳ್ಳಲು ಇದು ಉತ್ತಮ ಅಂಶವಾಗಿದೆ. ಹೆಚ್ಚೆಂದರೆ, ಅವು ಬಹುಮುಖಿ ಪರಿಹಾರದ ಒಂದು ಭಾಗವಾಗಿರಬಹುದು.

ಪ್ರಶ್ನೆ: ನಿಮ್ಮ ಅಭಿಪ್ರಾಯದಲ್ಲಿ, ದಲಿತ ಕ್ರೈಸ್ತರು ಮತ್ತು ಮುಸ್ಲಿಮರನ್ನು ಎಸ್‌ಸಿ ವರ್ಗಕ್ಕೆ ಸೇರಿಸುವ ಕುರಿತು ನಿರ್ಧರಿಸಲು ರಚಿಸಲಾದ ಸರ್ಕಾರದ ಸಮಿತಿಯ ಚರ್ಚೆಯ ಮೇಲೆ ತೀರ್ಪು ಪರಿಣಾಮ ಬೀರುತ್ತದೆಯೇ?

ಉತ್ತರ: ಈ ಮೀಸಲಾತಿಗಳನ್ನು ವಿಸ್ತರಿಸುವುದರ ವಿರುದ್ಧ ಕೇಂದ್ರ ಸರ್ಕಾರ ವಾದ ಮಂಡಿಸಿತ್ತು. ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತರು ಕಳಂಕ ಅಥವಾ ತಾರತಮ್ಯವನ್ನು ಎದುರಿಸುವುದಿಲ್ಲ, ಏಕೆಂದರೆ ಔಪಚಾರಿಕವಾಗಿ, ಈ ಧರ್ಮಗಳು ಜಾತಿ ವ್ಯವಸ್ಥೆಯನ್ನು ಹೊಂದಿಲ್ಲ ಮತ್ತು ಅಸ್ಪೃಶ್ಯತೆಯನ್ನು ಆಚರಿಸುವುದಿಲ್ಲ ಎನ್ನುವುದು ಸರ್ಕಾರದ ವಾದ. ಪ್ರಪಂಚದ ಬೇರೆಡೆಗಳಲ್ಲಿ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಜಾತಿ ವ್ಯವಸ್ಥೆಯ ಸುತ್ತಲೂ ಸಂಘಟಿತವಾಗಿಲ್ಲ ಎಂಬುದು ನಿಜವಾದರೂ, ದಕ್ಷಿಣ ಏಷ್ಯಾದಲ್ಲಿ (ಭಾರತದಲ್ಲಿ ಮಾತ್ರವಲ್ಲ), ಈ ಧರ್ಮಗಳು ಜಾತಿ-ರೀತಿಯ ವಿಭಜನೆಗಳನ್ನು ಹೊಂದಿವೆ. ಇವುಗಳನ್ನು ಹಲವಾರು ರೀತಿಗಳಲ್ಲಿ ಗುರುತಿಸಲಾಗಿದೆ. ಸಂಕ್ಷಿಪ್ತ ಸಾರಾಂಶವನ್ನು ಇಲ್ಲಿ ಮುಂದಿಡುತ್ತೇನೆ. ಅನನುಕೂಲತೆ ಮತ್ತು ತಾರತಮ್ಯವನ್ನು ನಿರ್ಣಯಿಸುವ ಏಕೈಕ ಮಾರ್ಗವೆಂದರೆ ಮಾಹಿತಿ ಮತ್ತು ಪುರಾವೆಗಳ ವ್ಯವಸ್ಥಿತ ಅಧ್ಯಯನ. ಸಾಮಾಜಿಕ ಅಸಾಮರ್ಥ್ಯದ ಅಂಶವನ್ನು ಪರಿಶೀಲಿಸದೆ ಎಲ್ಲಾ ಮತಾಂತರಿಗಳಿಗೆ ನಿರಂಕುಶವಾಗಿ ಮೀಸಲಾತಿಯ ಸವಲತ್ತುಗಳನ್ನು ನೀಡಿದರೆ, ಅದು ಘೋರ ಅನ್ಯಾಯವನ್ನು ಉಂಟುಮಾಡುತ್ತದೆ ಮತ್ತು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ಇದರಿಂದ SC ಗುಂಪುಗಳ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ  ಕೇಂದ್ರವು ತಿಳಿಸಿದೆ ಎಂದು ವರದಿಯಾಗಿದೆ. ಇದೇ ತರ್ಕ ಅನುಸರಿಸಿದರೆ, ಮಾಹಿತಿಯ ವ್ಯವಸ್ಥಿತ ಮೌಲ್ಯಮಾಪನವಿಲ್ಲದೆ ಈ ಮೀಸಲಾತಿಗಳ ನಿರಾಕರಣೆಯು ಕೂಡ ಸಮಾನವಾಗಿ ನಿರಂಕುಶವಾಗಿರುತ್ತದೆ ಎನ್ನಬಹುದು.

ಇದನ್ನು ಓದಿದ್ದೀರಾ? ಯಾವ ತೀರ್ಪುಗಳೂ 10% EWS ಕೋಟಾದ ಮೂಲಭೂತ ಪ್ರಶ್ನೆಯನ್ನು ಕೇಳುತ್ತಿಲ್ಲ: ಯೋಗೇಂದ್ರ ಯಾದವ್

ದಲಿತ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಮೀಸಲಾತಿಯನ್ನು ವಿಸ್ತರಿಸಬೇಕೇ ಎಂಬ ಬಗ್ಗೆ ಮೀಸಲಾತಿ ಪರ ಗುಂಪುಗಳಲ್ಲಿಯೂ ಚರ್ಚೆ ನಡೆಯುತ್ತಿದೆ. ಅಸ್ಪೃಶ್ಯತೆಯ ಅಳಿಸಲಾಗದ ಕಳಂಕವನ್ನು ಅನುಭವಿಸಿದ ಅತ್ಯಂತ ಅರ್ಹರಿಗಾಗಿ ಮೀಸಲಾತಿಯ ಸಾಧನವನ್ನು ಉಳಿಸಿಕೊಳ್ಳುವುದು ಅಂಬೇಡ್ಕರ್ ಅವರ ದೃಷ್ಟಿಯಾಗಿತ್ತು. ಕಾಲಾನಂತರದಲ್ಲಿ, ಉಪಕರಣವನ್ನು ಬಹು ಗುಂಪುಗಳಿಗೆ ವಿಸ್ತರಿಸಿದ ಕಾರಣ ಈ ದೃಷ್ಟಿ ದುರ್ಬಲಗೊಂಡಿದೆ.

ನಾವು, ಸಾಧ್ಯವಾದಷ್ಟು ಪುರಾವೆಗಳನ್ನು ಒಟ್ಟುಗೂಡಿಸಲು ಮತ್ತು ವಿವಿಧ ಗುಂಪುಗಳ ಸಾಮಾಜಿಕ-ಆರ್ಥಿಕ ಅನನುಕೂಲತೆಯ ಸಮಕಾಲೀನ ಸ್ಥಿತಿಯನ್ನು ನಿರ್ಣಯಿಸಲು ಇದು ಉತ್ತಮ ಸಮಯವಾಗಿದೆ. 2021ರಲ್ಲಿ ಜನಗಣತಿ ನಡೆದಿದ್ದರೆ  ಹೆಚ್ಚು ಅಗತ್ಯವಿರುವ ಮಾಹಿತಿ  ಒದಗುತ್ತಿತ್ತು. ರಾಷ್ಟ್ರೀಯ ಮಾದರಿ ಸಮೀಕ್ಷೆಯ, ಬಳಕೆಯ ವೆಚ್ಚ ಸಮೀಕ್ಷೆಯ ದತ್ತಾಂಶದ ಬಿಡುಗಡೆಯು (ಮತ್ತು ಐದು-ವಾರ್ಷಿಕ ಸುತ್ತುಗಳ ಪುನರಾರಂಭ) ಬಡತನ ಕಡಿತದ ಪ್ರಗತಿಯನ್ನು ನಿರ್ಣಯಿಸಲು ನಮಗೆ ಅನುವು ಮಾಡಿಕೊಡುತ್ತಿತ್ತೇನೋ. ಗಟ್ಟಿಯಾದ ಪುರಾವೆಗಳ ಅನುಪಸ್ಥಿತಿಯಲ್ಲಿ, ನಾವು ಊಹಾಪೋಹ, ಪೂರ್ವಕಲ್ಪಿತ ಕಲ್ಪನೆಗಳು, ರೂಢಿಯಾದ ಮಾದರಿಗಳೊಂದಿಗೆ (Stereotype) ಹಿಂದುಳಿಯುತ್ತೇವೆ. ಅನನುಕೂಲತೆ ಮತ್ತು ತಾರತಮ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಗಣನೀಯ ನೀತಿ ಪರಿಹಾರಗಳ ಕಡೆಗೆ ಯಾವುದೇ ಮುನ್ನಡೆಯನ್ನು ಸಾಧಿಸಲಾಗುವುದಿಲ್ಲ.

ಮೂಲ : IndiaSpend ನಲ್ಲಿ ಪ್ರಕಟವಾದ ಸಂದರ್ಶನ

ಸಂದರ್ಶನ : ಶ್ರೀಹರಿ ಪಾಲಿಯಾತ್, ಅನುವಾದ : ರಂಜಿತಾ ಜಿ ಹೆಚ್
ನಿಮಗೆ ಏನು ಅನ್ನಿಸ್ತು?
1 ವೋಟ್
eedina app