ಸುದ್ದಿ ಪ್ಲಸ್ | ಫಾದರ್ ಸ್ಟ್ಯಾನ್ ಸ್ವಾಮಿ ಯಾರು, ಅವರಿಗೆ ಮಾನವ ಹಕ್ಕುಗಳ 'ನೊಬೆಲ್' ಸಿಕ್ಕಿದ್ದು ಏಕೆ?

Stan Swamy

ಜೂನ್ 2ರ ಗುರುವಾರದಂದು ಜಿನೀವಾದಲ್ಲಿ, 2022ರ ಮಾರ್ಟಿನ್ ಎನ್ನಲ್ಸ್ ಪ್ರಶಸ್ತಿಯನ್ನು ದಿವಂಗತ ಫಾದರ್ ಸ್ಟ್ಯಾನ್ ಸ್ವಾಮಿ ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಮಾನವ ಹಕ್ಕುಗಳ ಹೋರಾಟಗಾರರಿಗೆ ನೀಡಲಾಗುವ 'ನೊಬೆಲ್ ಪ್ರಶಸ್ತಿ' ಎಂದೇ ಈ ಸಮ್ಮಾನ ಜನಪ್ರಿಯ. ಈ ಹಿನ್ನೆಲೆಯಲ್ಲಿ ಸ್ವಾಮಿ ಅವರ ಬದುಕನ್ನು ಕುರಿತ ಇಣುಕುನೋಟ ಇಲ್ಲಿದೆ

ದೇಶದ ಶೇ.40ರಷ್ಟು ಅಮೂಲ್ಯ ಖನಿಜಗಳ ತವರು ಝಾರ್ಖಂಡ್. ಇಲ್ಲಿನ ಅಷ್ಟಿಷ್ಟು ಅಭಿವೃದ್ಧಿಯೂ ಅಸಂತುಲಿತ. ಇದಕ್ಕೆ ಆದಿವಾಸಿಗಳು ತೆತ್ತಿರುವ ಬೆಲೆ ಅಪಾರ. ರಾಜ್ಯದ ಜನಸಂಖ್ಯೆಯ ಕಾಲುಭಾಗದಷ್ಟಿರುವ ಆದಿವಾಸಿಗಳ ಸ್ಥಿತಿಗತಿಗಳು ಶೋಚನೀಯ. ಆದಿವಾಸಿಗಳನ್ನು ಅರಣ್ಯಗಳಿಂದ ಒಕ್ಕಲೆಬ್ಬಿಸಿ, ಅಲ್ಲಿನ ಭೂಗರ್ಭದಲ್ಲಿ ಹುದುಗಿರುವ ಖನಿಜ ಸಂಪತ್ತನ್ನು ಕಾರ್ಪೊರೇಟುಗಳ ವಶಕ್ಕೆ ಒಪ್ಪಿಸುವುದು ಸರ್ಕಾರಗಳ ಬಹುಕಾಲದ ಕಾರ್ಯಸೂಚಿ. ಆದಿವಾಸಿಗಳ ದನಿಯಾಗಿ ಹೋರಾಡುವವರ ಬಲಿ ಹಾಕುವುದು ಈ ಕಾರ್ಯಸೂಚಿಯ ಉಪ ಕಾರ್ಯಸೂಚಿ.

ಝಾರ್ಖಂಡ್‌ನ ಆದಿವಾಸಿಗಳ ಹಕ್ಕುಗಳಿಗಾಗಿ ತಮ್ಮ ಬದುಕನ್ನು ಮುಡುಪಾಗಿಸಿ ಹೋರಾಟಗಳಲ್ಲಿ ತೊಡಗಿಕೊಂಡಿದ್ದವರು ಫಾದರ್ ಸ್ಟ್ಯಾನ್ ಸ್ವಾಮಿ. ಕ್ರೈಸ್ತ ಧರ್ಮಗುರುವಾಗಿದ್ದ ಮಾನವತಾವಾದಿ.  ಧರ್ಮ ಪ್ರಚಾರ ಮತ್ತು ಮತ ಪರಿವರ್ತನೆಯಲ್ಲಿ ತೊಡಗಿದ್ದವರಲ್ಲ.

ಕ್ಯಾನ್ಸರ್ ದಾಳಿಗೆ ಸಿಲುಕಿ ಮೂರು ಶಸ್ತ್ರಚಿಕಿತ್ಸಗಳ ನಂತರ ಬದುಕಿ ಉಳಿದಿದ್ದವರು. ಮೆಲುದನಿಯ ಮಾತಿನ ಸ್ವಾಮಿ, ಅಹಿಂಸೆ ಮತ್ತು ಶಾಂತಿಯುತ ಪ್ರತಿಭಟನೆಯಲ್ಲಿ ಅಚಲ ನಂಬಿಕೆ ಇಟ್ಟಿದ್ದವರು.

2020ರ ಅಕ್ಟೋಬರ್ ಎಂಟರಂದು 83ರ ವೃದ್ಧ ಸ್ವಾಮಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಯುಎಪಿಎ ಎಂಬ ಕರಾಳ ಕಾಯಿದೆಯಡಿ ಬಂಧಿಸಿತ್ತು. ಅದಾಗಲೇ ಪಾರ್ಕಿನ್ಸನ್ ವ್ಯಾಧಿಯಿಂದ ಕೈಗಳು ನಡುಗುತ್ತಿದ್ದವು. ಚಹಾ ಅವರ ಅಚ್ಚುಮೆಚ್ಚಿನ ಪೇಯ. ಕೈ ನಡುಕದ ಕಾರಣ ಅದನ್ನು ಕೊಳವೆಯಿಂದಲೇ ಹೀರಿ ಸೇವಿಸುತ್ತಿದ್ದ ಅಸಹಾಯಕತೆ ಅವರಿಗಿತ್ತು. ಜೈಲಿಗೆ ಸೇರಿದ ನಂತರವೂ ಅವರಿಗೆ ಹಲವು ವಾರಗಳ ಕಾಲ ಕಾಗದದ ಹೀರುಕೊಳವೆ ನಿರಾಕರಿಸಲಾಗಿತ್ತು. ಕೇವಲ ಹೀರುಕೊಳವೆಗಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಾಯಿತು.

Image
Stan Swamy 2

ಬ್ರಿಟಿಷರ ಅಡಿಯಲ್ಲಿ ದಲಿತ ಸೇನೆಯು, ಪೇಷ್ವೆಗಳ ಬಲಿಷ್ಠ ಜಾತಿಗಳ ಸೇನೆಯನ್ನು ಸೋಲಿಸಿದ ಐತಿಹಾಸಿಕ ಯುದ್ಧದ ಸಂಸ್ಮರಣೆಗಾಗಿ ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ನಲ್ಲಿ ವರ್ಷಗಳ ಹಿಂದೆ ಸಮಾವೇಶಗೊಂಡಿದ್ದ ಲಕ್ಷಾಂತರ ದಲಿತರನ್ನು ಪ್ರಚೋದಿಸಿದ ಆಪಾದನೆಯನ್ನು ಸ್ವಾಮಿ ಮತ್ತು ಇತರೆ ಹದಿನೈದು ಮಂದಿಯ ಮೇಲೆ ಹೊರಿಸಿ ಬಂಧಿಸಲಾಗಿತ್ತು. ಪ್ರಧಾನಿಯವರ ಹತ್ಯೆಗೆ ಸಂಚು ನಡೆಸಿದರೆಂಬ ಆಪಾದನೆಯನ್ನೂ ಇವರ ಮೇಲೆ ಹೇರಲಾಗಿತ್ತು.

ಸ್ವಾಮಿಯವರು ಮೂಲತಃ ತಮಿಳುನಾಡಿನ ತಿರುಚ್ಚಿಯವರು. ಕೆಲ ಕಾಲ ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕರಾಗಿದ್ದರು. ಝಾರ್ಖಂಡ್‌ನ ರಾಂಚಿಯಲ್ಲಿ ಚರ್ಚಿನಿಂದ ಜಾಗ ಪಡೆದು, ಸಾಮಾಜಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರವೊಂದನ್ನು 15 ವರ್ಷಗಳ ಹಿಂದೆ ತೆರೆದು, ಅಲ್ಲಿಯೇ ನೆಲೆಸಿದ್ದರು.

ಝಾರ್ಖಂಡ್‌ನ ಆದಿವಾಸಿ ಸೀಮೆ ಸ್ವಾಮಿಯವರ ಕಾರ್ಯಕ್ಷೇತ್ರವಾಗಿತ್ತು. ಗ್ರಾಮಸಭೆಗಳಿಗೆ ಅಧಿಕಾರ ನೀಡುವ 1996ರ ಪಂಚಾಯತುಗಳ (ಷೆಡ್ಯೂಲ್ಡ್ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆಯನ್ನು ವಿಶ್ಲೇಷಿಸಿದರು. ಈ ಕಾಯಿದೆಯ ಜಾರಿಗಾಗಿ ಆಂದೋಲನ ನಡೆಸಿ, ಗ್ರಾಮಸಭೆಗಳ ರಚನೆಯಲ್ಲಿ ತೊಡಗಿದರು. ಆದಿವಾಸಿಗಳಿಗೆ ತಮ್ಮ ಹಕ್ಕುಗಳ ಅರಿವು ಮೂಡಿಸಿದರು. ಗಣಿಗಾರಿಕೆ, ಭಾರೀ ಜಲಾಶಯಗಳು, ಕೈಗಾರಿಕೆಗಳು ಹಾಗೂ ಟೌನ್‌ಶಿಪ್‌ಗಳ ನಿರ್ಮಾಣಕ್ಕಾಗಿ ಆದಿವಾಸಿಗಳನ್ನು ಅವರ ನೆಲದಿಂದ ಒಕ್ಕಲೆಬ್ಬಿಸಿ ಸ್ಥಳಾಂತರಗೊಳಿಸಿದ ಕುರಿತ ಅಂಕಿ-ಅಂಶಗಳನ್ನು ಸಂಗ್ರಹಿಸಿದ್ದು ಅವರ ದೊಡ್ಡ ಕೊಡುಗೆಗಳಲ್ಲೊಂದು. ಸ್ವಾಮಿ ಅವರ ಭಿನ್ನಮತ ಕೇವಲ ಸರ್ಕಾರಕ್ಕೆ ಸೀಮಿತವಾಗಿರಲಿಲ್ಲ. ಚರ್ಚ್ ವಿರುದ್ಧವೂ ದನಿ ಎತ್ತಿದ್ದರು. ಚರ್ಚ್ ಕೂಡ ಬಲ್ಲಿದರು ಮತ್ತು ಗಣ್ಯರ ಜೊತೆ ನಿಲ್ಲುತ್ತದೆಂದು ತಕರಾರು ತೆಗೆದಿದ್ದರು. ಕ್ರೈಸ್ತ ಸಂಸ್ಧೆಗಳು ನಡೆಸುವ ದೊಡ್ಡ-ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆಯ ಮಾಧ್ಯಮ ಇಂಗ್ಲಿಷೇ ಆಗಿರುತ್ತದೆ. ಬಡವರಿಗೆ ಈ ಭಾಷೆ ಎಟುಕಿಲ್ಲ. ಹೀಗಾಗಿ ಈ ಶಾಲೆಗಳನ್ನು ಹಿಂದಿ ಮಾಧ್ಯಮಕ್ಕೆ ಪರಿವರ್ತಿಸಿ ಸಾಮಾನ್ಯ ಜನರಿಗೆ ಪ್ರಯೋಜನಕಾರಿ ಆಗಬೇಕೆಂದು ವಾದಿಸಿದ್ದರು.

ಈ ಲೇಖನ ಓದಿದ್ದೀರಾ?: ನೆನಪು | ರೈತ ಹೋರಾಟಕ್ಕೆ ಸಾಮರಸ್ಯದ ಬಲ ತುಂಬಿದ್ದ ಗುಲಾಮ್ ಮಹಮ್ಮದ್ ಜೌಲಾ

ಆದಿವಾಸಿಗಳ ಸಂರಕ್ಷಣೆ ಮತ್ತು ಅಭ್ಯುದಯಕ್ಕಾಗಿ ಆದಿವಾಸಿಗಳೇ ಇರುವ ಆದಿವಾಸಿ ಸಲಹಾ ಪರಿಷತ್ತನ್ನು ನೇಮಕ ಮಾಡಬೇಕೆಂದು ಸಂವಿಧಾನದ ಐದನೆಯ ಷೆಡ್ಯೂಲಿನಲ್ಲಿ ವಿಧಿಸಲಾಗಿದೆ. ಈ ಕ್ರಮವನ್ನು ಸರ್ಕಾರ ಜಾರಿ ಮಾಡಿಲ್ಲವೆಂದು ಅವರು ಪ್ರತಿಭಟಿಸಿದ್ದರು.

ಅಂದಾಜು ಮೂರು ಸಾವಿರದಷ್ಟು ಆದಿವಾಸಿ ಯುವಜನರು ಮತ್ತು ಮೂಲನಿವಾಸಿಗಳನ್ನು ವಿವೇಚನೆಯಿಲ್ಲದೆ ಬಂಧಿಸಿ, ಅವರಿಗೆ ಮಾವೋವಾದಿಗಳೆಂಬ ಹಣೆಪಟ್ಟಿ ಹಚ್ಚಿ ಜೈಲಿಗೆ ತಳ್ಳಿರುವುದನ್ನು ಸ್ವಾಮಿಯವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಈ ವಿಚಾರಣಾಧೀನ ಯುವಕರನ್ನು ಸ್ವಂತ ಮುಚ್ಚಳಿಕೆಯ ಮೇಲೆ ಬಿಡುಗಡೆ ಮಾಡಿ ತ್ವರಿತ ವಿಚಾರಣೆ ನಡೆಸಬೇಕೆಂದೂ ಆಗ್ರಹಿಸಿದ್ದರು.

ಬ್ರೆಜಿಲ್ ದೇಶದ ಬಡಜನರ ಕಷ್ಟ, ಕಣ್ಣೀರಿನೊಂದಿಗೆ ತಮ್ಮನ್ನು ಗುರುತಿಸಿಕೊಂಡು, ಜನತಂತ್ರದ ಪರವಾಗಿ ಸರ್ವಾಧಿಕಾರಿ ಆಡಳಿತದ ವಿರುದ್ಧ ಎದೆ ಸೆಟೆಸಿದ್ದವರು ಕ್ರೈಸ್ತ ಧರ್ಮಗುರು ಹೆಲ್ಡರ್ ಕಾಮರ. ಸ್ವಾಮಿ ಅವರ ಬದುಕನ್ನು ಕಾಮರ ಅವರ ಆಚಾರ-ವಿಚಾರಗಳು ತೀವ್ರವಾಗಿ ಪ್ರಭಾವಿಸಿದ್ದವು.

ಚರ್ಚ್ ಎಂಬುದು ನತದೃಷ್ಟ ಜನಸಮುದಾಯಗಳ ಜೊತೆಗೆ ನಿಲ್ಲಬೇಕು ಎಂದ ಕಾಮರ, ತಮ್ಮ ಜೀವಿತದುದ್ದಕ್ಕೂ ಮಾನವ ಹಕ್ಕುಗಳಿಗಾಗಿ ದನಿ ಎತ್ತಿದ್ದರು ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ್ದವರು. ಸಾಮಾಜಿಕ ಪರಿವರ್ತನೆ ಅವರ ಧ್ಯೇಯವಾಗಿತ್ತು. ಧರ್ಮಗುರುಗಳಿಗೆ ಲಭಿಸುವ ಆಡಂಬರದ ಬದುಕನ್ನು ತಿರಸ್ಕರಿಸಿದ್ದರು. ಕಾರ್ಮಿಕರ ಕ್ಯಾಂಟೀನುಗಳಲ್ಲಿ ಊಟ ಮಾಡುತ್ತಿದ್ದರು. ಧರ್ಮಗುರುಗಳ ಪಟ್ಟು ಪೀತಾಂಬರಗಳ ನಿಲುವಂಗಿಗಳನ್ನು ಚಿನ್ನದ ಶಿಲುಬೆಗಳು ಅಲಂಕರಿಸಿರುತ್ತವೆ. ಆದರೆ, ಸವೆದುಹೋದ ಕಂದು ಬಣ್ಣದ ನೂಲಿನ ನಿಲುವಂಗಿಯನ್ನು ಧರಿಸುತ್ತಿದ್ದ ಕಾಮರ, ಚಿನ್ನದ ಶಿಲುಬೆಯ ಬದಲಿಗೆ ಮರದ ಶಿಲುಬೆಯನ್ನು ಅದಕ್ಕೆ ಅಳವಡಿಸಿಕೊಂಡಿದ್ದರು. ಬಡವರ ಬಂಧು, ದನಿ ಸತ್ತವರ ದನಿ ಎಂದೇ ಯುರೋಪಿನಲ್ಲಿ ಅವರನ್ನು ಕರೆಯಲಾಗುತ್ತಿತ್ತು. ತಮ್ಮ ದೇಶದ ಜಮೀನು ಮತ್ತು ಇತರೆ ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂದು ಅವರು ಆಗ್ರಹಿಸಿದ್ದರು. "ಹಸಿದ ಜನರಿಗೆ ಅನ್ನ ನೀಡುವಾಗ ನನ್ನನ್ನು ಸಂತನೆಂದು ಕರೆಯುತ್ತಾರೆ... ಇಷ್ಟೊಂದು ಮಂದಿ ಯಾಕೆ ಬಡವರಾಗಿದ್ದಾರೆ ಎಂದು ಕೇಳಿದಾಗ ನನಗೆ ಕಮ್ಯುನಿಸ್ಟ್ ಎಂಬ ಹಣೆಪಟ್ಟಿ ಹಚ್ಚುತ್ತಾರೆ..." ಎಂಬುದು ಕಾಮರ ಅವರ ಪ್ರಸಿದ್ಧ ಮಾತು.

Image
Stan Swamy 3

ಇತ್ತ, ತಮ್ಮ ಬಂಧನಕ್ಕೆ ಮುನ್ನ ಸ್ವಾಮಿ ನೀಡಿದ್ದ ಈ ಹೇಳಿಕೆಯ ನೋಡಿರಿ: "ಘನತೆ-ಆತ್ಮಗೌರವದ ಬದುಕು ಬೇಕೆಂದು ಆದಿವಾಸಿ ಜನರು ನಡೆಸಿರುವ ಆಂದೋಲನದೊಂದಿಗೆ ನಾನು ಕಳೆದ ಮೂವತ್ತು ವರ್ಷಗಳಿಂದ ಗುರುತಿಸಿಕೊಂಡಿದ್ದೇನೆ. ಬರೆಹಗಾರನಾಗಿ ಅವರು ಎದುರಿಸಿರುವ ನಾನಾ ಸಮಸ್ಯೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ. ಈ ಕ್ರಿಯೆಯಲ್ಲಿ ತೊಡಗಿಕೊಂಡೇ ಸರ್ಕಾರದ ಹಲವು ನೀತಿಗಳು, ಕಾಯಿದೆ, ಕಾನೂನುಗಳ ಕುರಿತು ಸಂವಿಧಾನದ ಬೆಳಕಿನಲ್ಲಿ ಭಿನ್ನಾಭಿಪ್ರಾಯ ಪ್ರಕಟಿಸಿದ್ದೇನೆ. ಆಳುವ ವರ್ಗ ಮತ್ತು ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳ ಕಾನೂನು ಬದ್ಧತೆ, ಸಿಂಧುತ್ವ ಹಾಗೂ ನ್ಯಾಯಪರತೆಯನ್ನು ಪ್ರಶ್ನಿಸಿದ್ದೇನೆ. ಆದಿವಾಸಿಗಳ ಜಮೀನುಗಳಲ್ಲಿ ಖನಿಜಗಳ ಗಣಿಗಾರಿಕೆಯನ್ನು ನಿಯಂತ್ರಿಸಲು ಆದಿವಾಸಿಗಳಿಗೆ ಕೆಲ ಹಕ್ಕುಗಳನ್ನು ನೀಡಿ, ಆ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು. ಈ ಸಂಬಂಧ ಸುಪ್ರೀಂ ಕೋರ್ಟು 1977ರಲ್ಲಿ ನೀಡಿರುವ ಸಮತಾ ತೀರ್ಪಿನ ಕುರಿತು ಸರ್ಕಾರಗಳ ಮೌನ ನಿರಾಶಾದಾಯಕ. 2006ರ ಅರಣ್ಯ ಹಕ್ಕು ಕಾಯಿದೆಯನ್ನು ಅರೆಮನಸಿನಿಂದ ಜಾರಿ ಮಾಡಲಾಗುತ್ತಿರುವುದು ಆದಿವಾಸಿಗಳು ಮತ್ತಿತರೆ ಅರಣ್ಯವಾಸಿಗಳಿಗೆ ಬಗೆಯಲಾಗುತ್ತಿರುವ ಐತಿಹಾಸಿಕ ಅನ್ಯಾಯ. ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಹಂಚಿಕೆ ಮಾಡಲು ಭೂ ಬ್ಯಾಂಕುಗಳನ್ನು ರಚಿಸಿರುವುದು ಆದಿವಾಸಿಗಳ ಸರ್ವನಾಶಕ್ಕೆ ದಾರಿ ಮಾಡಿಕೊಡಲಿದೆಯೆಂದು ದನಿ ಎತ್ತಿದ್ದೆ. ಈ ಕಾರಣಗಳಿಗಾಗಿ ನನ್ನನ್ನು ತನ್ನ ದಾರಿಯಿಂದ ನಿವಾರಿಸಿಕೊಳ್ಳಲು ಗಂಭೀರ ಕೇಸುಗಳನ್ನು ಹಾಕಿ ಬಂಧಿಸಲಾಗುತ್ತಿದೆ. ಬಡ ಆದಿವಾಸಿಗಳಿಗೆ ನ್ಯಾಯದಾನದ ಕ್ರಿಯೆಯನ್ನು ಸ್ಥಗಿತಗೊಳಿಸುವುದು ಸರ್ಕಾರದ ಉದ್ದೇಶ..."

ಈ ಲೇಖನ ಓದಿದ್ದೀರಾ?: ದಲಿತ, ಮುಸ್ಲಿಮ್‌, ಆದಿವಾಸಿಗಳ ಆಯಸ್ಸು ಪ್ರಬಲ ಜಾತಿಯವರಿಗಿಂತ ಕಡಿಮೆ: ಅಧ್ಯಯನ ವರದಿ

ತಮ್ಮ ವಿರುದ್ಧ ದನಿ ಎತ್ತಿದ ಕೊರಳುಗಳನ್ನು ಅದುಮಿ ಉಸಿರು ನಿಲ್ಲಿಸುವ ಆಳುವವರ ಅಮಾನುಷ ಮಸಲತ್ತು ಫಲ ನೀಡಿದೆ. ಕಾರಾಗೃಹದಲ್ಲಿ ಅಸಹಾಯಕರಾಗಿ ದಿನ ದೂಡಿದ ಮಾನವತಾವಾದಿ ಸ್ಟ್ಯಾನ್ ಸ್ವಾಮಿಯನ್ನು ಪ್ರಭುತ್ವ ಕಡೆಗೂ ಬಲಿ ತೆಗೆದುಕೊಂಡಿತು.

ಸ್ವಂತವಾಗಿ ಆಹಾರ ಸೇವಿಸಲು ಮತ್ತು ನೀರು ಕುಡಿಯಲು ಕೂಡ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಸ್ವಾಮಿಯವರಿಗೆ ಕನಿಷ್ಠ ಚಿಕಿತ್ಸೆಗಳನ್ನೂ ಕೊಡಿಸದೆ ಕೊಂದುಹಾಕಿತು ಸರ್ಕಾರ. ಒಂಬತ್ತು ತಿಂಗಳ ಕಾಲ ಜೈಲಿನಲ್ಲಿ ಜೀವಂತವಿದ್ದ ಸ್ವಾಮಿ, 2021ರ ಮೇ 29ರಂದು ಕಡೆಯುಸಿರೆಳೆದರು.

ಪ್ರಭುತ್ವದ ಕೈಗೆ ಹತ್ತಿಕೊಂಡಿರುವ ಈ 'ಹತ್ಯೆ'ಯ ಪಾಪದ ನೆತ್ತರನ್ನು ಯಾವ ಪವಿತ್ರ ನದಿಯ ನೀರೂ ತೊಳೆಯಲಾರದು. ದೇಶದ ನ್ಯಾಯಾಂಗದ ಸ್ವತಂತ್ರ ಕಾರ್ಯನಿರ್ವಹಣೆಯ ಕಡೆಗೂ ಈ ಸಾವು ಬೆರಳು ಮಾಡಿ ತೋರಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್