ಫಾಝಿಲ್ ಹತ್ಯೆ| ಶಿಯಾ-ಸುನ್ನಿ ಪ್ರೇಮ ಪ್ರಕರಣ ಎಂಬ ಸುಳ್ಳು ಕತೆ ಎಲ್ಲಿಂದ, ಹೇಗೆ ಹುಟ್ಟಿತು?

ದೇವನೂರ ಮಹಾದೇವರ 'ಆರ್‌ಎಸ್‍ಎಸ್ ಆಳ - ಆಗಲ' ಪುಸ್ತಕ ಬಂದಾಗಿನಿಂದ ಬಲಪಂಥೀಯ ಮಾಧ್ಯಮ ಯಂತ್ರಾಂಗವು ಒಂದೇ ಸಮನೆ ಎಲ್ಲ ಧರ್ಮಗಳಲ್ಲೂ ಜಾತಿ ಪದ್ಧತಿ ಇದೆ ಎಂದು ಸಾಬೀತುಪಡಿಸಲು ಹೆಣಗುತ್ತಿದ್ದಾರೆ. ಅದು ಇಷ್ಟು ಬೇಗ ಒಂದು ಕೊಲೆಯ ಸುತ್ತಲೂ ಲಿಂಕ್ ಆದ ರೀತಿ ಆಶ್ಚರ್ಯಕರವಾಗಿದೆ.

ಸುಳ್ಳು ಸುದ್ದಿಗಳು ಹೊಸತೇನಲ್ಲ. ಆದರೆ, ಸುಳ್ಳುಗಳು ಹೊರಬರುವ ವೇಗ, ವಿಕೃತಿ ಹಾಗೂ ಇರಬಹುದಾದ ಉದ್ದೇಶ ಗಾಬರಿ ಹುಟ್ಟಿಸುತ್ತವೆ. ಸಮಾಧಾನದ ಸಂಗತಿಯೇನೆಂದರೆ, ಅವುಗಳು ಸುಳ್ಳು ಎಂಬುದೂ ಅಷ್ಟೇ ವೇಗವಾಗಿ ಗೊತ್ತಾಗುತ್ತಿವೆ. 

ಕರಾವಳಿ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಮೂರು ದುರದೃಷ್ಟಕರ ಸಾವುಗಳು ಸಂಭವಿಸಿದವು. ಅವು ಹತ್ಯೆಗಳು. ಹತ್ಯೆಗೀಡಾದ ಯುವಕರ ವಯಸ್ಸು ಕ್ರಮವಾಗಿ 19, 32 ಮತ್ತು 23. ಅವುಗಳ ವಿವರಗಳು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಮೂರನೆಯ ಸಾವಿಗೆ ಸಂಬಂಧಿಸಿದಂತೆ ಹೊರಬಿದ್ದ ‘ಕತೆ’ ಮತ್ತು ಅಧಿಕೃತವಾಗಿ ಮಂಗಳೂರು ಪೊಲೀಸ್ ಕಮಿಷನರ್ ಹೇಳಿರುವ ಹೇಳಿಕೆಯು, ಇನ್ನೂ ಕೆಲವು ‘ಹತ್ಯೆಗಳ’ನ್ನು ನಮ್ಮ ಮುಂದಿಡುತ್ತದೆ. ಅದು ಸತ್ಯದ ಹತ್ಯೆ ಮತ್ತು ದಕ್ಷಿಣ ಕನ್ನಡದಲ್ಲಿ ತೀವ್ರವಾಗಿ ಬಿಚ್ಚಿಕೊಳ್ಳುತ್ತಿರುವ ಮಾನವೀಯತೆಯ ಕೊಲೆ ಸಹಾ. 

ಜುಲೈ 28ರ ರಾತ್ರಿ 8 ಗಂಟೆಗೆ ಫಾಝಿಲ್ ಹತ್ಯೆ ಆಯಿತು. ಫಾಝಿಲ್ ಹತ್ಯೆಯಾದ ಕೆಲ ಹೊತ್ತಿನಲ್ಲೇ ಹಲವು ವಾಟ್ಸಾಪ್ ಗುಂಪುಗಳಲ್ಲಿ ಒಂದು ಕತೆ ತೆರೆದುಕೊಂಡಿತು. ಆತ ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ ಅಧಿಕೃತವಾಗಿ ಸಾವನ್ನು ಘೋಷಿಸುವುದಕ್ಕಿಂತ ಮುಂಚೆಯೇ ಈ ಕತೆ ಓಡಾಡಿತು. ಆ ಕತೆಯೇನೆಂದರೆ 'ಫಾಝಿಲ್ ಶಿಯಾ ಎಂಬ ಕೆಳಜಾತಿಗೆ ಸೇರಿದವನಾಗಿದ್ದು, ಆತ ಮೇಲ್ಜಾತಿಯ ಒಬ್ಬ ಸುನ್ನಿ ಹುಡುಗಿಯನ್ನು ಪ್ರೀತಿಸಿದ್ದರಿಂದ ಸುನ್ನಿಗಳು ಆತನನ್ನು ಕೊಂದಿದ್ದಾರೆ' ಎಂದು ಹಲವು ಬಲಪಂಥೀಯ ವೆಬ್‍ಸೈಟ್ ಹಾಗೂ ಫೇಸ್‍ಬುಕ್ ಪುಟಗಳು ಆ ರೀತಿ ಒಂದೇ ಸಮನೆ ಸುದ್ದಿ ಹರಡುತ್ತಿದ್ದವು ಮತ್ತು ಸುವರ್ಣ ನ್ಯೂಸ್ ಒಂದು ಹೆಜ್ಜೆ ಮುಂದೆ ಹೋಗಿ ಸುರತ್ಕಲ್‍ನ ಮಾಜಿ ಶಾಸಕ ಮೊಯ್ದಿನ್ ಬಾವಾರೇ ಹಾಗೆ ಹೇಳಿದ್ದಾರೆಂದೂ ಹೇಳಿಬಿಟ್ಟಿತು. ಈ ಸುದ್ದಿಗಳು ಎಷ್ಟು ಜೋರಾಗಿ ಎಲ್ಲೆಡೆ ಓಡಾಡಿದವೆಂದರೆ, ಡೆಕ್ಕನ್ ಹೆರಾಲ್ಡ್ ನಂತಹ ವಿಶ್ವಾಸಾರ್ಹ ಪತ್ರಿಕೆಯೂ ಈ ರೀತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿ ಮಾಡಿತು. ಆದರೆ ಇಲ್ಲಿ ಫಾಝಿಲ್ ಸುನ್ನಿ ಎಂದು ಹೇಳಲಾಯಿತು.
ವಾಸ್ತವದಲ್ಲಿ ಮಂಗಳೂರು ಭಾಗದಲ್ಲಿ ಶಿಯಾ ಮುಸ್ಲಿಮರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಮತ್ತು ಶಿಯಾ ಹಾಗೂ ಸುನ್ನಿಗಳ ನಡುವೆ ಮೇಲ್ಜಾತಿ ಅಥವಾ ಕೆಳಜಾತಿ ಎಂಬುದಿಲ್ಲ.

ದೇವನೂರ ಮಹಾದೇವರ 'ಆರ್‌ಎಸ್‍ಎಸ್ ಆಳ - ಆಗಲ' ಪುಸ್ತಕ ಬಂದಾಗಿನಿಂದ ಬಲಪಂಥೀಯ ಮಾಧ್ಯಮ ಯಂತ್ರಾಂಗವು ಒಂದೇ ಸಮನೆ ಎಲ್ಲ ಧರ್ಮಗಳಲ್ಲೂ ಜಾತಿ ಪದ್ಧತಿ ಇದೆ ಎಂದು ಸಾಬೀತುಪಡಿಸಲು ಹೆಣಗುತ್ತಿದ್ದಾರೆ. ಅದು ಇಷ್ಟು ಬೇಗ ಒಂದು ಕೊಲೆಯ ಸುತ್ತಲೂ ಲಿಂಕ್ ಆದ ರೀತಿ ಆಶ್ಚರ್ಯಕರವಾಗಿದೆ.

Image


ಆಗಸ್ಟ್ 2ರಂದು ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಧ್ಯಮಗಳಿಗೆ ತಿಳಿಸಿದ ಪ್ರಕಾರ, ಈ ಹತ್ಯಾ ಪ್ರಕರಣವನ್ನು ಅವರು ಬೇಧಿಸಿದ್ದಾರೆ ಮತ್ತು ಹತ್ಯೆಯಲ್ಲಿ ಭಾಗಿಯಾದ ಆರು ಜನರನ್ನು ಬಂಧಿಸಿದ್ದಾರೆ. ಆರೂ ಜನರಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಅವರು 21ರಿಂದ 29 ವಯಸ್ಸಿನ ಯುವಕರು ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಅವರುಗಳು ಸುಳ್ಯದಲ್ಲಿ ನಡೆದ ಪ್ರವೀಣ್ ಹತ್ಯೆಯ ನಂತರ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಕೊಲ್ಲಬೇಕೆಂದು ಆರು ಜನರ ಹೆಸರನ್ನು ಪಟ್ಟಿ ಮಾಡಿದ್ದರು; ಅಂತಿಮವಾಗಿ ಫಾಝಿಲ್‍ನನ್ನು ಕೊಲ್ಲಲು ತೀರ್ಮಾನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಫಿಯಾ ಗ್ಯಾಂಗುಗಳಿಗೂ, ಮತೀಯ ಮೂಲಭೂತವಾದಿಗಳಿಗೂ ವಿಚಿತ್ರ ಸಂಬಂಧವಿದೆ. ಮತೀಯವಲ್ಲದ ಕಾರಣಕ್ಕೆ ಕ್ರಿಮಿನಲ್ ಚಟುವಟಿಕೆ ನಡೆಸುವವರೂ, ಮತೀಯ ಕಾರಣಕ್ಕೆ ನಡೆದ ಕೊಲೆಗಳ ಹೊಣೆ ಹೊತ್ತುಕೊಳ್ಳುತ್ತಾರೆ; ಆ ಮೂಲಕ ರಾಜಕೀಯ ಆಶ್ರಯ ಸಿಗುತ್ತದೆಂಬ ವಿಶ್ವಾಸ ಅವರಿಗಿದೆ. ಈ ಕುರಿತು ಮಂಗಳೂರು ಪೊಲೀಸರು ವಿಶೇಷ ಅಧ್ಯಯನವನ್ನೂ ನಡೆಸಿದ್ದಾರೆ.
ಇರಲಿ, ಈ ಕೊಲೆ ಆರೋಪದಲ್ಲಿ ಬಂಧನದಲ್ಲಿರುವ ಈ ಆರು ಜನ ಹುಡುಗರೆಲ್ಲರಿಗೆ, ಪರಸ್ಪರ ಎಲ್ಲರ ಪರಿಚಯವೂ ಇರಲಿಲ್ಲ. ಇವರಲ್ಲಿ ಒಬ್ಬ ಈ ಹಿಂದೆ ಬಜರಂಗದಳದ ಗೋರಕ್ಷಾ ಪಡೆಯಲ್ಲಿದ್ದನೆಂದು ಹೇಳಲಾಗಿದೆ. ಈ ಕೊಲೆ ಆರೋಪಿಗಳಿಗೂ ನಂತರದಲ್ಲಿ ವಾಟ್ಸಾಪ್‍ನಲ್ಲಿ ಸುಳ್ಳು ಪ್ರೇಮ ಪ್ರಕರಣದ ಸುದ್ದಿ ಹಬ್ಬಿಸಿದವರೂ ನೇರ ಸಂಬಂಧ ಇರಲಿಕ್ಕಿಲ್ಲ. ಆದರೆ, ಇಷ್ಟು ಬೇಗ ಸ್ಥಳೀಯ ವಾಟ್ಸಾಪ್, ಫೇಸ್‍ಬುಕ್, ಸುವರ್ಣ ಚಾನೆಲ್ ಮತ್ತು ಇಂಗ್ಲಿಷಿನ ಆಪ್‍ ಇಂಡಿಯಾ ಎಲ್ಲರಿಗೂ ತಲುಪಿದ್ದು ಹೇಗೆ? ಇವರೆಲ್ಲರೂ ಇಂತಹದೇ ಸುಳ್ಳು ಸುದ್ದಿಗಳನ್ನು ಪರಸ್ಪರ ಬೇಗ ಗುರುತಿಸಿ ಅವನ್ನು ಪ್ರಚಾರ ಮಾಡುತ್ತಾರೇಕೆ? ಈ ಅಂಶಗಳು ತನಿಖೆಗೆ ಒಳಪಡಬೇಕು.

ವಾಸ್ತವದಲ್ಲಿ ಇಂತಹ ಪ್ರಕರಣಗಳಾದರೆ ‘ಕೊಂದವರುಳಿವರೇ ಕೂಡಲಸಂಗಮದೇವಾ?’ ಎಂಬ ಪ್ರಶ್ನೆ ನಮ್ಮಲ್ಲಿ ಹುಟ್ಟಬೇಕು; ಆತಂಕ ಎನಿಸಬೇಕು. ಮಸೂದ್‍ನ ವಯಸ್ಸು 21, ಪ್ರವೀಣ್ ನೆಟ್ಟಾರು ವಯಸ್ಸು 32, ಫಾಝಿಲ್‍ದು 23. ಕೊಲೆ ಆರೋಪದಲ್ಲಿ ಬಂಧಿತರಾದ ಈ ಹುಡುಗರದ್ದು 21ರಿಂದ 29. ಪ್ರವೀಣ್ ಹಾಗೂ ಮಸೂದ್ ಹತ್ಯೆ ಪ್ರಕರಣದಲ್ಲಿ ಬಂಧಿತರಾದವರೂ ಇವೇ ವಯಸ್ಸಿನವರಾಗಿರುತ್ತಾರೆ. ಅವರೆಲ್ಲರ ಕುರಿತೂ ಆತಂಕ, ಕಕ್ಕುಲಾತಿ ಇರದೇ ಕೊಲೆಯಾದ ತಕ್ಷಣ ಹಬ್ಬಿದ ಸುಳ್ಳು ಸುದ್ದಿಯನ್ನು ಏನೋ ಸಿಕ್ಕಿಬಿಟ್ಟಂತೆ ಸಂಭ್ರಮಿಸುವವರು ಎಂತಹ ಮನಸ್ಥಿತಿಯವರು? ಇನ್ನೂ ಸೋಜಿಗದ ಸಂಗತಿಯೆಂದರೆ ಆಪ್‍ಇಂಡಿಯಾ ಎಂಬ ಬಲಪಂಥೀಯ ವೆಬ್‍ಸೈಟ್‍ನವರು ‘ಎನ್‍ಡಿಟಿವಿಯವರು ಶಿಯಾ ಸುನ್ನಿ ಪ್ರೇಮ ಪ್ರಕರಣದ ಆಯಾಮವನ್ನು ನಿರ್ಲಕ್ಷಿಸಿದ್ದಾರೆ’ ಎಂದು ಒಂದು ವರದಿ ಮಾಡುವ ಧಾಷ್ಟ್ರ್ಯ ತೋರುತ್ತಾರೆ. ಇದನ್ನೇ ಸತ್ಯೋತ್ತರ ಕಾಲ ಎನ್ನುವುದು. ಸತ್ಯವು ತಾನು ಸತ್ಯ ಎಂದು ಬಾಯಿ ಬಡಿದುಕೊಂಡು ಪುರಾವೆ ತೋರಿಸಿ ಸಾಬೀತು ಮಾಡಬೇಕು.

ನಿಮಗೆ ಏನು ಅನ್ನಿಸ್ತು?
7 ವೋಟ್