ಉಕ್ರೇನಿನ ಭಾವನಾತ್ಮಕ ಹೋರಾಟದ ಭಾರವನ್ನು ಹೊತ್ತ ಪ್ರಥಮ ಮಹಿಳೆ ಓಲೆನಾ ಝೆಲೆನ್‌ಸ್ಕಿ

War lady 2

ಓಲೆನಾ ಝೆಲೆನ್‌ಸ್ಕಿ ಯುದ್ಧ ಶುರುವಾದಾಗ ಮಕ್ಕಳ ಜೊತೆ ಭೂಗತರಾದರು. ಅದಕ್ಕೂ ಮುಂಚೆ ಅವರು ಫೇಸ್ಬುಕ್ಕಿನಲ್ಲಿ ʼಇಂದು ನಾನು ಗಾಬರಿಯಾಗುವುದಿಲ್ಲ. ನಾನು ಶಾಂತವಾಗಿ, ಆತ್ಮವಿಶ್ವಾಸದಿಂದ ಇರುತ್ತೇನೆ, ಏಕೆಂದರೆ ನನ್ನ ಮಕ್ಕಳು ನನ್ನನ್ನು ನೋಡುತ್ತಿದ್ದಾರೆʼ ಎಂದು ಬರೆದುಕೊಂಡಿದ್ದರು. ಅವರು ಅವರಿಗಾಗಿಯಷ್ಟೇ ಅಲ್ಲ, ದೇಶದ ಜನರಿಗಾಗಿ ಬರೆದುದಾಗಿತ್ತು

ಯುರೋಪ್ ಮತ್ತು ಪಾಶ್ಚಿಮಾತ್ಯ ದೇಶಗಳನ್ನು ಅಸ್ಥಿರಗೊಳಿಸಿದ ಉಕ್ರೇನ್- ರಷ್ಯಾ ಯುದ್ಧ 6ನೆಯ ತಿಂಗಳಿಗೆ ಕಾಲಿಟ್ಟಿದೆ. ಯುದ್ದದ ಆರಂಭದ ದಿನಗಳಲ್ಲಿ ಪ್ರಪಂಚದಾದ್ಯಂತ ಜನರು ಉಕ್ರೇನಿಯನ್ನರಿಗಾಗಿ ಮರುಗಿದರು, ಇಂಗ್ಲೆಂಡ್ ಅಮೆರಿಕ ಮುಂತಾದ ದೇಶಗಳ ನಾಯಕರು ರಷ್ಯಾ ದ ಮೇಲೆ ಆರ್ಥಿಕ ದಿಗ್ಬಂಧನ ಮುಂತಾದ ಕಠಿಣ ಕ್ರಮಗಳ ಬಗ್ಗೆ ಮಾತಾಡಿದರು, ಅಲ್ಲಿಂದ ವಲಸೆ ಬರುವ ಜನರಿಗೆ ದೇಶದ ಬಾಗಿಲನ್ನು ತೆರೆದರು, ತಮ್ಮ ದೇಶವನ್ನು ರಕ್ಷಿಸಲು ಯುದ್ಧ ಹಿಡಿದ ಉಕ್ರೇನಿನ ಜನರ ಸಾಹಸಕ್ಕೆ ಮೆಚ್ಚಿ ಅಸ್ತ್ರಗಳ ಹಣಕಾಸಿನ ಸಹಾಯದ ಭರವಸೆ ಕೊಟ್ಟರು. ಬಿಳಿಯ ಯುದ್ಧ ನಿರಾಶ್ರಿತರಿಗೆ ಆಲಿಂಗನದ ನೀತಿ, ಬಡ ಆಫ್ರಿಕ ಮತ್ತು ಧರ್ಮ ಯುದ್ಧಗಳಲ್ಲಿ ನಲುಗಿ ಆಶ್ರಯ ಬಯಸಿ ಬಂದ ಮುಸ್ಲಿಂ ರಾಷ್ಟ್ರ ಗಳ ನಿರಾಶ್ರಿತರಿಗೆ ಒಂದು ನೀತಿ  ಎಂಬ(ನ್ಯಾಯಯುತ) ಟೀಕೆಗೂ ಗುರಿಯಾದರು.

ಯುದ್ಧ ತಿಂಗಳುಗಳ ಕಾಲ ಮುಂದುವರೆದಂತೆ ದಿಗ್ಬಂಧನಗಳ ಪರಿಣಾಮಗಳ ಬಗ್ಗೆ ಯುರೋಪಿನ , ಪಶ್ಚಿಮದ ದೇಶಗಳ ನಾಯಕರು ಹೆಚ್ಚು ಚಿಂತೆ ಮಾಡುತ್ತಿರುವಂತೆ ಕಾಣುತ್ತಿದೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಚಳಿಗಾಲದ ಚಿಂತೆ ಯುರೋಪ್ ಮತ್ತು ನ್ಯಾಟೋ ದೇಶಗಳನ್ನು ಕಾಡುತ್ತಿದೆ. ಇಟಲಿಯ ನಾಯಕರು ಪಾಸ್ತಾದ ಸಂಗ್ರಹ ಸಾಕಷ್ಟಿದೆ ಎಂದು ಜನರಿಗೆ ಆಶ್ವಾಸನೆ ಕೊಡುತ್ತಿದ್ದರೆ, ಫಿನ್‌ಲೆಂಡ್‌ನ ಸರ್ಕಾರ ತನ್ನೆಲ್ಲಾ ಬಂಕರ್‌ಗಳನ್ನು ಸ್ವಚ್ಛ ಮಾಡಿಸಿ ಅವುಗಳ ಭದ್ರತೆಯನ್ನು ಪರಿಶೀಲಿಸುತ್ತಿದೆ. ಯುದ್ಧ ಶುರುವಾದಾಗ ದೇಶವನ್ನು ರಕ್ಷಿಸಲು ಕೆಲಸ ಬಿಟ್ಟು ಹೋದ ಉಕ್ರೇನ್ ಕಾರ್ಮಿಕರ ಕೊರತೆಯನ್ನು ತುಂಬಲು ಜೆಕ್/ಪೋಲೆಂಡ್‌ನ ಕಂಪನಿಗಳು ಉಕ್ರೇನ್‌ ತೊರೆದು ಬಂದ ಹೆಣ್ಣು ಮಕ್ಕಳಿಗೆ ದೈಹಿಕ ಕೆಲಸಗಳ ತರಬೇತು ಕೊಟ್ಟು ಕಾರ್ಮಿಕರಾಗಿ ದುಡಿಸಿಕೊಳ್ಳಲು ಅಣಿಯಾಗಿದ್ದಾರೆ.

ತಿಂಗಳುಗಳ ಯುದ್ಧ ಜನರನ್ನು ಹತಾಶೆಗೆ ದೂಡಿದೆ, ಕೆಲವು ಸಾವಿರ ಉಕ್ರೇನಿಯನ್ನರು ಎರಡನೇ ಬಾರಿ ಮನೆ, ಊರು ತೊರೆದು ಬೇರೆ ದೇಶಗಳಿಗೆ ಹೋಗಿದ್ದಾರೆ. 2014ರಲ್ಲಿ ಕೂಡ ರಷ್ಯಾದ ದಾಳಿಯಿಂದಾಗಿ ಮನೆ-ಆಸ್ತಿ ಕಳೆದುಕೊಂಡವರು, ಈ ಬಾರಿಯೂ ಅದೇ ಪ್ರಮಾಣದ ಆಘಾತ ಅನುಭವಿಸಿದ್ದಾರೆ.

ಆರಂಭದಲ್ಲಿ ಮರುಕ ವ್ಯಕ್ತಪಡಿಸುತ್ತಿದ್ದ ಇತರೆ ದೇಶಗಳ ಜನರು  ಯುದ್ಧದ ಬಗ್ಗೆ ನಿರಾಸಕ್ತಿ ತಾಳಿ ಮುಂದುವರಿದಿದ್ದಾರೆ, ಕೆಲವು ಅಮೆರಿಕನ್ನರು/ ಯೂರೋಪಿಯನ್ನರು ತಾವು ಕೊಟ್ಟ ಹಣಕಾಸಿನ ಲೆಕ್ಕ  ಕೇಳುತ್ತಿದ್ದಾರೆ, ರಾಜಿ ಸಂಧಾನದ ಕುರಿತು ಉಕ್ರೇನಿಯನ್ನರಿಗೆ "ಸಲಹೆಗಳ" ಜೊತೆ ವೋಗ್ ಸಂದರ್ಶನ ದಲ್ಲಿ ಕಾಣಿಸಿಕೊಂಡ ಪ್ರಥಮ ಮಹಿಳೆ ಓಲೆನಾ ಝೆಲೆನ್‌ಸ್ಕಿರನ್ನು ತೀಕ್ಷ್ಣ ಟೀಕೆ ಮಾಡುತ್ತಿದ್ದಾರೆ. (ಪತ್ರಿಕೆಯು ಸಂದರ್ಶನ ಮತ್ತು ಚಿತ್ರಗಳನ್ನು "portraits of Bravery " ಎಂದಿದೆ).

Image
War lady 1

ಈ ಅಂತರರಾಷ್ಟ್ರೀಯ ಸಲಹೆಗಳನ್ನು, ಚರ್ಚೆಗಳನ್ನು ಉಕ್ರೇನ್ ಪರವಾಗಿ ಸದ್ಯಕ್ಕೆ ಯುದ್ಧಭೂಮಿಯಲ್ಲಿ ಹೋರಾಟ ಮಾಡುತ್ತಿರುವ ಉಕ್ರೇನ್ ಇತಿಹಾಸಕಾರ ತಾರಸ್ ಬಿಲೌಸ್ ಗಮನಿಸಿದ್ದಾರೆ. ಈ ಚರ್ಚೆಗಳು ಉಕ್ರೇನಿಯನ್ನರ ಅಭಿಪ್ರಾಯವನ್ನು ನಿರ್ಲಕ್ಷಿಸುವುದನ್ನು, ಇನ್ನೂ ಕೆಲವು ಚರ್ಚೆಗಳಲ್ಲಿ ಉಕ್ರೇನಿಯನ್ನರನ್ನು ಸಹಾನುಭೂತಿಗೆ ಅರ್ಹರಾದ ನಿಷ್ಕ್ರಿಯ ಬಲಿಪಶುಗಳಾಗಿ ಅಥವಾ ಖಂಡಿಸಬೇಕಾದ ನಾಜಿಗಳಾಗಿ ಪ್ರಸ್ತುತಪಡಿಸಲಾಗುತ್ತಿರುವುದರ ಕುರಿತು ಬರೆಯುತ್ತಾರೆ.

ಅವರ ಪ್ರಕಾರ "ರಷ್ಯಾದ ಆಕ್ರಮಣವನ್ನು ವಿರೋಧಿಸುವ ನಿರ್ಧಾರವನ್ನು ಜೋ ಬಿಡೆನ್ ಅಥವಾ ಝೆಲೆನ್ಸ್ಕಾ ಮಾಡಲಿಲ್ಲ, ಅದು ಆಕ್ರಮಣದ ಮೊದಲ ದಿನಗಳಲ್ಲಿ ಸಾಮೂಹಿಕವಾಗಿ ದೇಶವನ್ನು ರಕ್ಷಿಸಲು ಶಸ್ತ್ರಾಸ್ತ್ರಗಳಿಗಾಗಿ ಸಾಲುಗಟ್ಟಿದ ಉಕ್ರೇನಿಯನ್ ಜನರ ನಿರ್ಧಾರವಾಗಿತ್ತು.ಆಗ ಝೆಲೆನ್‌ಸ್ಕಿ ಶರಣಾಗಿದ್ದರೆ, ಅವರು ಸಮಾಜದ ಹೆಚ್ಚಿನವರ ದೃಷ್ಟಿಯಲ್ಲಿ ಅಪಖ್ಯಾತಿಗೆ ಒಳಗಾಗುತ್ತಿದ್ದರು, ಆದರೆ ಉಕ್ರೇನಿಯನ್ ಪ್ರತಿರೋಧವು ಕಠಿಣವಾದ ರಾಷ್ಟ್ರೀಯವಾದಿ ಶಕ್ತಿಗಳ ನೇತೃತ್ವದಲ್ಲಿ ವಿಭಿನ್ನ ರೂಪದಲ್ಲಿ ಮುಂದುವರಿಯುವ ಎಲ್ಲಾ ಸಂಭಾವನೆಯೂ ಇತ್ತುʼ. ನವ ಉದಾರವಾದಿ ಝೆಲೆನ್‌ಸ್ಕಿ 2014 ರಲ್ಲಿ ರಷ್ಯಾ ಕ್ರೈಮಿಯಾ ಸ್ವಾಧೀನಪಡಿಸಿಕೊಂಡ ನಂತರ ಮತ್ತು ಡಾನ್ಬಾಸ್‌ನಲ್ಲಿ ಯುದ್ಧದ ಪ್ರಾರಂಭದ ನಂತರ ಉಕ್ರೇನ್ನಲ್ಲಿ ಅಧಿಕಾರಕ್ಕೆ ಬರಬಹುದಾದ ಅತ್ಯಂತ ಸ್ವಾಭಾವಿಕ (ಯಾವುದೇ ತೀವ್ರ ಎಡ ಬಲಗಳೊಂದಿಗೆ ಗುರುತಿಸಿಕೊಳ್ಳದ) ರಾಜಕಾರಣಿ ಎಂಬುದು ಅವರ ಅನಿಸಿಕೆ.

ದಕ್ಷಿಣ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿನ ಪರಿಸ್ಥಿತಿಯು ರಷ್ಯಾದ ಪಡೆಗಳು ಅಲ್ಲಿ ಶಾಶ್ವತ ಸ್ಥಾನವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ ಎಂದು ಸೂಚಿಸುತ್ತದೆ, ಏಕೆಂದರೆ ಈ ಪ್ರದೇಶಗಳು ರಷ್ಯಾ ಮತ್ತು  ಕ್ರೈಮಿಯಾಕ್ಕೆ ಭೂ ಕಾರಿಡಾರ್ ಸಂಪರ್ಕ ಒದಗಿಸುತ್ತವೆ, ಈ ಪ್ರದೇಶಗಳಲ್ಲಿ ಲೂಟಿ ಮಾಡಿದ ಧಾನ್ಯವನ್ನು  ಮತ್ತು ಉಕ್ರೇನಿಯನ್ ಬಂದರುಗಳನ್ನು ನಿಯಂತ್ರಿಸುವ ಮೂಲಕ ಇಡೀ ಜಗತ್ತಿಗೆ ರಷ್ಯಾ ಏಕಕಾಲದಲ್ಲಿ ಕ್ಷಾಮದ ಭೀತಿ ಹುಟ್ಟಿಸಬಲ್ಲ ಶಕ್ತಿ ಪಡೆಯುತ್ತಿದೆ. ಜುಲೈ 22ರಂದು ಇಸ್ತಾಂಬುಲ್‌ನಲ್ಲಿ ಸಹಿ ಮಾಡಲಾದ ಉಕ್ರೇನಿಯನ್ ಧಾನ್ಯದ ರಫ್ತಿನ ನಿರ್ಬಂಧವನ್ನು ತೆಗೆದುಹಾಕುವ ಒಪ್ಪಂದವನ್ನು ರಷ್ಯಾವು ಒಡಿಸ್ಸಾ ಸಮುದ್ರ ವ್ಯಾಪಾರ ಬಂದರಿನ ಮೇಲೆ ಕ್ಷಿಪಣಿಗಳೊಂದಿಗೆ ದಾಳಿ ಮಾಡುವ ಮೂಲಕ ಸಹಿ ಮಾಡಿದ ಮರುದಿನವೇ ಉಲ್ಲಂಘಿಸಿದೆ.

ಈಗಲೂ ಹೆಚ್ಚು ಉಕ್ರೇನಿಯನ್ನರು ಪ್ರತಿರೋಧದ ಪರವಾಗಿಯೇ ಇದ್ದಾರೆ. ಇಂಥ ಸಮಯದಲ್ಲಿ ಉಕ್ರೇನ್ ಸ್ವತಃ ರಾಜಿ ಸಂಧಾನ - ಮಾತುಕತೆಗಳಿಗೆ ಮುಂದಾದರೆ ಅದು ಪುಟಿನ್ ಗೆಲುವು ಎಂದೇ ಬಿಂಬಿತವಾಗುತ್ತದೆ ಹಾಗೂ ಆತನ ಅಧಿಕಾರಾವಧಿಯನ್ನು ಇನ್ನಷ್ಟು ವಿಸ್ತರಿಸುತ್ತದೆ, ಆದ್ದರಿಂದ ಯುದ್ಧ ಭೂಮಿಯಲ್ಲಿ ರಷ್ಯಾದ ಸೋಲಿನಲ್ಲಿ ರಷ್ಯನ್ನರ, ಹಿತಾಸಕ್ತಿಯ ಪರವಾಗಿಯೂ ಇದೆ.

44 ವರ್ಷ ವಯಸ್ಸಿನ, ಪ್ರಥಮ ಮಹಿಳೆಯಾದ ನಂತರವೂ ತನ್ನ ಚಿತ್ರಕಥೆ ಬರಹದ ಕೆಲಸವನ್ನು ಜಾರಿಯಿಡಲು ಪ್ರಯತ್ನಿಸುತ್ತಿರುವ ಓಲೆನಾ ಯುದ್ಧ ಶುರುವಾದಾಗ ಮಕ್ಕಳ ಜೊತೆ ಭೂಗತರಾದರು. ಅದಕ್ಕೂ ಮುಂಚೆ ಅವರು ತನ್ನ ದೇಶದ ಜನರಿಗಾಗಿ ಫೇಸ್ಬುಕ್ಕಿನಲ್ಲಿ ಒಂದು ಸಂದೇಶ ಬರೆದರು "ಇಂದು ನಾನು ಗಾಬರಿಯಾಗುವುದಿಲ್ಲ ಮತ್ತು ಅಳುವುದಿಲ್ಲ. ನಾನು ಶಾಂತವಾಗಿ ಮತ್ತು ಆತ್ಮವಿಶ್ವಾಸದಿಂದ ಇರುತ್ತೇನೆ, ಏಕೆಂದರೆ ನನ್ನ ಮಕ್ಕಳು ನನ್ನನ್ನು ನೋಡುತ್ತಿದ್ದಾರೆ." ಅವರು ದೇಶದ ಜನರಿಗಾಗಿ ಬರೆದದ್ದು ಅವರಷ್ಟಕ್ಕೆ ಅವರು ಧೈರ್ಯ ತಂದುಕೊಳ್ಳಲು ಹೇಳಿದಂತಿತ್ತು. ಏಕೆಂದರೆ ನಂತರದ 10 ವಾರಗಳು ಅವರು ಪತಿಯೊಂದಿಗೆ, ಕುಟುಂಬ/ ಸ್ನೇಹಿತರೊಂದಿಗೆ ನಿಮಿಷಗಳ ಕಾಲವೂ  ಅಡೆತಡೆಯಿಲ್ಲದ ಮಾತು ಕೂಡ ಸಾಧ್ಯವಾಗಲಿಲ್ಲ, ಮತ್ತು ಪದೇ ಪದೇ ಅಡಗುದಾಣಗಳನ್ನು ಬದಲಾಯಿಸಬೇಕಾದ, ವಾಹನಗಳ ದೀಪಗಳನ್ನೂ ಆರಿಸಿ ಪ್ರಯಾಣಿಸಬೇಕಾದ ಪರಿಸ್ಥಿತಿಯಲ್ಲಿ ಅವರು ಮತ್ತು ಮಕ್ಕಳು ಇದ್ದರು. ಪತಿಯಿಂದ ದೂರ ಕೇವಲ ಯುದ್ಧದ ಭಯಂಕರ ದೃಶ್ಯಗಳನ್ನು ನೋಡುತ್ತಾ ಕಾಲ ಕಳೆದರು.

ಆಕ್ರಮಣದ ಮೊದಲ ದಿನಗಳಲ್ಲಿ ದುಃಖಿಸಲು ಸಮಯವೂ ಇರಲಿಲ್ಲ. ಇದು ತುಂಬಾ ಅವಾಸ್ತವಿಕ  ಮತ್ತು ದಿಗ್ಭ್ರಮೆಗೊಳಿಸುವಂತಿತ್ತು. ಝೆಲೆನ್‌ಸ್ಕಿ ಆಶಾವಾದದ ಮುಖವಾಡವನ್ನು ಧರಿಸಿ ನಿಭಾಯಿಸಿದರು. ಶೀಘ್ರದಲ್ಲೇ, ಭರವಸೆಯ ಮುಖವಾಡ ಭಾರವಾಗತೊಡಗಿತು. ಮತ್ತು ಅವರ ಪರಿಸ್ಥಿತಿಯ ಭಯಾನಕ ವಾಸ್ತವತೆಯು ಗಮನಕ್ಕೆ ಬಂದಿತು. ರಷ್ಯನ್ನರು ಈಗಾಗಲೇ ದಕ್ಷಿಣ ಮತ್ತು ಪೂರ್ವ ಉಕ್ರೇನ್‌ನ ವಿಶಾಲ ಪ್ರದೇಶಗಳಾದ್ಯಂತ ಮುನ್ನಡೆದಿದ್ದರು ಮತ್ತು ಅವರ ಟ್ಯಾಂಕ್‌ಗಳು ರಾಜಧಾನಿಯನ್ನು ಸುತ್ತುವರಿಯಲು ದಕ್ಷಿಣದ ಕಡೆಗೆ ಚಲಿಸುತ್ತಿದ್ದವು. ಲಕ್ಷಾಂತರ ಉಕ್ರೇನಿಯನ್ನರು, ಕುಟುಂಬದ ಅನೇಕ ಆಪ್ತ ಸ್ನೇಹಿತರು ಉಕ್ರೇನಿನಿಂದ ಪಲಾಯನ ಮಾಡುತ್ತಿದ್ದರು, "ನಾನು ಪ್ರೀತಿಸುವ ಹಲವರನ್ನು ಮತ್ತೆ ಎಂದೂ  ನೋಡಲು ಬಹುಶ ಸಾಧ್ಯವಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ" ಎಂದು ಝೆಲೆನ್‌ಸ್ಕಿ ಎಪ್ರಿಲ್‌ನಲ್ಲಿ ವೋಗ್ ಪತ್ರಿಕೆಗೆ ಬರೆದರು.

Image
War lady3

ಆದರೆ ಆಕ್ರಮಣದ 10 ವಾರಗಳ ನಂತರ, ಝೆಲೆನ್ಸ್ಕಾ ಅಡಗುವಿಕೆಯಿಂದ ಹೊರಬರಲು ನಿರ್ಧರಿಸಿದರು. ತನ್ನ ಧ್ವನಿಯನ್ನು ವಿಭಿನ್ನ ರೀತಿಯ ಯುದ್ಧಕಾಲದ ನಾಯಕಿಯಾಗಿ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆಕೆಯ ಪತಿ ಪಾಶ್ಚಿಮಾತ್ಯ ದೇಶಗಳಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ಬೆಂಬಲವನ್ನು ಪಡೆದುಕೊಳ್ಳುವುದರತ್ತ ಗಮನಹರಿಸಿದ್ದರೆ, ಪ್ರಥಮ ಮಹಿಳೆ ದೇಶವು ಸಾಮೂಹಿಕ ಮತ್ತು ವೈಯಕ್ತಿಕ ಎರಡೂ (ಯುದ್ಧ ಕಾರಣದಿಂದಾದ) ಆಘಾತಗಳನ್ನು ನಿಭಾಯಿಸಲು ಸಹಾಯ ಮಾಡಲು ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಎರಡು ತಿಂಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಳ್ಳುವುದರಲ್ಲಿ ಕಳೆದುಹೋದ ಸಮಯವನ್ನು ಸರಿದೂಗಿಸಲು, ಅವರ ದಿನಗಳು ಭಾಷಣಗಳು, ಸಭೆಗಳು, ಪ್ಯಾನಲ್ ಚರ್ಚೆಗಳು ಮತ್ತು ಸಂದರ್ಶನಗಳಿಂದ ತುಂಬಿವೆ. ಪ್ರಪಂಚದಾದ್ಯಂತದ ಗೆಳೆಯರು (ಇಸ್ರೇಲ್‌ನ ಪ್ರಥಮ ಮಹಿಳೆ ಮೈಕಲ್ ಹೆರ್ಜೋಗ್ ಮತ್ತು ಪೋಲೆಂಡ್‌ನ ಪ್ರಥಮ ಮಹಿಳೆ, ಅಗಾಟಾ ಕಾರ್ನ್‌ಹೌಸರ್ ಸೇರಿದಂತೆ) ಸಹಾಯ ಮಾಡಲು ಮುಂದಾಗಿದ್ದಾರೆ.

ಮೇ ತಿಂಗಳಲ್ಲಿ, ಝೆಲೆನ್ಸ್ಕಾ ಪ್ರತಿ ಉಕ್ರೇನಿಯನ್ನರಿಗೆ ಮಾನಸಿಕ ಬೆಂಬಲವನ್ನು ಲಭ್ಯವಾಗುವಂತೆ ಮಾಡಲು ಸರ್ಕಾರಿ ಯೋಜನೆಯನ್ನು ಪ್ರಾರಂಭಿಸಿದರು. ಇದು ಈಗ ಆಘಾತ ಸಲಹೆಗಾರರಿಗೆ (trauma counselor) ತರಬೇತಿ ನೀಡಲು ಪ್ರಾರಂಭಿಸಿದೆ, ಮಾನಸಿಕ-ಆರೋಗ್ಯ ಹಾಟ್‌ಲೈನ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಕ್ಲಿನಿಕಲ್ ಬೆಂಬಲಕ್ಕಾಗಿ ವಿದೇಶಿ ತಜ್ಞರ ಜೊತೆ ನಿರಂತರ ಸಂಪರ್ಕದ ಸಾಧ್ಯತೆಯ ಕುರಿತು ಯೋಚಿಸಲಾಗುತ್ತಿದೆ.

ವೋಗ್‌ ಗೆ ಸಂದರ್ಶನ ನೀಡಿದ ಓಲೆನಾ

ಜೂನ್ 20ರ ಸಂದರ್ಶನವೊಂದರಲ್ಲಿ ಈ ಸಮಯದ ಆಘಾತ/ಒತ್ತಡಗಳಿಗೆ ಚಿಕಿತ್ಸೆ ಪಡೆಯದಿದ್ದಲ್ಲಿ, ಯುದ್ದೊತ್ತರ ಕಾಲದಲ್ಲಿ ಉಕ್ರೇನ್ ಅನುಭವಿಸಬಹುದಾದ ಪರಿಣಾಮಗಳ ಕುರಿತ ಯೋಚನೆಗಳು ತನ್ನನ್ನು ಭಾಧಿಸುತ್ತಿರುವ ಕುರಿತು ಝೆಲೆನ್‌ಸ್ಕಿ ಮಾತನಾಡಿದ್ದಾರೆ. ಉಕ್ರೇನ್‌ನಲ್ಲಿ, ಸಾವಿರಾರು ಮಹಿಳೆಯರು ಯುದ್ಧದಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು ಝೆಲೆನ್‌ಸ್ಕಿ ಅವರ ಪಾತ್ರವು ಮುಂಚೂಣಿಯ ರಾಜತಾಂತ್ರಿಕತೆಯ ಕಡೆಗೆ ಹೆಚ್ಚು ತಿರುಗಿದೆ.

ಈ ತಿಂಗಳ ಅಮೆರಿಕ ಭೇಟಿಯಲ್ಲಿ ತನ್ನ ದೇಶದ ಯುದ್ಧ ನಿರತ ಸೈನಿಕರು ಮತ್ತು  ಪತಿಯನ್ನು ಪ್ರತಿನಿಧಿಸಲು, ಸೈನಿಕರ ಹಸಿರು ಬಣ್ಣದ  ಸಮವಸ್ತ್ರವನ್ನು ಹೋಲುವ ದಿರಿಸು ಧರಿಸಿದ್ದ ಉಕ್ರೇನಿನ ಪ್ರಥಮ ಮಹಿಳೆ ಅಲೆನ ಝೆಲೆನ್‌ಸ್ಕಿ ಅಮೆರಿಕನ್ ಕಾಂಗ್ರೆಸ್‌ನಲ್ಲಿ  ಮತ್ತಷ್ಟು ಅಸ್ತ್ರ ಗಳಿಗಾಗಿ ಬೇಡಿಕೆ ಇಟ್ಟರು. "ನಾನು ಎಂದಿಗೂ ಕೇಳಲು ಬಯಸದ ವಸ್ತುಗಳನ್ನು ಇಂದು ನಾನು ಕೇಳುತ್ತಿದ್ದೇನೆ: ನಾನು ಶಸ್ತ್ರಾಸ್ತ್ರಗಳನ್ನು ಕೇಳುತ್ತಿದ್ದೇನೆ - ಬೇರೆಯವರ ಭೂಮಿಯಲ್ಲಿ ಯುದ್ಧ ಮಾಡಲು ಬಳಸದ ಶಸ್ತ್ರಾಸ್ತ್ರಗಳನ್ನು, ಆದರೆ ಒಬ್ಬರ ಮನೆ ಮತ್ತು ಆ ಮನೆಯಲ್ಲಿ ಜೀವಂತವಾಗಿ ನಾಳೆ ಏಳುವ ಹಕ್ಕನ್ನು ರಕ್ಷಿಸಲು. ”ಇದು ಉಕ್ರೇನ್‌ನಲ್ಲಿನ ಯುದ್ಧವು ಉಕ್ರೇನ್‌ಗಿಂತ ಹೆಚ್ಚಾದ ಉದ್ದೇಶಕ್ಕಾಗಿ ನಡೆಯುತ್ತಿದೆ- ಪಶ್ಚಿಮದ/ಜಗತ್ತಿನ ಮೌಲ್ಯಗಳನ್ನು ಮತ್ತು ಯುದ್ಧನಂತರದ ನಿಯಮಗಳ ಆಧಾರಿತ ಆದೇಶವನ್ನು ಯಾರು ಎತ್ತಿ ಹಿಡಿಯುತ್ತಾರೆ ಎಂಬುದರ ಕುರಿತು ಆಕೆಯ ಪತಿ ಮೊದಲಿನಿಂದಲೂ ಮಾಡುತ್ತಿರುವ, (ಆದರೆ ಈಗ ಯುರೋಪ್ - ಪಶ್ಚಿಮದ ನಾಯಕರ ನಿರ್ಲಕ್ಷ್ಯಕ್ಕೊಳಗಾಗಿರುವ) ಸಂದೇಶದ ಅತಿ ಹೃತ್ಪೂರ್ವಕ ಆವೃತ್ತಿಯಾಗಿದೆ. ಬಹುಶಃ ಇದು ಈಗ ಝೆಲೆನ್‌ಸ್ಕಿ ದಂಪತಿಗಳನ್ನು ಟೀಕೆ ಮಾಡುತ್ತಿರುವ ಎಲ್ಲರಿಗೂ ತಿಳಿದ ವಿಷಯ.

Image
war women

ಅಲ್ಲದೆ ಝೆಲೆನ್‌ಸ್ಕಿ ಕೂಡ ತಾನೇಕೆ ವೊಗ್ ಪತ್ರಿಕೆಗೆ ಯುದ್ಧದ ಈ ಸಮಯದಲ್ಲಿ ಸಂದರ್ಶನ ನೀಡಿದೆ ಎಂಬುದನ್ನೂ ವಿವರಿಸಿದ್ದಾರೆ.

"ವೋಗ್ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ಳುವುದು ವಿಶ್ವದ ಅನೇಕ ಯಶಸ್ವಿ ಮತ್ತು ಪ್ರಮುಖ ಜನರಿಗೆ ದೊಡ್ಡ ಗೌರವದ ವಿಷಯ ಮತ್ತು ಕನಸು. ಆದರೆ ಆ ಅವಕಾಶ ಆ ದೇಶದಲ್ಲಿ ನಡೆಯುವ ಯುದ್ಧದ ಕಾರಣದಿಂದಾಗಿ ಮಾತ್ರ ಅವರಿಗೆ ಲಭಿಸದಿರಲಿ ಎಂಬುದೇ ನನ್ನ ಹಾರೈಕೆ,
ಮತ್ತು ಈಗ ನೀವು ಪ್ರತಿ ಉಕ್ರೇನಿಯನ್ ಮಹಿಳೆಯನ್ನು ನನ್ನ ಸ್ಥಳದಲ್ಲಿ ನೋಡಬೇಕೆಂದು ನಾನು ಬಯಸುತ್ತೇನೆ. ಯುದ್ಧದಲ್ಲಿ ಸೈನಿಕಳಾಗಿ ಹೋರಾಡುತ್ತಿರುವ, ಸ್ವಯಂಸೇವಕಿಯಾಗಿರುವ, ನಿರಾಶ್ರಿತರ ಶಿಬಿರದಲ್ಲಿ ನೆಲೆಸಿರುವ, ಸೈರನ್ ಶಬ್ದದ ಅಡಿಯಲ್ಲಿ ತನ್ನ ಕೆಲಸವನ್ನು ಮಾಡತ್ತಿರುವ ಪ್ರತಿಯೊಬ್ಬ ಉಕ್ರೇನಿಯನ್ ಮಹಿಳೆಯು ಪ್ರಪಂಚದ ಗಮನವನ್ನು ಪಡೆಯುವ ಹಕ್ಕನ್ನು, ಅರ್ಹತೆಯನ್ನು ಹೊಂದಿದ್ದಾಳೆ".

ಇದನ್ನು ಓದಿದ್ದೀರಾ? ʼಫ್ರೀಬಿʼ ಒಂದು ರೋಗವೇ? ʼಸುಪ್ರೀಂʼ ನಲ್ಲಿರುವ ಪ್ರಕರಣಗಳು ದೇಶದ ಪ್ರಜಾಪ್ರಭುತ್ವದ ತರ್ಕದೊಂದಿಗೆ ಹೊಂದುವುದೇ ಇಲ್ಲ

ಅನಿವಾರ್ಯವಾದ ಈ ನಿರ್ಣಾಯಕ ಯುದ್ಧದಲ್ಲಿ ಎಲ್ಲ ಮಹಿಳೆಯರಿಗಿಂತ ದೈಹಿಕವಾಗಿ ಹಾನಿಗೊಳಗಾಗುವ ಮತ್ತು ಆಸ್ತಿ ಪಾಸ್ತಿ ಕಳೆದುಕೊಳ್ಳುವ ಸಂಭವನೀಯತೆ ಉಕ್ರೇನಿನ ಪ್ರಥಮ ಮಹಿಳೆಯಾಗಿ ಕಡಿಮೆ ಎನಿಸಿದರೂ ಇದು ಝೆಲೆನ್‌ಸ್ಕಿ ಖಾಸಗಿ ಯುದ್ಧವೂ ಹೌದು, ರಾತ್ರೋರಾತ್ರಿ ಹೋರಾಟಗಾರರಾಗಿ ಬದಲಾದ ನಾಗರಿಕರ ರಾಷ್ಟ್ರವನ್ನು ಝೆಲೆನ್‌ಸ್ಕಿ ಮುನ್ನಡೆಸಿದರೆ, ದೇಶದ  ಭಾವನಾತ್ಮಕ ಹೋರಾಟದ ಭಾರವನ್ನು ಓಲೆನಾ  ಹೊತ್ತಿರುವಂತೆ ಕಾಣುತ್ತಿದ್ದಾರೆ .

ಪ್ರಪಂಚದ ಶಾಂತಿ ಪ್ರಿಯ ಜನರು ತಮ್ಮ ಟೀಕೆ, ಸಲಹೆ, ವಿಮರ್ಶೆಗಳನ್ನು ಬದಿಗಿಟ್ಟು ಸದ್ಯಕ್ಕೆ ಉಕ್ರೇನಿಯನ್ನರಿಗೆ ಮತ್ತು ಅವರ ಮೆಚ್ಚುಗೆಯನ್ನು ಇನ್ನೂ ಉಳಿಸಿಕೊಂಡಿರುವ ಝೆಲೆನ್‌ಸ್ಕಿ ದಂಪತಿಗಳಿಗೆ ತಮ್ಮ ಭಾವನಾತ್ಮಕ ಬೆಂಬಲವನ್ನು ನೀಡುವುದು ಉಚಿತವೆನಿಸುತ್ತದೆ.

ನಿಮಗೆ ಏನು ಅನ್ನಿಸ್ತು?
2 ವೋಟ್