ಸಾಮಾಜಿಕ ನ್ಯಾಯದ ಹರಿಕಾರ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್

ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ವಿರೋಧಿಯಾಗಿದ್ದ ಜನಸಂಘ, ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಟ್ಟ ತಕ್ಷಣ ತಾನು ಭಾಗವಾಗಿದ್ದ ಸರ್ಕಾರದ ವಿರುದ್ಧ ಬಿಹಾರದ ಪ್ರಬಲ ಜಾತಿಗಳನ್ನು ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ವಿರುದ್ಧ ಎತ್ತಿಕಟ್ಟಿತು. ಅವರ ಸಂಪುಟದಲ್ಲಿದ್ದ ಮೇಲ್ಜಾತಿಗಳ ಸದಸ್ಯರು ತಮ್ಮ ಸರ್ಕಾರದ ವಿರುದ್ಧವೇ ನಿಂತರು. ಕೀಳುಮಟ್ಟದ ಟೀಕೆ, ಬೈಗುಳಗಳಿಂದ ನಿಂದಿಸಿದರು

ಇಂದು, ಜನವರಿ 24, ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ನ್ಯಾಯದ ಹರಿಕಾರ ಬಿಹಾರದ ಮಾಜಿ ಮುಖ್ಯಮಂತ್ರಿ, ಜನನಾಯಕ ಕರ್ಪೂರಿ ಠಾಕೂರ್ ಅವರ ಜನ್ಮದಿನ.

ಹಿಂದುಳಿದ ಕ್ಷೌರಿಕ ಸಮುದಾಯಕ್ಕೆ ಸೇರಿದ ಕರ್ಪೂರಿ ಠಾಕೂರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ 'ಕ್ವಿಟ್ ಇಂಡಿಯಾ' ಚಳವಳಿಯಲ್ಲಿ ಸಕ್ರಿಯರಾಗಿದ್ದವರು. ಸ್ವಾತಂತ್ರ್ಯದ ನಂತರ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ನಿಂತು ವಿಧಾನಸಭೆ ಪ್ರವೇಶಿಸಿದರು. ಎರಡು ಸಲ ಬಿಹಾರದ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ತಳಸಮುದಾಯಗಳ ಅಭಿವೃದ್ಧಿಗಾಗಿ 1978ರಲ್ಲಿ ಹಿಂದುಳಿದ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 33% ಮೀಸಲಾತಿಯನ್ನು ಜಾರಿಗೆ ತಂದರು‌. ಮಂಡಲ್ ಆಯೋಗದ ಶಿಫಾರಸ್ಸುಗಳು ಜಾರಿಯಾಗುವುದಕ್ಕಿಂತ ಹಿಂದೆಯೇ ಬಿಹಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ಮೂಲಕ 'ಸಾಮಾಜಿಕ ನ್ಯಾಯ'ದ ಹರಿಕಾರರಾದರು.

ಜನತಾ ಪಕ್ಷದದಿಂದ ಮುಖ್ಯಮಂತ್ರಿಯಾಗುವ ಮೂಲಕ ಬಿಹಾರದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಸರ್ಕಾರ, ಸಮಾಜವಾದಿ ಪಕ್ಷ ಮತ್ತು ಜನಸಂಘದ ಬೆಂಬಲ ಪಡೆದು ರಚನೆಯಾಗಿದ್ದ ಸರ್ಕಾರವಾಗಿತ್ತು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ ಕಾರಣಕ್ಕೆ ಪ್ರಬಲ ಜಾತಿಗಳ ಕೆಂಗಣ್ಣಿಗೆ ಕರ್ಪೂರಿ ಠಾಕೂರ್ ಗುರಿಯಾಗಬೇಕಾಯಿತು. ಅದರಲ್ಲೂ ಕರ್ಪೂರಿ ಠಾಕೂರ್ ಸರ್ಕಾರದ ಭಾಗವಾಗಿದ್ದ, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ವಿರೋಧಿಯಾಗಿದ್ದ ಜನಸಂಘ, ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಟ್ಟ ತಕ್ಷಣ ತಾನು ಭಾಗವಾಗಿದ್ದ ಸರ್ಕಾರದ ವಿರುದ್ಧ ಬಿಹಾರದ ಪ್ರಬಲ ಜಾತಿಗಳನ್ನು ಕರ್ಪೂರಿ ಠಾಕೂರ್ ಅವರ ವಿರುದ್ಧ ಎತ್ತಿಕಟ್ಟಿತು. ಕರ್ಪೂರಿ ಠಾಕೂರ್ ಸಂಪುಟದಲ್ಲಿದ್ದ ಮೇಲ್ಜಾತಿಗಳ ಸದಸ್ಯರು ತಮ್ಮ ಸರ್ಕಾರದ ವಿರುದ್ಧವೇ ನಿಂತರು.

ಇದನ್ನು ಓದಿದ್ದೀರಾ?: 2023ರಲ್ಲಿ ಜಾಗತಿಕ ಆರ್ಥಿಕತೆಯ ಪ್ರಗತಿ ಕುಂಠಿತಗೊಳ್ಳಲಿದೆ; ಐಎಂಎಫ್‌ ನಿರ್ವಾಹಕ ನಿರ್ದೇಶಕಿ ಕ್ರಿಸ್ಟಲಿನ ಜಾರ್ಜಿವ

ಕ್ಷೌರಿಕ ಸಮುದಾಯದ ಕರ್ಪೂರಿ ಠಾಕೂರ್ ಹೋದ ಕಡೆಗಳಲ್ಲೆಲ್ಲ ಅವರ ಜಾತಿಯನ್ನು ಮುಂದಿಟ್ಟುಕೊಂಡು ಕೀಳುಮಟ್ಟದ ಟೀಕೆ, ಬೈಗುಳಗಳಿಂದ ನಿಂದನೆಗೆ ಒಳಗಾದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ತಳಸಮುದಾಯದವರು ಎನ್ನುವ ಕಾರಣಕ್ಕೆ ಪ್ರಬಲ ಜಾತಿಗಳಿಂದ ಜಾತಿ ನಿಂದನೆ, ಅವಮಾನವನ್ನು ಎದುರಿಸಬೇಕಾಯಿತು. ಎರಡು ಸಲ ಮುಖ್ಯಮಂತ್ರಿಯಾದರೂ ಐದು ವರ್ಷದ ಅವಧಿ ಪೂರ್ಣಗೊಳಿಸಲು ಕರ್ಪೂರಿ ಠಾಕೂರ್ ಅವರಿಗೆ ಸಾಧ್ಯವಾಗಲಿಲ್ಲ. ಆದರೆ ತಮಗಿದ್ದ ದೂರದೃಷ್ಟಿಯಿಂದಾಗಿ ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ರಾಜಕೀಯ ಶಕ್ತಿಯನ್ನು ಮತ್ತು ಮೀಸಲಾತಿ ನೀಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಕೊಡುವ ಮೂಲಕ ತಳಸಮುದಾಯಗಳಿಗೆ ಅಪಾರ ಆತ್ಮವಿಶ್ವಾಸವನ್ನು ಕರ್ಪೂರಿ ಠಾಕೂರ್ ತುಂಬಿದರು.

ತಳಸಮುದಾಯಗಳ ಏಳಿಗೆಯ ಬಗ್ಗೆ ತಮಗಿದ್ದ ಬದ್ಧತೆ, ಪ್ರಾಮಾಣಿಕವಾದ ಕಾಳಜಿಯಿಂದಾಗಿ ಬಿಹಾರದ ಜನತೆ ಇಂದಿಗೂ ಕರ್ಪೂರಿ ಠಾಕೂರ್ ಅವರನ್ನು 'ಜನನಾಯಕ' ಎಂದು ಸ್ಮರಿಸುತ್ತಾರೆ.

(ವಿ ಎಲ್‌ ನರಸಿಂಹಮೂರ್ತಿ ಅವರ ಫೇಸ್‌ಬುಕ್‌ ವಾಲ್‌ನಿಂದ)
ನಿಮಗೆ ಏನು ಅನ್ನಿಸ್ತು?
0 ವೋಟ್
eedina app