ʼಫ್ರೀಬಿʼ ಒಂದು ರೋಗವೇ?| 'ಸುಪ್ರೀಂ'ನಲ್ಲಿರುವ ಪ್ರಕರಣಗಳು ದೇಶದ ಪ್ರಜಾಪ್ರಭುತ್ವದ ತರ್ಕದೊಂದಿಗೆ ಹೊಂದುವುದೇ ಇಲ್ಲ

Freebie

ಬೇಜವಾಬ್ದಾರಿಯುತವಾಗಿ ಸಾಮಾನ್ಯ ಜನರಿಗೆ ʼಉಚಿತ ಕೊಡುಗೆʼಯ ಭರವಸೆಗಳನ್ನು ನೀಡುವ ಆರ್ಥಿಕ ನೀತಿಗಳ ಬಗ್ಗೆ ಮಾತ್ರವೇ ನಾವು ಏಕೆ ತಲೆಕೆಡಿಸಿಕೊಳ್ಳುತ್ತೇವೆ ಎಂಬುದು ನನಗೆ ಆಶ್ಚರ್ಯ. ತೆರಿಗೆ ಕಡಿತ, ವಿಂಡ್‌ಫಾಲ್ ಲಾಭಗಳು ಮತ್ತು ಅತ್ಯಂತ ಶ್ರೀಮಂತರ ಸಾಲಗಳನ್ನು ಮನ್ನಾ ಮಾಡುವ ದೊಡ್ಡ ಯೋಜನೆಗಳ ಬಗ್ಗೆ ನಾವು ಏಕೆ ಚಿಂತಿಸುವುದಿಲ್ಲ?

ಅಸ್ಸಾಂನಲ್ಲಿರುವ ಹಿರಿಯ ಸ್ನೇಹಿತರೊಬ್ಬರಿಂದ ನನಗೊಂದು ಈ ಮೇಲ್‌ ಬಂದಿತು. ‘ ನಾವು ಪ್ರವಾಹದಿಂದಾಗುವ ವಾರ್ಷಿಕ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸುವಂತೆ ಕೋರಬಹುದೇ?’ ಅದನ್ನವರು ವೇದಿಕೆ ಮತ್ತು ಫಲಿತಾಂಶದ ಬಗ್ಗೆ ಯಾವುದೇ ಖಾತ್ರಿಯಿಲ್ಲದೆಯೇ ಸ್ವಲ್ಪ ಹಿಂಜರಿಕೆಯಿಂದಲೇ ಬರೆದಿದ್ದರು. ಪ್ರತಿ ದಿನವೂ ನನ್ನನ್ನು ಸಂಪರ್ಕಿಸುವ ಇತರರಿಗೆ ಈ ರೀತ್ಯ ಯಾವುದೇ ಹಿಂಜರಿಕೆ ಅಥವಾ ಅನುಮಾನಗಳಿರುವುದಿಲ್ಲ ಎಂದು ಕಾಣುತ್ತದೆ. ಅಗ್ನಿಪಥ್ ಯೋಜನೆ, ಗೋಧಿ ರಫ್ತು ಅಥವಾ ಅದರ ರಫ್ತಿನ ಮೇಲಿನ ನಿಷೇಧ ಅಥವಾ ಇನ್ನಾವುದೇ ವಿಚಾರವಾಗಿ ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದರೆ ಮಾತ್ರವೇ ದೇಶವು ಉಳಿಯುವುದು ಎಂದು ಅವರಿಗೆ ಖಚಿತ ನಿಲುವು. ಇಂಥ ಹಲವು ಸಮಸ್ಯೆಗಳು ನನ್ನ ಹೃದಯಕ್ಕೆ ಪ್ರಿಯವಾಗಿದ್ದರೂ, ಈ ಎಲ್ಲಾ ವಿಚಾರಗಳಲ್ಲಿ ಸಮಸ್ಯೆ ಅಥವಾ ಪರಿಹಾರವು ಕಾನೂನಿನಲ್ಲಡಗಿದೆ ಎಂದು ಅವರೆಲ್ಲಾ ಏಕೆ ಭಾವಿಸುತ್ತಾರೆ ಎಂಬುದು ನನಗೆ ಅರ್ಥವೇ ಆಗಿಲ್ಲ. ಪ್ರಶಾಂತ್ ಭೂಷಣ್ ಅವರೊಂದಿಗಿನ ಸ್ನೇಹಕ್ಕಾಗಿ ನಾನು ತೆರಬೇಕಾದ ಬೆಲೆ ಇದು ಎಂದು ನನಗೆ ನಾನೇ ಹೇಳಿಕೊಳ್ಳುತ್ತಲೇ ಅವರಿಗೆ ಪ್ರತಿ ವಾರವೂ ಒಂದಷ್ಟು ವಿನಂತಿಗಳನ್ನು ಫಾರ್ವರ್ಡ್ ಮಾಡುತ್ತೇನೆ.

Eedina App

ಈ ವಿನಂತಿಗಳಲ್ಲಿ ವಿಶೇಷ ವರ್ಗವೊಂದನ್ನೂ ನಾನು ಗಮನಿಸಿದ್ದೇನೆ. ಕಾನೂನು ಮಧ್ಯಪ್ರವೇಶಿಕೆಯ ಮೂಲಕ ಭಾರತದ ರಾಜಕೀಯವನ್ನು ಸುಧಾರಿಸಲು ಬಯಸುವ ನನ್ನ ಸ್ನೇಹಿತರು ಇವರು. 1960ರಿಂದ 80ರ ದಶಕದಲ್ಲಿ, ಪ್ರಸ್ತುತ ಚಾಲ್ತಿಯಲ್ಲಿರುವ first-past-the-post̲-system (ಒಂದು ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳಿಸುವ ಅಭ್ಯರ್ಥಿಯನ್ನು ವಿಜೇತನೆಂದು ಘೋಷಿಸುವ) ವ್ಯವಸ್ಥೆಯಿಂದ ಅನುಪಾತದ ಪ್ರಾತಿನಿಧ್ಯದ (ಪಕ್ಷವೊಂದು ತಾನು ಪಡೆಸಿರುವ ಮತಗಳಿಗೆ ಅನುಗುಣವಾಗಿ ಸ್ಥಾನಗಳನ್ನು ಪಡೆಯುವ ಚುನಾವಣಾ ವ್ಯವಸ್ಥೆ) ಚುನಾವಣಾ ವ್ಯವಸ್ಥೆಗೆ ಬದಲಾಯಿಸಲು ಮನವಿಗಳಿರುತ್ತಿತ್ತು.  ಟಿ.ಎನ್. ಶೇಷನ್ ನೇತೃತ್ವದ ಚುನಾವಣಾ ಆಯೋಗವು ಈ ಧ್ವನಿಗಳನ್ನು ವರ್ಧಿಸಿದ ಕಾರಣಕ್ಕೆ ಚುನಾವಣಾ ಸುಧಾರಣೆಗಳು ಚರ್ಚೆಯಾದಷ್ಟೂ, ಬೇಡಿಕೆಗಳೂ ಹೆಚ್ಚಾಗಿ; 'ಗಂಭೀರತೆ ಕಾಯ್ದುಕೊಳ್ಳದ ಅಭ್ಯರ್ಥಿಗಳನ್ನು' ಚುನಾವಣಾ ಕಣಕ್ಕೆ ಪ್ರವೇಶಿಸದಂತೆ ನಿರುತ್ಸಾಹಗೊಳಿಸೋಣ, ತೀರ್ಪು ವಿಭಜನೆಯನ್ನು ತಡೆಯೋಣ, ಅಪರಾಧಿಗಳು ಮತ್ತು ಭ್ರಷ್ಟ ನಾಯಕರು ಚುನಾಯಿತರಾಗುವುದನ್ನು ನಿಲ್ಲಿಸೋಣ. ಈ ಪಟ್ಟಿಗೆ ಆಗೊಮ್ಮೆ ಈಗೊಮ್ಮೆ ಹೊಸ ಸೇರ್ಪಡೆಗಳೂ ಇರುತ್ತವೆ. ಉದಾಹರಣೆಗೆ, ಚುನಾವಣೆಯಲ್ಲಿ ಯಾವುದೇ ಜಾತೀಯ ಅಥವಾ ಕೋಮು ಉದ್ದೇಶಿತ ಮನವಿಯನ್ನು ನಿಷೇಧಿಸೋಣ, ಚುನಾವಣಾ ಪ್ರಚಾರದ ಭರವಸೆಗಳನ್ನು ಈಡೇರಿಸುವುದನ್ನು ಕಾನೂನುಬದ್ಧಗೊಳಿಸೋಣ, ಇತ್ಯಾದಿ.

ಇಂತಹ ಪ್ರಸ್ತಾಪಗಳನ್ನು ಕೇಳಿದಾಗಲೆಲ್ಲಾ, ಒಬ್ಬ ವ್ಯಕ್ತಿಯು ತನ್ನ ಕಳೆದುಹೋದ ಕೀಲಿಗಳನ್ನು ದೀಪದ ಕಂಬದ ಕೆಳಗೆ ಹುಡುಕುವ ಹಾಸ್ಯ ಸನ್ನಿವೇಶವೊಂದು ನನಗೆ ನೆನಪಾಗುತ್ತದೆ. ‘ಕೀಗಳನ್ನು ಎಲ್ಲಿ ಬೀಳಿಸಿಕೊಂಡಿರಿ?’ ಎಂದು ಕೇಳಿದಾಗ ಅವನು ಕತ್ತಲೆ ಕವಿದಿದ್ದ ದೂರದ ಸ್ಥಳದತ್ತ ಕೈಮಾಡಿ ತೋರುತ್ತಾನೆ. ‘ಆದರೆ ಅದನ್ನು ಇಲ್ಲಿ, ದೀಪದ ಕೆಳಗೆ ಏಕೆ ಹುಡುಕುತ್ತಿದ್ದೀರಿ?’ ಎಂದು ಪ್ರಶ್ನಿಸಿದಾಗ ‘ಇಲ್ಲಿ ಬೆಳಕು ಇದೆ, ಅದಕ್ಕೆ’ ಎಂದು ಅವರು ಮುಗ್ಧವಾಗಿ ಉತ್ತರಿಸುತ್ತಾರಂತೆ.

AV Eye Hospital ad

ರಾಜಕೀಯದ ದುಷ್ಪರಿಣಾಮಗಳಿಗೆ ಕಾನೂನು, ನ್ಯಾಯಾಂಗ ಅಥವಾ ಸಾಂಸ್ಥಿಕ ಪರಿಹಾರಗಳನ್ನು ಹುಡುಕುವವರು ಕೂಡ ಸಾಮಾನ್ಯವಾಗಿ ಆ ಮನುಷ್ಯನಂತೆಯೇ ಯಾವುದೇ ಸುಳಿವಿಲ್ಲದವರು ಮತ್ತು ಇನ್ನೂ ಆಘಾತಕಾರಿ ವಿಚಾರವೆಂದರೆ, ಈ ರೀತಿಯ ಮಧ್ಯಪ್ರವೇಶಿಕೆಗಳ ಬೇಡಿಕೆಗಳಲ್ಲಿ ಹೆಚ್ಚಿನವು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಜನರ ಅಗತ್ಯಗಳು ಮತ್ತು ಆಕಾಂಕ್ಷೆಗಳಿಗಿಂತಲೂ ಹೆಚ್ಚಿಗೆ ಗಣ್ಯರ ಹಿತಾಸಕ್ತಿಗಳನ್ನೂ ಕಾಪಿಡಲು ಬಯಸುತ್ತವೆ.

1996 ರಲ್ಲಿ, "ಮಧ್ಯಮ ವರ್ಗದ ಕಲ್ಪನೆಗಳನ್ನು ಮೀರಿ" ಶೀರ್ಷಿಕೆಯಲ್ಲಿ ಚುನಾವಣಾ ಸುಧಾರಣೆಗಳ ಬಗ್ಗೆ ಖಾರವಾದ ಲೇಖನವೊಂದನ್ನು ನಾನು ಬರೆದಿದ್ದೆ (ಸೆಮಿನಾರ್, ಸಂ. 440, ಏಪ್ರಿಲ್ 1996). ಅದರಿಂದಾಗಿ ನಾನು ಕೆಲವು ಸ್ನೇಹಿತರ ಸಹಾನುಭೂತಿಯನ್ನು ಕಳೆದುಕೊಂಡಿದ್ದೇನೆ ಎಂಬುದನ್ನು ಹೊರತುಪಡಿಸಿ ಅದರಿಂದೇನೂ ಬದಲಾವಣೆಗಳಾಗಲಿಲ್ಲ. ನಂತರ ನಾನು ರಾಜಕೀಯ ಸುಧಾರಣೆಗಳು: ಏನು, ಏಕೆ ಮತ್ತು ಹೇಗೆ ಎಂದು ವಿವರಿಸುವ ಹೆಚ್ಚು ಸಮಚಿತ್ತದಿಂದ ಕೂಡಿದ ಮತ್ತು ದೀರ್ಘವಾದ  ಲೇಖನವೊಂದನ್ನು ಬರೆದೆ. ಆದರೆ ಕಾನೂನು ಪರಿಹಾರದ ಮೂಲಕವೇ ದೇಶದ ಎಲ್ಲಾ ರಾಜಕೀಯ ಅನಿಷ್ಟಗಳಿಗೆ ಅಂತಿಮ ಪರಿಹಾರವನ್ನು ಹುಡುಕುವವರ - ಬಯಸುವವರ ಉತ್ಸಾಹವಂತೂ ಕಳೆಗುಂದಿಲ್ಲ.

ಮಾಂತ್ರಿಕ ಮದ್ದೊಂದರ ಹುಡುಕಾಟದಲ್ಲಿರುವ ರಾಷ್ಟ್ರ ನಮ್ಮದು. ನಾವು ಎಷ್ಟು ಆತುರದಲ್ಲಿದ್ದೇವೆ ಎಂದರೆ, ಮೊದಲು ನಮಗೆ ರೋಗವಿದೆಯೇ ಮತ್ತು ಅದಕ್ಕೆ ನಾವು ಹುಡುಕುತ್ತಿರುವ ರೀತಿಯ ಚಿಕಿತ್ಸೆ ಅಗತ್ಯವಿದೆಯೇ ಎಂದು ಕ್ಷಣಕಾಲ ನಿಂತು ನೋಡಲೂ ಕೂಡ ನಮಗೆ ಸಮಯವಿಲ್ಲ. ನಾವು ಎಷ್ಟು ಆತುರ ಮತ್ತು ಹತಾಶೆಯಲ್ಲಿದ್ದೇವೆಯೆಂದರೆ, ವೈದ್ಯನನ್ನಾಗಲೀ ಅಥವಾ ಔಷಧವನ್ನಾಗಲೀ ಪರೀಕ್ಷಿಸಲೂ ನಮಗೆ ಸಮಯವಿಲ್ಲದಂತಾಗಿದೆ. ನಮಗೆ ನಿಂತಲ್ಲೇ ಮತ್ತು ಈಗಲೇ ಪಕ್ಕಾ ಪರಿಹಾರಗಳು ಬೇಕಾಗಿವೆ.

ಚಿಕಿತ್ಸೆಯೇ ರೋಗಕ್ಕಿಂತ ಹಾನಿಕರ?
ಚುನಾವಣಾ ಪ್ರಚಾರದ ಸಮಯದಲ್ಲಿ ರಾಜಕೀಯ ಪಕ್ಷಗಳು "ತರ್ಕಬದ್ಧವಲ್ಲದ ಫ್ರೀಬಿ" ಗಳ ಭರವಸೆ ನೀಡುವುದನ್ನು ಅಥವಾ ಹಂಚುವುದನ್ನು ತಡೆಯಲು ಸುಪ್ರೀಂಕೋರ್ಟ್‌ಗೆ ಮಾಡಿರುವ ಮನವಿಯು ಈ ಕಥೆಯಲ್ಲಿ ಇತ್ತೀಚಿನದು. ಇಲ್ಲವೇ ಚುನಾವಣಾ ಆಯೋಗವು ಅವರ ಚುನಾವಣಾ ಚಿಹ್ನೆಯನ್ನು ರದ್ದುಗೊಳಿಸಬೇಕು. ಅರ್ಜಿಯ ಗುಣಮಟ್ಟ ಮತ್ತು ಅರ್ಜಿದಾರರ ಚಾರಿತ್ರ್ಯದ ಬಗ್ಗೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ವಕೀಲೆ ಮತ್ತು ಬಿಜೆಪಿಯ ಕೆಳಮಟ್ಟದ ನಾಯಕಿ ಅಶ್ವಿನಿ ಉಪಾಧ್ಯಾಯ ಅವರು ಕೋಮು ದ್ವೇಷವನ್ನು ಹರಡುವ ಆರೋಪ ಸೇರಿದಂತೆ ಹಲವು ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ ಎಂಬುದನ್ನು ಅರಿತರೆ ಸಾಕು. ಚುನಾವಣಾ ಬಾಂಡುಗಳ ಪ್ರಕರಣವು ರಾಜಕೀಯ ಸುಧಾರಣೆಗಳೊಂದಿಗೆ ನೇರವಾಗಿ ಸಂಬಂಧಿಸಿರುವುದನ್ನು ಕಂಡುಕೊಂಡ ಮೇಲೂ ಸುಪ್ರೀಂ ಕೋರ್ಟು ತನ್ನ ಅಮೂಲ್ಯ ಸಮಯವನ್ನು ಈ ಪ್ರಕರಣದ ವಿಚಾರಣಗಾಗಿ ವ್ಯಯಿಸಿಲ್ಲ ಎಂಬ ವಿಚಿತ್ರದ ಬಗ್ಗೆಯೂ ನಾವು ಗಮನ ಹರಿಸುವುದು ಬೇಡ. ಸುದ್ದಿ ವರದಿಗಳ ಪ್ರಕಾರ, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಎನ್. ವಿ. ರಮಣ ಅವರ ನೇತೃತ್ವದ ನ್ಯಾಯಪೀಠವು ಫ್ರೀಬಿಗಳನ್ನು ಮುಂದುವರಿಸಬೇಕೆ? ಬೇಡವೇ ಎಂಬುದರ ಕುರಿತು ʼನಿಲುವನ್ನು ತಳೆಯಲುʼ ಒಕ್ಕೂಟ ಸರ್ಕಾರವನ್ನು ಆಗ್ರಹಿಸಿದೆ ಮತ್ತು ಈ ಬಗ್ಗೆ ಮುಂದಿನ ವಿಚಾರಣೆಯನ್ನು ಆಗಸ್ಟ್ 3 ಕ್ಕೆ ನಿಗದಿಪಡಿಸಿದೆ.

App freebie

ಒಂದು ಕ್ಷಣ, "ಫ್ರೀಬೀಸ್" ಎಂಬೊಂದು ವ್ಯಾಪಕವಾಗಿ ಹರಡಿರುವ ರಾಜಕೀಯ ರೋಗವಿದೆ ಎಂದೇ ಊಹಿಸೋಣ. ಹಾಗಿದ್ದಲ್ಲಿ, ಅದರ ಬಗ್ಗೆ ಕಾಳಜಿ ವಹಿಸುವ ಯಾರಾದರೂ ಈ ಕೆಳಗಿನ ಪ್ರಶ್ನೆಗಳನ್ನು ಕೇಳಬೇಕು: ಈ ರೋಗವು ಎಷ್ಟು ಗಂಭೀರವಾಗಿದೆ? ಇದು ನನ್ನ ಆದ್ಯತೆಗಳ ಪಟ್ಟಿಯ ಮೇಲೆ ಬರಬೇಕೇ? ಇದನ್ನು ಗುಣಪಡಿಸಬಹುದೇ ಮತ್ತು ಚಿಕಿತ್ಸೆಯು ಕೈಗೆಟುಕುವಂತಿದೆಯೇ? ಅಥವಾ ರೋಗಕ್ಕಿಂತ ಚಿಕಿತ್ಸೆಯೇ ಹೆಚ್ಚು ದುಬಾರಿಯಾಗಿದ್ದರೆ ನಾನು ಅದರೊಂದಿಗೆಯೇ ಬದುಕಲು ಕಲಿಯಬೇಕೇ? ಅದನ್ನು ಗುಣಪಡಿಸಬೇಕಾದ್ದಲ್ಲಿ, ಸರಿಯಾದ ವೈದ್ಯರು ಯಾರು? ಮತ್ತು ಸರಿಯಾದ ಔಷಧ ಯಾವುದು?

ಈಗ, ಈ ವಿಚಾರಗಳ ಬಗ್ಗೆ ಕೇವಲ ಒಂದು ನಿಮಿಷ ಯೋಚಿಸಿದರೂ, ರಾಜಕೀಯ ಪಕ್ಷಗಳ ಚಿಹ್ನೆಯನ್ನು ರದ್ದುಗೊಳಿಸುವುದು ಮತ್ತು ಆ ಮೂಲಕ ಚುನಾವಣಾ ಯಶಸ್ಸಿನ ಯಾವುದೇ ಅವಕಾಶವನ್ನು ಕಸಿಯುವುದು (ಫ್ರೀಬೀಸ್‌ ಎಂಬ) ರೋಗಕ್ಕಿಂತ ಕೆಟ್ಟದಾದ ಔಷಧಿ ಎಂದು ನಿಮಗೇ ತಿಳಿಯುತ್ತದೆ. ಪ್ರಜಾಪ್ರಭುತ್ವದಲ್ಲಿ ಯಾರೂ ಇಂತಹ ಕೊಡಲಿಯನ್ನು ಮಸಿಯಬಾರದು, ಏಕೆಂದರೆ, ಆ ವ್ಯಕ್ತಿ ಅಥವಾ ಸಂಸ್ಥೆಯೇ ಜನರಿಗಿಂತ ಹೆಚ್ಚು ಶಕ್ತಿಶಾಲಿ ಆಗಿಬಿಡುತ್ತಾರೆ. ಭಾರತದ ಚುನಾವಣಾ ಆಯೋಗವು ಈಗಾಗಲೇ ಕಳೆದುಕೊಂಡಿರುವುದಕ್ಕಿಂತ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಕೊಳದುಕೊಳ್ಳಬಾರದು ಎಂದು ನಾವು ಬಯಸದರೆ ಅಂತಹ ಅಧಿಕಾರಗಳನ್ನು ಚುನಾವಣಾ ಆಯೋಗಕ್ಕೆ ಎಂದಿಗೂ ನೀಡಬಾರದು. ಇದು "ಮತದಾರರೇ ನಿರ್ಧರಿಸಬೇಕಾದ ಪ್ರಶ್ನೆ" ಎಂದು ಭಾರತದ ಚುನಾವಣಾ ಆಯೋಗವು ತನ್ನ ಅಫಿಡವಿಟ್‌ ಮೂಲಕ ಸುಪ್ರೀಂಕೋರ್ಟ್‌ಗೆ ಹೇಳಿರುವುದು ಈ ರೀತಿಯಲ್ಲಿ ಸರಿಯೇ ಇದೆ.

ಹಣಕಾಸು ಆಯೋಗಕ್ಕೆ (Finance Commission) ಈ ಜವಾಬ್ದಾರಿಯನ್ನು ವಹಿಸುವ ಬಗ್ಗೆ ಮುಖ್ಯನ್ಯಾಯಾಧೀಶರ ನೇತೃತ್ವದ ಪೀಠ ಪರಿಗಣಿಸಿತ್ತು ಎಂಬ ಸುದ್ದಿಯು ಬಿತ್ತರವಾಗಿತ್ತು. ಆದರೆ ಯಾವುದೇ ಸಂಸ್ಥೆಯು ಅಂತಹ ಅಧಿಕಾರವನ್ನು ಈ ರೀತಿಯಾಗಿ ಮನಬಂದಂತೆ ಬಳಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಬೇಕು. ಒಂದಿಲ್ಲೊಂದು ನೆಪವೊಡ್ಡಿ ರಾಜಕೀಯ ವಿರೋಧಿಗಳು ಚುನಾವಣೆ ಸ್ಪರ್ಧಿಸದಂತೆ ಅನರ್ಹಗೊಳಿಸುವುದು ಪ್ರಜಾಪ್ರಭುತ್ವವನ್ನು ಕೊಲ್ಲಲು ಸಾಮಾನ್ಯವಾಗಿ ಬಳಸಲಾಗುವ ವಿಧಾನಗಳಲ್ಲಿ ಒಂದಾಗಿದೆ ಎಂಬುದನ್ನು ನಾವು ಮರೆಯಬಾರದು. ಅಂತಹ ಕಿಟಕಿಯೊಂದು ನಮ್ಮ ದೇಶದಲ್ಲಿ ತೆರೆದಿಲ್ಲ. ಅದನ್ನು ಎಂದಿಗೂ ತೆರೆಯಬಾರದು ಕೂಡ.

‘ಫ್ರೀಬಿ’ ಎನ್ನುವುದೊಂದು ರೋಗವೇ?
ಹಾಗಾದರೆ ರೋಗವನ್ನು ಹೇಗೆ ಗುಣಪಡಿಸುವುದಾದರೂ ಹೇಗೆ? ಈ ಪ್ರಶ್ನೆಯನ್ನು ನಾವು ಮುಂದಿಟ್ಟುಕೊಂಡು ಮತ್ತೊಂದು ಚಿಕಿತ್ಸೆಗಾಗಿ ಹುಡುಕಾಡುವ ಮೊದಲು ಒಂದರ ಬಗ್ಗೆ ಚಿಂತಿಸೋಣ: ಪ್ರಜಾಪ್ರಭುತ್ವವೊಂದರಲ್ಲಿ, ರಾಜಕೀಯವು ಸ್ವಯಂ-ಆಡಳಿತಕ್ಕೆ ಒಳಪಟ್ಟಿರಬೇಕು. ನೀವು ಪ್ರಜಾಪ್ರಭುತ್ವವನ್ನು ಬಾಹ್ಯ ಬೆದರಿಕೆಗಳಿಂದ, ಕ್ಷಣಿಕ ಲೋಪಗಳಿಂದ, ವೈಯಕ್ತಿಕ ಹುಚ್ಚಾಟಿಕೆಗಳಿಂದ ಅಥವಾ ಬಹುಸಂಖ್ಯಾತರ ಅತಿರೇಕಗಳಿಂದ ರಕ್ಷಿಸಬಹುದೇ ಹೊರತು ಜನರಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಾಧ್ಯವಿಲ್ಲ.

'ಫ್ರೀಬಿ'ಗಳು ಜನರನ್ನು ಆಕರ್ಷಿಸಿದರೆ, ನೀವು ಅವರಿಗೆ ಅರಿವುಂಟುಮಾಡಬಹುದು. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಬೇಕು ಎಂಬುದನ್ನು ಕಡ್ಡಾಯಗೊಳಿಸಿ ಈ ಭರವಸೆಗಳ ಟೊಳ್ಳುತನವನ್ನು ಬಹಿರಂಗಪಡಿಸಬಹುದು. ಅಸಾಧ್ಯವಾದ ಭರವಸೆಗಳನ್ನು ನೀಡುವ ಈ ಪಕ್ಷಗಳು ಮತ್ತು ನಾಯಕರನ್ನು ಪ್ರಶ್ನಿಸಲು ನೀವು ಮಾಧ್ಯಮಗಳಿಗೆ ಶಕ್ತಿತುಂಬಬಹುದು. ಆದರೆ ಬಹುಪಾಲು ಜನರು ದೀರ್ಘಾವಧಿಯಲ್ಲಿ ಕ್ರಮವೊಂದನ್ನು ಆಯ್ದುಕೊಂಡರೆ, ಪ್ರಜಾಪ್ರಭುತ್ವವನ್ನೇ ಕೊನೆಗಾಣಿಸುವುದನ್ನು ಹೊರತುಪಡಿಸಿ, ಅದರ ಬಗ್ಗೆ ನೀವು ಏನನ್ನೂ ಮಾಡಲು ಸಾಧ್ಯವಿಲ್ಲ.

ಅಂತಿಮವಾಗಿ, 'ರೋಗ'ದ ಬಗ್ಗೆಯೇ ಒಂದು ಯೋಚನೆ. 'ಫ್ರೀಬಿ' ನೀಡುವುದನ್ನು ಒಂದು ಸಮಸ್ಯೆ ಎಂದು ನಾವೇಕೆ ಭಾವಿಸುತ್ತೇವೆ? ಮೇಲುನೋಟಕ್ಕೆ, ಈ ನೀತಿಗಳು ಬೇಜವಾಬ್ದಾರಿಯುತವಾಗಿಯೂ ಮತ್ತು ರಾಷ್ಟ್ರೀಯ ಆರ್ಥಿಕ ಸಂಪನ್ಮೂಲಗಳ ವ್ಯರ್ಥ ಬಳಕೆಗೂ ಕಾರಣವಾಗುತ್ತವೆ. ಉಚಿತವಾಗಿ ವಿದ್ಯುತ್ ನೀಡುವುದು ಒಂದು ಕೆಟ್ಟ ನೀತಿ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಬೇಜವಾಬ್ದಾರಿಯುತವಾಗಿ ಸಾಮಾನ್ಯ ಜನರಿಗೆ ಫ್ರೀಬಿಗಳನ್ನು ನೀಡುವ ಆರ್ಥಿಕ ನೀತಿಗಳ ಬಗ್ಗೆ ಮಾತ್ರವೇ ನಾವು ಏಕೆ ತಲೆಕೆಡಿಸಿಕೊಳ್ಳುತ್ತೇವೆ ಎಂಬುದು ನನಗೆ ಆಶ್ಚರ್ಯ? ತೆರಿಗೆ ಕಡಿತ, ವಿಂಡ್‌ಫಾಲ್ ಲಾಭಗಳು (Windfall gains ಎಂದರೆ ಅನಿರೀಕ್ಷಿತವಾದ ಲಾಭಗಳು. ಲಾಟರಿ ಗೆಲ್ಲುವುದು, ಪದಾರ್ಥಗಳ ಪೂರೈಕೆ ಕುಸಿದು ಅದರಿಂದ ಗಳಿಸಲಾದ ಲಾಭಗಳು ಇವಕ್ಕೆ ಉದಾಹರಣೆ) ಮತ್ತು ಅತ್ಯಂತ ಶ್ರೀಮಂತರ ಸಾಲಗಳನ್ನು ಮನ್ನಾ ಮಾಡುವ ದೊಡ್ಡ ಯೋಜನೆಗಳ ಬಗ್ಗೆ ನಾವು ಏಕೆ ಚಿಂತಿಸುವುದಿಲ್ಲ?

‘ಫ್ರೀಬಿ’ಗಳ ಈ ‘ತರ್ಕಹೀನ’ ಭರವಸೆಗಳಿಗೆ ಮರುಳಾಗುವ ಬಡ ಮತದಾರರು ಅಷ್ಟೊಂದು ತರ್ಕಹೀನರಲ್ಲದಿರಬಹುದೇ? ಪ್ರಾಯಶಃ ಅವರು ಪ್ರಜಾಪ್ರಭುತ್ವದ ತರ್ಕವನ್ನು ಮತ್ತು ಟ್ರಿಕಲ್ ಡೌನ್ ಅರ್ಥಶಾಸ್ತ್ರದ (Trickle – down economics ಶ್ರೀಮಂತರಿಗೆ ನೀಡಲಾಗುವ ರಿಯಾಯಿತಿಗಳು ಮತ್ತು ಲಾಭಗಳು ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಬಂದು ತಲುಪುತ್ತದೆ ಎಂದು ವಾದಿಸುವ ಒಂದು ಆರ್ಥಶಾಸ್ತ್ರ ಸಿದ್ದಾಂತ) ಅಸಾಧ್ಯತೆಯನ್ನು ತಜ್ಞರಿಗಿಂತ ಚೆನ್ನಾಗಿಯೇ ಅರ್ಥಮಾಡಿಕೊಳ್ಳುತ್ತಾರೆ. ಸಮಾನ್ಯವಾಗಿ ಜಾರಿಯಾಗುವ 'ತರ್ಕಬದ್ಧ' ನೀತಿಗಳು ಹೇಗಿದ್ದರೂ ಅವರಿಗೆ ಹೆಚ್ಚಿನದನ್ನು ತಲುಪಿಸುವುದಿಲ್ಲ ಎಂದರಿತು, ಇಲ್ಲಿ ಮತ್ತು ಈಗ ಪಡೆದುಕೊಂಡಷ್ಟೇ ಬಂತು ಎಂದು ಪ್ರಾಯಶಃ ಅವರು ಅರಿತಿರಬೇಕು. ವಾಸ್ತವದಲ್ಲಿ ಅವರು ಪಡೆಯಬಹುದಾದದ್ದು ಮತ್ತು ಹಿಡಿದಿಟ್ಟುಕೊಳ್ಳಬಹುದಾದದ್ದು ʼಫ್ರೀಬಿ'ಗಳೆಂದು ಕರೆಯಲಾಗುವ ಕೆಲವು ನೇರ-ಮೂರ್ತ ಸರಕುಗಳೇ ಆಗಿರುವುದರಿಂದ, ಅವರು ಅದಕ್ಕೇ ಮತ ಚಲಾಯಿಸುತ್ತಾರೋ. ಫ್ರೀಬಿಗಳ ಬಗ್ಗೆ ಚಿಂತಿಸುವವರು, ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ಹಿಂದೊಮ್ಮೆ ವಿವರಿಸಿದಂತೆ "ತರ್ಕಬದ್ಧ ಮೂರ್ಖ”ರಾಗಿರಬಹುದೇ?

ಅನುವಾದ: ಶಶಾಂಕ್‌ ಎಸ್‌ ಆರ್‌, ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಸಮಾಜ ವಿಜ್ಞಾನ ವಿಭಾಗದಲ್ಲಿ ಪಿ.ಹೆಚ್.ಡಿ ಸಂಶೋಧನಾರ್ಥಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app