ಮೋದಿ ಪ್ರಭುತ್ವದಡಿ ನಲುಗುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ

Freedom of expression

ನರೇಂದ್ರ ಮೋದಿ ಮತ್ತು ಕಂಪನಿಯ ದುರಾಡಳಿತದಲ್ಲಿ ಐಪಿಎಲ್ ಇಂಡಿಯಾ ಪ್ರಕಾಶಿಸುತ್ತಿದ್ದರೆ, ಬಿಪಿಎಲ್ ಇಂಡಿಯಾ ಮುಳುಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಬಡವರನ್ನು ನಿರ್ಲಕ್ಷಿಸಿದರೆ ಸಾಮಾಜಿಕ ಮಾಧ್ಯಮಗಳು ಸಮಾನಾಂತರ ಮಾಧ್ಯಮವಾಗಿ ಹೊರಹೊಮ್ಮಿ ರಾಜಕೀಯ ಕ್ರೋಢೀಕರಣವನ್ನು ಸುಗಮಗೊಳಿಸಿವೆ

1990ರ ದಶಕದಲ್ಲಿ ಹಲವಾರು ಹಗರಣಗಳು ಮತ್ತು ವಿವಾದಗಳು ಪತ್ರಿಕೆಗಳಲ್ಲಿ ವರದಿಯಾದವು ಮತ್ತು ಅನೇಕ ನಾಯಕರು, ಅಧಿಕಾರಿಗಳು, ಉದ್ಯಮಿಗಳು ಮತ್ತು ಇತರರು ತಮ್ಮ ಜನವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಆಚರಣೆಗಳಿಗೆ ಭಾರೀ ಬೆಲೆ ತೆರಬೇಕಾಯಿತು. ರಾಜೀವ್ ಗಾಂಧಿ ಅವರು ಬೋಫೋರ್ಸ್ ಮತ್ತು ಫೇರ್‍ಫ್ಯಾಕ್ಸ್ ಹಗರಣಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ರಾಜೀವ್‍ ಗಾಂಧಿಯವರ ಹತ್ಯೆಯ ನಂತರ ಭಾರತದಲ್ಲಿ ರಾಜಕೀಯ ಅನಿಶ್ಚಿತತೆಯ ಮತ್ತೊಂದು ಯುಗ ಆರಂಭವಾಯಿತು. ಭಾರತದಲ್ಲಿ ಸಾರ್ವಜನಿಕ ಹಿತಾಸಕ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದೇವತೆ ರಕ್ಷಕನಾಗಿ ಪತ್ರಿಕಾ ಮಾಧ್ಯಮ ಜವಾಬ್ದಾರಿಯುತ ಪಾತ್ರವನ್ನು ವಹಿಸಿದೆ.

ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳು ಹಲವು ಸವಾಲಿನ ಸಂದರ್ಭಗಳಲ್ಲಿ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ನಿರ್ಣಾಯಕ ಪಾತ್ರ ವಹಿಸಿವೆ. ಅರವಿಂದ ಕೇಜ್ರಿವಾಲ್ ಅವರು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಜಾತಿ ಬಲ ಮತ್ತು ಧನಬಲವಿಲ್ಲದೆ ದೆಹಲಿಯ ಮುಖ್ಯಮಂತ್ರಿಯಾದರು. ತದನಂತರ ಪಂಜಾಬ್ ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರವನ್ನು ಸ್ಥಾಪಿಸಿದರು. ಯುಪಿಎ-2 ಸರ್ಕಾರವು ಸ್ಪಷ್ಟ ಬಹುಮತವಿಲ್ಲದೇ ಆಂತರಿಕ ಜಂಜಾಟಗಳಿಂದ ರಾಜಕೀಯವಾಗಿ ವಿಫಲಗೊಂಡಿತು. ಇದರ ಲಾಭವನ್ನು ಪಡೆದ ನರೇಂದ್ರ ಮೋದಿ 2014ರಲ್ಲಿ ಹೊಸ ಕನಸುಗಳು ಮತ್ತು ಭರವಸೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಜೆಗಳ ಮನಸ್ಸಿನಲ್ಲಿ ಬಿತ್ತಿ ರಾಜ್ಯಾಧಿಕಾರ ಪಡೆದರು. ಈ ಸರ್ಕಾರ ಮನುವಾದಿಗಳು ಮತ್ತು ಬಂಡವಾಳಶಾಹಿಗಳ ಹಿತರಕ್ಷಣೆ ಮಾಡಿ ಮೂಲನಿವಾಸಿಗಳು ಮತ್ತು ರೈತರು, ಕಾರ್ಮಿಕರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರನ್ನು ಕಡೆಗಣಿಸಿದೆ.

ಬಿಪಿಎಲ್ ಇಂಡಿಯಾ ಮುಳುಗುತ್ತಿದೆ

ಮೋದಿ ಮತ್ತು ಕಂಪನಿಯ ದುರಾಡಳಿತದಲ್ಲಿ ಐಪಿಎಲ್ ಇಂಡಿಯಾ ಪ್ರಕಾಶಿಸುತ್ತಿದ್ದರೆ, ಬಿಪಿಎಲ್ ಇಂಡಿಯಾ ಮುಳುಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಬಡವರನ್ನು ನಿರ್ಲಕ್ಷಿಸಿದರೆ ಸಾಮಾಜಿಕ ಮಾಧ್ಯಮಗಳು ಸಮಾನಾಂತರ ಮಾಧ್ಯಮವಾಗಿ ಹೊರಹೊಮ್ಮಿ ಸಾಮಾಜಿಕ – ರಾಜಕೀಯ ಜಾಲ ನಿರ್ಮಾಣ ಮತ್ತು ರಾಜಕೀಯ ಕ್ರೋಢೀಕರಣವನ್ನು ಸುಗಮಗೊಳಿಸಿದೆ.

ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ನವಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಕ್ರಿಯಾಶೀಲವಾಗಿ ಬಳಸಿಕೊಂಡು ಹಿಂದುತ್ವ ಅಜೆಂಡಾವನ್ನು ದೇಶದಲ್ಲಿ ಜಾರಿಗೊಳಿಸುವ ಭರವಸೆ ನೀಡಿ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿರುವುದು ಇತಿಹಾಸದ ಭಾಗವೇ ಆಗಿದೆ. ಮೋದಿಯವರು ಮೇಲ್ಜಾತಿ ಪ್ರಭುತ್ವ ಮತ್ತು ಬಂಡವಾಳಶಾಹಿ ಪ್ರಭುತ್ವಗಳ ಪರಮರಕ್ಷಕರಾಗಿ ಆಡಳಿತ ನಡೆಸಿ ದೇಶದ ಮೂಲನಿವಾಸಿಗಳು ಮತ್ತು ದಮನಿತ ಸಮುದಾಯಗಳ ಹಿತವನ್ನು ಕಡೆಗಣಿಸಿದರು.

ಹಲವಾರು ಬಗೆಯ ಮಾನವ ಹಕ್ಕುಗಳ ದಮನಕಾರಿ ಬೆಳವಣಿಗೆಗಳು ದೇಶದ ಉದ್ದಗಲಕ್ಕೂ ಪ್ರಭುತ್ವದ ಬಲದಿಂದ ಜರುಗಿದವು. ಜೆಎನ್‍ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಮೇಲಿನ ಹಲ್ಲೆ, ಅಧಿಕಾರಶಾಹಿಯ ನಿರಂತರ ವಿಜೃಂಭಣೆ, ಪಾಟಿಯಾಲ ಹೌಸ್‍ನಲ್ಲಿ ಆಡಳಿತ ಪಕ್ಷನಿಷ್ಟ ವಕೀಲರ ದುರ್ನಡತೆ, ಏಕತ್ವವಾದಿಗಳಿಂದ ಬಹುತ್ವಕ್ಕೆ ಧಕ್ಕೆ, ಹಿಂದುತ್ವವಾದಿಗಳಿಂದ ಧರ್ಮನಿರಪೇಕ್ಷತೆಗೆ ಸಂಚಕಾರ, ಪೌರತ್ವ ತಿದ್ದುಪಡಿ ಮಸೂದೆಯ ಹೆಸರಿನಲ್ಲಿ ಮೂಲನಿವಾಸಿಗಳ ಅತಂತ್ರ, ಗೋರಕ್ಷಣೆಯ ಹೆಸರಿನಲ್ಲಿ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ಒಳಗೊಳ್ಳುವ ಅಭಿವೃದ್ಧಿಗೆ ಬದಲಾಗಿ ದಮನಿತರನ್ನು ಮುಖ್ಯವಾಹಿನಿಯಿಂದ ಹೊರದಬ್ಬುವಿಕೆ, ಅಭಿವ್ಯಕ್ತ ಸ್ವಾತಂತ್ರ್ಯ ಪ್ರತಿಪಾದಕರನ್ನು ಜೈಲಿಗೆ ದಬ್ಬುವುದು, ಯೋಗಿಯವರ ಬುಲ್ಡೋಜರ್ ಪ್ರಭುತ್ವವನ್ನು ವಿರೋಧಿಸುವ ಕನಿಷ್ಠ ಬದ್ಧತೆ ಇಲ್ಲದಿರುವುದರಿಂದ ಪ್ರಸ್ತುತ ಕೇಂದ್ರ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ.

Image
ಭೀಮಾ ಕೊರೆಗಾಂವ್‌ ಪ್ರಕರಣದ ಬಂಧಿತರು
ಭೀಮಾ ಕೊರೆಗಾಂವ್‌ ಪ್ರಕರಣದ ಬಂಧಿತರು

    ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಕಬೀರ್ ಕಲಾಮ್ ಮಂಚ್‍ದ ಪ್ರಮುಖ ಸಂಘಟಕರಾಗಿದ್ದು ಎಲ್ಗಾರ್ ಪರಿಷತ್ ಪ್ರಕರಣದಲ್ಲಿ 2018ರಿಂದ ನ್ಯಾಯಾಂಗ ಬಂಧನ ಮತ್ತು ಎನ್‍ಐಎ ವಿಚಾರಣೆಗೆ ಗುರಿಯಾಗಿದ್ದಾರೆ. ತದನಂತರ ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಜ್ಯೋತಿ ಜಗತಾಪ್, ಅರ್ನಾಬ್ ಗೋಸ್ವಾಮಿ, ಗೌತಮ್ ನವ್ಲಾಖಾ, ಆನಂದ್ ತೇಲ್‍ತುಂಬ್ಡೆ, ಸ್ಟಾನ್ ಸ್ವಾಮಿ, ವರವರರಾವ್ ಮೊದಲಾದ ಚಿಂತಕರು ಮತ್ತು ಹೋರಾಟಗಾರರನ್ನು ಹಲವಾರು ಗಂಭೀರ ಪ್ರಕರಣಗಳಲ್ಲಿ ಸಿಲುಕಿಸಿರುವುದಾಗಿ ಪ್ರಗತಿಪರ ಚಳವಳಿಗಾರರು ಅಭಿಪ್ರಾಯಪಟ್ಟಿದ್ದಾರೆ. ಇವರ ಅರ್ಜಿಗಳನ್ನು ನ್ಯಾಯಾಲಯಗಳಲ್ಲಿ ಸಮರ್ಪಕವಾಗಿ ನಿಭಾಯಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸಕಾಲಿಕ ಮತ್ತು ಜವಾಬ್ದಾರಿಯುತ ಕ್ರಮಗಳನ್ನು ಕೈಗೊಂಡಿಲ್ಲವೆಂದು ಇವರ ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಮೀರನ್ ಹೈದರ್ ಎಂಬ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸಾಮಾಜಿಕ ಹೋರಾಟಗಾರ್ತಿ, ಅಶಿಫ್ ಇಕ್ಬಾಲ್ ತನ್ಹಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಅಶಿಫ್ ಇಕ್ಬಾಲ್ ತನ್ಹಾ ಎಂಬ ಮತ್ತೋರ್ವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸಾಮಾಜಿಕ ಹೋರಾಟಗಾರರು ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯನ್ವಯ ಬಂಧನಕ್ಕೆ ಗುರಿಯಾಗಿದ್ದಾರೆ. ಇವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದೆಯೆಂದು ಹೋರಾಟಗಾರರು ಟೀಕಿಸಿದ್ದಾರೆ. ಅಂತೆಯೇ ಹೈದರ್ ಎಂಬ ಮತ್ತೋರ್ವ ಸಾಮಾಜಿಕ ಕಾರ್ಯಕರ್ತ ಸೆರೆಮನೆಯಲ್ಲಿ ಉತ್ತಮ ಆಹಾರ, ಉಡುಪು ಮತ್ತು ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗಿ ನರಳುತ್ತಿರುವ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗಿದೆ.

ಆದಾಗ್ಯೂ “ಈ ದೇಶದಲ್ಲಿ ನೀವು ಯಾರನ್ನಾದರೂ ಆರಿಸಿ ಜೈಲಿಗೆ ತಳ್ಳಲು ಸಾಧ್ಯವಿಲ್ಲ ಮತ್ತು ನೋವುಂಡವರು ನ್ಯಾಯಕ್ಕಾಗಿ ಆಗ್ರಹಿಸಿ ವಕೀಲರನ್ನು ಸಂಪರ್ಕಿಸುವುದನ್ನು ನಿರಾಕರಿಸಲು ಕಾನೂನು ಅವಕಾಶ ಮಾಡಿಕೊಡುವುದಿಲ್ಲ” ಎಂದು ನ್ಯಾಯಮೂರ್ತಿ ವಿಭು ಬಖ್ರು ನುಡಿದಿರುವುದು ಪ್ರಗತಿಪರ ಹೋರಾಟಗಾರರಲ್ಲಿ ಹೊಸ ಭರವಸೆ ತುಂಬಿದೆ. ರೆಹಮಾನ್ ಎಂಬುವರ ವಕೀಲರು ಅಮಿತ್ ಭಲ್ಲಾ ತನ್ನನ್ನು ಭೇಟಿಯಾಗಲು ಮತ್ತು ವೀಡಿಯೋ ಮೀಟ್ ಸೌಲಭ್ಯ ಪಡೆಯಲು ಹಲವಾರು ಈಮೇಲ್ ಗಳನ್ನು ಕಳುಹಿಸಿದ್ದರೂ ಸಾಧ್ಯವಾಗಲಿಲ್ಲವೆಂದು ಹೇಳಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕನ್ನಡಿಯಾಗಿದೆ.

ಪತ್ರಕರ್ತರ ಬಂಧನ, ಅಘೋಷಿತ ತುರ್ತುಪರಿಸ್ಥಿತಿ

ಜೆಎನ್‍ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕರಾದ ಉಮರ್ ಖಲೀದ್‍ನನ್ನು ವ್ಯವಸ್ಥೆ ಭಯೋತ್ಪಾದಕನನ್ನಾಗಿ ಬಿಂಬಿಸಿರುವುದು ಅವಿವೇಕದ ಪರಮಾವಧಿಯಾಗಿದೆ. ನತಾಶ ನರ್ವಾಲ್ ಮತ್ತು ದೇವಾಂಗನ ಖಲಿತಾ ಎಂಬ ಸಾಮಾಜಿಕ ಹೋರಾಟಗಾರರು ಕೊಲೆ ಪ್ರಯತ್ನ, ದೊಂಬಿ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಡಿ ಬಹಳಷ್ಟು ಹಿಂಸೆಗೆ ಗುರಿಯಾಗಿದ್ದಾರೆ. ಸಿದ್ದಿಕ್ ಕಪ್ಪನ್, ಅಶಿಫ್ ಸುಲ್ತಾನ್, ಪೆಟ್ರಿಷಿಯಾ ಮುಖಿಮ್ ಮೊದಲಾದ ಪತ್ರಕರ್ತರು ವಿವಿಧ ಮೊಕದ್ದಮೆಗಳನ್ನು ಎದುರಿಸುತ್ತಲೇ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿದ್ದಾರೆ.   

ಇದನ್ನು ಓದಿದ್ದೀರಾ? ಮಹಾ ಬಿಕ್ಕಟ್ಟು| ಶಾಸಕರ ಅನರ್ಹಗೊಳಿಸುವ ಪ್ರಕ್ರಿಯೆಗೆ ಸುಪ್ರೀಂಕೋರ್ಟ್‌ ತಡೆ

ಪ್ರಸ್ತುತ ಸಂದರ್ಭದಲ್ಲಿ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇರುವುದಾಗಿ ಹಿರಿಯ ನಾಯಕ ಕಪಿಲ್‍ಸಿಬಲ್ ಎಚ್ಚರಿಸಿದ್ದಾರೆ. ವಿಶೇಷವಾಗಿ ಆಲ್ಟ್‌ ನ್ಯೂಸ್ ಪತ್ರಿಕೆಯ ಸಹಸಂಸ್ಥಾಪಕ ಮೊಹಮದ್ ಜುಬೇರ್ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‍ವಾಡ್ ಬಂಧನದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ತೀವ್ರ ಹಾನಿಯುಂಟಾಗಿರುವುದಾಗಿ ಸಿಬಲ್ ವಿಷಾದಿಸಿದ್ದಾರೆ. ಇತ್ತೀಚೆಗೆ ಸಂವಿಧಾನಕ್ಕೆ ಆಳುವ ಪಕ್ಷ ಉತ್ತರದಾಯಿಯಲ್ಲ ಎಂದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಂಗ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿರುವುದು ಅತ್ಯಂತ ಭರವಸೆ ಮೂಡಿಸಿದೆ.

ನಿಮಗೆ ಏನು ಅನ್ನಿಸ್ತು?
5 ವೋಟ್