ಜಿ ರಾಜಶೇಖರ ಬರಹ | ನಮ್ಮ ಕಾಲದ ತವಕ ತಲ್ಲಣಗಳು: 'ಮತ್ತೊಬ್ಬನ ಸ್ವಗತ'

ಕನ್ನಡದ ಪರಂಪರೆ, ಕನ್ನಡಿಗರ ಸಹಿಷ್ಣುತೆ ಮುಂತಾದ ಸದ್ಗುಣಗಳನ್ನು ಹೇಳಲು ಅನೇಕ ಲೇಖಕರು, ‘ಕನ್ನಡದ ಮನಸ್ಸು' ಎಂಬ ನುಡಿಗಟ್ಟು ಬಳಸುತ್ತಾರೆ; ಈ ಸದ್ಗುಣಗಳೆಲ್ಲ ಕನ್ನಡಿಗರಲ್ಲಿ ಇರುವುದೇ ನಿಜ ಎಂದು ಒಪ್ಪಿಕೊಂಡರೂ, ಕನ್ನಡದ 'ಹುಟ್ಟು ಹೋರಾಟಗಾರರ' ವರ್ತನೆಯನ್ನು, ಈಗೀಗ ಅದು ಪಡೆದುಕೊಳ್ಳುತ್ತಿರುವ ಜನಸಮ್ಮತಿಯನ್ನು ಹೇಗೆ ವಿವರಿಸುವುದು?

ಮಾತು ಮುಗಿಯುವ ಮೊದಲು
ನನ್ನೊಳಗಿರುವ ನನಗೆ
ನಾ ದನಿಯಾಗಲೇಬೇಕೆಂದು
ಹೊರಟು
ತಿಳಿದ ಜನ 'ಅದೋ ಬೋರು'
ಎಂದು ಮೈಲಿ ಮೈಲಿಯಾಚೆ
ಗಲ್ಲಿ ಬಿದ್ದು
ಸ್ವಗತ ಚಕ್ರವರ್ತಿ
ಯಾದೆ.
- ಎ ಕೆ ರಾಮಾನುಜನ್ ('ಮಾತು ಮುಗಿಯುವ ಮೊದಲು')

ನಾನು ತಿಂದರೆ ನೊಣವ ತೋಟ ಹುಲುಸಾಗುವುದೆ?
ಆಯ್ಕೆ ಬಾಳೆಗೆ ಮತ್ತೆ ಕಾಯಕಲ್ಪ
ನಾ ಮುಳುಗಿದರೆ ತೆಂಗು ಕಂಗಾಲೆ? ಹಲಸಿಗೆ ಅಲಸೆ
ಇದನರಿಯಲೂ ಕಳೆದೆ ಬಹಳ ತೆರಪ
- ಗೋಪಾಲಕೃಷ್ಣ ಅಡಿಗ ('ಕೂಪಮಂಡೂಕ')

'ನಮ್ಮ ಕಾಲದ ತವಕ ತಲ್ಲಣಗಳು' ಎಂಬ ವಿಷಯದ ಬಗ್ಗೆ ಬರೆಯಲು ಶೂದ್ರ ನನ್ನನ್ನು ಒತ್ತಾಯಿಸಿದ್ದಾರೆ. ಎಲ್ಲ ಗೋಳುಗಳನ್ನೂ ಒಟ್ಟಿಗೇ ಹೇಳಬಯಸುವ ಇಂತಹ ನುಡಿಗಟ್ಟುಗಳ ಮಹತ್ವಾಕಾಂಕ್ಷೆಯೇ ಸಂದೇಹಾಸ್ಪದವಾಗಿದೆ. ಅದೂ ಅಲ್ಲದೆ, ಸೆಮಿನಾರು ಕೊರೆತಕ್ಕೆ ಮಾತ್ರ ಯೋಗ್ಯವಾಗಿರುವ ಈ ವಿಷಯದ ಬಗ್ಗೆ ಕೂತು ಬರೆಯುವುದು ಕಷ್ಟ. 'ನಮ್ಮ ಕಾಲ' ಎಂಬ ಪದ ಪ್ರಯೋಗದ ಬಹುವಚನ, ಈ ಕಾಲವನ್ನೂ ಒಟ್ಟು ಸಮುದಾಯವನ್ನೂ ಒಳಗೊಂಡಿರುವ ಭ್ರಮೆಯನ್ನೇನೋ ಹುಟ್ಟಿಸುತ್ತದೆ. ಆದರೆ ಯಥಾರ್ಥವಾಗಿ ಹಾಗೆ ಮಾತಿನ ಸೊಲ್ಲೆತ್ತಿಕೊಂಡು ನಾವು ಹೇಳಿಕೊಳ್ಳುವುದು ನಮ್ಮ ನಮ್ಮ ವ್ಯಕ್ತಿಗತ ತವಕ ತಲ್ಲಣಗಳನ್ನೇ ಅಲ್ಲವೆ? ಒಬ್ಬ ಸರಕಾರೀ ಅಧಿಕಾರಿ, ಐಟಿ ಎಂಜಿನಿಯರ್, ಕಾಲ್ ಸೆಂಟರ್ ನೌಕರ, ಬ್ಯಾಂಕ್ ಆಫೀಸರ್, ತಾಲ್ಲೂಕು ಕಚೇರಿ ಗುಮಾಸ್ತ, ಎರಡು ಎಕ್ರೆ ಅಡಿಕೆ ಬಾಗಾಯ್ತಿನ ಕೃಷಿಕ, ಅವನ ಕೂಲಿ ಕೆಲಸದವ – ಇವರೆಲ್ಲರ ತವಕ ತಲ್ಲಣಗಳು ಒಂದೇ ಬಗೆಯವಾಗಿರಲು ಸಾಧ್ಯವಿಲ್ಲ. ಇಂತಹ ತಿಳಿವಳಿಕೆ ಕಾಮನ್ ಸೆನ್ಸ್ ಆಗಿದ್ದ ಕಾಲವೊಂದಿತ್ತು. ಆದರೆ ಈಗ ಹಾಗೆ ಹೇಳಿದರೆ, "ನೀವು ವರ್ಗಭೇದದ ಬಗ್ಗೆ ಹೇಳುತ್ತಿದ್ದೀರಿ. ಅದು ಹಳಸಲಾಗಿದೆ. ಈಗ ನಾವೆಲ್ಲರೂ ಗ್ಲೋಬಲ್ ಹಳ್ಳಿಯ ಸಾಮಾನ್ಯ ಪ್ರಜೆಗಳು," ಎನ್ನುವವರಿದ್ದಾರೆ. ಭಯೋತ್ಪಾದನೆ ಮತ್ತು ಪರಿಸರ ವಿನಾಶಗಳಂತಹ ಅನಿಷ್ಟಗಳು ವರ್ಗಭೇದವನ್ನು ಲೆಕ್ಕಿಸುವುದಿಲ್ಲ ಎಂಬುದೇ ಸದ್ಯಕ್ಕೆ ಚಾಲ್ತಿಯಲ್ಲಿರುವ ಕಾಮನ್‌ ಸೆನ್ಸ್. ದೇವರು ಮತ್ತು ದೇಶಪ್ರೇಮಕ್ಕೆ ವರ್ಗಭೇದ ಅನ್ವಯಿಸುವುದಿಲ್ಲ ಎಂದು ಸ್ವಯಂಘೋಷಿತ ದೇಶಪ್ರೇಮಿಗಳು ಹಾಗೂ ಧರ್ಮಾತ್ಮರು ಲಾಗಾಯ್ತಿನಿಂದಲೂ ಹೇಳುತ್ತಿದ್ದಾರೆ. ಆದಾಗ್ಯೂ ಭಯೋತ್ಪಾದನೆ, ಪರಿಸರ, ದೇಶಪ್ರೇಮ, ಧರ್ಮ ಹೀಗೆ ಯಾವ ವಿಷಯ ಪ್ರಸ್ತಾಪವಾದರೂ "What about class?" ಎಂದು ಈಗಲೂ ವರಾತ ಹಚ್ಚುವವರಿದ್ದಾರೆ. ನಾನೂ ಆ ಪೈಕಿಯವನೇ ಆಗಿರುವುದರಿಂದ ಸಮಸ್ತವನ್ನೂ ಒಳಗೊಳ್ಳುವ ಮಾತುಗಳನ್ನು ನಾನು ಹೇಳುವುದೂ ಇಲ್ಲ. ನಂಬುವುದೂ ಇಲ್ಲ. ನಮ್ಮ ಕಾಲ, ನಮ್ಮ ಸಂಸ್ಕೃತಿ, ನಮ್ಮ ಜೀವನ ಕ್ರಮ ಇತ್ಯಾದಿ ಬಹುಪ್ರಚಲಿತ ನುಡಿಗಟ್ಟುಗಳು ಯಾರನ್ನು, ಎಷ್ಟು ಜನರನ್ನು ಒಳಗೊಳ್ಳುತ್ತವೆ ಎಂದು ನಾನು ಕೇಳುವವನೇ. ಅದೇ ರೀತಿ ಕನ್ನಡದ ಮನಸ್ಸು, ಕನ್ನಡಿಗರ ಸಹನೆ, ಕನ್ನಡದ ನೆಲ, ಈ ನೆಲದ ವಿವೇಕ – ಇತ್ಯಾದಿ ಪದಪುಂಜಗಳನ್ನು ಮೈದುಂಬಿ ಬಾಯಿ ತುಂಬಿ ಹೇಳುವವರಿಗೂ ನನ್ನ ವಿನಂತಿ ಇಷ್ಟೆ - ದಯವಿಟ್ಟು ಅವನ್ನು ಸ್ವಲ್ಪ ವಿವರಿಸಿ.

ಈ ರಗಳೆಯೇ ಬೇಡ; ಕೇವಲ ನನ್ನೊಬ್ಬನ ತವಕ ತಲ್ಲಣಗಳನ್ನು ಮಾತ್ರ ನಿವೇದಿಸಿಕೊಳ್ಳುತ್ತೇನೆ ಎಂದು ಮಾತು ಶುರುವಿಟ್ಟುಕೊಂಡರೆ, ನನ್ನನ್ನು ತಡೆಯುವ ಹಿರಿಯರಿದ್ದಾರೆ. ಅವರಲ್ಲಿ ಇಬ್ಬರನ್ನು ಈ ಲೇಖನದ ಮೊದಲಿಗೇ ಉದ್ಧರಿಸಿದ್ದೇನೆ. ಆ ಹಿರಿಯರ ಎಚ್ಚರಿಕೆಯ ಜತೆ ಇನ್ನೂ ಒಂದು ಸಂಗತಿ ಅಡ್ಡ ಬರುತ್ತದೆ. ಪ್ರಜಾಪ್ರಭುತ್ವದಲ್ಲಿ ನನ್ನ ತವಕ ತಲ್ಲಣ ಉಳಿದವರದ್ದಕ್ಕಿಂತ ಹೆಚ್ಚೂ ಅಲ್ಲ; ಕಡಿಮೆಯೂ ಅಲ್ಲ. ಹಾಗಾಗಿ ಈಗ ಹಲವು ವರ್ಷಗಳಿಂದ ನಾನು ಯೋಚಿಸುತ್ತಿರುವ ಮತ್ತು ಚೂರುಪಾರು ಬರೆಯುತ್ತಿರುವ ಮತೀಯವಾದೀ ಹಿಂಸೆಯ ಬಗ್ಗೆ ಕೂಡ ನಾನು ಸಾಧ್ಯವಿರುವಷ್ಟು ಮಟ್ಟಿಗೆ ನನ್ನನ್ನು ಹೊರಗಿಟ್ಟುಕೊಂಡೇ ಬರೆಯುತ್ತೇನೆ.

Image

ಈ ಹಿಂಸೆಯ ನಿರೂಪಣೆಗಳಲ್ಲಿ ‘ಭಾರತೀಯ’, ‘ಹಿಂದೂ’, ‘ಕನ್ನಡಿಗ’ ಇತ್ಯಾದಿ ಸಮುದಾಯಗಳ ಜೊತೆ ನನ್ನನ್ನು ಗುರುತಿಸಿಕೊಂಡು - ನಾನು ಅವೆಲ್ಲವೂ ಆಗಿರುವುದರಿಂದ - ಬರೆಯುವುದು ಏಕಪಕ್ಷೀಯವಾಗುತ್ತದೆ. ಈ ಎಲ್ಲ ಸರ್ವನಾಮಪದಗಳೂ ಸುಳ್ಳು ಹೇಳುವುದಕ್ಕೆ ಮತ್ತು ಹಿಂಸೆಯನ್ನು ಮರೆಮಾಚುವುದಕ್ಕೆ ಮಾತ್ರ ಅನುಕೂಲ ಮಾಡಿಕೊಡುವಂತಹವು. ಆದರೆ ತೀರಾ ವೈಯಕ್ತಿಕ ನೆಲೆಯಲ್ಲಿ ಹಿಂಸೆಯನ್ನು ವಿರೋಧಿಸುವ ಆಶಯವಿಟ್ಟುಕೊಂಡು ಮತೀಯವಾದಿ ಹಿಂಸೆಯ ಕುರಿತು ಬರೆಯುವುದರಲ್ಲೂ ಸಮಸ್ಯೆಗಳಿವೆ. ನಾನು ನೋಡಿದಂತೆ, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮತೀಯ ಹಿಂಸೆಯಲ್ಲಿ ಭಾಗಿಗಳಾದವರಲ್ಲಿ ಯಾರೂ ಮನೋರೋಗಿಗಳಿರಲಿಲ್ಲ. ಅವರೆಲ್ಲರೂ ಸ್ವಸ್ಥ ಮನಸ್ಸಿನ ಮಾಮೂಲಿ ಜನರಾಗಿದ್ದು ತಾವು ಅನ್ಯಮತೀಯರ (ಯಾರಿಗೆ ಅನ್ಯ?) ವಿರುದ್ಧ ಹಿಂಸೆ ಎಸಗಿದ್ದೇವೆ ಎಂದಾಗಲೀ ಅಥವಾ ತಮ್ಮ ಕೃತ್ಯ ಅನೈತಿಕ ಎಂದಾಗಲೀ ಭಾವಿಸುತ್ತಿಲ್ಲ. ಬದಲಾಗಿ ಅವರೆಲ್ಲರೂ ತಾವು ದೇಶ ಮತ್ತು ಧರ್ಮಗಳ ರಕ್ಷಣೆಯಲ್ಲಿ ತೊಡಗಿದ್ದೇವೆ ಎಂದೇ ತಿಳಿದಿದ್ದರು. ಅವರಿಗೆ ಇಲ್ಲಿ ಜನಬೆಂಬಲವೂ ಇದೆ. ಹೆಣ್ಣಿಗೋ, ಆಸ್ತಿಗೋ, ಸೇಡು ತೀರಿಸಿಕೊಳ್ಳುವುದಕ್ಕೋ ನಡೆಯುವ ಹಿಂಸೆಗೂ, ಮತೀಯ ಹಿಂಸೆಗೂ ಇರುವ ವ್ಯತ್ಯಾಸ ಇದು. ಹಿಂಸೆ ಮತ್ತು ಅಹಿಂಸೆ, ನ್ಯಾಯ ಮತ್ತು ಅನ್ಯಾಯ ಇವುಗಳ ನಡುವೆ ವ್ಯತ್ಯಾಸವೇ ಮಸುಕಾಗಿರುವಾಗ ನಾನು ಅಹಿಂಸಾವಾದಿ ಮತ್ತು ನನ್ನ ಎದುರಾಳಿ ಹಿಂಸೆಯ ಪರ ಎಂಬ ವರಸೆಯಲ್ಲಿ ಮಾತಾಡುವುದು ಅತಾರ್ಕಿಕ ಮಾತ್ರವಲ್ಲ, ನೈತಿಕ ಬೇಜವಾಬ್ದಾರಿತನವೂ ಹೌದು.

ಹಾಗಾಗಿ ಮತೀಯವಾದದ ಹಿಂಸೆ ಕುರಿತು ಬರೆಯುವಾಗ ಸಾಧ್ಯವಿರುವಷ್ಟು ಮಟ್ಟಿಗೆ ಘಟನೆಗಳನ್ನು ಖಚಿತ ವಿವರಗಳಲ್ಲಿ ಕಾಣಿಸಿ, ಅವುಗಳಲ್ಲಿ ಪೆಟ್ಟು ತಿಂದವರ ಹೆಸರು, ವಯಸ್ಸು, ಕುಟುಂಬ, ಉದ್ಯೋಗ ಇತ್ಯಾದಿ ಮಾಹಿತಿಗಳನ್ನು ಒದಗಿಸಿ, ಅವರು ಭಾರತವೆಂಬ ರಾಷ್ಟ್ರಪ್ರಭುತ್ವದ ಪ್ರಜೆಗಳು ಮಾತ್ರವಲ್ಲ, ಊರುಮನೆಗಳಲ್ಲಿ ವಾಸಿಸುತ್ತಿರುವ ಸಂಸಾರವಂದಿಗರೂ ಹೌದು ಎಂದು ಓದುಗರ ಮನಗಾಣಿಸಲು ನಾನು ಯತ್ನಿಸುತ್ತೇನೆ.

ಹೇಗೆ ನೋಡಿದರೂ 'ನಮ್ಮ ಕಾಲದ ತವಕ ತಲ್ಲಣ'ಗಳ ಕುರಿತು ಬರೆಯಬೇಕೆಂಬ ಕೋರಿಕೆಯನ್ನು ಈಡೇರಿಸುವ ಬಗೆಯೇ ಹೊಳೆಯುತ್ತಿಲ್ಲ. ಯಾಕೆಂದರೆ ಈ ಕಾಲದ ತವಕ ತಲ್ಲಣಗಳನ್ನು ಹೇಳಲು ಕೇವಲ ನಮ್ಮ ವಾಕ್ಯರಚನೆ ಬದಲಾದರೆ ಸಾಲದು; ನಮ್ಮ ಭಾಷೆ ಮತ್ತು ವ್ಯಾಕರಣಗಳೂ ಬದಲಾಗಬೇಕು. ಭಕ್ತಿಕವಿಗಳು ಗಂಡು ಮತ್ತು ಹೆಣ್ಣಿನ ಜತೆ ಮೂರನೆಯ ಲಿಂಗವೊಂದನ್ನು ಅರಸಿದರು. ಅದರ ಜತೆಗೆ 'ನಾನು', 'ನೀನು' ಮತ್ತು ‘ಅವನ(ಳ)’ ಜೊತೆ ನಾಲ್ಕನೆಯವನೊ(ಳೊ)ಬ್ಬನ(ಳ)ನ್ನು ಕಲ್ಪಿಸಿಕೊಂಡರು. ತಮ್ಮ 'Men, Women and Saints’ ಎಂಬ ಪ್ರಬಂಧದಲ್ಲಿ ಎ.ಕೆ.ರಾಮಾನುಜನ್ ಇದರ ಕುರಿತು ಬರೆದಿದ್ದಾರೆ:

The Bhakti poets… are thought of as one, plural yet singular: the saint as a fourth person singular, if you wish, a virtual presence outside the normal three-person grammar of daily systems.

-The Collected Essays of A.K. Ramanujan
(ಸಂ: ವಿನಯ್‌ ಧಾರವಾಡಕರ್, ಆಕ್ಸ್‌ಫರ್ಡ್‌, 1990, ಪುಟ 282)

ಭಕ್ತಿಕವಿಗಳಿಗೆ ದೇವರನ್ನು ಕಾಣಲು ಭಾಷೆ ಬದಲಾಗಬೇಕಾಯಿತು. ಈ ಕಾಲದಲ್ಲಿ ಹಿಂಸೆಯನ್ನು ಗುರುತಿಸಲು ಮತ್ತು ಗ್ರಹಿಸಲು ಕೂಡ ನಮ್ಮ ಭಾಷೆಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. 'ನಾನು' ಮತ್ತು ‘ನಾವು' ಎಂಬ ಏಕವಚನ ಬಹುವಚನಗಳ ಜೊತೆ, ಎರಡೂ ಅಲ್ಲದ ಆದರೆ ಎರಡನ್ನೂ ಒಳಗೊಂಡಿರುವ ಇನ್ನೊಂದು ವಚನ ಭಾಷೆಗೆ ಈಗ ಅಗತ್ಯವಾಗಿದೆ. ಹಾಗಾಗಿ ಈ ಲೇಖನದಲ್ಲಿ ನಾನೊಂದು ಪ್ರಯೋಗ ನಡೆಸಿದ್ದೇನೆ. ನನಗೆ ಕೊಟ್ಟಿರುವ ವಿಷಯದ ಬಗ್ಗೆ ನನಗೆ ಹೇಳಲಿಕ್ಕೆ ಇರುವುದನ್ನು ಕೆಲವು ಉದ್ಧೃತಗಳ ಮುಖಾಂತರ ಹೇಳಬಯಸುತ್ತೇನೆ. ಈ ಪ್ರಯೋಗದಲ್ಲಿ ನನಗೆ ಗುರು ಹಾಗೂ ಮಾದರಿ ವಾಲ್ಟರ್ ಬೆಂಜಮಿನ್‌ (1892-1940).

Image
ವಾಲ್ಟರ್ ಬೆಂಜಮಿನ್‌

ಬೆಂಜಮಿನ್‌ಗೆ ಎರಡು ವಿಲಕ್ಷಣ ಅಭ್ಯಾಸಗಳಿದ್ದವು. ಅಪರೂಪದ ಹಳೆಯ ಪುಸ್ತಕಗಳನ್ನು, ಪುಸ್ತಕಗಳ ಮೊದಲ ಆವೃತ್ತಿಗಳನ್ನು ಅವನು ಅರಸಿಕೊಂಡು ಹೋಗಿ ಸಂಗ್ರಹಿಸುತ್ತಿದ್ದ. ನಿಶ್ಚಿತ ವರಮಾನವಾಗಲೀ, ಉದ್ಯೋಗವಾಗಲೀ ಅವನಿಗೆ ಯಾವತ್ತೂ ಇರಲಿಲ್ಲವಾದ್ದರಿಂದ, ಪುಸ್ತಕಗಳನ್ನು ಕೊಳ್ಳುವುದು ಅವನಿಗೆ ದುಬಾರಿಯಾದ ರೋಮಾಂಚನವಾಗಿತ್ತು. ಅವನ ಇನ್ನೊಂದು ಹವ್ಯಾಸ ಉದ್ಧೃತಗಳನ್ನು ಸಂಗ್ರಹಿಸುವುದು. ಬೆಂಜಮಿನ್ ಬಳಿ ಯಾವಾಗಲೂ ಒಂದು ಕಪ್ಪು ಬೈಂಡಿನ ನೋಟ್ ಬುಕ್ ಇರುತ್ತಿತ್ತು. ಅದರಲ್ಲಿ ಅವನು ತನ್ನ ಗಮನ ಸೆಳೆದ ಪತ್ರಿಕಾ ವರದಿ, ಸುದ್ದಿಯ ತುಣುಕು, ಸುಭಾಷಿತ, ಕವಿತೆಯ ಸಾಲುಗಳು ಮುಂತಾದ್ದನ್ನೆಲ್ಲ ಬರೆದಿಟ್ಟುಕೊಳ್ಳುತ್ತಿದ್ದ; ತನ್ನ ಈ ಕಡತವನ್ನು ಒಂದು ಅಮೂಲ್ಯ ಆಸ್ತಿ ಎಂದೇ ಅವನು ಭಾವಿಸುತ್ತಿದ್ದ. ತಾನು ಸಂಗ್ರಹಿಸಿದ ಉದ್ಧೃತಗಳನ್ನೆಲ್ಲ ಜೋಡಿಸಿ ಪ್ರಕಟಿಸಬೇಕು ಎಂಬುದೂ ಅವನ ಆಶೆಯಾಗಿತ್ತು. ಆದರೆ ಅದು ಈಡೇರುವ ಮೊದಲೇ ಅವನು ಅಕಾಲಮರಣ ಹೊಂದಿದ. ಅವನ ಜೀವಿತ ಕಾಲದಲ್ಲಿ ಜರ್ಮನಿಯಲ್ಲಿ ಅಧಿಕಾರಕ್ಕೆ ಏರಿದ ನಾಝಿ ಸರಕಾರದ ಪೋಲಿಸರಿಂದ ತಪ್ಪಿಸಿಕೊಳ್ಳಲು ಬೆಂಜಮಿನ್ ಫ್ರಾನ್ಸ್‌ಗೆ ಪಲಾಯನ ಮಾಡಿದ; ಫ್ರಾನ್ಸ್ ಕೂಡ ನಾಝಿಗಳ ವಶವಾದಾಗ ಅಲ್ಲಿಂದಲೂ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ವಿಫಲನಾಗಿ, 1940ರಲ್ಲಿ ತನ್ನ 48ನೆಯ ವಯಸ್ಸಿನಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡ. ಅವನ ಮರಣಾನಂತರ ಪ್ರಕಟವಾದ 'Arcades' ಎಂಬ ಅಪೂರ್ಣ ಕೃತಿಯಲ್ಲಿ ಅವನ ಆಶಯ ಸ್ವಲ್ಪ ಮಟ್ಟಿಗೆ ಈಡೇರಿದೆ.

ಬೆಂಜಮಿನ್‌ನ ಮಹತ್ವದ ಪ್ರಬಂಧಗಳ ಸಂಗ್ರಹ 'Illuminations'ಗೆ ಬರೆದ ಮುನ್ನುಡಿಯಲ್ಲಿ ಹ್ಯಾನಾ ಆರೆಂಡ್ಟ್, ಅವನ ಉದ್ಧೃತಗಳ ಸಂಗ್ರಹವನ್ನು ಪ್ರಸ್ತಾಪಿಸುತ್ತ ಅವನು ತನ್ನ ಡೈರಿಯಲ್ಲಿ 18ನೆಯ ಶತಮಾನದ ಒಂದು ಅಜ್ಞಾತ ಪ್ರೇಮ ಕವನದ ಕೆಳಗೆ ಬರೆದಿಟ್ಟುಕೊಂಡಿದ್ದ ಒಂದು ಪತ್ರಿಕಾ ವರದಿಯ ಬಗ್ಗೆ ಹೇಳುತ್ತಾಳೆ. 1939ರಲ್ಲಿ ನಾಝಿ ಅಕ್ರಮಣಕ್ಕೆ ಒಳಗಾಗಿದ್ದ ಆಸ್ಟ್ರಿಯಾದ ರಾಜಧಾನಿ ವಿಯನ್ನಾದಲ್ಲಿ ಯಾಹೂದಿಗಳಿಗೆ ಗ್ಯಾಸ್‌ ಸರಬರಾಜು ಬಂದ್‌ ಮಾಡಿದ್ದರ ವರದಿ ಅದು. ನಗರದ ಯಹೂದಿಗಳು ಆತ್ಮಹತ್ಯೆಗೆ ಹೆಚ್ಚಾಗಿ ಗ್ಯಾಸ್ ಬಳಸುತ್ತಿದ್ದರು. ಅಂತಹವರ ಬಿಲ್ಲುಗಳು ಗ್ಯಾಸ್ ಪೂರೈಕೆಯ ಕಂಪನಿಗೆ ಪಾವತಿ ಆಗುತ್ತಿರಲಿಲ್ಲ. ಈ ನಷ್ಟ ತಪ್ಪಿಸಲು ಕಂಪನಿಗಳು ಯಹೂದಿಗಳಿಗೆ ಗ್ಯಾಸ್‌ ಸರಬರಾಜು ನಿಲ್ಲಿಸಿದರು. ಬೆಂಜಮಿನ್ ಸಂಗ್ರಹಿಸಿದ್ದ ಇಂತಹ ಉದ್ಧೃತಗಳ ಬಗ್ಗೆ ಬರೆಯುತ್ತ ಆರೆಂಡ್ಟ್, ‘ಸಂದು ಹೋದವರ ರೂಪುರೇಷೆಗಳನ್ನು ವರ್ತಮಾನದ ಬಲಿಯ ಅಗ್ನಿಕುಂಡದಿಂದ ಪುನರ್ ಸೃಷ್ಟಿಸಲು ಅವನು ಯತ್ನಿಸಿದ' ಎಂದು ಹೇಳುತ್ತಾರೆ.

ಈ ಕಾಲದ ನನ್ನ/ ನಮ್ಮ ತವಕ ತಲ್ಲಣಗಳ ಕುರಿತು ನೇರವಾಗಿ ಬರೆಯುವುದು ದುಸ್ಸಾಧ್ಯ ಎಂಬ ಕಾರಣಕ್ಕೆ ನಾನು ಹಿಡಿದಿರುವುದು ಉದ್ಧೃತಗಳ ಬಳಸುಮಾರ್ಗವನ್ನು - ಮತ್ತೊಬ್ಬನ ಆತ್ಮಚರಿತ್ರೆಯ ಹಾಗೆ ಇದೊಂದು ಬಗೆಯ ಮತ್ತೊಬ್ಬನ ಸ್ವಗತ.

ನನ್ನ ಮೊದಲ ಉದ್ಧೃತ - ಬೆಂಗಳೂರಿನ ೧೯ರ ಹರೆಯದ ಮಹಮದ್‌ ಮುಕ್ರಮ್ ಪಾಶಾನ ಅಕಾಲ ಮರಣದ ಕುರಿತ ಒಂದು ಪತ್ರಿಕಾ ವರದಿ. ಮುಕ್ರಮ್ ಪಾಶಾ ಕಾಲೇಜು ವಿದ್ಯಾರ್ಥಿ; ಮೋಟಾರ್‌ ಬೈಕ್‌ ಡ್ರ್ಯಾಗ್ ರೇಸ್ ಪ್ರವೀಣ ಮತ್ತು ಆ ಕಾರಣದಿಂದಲೇ ಅವನ ಓರಗೆಯ ತರುಣರಿಗೆ ಹೀರೋ. ಕಳೆದ ವರ್ಷಾಂತ್ಯ ತಾ: 28-12-2008ರ ನಡುರಾತ್ರಿಯ ಅವನ ಬೈಕ್‌ ಸವಾರಿ ಮರಣಾಂತಿಕವಾಯಿತು. ನಗರದ ಹೆದ್ದಾರಿಗಳಲ್ಲಿ ಅವನನ್ನು ಪೋಲೀಸರು ಬೆನ್ನು ಹತ್ತಿದರು. ಅವರಿಂದ ತಪ್ಪಿಸಿಕೊಳ್ಳಲು ಆತ ಬೈಕ್‌ ಬಿಟ್ಟು ಓಡತೊಡಗಿದ. ಆಗಲೂ ಪೋಲಿಸರು ಅವನ ಬೆನ್ನಟ್ಟಿದರು. ಮುಕ್ರಮ್ ಓರ್ವ ಸೇನಾಧಿಕಾರಿಯ ಬಂಗ್ಲೆಯ ಕಾಂಪೌಂಡಿನೊಳಗೆ ಹಾರಿದ; ಅಲ್ಲಿ ತಾನು ಸುರಕ್ಷಿತವೆಂದು ಭಾವಿಸಿ ಸ್ನೇಹಿತನ ಜೊತೆ ಮೊಬೈಲ್‌ನಲ್ಲಿ ಮಾತಾಡಿದ. ಬಂಗ್ಲೆಯ ಕಾವಲುಗಾರ ಮುಕ್ರಮ್‌ನನ್ನು ಗುಂಡಿಟ್ಟು ಕೊಂದ. ನಂತರ ಕಾವಲುಗಾರ ಆ ಬಗ್ಗೆ ಕೊಟ್ಟ ವಿವರಣೆ- "ಅವನು ಮೊಬೈಲ್‌ನಲ್ಲಿ ಉರ್ದುವಿನಲ್ಲಿ ಮಾತಾಡುತ್ತಿದ್ದ." ಕಾವಲುಗಾರ 'ನಿಲ್ಲು' ಎಂದು ಹೇಳಿದರೂ ಕೇಳದೆ ಮುಕ್ರಮ್ ಓಡತೊಡಗಿದ್ದ; ಮೇಲಾಗಿ ಫೋನಿನಲ್ಲಿ ಯಾರೊಟ್ಟಿಗೋ ಉರ್ದುವಿನಲ್ಲಿ ಮಾತಾಡಿದ್ದ. ಕಾವಲುಗಾರ ಒಂದನ್ನು ಒಂದಕ್ಕೆ ಕೂಡಿಸಿ ಮುಕ್ರಮ್ ಒಬ್ಬ ಟೆರರಿಸ್ಟ್ ಎಂಬ ತೀರ್ಮಾನಕ್ಕೆ ಬಂದ. ಕಾವಲುಗಾರನ ತೀರ್ಮಾನ ತಪ್ಪೋ, ಸರಿಯೋ? ಇಷ್ಟಕ್ಕೂ ಅದು ಕಾವಲುಗಾರನೊಬ್ಬನದ್ದೇ ತೀರ್ಮಾನ ಎಂದು ಹೇಗೆ ಹೇಳುತ್ತೀರಿ? ಮುಕ್ರಮ್ ಉರ್ದು ಮಾತಾಡುತ್ತಿದ್ದ ಕಾರಣಕ್ಕೆ ಅವನೊಬ್ಬ ಶಂಕಿತ ಟೆರರಿಸ್ಟ್ ಎಂಬ ತೀರ್ಮಾನ ಈ ನಮ್ಮ ವ್ಯವಸ್ಥೆಯದ್ದೂ ಹೌದಲ್ಲವೇ? ಮುಕ್ರಮ್‌ನನ್ನು ಗುಂಡಿಟ್ಟು ಕೊಂದ ಕಾವಲುಗಾರನ ತೀರ್ಮಾನ ಮೇಲ್ನೋಟಕ್ಕೆ ಕಾಣುವಷ್ಟು ಮುಗ್ಧವೇ? ಆ ಪ್ರಶ್ನೆಗಳಿಗೆ ನಾವು ಹೇಗೆ ಉತ್ತರಿಸುತ್ತೇವೆ ಎಂಬುದರ ಮೇಲೆ ಮುಕ್ರಮ್‌ನ ಅಕಾಲ ಮರಣ ಕೊಲೆಯೋ, ಆಕಸ್ಮಿಕವೋ ಎಂಬುದು ತೀರ್ಮಾನವಾಗುತ್ತದೆ. ನಾವು ನಮ್ಮ ಮನಸ್ಸುಗಳನ್ನು ಖಾಲಿ ಮಾಡಿಕೊಂಡು ಮುಗ್ಧತೆಯಲ್ಲಿ ಈ ಪ್ರಶ್ನೆಗಳನ್ನು ಎದುರಿಸುವುದಿಲ್ಲ. ಹಾಗಾಗಿ ಇವು ಉತ್ತರಗಳೇ ಇಲ್ಲದ ಪ್ರಶ್ನೆಗಳು.

ಈ ಲೇಖನ ಓದಿದ್ದೀರಾ?: ಜಿ ರಾಜಶೇಖರ ಬರಹ | ಗಂಗಾಧರ ಚಿತ್ತಾಲರ ಕೊನೆಯ ಪದ್ಯಗಳು

ಆದರೆ, ಮುಕ್ರಮ್ ಸಾವಿಗೆ 15 ನಿಮಿಷಗಳ ಮೊದಲು ಅವನ ಜೊತೆಗಿದ್ದ ಅವನ ಗೆಳೆಯ ಶಂಶೇರ್ ಅಹ್ಮದ್‌ಗೆ ಈ ಯಾವ ಪ್ರಶ್ನೆಗಳೂ ಎದುರಾಗುವುದಿಲ್ಲ. ಈ ಶಂಶೇರ್ ಕೂಡ ಮುಕ್ರಮ್ ಹಾಗೆಯೇ ಬೈಕ್‌ ವ್ಯಸನಿ; ಬೆಂಗಳೂರಿನ ಮಾವಳ್ಳಿಯಲ್ಲಿರುವ ತನ್ನ ಅಪ್ಪನ ಗ್ಯಾರೇಜಿನಲ್ಲಿ ಅವನು ಕೆಲಸ ಮಾಡುವುದು. ಆ ರಾತ್ರಿ ಬೈಕಿನಲ್ಲಿ ಮುಕ್ರಮ್‌ಗೆ ಶಂಶೇರ್ ಸಾಥ್ ಕೊಟ್ಟಿದ್ದ. ಆ ಬಗ್ಗೆ ಅವನು ಹೇಳಿದ್ದು:

"ಅವತ್ತು ರಾತ್ರಿ 11.50ಕ್ಕೆ ಮುಕ್ರಮ್ ನನಗೆ ಕಾಲ್ ಕೊಟ್ಟಾಗ ನಾನು ಡಬಲ್ ರೋಡ್‌ ಹತ್ತಿರ ಇದ್ದೆ. ಅವನು ರೇಸಿಗೆ ಬಾ ಎಂದು ಒತ್ತಾಯಿಸಿದ. ನಾನು ಜಾನ್ಸನ್ ಮಾರ್ಕೆಟ್ ಹತ್ತಿರ ಅವನನ್ನು ಸೇರಿಕೊಂಡೆ. ಅಲ್ಲಿ ಮೂರು ಬೈಕುಗಳಿದ್ದವು. ಬೈಕುಗಳ ಮೇಲಿದ್ದವರು ನನಗೆ ಹೊಸಬರು. ನಾವೆಲ್ಲ ಅಲ್ಲಿಂದ ಶಿವಾಜಿನಗರದ ಎಂಪೈರ್ ಹೋಟೆಲ್‌ ಹತ್ತಿರ ಹೋದೆವು. ರಾತ್ರಿ ಒಂದು ಗಂಟೆಯ ಒಳಗೆ ಖಂಡಿತ ನಾವು ಮನೆ ಸೇರಬಹುದು ಎಂದು ಮುಕ್ರಮ್ ನನಗೆ ಪ್ರಾಮಿಸ್ ಮಾಡಿದ. ಎಂಪೈರ್ ಹೋಟೆಲ್‌ ಎದುರು ಕೆಲವರು ಬೈಕುಗಳಲ್ಲಿ ಸ್ಟಂಟ್ ಮಾಡುತ್ತಿದ್ದರು. ಮುಕ್ರಮ್ ಕೂಡ ಅವರ ಜೊತೆ ಸೇರಿಕೊಂಡ.

ಅನಂತರ ನಾವು ಅಲ್ಲಿಂದ ಹೊರಟು ಹಲಸೂರು ಗುರುದ್ವಾರ ದಾಟಿ ಕೆ ಆರ್ ಪುರಮ್ ಬ್ರಿಡ್ಜ್ ಹತ್ತಿರ ಹೋದೆವು. ಮುಕ್ರಮ್‌ನ ಸ್ಟಂಟು ನೋಡಿ, ಕೆಲವು ಬೈಕುಗಳು ನಮ್ಮನ್ನು ಫಾಲೋ ಮಾಡಿದವು. ನಾವು ಬಲಕ್ಕೆ ತಿರುಗಿ ಏರ್‌ಪೋರ್ಟ್ ರೋಡಿಗೆ ಹೋದೆವು. ಅಲ್ಲಿಂದ ರಿಂಗ್ ರೋಡ್ ಫ್ಲೈ ಓವರ್ ಹತ್ತಿರ ಹೋಗುವಾಗ ನಮ್ಮ ಒಟ್ಟಿಗೆ ಮೂರು ಬೈಕುಗಳು ಇದ್ದವು. ನಾವು ಅಲ್ಲಿಂದ ದೊಮ್ಮಲೂರು ರೋಡ್‌ ಕಡೆಗೆ ತಿರುಗಿದೆವು. ಅಷ್ಟರಲ್ಲಿ ಪೋಲೀಸರು ನಮ್ಮನ್ನು ಚೇಸ್ ಮಾಡುತ್ತಿರುವುದು ಗೊತ್ತಾಯಿತು. ನಮ್ಮ ಮುಂದುಗಡೆ ಇದ್ದ ಎರಡು ಬೈಕುಗಳು ವೇಗವಾಗಿ ಮುನ್ನುಗ್ಗಿ ಹೋಗಿಬಿಟ್ಟವು. ನಾವು ಎಲ್ಲರಿಗಿಂತ ಹಿಂದೆ ಇದ್ದೆವು. ಎ.ಎಸ್.ಸಿ ಸರ್ಕಲ್ ಹತ್ತಿರ ಬ್ಯಾರಿಕೇಡು ಹಾಕಿದ್ದರು. ಮುಕ್ರಮ್ ಅದನ್ನು ತಪ್ಪಿಸಲು ಪ್ರಯತ್ನಿಸಿದ. ಆಗಲಿಲ್ಲ. ನಾವು ಕೆಳಗೆ ಬಿದ್ದೆವು. ನನಗೆ ಪೋಲಿಸರ ಏಟು ಬಿದ್ದಿತು. ನಾವು ಬೈಕ್ ಅಲ್ಲೇ ಬಿಟ್ಟು ಓಡತೊಡಗಿದೆವು.

ಮುಕ್ರಮ್ ನನಗೆ ಇನ್ನೊಂದು ದಿಕ್ಕಿನಲ್ಲಿ ಓಡಲು ಹೇಳಿದ (ಇಬ್ಬರೂ ಒಟ್ಟಿಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು – ಅನು). ಅವನು ಬಲಕ್ಕೆ ತಿರುಗಿ ಟ್ರಿನಿಟಿ ಚರ್ಚ್ ರೋಡಿನಲ್ಲಿ ಓಡಿದ. ನಾನು ವಿಕ್ಟೋರಿಯಾ ರೋಡಿನಲ್ಲಿ ಓಡಿದೆ. ಪೋಲಿಸರು ಮುಕ್ರಮ್‌ನ ಬೆನ್ನಟ್ಟಿ ಹೋದದ್ದನ್ನು ನಾನು ನೋಡಿದೆ. ನಾನು ಸುಮಾರು 300 ಮೀಟರ್‌ನಷ್ಟು ಓಡಿ ನಿಂತೆ. ನನ್ನ ಹಿಂದೆ ಪೋಲಿಸರು ಇರಲಿಲ್ಲ. 15 ನಿಮಿಷದ ನಂತರ ಮುಕ್ರಮ್‌ಗೆ ಮಿಸ್‌ ಕಾಲ್ ಕೊಟ್ಟೆ. ಮುಕ್ರಮ್ ನನಗೆ ತಿರುಗಾ ಕಾಲ್ ಮಾಡಿ, "ನಾನು ಒಂದು ಮನೆಯಲ್ಲಿ ಸೇಫ್ ಆಗಿದ್ದೇನೆ. ಅದು ಯಾರ ಮನೆ ಎಂದು ಗೊತ್ತಿಲ್ಲ. ಕಾಂಪೌಂಡ್ ಹಾರಿದ್ದೇನೆ. ಮನೆಗೆ ಫೋನ್ ಮಾಡಿ ಅಮ್ಮನ ಹತ್ತಿರ ಮಾತಾಡಿದ್ದೇನೆ. ಅಣ್ಣ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾನೆ. ನೀನು ಮನೆಗೆ ಹೋಗು," ಎಂದು ಹೇಳಿದ. ನಾನು ಮನೆಗೆ ಹೋಗಿ ಮತ್ತೆ ಮುಕ್ರಮ್‌ಗೆ ಫೋನ್‌ ಮಾಡಿದೆ. ಅವನು ಸಿಗಲಿಲ್ಲ. ಅವನ ಸೆಲ್ ಬ್ಯಾಟರಿ ಖಾಲಿಯಾಗಿತ್ತು. ನಾನು ಮಲಗಿ ಬೆಳಗ್ಗೆ 10.30ಕ್ಕೆ ಎದ್ದೆ. ಮುಕ್ರಮ್ ಅರ್ಮಿ ಜನಗಳಿಂದ ಕೊಲೆ ಆದದ್ದು ಗೊತ್ತಾಯಿತು. ಮುಕ್ರಮ್ ಒಳ್ಳೆಯ ಫ್ರೆಂಡ್, ಒಳ್ಳೆಯ ಬೈಕ್ ರೈಡರ್. ಅದಕ್ಕೇ ನಾನು ಅವನ ಜೊತೆಯಲ್ಲಿ ಹೋದದ್ದು." ('ಟೈಮ್ಸ್ ಆಫ್ ಇಂಡಿಯಾ' ಮುಖಪುಟ ವರದಿ - ಎ ಟಿ ಸುಬ್ರಮಣ್ಯ, 1-1-2009)

ಈ ಲೇಖನ ಓದಿದ್ದೀರಾ?: ನುಡಿ ನಮನ | ರಾಜಶೇಖರರ ಬರಹಗಳನ್ನು ಓದುವುದೆಂದರೆ ನಮ್ಮೊಳಗನ್ನು ಗಾಢವಾಗಿ ಪರೀಕ್ಷಿಸಿಕೊಂಡಂತೆ

ಈ ವರದಿ ಓದುತ್ತಿದಂತೆ, ಬೆಂಗಳೂರಿನ ನಡುರಾತ್ರಿಯ ಆ ರಸ್ತೆಗಳು ಕಣ್ಣೆದುರು ಕುಣಿಯತೊಡಗಿದವು. ನಾನು ಆ ಸ್ಪಾಟ್‌ಗಳನ್ನು ಕಣ್ಣಾರೆ ಕಂಡಿದ್ದೇನೊ ಇಲ್ಲವೋ ಹೇಳಲಾರೆ. ಆದರೆ ವರದಿ ಮಾತ್ರ ನನಗೆ ಅವನ್ನು ನಿಜ ಮಾಡಿಕೊಟ್ಟವು. ಹಾಗೆಯೇ, ನನಗೆ ಹೆಸರಷ್ಟೇ ಗೊತ್ತಿರುವ ಮುಕ್ರಮ್ ಮತ್ತು ಅವನ ಗೆಳೆಯ ಶಂಶೇರ್, ಆ ವರದಿ ಓದಿದ ನಂತರ ಬರಿಯ ಹೆಸರುಗಳಾಗಿ ಉಳಿಯಲಿಲ್ಲ. ಮುಕ್ರಮ್‌ನ ತಾರುಣ್ಯ, ಅವನ ಡ್ರ್ಯಾಗ್ ರೇಸ್ ವ್ಯಸನ ಮತ್ತು ಅವನ ವಿಲಕ್ಷಣ ಸಾವು 'ನಾಟ್ಯೋತ್ಸವ' ಕವಿತೆಯ ಕೊನೆಯ ಸಾಲುಗಳನ್ನು ನೆನಪಿಸಿತು:
 
ಮಿಂಚಿನೊಡನೆ ಮಿಂಚುತೊಮ್ಮೆ
ಕತ್ತಲೆಯನೆ ಕೂಡ್ಯೇನ
-ಪೇಜಾವರ ಸದಾಶಿವರಾಯರು

ಮುಕ್ರಮ್‌ನದು ಹತ್ಯೆಯೆ? ಆತ್ಮಹತ್ಯೆಯೆ? ಆಕಸ್ಮಿಕವೆ? ಅಥವಾ ಈ ಮೂರೂ ಹೌದೆ? ಅವನ ಅಕಾಲ ಮರಣಕ್ಕೆ ಅವನ ಬೈಕ್ ಸವಾರಿಯ ಖಯಾಲಿ ಒಂದು ತಯಾರಿಯಂತೆ ಭಾಸವಾಗುತ್ತದೆ. ಡ್ರ್ಯಾಗ್ ರೇಸ್ ಒಂದು ಹುಚ್ಚು. ಒಂದು ಮನಸ್ಥಿತಿ. ಕೆಲವು ವರ್ಷಗಳ ಕೆಳಗೆ ಇಸ್ರೇಲ್‌ನ ಎಳೆಪ್ರಾಯದ ಹುಡುಗರು ಒಂದು ವಿಚಿತ್ರ ಆಟ ಆಡಲು ಪ್ರಾರಂಭಿಸಿದರು. ಅದು ಕೂಡ ಒಂದು ಮರಣಾಂತಿಕ ಆಟ. ರಸ್ತೆಯಲ್ಲಿ ವೇಗವಾಗಿ ಧಾವಿಸಿ ಬರುತ್ತಿರುವ ಕಾರುಗಳು ತೀರ ಹತ್ತಿರಕ್ಕೆ ಬಂದಾಗ ಒಮ್ಮಿಂದೊಮ್ಮೆಗೆ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಓಡುವುದೇ ಇದರ ನಿಯಮ. ಈ ಆಟದಿಂದ ಹುಡುಗರು ಪಡೆದುಕೊಳ್ಳುವ ಥ್ರಿಲ್‌, ಇಸ್ರೇಲ್‌ನ ಹಿಂಸ್ರಕ ಸಮಾಜದ ಒತ್ತಡಗಳಿಂದ ಬಿಡುಗಡೆ ಪಡೆಯಲು ಹುಡುಗರು ಕಂಡುಕೊಂಡ ಉಪಾಯ ಎಂದು ಅಲ್ಲಿನ ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟರು. ಬೆಂಗಳೂರಿನ ಹಿಂಸೆ ಇಸ್ರೇಲ್‌ನ ಹಿಂಸೆಗಿಂತ ಬೇರೆ ತರಹದ್ದಿರಬಹುದು; ಆದರೆ ಕಡಿಮೆಯೇನಲ್ಲ. ಮುಕ್ರಮ್‌ನ ಮೇಲೂ ಇಂತಹ ಒತ್ತಡಗಳು ಇದ್ದಿರಬಹುದು. ಅವನ ಬೈಕ್‌ ವ್ಯಸನವನ್ನೇನೋ ಹೀಗೆ ವಿವರಿಸಬಹುದು. ಆದರೆ ಅವನ ಬೈಕಿನಷ್ಟೇ ಅವನ ಭಾಷೆಯೂ ಮುಕ್ರಮ್‌ನ ಅಕಾಲ ಮರಣಕ್ಕೆ ಕಾರಣವಾಗಿದೆ. ಇದಕ್ಕೆ ವಿವರಣೆ ನೀಡಬಲ್ಲ ತಜ್ಞರು ಯಾರು? ಭಾಷಾಶಾಸ್ತ್ರಜ್ಞರೆ? ಮನಃಶಾಸ್ತ್ರಜ್ಞರೆ? ರಾಜಕೀಯಶಾಸ್ತ್ರಜ್ಞರೆ?

ಮುಕ್ರಮ್ 19ರ ಹರೆಯದ ಕಾಲೇಜು ವಿದ್ಯಾರ್ಥಿ. ಪೋಲಿಸರ ಕೈಯಲ್ಲಿ ಸಿಕ್ಕಿಹಾಕಿಕೊಳ್ಳುವಂತಹ ಡ್ರ್ಯಾಗ್ ರೇಸ್ ಹವ್ಯಾಸವಾದರೂ ಅವನಿಗೆ ಯಾಕೆ ಬೇಕಿತ್ತು? ಈಗ ಕೆಲವು ತಿಂಗಳ ಕೆಳಗೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಇಬ್ಬರು ಮುಸ್ಲಿಮ್ ತರುಣರು ತಮ್ಮ ಕುಟುಂಬದ ಒಂದು ಸಮಾರಂಭಕ್ಕೆಂದು ಕುಂದಾಪುರಕ್ಕೆ ಬಂದಿದ್ದರು. ಕುಂದಾಪುರದಿಂದ ಉಡುಪಿಗೆ ಹೋಗುವ ರಸ್ತೆಯಲ್ಲಿ ಅವರು ಬೈಕು ರೈಡ್‌ ಮಾಡುತ್ತ ಮೊಬೈಲ್‌ನಲ್ಲಿ ಮಾತಾಡುತ್ತಿದ್ದುದನ್ನು ನೋಡಿ ಟ್ರಾಫಿಕ್‌ನವರು ನಿಲ್ಲಿಸಿದರು. ಈ ತರುಣರು ರೋಫ್ ಹಾಕಿದರು. ಟ್ರಾಫಿಕ್ ಪೋಲಿಸರು ಇಬ್ಬರನ್ನೂ ಠಾಣೆಗೆ ಒಯ್ದರು. ಅಲ್ಲಿ ವಿಚಾರಿಸಲಾಗಿ ಅವರು ಮುಸ್ಲಿಮರು ಎಂಬುದು ಪತ್ತೆಯಾಯಿತು. ಅವರನ್ನು ಠಾಣೆಯಲ್ಲೇ ಕೂಡಿಹಾಕಿ ಕೂಲಂಕಷ ತನಿಖೆ ಮುಗಿದು ಅವರು ಟೆರರಿಸ್ಟ್ ಅಲ್ಲ ಎಂದು ಸಾಬೀತಾಗುವ ಹೊತ್ತಿಗೆ ಮೂರು-ನಾಲ್ಕು ದಿನಗಳೇ ಕಳೆದುಹೋದವು. ಈ ಹುಡುಗರ ಹೆತ್ತವರು, ಬಂಧುಬಳಗದವರು, ಸ್ನೇಹಿತರು ಎಲ್ಲರೂ ಕಂಗಾಲಾದರು. ಆದರೆ ಈ ಬಗ್ಗೆ ಕುಂದಾಪುರ ಪೋಲೀಸರನ್ನು ಏನು ಎತ್ತ ಎಂದು ವಿಚಾರಿಸಲು ಯಾರೂ ಮುಂದಾಗಲಿಲ್ಲ. ನಾಳೆ ಏನಾದರೂ ಹೆಚ್ಚುಕಡಿಮೆ ಆದರೆ!

ಇದೇ ವಿಷಯ ನನ್ನೊಡನೆ ಮಾತಾಡುತ್ತ ಮುಸ್ಲಿಮ್ ಗೃಹಸ್ಥರೊಬ್ಬರು, "ನಮ್ಮ ಹುಡುಗರು ಯಾಕೆ ಹೀಗೆ ಮಾಡುತ್ತಾರೆ ಹೇಳಿ; ತಾವು ಯಾವ ದೇಶದಲ್ಲಿದ್ದೇವೆ ಎಂದೂ ಅವರಿಗೆ ಗೊತ್ತಿಲ್ಲವಲ್ಲ!" ಎಂದರು. ಆ ಕ್ಷಣಕ್ಕೆ ನನಗೂ ಅವರ ಮಾತು ನಿಜವೆನ್ನಿಸಿತು. ಆದರೆ, ಮುಸ್ಲಿಮ್ ಹುಡುಗರಿಗಾಗಲೀ ಅಥವಾ ಯಾರಿಗೇ ಆಗಲಿ, 'ನಾವು ಭಾರತವೆಂಬ ರಾಷ್ಟ್ರದ ಪ್ರಜೆಗಳು' ಎಂಬ ಸಂಗತಿ ಮನಸ್ಸಿನಲ್ಲಿ ಸದಾ ಜಾಗೃತವಾಗಿರುವಂತಹದ್ದೆ? ರಾಷ್ಟ್ರಭಕ್ತಿಯನ್ನೇ ಒಂದು ಸಿದ್ಧಾಂತ ಮತ್ತು ಪ್ರತಿಪಾದನೆ ಮಾಡಿಕೊಂಡವರು ಮಾತ್ರ ಹಾಗೆ ಭಾವಿಸಿಯಾರು. ರಾಷ್ಟ್ರವೆಂಬುದು ನಾವು ನಿತ್ಯ ಯೋಚಿಸುವ ಮತ್ತು ಒಡನಾಡುವ ಸತ್ಯವಲ್ಲ. ಈ ಕಾಲದ ವಿಶಿಷ್ಟ ಒತ್ತಡಗಳಿಂದಾಗಿ ನಾವು ಇದನ್ನು ಬಾಯಿ ಬಿಟ್ಟು ಹೇಳದೆ ಇರಬಹುದು. ಆದರೆ ನಮ್ಮ ರಾಷ್ಟ್ರವೇ ನಮ್ಮ ವ್ಯಕ್ತಿತ್ವದ ಹೆಗ್ಗುರುತೂ ಅಲ್ಲ; ಏಕೈಕ ಗುರುತೂ ಅಲ್ಲ ಎಂಬುದು ನಮ್ಮ ಮನಸ್ಸಿನ ಆಳದಲ್ಲಿ ನಮಗೆ ಗೊತ್ತಿರುವ ಸತ್ಯ. ಇ.ಎಂ.ಫಾ‌ರ್ಸ್ಟರ್ ದ್ವಿತೀಯ ಮಹಾಯುದ್ಧದ ರಾಷ್ಟ್ರಭಕ್ತಿಯ ಉನ್ಮಾದದ ದಿನಗಳಲ್ಲೂ- ಯುದ್ಧ ಮತ್ತು ರಾಷ್ಟ್ರಭಕ್ತಿ ಬೆಂಕಿ ಮತ್ತು ಪೆಟ್ರೋಲ್ ಇದ್ದ ಹಾಗೆ – 'ರಾಷ್ಟ್ರ ಮತ್ತು ಸ್ನೇಹಿತ ಇಬ್ಬರ ನಡುವೆ ಆಯ್ಕೆ ಮಾಡಿಕೊಳ್ಳಲೇಬೇಕಾಗಿ ಬಂದರೆ ನಾನು ಸ್ನೇಹಿತನನ್ನೇ ಆಯ್ದುಕೊಳ್ಳುತ್ತೇನೆ' ಎಂದು ಹೇಳಿದಾಗ ಅವನು ಧ್ವನಿಸುತ್ತಿದ್ದುದು ಈ ಸತ್ಯವನ್ನೇ.

ಇದನ್ನೇ ಇನ್ನೊಂದು ಬಗೆಯಲ್ಲಿ ಹೇಳುವ ಅನಂತಮೂರ್ತಿಯವರ ಈ ಕವಿತೆ ನೋಡಿ:

Image
ಯು ಆರ್ ಅನಂತಮೂರ್ತಿ

ಅಧ್ವಾನೀಜಿಗೊಂದು ಕಿವಿಮಾತು
ಲಂಡನ್ನಲ್ಲಿ “ನೀನು ಯಾರು?" ಎಂದರೆ
'ನಾನು' 'ಭಾರತೀಯ', ಸಾರಿ
ಪಾಕಿಯಲ್ಲ ಎಂಬ ಗುರುತಿಗೆ
 
ಹಾಗೇ ದೆಹಲಿಯಲ್ಲಿ ಕನ್ನಡದವ
ಬೆಂಗಳೂರಲ್ಲಿ ಮಲೆನಾಡಿನವ
ತೀರ್ಥಹಳ್ಳಿಯಲ್ಲಿ ಹುಟ್ಟೂರು ಮೇಳಿಗೆಯವ

ಮೇಳಿಗೆಯಲ್ಲಿ ಕೇಳುವುದೇ ಬೇಡ
ಇಂಥ ಜಾತಿಯ ಇಂಥವರ ಮಗ

ಆಗಿದ್ದೇ ಮೇಲಿನ ಎಲ್ಲವ, ಅನಾಯಾಸವಾಗಿ
ಎಂದುಕೊಂಡಿದ್ದೇನೆ - ಕ್ಷಮಿಸಿ

ತನ್ನಜ್ಜಿಯಂತೆ ನನ್ನಜ್ಜಿ ದೇವರಕೋಣೆಯ ಗಿಂಡಿಯಲ್ಲಿರುವ
ಗಂಗೆ ಕುಡಿದೇ ಪ್ರಾಣ ಬಿಟ್ಟದ್ದು.
ಇನ್ನೂ ಉಳಿದಿದೆ ಗಂಗೆ
ಅದೇ ಕಿಲುಬು ಗಿಂಡಿಯಲ್ಲಿ.

ನನ್ನಂತೆ ತನ್ನ ಅಡ್ರೆಸ್ ಕೊಡಬೇಕಾದ ಪಾಡು
ಅಜ್ಜಿಗಿರಲಿಲ್ಲ.
ಯಾಜ್ಞವಲ್ಕರಿಗೂ ಇರಲಿಲ್ಲ.
 
ಪೂರ್ವಸೂರಿಗಳಿಗೆ ನಮಸ್ಕಾರ.

- ದೇಶ, ಪ್ರಾಂತ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಹೀಗೆ ಕಿರಿದಾಗುತ್ತ ಬರುವ ಮತ್ತು ಹೆಚ್ಚು-ಹೆಚ್ಚು ಆಪ್ತವಾಗುವ ಭೌಗೋಳಿಕ ಘಟಕಗಳಿಗೆ ಸೇರಿದವನು ನಾನು ಎಂದು ಕವಿ ಇಲ್ಲಿ ತಮ್ಮ ಗುರುತು ಹೇಳಿಕೊಳ್ಳುತ್ತಿದ್ದಾರೆ. ಅವರು ತನ್ನನ್ನು ಭಾರತೀಯ, ಭಾರತೀಯರಲ್ಲಿ ಹಿಂದೂ, ಹಿಂದೂಗಳಿಗೆ ವೈದಿಕ ಬ್ರಾಹ್ಮಣ, ಬ್ರಾಹ್ಮಣರಲ್ಲಿ ದಕ್ಷಿಣ ದೇಶದವ ಮತ್ತು ಮಾಧ್ವ, ಮಾಧ್ವರಲ್ಲಿ ಉಡುಪಿಯ ಮಾಧ್ವ - ಹೀಗೆ ಕೂಡ ಪರಿಚಯ ಮಾಡಿಕೊಡಬಹುದಿತ್ತು. ಈ ಬಗೆಯ ಇನ್ನೂ ಹಲವು ಗುರುತುಗಳು ಕವಿಗೆ ಮಾತ್ರವಲ್ಲ ಪ್ರತಿಯೊಬ್ಬನಿಗೂ ಇದೆ. ಹಾಗಾಗಿ ಪ್ರತಿಯೊಬ್ಬ ಓದುಗನೂ ಈ ಕವಿತೆಯ ತನ್ನದೇ ಆದ ಒಂದು ಪ್ರತ್ಯೇಕ ಪಾಠವನ್ನು ಕೂಡ ಸೃಷ್ಟಿಸಿಕೊಳ್ಳಲು ಸಾಧ್ಯ. ಕವಿತೆಯೇ ಗುರುತುಗಳ ಬಹುತ್ವದ ಬಗ್ಗೆ ಇರುವುದರಿಂದ ಹಲವು ಪಾಠಗಳನ್ನೂ ಹಲವು ಬಗೆಯ ಓದುಗಳನ್ನೂ ಅದು ಸಾಧ್ಯವಾಗಿಸುತ್ತದೆ. ಆದರೆ ನಿಸ್ಸಂದೇಹವಾಗಿ ಕವಿತೆಯ ಎಲ್ಲ ಪಾಠಗಳಲ್ಲಿಯೂ ಕಟ್ಟಕಡೆಗಿನ ಮತ್ತು ಅತ್ಯಂತ ಆಪ್ತವಾದ ಗುರುತೆಂದರೆ ನಮ್ಮ ಪ್ರಾಣ ಹಾಗೂ ಪ್ರಾಣವನ್ನು ಕಾಪಾಡುವ ದೇಹ. ಇಲ್ಲಿ ಉದ್ಧರಿಸಿದ ಕವಿತೆ ಕಾಣಿಸುವುದೂ ಅದನ್ನೇ.

ಈ ಕವಿತೆ ಒಂದು ವಿಚಿತ್ರ ರೀತಿಯಲ್ಲಿ ಮುಕ್ರಮ್‌ನ ದುರಂತಕ್ಕೆ ಬರೆದ ಭಾಷ್ಯದಂತೆಯೂ ಇದೆ. ಮುಕ್ರಮ್‌ಗೆ ಅವನ ದೇಹ ಮತ್ತು ಅವನ ಧರ್ಮ - ಅದೇನೂ ಅವನು ಆಯ್ದುಕೊಂಡದ್ದಲ್ಲ – ಇದನ್ನು ಬಿಟ್ಟರೆ ಅವನ ಉಳಿದ ಎಲ್ಲ ಗುರುತು, ವಿಳಾಸಗಳನ್ನೂ ಅವನಿಗೆ ಈ ವ್ಯವಸ್ಥೆ ನಿರಾಕರಿಸಿದೆ. ಮುಕ್ರಮ್ ಕವಿಯ ಹಾಗೆ ತನ್ನ ಗುರುತು ಪರಿಚಯ ಸಾದ್ಯಂತ ಹೇಳಿಕೊಂಡಿದ್ದರೆ ಜೀವ ಉಳಿಸಿಕೊಳ್ಳಬಹುದಾಗಿತ್ತೆ? ಮೊನ್ನೆಯ ದುರ್ಘಟನೆ ಮರೆತುಬಿಡಿ. ಅದೇನೂ ದಿನನಿತ್ಯ ನಡೆಯುವಂತಹದ್ದಲ್ಲ. ಮುಕ್ರಮ್‌ನಂತಹವರಿಗೆ ತಮ್ಮ ಧರ್ಮವೊಂದನ್ನು ಹೊರತುಪಡಿಸಿ ಇತರ ಗುರುತುಗಳ ಬಗ್ಗೆ ಹೇಳಿಕೊಳ್ಳುವ ಅವಕಾಶಗಳು ಈ ವ್ಯವಸ್ಥೆಯಲ್ಲಿ ದಿನೇದಿನೇ ಕಡಿಮೆಯಾಗುತ್ತಿವೆ. ಕಳೆದ ವರ್ಷಾಂತ್ಯದ ಆ ರಾತ್ರಿ ಮುಕ್ರಮ್‌ನ ನಸೀಬು ಚೆನ್ನಾಗಿರಲಿಲ್ಲ, ನಿಜ. ಆದರೆ ಅದು ಚೆನ್ನಾಗಿದ್ದುದು ಯಾವಾಗ? ಮುಗ್ಧತೆಯನ್ನು ನಾವು ಮೂರ್ಖತನ ಎಂದು ಹಳಿಯುವುದು ಬೇಡ; ಮುಕ್ರಮ್ ಸತ್ತದ್ದು ಅವನ ಡ್ರ್ಯಾಗ್ ರೇಸ್ ಹುಚ್ಚಿನಿಂದ ಅಲ್ಲ.

'ಹಿಂದೂ' ಎಂಬುದೇ ನಮ್ಮ ವ್ಯಕ್ತಿತ್ವದ ಏಕಮಾತ್ರ ಗುರುತಾದರೆ, ಮುಸ್ಲಿಮರು ನಮಗೆ ಅನ್ಯರು. ನಾವು ನಮ್ಮನ್ನು 'ಕನ್ನಡಿಗ, ಅದು ಬಿಟ್ಟ ಬೇರೆ ಏನೂ ಅಲ್ಲ' ಎಂದು ಗುರುತಿಸಿಕೊಂಡರೆ, ಆಗ ತಮಿಳರು, ತೆಲುಗರು ಹಾಗೂ ಮರಾಠಿಗರು ಮಾತ್ರವಲ್ಲ, ಬಿಹಾರಿಗಳೂ ಅನ್ಯರೇ. ಇತ್ತೀಚೆಗೆ ರೈಲ್ವೆ ಇಲಾಖೆಯ ನಾಲ್ಕನೆಯ ದರ್ಜೆಯ ನೌಕರಿಗಳಿಗೆ ಪರೀಕ್ಷೆ ಕಟ್ಟಲು ಬೆಂಗಳೂರಿಗೆ ಬಂದ ತರುಣರನ್ನು ಕನ್ನಡಿಗರ ಹಿತರಕ್ಷಣೆಯ ಕಾರಣ ಕೊಟ್ಟು ಹೊಡೆದು ಅಟ್ಟಲಾಯಿತು. ಈ ಬಿಹಾರಿ ತರುಣರು, ಕರ್ನಾಟಕದ ಯುವಕರ ಉದ್ಯೋಗಗಳನ್ನು ಕಸಿಯಲೆಂದೇ ಬಂದಿದ್ದಾರೆ ಎಂದು, ಅವರನ್ನು ಹೊಡೆದು ಬಡಿದು ಮಾಡಿದ ಸಂಘಟನೆ ಹೇಳಿಕೊಂಡಿತು. ಈ ತರುಣರು ತಮ್ಮ ಊರುಗಳಿಂದ ದೀರ್ಘ ಪ್ರಯಾಣ ಮಾಡಿ ಬೆಂಗಳೂರು ತಲುಪಿದ್ದರು. ಯಾವುದೇ ದೀರ್ಘ ಪ್ರಯಾಣದ ನಂತರ ಯಾರಾದರೂ ಹಸಿವು, ನಿದ್ರಾಹೀನತೆ, ಬಾಯಾರಿಕೆ, ಮಲಮೂತ್ರಗಳ ವಿಸರ್ಜನೆಯ ಒತ್ತಡ ಮುಂತಾದ ಬಾಧೆಗಳಿಂದ ಬಳಲುವ ದೇಹಮಾತ್ರರು. ಈ ಬಿಹಾರಿ ತರುಣರಾದರೂ ಅಷ್ಟೆ. ಅವರೇನೂ ಬೆಂಗಳೂರನ್ನು ವಶಪಡಿಸಿಕೊಳ್ಳಲು ಬಂದ ವೀರಯೋಧರಾಗಿರಲಿಲ್ಲ. ಹಾಗಿರುತ್ತ ಅವರನ್ನು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಅಟ್ಟಿಸಿಕೊಂಡು ಹೋಗಿ ಹೊಡೆದದ್ದು ಸರಿಯೋ?

ಈ ಲೇಖನ ಓದಿದ್ದೀರಾ?: ನುಡಿ ನಮನ | ಜಿ ರಾಜಶೇಖರ ಎಂಬ ಕೋಟೆಯ ಕಾವಲುಗಾರ

ದೇಶದ ಸಂವಿಧಾನ ಪ್ರಜೆಗಳಿಗೆ ಕೊಟ್ಟಿರುವ ಉದ್ಯೋಗದ ಹಕ್ಕು, ದೇಶದ ಯಾವುದೇ ಸ್ಥಳದಲ್ಲಿ ವಾಸಿಸುವ ಹಕ್ಕು ಮುಂತಾದವು ಹಾಗಿರಲಿ; ಬೆಂಗಳೂರಿನಲ್ಲಿ ಅವತ್ತು ಕನ್ನಡಿಗರ ಹೆಸರಿನಲ್ಲಿ ನಡೆದದ್ದು ಮನುಷ್ಯರಿಗೆ ಒಪ್ಪುವ ನಡವಳಿಕೆಯೆ? ಕನ್ನಡದ ಬಹುತೇಕ ಪತ್ರಿಕೆ ಮತ್ತು ಇತರ ಮಾಧ್ಯಮಗಳನ್ನು ಈ ಪ್ರಶ್ನೆ ಬಾಧಿಸಿದಂತೆ ಕಾಣುವುದಿಲ್ಲ. ಬಿಹಾರಿ ತರುಣರ ಮೇಲೆ ನಡೆದ ಹಿಂಸಾಚಾರವನ್ನು ಖಂಡಿಸಿದ ಒಂದೆರಡು ಪತ್ರಿಕೆಗಳು ಸಹ ಹಿಂಸಾಚಾರ ತಪ್ಪೆಂದೂ, ಆದರೆ ಅದಕ್ಕಿದ್ದ ಕಾರಣಗಳು ಸರಿಯಾಗಿಯೇ ಇವೆ ಎಂದೂ ವಾದಿಸಿದವು. ಕನ್ನಡದ ಅತ್ಯಂತ ಜನಪ್ರಿಯ ಪತ್ರಿಕೆಯೊಂದರ ಅಂಕಣಕಾರ ಅನ್ಯಭಾಷಿಕರ 'ಸಮಸ್ಯೆ' ಎದುರಿಸಲು ಕರ್ನಾಟಕಕ್ಕೂ ರಾಜ್‌ ಥಾಕ್ರೆಯಂತಹವರು ಬೇಕು ಎಂದು ಬರೆದ. ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ಊರು ಮುಂಬಯಿ ಎಂಬ ವಾಸ್ತವ ಈತನಿಗೆ ಗೊತ್ತಿರಲಿಲ್ಲ.

ಕರ್ನಾಟಕದ ನಿರುದ್ಯೋಗ ಸಮಸ್ಯೆಯನ್ನು ಕನ್ನಡದ ಬಡಿಗವೀರರು ಅರ್ಥ ಮಾಡಿಕೊಂಡ ರೀತಿಯಾದರೂ ಸರಿಯೇ? ನಮ್ಮ ಯುವಕರ ನಿರುದ್ಯೋಗವನ್ನು ಕನ್ನಡಿಗರು V/s ಬಿಹಾರಿಗಳು ಎಂದು ನೋಡುವುದೇ ನ್ಯಾಯವಲ್ಲ. ಅದು ಅರ್ಥಶಾಸ್ತ್ರದ ವಿವೇಕ ಮತ್ತು ತರ್ಕಗಳಿಗೆ ಸಮ್ಮತವಾಗಿರುವಂತಹದ್ದೂ ಅಲ್ಲ. ಬಡತನ ಮತ್ತು ನಿರುದ್ಯೋಗ ಕರ್ನಾಟಕದಲ್ಲಿ ಮಾತ್ರ ಇರುವುದಿಲ್ಲ. ಆ ಸಮಸ್ಯೆಗಳಿಗೆ ಕರ್ನಾಟಕ, ಬಿಹಾರ ಎಂಬ ಭೇದವೂ ಇಲ್ಲ. ಕರ್ನಾಟಕದಲ್ಲಿ ಬಲಿಷ್ಠರಾಗಿರುವ ಕನ್ನಡಿಗರೇ ಬಡಕನ್ನಡಿಗರಿಗೆ ಅನ್ನ, ವಸತಿ, ಶಿಕ್ಷಣ, ಆರೋಗ್ಯಗಳ ಕನಿಷ್ಟ ಸೌಲಭ್ಯಗಳನ್ನು ನಿರಾಕರಿಸುವ ವಾಸ್ತವದ ಬಗ್ಗೆ ಯಾವ ರಕ್ಷಣಾ ವೇದಿಕೆ ಏನು ಮಾಡಬಲ್ಲುದು ? ‘ಕನ್ನಡಿಗರಿಗೆ ಉದ್ಯೋಗ’ ಎಂಬ ಬೀದಿಕೂಗನ್ನು ಮುಂದೆ ಮಾಡಿಕೊಂಡು ಈ ಜನಗಳು ಬಿಹಾರಿ ತರುಣರಿಗೆ ಬೆಂಗಳೂರಿನಲ್ಲಿ ಹೊಡೆದಾಗ ನಿರುದ್ಯೋಗ ಎನ್ನುವುದು ಆರ್ಥಿಕ ಸಮಸ್ಯೆಯೋ ಅಥವಾ ಭಾಷಿಕ ಗುರುತಿಗೆ ಸಂಬಂಧಿಸಿದ ಸಮಸ್ಯೆಯೋ ಎಂಬ ಸರಳ ಪ್ರಶ್ನೆಯನ್ನು ಯಾರೂ ಕೇಳಲಿಲ್ಲ. ಈ ಬೀದಿಕೂಗಿನ ಸಂಘಟನೆಯವರು ನಡೆಸಿದ ಹಿಂಸಾಚಾರ ಒಂದು ಸಾರ್ವಜನಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಆದರೆ ಇದರ ದೇಖಾವೆಯಲ್ಲಿ ಹಿಂಸೆಗೊಳಗಾದ ಮನುಷ್ಯರು ಮತ್ತು ಅವರ ದೇಹಗಳು ಮಾತ್ರ ನಾಪತ್ತೆ.

‘ಕನ್ನಡದ ಮನಸ್ಸು' ಎಂಬುದು ಒಂದಿದ್ದರೆ ಅದು ಬೆಂಗಾಡೇ ಆಗಿರಬಹುದು. ಆದರೆ ಅನೇಕ ಲೇಖಕರು, ಕನ್ನಡದ ಪರಂಪರೆ ಹಾಗೂ ಕನ್ನಡಿಗರ ಸಹಿಷ್ಣುತೆ ಮುಂತಾದ ಸದ್ಗುಣಗಳನ್ನು ಹೇಳಲು ಮಾತ್ರ ಈ ನುಡಿಗಟ್ಟನ್ನು ಬಳಸುತ್ತಾರೆ; ಈ ಸದ್ಗುಣಗಳೆಲ್ಲ ಕನ್ನಡಿಗರಲ್ಲಿ ಇರುವುದೇ ನಿಜ ಎಂದು ಒಪ್ಪಿಕೊಂಡರೂ ಕನ್ನಡದ 'ಹುಟ್ಟು ಹೋರಾಟಗಾರರ' ವರ್ತನೆಯನ್ನು ಹಾಗೂ ಈಗೀಗ ಅದು ಪಡೆದುಕೊಳ್ಳುತ್ತಿರುವ ಜನಸಮ್ಮತಿಯನ್ನು ಹೇಗೆ ವಿವರಿಸುವುದು? ಇದೆಲ್ಲ ಸಮಕಾಲೀನ ರಾಜಕೀಯದ ಚಿಲ್ಲರೆ ಸಂಗತಿಗಳು ಹಾಗೂ 'ಕನ್ನಡದ ಮನಸ್ಸು' ಎಂಬ ಶಾಶ್ವತ ಸತ್ಯ ಇದನ್ನು ಮೀರಿ ನಿಲ್ಲುವಂತಹದ್ದು ಎಂದು ಕನ್ನಡದ ಅಭಿಮಾನಿಗಳು ವಾದಿಸಬಹುದು. ಕನ್ನಡಕ್ಕೆ ಸಾವಿರಾರು ವರ್ಷಗಳ ಚರಿತ್ರೆ ಇದೆ, ಸಾಹಿತ್ಯ ಇದೆ. ಕರ್ನಾಟಕಕ್ಕೆ ವಿಶಿಷ್ಟವಾದ ಧಾರ್ಮಿಕ ವೈಚಾರಿಕ ಚಳವಳಿಗಳಿವೆ. 'ಕನ್ನಡದ ಮನಸ್ಸು' ಎಂದರೆ ಕನ್ನಡದ ಈ ಪರಂಪರೆ ಎಂದೇ ಇಟ್ಟುಕೊಂಡರೂ ಈಗ ಅದರಲ್ಲಿ ನಮಗೆ ದಕ್ಕಿರುವುದು ಎಷ್ಟು?

Image
ಶೆಲ್ಡನ್ ಪೊಲಾಕ್

ಇತ್ತೀಚೆಗೆ ವಿದ್ವಾಂಸರೊಬ್ಬರು ಈ ಪ್ರಶ್ನೆಯನ್ನು ಕೇಳಿದ್ದಾರೆ. ಸಾಹಿತ್ಯ ಸಂಸ್ಕೃತಿಗಳ ಅಧ್ಯಯನದಲ್ಲಿ ತೊಡಗಿಕೊಂಡಿರುವವರಿಗೆ ಶೆಲ್ಡನ್ ಪೊಲಾಕ್ ಅಪರಿಚಿತರಲ್ಲ. ಅವರನ್ನು ಕನ್ನಡದ ಓದುಗರಿಗೆ ಮೊದಲು ಪರಿಚಯಿಸಿದವರು ದಿವಂಗತ ಕೆ.ವಿ.ಸುಬ್ಬಣ್ಣ. ಪೊಲಾಕ್ ಅವರ ಒಂದು ಕೃತಿಯನ್ನು ಕೆ.ವಿ. ಅಕ್ಷರ ಅನುವಾದಿಸಿ ಪ್ರಕಟಿಸಿದ್ದಾರೆ ('ವಿಶ್ವಾತ್ಮಕ ದೇಶಭಾಷೆ' - ಅಕ್ಷರ ಪ್ರಕಾಶನ, ಹೆಗ್ಗೋಡು-2003).

ಇತ್ತೀಚೆಗೆ ಕನ್ನಡಕ್ಕೆ ಕೇಂದ್ರ ಸರಕಾರ ಶಾಸ್ತ್ರೀಯ ಸ್ಥಾನಮಾನಗಳನ್ನು 'ದಯಪಾಲಿಸಿದ್ದರ' ಬಗ್ಗೆ ಕನ್ನಡಿಗರೆಲ್ಲರೂ ಆನಂದಪಡುತ್ತಿದ್ದಾಗ ಶೆಲ್ಡನ್ ಪೊಲಾಕ್ ಭಾರತದ 'ಶಾಸ್ತ್ರೀಯ' ಭಾಷೆಗಳ ಕುರಿತು ಹಿಂದು ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟಿಸಿದರು (The Real Classical Language Debate -The Hindu 27-11-2008, ಪುಟ-9).

ಪೊಲಾಕ್ ಅವರ ಈ ಲೇಖನವನ್ನು ತುಸು ಸಂಕ್ಷೇಪಿಸಿ ಹಾಗೂ ಅನುವಾದಿಸಿ ಇಲ್ಲಿ ಕೊಡುತ್ತಿದ್ದೇನೆ. ಇದು ನನ್ನ ಕೊನೆಯ ಉದ್ಧೃತ. ಪೊಲಾಕ್ ತನ್ನ ಲೇಖನದಲ್ಲಿ ಹೀಗೆ ಹೇಳುತ್ತಾರೆ:

"ಭಾರತೀಯ ಭಾಷೆಗಳಿಗೆ ಸ್ಥಾನಮಾನ ನೀಡುವುದರ ಕುರಿತು ನಡೆದ ಚರ್ಚೆ ನನಗೆ ತಮಾಷೆಯದ್ದಾಗಿ ಕಾಣುತ್ತಿದೆ. ಭಾಷೆಗಳ ನಡುವೆ, ಮೇಲು-ಕೀಳು ಎಣಿಸುವುದು ಮತ್ತು ಭೇದ ಕಲ್ಪಿಸುವುದು ಸೂಕ್ತವಲ್ಲ, ಅದು ಅಪಾಯಕಾರಿ ಕೂಡ ಎಂಬ ಮಾತು ಸರಿಯಾದದ್ದೇ. ಭಾಷೆಗಳ ನಡುವೆ ತರತಮ ಭೇದ ಮಾಡುವುದಕ್ಕೆ ಇರುವ ಸಾಕ್ಷ್ಯಾಧಾರಗಳು, ಪಾಂಡಿತ್ಯದ ದೃಷ್ಟಿಯಿಂದ ತೀರಾ ತೆಳು ಮತ್ತು ಈ ರೀತಿಯ ಭೇದ ಸೈದ್ಧಾಂತಿಕವಾಗಿ ಕೂಡ ದುರ್ಬಲವಾಗಿರುವಂತಹದ್ದು. ಆದರೆ ಈ ಚರ್ಚೆ ಒಳಗೊಂಡಿರುವ ಸಮಸ್ಯೆ ಕುರಿತು ಯೋಚಿಸುವಾಗ ನನಗೆ ಮಹಾಕವಿ ಭರ್ತೃಹರಿಯು ಹೇಳಿದ ಮಾತು ನೆನಪಾಗುತ್ತಿದೆ. "ಯಾರೇ ಆಗಲಿ, ಬಾವಿ ತೋಡಲು ‍ಮನೆಗೆ ಬೆಂಕಿ ಬೀಳುವವರೆಗೆ ಕಾಯಬಾರದು." ಭಾರತದ ಪ್ರಾಚೀನ ಭಾಷೆಗಳು ಎಂಬ ಮನೆಗೆ ಬೆಂಕಿ ಬಿದ್ದಿದೆ. ಅಷ್ಟೇ ಅಲ್ಲ, ಅದು ಪೂರ್ತ ಸುಟ್ಟು ಬೂದಿಯಾಗುವುದರಲ್ಲಿದೆ."

"X, Y, Z ಅಥವಾ ಇನ್ನಾವುದೇ ಭಾಷೆಯನ್ನು ಓದಬಲ್ಲವರೇ ಇಲ್ಲವೆಂದಾದರೆ ಆ ಭಾಷೆಗೆ ಶಾಸ್ತ್ರೀಯ ಭಾಷೆಯ ಮನ್ನಣೆ ದೊರೆತರೆ ಎಷ್ಟು, ಬಿಟ್ಟರೆ ಎಷ್ಟು? ಅದನ್ನು ಕಟ್ಟಿಕೊಂಡು ಯಾರಿಗೆ ಏನಾಗಬೇಕಾಗಿದೆ? ಯಾವುದೇ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದು ಆ ಭಾಷೆಯ ಆಳವಾದ ಅಧ್ಯಯನಕ್ಕೆ ದಾರಿ ಮಾಡಿಕೊಡುತ್ತದೆ ಎಂದಾದರೆ ಭಾರತದಲ್ಲಿ ಅಂತಹ ಮನ್ನಣೆಗೆ ಯೋಗ್ಯವಾಗಿರುವ ಡಜನ್ನಿಗೂ ಮಿಕ್ಕು ಭಾಷೆಗಳಿವೆ. ವಾಸ್ತವವಾಗಿ ಭಾರತದ ಆಧುನಿಕ ಪೂರ್ವ ಸಾಹಿತ್ಯ ಪರಂಪರೆ ಇಡೀ ಅಂತಹ ಒಂದು ಮನ್ನಣೆ ಮತ್ತು ಅಧ್ಯಯನಗಳಿಗಾಗಿ ಹಾತೊರೆಯುತ್ತಿದೆ."

"ಭಾರತಕ್ಕೆ ಸ್ವಾತಂತ್ರ್ಯ ದೊರತ ಹೊಸತರಲ್ಲಿ ಮತ್ತು ಅದಕ್ಕೆ ಮೊದಲಿನ ಎರಡು ಸಾವಿರ ವರ್ಷಗಳ ಕಾಲಾವಧಿಯಲ್ಲಿ ಪ್ರಾಚೀನ ಸಾಹಿತ್ಯ ಮತ್ತು ಭಾಷಿಕ ಪರಂಪರೆಗಳ ಆಳವಾದ ಅಧ್ಯಯನ ನಡೆಸಿದ ಪಂಡಿತರಿದ್ದರು. ಜಗತ್ತಿನ ಇತರೆಡೆಗಳ ವಿದ್ವಾಂಸರಿಗೆ ಇವರು ಯಾವುದರಲ್ಲೂ ಕಡಿಮೆ ಇರಲಿಲ್ಲ. ಭಾರತದ ಈ ಪಂಡಿತರು ಕನ್ನಡ, ಮಲೆಯಾಳಂ, ತಮಿಳು, ತೆಲುಗು, ಅಪಭ್ರಂಶ, ಅಸ್ಸಾಮಿ, ಬಂಗಾಳಿ, ಬೃಜ್‌ಭಾಷಾ, ಗುಜರಾತಿ, ಮರಾಠಿ, ಒರಿಯ, ಪರ್ಷಿಯನ್, ಪ್ರಾಕೃತ, ಸಂಸ್ಕೃತ, ಉರ್ದು ಭಾಷೆಗಳಲ್ಲಿ ಪ್ರಾಚೀನ ಸಾಹಿತ್ಯದ ಪಾಂಡಿತ್ಯಪೂರ್ಣ ಪಠ್ಯಗಳನ್ನು ಸಂಪಾದಿಸಿದರು. ಈಗಲೂ ಅದೇ ಆವೃತ್ತಿಗಳೇ ಬಳಕೆಯಲ್ಲಿದ್ದು ಅದಕ್ಕೆ ಬದಲಿಯೇ ಇಲ್ಲವೆಂಬ ಪರಿಸ್ಥಿತಿ ಇದೆ. ಪ್ರಾಚೀನ ಪಠ್ಯಗಳನ್ನು ಕಾಲದಿಂದ ಕಾಲಕ್ಕೆ ಪರಿಷ್ಕರಿಸಿ ಹೊಸ ಆವೃತ್ತಿಗಳನ್ನು ಪ್ರಕಟಿಸಬಾರದು ಎಂದೇನೂ ಇಲ್ಲ. ವಾಸ್ತವವಾಗಿ ಜ್ಞಾನದ ಗುಣವೇ ಸದಾ ತನ್ನನ್ನು ತಾನು ಪುನರ್ ಸೃಷ್ಟಿಸಿಕೊಳ್ಳುವುದು. ಆದರೆ ಪ್ರಾಚೀನ ಸಾಹಿತ್ಯ ಕೃತಿಗಳ ಹೊಸ ಹೊಸ ಆವೃತ್ತಿಗಳು ಪ್ರಕಟವಾಗುತ್ತಿಲ್ಲ; ಯಾಕೆಂದರೆ ಈಗ ಆ ಕೆಲಸ ಮಾಡುವವರೇ ಇಲ್ಲ. ಪ್ರಾಚೀನ ಭಾರತೀಯ ಭಾಷೆಗಳ ಅಧ್ಯಯನಕ್ಕೆ ಭಾರತದ ಎರಡು ತಲೆಮಾರುಗಳ ವಿದ್ಯಾರ್ಥಿಗಳು ಸಂಪೂರ್ಣವಾಗಿ ಹೊರಗಿನವರಾಗಿದ್ದಾರೆ. ಆರ್ಥಿಕ ಒತ್ತಡಗಳು ಇದಕ್ಕೆ ಸ್ವಲ್ಪ ಮಟ್ಟಿಗೆ ಕಾರಣ ಎಂಬುದು ನಿಜ; ಆದರೆ ಪರಂಪರೆ ಕುರಿತ ಅತೀವ ಆಲಕ್ಷ್ಯವೂ ಅಷ್ಟೇ ಕಾರಣವಾಗಿದೆ. ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ."

"ನನ್ನ ಮಾತಿಗೆ ಕೆಲವು ಉದಾಹರಣೆಗಳನ್ನು ಕೊಡಬಯಸುತ್ತೇನೆ. ಭಾರತದ ಪ್ರಾಚೀನ ಭಾಷೆಗಳ ಅಧ್ಯಯನದಲ್ಲಿ ಬಹಳ ಕಾಲದಿಂದ ತನ್ನನ್ನು ಗಂಭೀರವಾಗಿ ತೊಡಗಿಸಿಕೊಂಡಿರುವ ಅಮೇರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದು ಅನೇಕ ವರ್ಷಗಳಿಂದ ತೆಲುಗು ಸಾಹಿತ್ಯದ ಪ್ರಾಧ್ಯಾಪಕ ಹುದ್ದೆಗೆ ಒಬ್ಬ ಯೋಗ್ಯ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಆದರೆ ನನ್ನಯ್ಯನಿಂದ ಹಿಡಿದು ಸಮಕಾಲೀನ ಕವಿಗಳವರೆಗಿನ ತೆಲುಗು ಸಾಹಿತ್ಯ ಪರಂಪರೆಯ ಬಗ್ಗೆ ಅಧಿಕಾರವಾಣಿಯಿಂದ ಮಾತಾಡಬಲ್ಲ ಒಬ್ಬ ವಿದ್ವಾಂಸನೂ ಈವರೆಗೆ ಅವರಿಗೆ ಸಿಕ್ಕಿಲ್ಲ. ಈಗ ಆ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿರುವ ತೆಲುಗು ಪ್ರೊಫೆಸರ್ ಸದ್ಯದಲ್ಲೇ ನಿವೃತ್ತರಾಗಲಿದ್ದಾರೆ. ಅವರ ಜೊತೆಗೆ, ಆ ವಿಶ್ವವಿದ್ಯಾಲಯದಲ್ಲಿ ತೆಲುಗು ಭಾಷೆಯ ಪ್ರಾಚೀನ ಪರಂಪರೆಯ ಆಧ್ಯಯನ ನಿವೃತ್ತಿ ಹೊಂದಲಿದೆ. ಇತರ ಭಾಷೆಗಳ ಪರಿಸ್ಥಿತಿಯೂ ಇದಕ್ಕಿಂತ ಉತ್ತಮವಾಗಿ ಏನೂ ಇಲ್ಲ. ಉದಾಹರಣೆಗೆ ಬಂಗಾಲಿಯಲ್ಲಿ ರವೀಂದ್ರನಾಥ ಟಾಗೋರ್ ಅವರ ಕೃತಿಗಳ ಜೊತೆಗೆ ವೈಷ್ಣವ ಪದಗಳನ್ನು ಅಥವಾ 17ನೆಯ ಶತಮಾನದ ಚೈತನ್ಯ ಮಹಾಕವಿಯ 'ಚೈತನ್ಯ ಚರಿತಾಮೃತ'ವನ್ನು ಸೂಕ್ತವಾಗಿ ಓದಬಲ್ಲ ವಿದ್ವಾಂಸರೇ ವಿರಳ."

ಈ ಲೇಖನ ಓದಿದ್ದೀರಾ?: ನುಡಿ ನಮನ | ಸಾದತ್ ಹಸನ್ ಮಾಂಟೊವನ್ನು ನಮ್ಮ ಎದೆಗಿಳಿಸಿದವರು ಜಿ ಆರ್‌

"ಅನೇಕ ವರ್ಷಗಳ ಕಾಲ, ನಾನು ಪ್ರಾಚೀನ ಕನ್ನಡವನ್ನು ಮೈಸೂರಿನ ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಬಳಿ ಅಧ್ಯಯನ ಮಾಡಿದೆ. ಈ ಮಹನೀಯರು ನಾನು ಮೇಲೆ ಹೇಳಿದ ಪ್ರಕಾಂಡ ಪಾಂಡಿತ್ಯದ ಓರ್ವ ಉಜ್ವಲ ಪ್ರತಿನಿಧಿ. ಆದರೆ, ಕರ್ನಾಟಕದಲ್ಲಿ ನಾನು ಇದ್ದಷ್ಟು ಕಾಲ ನನಗೆ ಕನ್ನಡದ ಶ್ರೇಷ್ಠ ಪ್ರಾಚೀನ ಕವಿಗಳಾದ ಪಂಪ, ರನ್ನ, ಪೊನ್ನ ಮೊದಲಾದವರ ಕೃತಿಗಳನ್ನು ಆಳವಾಗಿ ಅಭ್ಯಸಿಸಿದ ಒಬ್ಬ ತರುಣ ವಿದ್ವಾಂಸನೂ ಕಾಣಸಿಗಲಿಲ್ಲ. ಕರ್ನಾಟಕ, ಪ್ರಾಚೀನ ಶಾಸನಗಳ ಒಂದು ಅಪೂರ್ವವಾದ ಭಂಡಾರವೇ ಆಗಿದೆ. ಈ ಶಾಸನಗಳ ಪಾಂಡಿತ್ಯಪೂರ್ಣ ಓದಿನ ಕುರಿತು ಏನನ್ನೂ ಹೇಳದೆ ಇರುವುದೇ ಒಳ್ಳೆಯದು."

"ಇವತ್ತು ಭಾರತದ ರಾಜಧಾನಿಯಲ್ಲಿರುವ ಎರಡು ವಿಶ್ವವಿದ್ಯಾಲಯಗಳಲ್ಲಿ ಅಭಿಜಾತ ಹಿಂದಿ ಸಾಹಿತ್ಯ ಹಾಗೂ ಕೇಶವದಾಸ ಮತ್ತು ಅವನ ನಂತರ ಬಂದ ಮಹಾಕವಿಗಳ ಕೃತಿಗಳ ಕುರಿತು ಯಾರೊಬ್ಬನೂ ಸಂಶೋಧನೆ ನಡೆಸುತ್ತಿಲ್ಲ. ಈ ಪರಿಸ್ಥಿತಿಯ ಶೋಚನೀಯತೆಯನ್ನು ಕಲ್ಪಿಸಿಕೊಳ್ಳಲು, ಈಗ ಪ್ಯಾರಿಸ್ ನಗರದಲ್ಲಿ ಕಾರ್ನೆ (Corneille), ರಸೀನ್  (Racine) ಮತ್ತು ಮೋಲಿಯೆ (Moliere) ಬಗ್ಗೆ ಯಾರೂ ಅಧ್ಯಯನ ನಡೆಸುತ್ತಿಲ್ಲ ಎಂದಾದರೆ ಹೇಗಿರುತ್ತದೆ ಎಂದು ಯೋಚಿಸಿ. ನನ್ನ ಈ ಹೋಲಿಕೆ ಯುಕ್ತವಾದದ್ದೇ ಆಗಿದೆ: ಇಂತಹ ಅನಾದರದ ಕಾರಣದಿಂದಲೇ ಬೃಜ್ಭಾಷಾದಂತಹ ಶಾಸ್ತ್ರೀಯ ಭಾಷೆಯ ಅಸಂಖ್ಯಾತ ಕೃತಿಗಳು ಯಾರೂ ಅವನ್ನು ಸಂಪಾದಿಸುವವರಿಲ್ಲದೆ ಧೂಳು ತಿನ್ನುತ್ತ ಬಿದ್ದಿವೆ."

"ಇಂಡೋ ಪರ್ಷಿಯನ್ ಸಾಹಿತ್ಯದ ಮಟ್ಟಿಗೆ ಈ ಮಾತು ಇನ್ನಷ್ಟು ನಿಜ. ಆ ಸಾಹಿತ್ಯ ಪರಂಪರೆಯ ಅಸಂಖ್ಯಾತ ಕಡತಗಳು ಹಾಗೂ ಮೊಘಲ್ ಸಾಮ್ರಾಜ್ಯದ ಆಸ್ಥಾನ ಕವಿಗಳ ದಿವಾನ್ಗಳನ್ನು ಯಾರೂ ಪ್ರಕಟಿಸಿಲ್ಲ; ಯಾರೂ ಓದಿಯೂ ಇಲ್ಲ. ಈ ಕ್ಷೇತ್ರದ ಅಧ್ಯಯನ ಕುರಿತು, ಒಬ್ಬ ತಜ್ಞರ ಬಳಿ ನಾನು ವಿಚಾರಿಸಿದಾಗ, ಅವರು ಈಗ ೮೦ರ ಇಳಿವಯಸ್ಸಿನಲ್ಲಿರುವ ಪಂಡಿತರ ಬಗ್ಗೆ ಹೇಳಿದರೇ ಹೊರತು ಅವರಿಗಿಂತ ಕಿರಿಪ್ರಾಯದ ಯಾರೊಬ್ಬನನ್ನೂ ಹೆಸರಿಸಲಿಲ್ಲ."

"ಎರಡು ವರ್ಷಗಳ ಕೆಳಗೆ ಉದಯಪುರದಲ್ಲಿ ನಾನು ಒಂದು ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದೆ. ಅದು ಭಾರತದಲ್ಲಿ ಮಾನವಿಕ ಅಧ್ಯಯನದ ಕುರಿತ ಸಂಕಿರಣವಾಗಿತ್ತು. ಆ ಸಂಕಿರಣದಲ್ಲಿ ಭಾಗವಹಿಸಿದ ನೂರಕ್ಕೂ ಹೆಚ್ಚು ಪ್ರತಿನಿಧಿಗಳಲ್ಲಿ – ಅವರಲ್ಲಿ ಕೆಲವರು ಸಾಹಿತ್ಯದ ಶ್ರೇಷ್ಠ ವಿದ್ವಾಂಸರು- "ನಿಮ್ಮಲ್ಲಿ ಎಷ್ಟು ಮಂದಿ, ನಿಮ್ಮ ವಿದ್ಯಾರ್ಥಿಗಳನ್ನು ಪ್ರಾಚೀನ ಸಾಹಿತ್ಯ ಕೃತಿಗಳನ್ನು ಓದುವುದಕ್ಕೆ ತರಬೇತುಗೊಳಿಸುತ್ತಿದ್ದೀರಿ?" ಎಂದು ಕೇಳಿದೆ. ಮೂವರು ಕೈ ಎತ್ತಿದರು. ಆ ಮೂವರೂ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು."

"ಅಪಭ್ರಂಶದ ಶ್ರೇಷ್ಠ ವಿದ್ವಾಂಸ ಎಚ್ ಸಿ ಭಯಾನಿ ಒಂಬತ್ತು ವರ್ಷಗಳ ಕೆಳಗೆ ತೀರಿಕೊಂಡರು. ನನಗೆ ಗೊತ್ತಿರುವ ಮಟ್ಟಿಗೆ ಭಾರತದ ಅಪಭಂಶದ ಅಧ್ಯಯನವೂ ಅವರೊಟ್ಟಿಗೆ ಅವಸಾನಗೊಂಡಿದೆ. ಅಪಭ್ರಂಶಕ್ಕೆ ಆಗಿರುವುದು, ಭಾರತದಲ್ಲಿ ಈಗ ನಡೆಯುತ್ತಿರುವ ಸಂಸ್ಕೃತಿಯ ಮಾರಣಹೋಮದ ಸಂಕೇತವೆಂದೇ ನನಗೆ ಅನ್ನಿಸುತ್ತಿದೆ. ಪ್ರಾಚೀನ ಭಾಷೆಗಳ ಜ್ಞಾನ ಮತ್ತು ಅದರೊಟ್ಟಿಗೆ ಬರುವ ಎಲ್ಲ ಕೌಶಲಗಳು-ಉದಾಹರಣೆಗೆ ಬ್ರಾಹ್ಮ, ಮೋಡಿ, ಶಿಖಸ್ತ ಮೊದಲಾದ ಲಿಪಿಗಳನ್ನು ಓದುವ ಕೌಶಲಗಳು ನಾಶವಾಗಿವೆ."

"ನಾನು ಭಾರತದ ಎಲ್ಲ ವಿಶ್ವವಿದ್ಯಾಲಯಗಳನ್ನೂ ನೋಡಿಲ್ಲ. ನನ್ನ ಮಾತುಗಳಿಗೆ ಅಪವಾದಗಳು ಇವೆ ಎಂದು ನನಗೆ ಗೊತ್ತಿದೆ. ಆದರೆ ಇನ್ನು ಎರಡು ತಲೆಮಾರುಗಳ ಒಳಗೆ,  ವಿಶ್ವನಾಗರಿಕತೆಗೆ ಭಾರತದ ಮಹೋನ್ನತ ಕೊಡುಗೆಯಾದ ಭಾರತೀಯ ಪ್ರಾಚೀನ ಸಾಹಿತ್ಯವನ್ನು  ಓದಬಲ್ಲವರು ಯಾರೂ ಇರುವುದಿಲ್ಲ ಎಂದು ಹೇಳಿದರೆ ಅದು ಖಂಡಿತ ಅತಿಶಯೋಕ್ತಿ ಆಗುವುದಿಲ್ಲ."

ಶೆಲ್ಡನ್ ಪೊಲಾಕ್ ಕೂಡ ನಮ್ಮ ಒಳಹೊರಗುಗಳನ್ನು ಆವರಿಸಿಕೊಳ್ಳುತ್ತಿರುವ ಬೆಂಗಾಡಿನ ಬಗೆಗೇ ಹೇಳುತ್ತಿರುವುದಲ್ಲವೇ?

* * * * *

ಈ ಲೇಖನವು 2009ರಲ್ಲಿ  'ಶೂದ್ರ' ಪತ್ರಿಕೆಯಲ್ಲಿ ಪ್ರಕಟವಾಗಿ, ಬಳಿಕ ಅಕ್ಷರ ಪ್ರಕಾಶನವು ಹೊರತಂದ ಜಿ ರಾಜಶೇಖರ ಅವರ ಆಯ್ದ ಬರಹಗಳು ಸಂಕಲನದಲ್ಲಿ ಬೆಳಕು ಕಂಡಿದೆ. ಇದನ್ನು  'ಈ ದಿನ.ಕಾಮ್'ನಲ್ಲಿ ಪ್ರಕಟಿಸಲು ಜಿ ರಾಜಶೇಖರ ಅವರ ಮಡದಿ ಮತ್ತು ಮಕ್ಕಳು ಒಪ್ಪಿಗೆ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು.

ಮುಖ್ಯ ಚಿತ್ರ ಕೃಪೆ: ಕುಂಟಾಡಿ ನಿತೇಶ್
ನಿಮಗೆ ಏನು ಅನ್ನಿಸ್ತು?
1 ವೋಟ್