ʼಗೌರಿʼ ಮಮತೆಯ ಕಡಲಿನ ವಿಶಾಲ ಹರಹೂ ಹೌದು, ಕಡಲ ಕಿನಾರೆಯ ದಾರಿತೋರುವ ದೀಪದ ಗೋಪುರವೂ ಹೌದು!

gouri lankesh

ಗೌರಿ ಭಾರತದ ಭವಿಷ್ಯದ ಬಗ್ಗೆ ತೀವ್ರವಾಗಿ ಆತಂಕಗೊಂಡಿದ್ದ, ಪ್ರತಿ ಕ್ಷಣ ಇಂತಹ ಫ್ಯಾಸಿಸಂನ ಅಪಾಯಕ್ಕೆ ತಿರುಗೇಟು ನೀಡುವ ಬಗೆಯೇನು ಎಂದು ಚಿಂತಿಸುತ್ತಿದ್ದ, ಅದನ್ನೇ ಬರೆಯುತ್ತಿದ್ದ, ಬರೆಯುವುದಕ್ಕಷ್ಟೇ ಸೀಮಿತವಾಗದೆ ತಳಮಟ್ಟಕ್ಕಿಳಿದು ಕಟ್ಟಲು ಬಯಸಿದ, ಆ ಕನಸನ್ನೇ ಉಸಿರಾಡುತ್ತಿದ್ದ ನಿಜವಾದ ಚಿಂತಕಿಯಾಗಿದ್ದರು. ಒಬ್ಬ ‘ಆರ್ಗಾನಿಕ್ ಇಂಟಲೆಕ್ಚುವಲ್’ ಆಗಿದ್ದರು.

ಗೌರಿ ಲಂಕೇಶರು ದೈಹಿಕವಾಗಿ ನಮ್ಮೊಂದಿಗಿಲ್ಲದೆ ಐದು ವರ್ಷಗಳಾಗುತ್ತಿರುವಾಗ ರೂಪಿಸಲಾದ ಕಾರ್ಯಕ್ರಮದಲ್ಲಿ ಸತ್ಯವನ್ನು ಶೋಧಿಸಿದ ಕಾರಣಕ್ಕೆ ಜೈಲಿಗೆ ಹೋಗಬೇಕಾಗಿ ಬಂದ ಬೆಂಗಳೂರಿನ ಯುವ ಪತ್ರಕರ್ತ ಮತ್ತು ಆಲ್ಟ್ ನ್ಯೂಸ್‍ನ ಸಹ ಸಂಸ್ಥಾಪಕ ಮಹಮ್ಮದ್ ಝುಬೇರ್ ಕೂಡಾ ಬರುವವರಿದ್ದಾರೆ ಎಂಬುದನ್ನು ನೋಡಿದ ತಕ್ಷಣ, ಗೌರಿ ಇದ್ದಿದ್ದರೆ ಝುಬೇರ್‌ನ ಬಂಧನದ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಿರುತ್ತಿದ್ದರು ಎಂಬ ದಿಕ್ಕಿಗೆ ತಾನಾಗಿಯೇ ಯೋಚನೆ ಹೊರಳುತ್ತದೆ.

Eedina App

ಜೆಎನ್‍ಯುನಲ್ಲಿ ದನಿಯೆತ್ತಿದ ಯುವಕ ಯುವತಿಯರ ಪ್ರತಿನಿಧಿಗಳನ್ನಾಗಿ ಕನ್ಹಯ್ಯ ಕುಮಾರ್, ಶೆಹ್ಲಾ ರಶೀದ್, ಉಮರ್ ಖಾಲಿದ್ ಅವರುಗಳನ್ನು, ಗುಜರಾತಿನ ಪ್ರತಿಕೂಲ ಪರಿಸ್ಥಿತಿಯಲ್ಲೂ ದಲಿತ ಸ್ವಾಭಿಮಾನದ ಊನಾ ಚಳವಳಿಯನ್ನು ಮುನ್ನಡೆಸಿದ ಯುವನಾಯಕ ಜಿಗ್ನೇಶ್ ಮೇವಾನಿಯಾಗಲಿ, ಉತ್ತರ ಪ್ರದೇಶದಲ್ಲಿ ಭೀಮ್ ಆರ್ಮಿ ಕಟ್ಟಿದ ಚಂದ್ರಶೇಖರ್ ರಾವಣ್ ಆಗಲಿ, ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಕಟ್ಟಿ ದಮನಿತರ ಪರವಾದ ಪ್ರಖರ ಆದರ್ಶಗಳನ್ನು ಶಾಶ್ವತವಾಗಿ ಎತ್ತಿಹಿಡಿದ ರೋಹಿತ್ ವೇಮುಲ ಆಗಲಿ- ಇವರನ್ನೆಲ್ಲ ಗೌರಿ ಮಕ್ಕಳೆಂದು ಕೊಂಡಾಡುತ್ತಿದ್ದರು. ಯಾವ ಭಿಡೆಯಿಲ್ಲದೆ ನನ್ನ ಮಕ್ಕಳು ಎಂದು ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅನೇಕರು ಅವರ ಈ ತಾಯಿಯ ಮಮತೆಯ ಮಗ್ಗುಲನ್ನು ಕಂಡಿದ್ದಾರೆ, ಕಂಡುಂಡಿದ್ದಾರೆ. ಬಹುಶಃ ಝುಬೇರ್ ಕೂಡಾ ತನ್ನ ತಮ್ಮನೋ ಮಗನೋ ಎಂದು ಗೌರಿ ಹೇಳಿಕೊಂಡು ಕಳವಳಪಡುತ್ತಿದ್ದರು, ಅವರ ಬಿಡುಗಡೆಗೆ ಏನು ಮಾಡಲಿ ಎಂದು ಚಡಪಡಿಸಿ, ಕ್ರಿಯಾಶೀಲರಾಗುತ್ತಿದ್ದರು.

ಆದರೆ, ಗೌರಿ ಅವರನ್ನೆಲ್ಲ ಅಭಿಮಾನಿಸುವುದರಲ್ಲಿ ಕೇವಲ ಮುಗ್ಧವಾದ ತಾಯಿಪ್ರೀತಿಯ ಒಂದು ಆಯಾಮ ಮಾತ್ರವಲ್ಲ ಇದ್ದದ್ದು, ಈ ಎಲ್ಲ ಯುವಜನರು ಸೇರಿ ಭಾರತಕ್ಕೆ ಬೇಕಿರುವ ಹೊಸ ಮಾದರಿಯ ಹೋರಾಟದ ಎಪಿಸೆಂಟರ್ ಆಗುತ್ತಾರೆ, ಆಗಬೇಕೆಂಬ ಹಂಬಲ ಗೌರಿಯ ಮನದಾಳದಲ್ಲಿತ್ತು. ಚಳವಳಿ, ಹೋರಾಟದ ಹಿನ್ನೆಲೆಯಿಂದ ಸಾರ್ವಜನಿಕ ಬದುಕನ್ನು ಗೌರಿ ಪ್ರವೇಶಿಸಿಲ್ಲದಿರಬಹುದು, ಆದರೆ, ಬಹಳ ಬೇಗ ಅವರ ಪತ್ರಕರ್ತೆಯ ಪಾತ್ರಕ್ಕೂ ಸಾಮಾಜಿಕ ಕಾರ್ಯಕರ್ತೆಯ ಪಾತ್ರಕ್ಕೂ ನಡುವಿದ್ದ ಗೆರೆ ಅಳಿಸಿಹೋಗಿ ಎರಡನ್ನೂ ತನ್ನ ಕರ್ತವ್ಯವೆಂದು ಭಾವಿಸಿದ, ನಿಭಾಯಿಸಿದ ಗೌರಿ ರೂಪುಗೊಂಡರು. ಆ ನೆಲೆಯಿಂದ ಅವರು ಚಳವಳಿಗಳೊಳಕ್ಕೆ ಬೇರೆ ಬೇರೆ ದಿಕ್ಕುಗಳಿಂದ ಧುಮುಕುತ್ತಿದ್ದ ಯುವಜನರನ್ನು ಭವಿಷ್ಯದ ಮಾನವತಾವಾದಿ, ಜಾತ್ಯತೀತ ಜನಾಂದೋಲನದ ಚುಕ್ಕಾಣಿಗಳೆಂದು ಕರೆದರು. ಆ ಯುವಜನರು ಹುಟ್ಟುಹಾಕಿದ ಹೊಸ ವೊಕ್ಯಾಬುಲರಿಯನ್ನು ಸಂಭ್ರಮಿಸಿದರು, ನಿರರ್ಗಳವಾಗಿ ನಿಖರವಾಗಿ ತಮಗನಿಸಿದ್ದನ್ನು ಹೇಳಬಲ್ಲ, ಬರೆಯಬಲ್ಲ ಅವರ ಸಾಮರ್ಥ್ವನ್ನು ಆಶಾಕಿರಣವಾಗಿ ನೋಡಿದರು. ಇದು ಕೇವಲ ಎಲ್ಲ ಮಕ್ಕಳ ಪ್ರೀತಿಯ ತಾಯಿ ಗೌರಿಯಾಗಿ ಮಾತ್ರ ಸಾಧ್ಯವಾಗುವಂಥದ್ದಾಗಿರಲಿಲ್ಲ.

AV Eye Hospital ad
ಯುವ ನಾಯಕರಾದ ಜಿಗ್ನೇಶ್‌ ಮೆವಾನಿ ಮತ್ತು ಕನಯ್ಯ ಜೊತೆ ಗೌರಿ
ಯುವ ನಾಯಕರಾದ ಜಿಗ್ನೇಶ್‌ ಮೇವಾನಿ ಮತ್ತು ಕನ್ಹಯ್ಯ ಕುಮಾರ್ ಜೊತೆ ಗೌರಿ

ಆರ್ಗಾನಿಕ್ ಇಂಟಲೆಕ್ಚುವಲ್

ಗೌರಿ ಭಾರತದ ಭವಿಷ್ಯದ ಬಗ್ಗೆ ತೀವ್ರವಾಗಿ ಆತಂಕಗೊಂಡಿದ್ದ, ಪ್ರತಿ ಕ್ಷಣ ಇಂತಹ ಫ್ಯಾಸಿಸಂನ ಅಪಾಯಕ್ಕೆ ತಿರುಗೇಟು ನೀಡುವ ಬಗೆಯೇನು ಎಂದು ಚಿಂತಿಸುತ್ತಿದ್ದ, ಅದನ್ನೇ ಬರೆಯುತ್ತಿದ್ದ, ಬರೆಯುವುದಕ್ಕಷ್ಟೇ ಸೀಮಿತವಾಗದೆ ತಳಮಟ್ಟಕ್ಕಿಳಿದು ಕಟ್ಟಲು ಬಯಸಿದ, ಆ ಕನಸನ್ನೇ ಉಸಿರಾಡುತ್ತಿದ್ದ ನಿಜವಾದ ಚಿಂತಕಿಯಾಗಿದ್ದರು. ಇಟಲಿಯ ಫ್ಯಾಸಿಸಂ ವಿರೋಧಿ ಕಮ್ಯುನಿಸ್ಟ್ ಹೋರಾಟಗಾರ ಬರಹಗಾರ ಗ್ರಾಮ್ಷಿಯ ಪದಗಳಲ್ಲಿ ಹೇಳುವುದಾದರೆ ಒಬ್ಬ ‘ಆರ್ಗಾನಿಕ್ ಇಂಟಲೆಕ್ಚುವಲ್’ ಆಗಿದ್ದರು.

ಜನಪರ ಚಳವಳಿಗಳ ಹಲವು ಧಾರೆಗಳಲ್ಲಿ ಚಾರಿತ್ರಿಕ ಕಾರಣಗಳಿಗೆ, ಸೈದ್ಧಾಂತಿಕ ಕಾರಣಗಳಿಗೆ ಭಿನ್ನತೆಗಳು ನೆಲೆಸಿವೆ. ಗೌರಿಗೆ ಇವೆಲ್ಲದರ ನಡುವೆ ಸೇತುವೆ ಕಟ್ಟುವುದು ಹೇಗೆಂಬುದೇ ಅತ್ಯಂತ ಪ್ರಮುಖ ಪ್ರಶ್ನೆಯಾಗಿ ಕಾಡಿತ್ತು. 2013ರ ಮೇ ತಿಂಗಳಿನ ಒಂದು ಸಂಪಾದಕೀಯ ಬರಹ ‘ಕಂಡಹಾಗೆ’ಯಲ್ಲಿ ಗೌರಿ ಹೀಗೆ ಬರೆಯುತ್ತಾರೆ. “ಬಿಜೆಪಿ ಮಾತ್ರ ದುಷ್ಟ ಪಕ್ಷವಾದರೆ ಉಳಿದವರೆಲ್ಲ ಸಾಚಾನಾ ಅಂತ ನೀವು ಕೇಳಬಹುದು. ಇತರ ರಾಜಕೀಯ ಪಕ್ಷಗಳು ಶುದ್ಧ, ದಕ್ಷ ಎಂದು ಯಾರೂ ಈ ಕಾಲದಲ್ಲಿ ಹೇಳುವುದಿಲ್ಲ. ಆದರೆ ಬಿಜೆಪಿಯ ರಾಜಕೀಯ ಉದ್ದೇಶದಲ್ಲೇ ದುಷ್ಟತೆ ಅಡಗಿದ್ದರೆ, ಉಳಿದ ಪಕ್ಷಗಳ ದುಷ್ಟತನ ಇರುವುದು ಅವರ ತಪ್ಪು ಕ್ರಿಯೆಗಳ ಪರಿಣಾಮದಲ್ಲಿ.....”
“......ಬೇರೆ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸುವರ್ಣಯುಗ ಪ್ರಾರಂಭವಾಗುವುದಿಲ್ಲ ನಿಜ. ಆದರೆ ನಮ್ಮ ರಾಜ್ಯ ಈಗಿನ ಸ್ಥಿತಿಗಿಂತ ಕೆಟ್ಟ ಸ್ಥಿತಿಗೆ ಹೋಗಬಾರದೆಂದರೆ, ಈಗಿರುವ ಅವಕಾಶವನ್ನು ಉಪಯೋಗಿಸಿಕೊಂಡು ಜನರು ಬಿಜೆಪಿಗೆ ಮಣ್ಣುಮುಕ್ಕಿಸಬೇಕಿದೆ. ಜನರ ನಡುವಿರುವ ಎಲ್ಲ ಪ್ರಗತಿಪರರೂ ತಮ್ಮ ನಡುವಿನ ಭಿನ್ನತೆಗಳನ್ನು ಬದಿಗಿಟ್ಟು ಸಮಾನ ಶತ್ರುಗಳನ್ನು ಸೋಲಿಸುವುದು ಹೇಗೆಂದು ಚಿಂತಿಸುವುದೇ ಈಗಿನ ತುರ್ತು ಅಗತ್ಯ”.

2014ರ ನಂತರವಂತೂ ಅವರೂ, ಅವರ ಆಪ್ತ ಗೆಳತಿ ಕೋಮುವಾದದ ವಿರುದ್ಧ ದಣಿವಿಲ್ಲದೆ ಸೆಣೆಸುತ್ತಿರುವ ತೀಸ್ತಾ ಅವರೂ ಸದಾ ಚಿಂತಿಸುತ್ತಿದ್ದದ್ದು ಮೋದಿಯ ಕರಾಳ ಆಳ್ವಿಕೆಯ ಸತ್ಯವನ್ನು ಜನರಿಗೆ ಮನವರಿಕೆ ಮಾಡುವುದು ಹೇಗೆ ಎಂಬ ಬಗ್ಗೆ. ಅದಕ್ಕೆ ಎಲ್ಲ ಚಳವಳಿಗಳನ್ನೂ ಬೆಸೆಯುವುದು ಅಷ್ಟು ಮುಖ್ಯವಾದ ಸಂಗತಿಯಾಗಿ ಗೌರಿಗೆ ಕಾಣಿಸಿತ್ತು. ತಕ್ಷಣದ ಸಂದರ್ಭ ಮುಂದಿಟ್ಟಿರುವ ಅಗಾಧವಾದ ಸವಾಲನ್ನು ಮನವರಿಕೆ ಮಾಡಿಕೊಂಡು ಕಾಲದ ಕರೆಗೆ ಓಗೊಟ್ಟ, ಪ್ರಾಯೋಗಿಕವಾಗಬಲ್ಲ ಪರಿಹಾರೋಪಾಯಗಳ ಬಗ್ಗೆ ಚಿಂತಿಸಿದ ವಿಚಾರವಾದಿ ಅವರು. ಅದಕ್ಕಾಗಿ ಹೊಸ ತಲೆಮಾರಿನ ನಾಯಕತ್ವದಲ್ಲಿ ಹೊಸ ಸೃಜನಶೀಲ ಪ್ರಯೋಗಗಳಾಗಬೇಕೆಂಬುದನ್ನು ಹಂಬಲಿಸುತ್ತಾ, ಅಂಬೇಡ್ಕರ್‌ವಾದ, ಮಾರ್ಕ್ಸ್‌ವಾದ, ಸಮಾಜವಾದ ಮತ್ತು ಇನ್ನಿತರ ಎಲ್ಲ ಜನಪರ ಧಾರೆಗಳ ಹಿನ್ನೆಲೆಯ ಯುವಜನರೊಂದಿಗೆ ಮುಕ್ತಮನಸ್ಸಿನ, ಪೂರ್ವಾಗ್ರಹರಹಿತವಾದ, ರಾಜಕೀಯ ಮತ್ತು ಭಾವನಾತ್ಮಕ ಸ್ನೇಹಸಂಬಂಧವನ್ನು ಅವರು ಹೆಣೆದುಕೊಂಡಿದ್ದರು. ಎಷ್ಟೋ ಬಾರಿ ಕೆಲವು ತುರ್ತು ಸಂದರ್ಭಗಳಲ್ಲಿ ಅನುಭವಿ ಚಳವಳಿಗಾರರೇ ಗೊಂದಲಕ್ಕೊಳಗಾಗುವಾಗಲೂ ಸ್ಪಷ್ಟವಾಗಿದ್ದವರು, ಈ ಕಾಲಕ್ಕೆ ಬೇಕಾದುದೇನು ಎಂಬುದರ ಬಗ್ಗೆ ಸರಳವಾಗಿ ಗ್ರಹಿಸಿ, ಅಷ್ಟೇ ಸ್ನೇಹಯುತವಾಗಿ ಜಾರಿಗೊಳಿಸಲು ಪ್ರಯತ್ನಿಸಿದವರು ಗೌರಿ ಲಂಕೇಶ್.

ಇದನ್ನು ಓದಿದ್ದೀರಾ? ಗೌರಿ ನೆನಪು | ನೀಲಿ ಆಕಾಶದೊಳಗೆ ಹೊಳೆವ ನೀಲಿ ನಕ್ಷತ್ರ ನಮ್ಮ ಗೌರಕ್ಕ

ಈ ಎಲ್ಲವನ್ನೂ ತತ್‍ಕ್ಷಣಕ್ಕೆ ನೆನೆದರೆ ಥಟ್ಟನೆ ಮನಸ್ಸಿಗೆ ಬರುವುದು ಮಾಕ್ಸಿಂ ಗಾರ್ಕಿಯ ‘ತಾಯಿ’. ತನ್ನ ಮಗ ಪಾವೆಲ್ ಮತ್ತು ಜೊತೆಗಾರ ಮಕ್ಕಳೊಂದಿಗೆ ಸೇರಿ, ತಾನು ಮಾಡುತ್ತಿರುವುದು ಬಹಳ ಚಿಕ್ಕ ಕೆಲಸ ಎಂದುಕೊಳ್ಳುತ್ತಲೇ ಉದಾತ್ತವಾದ ಧ್ಯೇಯಕ್ಕೆ ದುಡಿದು ದೊಡ್ಡವಳಾದ ತಾಯಿಯ ಹಲವು ಛಾಯೆಗಳು ಗೌರಿಯವರಲ್ಲೂ ಕಾಣದಿರದು. ಹಾಗಾಗಿಯೇ ಅವರು ಮಮತೆಯ ಕಡಲೂ ಹೌದು, ಕಡಲ ಯಾನದಲ್ಲಿ ದಾರಿತಪ್ಪುವ ಯಾತ್ರಿಕರಿಗೆ ದಿಕ್ಕು ತೋರಿಸಲು ಕಡಲ ತಡಿಯಲ್ಲಿ ನಿಂತಿರುವ ದೀಪದ ಗೋಪುರವೂ ಹೌದು!

ನಿಮಗೆ ಏನು ಅನ್ನಿಸ್ತು?
3 ವೋಟ್
eedina app