ಅಂಗನವಾಡಿ ಮಹಿಳೆಯರ ಕೂಗು ಕೇಳದ ಸರ್ಕಾರ | ಬೀದಿಯಲ್ಲಿ ನಿಂತವರು ಕೇಳುತ್ತಿರುವುದೇನು?

CITU protest

ಅಂಗನವಾಡಿ ತಾಯಂದಿರು ಬೆಂಗಳೂರಿನ ಬೀದಿಯಲ್ಲಿ ಕೂತಿದ್ದಾರೆ. ಈ ಚಳಿಯಲ್ಲಿ ಅವರು ಬೀದಿಯಲ್ಲೇ ಮಲಗಬೇಕಾಗಿದೆ. ಅವರೇಕೆ ಇಲ್ಲಿ ಬಂದಿದ್ದಾರೆ? ಏನು ಹೇಳುತ್ತಿದ್ದಾರೆ? ಅವರ ಸಮಸ್ಯೆಗಳು, ಬೇಡಿಕೆಗಳ ಕುರಿತು ಸುಪ್ರೀಂಕೋರ್ಟು ಹೇಳಿರುವುದಕ್ಕಿಂತ ಹೆಚ್ಚಿನದ್ದೇನನ್ನೂ ಅವರು ಕೇಳುತ್ತಿಲ್ಲ. ನಿಮ್ಮ ಕೆಲವು ಸಮಯ ಮೀಸಲಿಟ್ಟು ಅವರ ಗೋಳಿನ ಕಥೆ ಓದಿರಿ..

ಬೆಂಗಳೂರಿನಲ್ಲಿ ಪ್ರತಿಭಟನೆಗೆ ಕುಳಿತಿರುವ ಅಂಗನವಾಡಿ ಮಹಿಳೆಯರು ಟ್ರಾಫಿಕ್‌ ಜಾಮ್‌ ಮಾಡಿದ್ದಾರೆಂದೂ, ಚುನಾವಣಾ ಸಂದರ್ಭವಾದ್ದರಿಂದ ಯಾವುದೋ ಪಕ್ಷದವರು ಕೊಟ್ಟ ಕಾಸಿಗೆ ಬಂದು ಕುಳಿತಿದ್ದಾರೆ ಎಂದೋ ಮೂಗು ಮುರಿಯುವವರಿಗೆ ಉತ್ತರಿಸುವ ಅಗತ್ಯ ಇಲ್ಲ. 

ಎಲ್ಲರ ದೃಷ್ಟಿಯಲ್ಲಿ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ  ಹೆಣ್ಣು ಮಕ್ಕಳು ಕೊರೆವ ಚಳಿಯಲಿ ಡಾಂಬರು ರಸ್ತೆಯನ್ನೇ ಆಶ್ರಯಿಸಿದ್ದಾರೆ ಯಾಕೆ? ಅವರ ಬೇಡಿಕೆಗಳೇನು? ಅವರ ಕೆಲಸದ ಕುರಿತು ಸುಪ್ರೀಂಕೋರ್ಟ್‌ ಏನು ಹೇಳಿದೆ? ಅವರಿಗಿರುವ ಕಾನೂನು ರಕ್ಷಣೆಗಳು ಏನೇನು ಎಂಬುದನ್ನು ಕೇಳಿಸಿಕೊಳ್ಳುವ ವ್ಯವಧಾನ ಇದ್ದರೆ ಸಾಕು, ಅವರ ಅಭಿಪ್ರಾಯಗಳು ಬದಲಾಗಬಹುದು.

ನೌಕರರು ಎಂದು ಪರಿಗಣಿಸಿ; ಸುಪ್ರೀಂಕೋರ್ಟ್‌

1972ರ ಗ್ರ್ಯಾಚುಟಿ ಕಾಯ್ದೆ ಅನ್ವಯ ಯಾವುದೇ ಒಂದು ಸಂಸ್ಥೆಯಲ್ಲಿ ಕನಿಷ್ಠ ಐದು ವರ್ಷ ಕೆಲಸ ಮಾಡಿದರೆ ಈ ನಿಯಮ ಅನ್ವಯಿಸುತ್ತದೆ. ಆರು ವರ್ಷಗಳ ನಿಂತರವಾದ ಹೋರಾಟದ ಫಲವಾಗಿ 2022 ಏಪ್ರೀಲ್‌ 25ರಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಲ್ಲಿ "2009-10ರ ಕಡ್ಡಾಯ ಶಿಕ್ಷಣ ಕಾಯ್ದೆ ಮತ್ತು 2013ರ ಆಹಾರ ಭದ್ರತಾ ಕಾಯ್ದೆಯ ಜಾರಿಗಾಗಿ ಅಂಗನವಾಡಿ ಕೇಂದಗಳು ಕೆಲಸ ಮಾಡುತ್ತಿದೆಯಾದ್ದರಿಂದ ʼವಾಣಿಜ್ಯ ಮತ್ತು ಉದ್ದಿಮೆಗಳ ಕಾಯ್ದೆ-1948ʼಯಡಿ (Shop and Establishment Act-1948) ಅಂಗನವಾಡಿ ಕೇಂದ್ರಗಳನ್ನು ಸಂಸ್ಥೆಗಳು ಎಂದು ಪರಿಗಣಿಸಿ ಅದರಲ್ಲಿ ಕೆಲಸ ಮಾಡುವವರು ನೌಕರರು. ಆದ್ದರಿಂದ ಇವರಿಗೆ 1972ರ ಗ್ರಾಚ್ಯುಟಿ ಪಡೆಯಲು ಅರ್ಹರು ಎಂದು ಹೇಳಿದೆ.

ಆಹಾರ ಭದ್ರತಾ ಹಾಗೂ ಕಡ್ಡಾಯ ಶಿಕ್ಷಣ ಜಾರಿಗೆ ಬೇಕು ಈ ಅಮ್ಮಂದಿರು

ಸಂವಿಧಾನದಲ್ಲಿ ಭಾರತವನ್ನು ಕಲ್ಯಾಣ ರಾಜ್ಯ ಎಂದು ಕರೆಯಲಾಗಿದ್ದು, ಆಹಾರ, ಆರೋಗ್ಯ, ಶಿಕ್ಷಣ ಎಂಬ ಯೋಜನೆಯನ್ನು ಜಾರಿಗೆ ತಂದು ಅಂಗನವಾಡಿಗಳನ್ನು ಸಂಸ್ಥೆ ಎಂದು ಕರೆಯಲಾಗಿದೆ. ಅಲ್ಲದೆ, ಆಹಾರ ಭದ್ರತಾ ಕಾಯ್ದೆ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಲು ಅಂಗನವಾಡಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ. ಹಾಗಾಗಿ ಇದು ದೇಶದ ಎಲ್ಲ ರಾಜ್ಯಗಳ ಅಂಗನವಾಡಿ ಮಹಿಳೆಯರಿಗೆ ಒಂದು ಬಗೆಯ ವಿಮೋಚನೆಯನ್ನು ನೀಡಿದ ತೀರ್ಪು ಎಂದು ಈ ತಾಯಂದಿರುವ ಸ್ವಾಗತಿಸಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ತೀರ್ಪಿನ ಪ್ರಕಾರ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಲು ಯಾವುದೇ ಮುತುವರ್ಜಿ ವಹಿಸುತ್ತಿಲ್ಲ. ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುತ್ತಿಲ್ಲ ಎಂಬಂತಹ ಪರಿಸ್ಥಿತಿಯಿದೆ ಎಂಬುದು ವರಲಕ್ಷ್ಮಿ ಅವರ ಆರೋಪ.

ಸ್ವಯಂ ಸೇವಕರು, ಕಾರ್ಯಕರ್ತೆಯರು, ಹೆಲ್ಪರ್ಸ್‌ ಅಥವಾ ಸಹಾಯಕಿಯರು, ಅತಿಥಿ ಎಂಬಂತಹ ಪರಿಕಲ್ಪನೆಯಲ್ಲಿ ದುಡಿಯುವ ವರ್ಗವನ್ನು ಕರೆಯುತ್ತಿರುವುದರ ಹಿಂದಿನ ಉದ್ದೇಶ ಅವರುಗಳು ಕಾರ್ಮಿಕರು ಅಥವಾ ನೌಕರರು ಎಂದು ಕರೆಯಲಾಗದ ವರ್ಗ. ಅವರುಗಳಿಗೆ ಕಾರ್ಮಿಕ ಕಾನೂನು, ಪೇ ಕಮಿಷನ್‌, ನಿರ್ದಿಷ್ಟ ಅಥವಾ ಕನಿಷ್ಠ ವೇತನ ನಿಯಮಗಳು ಅನ್ವಯವಾಗುವುದಿಲ್ಲ. ಹಾಗಾಗಿ ಸರ್ಕಾರ ಅಂಗನವಾಡಿ ಮಹಿಳೆಯರಿಗೆ ಗೌರವಧನದ ಹೆಸರಿನಲ್ಲಿ ಚಿಕ್ಕಾಸು ನೀಡಿ ಹೆಚ್ಚುವರಿ ಕೆಲಸ ಮಾಡಿಸಿ ವಂಚಿಸುತ್ತಿದೆ. ಆದುದರಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕೆಲಸಕ್ಕೆ ನಿರ್ದಿಷ್ಟ ವೇತನ, ನಿವೃತ್ತಿಯಾದವರಿಗೆ ಗ್ರಾಚ್ಯುಟಿ ಸೌಲಭ್ಯವನ್ನು ಕಡ್ಡಾಯವಾಗಿ ಕೊಡಬೇಕು ಎಂಬುದು ವರಲಕ್ಷ್ಮಿ ಅವರ ವಾದ.

ಅಂಗನವಾಡಿ ಮಹಿಳೆಯರು

ರಾಜ್ಯದಲ್ಲಿ 225 ತಾಲ್ಲೂಕುಗಳಲ್ಲೂ 204 ಶಿಶು ಅಭಿವೃದ್ಧಿ ಯೋಜನೆಗಳ ಮುಖಾಂತರ (181 ಗ್ರಾಮಾಂತರ, 12 ಗುಡ್ಡಗಾಡು ಯೋಜನೆ ಹಾಗೂ 11 ನಗರ ಪ್ರದೇಶದಲ್ಲಿ) ಒಟ್ಟು 62,580 ಅಂಗನವಾಡಿ ಕೇಂದ್ರಗಳು ಹಾಗೂ 3,331 ಮಿನಿ ಅಂಗನವಾಡಿ ಕೇಂದ್ರಗಳು  ಕಾರ್ಯನಿರ್ವಹಿಸುತ್ತಿವೆ. ಅವುಗಳಿಗೆ ಬರುವ ನಾಲ್ಕು ವರ್ಷದೊಳಗಿನ ಸುಮಾರು 10-15 ಲಕ್ಷ ಮಕ್ಕಳ ಲಾಲನೆ-ಪಾಲನೆ-ಪೋಷಣೆ ಮಾಡುವವರು ಐದಾರು ತಿಂಗಳಿಗೊಮ್ಮೆ ಗೌರವಧನದ ಹೆಸರಲ್ಲಿ ಕೇವಲ 11 ಸಾವಿರಕ್ಕೆ ದುಡಿಯುವ ಸಾಮಾಜಿಕ ತಾಯಂದಿರಾದ 1.5 ಲಕ್ಷಕ್ಕೂ ಅಧಿಕಮಂದಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು.

ಆದರೆ, ಅವರು ಅಂಗನವಾಡಿ ಕೆಲಸ ಬಿಟ್ಟು ಬೇರೆಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಕಾರಣ, ಅವರ ಕಾರ್ಯಸ್ಥಳ ಹಾಗೂ ಇತರ ಇಲಾಖೆಯ ಕೆಲಸಗಳು. ಉದಾಹರಣೆಗೆ ನೋಡುವುದಾದರೆ, ಆ ಗ್ರಾಮದಲ್ಲಿ ಜನಿಸುವ ಮಕ್ಕಳ ಸಂಖ್ಯೆ, ಸತ್ತ ಮಕ್ಕಳ ಸಂಖ್ಯೆ, ಗರ್ಭಿಣಿ, ಬಾಣಂತಿಯರ ಯೋಗಕ್ಷೇಮ, ಚುನಾವಣಾ ಕೆಲಸ, ಪಲ್ಸ್‌ ಪೊಲೀಯೋ ಕೆಲಸ, ಚುಚ್ಚುಮದ್ದು ಅಭಿಯಾನ, ಬಿಎಲ್‌ಒ ಕೆಲಸ, ಭಾಗ್ಯಲಕ್ಷ್ಮಿ, ಸ್ತ್ರೀ ಶಕ್ತಿ, ವಿಧವಾ ವೇತನ, ವೃದ್ಧಾಪ್ಯ ವೇತನ, ಮಾತೃವಂದನಾ, ಮಾತೃಪೂರ್ಣ, ಸರ್ವೆ, ಸ್ಕೌಟ್‌ ಅಂಡ್‌ ಗೈಡ್‌, ಕೋಟಿಕಂಠ ಗಾಯನ, ಕೆಂಪೇಗೌಡ ಪ್ರತಿಮೆ ನಿರ್ಮಾಣ, ಪ್ರಧಾನಿ ಬರುವ ಕಾರ್ಯಕ್ರಮಕ್ಕೆ ಪ್ರೇಕ್ಷಕರು, ಕಳಶ ಹೊರುವ ಮಹಿಳೆಯರಾಗಿ ಎಲ್ಲಕ್ಕೂ ಕೈಗೆಟಕುವರರು ಅಂಗನವಾಡಿ ಮಹಿಳೆಯರು. ಹಾಗಾಗಿ ಈ ಹೆಚ್ಚಿನ ಹೊರೆಗಳನ್ನು ಕೆಳಗಿಳಿಸಿ ಎಂದು ಅವರು ಆಗ್ರಹಿಸುತ್ತಿದ್ದಾರೆ.

ಅಂಗನವಾಡಿ ಮಕ್ಕಳಿಗೆ ಎನ್‌ಇಪಿಯ ಅಪಾಯವೇನು?

ನೂತನ ಶಿಕ್ಷಣ ಕಾಯ್ದೆ (ಎನಿಪಿ) ತಂದಿದ್ದು, ಅದರ ಸಾಧಕ ಬಾಧಕಗಳನ್ನು ಪರಿಗಣಿಸಿದೆ ಜಾರಿ ಮಾಡಲಾಗುತ್ತಿದೆ. ಆದರೆ ಈ ನಿಯಮದಂತೆ, ಮೂರರಿಂದ ಎಂಟು ವರ್ಷದೊಳಗಿನ ಮಕ್ಕಳಿಗೆ ಸ್ಪರ್ಧೆ ಎದುರಿಸಲು ಪೌಂಡೆಷನ್‌ ಶಿಕ್ಷಣ ಕೊಡಬೇಕು ಎಂಬುದಾಗಿದೆ. ಅದರಂತೆ, ಅನೌಪಚಾರಿಕ ಶಿಕ್ಷಣ ಬದಲು ಔಪಚಾರಿಕ ಶಿಕ್ಷಣ ನೀಡಬೇಕು. ಹಾಗೆ ಮಾಡುವುದರಿಂದ ಮಾನಸಿಕವಾಗಿ, ದೈಹಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಯಬೇಕಿರುವ ಮಕ್ಕಳಿಗೆ ಒತ್ತಡ ಹಾಕಬಾರದು. ಗುಜರಾತಿನ ಬಾಲವಾಟಿಕ ಯೋಜನೆಯೂ ಅಪ್ರಸ್ತುತವಾಗಿದೆ. ಹಾಗಾಗಿ ಐಸಿಡಿಎಸ್‌ ಯೋಜನೆಯನ್ನು ಬಲಪಡಿಸಿ. ಕರ್ನಾಟಕ ಪ್ರತಿಯೊಬ್ಬ ಬಡವನ ಮಗುವಿಗೂ ಆಹಾರ, ಆರೋಗ್ಯ, ಶಿಕ್ಷಣ ಸಿಗಬೇಕು. ಅದಕ್ಕೆ ಪೂರಕವಾಗಿ ಇರುವ ಯೋಜನೆಗಳಿಗೆ ಸರಿಯಾದ ಅನುದಾನ ಕೊಟ್ಟು, ಪರಿಣಾಮಕಾರಿಯಾಗಿ ಬದಲಾವಣೆಗಳನ್ನು ಮಾಡಬೇಕಿದೆ.

anganavadi- childrens

ಅಂಗನವಾಡಿ ಮಹಿಳೆಯರು ಪಾಠ ಮಾಡಲು ಯೋಗ್ಯರಲ್ಲವೇ?

ಅಂಗನವಾಡಿಗಳಿಗೆ ಅಥವಾ ಸರ್ಕಾರ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದು, ಖಾಸಗೀ ಶಾಲೆಗಳಿಗೆ ಮಾರು ಹೋಗುತ್ತಿದ್ದಾರೆ. ಹಾಗಾಗಿ ಅಲ್ಲಿರುವಂತೆಯೇ ಮಕ್ಕಳನ್ನು ಆಕರ್ಷಿಸಲು ವಿನ್ಯಾಸಬರಿತ ಕಟ್ಟಡ ನಿರ್ಮಾಣ, ಬಟ್ಟೆ, ಪುಸ್ತಕ, ಬ್ಯಾಗು, ಶೂ, ಬೆಂಚು, ಆಟದ ಸಾಮಾನು, ಕಥೆ ಪುಸ್ತಕ ಹೀಗೆ ಮೂಲಭೂತ ಸೌಕರ್ಯಗಳನ್ನು ನೀಡಿ. ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಅಂಗನವಾಡಿ ಶಿಕ್ಷಕರಿಗೆ ಇರುವ ಅನಗತ್ಯ ಕೆಲಸಗಳನ್ನು ತೆಗೆದು ಮಾಹಿತಿ ಸೇವೆ, ಶಾಲಾ ಪೂರ್ವ ಶಿಕ್ಷಣ, ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ, ರೂಗ ನಿರೋಧಕ ಚುಚ್ಚುಮದ್ದು, ಪೂರಕ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆಯಂತಹ ಇಲಾಖೆ ಸೇವೆಯನ್ನಷ್ಟೇ ಮಾಡಿಸಬೇಕು.

ಇದನ್ನು ಓದಿದ್ದೀರಾ? ಅಂಗನವಾಡಿ ಕಾರ್ಯಕರ್ತೆಯರ ಹೋರಾಟ | ‘ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದ ನಾಯಕಿಯರು

ಅಂಗನವಾಡಿ ಎಂಬ ಅನ್ನದ ಕೇಂದ್ರವನ್ನು ಅಕ್ಷರದ ಕೇಂದ್ರವಾಗಿಸಿ. ಸರ್ಟಿಫಿಕೇಟ್‌ ಇಲ್ಲದಿದ್ದರೂ ಮಕ್ಕಳನ್ನು ಸಂಭಾಳಿಸುವ ನಮ್ಮ ಅನುಭವವನ್ನು ಅಲ್ಲಗಳೆಯಬೇಡಿ, ಶಾಲಾ ಪೂರ್ವ ಶಿಕ್ಷಣ ಕಲಿಸಲು ಬೇಕಿರುವ ತರಬೇತಿ ನೀಡಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆತನಕ ಪಾಠ ಮಾಡಲು ಬಿಡಿ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ₹31 ಸಾವಿರ ಕನಿಷ್ಠ ವೇತನ, ಸುದೀರ್ಘ ಸೇವೆಗೆ ಗೌರವಾರ್ಥವಾಗಿ ನಮ್ಮ ಹಕ್ಕಾದ ಗ್ರ್ಯಾಚ್ಯಟಿ ಸೌಲಭ್ಯ ಕೊಡಿ, ಮುಂಬಡ್ತಿಗೆ ತೊಡಕಾಗಿರುವ ಕಾನೂನನ್ನು ತಿದ್ದುಪಡಿ ಮಾಡಿ ಅಂಗನವಾಡಿಗಳನ್ನು ಉಳಿಸಿ" ಎಂದು ಕೇಳುತ್ತಿದ್ದಾರೆ.

anganavadi- childrens

ಹೀಗೆ ಜ್ವಲಂತ ಸಮಸ್ಯೆಗಳು ಹಾಗೂ ನ್ಯಾಯಬದ್ಧವಾದ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಅಂಗನವಾಡಿ ನೌಕರರು ಬೆಂಗಳೂರಿನ ಬೀದಿಯಲ್ಲಿ ಎರಡನೇ ದಿನದ ಹೋರಾಟವನ್ನು ಮುಂದುವರೆಸಿದ್ದಾರೆ. ಅವರ ಆಕ್ರೋಶದ ಕಟ್ಟೆ ಹೊಡೆಯುವ ಮುನ್ನ ಬೊಮ್ಮಾಯಿ ಸರ್ಕಾರ ಬಾಯಿ ತೆರೆದು ಕೊಟ್ಟ ಭರವಸೆಗಳನ್ನು ಈಡೇರಿಸಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app