
ಸರ್ಕಾರಿ ನೌಕರರ ಸಂಬಳ ಜೀವನ ನಿರ್ವಹಣೆಗೇ ಮುಗಿಯುತ್ತಿರುವಾಗ, ದಿನಗೂಲಿ ಮಾಡುವ, ಕಡಿಮೆ ಸಂಬಳಕ್ಕೆ ದುಡಿಯುತ್ತಿರುವವರ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಬಹುದು. ನಾವು ದೇಶಕ್ಕೆ ತೆರಿಗೆ ಕಟ್ಟುವುದಕ್ಕೆ ದುಡಿಯುತ್ತಿದ್ದೇವೆ ಎನ್ನುವ ಭಾವ ಮೂಡಿದರು ಅಚ್ಚರಿ ಇಲ್ಲ. ಜಿಎಸ್ಟಿ ಹೆಚ್ಚಳದ ಕುರಿತು ಸಾಮಾನ್ಯ ಜನರ ಅಭಿಪ್ರಾಯ ಇಲ್ಲಿದೆ
ಹೊಸ ಜಿಎಸ್ಟಿ ನಿಯಮಾವಳಿ ಜಾರಿಯಾದ ಬಳಿಕ ಜನಸಾಮಾನ್ಯರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ವಿಧಿಸಿರುವ ಮತ್ತು ಹೆಚ್ಚಿಸಿರುವ ತೆರಿಗೆಯು ಸಂಸಾರದ ಕುತ್ತಿಗೆಯ ಮೇಲೆ ಕಾಲಿಟ್ಟಿದೆ. ಈ ಕುರಿತಾಗಿ ಈ ದಿನ.ಕಾಮ್ ಕೆಲವೊಂದು ಕುಟುಂಬಗಳೊಂದಿಗೆ ಮಾತನಾಡಿದೆ. ಅದರಲ್ಲಿ ಒಂದು ಕುಟುಂಬವನ್ನು ಆಯ್ದುಕೊಂಡು ಆ ಕುಟುಂಬ ಖರ್ಚು ವೆಚ್ಚಗಳನ್ನು ತೆರೆದಿಟ್ಟಿದೆ.
ಹೆಸರು ಹೇಳಲು ಇಚ್ಚಿಸದ ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಸರ್ಕಾರಿ ನೌಕರರೊಬ್ಬರ ಕುಟುಂಬವು ಚಿತ್ರದುರ್ಗದಲ್ಲಿ ವಾಸಿಸುತ್ತಿದೆ. ಕುಟುಂಬದಲ್ಲಿ ಒಟ್ಟು ಐದು ಮಂದಿ ಸದಸ್ಯರಿದ್ದಾರೆ. ನೌಕರ, ಆತನ ಹೆಂಡತಿ, ತಂದೆ, ತಾಯಿ ಹಾಗೂ ಮೂರು ವರ್ಷದ ಮಗು ಒಂದಿದೆ. ಇವರ ಕುಟುಂಬದಲ್ಲಿ ನೌಕರನೊಬ್ಬರೆ ದುಡಿಯುತ್ತಿದ್ದಾರೆ. ಅವರಿಗೆ ತಿಂಗಳಿಗೆ 25 ಸಾವಿರ ಸಂಬಳ ಬರುತ್ತದೆ.
ಶುಲ್ಕಗಳು
ಚಿತ್ರದುರ್ಗದಲ್ಲಿ ವಾಸಿಸುತ್ತಿರುವ ಈ ಕುಟುಂಬವೂ ಮೂಲತಃ ಚಿತ್ರದುರ್ಗದ ಜಿಲ್ಲೆಯ ಬೇರೆಯ ಊರಿನವರಾಗಿದ್ದು, ಸರ್ಕಾರಿ ನೌಕರಿಯ ಕಾರಣಕ್ಕೆ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ತಿಂಗಳು ₹6000 ಬಾಡಿಗೆ, ₹1050 ಸಿಲೆಂಡರ್, ₹144 ತೆರಿಗೆಯೊಂದಿಗೆ ವಿದ್ಯುತ್ ಬಿಲ್ ₹800, ನೀರಿನ ಬಿಲ್ ₹200 ತೆರಿಗೆ ₹24. ಮೋಟರ್ ಬಿಲ್ ₹200 ಪಾವತಿಸಿದರೆ ತೆರಿಗೆ ₹36.
ಈ ಸುದ್ದಿ ಓದಿದ್ದೀರಾ? ಸುದ್ದಿ ವಿವರ | ಜುಲೈ 18ರಿಂದ ಆಹಾರ ಪದಾರ್ಥಗಳು ಸೇರಿದಂತೆ ಹಲವು ಸರಕು-ಸೇವೆಗಳ ಬೆಲೆ ಏರಿಕೆ
ಮಾಸಿಕ ಅಗತ್ಯ
ಒಂದು ತಿಂಗಳ ದಿನಸಿಗೆ ಈ ಕುಟುಂಬವು ಸುಮಾರು ₹5,883 ರೂ ಖರ್ಚು ಮಾಡುತ್ತದೆ. ಸಂಬಳದ ಮಾರನೆಯ ದಿನ ಹತ್ತಿರದ ಅಂಗಡಿಯಲ್ಲಿ ಒಂದು ತಿಂಗಳಿಗೆ ಬೇಕಾಗುವ ಅಗತ್ಯ ದಿನಸಿ ಖರೀದಿಸುತ್ತಾರೆ. ಮಾಸಿಕವಾಗಿ ಅವರ ಕುಟುಂಬಕ್ಕೆ ತಗುಲುವ ತೆರಿಗೆ ₹457.94
ವಸ್ತುಗಳು | ತಿಂಗಳ ಖರ್ಚು | ಜಿಎಸ್ಟಿ |
ಅಕ್ಕಿ (25ಕೆಜಿ) | 1500 | 75 |
ರಾಗಿ (10ಕೆಜಿ) | 720 | 36 |
ಗೋಧಿ ಹಿಟ್ಟು (5 ಕೆಜಿ) | 270 | 13.5 |
ಅಡುಗೆ ಎಣ್ಣೆ (5ಕೆಜಿ) | 945 | 113.4 |
ತೊಗರಿ ಬೆಳೆ (3ಕೆಜಿ) | 360 | 18 |
ಕಡ್ಲೆ ಬೆಳೆ (1ಕೆಜಿ) | 120 | 6 |
ಸಕ್ಕರೆ (3ಕೆಜಿ) | 150 | 7.5 |
ಟೀ ಪುಡಿ (1/2ಕೆಜಿ) | 290 | 14.5 |
ಬೆಲ್ಲ (1ಕೆಜಿ) | 60 | 3 |
ಅವಲಕ್ಕಿ (1/2ಕೆಜಿ) | 50 | 2.5 |
ರವೆ (1ಕೆಜಿ) | 50 | 2.5 |
ಕಡ್ಲೆ (1/2ಕೆಜಿ) | 80 | 4 |
ಕಡ್ಲೆ ಬೀಜ (1/2ಕೆಜಿ) | 120 | 6 |
ಉಪ್ಪು | 30 | 1.5 |
ಸಾಬೂನು (6) |
222 | 36.96 |
ಲೈಫ್ಬಾಯ್ ಸಾಬೂನು (6) | 96 | 17.28 |
ಬಟ್ಟೆ ಸಾಬೂನು (12) | 120 | 21.6 |
ಸಾಬೂನು ಪುಡಿ (2ಕೆಜಿ) | 240 | 43.2 |
ಟೂಥ್ ಪೇಸ್ಟ್ | 130 | 6.5 |
ಕೊಬ್ಬರಿ ಎಣ್ಣೆ (1ಕೆಜಿ) | 190 | 9.5 |
ಕಡ್ಲೆ ಹಿಟ್ಟು (1ಕೆಜಿ) | 120 | 6 |
ಮೈದಾ (1ಕೆಜಿ) | 110 | 5.5 |
ಅರಳಿ ಎಣ್ಣೆ (1ಕೆಜಿ) | 160 | 8 |
ಪ್ರತಿದಿನ ಖರೀದಿಸುವ ಕೆಲವು ಅಗತ್ಯತೆಗಳಿಗೆ 2710 ರೂಪಾಯಿ ವೆಚ್ಚ ಮಾಡುತ್ತಾರೆ. ತರಕಾರಿಗಾಗಿ ಹತ್ತಿರಹತ್ತಿರ ₹550 ಖರ್ಚಾಗುತ್ತದೆ, ಇದರಲ್ಲಿ ₹27.5 ಜಿಎಸ್ಟಿ ಪಾವತಿಸುತ್ತಾರೆ. ತಿಂಗಳಿಗೆ ನಾಲ್ಕು ಭಾರಿ ಅಥವಾ ಐದು ಬಾರಿ ಚಿಕನ್ ಅಥವಾ ಮಟನ್ ಖರೀದಿ ಮಾಡಿದರೆ ₹1500ವರೆಗೆ ತಗುಲುತ್ತದೆ, ₹180 ಜಿಎಸ್ಟಿ ಬೀಳುತ್ತದೆ. ಪ್ರತಿದಿನ ಅರ್ಧ ಲೀಟರ್ ಹಾಲು ಬಳಸುತ್ತಾರೆ. ₹22ರಂತೆ ತಿಂಗಳಿಗೆ ₹660, ಹಾಲಿಗೆ ₹33 ತೆರಿಗೆ ಬೀಳುತ್ತದೆ. ದಿನನಿತ್ಯದ ಬಳಕೆಗೆ ₹240.5 ತೆರಿಗೆ ಪಾವತಿಸುತ್ತಿದ್ದಾರೆ.
ಆರೋಗ್ಯ
ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇಬ್ಬರೂ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಔಷಧಿ ಮತ್ತು ತಪಾಸಣೆಗೆ ಪ್ರತಿ ತಿಂಗಳು ₹4568 ವೆಚ್ಚವಾದರೆ ₹365.44 ತೆರಿಗೆ ವಿಧಿಸಲಾಗುತ್ತಿದೆ.
ಪ್ರಯಾಣ
ಒಟ್ಟಾರೆ ತಿಂಗಳ ಸುತ್ತಾಟದಲ್ಲಿ ಸರಿಸುಮಾರು ₹2000 ಪೆಟ್ರೋಲ್ಗೆ ಖರ್ಚಾಗುತ್ತದೆ.
ಮನರಂಜನೆ
ಮೊಬೈಲ್ ರಿಚಾರ್ಜ್ ಟಿವಿ ಸೇರಿದಂತೆ ಮನರಂಜನೆಗಾಗಿ ಕುಟುಂಬವೂ ₹1188 ರೂಪಾಯಿ ವಿನಿಯೋಗಿಸುತ್ತಾರೆ. ಇದರಲ್ಲಿ ₹213.86 ತೆರಿಗೆಯಾಗಿ ಸರ್ಕಾರ ತೆಗೆದುಕೊಳ್ಳುತ್ತಿದೆ.
ಬಳಕೆ | ಖರ್ಚು | ಜಿಎಸ್ಟಿ |
ಟಿವಿ ರಿಚಾರ್ಜ್ | 286 | 51.48 |
ಮೊಬೈಲ್ ರಿಚಾರ್ಜ್ (2) | 602 | 108.36 |
ಸಿನಿಮಾ | 300 | 54 |
ಈ ಸುದ್ದಿ ಓದಿದ್ದೀರಾ? ಜಿಎಸ್ಟಿ| ಬಡವರ ಜೇಬಿಗೆ ಕತ್ತರಿ ಹಾಕುವುದೇ ಬಿಜೆಪಿ ಸಾಧನೆ: ʼಆಪ್ʼ ಕಿಡಿ
₹25,000 ರೂಪಾಯಿ ತಿಂಗಳ ಸಂಬಳವಾದರೆ 23,601 ರೂಪಾಯಿ ಅವರ ಕುಟುಂಬದ ಜೀವನ ನಿರ್ವಹಣೆಗೆ ಖರ್ಚಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇರುವ ಸಂಬಳವೆಲ್ಲ ಖಾಲಿಯಾಗಿ ಬರಿಗೈ ದಾಸರಾಗಿ ಉಳಿದು, ಸಾಲ ಮಾಡುವ ಸಂದರ್ಭಗಳು ಎದುರಾಗುತ್ತವೆ. ಒಟ್ಟು ಖರ್ಚಿನ ಜತೆಗೆ ಸರ್ಕಾರಿ ನೌಕರನ ಕುಟುಂಬದಿಂದ ಬರೊಬ್ಬರಿ ತಿಂಗಳಿಗೆ 1,481.74 ರೂಪಾಯಿ ತೆರಿಗೆ ಪಾವತಿಯಾಗುತ್ತದೆ.
ಒಬ್ಬ ಸರ್ಕಾರಿ ನೌಕರನ 25 ಸಾವಿರ ಸಂಬಳದ ಖರ್ಚಿನ ಹೊರೆಯೇ ಅಬ್ಬಾ ಎನಿಸುವ ನಮಗೆ, ಇನ್ನೂ ಕನಿಷ್ಟ ಕೂಲಿ ಸಿಗದ ಅದೆಷ್ಟು ಕುಟುಂಬಗಳು ಭಾರತದಲ್ಲಿವೆ! ಅವರ ಪರಿಸ್ಥಿತಿ ನೆನಸಿಕೊಂಡರೆ ಎದೆ ಝಲ್ ಎನ್ನುವುದು ನಿಶ್ಚಿತ.
ಈ ಕುರಿತು ಚಿತ್ರದುರ್ಗದ ನೌಕರನ ಅನಿಸಿಕೆ ಕೇಳಿದರೆ, "ಹಾಳಾದ ತೆರಿಗೆಯಿಂದ ಜೀವನ ನಡೆಸುವುದೇ, ದುಸ್ತರ ಎನ್ನುವಂತಾಗಿದೆ. ಕೇಂದ್ರ ಸರ್ಕಾರ ಜನಸಾಮನ್ಯರ ಕಾಳಜಿ ವಹಿಸಿ ತೆರಿಗೆ ಇಳಿಸಬೇಕು" ಎಂದು ಹೇಳಿದರು.
ಇಷ್ಟೆ ಖರ್ಚಿನ ಹೊರತಾಗಿಯೂ ಅವರ ಮಗಳನ್ನು ಶಾಲೆಗೆ ಸೇರಿಸಿದರೆ ಆ ಮಗುವಿನ ಶಿಕ್ಷಣದ ಮತ್ತು ಕೆಲವೊಂದಿಷ್ಟು ಖರ್ಚು, ಸಾಲ ಮಾಡುವಂತೆ ಮಾಡುವುದು ಖಚಿತ ಎನ್ನುತ್ತಾರೆ ನೌಕರ.
ಒಂದೇ ಸಮನೆ ಏರಿಕೆಯಾಗುತ್ತಿರುವ ಬೆಲೆ, ತೆರಿಗೆಯ ಬರೆ ಎಲ್ಲದರಿಂದ ಉಸಿರುಗಟ್ಟಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಯ ಸ್ಥಿರವಾಗಿದ್ದು, ಇತರೆ ಅಗತ್ಯ ವಸ್ತುಗಳ ಬೆಲೆ ಏರುತ್ತಾ ಹೋದರೆ ಯಾರಿಗೇ ಆಗಲಿ ಹೊರೆಯಾಗುವುದು ಸಹಜ. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂಬುದು ಅವರ ಅಭಿಪ್ರಾಯ.
ಈ ಸುದ್ದಿ ಓದಿದ್ದೀರಾ? ಮಂಡಕ್ಕಿ ಉತ್ಪಾದನೆ ಮೇಲಿನ ಜಿಎಸ್ಟಿ ರದ್ದುಗೊಳಿಸಲು ಸಿದ್ದರಾಮಯ್ಯ ಆಗ್ರಹ
ಅದರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಜಿಎಸ್ಟಿ ತೆರಿಗೆ ಹೆಚ್ಚಿಸಿ ಸಂಸಾರದ ಕುತ್ತಿಗೆ ಮೇಲೆ ಕಾಲಿಟ್ಟಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ತೆರಿಗೆ ಎಂದರೆ ಪ್ರಜೆಗಳಿಗೆ ತಿಳಿದಂತೆ ತೆಗೆದುಕೊಳ್ಳುವಷ್ಟು ಅನುಕೂಲಕರವಾಗಿ ಇರಬೇಕು. ಆದರೆ ಈ ಹೊಸ ಜಿಎಸ್ಟಿ ತೆರಿಗೆ ʼಬದುಕುತ್ತಿರುವುದೇ ಜಿಎಸ್ಟಿ ಕಟ್ಟುವುದಕ್ಕೆʼ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ.
ಸದ್ಯ ತೆರಿಗೆ ಹೆಚ್ಚಿಸಿರುವ ಬಹುತೇಕ ವಸ್ತುಗಳು ದಿನಬಳಕೆಯವೇ ಆಗಿವೆ. ಹಾಗಾಗಿ, ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರು ಇನ್ನೂ ಹೆಚ್ಚಿನ ಬೆಲೆ ತೆತ್ತು ಖರೀದಿಸಬೇಕಾಗುವ ಸಮಯ ಎದುರಾಗಿದೆ. ಮೊಸರು, ಮಜ್ಜಿಗೆ, ಗೋಧಿ ಹಿಟ್ಟು, ಜೇನುತುಪ್ಪ, ಹಪ್ಪಳ, ಧಾನ್ಯಗಳು, ಮಾಂಸ, ಮೀನು, ಬೆಲ್ಲ, ಮಂಡಕ್ಕಿ ಸೇರಿ ಇನ್ನು ಹಲವು ದಿನಬಳಕೆ ಸಾಮಗ್ರಿಗಳ ಬೆಲೆ ಹೆಚ್ಚಾಗುವುದರಿಂದ ದೈನಂದಿನ ಜನಜೀವನ ಇನ್ನಷ್ಟು ಕಷ್ಟಕರವಾಗಿದೆ.