ಮಕ್ಕಳ ದಿನ | ನಿಜವಾಗಿಯೂ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುತ್ತಿದೆಯೇ ಸರ್ಕಾರ?

ನಿಜಕ್ಕೂ ಮಕ್ಕಳ ಹಕ್ಕುಗಳನ್ನು ರಕ್ಷಿಸುತ್ತಿದೆಯೇ ಸರ್ಕಾರ?

ಸಮಾಜದಲ್ಲಿ ಮಕ್ಕಳನ್ನು ಗುರಿಯಾಗಿಸಿ ಬೇಟೆಯಾಡುವ ಒಂದು ತಂಡವಿದೆ. ತಮ್ಮ ಮಕ್ಕಳನ್ನು ತಾವೇ ತಿಂದು ತೇಗುತ್ತಿರುವ ಕಾಲವಿದು. ಮಾನವ ಕಳ್ಳಸಾಗಾಣಿಕೆ, ವೇಶ್ಯಾವಾಟಿಕೆ, ಭಿಕ್ಷಾಟನೆಗೆ ಮಕ್ಕಳನ್ನು ರವಾನೆ ಮಾಡಲಾಗುತ್ತಿದೆ. ಮುಗ್ಧ ಮಕ್ಕಳನ್ನು ತಮ್ಮ ಮೋಸದಾಟಗಳಿಗೆ ಬಳಸಲಾಗುತ್ತಿದೆ. ಇವುಗಳ ನಿಗ್ರಹಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ

ಇತ್ತೀಚಿನ ದಿನಗಳಲ್ಲಿ ಮಕ್ಕಳ ದಿನಾಚರಣೆ ಎಂಬುದು ಒಂದು ಕ್ಲೀಷೆಯಾಗುತ್ತಿದೆ. ಮಕ್ಕಳ ದಿನಾಚರಣೆ ಮಾಡಬೇಕು ಎಂದು ಮಾಡಲಾಗುತ್ತಿದೆಯಷ್ಟೇ. ಆದರೆ, ನಮ್ಮ ಸಮಾಜದಲ್ಲಿ ಮಕ್ಕಳು ನಿಜವಾಗಿಯೂ ನೆಮ್ಮದಿಯಾಗಿದ್ದಾರೆಯೇ? ಅಥವಾ ನೆಮ್ಮದಿಯಾಗಿದ್ದಾರೆ ಎಂದು ಬಿಂಬಿಸಲಾಗುತ್ತಿಯೇ ಎಂಬುದೊಂದು ಯಕ್ಷಪ್ರಶ್ನೆ!

Eedina App

ಮಕ್ಕಳು ಎಲ್ಲ ಸಂತರಿಗಿಂತಲೂ ಶ್ರೇಷ್ಠವಾದ ಸಂಪತ್ತು. ಪ್ರತಿಯೊಂದು ಜನಾಂಗವೂ ಒಬ್ಬೊಬ್ಬ ಸಂತರನ್ನು ಹೊಂದಿದೆ. ಪ್ರತಿ ಸಮುದಾಯ ಪಂಗಡ, ಜಾತಿ, ಧರ್ಮವೂ ಒಬ್ಬೊಬ್ಬರನ್ನು ಐಕಾನ್‌ ಆಗಿ ಇಟ್ಟುಕೊಂಡು, ಪುತ್ಥಳಿಗಳನ್ನು ನಿರ್ಮಿಸಿ ಸಂಭ್ರಮ ಮಾಡುತ್ತಿವೆ. ಆದರೆ, ನಿಜವಾಗಿಯೂ ನಾವು ಸಂಭ್ರಮಿಸಬೇಕಿರುವುದು ಏನನ್ನು? ಹೀಗೆ ಯೋಚಿಸಲು ಶುರು ಮಾಡಿದರೆ, ಮನದೊಳಗೆ ನೂರಾರು ಪ್ರಶ್ನೆಗಳು ಹೊಕ್ಕುತ್ತವೆ. 

ಅದಿರಲಿ ಬಿಡಿ, ಈ ಹಿಂದೆ ʼಇಂದಿನ ಮಕ್ಕಳೇ ನಾಳಿನ ಪ್ರಜೆಗಳುʼ ಅನ್ನೋ ಮಾತು ಇತ್ತು. ಆದರೆ, ಆ ಮಾತು ಈಗಿಲ್ಲ. ಈಗಿನ ಮಕ್ಕಳೇ ಇಂದಿನ ಪ್ರಜೆಗಳು. ಅಂದರೆ, ನಮ್ಮ ಸಂವಿಧಾನದಲ್ಲಿ ದೊಡ್ಡವರಿಗೆ ಯಾವ ರೀತಿಯ ಹಕ್ಕುಗಳು ಇವೆಯೋ, ಹಾಗೆಯೇ ಮಕ್ಕಳಿಗೂ ಎಲ್ಲ ರೀತಿಯ ಹಕ್ಕುಗಳಿವೆ. ಆದರೆ, ಅವುಗಳನ್ನು ಪುಸ್ತಕಗಳಲ್ಲಿ ಮಾತ್ರ ಕಾಣುತ್ತಿದ್ದೇವೆ. ಆದರೆ, ಅವರ ಸರ್ವತೋಮುಖ ಬೆಳವಣಿಗೆಗೆ ಬೇಕಾದ ವೈಜ್ಞಾನಿಕ ಸವಲತ್ತುಗಳನ್ನು ಇಂದು ನಮ್ಮ ಸರ್ಕಾರ ಒದಗಿಸಿಲ್ಲ.  

AV Eye Hospital ad

ರಾಜ್ಯದಲ್ಲಿ ಪ್ರತಿ ಪಕ್ಷ ಅಧಿಕಾರಕ್ಕೆ ಬಂದಾಗ ತಾವು ನಂಬಿರುವ ಅವೈಜ್ಞಾನಿಕ ವಿಚಾರಗಳನ್ನು, ಸಿದ್ದಾಂತಗಳನ್ನು ಮಕ್ಕಳ ಬೌದ್ಧಿಕತೆ ಒಳಗೆ ತುರುಕುವುದಕ್ಕೆ ಪ್ರಯತ್ನ ಮಾಡಿವೆ. ಅದರಲ್ಲಿ ಕೆಲವೊಂದು ಪಕ್ಷಗಳು ಯಶಸ್ವಿಯೂ ಆಗಿವೆ. ಇದೊಂದು ಅಬೌದ್ಧಿಕ, ಅಪರಾಧಿಕ ನಡೆ.

ನಮ್ಮ ದೇಶದಲ್ಲಿರುವ ಕಾನೂನುಗಳಿಂದ ಮಕ್ಕಳ ಮೇಲೆ ನಡೆಯುತ್ತಿರುವ ಹಲ್ಲೆಗಳು ಕಡಿಮೆಯಾಗಬೇಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇವೆಲ್ಲ ದೌರ್ಜನ್ಯಗಳು, ಹಲ್ಲೆಗಳು ಹೆಚ್ಚಾಗುತ್ತಿವೆ. ಸಾಮೂಹಿಕ ಅತ್ಯಾಚಾರಗಳು, ಕೊಲೆಗಳು ಸರ್ವೇಸಾಮಾನ್ಯವಾಗಿವೆ. 50 ವರ್ಷಗಳ ಹಿಂದೆ ಈ ರೀತಿಯ ಕೃತ್ಯಗಳು ತೀರಾ ಕಡಿಮೆ ಇದ್ದವು. ಆದರೆ, ಪೋಕ್ಸೊದಂಥ ಕಠಿಣ ಕಾನೂನು ಕ್ರಮಗಳು ಜಾರಿಗೆ ಬಂದ ಮೇಲೂ ದುಷ್ಕೃತ್ಯಗಳು ತೀರಾ ಹೆಚ್ಚಳವಾಗಿವೆ. ಇದಕ್ಕೆಲ್ಲ ಕಾರಣ ನಮ್ಮ ವ್ಯವಸ್ಥೆ. 

ಆನ್‌ಲೈನ್‌ ಮೋಸದಾಟಕ್ಕೆ ಮಕ್ಕಳು ಬಲಿ

ಕೋವಿಡ್‌ ಸಂದರ್ಭದಲ್ಲಿ ಮಕ್ಕಳು ಆನ್‌ಲೈನ್‌ ಮೋಸದಾಟಕ್ಕೆ ಬಲಿಯಾಗಿದ್ದಾರೆ. ಸರ್ಕಾರ ಆನ್‌ಲೈನ್‌ ಶಿಕ್ಷಣದ ಬಗ್ಗೆ ಮಕ್ಕಳಿಗೆ ತರಬೇತಿ ನೀಡದೆ, ಪೂರಕ ವಾತಾವರಣ ಸೃಷ್ಟಿಸದೆ ಆನ್‌ಲೈನ್‌ ಶಿಕ್ಷಣ ಜಾರಿಗೆ ತಂದದ್ದು ಒಂದು ದೊಡ್ಡ ತಪ್ಪು. ಶ್ರೀಮಂತರ ಮಕ್ಕಳಿಗಾಗಿ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲಾಯಿತು. ಆನ್‌ಲೈನ್‌ ವ್ಯವಸ್ಥೆಯಲ್ಲಿ ಕಲಿತಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು.

ಕರಾಳ ದಿನ

ಮಾನಸಿಕವಾಗಿ ತಯಾರಿಲ್ಲದ ಸಂದರ್ಭದಲ್ಲಿ ಆನ್‌ಲೈನ್‌ ಶಿಕ್ಷಣ ಜಾರಿಗೆ ಬಂತು. ಎಷ್ಟೋ ಹಳ್ಳಿಗಳಲ್ಲಿ ವಿದ್ಯುತ್‌ಗಳಿಲ್ಲ. ಮಕ್ಕಳ ಬಳಿ ಮೊಬೈಲ್‌ಗಳಿಲ್ಲ. ಮೊಬೈಲ್‌ಗಳಿದ್ದರೂ ಆಪರೇಟ್‌ ಮಾಡುವುದಕ್ಕೆ ಬರುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಮೊಬೈಲ್‌ಗಳಿಂದಲೇ ಹೆಚ್ಚಿನ ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. 

ಕೋವಿಡ್‌ ಸಂದರ್ಭದಲ್ಲಿ ನಮಗೆ ಒಂದು ಮಾಹಿತಿ ಬಂದಿತ್ತು. ಒಬ್ಬ ಹೈಸ್ಕೂಲ್‌ ಹುಡುಗ, ಹತ್ತಕ್ಕಿಂತಲೂ ಹೆಚ್ಚು ಕಾಲೇಜು ಹುಡುಗಿಯರ ನಗ್ನ ಚಿತ್ರ ಇಟ್ಟುಕೊಂಡಿದ್ದ. ಇದಕ್ಕೆ ಪರಿಹಾರವೇನು? ಇಂಥ ಘಟನೆಗಳಿಂದಾಗಿ ಎಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಎರಡು ಸಮುದಾಯದ, ಧರ್ಮಗಳ ಹುಡುಗ-ಹುಡುಗಿಯರಾಗಿದ್ದರೆ, ಸಂಘರ್ಷಗಳೇ ನಡೆಯುತ್ತವೆ. ಇಂಥ ನೂರಾರು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. 

ನಗರದ ಮಕ್ಕಳು ಮಾತ್ರ ಮಕ್ಕಳಲ್ಲ

ಸರ್ಕಾರ ಯಾವುದೇ ಒಂದು ವ್ಯವಸ್ಥೆ ಜಾರಿಗೆ ತರಬೇಕಾದರೆ, ನಗರದ ಮಕ್ಕಳು ಮಾತ್ರ ಮಕ್ಕಳು ಎಂದುಕೊಂಡಿದ್ದರೆ ಅದು ದೊಡ್ಡ ತಪ್ಪು. ಸಮಾಜದ ಕಟ್ಟಕಡೆಯಲ್ಲಿರುವವರನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಯೋಜನೆ ರೂಪಿಸಬೇಕು. ಪ್ರತಿಯೊಂದು ಮಗು ಕೂಡ ಸಂವಿಧಾನದ ಅಡಿಯಲ್ಲಿ ಸಮಾನ ಅವಕಾಶಗಳನ್ನು ಪಡೆಯುವ ಹಕ್ಕು ಹೊಂದಿದೆ. ಆದರೆ, ಇದು ನಮ್ಮ ವ್ಯವಸ್ಥೆಗೆ ಅರ್ಥವಾಗಿಲ್ಲ.

ನಮ್ಮ ಒಡನಾಡಿಯಲ್ಲಿರುವ ಮಕ್ಕಳಿಗೆ ತಂದೆ-ತಾಯಿಯ ಐಡೆಂಟಿಟಿ ಇಲ್ಲ. ಎಷ್ಟೋ ಮಕ್ಕಳು ಅನಾಥರು. ಜಾತಿ-ಧರ್ಮ ಯಾವುದು ಎಂದು ತಿಳಿದಿರಲ್ಲ. ನಮ್ಮಲ್ಲಿ ದೇವದಾಸಿಯರ ಮಕ್ಕಳಿದ್ದಾರೆ. ಆದರೆ, ಇವರು ಯಾವುದೇ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ, ಇಂಥ ಅದೆಷ್ಟೋ ಕಾಲಂಗಳನ್ನು ತುಂಬಲೇಬೇಕು. ಸರ್ಕಾರವು ಮಕ್ಕಳ ಅಭಿವೃದ್ಧಿಗೆ, ಅವರ ಅನುಕೂಲಕ್ಕಾಗಿ ಎಷ್ಟೋ ಯೋಜನೆಗಳನ್ನು ಜಾರಿಗೆ ತರಬಹುದು. ಆದರೆ, ಇಂಥ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು. ಇಲ್ಲವಾದಲ್ಲಿ, ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ. ನಿಜವಾದ ಭಾರತೀಯರು ಅವಕಾಶವಂಚಿತರಾಗುತ್ತಾರೆ.

ಸರ್ಕಾರವು ವಿವೇಕ, ವಿವೇಚನೆಯಿಲ್ಲದ ಯೋಜನೆಗಳನ್ನು ಜಾರಿಗೆ ತರುವುದನ್ನು ನಿಲ್ಲಿಸಬೇಕು. ಸಾಮಾಜಿಕ ಸಂಶೋಧನೆ ನಡೆಸಿ, ಯೋಜನೆಗಳನ್ನು ರೂಪಿಸಬೇಕಿದೆ.

ತಮ್ಮ ಮಕ್ಕಳನ್ನು ತಾವೇ ತಿಂದು ತೇಗುತ್ತಿರುವ ಕಾಲವಿದು

ಇಂದಿನ ಸಮಾಜದಲ್ಲಿ ಮಕ್ಕಳನ್ನು ಗುರಿಯಾಗಿಸಿ ಬೇಟೆಯಾಡುವ ಒಂದು ತಂಡವಿದೆ. ತಮ್ಮ ಮಕ್ಕಳನ್ನು ತಾವೇ ತಿಂದು ತೇಗುತ್ತಿರುವ ಕಾಲವಿದು. ಮಾನವ ಕಳ್ಳಸಾಗಾಣಿಕೆ, ಲೈಂಗಿಕ ಶೋಷಣೆ, ವೇಶ್ಯಾವಾಟಿಕೆ, ಭಿಕ್ಷಾಟನೆಗೆ ಮಕ್ಕಳನ್ನು ರವಾನೆ ಮಾಡಲಾಗುತ್ತಿದೆ. ಮುಗ್ಧ ಮಕ್ಕಳನ್ನು ತಮ್ಮ ಮೋಸದಾಟಗಳಿಗೆ ಬಳಸಲಾಗುತ್ತಿದೆ. ಇವುಗಳ ನಿಗ್ರಹಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. 

ಮಕ್ಕಳ ದಿನವಲ್ಲ ಕರಾಳ ದಿನ 

ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೊ ಪ್ರಕರಣ ಕರ್ನಾಟಕ ಮಾತ್ರವಲ್ಲದೆ, ಇಡೀ ದೇಶದ ಗಮನ ಸೆಳೆದಿತ್ತು. ಕಳೆದ ಮೂರು ತಿಂಗಳಿಂದ ಭಾರತ ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಕರ್ನಾಟಕ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ಏನು ಮಾಡಿವೆ, ಏನೂ ಮಾಡಿಲ್ಲ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ, ಮಕ್ಕಳಿಗೆ ದೊಡ್ಡ ಅನ್ಯಾಯ ಮಾಡಿವೆ. ನಿಜವಾಗಿಯೂ ಈ ಪ್ರಕರಣದ ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಟ್ಟಿದ್ದರೆ, ಮಕ್ಕಳ ದಿನಾಚರಣೆಗೆ ಒಂದು ಅರ್ಥ ಬರುತ್ತಿತ್ತು.

ಮಕ್ಕಳ ದಿನವನ್ನು ಕರಾಳ ದಿನವನ್ನಾಗಿ ಆಚರಿಸಬೇಕಿದೆ. ಕನಿಷ್ಠ ಕಾಲೇಜು ಮಕ್ಕಳು (16-18 ವರ್ಷ ವಯಸ್ಸಿನ ಮಕ್ಕಳು) ಈ ದಿನಾಚರಣೆಯನ್ನು ವಿರೋಧಿಸಬೇಕಿದೆ. ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಮಕ್ಕಳು ಕಣ್ಣೀರಾಕುತ್ತಿರುವಾಗ, ಉಳಿದವರು ಕುಣಿದು ಕುಪ್ಪಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ತಮ್ಮ ಸುತ್ತಮುತ್ತ, ತಮ್ಮ ಓರಗೆಯ ಮಕ್ಕಳ ಮೇಲೆ ಆಗುತ್ತಿರುವ ಭೀಭತ್ಸಕರ ದೌರ್ಜನ್ಯ ಮತ್ತು ಹಲ್ಲೆಗಳನ್ನು ಖಂಡಿಸಬೇಕಿದೆ. 

ಮಕ್ಕಳ ದಿನಾಚರಣೆ ದಿನ ಇವರೆಲ್ಲ ಪುಂಖಾನುಪುಂಖವಾಗಿ ಮಾತಾಡುತ್ತಾರೆ. ಪ್ರಚಾರ ಪಡೆಯುತ್ತಾರೆ. ಆದರೆ, ಈ ಮಕ್ಕಳ ತಾಯಿಯನ್ನು ಸಂಬಂಧಪಡದ ಪ್ರಕರಣವೊಂದರಲ್ಲಿ ವಶಕ್ಕೆ ಪಡೆದು ಐದು ದಿನ ವಿಚಾರಣೆಗೆ ಒಳಪಡಿಸಿದ್ದಾರೆ. ಅದೇ ನಾವು ಪ್ರಕರಣ ದಾಖಲಿಸಿದಾಗ ಕ್ರಮ ಕೈಗೊಳ್ಳುವುದಕ್ಕೆ ಆರು ದಿನ ತೆಗೆದುಕೊಳ್ಳುತ್ತಾರೆ. 

ಈ ಮಕ್ಕಳಂತೆಯೇ ಇನ್ನೂ 25 ನೊಂದ ಮಕ್ಕಳು ಹೊರಗೆ ಇದ್ದಾರೆ. ಅವರೆಲ್ಲರೂ ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಅವರೆಲ್ಲರಿಗೂ ರಕ್ಷಣೆ ನೀಡಿ, ಅವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಬೇಕಿತ್ತು. ಆದರೆ, ಈವರೆಗೆ ಒಬ್ಬರೇ ಒಬ್ಬರನ್ನು ಪತ್ತೆ ಮಾಡಿಲ್ಲ. ಈವರೆಗೆ ʼಒಡನಾಡಿʼ ನೆರವು ಪಡೆದೇ ಕೆಲವರು ದೂರು ದಾಖಲಿಸಿದ್ದಾರೆ. ಆ ನೊಂದ ಮಕ್ಕಳು ಇರುವ ಜಾಗವೂ ಈ ಆಡಳಿತ ವ್ಯವಸ್ಥೆಗೆ ತಿಳಿದಿದೆ. ಆದರೆ, ಸಂತ್ರಸ್ತೆಯರ ತಾಯಿಗೆ ಹಿಂಸೆ ಕೊಡುತ್ತಿರುವುದನ್ನು ಕಂಡಾಗ ಯಾರು ಮುಂದೆ ಬಂದು ದೂರು ದಾಖಲಿಸುತ್ತಾಳೆ. 

ಈವರೆಗೆ ದೇಶದ, ರಾಜ್ಯದ ಚುಕ್ಕಾಣಿ ಹಿಡಿದಿರುವ ಜವಾಬ್ದಾರಿಯುತ ಒಬ್ಬ ರಾಜಕಾರಣಿ ಈ ಬಗ್ಗೆ ಒಂದು ಮಾತಾಡಿಲ್ಲ. ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಠದ ಆಡಳಿತಾಧಿಕಾರಿ ಕುರಿತಂತೆ ಮಾತಾಡುತ್ತಾರೆ. ಆದರೆ, ಮಕ್ಕಳ ಬಗ್ಗೆ ತುಟಿಕ್‌ ಪಿಟಿಕ್‌ ಎಂದಿಲ್ಲ. ಎನ್‌ಸಿಪಿಸಿಆರ್‌ನವರು ಕೂಡ ಬಂದು ಮಕ್ಕಳ ಜತೆ ಮಾತಾಡಿಲ್ಲ. ಇದು ತುಂಬಾ ಬೇಸರದ ಸಂಗತಿ. 

ಇದನ್ನು ಓದಿದ್ದೀರಾ? ಮಕ್ಕಳ ದಿನ | ನಮ್ಮನ್ನು ನಾವು ಅರಿಯುವುದು ಎಷ್ಟು ಮುಖ್ಯವೋ, ಮಗುವಿನ ಮನಸ್ಸನ್ನು ತಿಳಿಯುವುದು ಅಷ್ಟೇ ಮುಖ್ಯ

ಶಕ್ತಿಕೇಂದ್ರಗಳು ವೋಟ್‌ ಬ್ಯಾಂಕ್

ನಮ್ಮ ನ್ಯಾಯಿಕ ವ್ಯವಸ್ಥೆಯಲ್ಲಿ ಸಂತ್ರಸ್ತರಿಗೆ, ಸಾಕ್ಷಿದಾರರಿಗೆ ರಕ್ಷಣೆ ಕೊಡಬೇಕು. ಆದರೆ, ಈಗಿನ ಸರ್ಕಾರ ಇದ್ಯಾವುದನ್ನೂ ಮಾಡಿಲ್ಲ. ಆದರೆ, ಈ ಪ್ರಕರಣದಲ್ಲಿ ಎಲ್ಲವೂ ಹಿಂಸೆಯಿಂದಲೇ ಆಗಿದೆ. ಒತ್ತಡ ಹೇರಿ ಎಫ್‌ಐಆರ್‌ ದಾಖಲಿಸುವುದು. ಒತ್ತಡ ಹೇರಿ ಆರೋಪಿ ಬಂಧನ ಮಾಡಿಸುವುದು ಹೀಗೆ ಎಲ್ಲವೂ ಒತ್ತಡದಿಂದಲೇ ಆಯಿತು. ಆದರೆ, ನಕಲಿ ಪ್ರಕರಣವೊಂದರಲ್ಲಿ ದೂರು ದಾಖಲಾದ ಬೆನ್ನಲ್ಲೇ ಸಂತ್ರಸ್ತೆ ತಾಯಿಯನ್ನು ವಶಕ್ಕೆ ಪಡೆಯಲಾಗಿದೆ. ನೊಂದ ಮಕ್ಕಳ ಮೇಲೆ ಇವರಿಗೆ ಯಾವುದೇ ಕಾಳಜಿ ಇಲ್ಲ. ಆಡಳಿತ ಸರ್ಕಾರಕ್ಕೆ ನಿಜವಾಗಿ ಕಾಳಜಿ ಇರುವುದು ಶಕ್ತಿವಂತರನ್ನು, ಶಕ್ತಿಕೇಂದ್ರಗಳನ್ನು ಕಾಪಾಡಿಕೊಳ್ಳುವುದು. ಶಕ್ತಿಕೇಂದ್ರಗಳು ರಾಜಕಾರಣಿಗಳಿಗೆ ವೋಟ್‌ ಬ್ಯಾಂಕ್‌ಗಳಾಗಿವೆ. 

ಮುರುಘಾ ಶ್ರೀಗೆ ಕ್ಲೀನ್‌ ಚಿಟ್‌ ನೀಡಿದ ರಾಜಕಾರಣಿಗಳು

ಶ್ರೀನಿವಾಸ್‌ ಪ್ರಸಾದ್‌, ಎಚ್‌ ವಿಶ್ವನಾಥ್‌ ಅವರಂಥವರು ಮಾತ್ರ ಈ ಬಗ್ಗೆ ದನಿ ಎತ್ತಿದ್ದಾರೆ. ಬೇರಾವುದೇ ರಾಜಕಾರಣಿ ಸಂತ್ರಸ್ತ ಮಕ್ಕಳ ಪರ ನಿಲ್ಲಲಿಲ್ಲ. ತುಂಬಾ ಜನ ರಾಜಕಾರಣಿಗಳು, ನೇರವಾಗಿ ಆರೋಪಿಗೆ ಕ್ಲೀನ್‌ಚಿಟ್‌ ಕೊಟ್ಟಂತೆ ಮಾತಾಡಿದರು. ಕರ್ನಾಟಕದ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಮಠಕ್ಕೆ ಭೇಟಿ ನೀಡಿ ಪ್ರಸಾದ ತಿಂದು ಬಂದರು. ಆದರೆ, ಮಕ್ಕಳ ನೋವನ್ನು ಆಲಿಸುವುದಕ್ಕೆ ಅವರು ಬರಲಿಲ್ಲ. 

ಅಧಿಕಾರ, ಸ್ಥಾನ, ಹಣದ ಬಗ್ಗೆ ಮಾತನಾಡುವವರು ಹೆಣ್ಣುಮಕ್ಕಳಿಗೆ, ಮಹಿಳೆಯರಿಗೆ ಆಗುವ ಅನ್ಯಾಯದ ಬಗ್ಗೆ ಮಾತನಾಡುವುದಿಲ್ಲ. ಅವರ ಪ್ರತಿಯೊಂದು ಮಾತೂ ವೋಟ್‌ ಬ್ಯಾಂಕ್‌ ಸುತ್ತವೇ ಇರುತ್ತದೆ.

ನಿರೂಪಣೆ | ರಮ್ಯಾ ಹೊನ್ನಾವರ
ನಿಮಗೆ ಏನು ಅನ್ನಿಸ್ತು?
3 ವೋಟ್
eedina app