ರಾಷ್ಟ್ರೀಯ ಶಿಕ್ಷಣ ನೀತಿ| ಪ್ರಭುತ್ವದ ಹಿತಾಸಕ್ತಿ v/s ಸಾರ್ವಜನಿಕ ಹಿತಾಸಕ್ತಿ

New-National-Education-Policy.

ಆರನೇ ತರಗತಿಯಿಂದಲೇ ಕುಲಕಸುಬುಗಳನ್ನು ಕಲಿಸಿಕೊಡುವ ಆಶಯವನ್ನು ಒಳಗೊಂಡಿದೆ. ಇದು ಹೆಚ್ಚು ಕಲಿಯಬೇಕಾದ ತಳಸಮುದಾಯಗಳ ಮಕ್ಕಳನ್ನು ಉನ್ನತ ಶಿಕ್ಷಣ ಮತ್ತು ತರಬೇತಿಗಳಿಂದ ವಿಮುಖರಾಗಿಸುವ ಹುನ್ನಾರ ಹೊಂದಿದೆ. ಇದು ಈಗಾಗಲೇ ಕಾನೂನುಬದ್ಧವಾಗಿ ನಿಷೇಧಿಸಿರುವ ಬಾಲಕಾರ್ಮಿಕ ಪದ್ಧತಿಯನ್ನು ಉತ್ತೇಜಿಸುತ್ತದೆ

ಭಾರತವು ಜಾಗತಿಕ ಶಿಕ್ಷಣದ ಮಾತೃಭೂಮಿಯಾಗಿದೆ. ಮೊಟ್ಟಮೊದಲ ಬಾರಿಗೆ ಬುದ್ಧರ ಆಶಯದಂತೆ ಮೌರ್ಯ ಸಾಮ್ರಾಜ್ಯದಲ್ಲಿ ನಳಂದಾ, ತಕ್ಷಶಿಲಾ, ವಲ್ಲಭಿ, ವಿಕ್ರಮಶಿಲಾ, ಕಂಚಿ, ಉಜ್ಜಯಿನಿ ಮೊದಲಾದೆಡೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆದು ಇಡೀ ಜಗತ್ತಿಗೆ ಜ್ಞಾನದಾಸೋಹ ನೀಡಿದ ಕೀರ್ತಿಯನ್ನು ಭಾರತ ಹೊಂದಿದೆ. ಪ್ರಪಂಚಕ್ಕೆ ಮಾದರಿ ಪ್ರಜಾಸತ್ತೆ ಮತ್ತು ಶಿಕ್ಷಣ ವ್ಯವಸ್ಥೆಗಳನ್ನು ರೂಪಿಸಿದ ಶ್ರೇಯಸ್ಸು ಭರತ ಖಂಡಕ್ಕೆ ಸಲ್ಲುತ್ತದೆ. ವಿಶ್ವದ ಎಲ್ಲೆಡೆಯಿಂದ ಭಾರತಕ್ಕೆ ಬಂದು ಮೌಲ್ಯಾಧಾರಿತ ಶಿಕ್ಷಣ ಗಳಿಸಿ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಂಡ ಅಸಂಖ್ಯಾತ ಜನರು ಶೈಕ್ಷಣಿಕ ಇತಿಹಾಸದಲ್ಲಿ ಕಂಡುಬರುತ್ತಾರೆ.

ʼಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿ 2030ʼ ‘ಪ್ರತಿಯೊಬ್ಬರಿಗೂ ಒಳಗೊಳ್ಳುವ ಶಿಕ್ಷಣ ಅಭಿವೃದ್ಧಿ, ಸಮಾನವಾದ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಅವಕಾಶ ಮತ್ತು ಜೀವನಾಧಾರಿತ ಕಲಿಕೆ ಅವಕಾಶಗಳನ್ನು ಒದಗಿಸುವ’ ಆಶಯವನ್ನು ಹೊಂದಿದೆ. ಭಾರತ ಸರ್ಕಾರ 2015ರಲ್ಲಿ ಜಾಗತಿಕ ಶಿಕ್ಷಣ ಬೆಳವಣಿಗೆಯ ಕಾರ್ಯಸೂಚಿಯನ್ನು ಅಳವಡಿಸಿಕೊಂಡು ದೇಶದ ಶಿಕ್ಷಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಇಂದು ಬಹುಶಿಸ್ತೀಯ ಕಲಿಕೆ ಮತ್ತು ಸಾಮರ್ಥ್ಯಾಭಿವೃದ್ಧಿಗಳಿಗೆ ವಿಶ್ವದ ಎಲ್ಲೆಡೆ ಹೆಚ್ಚಿನ ಬೇಡಿಕೆ ಉಂಟಾಗುತ್ತಿದೆ.

ಭಾರತದಂತಹ ಅಭಿವೃದ್ಧಿಶೀಲ ದೇಶಕ್ಕೆ ಬೇಕಿರುವುದು ಸರ್ವರನ್ನೂ ಒಳಗೊಳ್ಳುವ ಮತ್ತು ಅಭಿವೃದ್ಧಿಪಥದಲ್ಲಿ ಮುನ್ನಡೆಸುವ ಶಿಕ್ಷಣ ವ್ಯವಸ್ಥೆ. ಹಿಂದಿನ ಶಿಕ್ಷಣ ನೀತಿಗಳನ್ನು ಅಕ್ಷರಶಃ ಶಿಕ್ಷಣ ತಜ್ಞರನ್ನೇ ಸಕ್ರಿಯವಾಗಿ ಒಳಗೊಂಡು ಸಾರ್ವಜನಿಕ ಹಿತರಕ್ಷಣೆಗೆ ಪೂರಕವಾಗಿ ರೂಪಿಸಲಾಗಿತ್ತು. ಆದರೆ ಇತ್ತೀಚಿನ ಶಿಕ್ಷಣ ನೀತಿಯನ್ನು ರೂಪಿಸುವ ಸಮಿತಿಯಲ್ಲಿ ಶಿಕ್ಷಣ ತಜ್ಞರಿಗಿಂತ ಸಂಘಪರಿವಾರಿಗಳಿಗೆ ನಿಷ್ಟರಾಗಿರುವ ಸಾಂಸ್ಕೃತಿಕ ಸಾಮ್ರಾಜ್ಯಶಾಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಿತಿಯ ಅಧ್ಯಕ್ಷರಾದ ಕಸ್ತೂರಿ ರಂಗನ್ ಅಂತರರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ. ಇವರು ಭಾರತ ಸರ್ಕಾರಕ್ಕೆ ವಿಜ್ಞಾನದ ವಿಷಯಗಳು ಮತ್ತು ಕಾಳಜಿಗಳ ಬಗ್ಗೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದ ಶ್ರೇಯಸ್ಸು ಹೊಂದಿದ್ದಾರೆ. ಆದರೆ ಇವರು ಹೇಳಿಕೊಳ್ಳುವಂತಹ ಶಿಕ್ಷಣ ತಜ್ಞರು ಮತ್ತು ಶೈಕ್ಷಣಿಕ ಆಡಳಿತಗಾರರಲ್ಲ. ಸಮಿತಿಯ ಅಧ್ಯಕ್ಷರನ್ನು ನೇಮಿಸುವಾಗಲೇ ಸರ್ಕಾರ ಎಡವಿರುವುದು ಸ್ಪಷ್ಟವಾಗಿದೆ. ಬಹುತೇಕ ಸಮಿತಿ ಸದಸ್ಯರು ಬಿಜೆಪಿ ಸರ್ಕಾರ ಮತ್ತು ಸಂಘ ಪರಿವಾರಿಗಳಿಗೆ ನಿಷ್ಟರಾಗಿದ್ದು ಶಿಕ್ಷಣದ ಕೇಸರೀಕರಣಕ್ಕೆ ಬದ್ಧರಾಗಿದ್ದಾರೆ.

Image
ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಿತಿಯ ಅಧ್ಯಕ್ಷ ಕಸ್ತೂರಿರಂಗನ್
‌ʼರಾಷ್ಟ್ರೀಯ ಶಿಕ್ಷಣ ನೀತಿ 2020ʼ ಸಮಿತಿಯ ಅಧ್ಯಕ್ಷ ಕಸ್ತೂರಿರಂಗನ್

ಸಂಸತ್ತು, ವಿಧಾನಸಭೆಗಳಲ್ಲಿ ಚರ್ಚೆಯಾಗಿಲ್ಲ

ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮುನ್ನ ಸಂಸತ್ತು ಮತ್ತು ವಿಧಾನ ಸಭೆಗಳಲ್ಲಿ ವಿಸ್ತೃತ ಸಂವಾದಗಳು ಜರುಗಿಲ್ಲ. ಆತುರಾತುರವಾಗಿ ಕೋವಿಡ್-19 ಸಂಕಷ್ಟ ನಿರ್ವಹಣೆ ವೇಳೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಟಾನಗೊಳಿಸುವುದು ದೇಶಾದ್ಯಂತ ಹಲವಾರು ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಿಕ್ಷಣದ ಕೇಂದ್ರೀಕರಣ ರಾಜ್ಯ ಹಾಗೂ ಕೇಂದ್ರದ ಜಂಟಿ ಜವಾಬ್ದಾರಿಯಲ್ಲಿರುವ ಶಿಕ್ಷಣವನ್ನು ಪ್ರಸ್ತುತ ಶಿಕ್ಷಣ ನೀತಿಯ ಮೂಲಕ ಸಂಪೂರ್ಣವಾಗಿ ಕೇಂದ್ರದ ಅಧೀನಕ್ಕೆ ಒಳಪಡಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಪೂರಕವಾಗಿದೆ. ವಿಕೇಂದ್ರೀಕೃತ ಶಿಕ್ಷಣ, ವಿಕೇಂದ್ರೀಕೃತ ಆಡಳಿತ ಮತ್ತು ವಿಕೇಂದ್ರೀಕೃತ ಅಭಿವೃದ್ಧಿಗಳು ಭಾರತದಂತಹ ಬಹುದೊಡ್ಡ ದೇಶಕ್ಕೆ ಅತ್ಯವಶ್ಯಕವೆಂಬ ಗಾಂಧಿ ವಿಚಾರಧಾರೆ ಮೋದಿ ಯುಗದಲ್ಲಿ ಅಪ್ರಸ್ತುತವಾಗಿದೆ. ಅಂತೆಯೇ ಜನತಾ ಶಿಕ್ಷಣ ಸಂಸ್ಥೆಗಳನ್ನು ತೆರೆದು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಶಿಕ್ಷಣ ಸೇವೆಯನ್ನು ಕೊಂಡೊಯ್ದ ಅಂಬೇಡ್ಕರ್ ಚಿಂತನೆ ಇಂದು ನಮ್ಮನ್ನು ಆಳುವವರಿಗೆ ಇಲ್ಲವಾಗಿದೆ. ಶಿಕ್ಷಣದ ಕೇಂದ್ರೀಕರಣ ಶೈಕ್ಷಣಿಕ ನ್ಯಾಯ ಮತ್ತು ಸಮಾನತೆ ತತ್ವಗಳಿಗೆ ವಿರುದ್ಧವಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರದ ಅಧೀನದಲ್ಲಿ ತರುವುದರ ಮೂಲಕ ರಾಜ್ಯಗಳನ್ನು ಸಂಪೂರ್ಣವಾಗಿ ಮೂಲೆಗೆ ಸರಿಸುವ ಕಾರ್ಯಸೂಚಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಯುಜಿಸಿ, ಎಐಸಿಟಿಇ ಹಾಗೂ ನ್ಯಾಕ್ ಸಂಸ್ಥೆಗಳನ್ನು ವಿಲೀನಗೊಳಿಸಿ ಒಂದು ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಶಿಕ್ಷಣದ ಕೇಸರೀಕರಣ ಭಾರತವು ಮೂಲಭೂತವಾಗಿ ಬಹುತ್ವ, ಧರ್ಮನಿರಪೇಕ್ಷತೆ, ಸಮಾನತೆ, ಸಾರ್ವಭೌಮತ್ವ ಮತ್ತು ಇತರ ಸಾಂವಿಧಾನಿಕ ಮೌಲ್ಯಗಳನ್ನು ಒಳಗೊಂಡಿದೆ. ಪ್ರಸ್ತುತ ಕೇಂದ್ರ ಸರ್ಕಾರ ಭಾರತದ ಆತ್ಮವೇ ಆಗಿರುವ ಬಹುತ್ವವನ್ನು ಕಡೆಗಣಿಸಿ ಏಕತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಿದೆ. ಭಾರತವೆಂದರೆ ಹಿಂದೂ ರಾಷ್ಟ್ರವಲ್ಲ, ಬಹುತ್ವ ಕೇಂದ್ರಿತ ಬಹುಜನರ ದೇಶವೇ ಆಗಿದೆ. ಪ್ರಸ್ತುತ ಶಿಕ್ಷಣ ನೀತಿ ಶಿಕ್ಷಣದ ಸಾರ್ವತ್ರೀಕರಣ ಮತ್ತು ಮಾನವೀಕರಣಗಳಿಗೆ ಅನುವು ಮಾಡಿಕೊಡುವುದರ ಬದಲಿಗೆ ಹಿಂದುತ್ವ ಕೇಂದ್ರಿತ ಶಿಕ್ಷಣದ ಕೇಸರೀಕರಣಕ್ಕೆ ಪೂರಕವಾಗಿದೆ. ಇದು ಮೂಲಭೂತವಾಗಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ.

ಇಂತಹ ಶಿಕ್ಷಣ ನೀತಿಯಿಂದ ಎಲ್ಲರಿಗೂ ಎಲ್ಲೆಡೆ ಶಿಕ್ಷಣ ಎಂಬ ಪರಿಕಲ್ಪನೆಗೆ ಪೆಟ್ಟು ಬಿದ್ದಿದೆ. ಮೂಲನಿವಾಸಿಗಳ ಚರಿತ್ರೆಗೆ ಧಕ್ಕೆ ಹೊಸ ಶಿಕ್ಷಣ ನೀತಿ ಬುದ್ಧ, ಮಹಾವೀರ, ಕಬೀರ, ಫುಲೆ, ಸ್ವಾಮಿ ವಿವೇಕಾನಂದ, ರಾಜಾರಾಮ್ ಮೋಹನ್‍ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್, ದಯಾನಂದ ಸರಸ್ವತಿ, ಗೋಪಾಲಕೃಷ್ಣ ಗೋಖಲೆ, ಗಾಂಧಿ, ಅಂಬೇಡ್ಕರ್, ಮೌಲಾನ ಅಬ್ದುಲ್ ಕಲಾಂ ಅಜಾದ್, ಝಾಕೀರ್ ಹುಸೇನ್, ಪೆರಿಯಾರ್, ನಾರಾಯಣ ಗುರು, ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಾದ ದಾರ್ಶನಿಕರ ವಿಚಾರಧಾರೆಗಳನ್ನು ಪಠ್ಯಪುಸ್ತಕಗಳ ಪರಿಷ್ಕರಣೆ ನೆಪದಲ್ಲಿ ಮುಚ್ಚಿ ಹಾಕುವ ಹುನ್ನಾರವನ್ನು ಪ್ರಧಾನವಾಗಿ ಒಳಗೊಂಡಿದೆ. ಮೂಲನಿವಾಸಿಗಳ ಇತಿಹಾಸವನ್ನು ನಗಣ್ಯಗೊಳಿಸಿ ಹೊರಗಿನಿಂದ ಬಂದ ದಾಳಿಕೋರ ಹಿಂದೂ ಮೂಲಭೂತವಾದಿಗಳ ಇತಿಹಾಸವನ್ನು ಪ್ರತಿಷ್ಟಾಪಿಸುವ ಪರೋಕ್ಷ ಕಾರ್ಯಸೂಚಿಯನ್ನು ಹೊಸ ಶಿಕ್ಷಣ ನೀತಿ ಹೊಂದಿದೆ.

ಬಾಲಕಾರ್ಮಿಕ ಪದ್ಧತಿಗೆ ಉತ್ತೇಜನ

ಇದು ವಾಸ್ತವವಾಗಿ ಮೂಲ ನಿವಾಸಿಗಳು ಮತ್ತು ಬಹುತ್ವವಾದಿಗಳ ಮೇಲಿನ ಅಮಾನುಷ ಸಾಂಸ್ಕೃತಿಕ ದಾಳಿಯಾಗಿದೆ. ಮರಳಿ ಗುಲಾಮಗಿರಿಗೆ ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ ಆರನೇ ತರಗತಿಯಿಂದಲೇ ಕುಲಕಸುಬುಗಳನ್ನು ಕಲಿಸಿಕೊಡುವ ಆಶಯವನ್ನು ಒಳಗೊಂಡಿದೆ. ಇದು ಹೆಚ್ಚು ಕಲಿಯಬೇಕಾದ ತಳಸಮುದಾಯಗಳ ಮಕ್ಕಳನ್ನು ಉನ್ನತ ಶಿಕ್ಷಣ ಮತ್ತು ತರಬೇತಿಗಳಿಂದ ವಿಮುಖರಾಗಿಸುವ ಹುನ್ನಾರ ಹೊಂದಿದೆ. ಇದು ಸಂವಿಧಾನ ಮತ್ತು ಸರ್ಕಾರಗಳು ಈಗಾಗಲೇ ಕಾನೂನುಬದ್ಧವಾಗಿ ನಿಷೇಧಿಸಿರುವ ಬಾಲಕಾರ್ಮಿಕ ಪದ್ಧತಿಯನ್ನು ಉತ್ತೇಜಿಸುತ್ತದೆ. ಇಂದು ಎಲ್ಲ ಧರ್ಮಗಳು ಮತ್ತು ಜನಾಂಗಗಳ ಮಕ್ಕಳಿಗೆ ಬೇಕಿರುವುದು ಮೂಲಶಿಕ್ಷಣ, ವೃತ್ತಿಶಿಕ್ಷಣ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಅಭಿವೃದ್ಧಿ, ಆರ್ಥಿಕ ಸ್ವಾವಲಂಭನೆ ಮತ್ತು ಸ್ವಾಭಿಮಾನದ ಬದುಕು. ಇಂತಹ ಮಾನವೀಯ ಆಶಯಗಳಿಗೆ ಹೊಸ ಶಿಕ್ಷಣ ನೀತಿ ತದ್ವಿರುದ್ಧವಾಗಿದೆ.

ಸಂಸ್ಕೃತ ಭಾಷೆಯಿಂದ ದೇಶೀಯ ಭಾಷೆಗಳ ಕಡೆಗಣನೆ ಹೊಸ ಶಿಕ್ಷಣ ನೀತಿಯಲ್ಲಿ ಸಂಸ್ಕೃತ ಭಾಷೆಯನ್ನು ಕಲಿಸುವುದು ಮತ್ತು ಮುಂದಿನ ಪೀಳಿಗೆಗೆ ವೈದಿಕ ಪರಂಪರೆಯನ್ನು ಹೇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ವಾಸ್ತವವಾಗಿ ಸಂಸ್ಕೃತ ಭಾಷೆ ಬಹುತ್ವದ ಸುಸ್ಥಿರ ಬೆಳವಣಿಗೆಗೆ ಪೂರಕವಲ್ಲ. ಕೆಲವರಿಂದ, ಕೆಲವರಿಗಾಗಿ ಮತ್ತು ಕೆಲವರಿಗೋಸ್ಕರವೇ ಇರುವ ಸಂಸ್ಕೃತ ಭಾಷೆ ಅನ್ನ-ಬದುಕುಗಳನ್ನು ನೀಡುವ ಭಾಷೆಯಲ್ಲ. ಸಂಸ್ಕೃತ ಭಾಷೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ವೇದಗಳು ಮತ್ತು ಪುರಾಣಗಳೆಡೆಗೆ ಬಹುಜನರನ್ನು ದಬ್ಬುವ ಮತ್ತು ಬಹುಜನರ ಉದ್ಧಾರಕ್ಕೆ ಮಾರಕವಾದ ವೈದಿಕ ಸಂಸ್ಕೃತಿಯನ್ನು ಉತ್ತೇಜಿಸುವ ಹುನ್ನಾರವನ್ನು ಭಾರತ ಸರ್ಕಾರ ಹೊಂದಿದೆ. ಭಾರತದ ಬಹುಸಂಸ್ಕೃತಿಯ ಸಾರ ಎಲ್ಲ ಭಾಷೆಗಳಲ್ಲಿಯೂ ಇದೆ. ಎಲ್ಲ ಭಾಷೆಗಳನ್ನು ಉಳಿಸುವ, ಬೆಳೆಸುವ ಮತ್ತು ಉದ್ಧರಿಸುವ ಮೂಲಕ ಬಹುತ್ವವನ್ನು ರಕ್ಷಿಸಿ ಭಾರತವನ್ನು ಉದ್ಧರಿಸುವುದು ಇಂದಿನ ಬಹುದೊಡ್ಡ ಅವಶ್ಯಕತೆಯಾಗಿದೆ.

ಶಿಕ್ಷಣದ ಖಾಸಗೀಕರಣ ಜಾಗತೀಕರಣ ಯುಗದಲ್ಲಿ  ನವ ಉದಾರವಾದಕ್ಕೆ ಜೋತುಬಿದ್ದ ಸಾಂಸ್ಕೃತಿಕ ಮೂಲಭೂತವಾದಿಗಳು ಮತ್ತು ಆರ್ಥಿಕ ಬಂಡವಾಳಶಾಹಿ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿವೆ. ಮಾರುಕಟ್ಟೆ ಶಕ್ತಿಗಳ ಮಾಲೀಕತ್ವ, ನಿಯಂತ್ರಣ ಮತ್ತು ನಿರ್ದೇಶನಗಳಿಗೆ ಒಳಪಟ್ಟ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸಿ ದುರ್ಬಲ ವರ್ಗಗಳನ್ನು ಶೈಕ್ಷಣಿಕ ಹಾಗೂ ಅಭಿವೃದ್ಧಿ ಮುಖ್ಯವಾಹಿನಿಯಿಂದ ಹೊರ ದಬ್ಬುವ ಮನೋಧರ್ಮ ಹೊಂದಿವೆ. ಶಿಕ್ಷಣದ ಖಾಸಗೀಕರಣದಿಂದ ಹೆಣ್ಣುಮಕ್ಕಳು, ವಿಶೇಷ ಚೇತನರು, ತೃತೀಯ ಲಿಂಗಿಗಳು, ಆದಿವಾಸಿಗಳು, ಹಿಂದುಳಿದವರು ಮೊದಲಾದ ದುರ್ಬಲ ಸಮುದಾಯಗಳ ಒಳಗೊಳ್ಳುವ ಶಿಕ್ಷಣ ಸಾಧ್ಯವಿಲ್ಲ. ಇಂತಹ ಕಠಿಣ ಸತ್ಯವನ್ನು ಸರ್ಕಾರ ಮನಗಂಡಿದ್ದರೂ ಸಹ ಹೊಸ ಶಿಕ್ಷಣ ನೀತಿಯನ್ನು ಅನುಷ್ಟಾನಗೊಳಿಸುವುದರ ಮೂಲಕ ದುರ್ಬಲ ವರ್ಗಗಳ ಶಿಕ್ಷಣ ಹಕ್ಕನ್ನು ಕಸಿಯಲು ಸರ್ಕಾರ ಮುಂದಾಗಿರುವುದು ತರವಲ್ಲ. ಶಿಕ್ಷಣದ ಖಾಸಗೀಕರಣದಿಂದ ಶೈಕ್ಷಣಿಕ ಮಾಫಿಯಾ ಪ್ರಬಲವಾಗಿದೆಯೇ ಹೊರತು ಮೂಲನಿವಾಸಿಗಳ ಶೈಕ್ಷಣಿಕ ಸಬಲೀಕರಣ ಸಾಧ್ಯವಾಗಿಲ್ಲ.

ಖಾಸಗಿ ಶಿಕ್ಷಣ ಸಂಸ್ಥೆಗಳು ಮನಸೋ ಇಚ್ಛೆ ಶುಲ್ಕವನ್ನು ನಿರ್ಧರಿಸುವ ಪ್ರವೃತ್ತಿಯಿಂದಾಗಿ ಬಡವರ ಮಕ್ಕಳು ಅಲ್ಲಿ ಕಲಿಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಕನಿಷ್ಠ ಶೈಕ್ಷಣಿಕ ಹೂಡಿಕೆ ಭಾರತದ ನಿಜವಾದ ಅಭಿವೃದ್ಧಿ ಸಾಧ್ಯವಾಗುವುದು ಮಾನವ ಸಂಪನ್ಮೂಲಗಳ ಸಮಗ್ರ ಅಭಿವೃದ್ಧಿಯಿಂದಲೇ ಎಂಬುದು ಅನುಭವವೇದ್ಯವಾಗಿದೆ. ಬಲಾಢ್ಯ ಶಕ್ತಿಗಳಿಂದ ನಿಯಂತ್ರಿಸಲ್ಪಡುವ ಸರ್ಕಾರಗಳು ಸ್ವಾತಂತ್ರ್ಯಾನಂತರದಲ್ಲಿ ರಕ್ಷಣೆ ನಿರ್ವಹಣೆಗೆ ಗರಿಷ್ಠ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕನಿಷ್ಠ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿರುವುದು ಸಾಮಾಜಿಕ ನ್ಯಾಯಕ್ಕೆ ಬಗೆದ ಬಹುದೊಡ್ಡ ಅಪಚಾರವಾಗಿದೆ. ಇಷ್ಟು ವರ್ಷಗಳ ಅವಧಿಯಲ್ಲಿ ಬಜೆಟ್‍ನಲ್ಲಿ ಶಿಕ್ಷಣಾಭಿವೃದ್ಧಿಗೆ ನೀಡಿರುವ ಅನುದಾನ ಶೇ.5ಕ್ಕಿಂತಲೂ ಕಡಿಮೆಯಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಶೇ.6ರಷ್ಟು ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿಡಬೇಕೆಂಬ ಕನಿಷ್ಠಜ್ಞಾನ ಮತ್ತು ರಾಜಕೀಯ ಇಚ್ಛಾಶಕ್ತಿ ನಮ್ಮನ್ನು ಆಳುವವರಿಗೆ ಇಲ್ಲದಿರುವುದು ಶೋಚನೀಯ ಸಂಗತಿಯಾಗಿದೆ.

ಭಾರತದಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ, ಆದರೆ ಆಳುವ ವರ್ಗಕ್ಕೆ ಬಹುಜನರ ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಅವಶ್ಯಕವಾದ ಬದ್ಧತೆಯಿಲ್ಲ. ಶೈಕ್ಷಣಿಕ ಮೂಲಸೌಕರ್ಯಗಳ ಕೊರತೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಕೂಡ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸುಸಜ್ಜಿತ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿಪೂರ್ವ ಮತ್ತು ಪದವಿ ಶಿಕ್ಷಣ ಸಂಸ್ಥೆಗಳು ಅಸ್ತಿತ್ವದಲ್ಲಿಲ್ಲ. ಸರ್ಕಾರಿ ಶಾಲೆಗಳನ್ನು ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆ ಎಂಬ ಕಾರಣಕ್ಕೆ ಮುಚ್ಚಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಸಮರ್ಥ ಶಿಕ್ಷಕರು, ಮೂಲಸೌಕರ್ಯಗಳು ಮತ್ತು ಗುಣಾತ್ಮಕ ಶಿಕ್ಷಣ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಂದ ಹಿಂದೆ ಸರಿಯುವ ದುಸ್ಥಿತಿ ಬಂದೊದಗಿದೆ.

ಇದನ್ನು ಓದಿದ್ದೀರಾ? ಎನ್‌ಡಿಎ ತೊರೆದ ನಿತೀಶ್‌| ಬಿಜೆಪಿ ಎಂಬ ಭೂತದ ಸಹವಾಸ

ಬಹಳಷ್ಟು ವಿಶ್ವವಿದ್ಯಾಲಯಗಳು ಮಾನವ ಸಂಪನ್ಮೂಲಗಳು, ಸುಸಜ್ಜಿತ ಕೊಠಡಿಗಳು, ಪ್ರಯೋಗ ಶಾಲೆಗಳು, ಗ್ರಂಥಾಲಯಗಳು, ಕ್ರೀಡಾ ಸೌಲಭ್ಯಗಳು, ವಿಸ್ತರಣಾ ಶಿಕ್ಷಣ ಸೌಲಭ್ಯಗಳು, ವಿಶೇಷ ಉಪನ್ಯಾಸ ಕಾರ್ಯಕ್ರಮಗಳು, ಪುನಶ್ಚೇತನ ಕಾರ್ಯಕ್ರಮಗಳು ಮೊದಲಾದವುಗಳನ್ನು ಹೊಂದಿಲ್ಲದಿರುವುದನ್ನು ನ್ಯಾಕ್ ಸಮಿತಿ ಗಮನಿಸಿದೆ. ವಿದ್ಯಾರ್ಥಿಗಳ ಬೇಡಿಕೆಗೆ ಅನುಸಾರವಾಗಿ ಶೈಕ್ಷಣಿಕ ಸೌಲಭ್ಯಗಳು ಮತ್ತು ಅಧ್ಯಾಪಕರುಗಳನ್ನು ಒದಗಿಸದಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿದಿದೆ. ಪ್ರಸ್ತುತ ಕೋವಿಡ್-19 ಸಂದರ್ಭದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಂಪನ್ಮೂಲಗಳ ಕೊರತೆಯಿಂದ ಆನ್‍ಲೈನ್ ತರಗತಿಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಕ್ಕೆ ಬಂದಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿಲ್ಲದಿರುವುದು ಬಹುದೊಡ್ಡ ಕೊರತೆಯಾಗಿದೆ.

ಹೊಸ ಶಿಕ್ಷಣ ನೀತಿಯ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಯನ್ನು ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳಿಗೆ ಒಪ್ಪಿಸಿ ಬಡವರು ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಮುಖ್ಯವಾಹಿನಿಯಿಂದ ಹೊರದಬ್ಬುವ ನಮ್ಮನ್ನು ಆಳುವವರ ತೆರೆಮರೆಯ ಹುನ್ನಾರವನ್ನು ಪ್ರಜ್ಞಾವಂತರು ಅರ್ಥಮಾಡಿಕೊಳ್ಳಬೇಕು. ಕರ್ನಾಟಕ ರಾಜ್ಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಟಾನಕ್ಕೆ ತಂದು ಮೋದಿ ಪ್ರಭುತ್ವದ ಕೃಪೆಗೆ ಪಾತ್ರವಾಗಲು ತುದಿಗಾಲಲ್ಲಿ ನಿಂತಿದೆ. ಹೊಸ ಶಿಕ್ಷಣ ನೀತಿಯ ಹಿಂದಿರುವ ರಹಸ್ಯ ಕಾರ್ಯಸೂಚಿಯನ್ನು ಪ್ರಜಾಪ್ರಭುತ್ವವಾದಿಗಳು, ಸಂವಿಧಾನ ನಿಷ್ಟರು ಮತ್ತು ದೇಶದ ಚರಿತ್ರೆಯ ವಾರಸುದಾರರಾದ ಬಹುಜನರು ಅರಿತು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸಾಮ್ರಾಜ್ಯಶಾಹಿ ಶಕ್ತಿಗಳಿಂದ ವಿಮೋಚನೆಗೊಳಿಸಬೇಕು.

ನಿಮಗೆ ಏನು ಅನ್ನಿಸ್ತು?
1 ವೋಟ್