ನುಡಿ ನಮನ | ಜಿ. ರಾಜಶೇಖರ ಎಂಬ ಕೋಟೆಯ ಕಾವಲುಗಾರ

G Rajashekhara

ಕಚೇರಿ ಬಿಟ್ಟ ಕೂಡಲೇ ಲೋಕಲ್ ಲೈಬ್ರೆರಿಗೆ ಹೋಗಿ ಅಲ್ಲಿರುವ ಎಲ್ಲ ಪೇಪರುಗಳನ್ನೂ ಸಾದ್ಯಂತ ಓದಿ ಅಲ್ಲಿಂದ ರಥಬೀದಿಗೆ, ಅಲ್ಲೊಂದು ಗೆಳೆಯರ ಬಳಗ ಸದಾ ಕಾಯುತ್ತಿತ್ತು. ಅಲ್ಲೊಂದು ಕಾಫಿ ಕುಡಿದು ಆ ದಿನದ ಬೈಠಕ್ ಮುಗಿಸಿ ಮನೆಗೆ ನಡೆಯುತ್ತಾ ಕಚೇರಿಯಿಂದಾಚೆಯ ಲೋಕಕ್ಕೆ  ಸದಾ ತೆರೆದುಕೊಂಡು ಜಿ.ಆರ್ ಬದುಕು ಕಳೆದರು

ಈಗ ಜಿ ಆರ್ ಕನ್ನಡ ನಾಡಿನ ಎದೆಯೊಳಗೆ ಬೆಚ್ಚಗೆ ಕೂತಿದ್ದಾರೆ. ಪ್ರತೀ ತಲೆಮಾರು ಸಂವೇದನಾಶೀಲವಾಗಿದ್ದರೆ ತನ್ನ ಕಾಲವನ್ನು ಸುಖೀ ಕಾಲವೆಂದು ಬಗೆಯುವುದಿಲ್ಲ. ತನ್ನ ಹೊಸಿಲಾಚೆ ಇರುವ ಹತಭಾಗ್ಯರ, ದಮನಕ್ಕೆ ಒಳಗಾದವರನ್ನು  ಕಂಡು ಚಡಪಡಿಸುತ್ತಿರುತ್ತದೆ.

ಒಂದು ನಾಗರಿಕವೆನ್ನುವ ಸಮಾಜ, ಪ್ರಭುತ್ವದ ವ್ಯವಸ್ತೆಯಲ್ಲಿ  ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯದ ಪರಿಪೂರ್ಣತೆಯನ್ನು ಕಾಣ ಬಯಸುತ್ತದೆ. ಇದು ಪ್ರಾಕ್ಟಿಕಲೀ ಅಸಾಧ್ಯ. ಆದರೆ ಆ ಕನಸು, ಅದರತ್ತ ದುಡಿಯುವ ಬದ್ಧತೆ ನಮ್ಮ ಬದುಕನ್ನು ಸಾರ್ಥಕಗೊಳಿಸುತ್ತದೆ. ಹೀಗೆ ತುಡಿಯುವ ದುಡಿಯುವ ಜೀವಗಳ ಚಾರಿತ್ರ್ಯ ತನ್ನಿಂದ ತಾನೇ ಸ್ವಚ್ಛವಾಗಿರುತ್ತದೆ. ಸ್ವಭಾವ ಸಹಜವಾಗಿ ಅದಕ್ಕೆ ಕಿಚ್ಚು ಕಿಸುರು ಕೂಡಾ ಇರುವುದಿಲ್ಲ. ಮನುಷ್ಯ ಪ್ರೀತಿಯ ರೂಪ ಹೊತ್ತು ಓಡಾಡುತ್ತಿರುತ್ತಾರೆ.

ಒಂದು ತಲೆಮಾರನ್ನು ಪ್ರಭಾವಿಸಿದ ಜಿ ಆರ್ ಮುಂದಿನ ತಲೆಮಾರಿಗೆ ಮುಖ್ಯವಾಗಬೇಕು. ಜೀವವಿಮಾ ನಿಗಮದಲ್ಲಿ ಸಾಮಾನ್ಯ ಗುಮಾಸ್ತನಾಗಿ ಕಿಂಚಿತ್ತೂ ಕರಕರೆ ಮಾಡಿಕೊಳ್ಳದೇ ಅನಾಮಧೇಯ ಗುಮಾಸ್ತನಂತೆ ಕಚೇರಿಯಲ್ಲಿ ದುಡಿಯುತ್ತಾ ಇದ್ದವರು ಜಿ. ಆರ್. ದಿನಚರಿಗೆ ಒಂದು ಗಡಿಯಾರದ ನಿಖರತೆ ಇತ್ತು. ಕಚೇರಿ ಬಿಟ್ಟ ಕೂಡಲೇ ಲೋಕಲ್ ಲೈಬ್ರೆರಿಗೆ ಹೋಗಿ ಅಲ್ಲಿರುವ ಎಲ್ಲಾ ಪೇಪರುಗಳನ್ನೂ ಸಾದ್ಯಂತ ಓದಿ ಅಲ್ಲಿಂದ ರಥಬೀದಿಗೆ. ಅಲ್ಲೊಂದು ಗೆಳೆಯರ ಬಳಗ ಸದಾ ಕಾಯುತ್ತಿತ್ತು. ಅಲ್ಲೊಂದು ಕಾಫಿ ಕುಡಿದು ಆ ದಿನದ ಬೈಠಕ್ ಮುಗಿಸಿ ಮನೆಗೆ .. ನಡೆಯುತ್ತಾ..  ಕಚೇರಿಯಿಂದಾಚೆಯ ಲೋಕಕ್ಕೆ  ಸದಾ ತೆರೆದುಕೊಂಡು, ಅದನ್ನು ವ್ಯಾಖ್ಯಾನಿಸುತ್ತಾ, ವರದಿ ಮಾಡುತ್ತಾ, ತಾತ್ವಿಕ ವಿಚಾರಗಳಲ್ಲಿ ಗುದ್ದಾಡುತ್ತಾ, ಜಿ.ಆರ್ ಬದುಕು ಕಳೆದರು.

ಅವರು ವಾದ ಮಂಡಿಸುವಾಗ ಎದುರಿನವರ ವಾದ ಇಷ್ಟಿಷ್ಟೇ ಕಿತ್ತು ಹೋಗುತ್ತಿರುವುದು ಕಾಣಿಸಿದಾಗಲೂ ಜಿ. ಆರ್ ಲೇವಡಿ, ವಾದ ಗೆಲ್ಲುವ ಕರ್ಕಶ ಉಮೇದಿಗೆ ಎಂದೂ ಬಲಿ ಬೀಳಲಿಲ್ಲ. ನಮಗೆಲ್ಲಾ ಬೌದ್ಧಿಕ ಸ್ಪಷ್ಟತೆಯ ದಾರಿ ತೋರಿಸಿಕೊಟ್ಟ ಗುರು ಅವರು. ಹಾಗೆಂದು ಅವರೆಂದೂ ಭಾರವಾಗಲಿಲ್ಲ. ಒಂದು ನಗು. ಸಂದರ್ಭ ಬಂದಾಗ ಒಂದೋ ಎರಡು ವಾಕ್ಯಗಳಲ್ಲಿ ಪರಮ ಪೋಲಿ ಅನಾಲಜಿ/ ಜೋಕು ಮೂಲಕ ಸತ್ಯ ದರ್ಶನ ಮಾಡಿಸುತ್ತಿದ್ದರು.

ಇದ್ದ ಬದ್ದ ರಜಾ ಎಲ್ಲಾ ಒಟ್ಟುಗೂಡಿಸಿ ಕಾಗೋಡು ಸತ್ಯಾಗ್ರಹದ ಅಧ್ಯಯನ ಮಾಡಿದರು. ಪ್ರಾಯಶಃ ಇಂದಿಗೂ ಅದು ಕನ್ನಡದ ಮಾದರಿ ಅಧ್ಯಯನ. ಅದರ ಸಾಧನೆ, ಮಿತಿಯನ್ನು ಗುರುತಿಸುತ್ತಾ ಆ ಕೃತಿಯನ್ನು ಕಟ್ಟಿದ ಬಗೆ   ಕ್ಷೇತ್ರಕಾರ್ಯದ ಸಂಶೋಧಕರು/ ಪತ್ರಕರ್ತರಿಬ್ಬರಿಗೂ ಮಾದರಿ ಟೆಕ್ಸ್ಟ್‌ .

ದೇಶದಲ್ಲಿ, ಅದರ ಪ್ರಭಾವದಲ್ಲಿ ಕರಾವಳಿಯಲ್ಲೂ ಕೋಮು ವಿಷ ಹರಡುವಾಗ ಜಿ.ಆರ್. ಅದನ್ನು ಜೀವನ್ಮರಣದ ಪ್ರಶ್ನೆಯೆಂಬಂತೆ ಎದುರಿಸಿದರು. ಸತತವಾಗಿ ಬರೆದರು. ವರದಿ ಮಾಡಿದರು. ಮಾದ್ಯಮಗಳು ಕೋಮುವಾದಿ ಆಗುತ್ತಿರುವುದನ್ನು ಗುರುತಿಸಿದರು. ಫಣಿ, ಸುರೇಶ್ ಭಟ್, ಶ್ರೀನಿವಾಸ್ ಕಾರ್ಕಳ ಮತ್ತು ಈಗ ಈ ಪ್ರತಿರೋಧವನ್ನು ಮುಂದುವರಿಸುತ್ತಿರುವ ಸೂರಿಂಜೆ ಮುಂತಾದ ಗೆಳೆಯರನ್ನು ಮರೆಯುವಂತಿಲ್ಲ. ಆದರೆ ಜಿ. ಆರ್ ತಮ್ಮ ಕೃಷ ದೇಹವನ್ನೂ, ಪ್ರಾಣವನ್ನೂ ಒತ್ತೆಯಿಟ್ಟ ಉತ್ಕಟತೆಯಲ್ಲಿ ಸೀನಿಯರ್ ಆಗಿ ಇದನ್ನು ನಿರ್ವಹಿಸಿದ್ದು ಉಳಿದವರನ್ನು ಸ್ಫೂರ್ತಿಗೊಳಿಸಿತು.

Image
J Rajashekhara

ನತದೃಷ್ಟ ವ್ಯಾಪಾರಿಯನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ಜಿ. ಆರ್. ಒಂದು ದಿನವೂ ಬಿಡದೇ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ನ್ಯಾಯಾಲಯದಲ್ಲಿ ಕೂತು ಗಮನಿಸಿ ಬರೆದರು. ಆ ದಿನಗಳಲ್ಲಿ ಫೋನಲ್ಲಿ ಮಾತಾಡಿದರೂ ಇಡೀ ವ್ಯವಸ್ಥೆಯ ದುಷ್ಟತನದ ಬಗ್ಗೆ ಮಾತಾಡುತ್ತಾ ವಿಷಣ್ಣವಾಗುತ್ತಿದ್ದರು. ಪದೇ ಪದೇ ಚರಿತ್ರೆಯ ಪ್ರತಿರೋಧದ ಸಂದರ್ಭಗಳನ್ನು ಉದಾಹರಿಸುತ್ತಾ ಆಶಾವಾದಿಯಾಗಿರಲು ಯತ್ನಿಸುತ್ತಿದ್ದರು. ಸ್ಪೈನಿನ ಅಂತರ್ಯುದ್ಧ, ಗ್ರಾಂಶಿ… ಹೀಗೆ ಅವರ ಗುನುಗಾಟ ಇರುತ್ತಿತ್ತು. 

ಒಂದು ಕಾಲದಲ್ಲಿ ಕ್ರಿಯಾಶೀಲವಾಗಿದ್ದ ರಥಬೀದಿ ಗೆಳೆಯರ ತಂಡ. ದಮನದ ಧಾಳಿಗೆ ನುಗ್ಗುರಿಯಾಗಿದ್ದನ್ನೂ ಗಮನಿಸಿದರು. ಈ ಆ ಬಗ್ಗೆ ಅವರಿಗೆ ಕಹಿ ಇರಲಿಲ್ಲ ರಾಜ್ಯಾದ್ಯಂತ ಕೆಕ್ಕರ ಗಣ್ಣಿಗೆ ಸಂವೇದನಾಶೀಲರು ಬೆದರಿ ತೆಪ್ಪಗಾದದ್ದನ್ನೂ ಅಸಹಾಯಕವಾಗಿ ನೋಡಿದರು. ಸಹಿಸುವ ಪ್ರಭುತ್ವ ಇರುವಾಗ ಪ್ರತಿರೋಧ, ಹೋರಾಟಗಳು ರೆಕ್ಕೆಗಟ್ಟುವುದು ಸಾಮಾನ್ಯ. ಇದು ಒಂತರಾ ಮಕ್ಕಳು ಸ್ಟೇಡಿಯಂನಲ್ಲಿ ಆಡಿದ ಹಾಗೆ. ಅಡ್ಡಿ ಹೇಳುವವರಿಲ್ಲದ ಸ್ಪೇಸ್! ಆದರೆ ಪ್ರಭುತ್ವ

ತೋಳೇರಿಸಿದಾಗ ಈ ಹೋರಾಟದ ಸಾಮು ಕೂಡಾ ಮಾಯವಾಗುತ್ತದೆ. ನಿಜವಾದ ಹೋರಾಟ ಆರಂಭವಾಗುವುದು ಆಗಲೇ! ಕಾಲ ಇನ್ನಷ್ಟು ಕರಾಳವಾಗಲಿದೆ. ಪ್ರಭುತ್ವವನ್ನು ಎದುರಿಸುವುದು ಒಂದು ಬಗೆ; ಆದರೆ ಜನ ಸಾಮಾನ್ಯರ ಮೈಂಡ್ ಸ್ಕೇಪು ಕೂಡಾ ಪ್ರಭುತ್ವದ ಅಣತಿಯಂತೆ ಕೆಲಸ ಮಾಡುವ ದುರಂತದ ಬಗ್ಗೆ ಜಿ ಆರ್ ವಿಹ್ವಲವಾಗಿ ಮಾತಾಡುತ್ತಿದ್ದರು.

ಹಿಟ್ಲರನ ಜರ್ಮನಿಯಲ್ಲಿ ಆಗಿದ್ದು ಇದೇ. ನಮ್ಮ ನೆರೆಹೊರೆಯ ಸರಳ ಸಜ್ಜನ ನಗುಮೊಗದ ವ್ಯಕ್ತಿ ಕೂಡಾ, ನಮ್ಮೊಂದಿಗೆ ಎಂದಿನ ಸ್ನೇಹದಲ್ಲಿರುವಾಗಲೂ ಆಂತರ್ಯದಲ್ಲಿ ಬಹುಸಂಖ್ಯಾತ ಯಜಮಾನಿಕೆಯ ವಿಷ ತುಂಬಿಕೊಂಡು ಓಡಾಡುವ ದುರಂತ ಅದು.

ʼಯಾರೊಂದಿಗೆ ಮಾರಾಯ್ರೇ ಗುದ್ದಾಡುವುದು? ಸರ್ಕಾರ, ಪೊಲೀಸ್, ಸಂಘಟನೆ ಬಿಡಿ, ನಮ್ಮ  ನೆಂಟರಿಷ್ಟರೊಂದಿಗೇ ನಾವು ಗುದ್ದಾಡಬೇಕಿದೆʼ ಎಂದು ವಿಷಾದದಲ್ಲಿ ಹೇಳುತ್ತಿದ್ದರು. ನಮ್ಮನ್ನು ಪ್ರಭಾವಿಸಿದ ತೇಜಸ್ವಿ, ಲಂಕೇಶ್ ಬಳಿಕ ಅನಂತಮೂರ್ತಿ, ಕಾರ್ನಾಡ್ ಈ ಕೋಮುಶಕ್ತಿಗಳ ಜೊತೆ ದನಿ ಎತ್ತಿದಾಗ ಈ ನಾಡು ಅವರನ್ನು ನಡೆಸಿಕೊಂಡ ರೀತಿ ನೆನಪಿಸಿಕೊಂಡರೆ ದುಃಖ ಉಮ್ಮಳಿಸುತ್ತದೆ.  

ಅದೇ ವೇಳೆಗೆ ಕಂಬಾರ ಮುಂತಾದವರು ವೈಯ್ಯಾರದಲ್ಲಿ ಪ್ರಭುತ್ವದ ಪರವಾಗಿ ಗಿಂಜುತ್ತಾ ಬೀಸಣಿಗೆ ಬೀಸುತ್ತಾ ದಿನಗಳೆಯುತ್ತಿರುವುದೂ ಗಮನಿಸಬೇಕು. ಜಿ ಆರ್ ಅವರ ದೈಹಿಕ ಅನಾರೋಗ್ಯ ಕೂಡಾ ನಮ್ಮ ಕಾಲದ ರೂಪಕ. ತಾನು ಭಾಗವಹಿಸಲು ಆಗುತ್ತಿಲ್ಲ ಎಂಬ ಅವರ ಚಡಪಡಿಕೆ ಬಗ್ಗೆ ಉಡುಪಿಯ ಗೆಳೆಯರು ಪದೇ ಪದೇ ಹೇಳುತ್ತಿದ್ದರು.

ನಮ್ಮನ್ನು ಬೌದ್ಧಿಕವಾಗಿ ಪ್ರಭಾವಿಸಿದ ಮಂದಿಯ ಪಟ್ಟಿ ಮಾಡಿದರೆ, ದೊಡ್ಡ ಮಂದಿಯ ಬದಲು ಇನ್ಯಾರೋ ಆಳವಾಗಿ ನಮ್ಮೊಳಗೆ ಕೂತಿದ್ದು ಅರಿವಿಗೆ ಬರುತ್ತದೆ. ಯು.ಆರ್. ಎ, ತೇಜಸ್ವಿ ಅಂತ ಮೇಲ್ಪದರದ ಪ್ರಜ್ಞೆ ಹೇಳುವಾಗ, ಆಳದ ಮನಸ್ಸಲ್ಲಿ  ಜಿ ಆರ್ ಕೂತಿದ್ದು ನನಗೇ ಅರಿವಿಗೆ ಬಂದಿತ್ತು. ಅವರ ಬೌದ್ಧಿಕ, ತಾತ್ವಿಕ  ನೋಟವನ್ನು ಎಡಪಂಥ ಆವರಿಸಿತ್ತು; ನಿಜ. ಆದರೆ ಅದನ್ನೊಂದು ಸಾಂಸ್ಕೃತಿಕ ಬರವಣಿಗೆಯಾಗಿ ಮಾಡುವಾಗ ರೇಮಂಡ್ ವಿಲಿಯಮ್ಸ್, ಆರ್ವೆಲ್‌ನ ಬರವಣಿಗೆ ಸದಾ ಅವರೆದುರು ಇರುತ್ತಿತ್ತು.

ಇದನ್ನು ಓದಿದ್ದೀರಾ? ಹಿರಿಯ ಚಿಂತಕ, ಜನಪರ ಹೋರಾಟಗಾರ ಜಿ ರಾಜಶೇಖರ ಇನ್ನಿಲ್ಲ

ಈಗ ಜಿ ಆರ್ ಗೆ ಹೇಳಬೇಕಿದೆ. You have  done your part ಅಂತ. “ಅವರ ಆತ್ಮ” ಎಂಬ ಪದಪುಂಜವನ್ನು ರೂಪಕವಾಗಿ ಗ್ರಹಿಸುವುದಾದರೆ ಅವರು ಬಿಟ್ಟು ಹೋದ ಹೋರಾಟ ನಾವು ಮುಂದುವರಿಸುತ್ತೇವೆ ಎಂದು ಅವರಿಗೆ ನಾವು ಹೇಳಬೇಕಿದೆ.

ಒಂದಷ್ಟು ದಿನಗಳಿಂದ ಸಂವರ್ತ ಸಾಹಿಲ್ ಆಸ್ಪತ್ರೆಯ ಅಪ್‌ಡೇಟ್ ಕೊಡುತ್ತಿದ್ದ. ಆಮೇಲೆ ಗಾಢ ನಿಟ್ಟುಸಿರಿನಲ್ಲಿ ಒಂದಷ್ಟು ಮಾತಾಡಿಕೊಳ್ಳುತ್ತಿದ್ದೆವು. ಇರಲಿ, ಕೆಲವು ದುಗುಡ ಎದೆಯೊಳಗೆ ಮುಳ್ಳಿನಂತೆ ಸದಾ ಇರಬೇಕು. ಕೆಲವು ನಿರ್ಗಮನಗಳು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಇಲ್ಲವಾದರೆ ಅವರ ಬದುಕಿಗೆ ಅರ್ಥವೇ ಇಲ್ಲ. ಜಿ. ಆರ್. ಅಂಥಾ ಒಂದು ಅಪೂರ್ವ ಪ್ರಾಣವಾಯು.

ನಿಮಗೆ ಏನು ಅನ್ನಿಸ್ತು?
5 ವೋಟ್