ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ; ಶೋಷಿತರ ಬದುಕು ಅಸ್ತವ್ಯಸ್ತ

GST

ಜುಲೈ 18ರಂದು ಮತ್ತಷ್ಟು ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿ ಮಾಡಿದೆ. ನಗರ ಮತ್ತು ಗ್ರಾಮೀಣ ಭಾಗದ ಕಾರ್ಮಿಕರು, ಕೃಷಿಕರು ಮತ್ತು ಹೈನುಗಾರಿಕೆ ನಡೆಸುವವರ ಪಾಲಿಗೆ ಆತಂಕ ಎದುರಾಗಿದೆ. ಮೋದಿ ಸರ್ಕಾರದ ಈ ಹೊಸ ತೆರಿಗೆಯಿಂದ ಬಡವರ ಆಹಾರದಲ್ಲಿ ಏರುಪೇರಾಗಿ ರಾಜ್ಯದಲ್ಲಿ ಮತ್ತಷ್ಟು ಅಪೌಷ್ಟಿಕತೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಾಮಾನ್ಯ ಜನರು ಪ್ರತಿನಿತ್ಯ ಬಳಸುವ ಎಲ್ಲ ವಸ್ತುಗಳ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕೋವಿಡ್‌ ನಂತರದ ಬದುಕು ನರಕವಾಗಿದೆ. ಗೃಹೋಪಯೋಗಿ ವಸ್ತುಗಳು, ದಿನಬಳಕೆ ಆಹಾರ ಸಾಮಗ್ರಿಗಳು, ಗ್ಯಾಸ್, ಪೆಟ್ರೋಲಿಯಂ, ಅಡುಗೆ ಎಣ್ಣೆ, ದ್ವಿಚಕ್ರ ವಾಹನ, ಕೃಷಿ ಉಪಕರಣಗಳು ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆಯೂ ಜನರ ನಿರೀಕ್ಷೆ ಮೀರಿ ಹೆಚ್ಚಾಗುತ್ತಿದೆ. ಈ ಬೆಲೆ ಹೆಚ್ಚಳದಲ್ಲಿ ಕೇಂದ್ರ ಸರ್ಕಾರದ ತೆರಿಗೆ ಪಾಲೂ ದೊಡ್ಡದಿದೆ.

2017ರ ನೋಟು ನಿಷೇಧದ ನಂತರ ದೇಶದ ಜತೆಗೆ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ ಮಾಡಿದೆ. ‘ಒಂದು ದೇಶ, ಒಂದು ತೆರಿಗೆ’ ಹೆಸರಿನಲ್ಲಿ ಜಾರಿಯಾದ ಜಿಎಸ್‌ಟಿ ಈಗ ಜನ ಸಾಮಾನ್ಯರ ಜೇಬು ಸುಡುತ್ತಿದೆ.

ಜುಲೈ 18ರಂದು ಮತ್ತಷ್ಟು ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿ ಮಾಡಿದೆ. ನಗರ ಮತ್ತು ಗ್ರಾಮೀಣ ಭಾಗದ ಕಾರ್ಮಿಕರು, ಕೃಷಿಕರು ಮತ್ತು ಹೈನುಗಾರಿಕೆ ನಡೆಸುವವರ ಪಾಲಿಗೆ ಆತಂಕ ಎದುರಾಗುವಂತೆ ಮಾಡಿದೆ. ಇನ್ನು ಅಗತ್ಯ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಹೇರಿರುವ ಈ ಹೊಸ ತೆರಿಗೆಯಿಂದ ರಾಜ್ಯದಲ್ಲಿ ಮತ್ತಷ್ಟು ಅಪೌಷ್ಟಿಕತೆಗೆ ಹೆಚ್ಚಾಗುತ್ತದೆ ಎಂದೂ ಅಂದಾಜಿಸಲಾಗಿದೆ.

ಜುಲೈ 18ರಿಂದ ಜಾರಿಗೆ ಬರುವ ಹಾಗೆ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಾದ ಮಾಂಸ, ಮೀನು, ಮೊಸರು, ಪನ್ನೀರು, ಜೇನುತುಪ್ಪ, ಒಣ ದ್ವಿದಳ ಧಾನ್ಯ, ಒಣ ಫಾಕ್ಸ್ ಸೀಡ್ ಅಥವಾ ಮಖಾನ (ತಾವರೆ ಬೀಜ), ಗೋಧಿ ಹಾಗೂ ಇತರ ಧಾನ್ಯಗಳು, ಗೋಧಿ ಹಿಟ್ಟು, ಬೆಲ್ಲ ಮತ್ತು ಮಂಡಕ್ಕಿ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಈಗ ತೆರಿಗೆಗೆ ಒಳಪಟ್ಟಿರುವ ಈ ವಸ್ತುಗಳು ಜನರ ಪ್ರತಿನಿತ್ಯ ಬಳಸುವ ಅತ್ಯಾವಶ್ಯಕ ವಸ್ತುಗಳಾಗಿವೆ.

ಚೆಕ್ ವಿತರಣೆಗೆ (ಬಿಡಿ ಅಥವಾ ಪುಸ್ತಕ ರೂಪದಲ್ಲಿ) ಬ್ಯಾಂಕುಗಳು ವಿಧಿಸುವ ಶುಲ್ಕದ ಮೇಲೆ  ಶೇ.18ರಷ್ಟು ಜಿಎಸ್ ಟಿ (GST) ವಿಧಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಇದರ ಹೊರೆಯೂ ಗ್ರಾಹಕರ ಮೇಲೆ ಬೀಳಲಿದೆ. 

ಕಡಿಮೆ ವೇತನ ವರ್ಗದ ಮೇಲೆ ಹೊರೆ

ಜನಸಾಮಾನ್ಯರು ಬಳಸುವ ಎಲ್‌ಇಡಿ ಲೈಟ್‌ಗಳು, ಲ್ಯಾಂಪ್, ಫಿಕ್ಸ್ ಚರ್ಸ್ ಗಳ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಕಟ್ಟಿಂಗ್ ಬ್ಲೇಡ್‌ಗಳನ್ನು ಹೊಂದಿರುವ ಚಾಕುಗಳು, ಪೇಪರ್ ಕತ್ತರಿಸುವ ಚಾಕುಗಳು, ಪೆನ್ಸಿಲ್ ಶಾರ್ಪನರ್, ಬ್ಲೇಡ್ಸ್, ಸ್ಪೂನ್ಸ್, ಫೋರ್ಕ್ಸ್, ಲೋಟಗಳು, ಸ್ಕಿಮ್ಮರ್, ಕೇಕ್ ಸರ್ವರ್ ಇತ್ಯಾದಿಗಳ ಮೇಲಿನ ಜಿಎಸ್‌ಟಿ ಕೂಡ ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ನಗರ ಮತ್ತು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು ಮತ್ತು ಸಣ್ಣ ಮೊತ್ತದ ಸಂಬಳ ಪಡೆಯುವ ಮಧ್ಯಮ ವರ್ಗದ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಲಿದೆ. 

Image
GST

ನೀರೆತ್ತುವ ಪಂಪು, ಕೊಳವೆ ಬಾವಿ ಪಂಪ್, ಸಬ್ ಮರ್ಸಿಬಲ್ ಪಂಪ್ಸ್, ಬೈಸೈಕಲ್ ಪಂಪ್ಸ್ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಬೀಜಗಳು, ಧಾನ್ಯಗಳನ್ನು ಸ್ವಚ್ಛಗೊಳಿಸುವ, ಬೇರ್ಪಡಿಸುವ ಅಥವಾ ವರ್ಗೀಕರಿಸುವ ಯಂತ್ರಗಳು, ಧಾನ್ಯಗಳನ್ನು ಹಿಟ್ಟು ಮಾಡಲು ಮಿಲ್ಲುಗಳಲ್ಲಿ ಬಳಸುವ ಯಂತ್ರಗಳ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಈ ವಸ್ತುಗಳ ಮೇಲಿನ ಜಿಎಸ್‌ಟಿ ಪರಿಷ್ಕರಣೆಯಿಂದಾಗಿ ಕಟ್ಟಡ ನಿರ್ಮಾಣ ಮತ್ತು ಕೃಷಿ ಕ್ಷೇತ್ರದ ಮೇಲೆ ನೇರ ದುಷ್ಪರಿಣಾಮ ಬೀರಲಿದೆ. ಸಾಲ ಮಾಡಿ ಮನೆ ಕಟ್ಟಬೇಕೆಂಬ ಬಡವರಿಗೆ ಮತ್ತು ಮಧ್ಯಮವರ್ಗದ ಜನರಿಗೆ ಹೆಚ್ಚವರಿ ಹೊರೆ ಬೀಳಲಿದೆ.

ಹೀಗೆ ಪ್ರತಿನಿತ್ಯ ಬಳಸುವ ವಸ್ತುಗಳ ಮೇಲೆ ತೆರಿಗೆ ವಿಧಿಸಿರುವುದು ಮತ್ತು ಪರಿಷ್ಕರಿಸಿರುವುದು ಜನರ ಮೇಲೆ ಮತ್ತಷ್ಟು ಹೊರೆಯಾಗಲಿದೆ. ಪ್ರತಿ ತಿಂಗಳು ಹೆಚ್ಚವರಿ ಹಣ ಖರ್ಚಾಗುವುದರಿಂದ ಮಧ್ಯಮವರ್ಗದವರ ಉಳಿತಾಯಕ್ಕೆ ಕೊಕ್ಕೆ ಬೀಳಲಿದೆ.

ನೋಟು ನಿಷೇಧದ ನಂತರ ಹಲವರು ಕೆಲಸ ಕಳೆದುಕೊಂಡಿದ್ದರು, ಬಹುತೇಕರು ತಮ್ಮ ಸಣ್ಣ ಉದ್ಯಮಗಳನ್ನು ಮುಚ್ಚಿದ್ದರು. ನೋಟು ನಿಷೇಧದಿಂದ ಆದ ಅವಾಂತರಗಳು ಮರೆಯುವ ಮುನ್ನವೇ ಜಿಎಸ್‌ಟಿ ಜಾರಿಯಾಯ್ತ. ಇದರಿಂದ ತಕ್ಷಣಕ್ಕೆ ಜನರ ಮೇಲೆ ನೇರ ಪರಿಣಾಮ ಬೀರದಿದ್ದರೂ ಕೋವಿಡ್ ಲಾಕ್‌ಡೌನ್‌ನಿಂದ ಬದುಕು ಇನ್ನಷ್ಟು ಹದಗೆಟ್ಟಿದೆ.

ಕೋವಿಡ್ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡ, ತಮ್ಮ ಉದ್ಯಮಗಳ ಬಾಗಿಲು ಮುಚ್ಚಿದವರ ಸಂಖ್ಯೆ ದೊಡ್ಡದಿದೆ. ಕೋವಿಡ್ ನಂತರ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಔಷಧಗಳು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿತ್ತು. ಈಗ ಮೊಸರು, ಗೋಧಿ ಹಿಟ್ಟು, ಧಾನ್ಯಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ಜಾರಿ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಗತ್ಯ ವಸ್ತುಗಳ ಬೆಲೆ ಹೆಚ್ಚಾದರೆ ಅದರ ನೇರ ದುಷ್ಪರಿಣಾಮ ಈ ದೇಶದ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ದಲಿತ ಸಮುದಾಯದ ಮೇಲೆ ಬೀಳದಲಿದೆ. ಬೆಲೆ ಹೆಚ್ಚಾದಂತೆ ಜನರ ಕೊಳ್ಳುವ ಶಕ್ತಿಯೂ ಕಡಿಮೆಯಾಗಲಿದೆ. ಮಂಡಕ್ಕಿ ಮೇಲು ಜಿಎಸ್‌ಟಿ ವಿಧಿಸಿರುವುದು ಬಡವರ ಹೊಟ್ಟೆ ಮೇಲೆ ನೇರವಾಗಿ ಹೊಡೆದಂತಾಗಿದೆ.

ಮಾತು ತಪ್ಪಿದ ಕೇಂದ್ರ ಸರ್ಕಾರ

ದಿನವೊಂದಕ್ಕೆ 300 ರಿಂದ 500 ರೂ ಕೂಲಿ ಪಡೆಯುವ ಮತ್ತು  ತಿಂಗಳಿಗೆ 15 ರಿಂದ 20 ಸಾವಿರ ಸಂಬಳ ಪಡೆದು ಬದುಕುವವರಿಗೆ ಈ ಹಣ ಜೀವನ ನಿರ್ವಹಣೆಗೆ ಮಾತ್ರ ಸಾಕಾಗುತ್ತಿದೆ. ಅದರಲ್ಲೂ ಬೆಂಗಳೂರಿನಂಥ ಮಹಾನಗರಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರು ಎಚ್ಚರಿಕೆಯಿಂದ ಹಣ ಖರ್ಚು ಮಾಡಬೇಕಿದೆ. ಮನೆ ಬಾಡಿಗೆ, ರೇಷನ್ ಮತ್ತು ಮಕ್ಕಳ ಶಾಲೆ ಖರ್ಚು ಹೊರತುಪಡಿಸಿ ಅವರು ಬೇರೆಯದ್ದಕ್ಕೆ ಹಣ ಖರ್ಚು ಮಾಡುವಂತಿಲ್ಲ.

ಕಠಿಣ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಅಗತ್ಯವಿರುವ ಹಣ್ಣು, ತರಕಾರಿ, ಮಾಂಸ, ಮೀನು ಕೊಳ್ಳುವುದು ದೂರದ ಮಾತಾಗಿದೆ. ಇನ್ನು ಹೀಗೆ ಕಡಮೆ ಸಂಬಳ ಪಡೆದುಕೊಳ್ಳುವವರಿಗೆ ಮನರಂಜನೆ ಎಂಬುದು ದೂರದ ಮಾತಾಗಿದೆ.

ಇದನ್ನು ಓದಿದ್ದೀರಾ? ಜಿಎಸ್‌ಟಿ| ಮೊದಲು ವಿರೋಧಿಸಿ, ನಂತರ ಅದನ್ನೇ ಅಸ್ತ್ರ ಮಾಡಿಕೊಂಡ ಮೋದಿ ಸರ್ಕಾರ

ಜನರು ಪ್ರತಿನಿತ್ಯ ಬಳಸುವ ಈ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಈಗ ಮಂಡಕ್ಕಿಯಂಥ ಬಡಜನರ ಆಹಾರದ ಮೇಲೂ ತೆರಿಗೆ ವಿಧಿಸಲಾಗಿದೆ. ತೆರಿಗೆ ವಿಚಾರದಲ್ಲಿ ಸರ್ಕಾರ ಮಾತು ತಪ್ಪಿದೆ. ಬಡಜನರು, ಕೂಲಿ ಕಾರ್ಮಿಕರು ಪ್ರತಿನಿತ್ಯ ಬಳಸುವ ವಸ್ತುಗಳ ಬೆಲೆ ಮತ್ತು ತೆರಿಗೆಯನ್ನು ಹೆಚ್ಚಿಸುತ್ತಾ ಹೋದರೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬುದನ್ನು ಸರ್ಕಾರ ಮನಗಾಣಬೇಕು. ಅವರ ಮಕ್ಕಳ ಅಪೌಷ್ಟಿಕತೆ ಪ್ರಮಾಣವೂ ಹೆಚ್ಚಾಗುವ ಆತಂಕ ಇದ್ದೇ ಇದೆ. ದೇಶದ ಶ್ರಮಜೀವಿಗಳು ಮತ್ತು ರೈತರ ಹಿತವನ್ನು ಭಾಷಣದಲ್ಲಷ್ಟೇ ಕಾಪಾಡುತ್ತಿರುವ ಮೋದಿ ಸರ್ಕಾರ ಜನರ ಮಾತಿಗೆ ಕಿವಿಗೊಡುತ್ತಿಲ್ಲ.

ನಿಮಗೆ ಏನು ಅನ್ನಿಸ್ತು?
1 ವೋಟ್