ಜಿಎಸ್‌ಟಿ| ರಾಜ್ಯ ಸರ್ಕಾರಗಳನ್ನು ಪುರಸಭೆಗಳಾಗಿಸುವ ಜಿಎಸ್‌ಟಿ ಕೌನ್ಸಿಲ್

GST Council

ಇತ್ತೀಚೆಗೆ ಕೇರಳದ ಅರ್ಥ ಸಚಿವರು ವಿವಿಧ ಅಗತ್ಯ ವಸ್ತುಗಳ ತೆರಿಗೆಗಳನ್ನು ಕಡಿಮೆ ಮಾಡುವ ಮತ್ತು ಭೋಗ ವಸ್ತುಗಳ ತೆರಿಗೆಗಳನ್ನು ಹೆಚ್ಚಿಸುವ ಬಗ್ಗೆ ಅಜೆಂಡಾ ಮಾಡಬೇಕೆಂದು ವಾರದ ಮೊದಲೇ ಬರೆದಿದ್ದ ಪತ್ರ, ತಮಿಳುನಾಡಿನ ಸಚಿವರು ಕೌನ್ಸಿಲ್‌ನಲ್ಲಿ ಮತದಾನದ ಪದ್ಧತಿಯನ್ನು ಬದಲಾಯಿಸುವ ಬಗ್ಗೆ ಬರೆದ ಪತ್ರವನ್ನು ಮೂಲೆಗಿಡಲಾಯಿತು.

ಜಿಎಸ್‌ಟಿ ಕೌನ್ಸಿಲ್ ಎಂಬ ʼವಸ್ತುಗಳು ಮತ್ತು ಮಾರಾಟ ತೆರಿಗೆಯ ಮಂಡಳಿʼ ರಚನೆಯಾಗಿ ಐದು ವರ್ಷಗಳಾಗಿವೆ. ಇತ್ತೀಚಿಗೆ ಅದರ 47 ನೆಯ ಸಭೆ ನಡೆಯಿತು. ಈ ಸಭೆಯಲ್ಲಿ ಹೇರಲಾದ ತೆರಿಗೆಗಳ ಬಗ್ಗೆ ಇಂದು ದೇಶದಲ್ಲಿ ಬಹಳ ಚರ್ಚೆ ನಡೆದಿದೆ. ತೆರಿಗೆಗಳನ್ನು ಹಾಕಲಾದ ವಸ್ತುಗಳು, ಸೇವೆಗಳು, ತೆರಿಗೆಯ ಪ್ರಮಾಣದ ಬಗೆಗೆ ಕೆಲವೊಮ್ಮೆ  ಪ್ರಶ್ನೆಗಳು ಏಳುತ್ತಿದ್ದರೂ ಈ ಬಾರಿ ಅದು ಹೆಚ್ಚು ವ್ಯಾಪಕವಾಗಿದೆ. ಅದರ ಪರಿಣಾಮವಾಗಿ ಈ ತೆರಿಗೆಗಳನ್ನು ವಿಧಿಸಿದ ಮಂಡಳಿಯ ರಚನೆ, ತೀರ್ಮಾನ‌ ತೆಗೆದುಕೊಳ್ಳುವ ವಿಧಾನಗಳ ಬಗ್ಗೆಯೂ ಚರ್ಚೆ ಎದ್ದಿದೆ. ಇತ್ತೀಚಿನ ಕೌನ್ಸಿಲ್ ಸಭೆಯಲ್ಲಿ ಜಿ.ಎಸ್.ಟಿ ಏಕರೂಪತೆಯನ್ನು ಅಸ್ತಿತ್ವಕ್ಕೆ ತಂದ ಸಂವಿಧಾನ ತಿದ್ದುಪಡಿಗೆ ತಿದ್ದುಪಡಿ ತರುವುದರ ಬಗ್ಗೆ ಒಂದು ಮಂತ್ರಿಗಳ ಉಪಸಮಿತಿ ರಚಿಸಲಾಗಿದೆ. ಆದ್ದರಿಂದ ಇದು ಜಿಎಸ್‌ಟಿ ಕೌನ್ಸಿಲ್ ಬಗ್ಗೆ ಜನಾಭಿಪ್ರಾಯ ರೂಪಿಸಲು ಹಾಗೂ ಅದನ್ನು ದೇಶದ ಮುಂದಿಡಲು ಸೂಕ್ತ ಸಮಯ.

ಜಿಎಸ್‌ಟಿ ಕೌನ್ಸಿಲ್ ಎಂಬುದು 2016ರಲ್ಲಿ ಸಂವಿಧಾನಕ್ಕೆ ತಂದ 101ನೆಯ ತಿದ್ದುಪಡಿಯ ಫಲ. ಈ ತಿದ್ದುಪಡಿಯ ಪ್ರಕಾರ ರಚನೆಯಾದ ಕೌನ್ಸಿಲ್ ಜಿಎಸ್‌ಟಿ ಯನ್ನು ಜಾರಿಗೆ ತಂದ ಉದ್ದೇಶವನ್ನು ಸಾಧಿಸಲು ಅನುಕೂಲಕರವಾಗಿ ರಚಿತವಾಗಿದೆ. ‌ಜಿಎಸ್‌ಟಿಯನ್ನು ಜಾರಿಗೆ ತರುವ ಘೋಷಿತ ಉದ್ದೇಶಗಳೇನೇ ಇದ್ದರೂ ಅಧಿಕಾರಸ್ಥ ಕಾರ್ಪೊರೇಟ್ ಕೋಮುವಾದಿ ರಾಜಕೀಯ ಪಕ್ಷದ ಮೂಲ ಗುರಿಯೇ ಆಯಾ ರಾಜ್ಯದ ಒಳಗಿನ ಉದ್ದಿಮೆಗಳು, ವಾಣಿಜ್ಯಗಳನ್ನು ಕುಗ್ಗಿಸಿ ದೇಶೀ, ವಿದೇಶಿ ಬೃಹತ್ ಉದ್ದಿಮೆಗಳಿಗೆ‌ ಅವುಗಳನ್ನೊಪ್ಪಿಸುವುದು. ಪ್ರತಿ ರಾಜ್ಯದಲ್ಲೂ ವಿಭಿನ್ನವಾದ ತೆರಿಗೆ ದರಗಳು,ನಿಯಮಗಳು ದೇಶವ್ಯಾಪಿ ಉದ್ದಿಮೆಗಳಿಗೆ ತಲೆನೋವಾಗಿದ್ದವು. ಈ ಉದ್ದಿಮೆಗಳು ಗಳಿಸ ಬಯಸುವ ದುರ್ಲಾಭದ ಪ್ರಮಾಣಕ್ಕೆ ತಕ್ಕಂತೆ ತಮ್ಮ ವಸ್ತು ಮತ್ತು ಸೇವೆಗಳ ಬೆಲೆಯನ್ನು ನಿರ್ಧರಿಸಲು ಬಹಳ ತೊಡಕಾಗಿತ್ತು. ಆದ್ದರಿಂದ ಒಂದು ಕಡೆ ಅಂತರರಾಷ್ಟ್ರೀಯ ಹಣಕಾಸು ನಿಧಿ ( ಐಎಂಎಫ್ ) ದೇಶದ ಕಾರ್ಪೊರೇಟ್‌ಗಳ ಕೂಸುಗಳಾದ ವಾಣಿಜ್ಯ ಸಂಸ್ಥೆಗಳು ಇಂತಹ ಏಕರೂಪ  ತೆರಿಗೆಗಾಗಿ ಜಾಗತೀಕರಣ ಜಾರಿಗೆ ಬಂದಾಗಿನಿಂದ ಒತ್ತಾಯಿಸುತ್ತ ಬಂದಿದ್ದವು.

ಜಿಎಸ್‌ಟಿ ಕೌನ್ಸಿಲ್ ರಚನೆ ಇಂತಹ ಗುರಿ ಸಾಧನೆಗೆ ಸಾಧಕವಾಗಿ ರಚನೆಯಾಗಿದೆ. ಕೌನ್ಸಿಲ್‌ನಲ್ಲಿ ಪ್ರತಿ ರಾಜ್ಯಗಳಿಗೂ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಒಬ್ಬ ಪ್ರತಿನಿಧಿಯಾಗಿ ಆಯಾ ರಾಜ್ಯದ ಅರ್ಥ ಸಚಿವರು ಅಥವಾ ಯಾರಾದರೊಬ್ಬ ಸಚಿವರು ಇರುವರು. ಒಕ್ಕೂಟ ಸರ್ಕಾರದ ಪರವಾಗಿ ಅದರ ಅರ್ಥ ಸಚಿವರು ಕೌನ್ಸಿಲ್‌ನ ಅಧ್ಯಕ್ಷರಾಗಿ ಮತ್ತು ಈ ಸಚಿವ ಖಾತೆಯ ರಾಜ್ಯ ಸಚಿವರು ಉಪಾಧ್ಯಕ್ಷರಾಗಿ ಇರುತ್ತಾರೆ. ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಒಂದು ಓಟು. ಆದರೆ ಒಕ್ಕೂಟ ಸರ್ಕಾರಕ್ಕೆ ಮೂರನೇ ಒಂದು ಭಾಗದಷ್ಟು ಓಟು. ಉಳಿದ ಶೇ. 66 ರಷ್ಟು ಎಲ್ಲ ರಾಜ್ಯಗಳಿಗೆ.

ಸರ್ವ ಸಮ್ಮತಿಯ ಮೇಲೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಹೆಚ್ಚು ಒತ್ತು ನೀಡಲಾಗುವುದೆಂದು ಒಕ್ಕೂಟ ಸರ್ಕಾರದ ಪರವಾಗಿ ಹೇಳಲಾಗುತ್ತದೆ. ಮತದಾನಕ್ಕೆ ಯಾರಾದರೂ ಒತ್ತಾಯಿಸಿದರೆ ಆಗ ಮೇಲಿನಂತೆ ಮತದಾನ. ಅದರಲ್ಲಿ ಯಾವುದೇ ಪ್ರಸ್ತಾಪ ತೀರ್ಮಾನವೆಂದಾಗಬೇಕಾದರೆ ಶೇ.75ಷ್ಟು ಮತದಾನ ಪಡೆಯಬೇಕು. ಈ ಮತದಾನ ಪದ್ಧತಿ ತನ್ನಿಂದ ತಾನೇ ಒಕ್ಕೂಟ ಸರ್ಕಾರದ ಪರವಾಗಿದೆ. ಎಲ್ಲಾ ರಾಜ್ಯಗಳೂ ಒಟ್ಟಾಗಿ ಒಂದು ಪ್ರಸ್ತಾಪ ತಂದರೂ ಅದು ಕೌನ್ಸಿಲ್ ತೀರ್ಮಾನವಾಗಿ ಅಂಗೀಕಾರ ಆಗುವುದಿಲ್ಲ. ಈಗ ಬಹಳಷ್ಟು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇರುವುದರಿಂದ ಅವು ತಮ್ಮದೇ ಪಕ್ಷದ ಒಕ್ಕೂಟ ಸರ್ಕಾರಕ್ಕೆ ತಲೆಬಾಗಿ ಮತ ಚಲಾಯಿಸುವುದು ಸಾಮಾನ್ಯ. ಆಗ ಎಲ್ಲ ಬಿಜೆಪಿಯೇತರ ರಾಜ್ಯಗಳು ವಿರೋಧಿಸಿದರೂ ಕೂಡಾ ಒಕ್ಕೂಟ ಸರ್ಕಾರ ಬಯಸಿದ್ದು ತೀರ್ಮಾನವಾಗಿ ಹೇರಲ್ಪಡುತ್ತದೆ. ಈ ರಾಜ್ಯಗಳು ತಮ್ಮ ಪಕ್ಷದ ನೀತಿ, ಜನರಿಗೆ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದಿಲ್ಲ.

ರಾಜ್ಯಗಳ ಸಲಹೆಗೆ ಕಿಮ್ಮತ್ತಿಲ್ಲ

ಕೇಂದ್ರೀಕರಣದ ಈ ಅಂಶಗಳ ಜೊತೆಗೆ ಜಿಎಸ್‌ಟಿ ಕೌನ್ಸಿಲ್‌ನ ಕಛೇರಿ ಒಕ್ಕೂಟ ಸರ್ಕಾರದ ಹತೋಟಿಯಲ್ಲಿದೆ. ಕೌನ್ಸಿಲ್ ಸಭೆ ಯಾವಾಗ ಕರೆಯಬೇಕು, ಏನು ಅಜೆಂಡಾ, ಅದರ ವಿವಿಧ ಪ್ರಸ್ತಾಪಗಳು ಎಲ್ಲವನ್ನೂ ಒಕ್ಕೂಟ ಸರ್ಕಾರದ ಮೂಗಿನ ನೇರಕ್ಕೆ ನಡೆಯುತ್ತದೆ. ಬೇರೆ ಬೇರೆ ರಾಜ್ಯಗಳು ಚರ್ಚಿಸ ಬಯಸುವ ವಿಚಾರಗಳು ಸಭೆಯಲ್ಲಿ ಪ್ರಸ್ತಾಪ ಕೂಡ ಆಗುವುದಿಲ್ಲ. ಇತ್ತೀಚೆಗೆ ಕೇರಳದ ಅರ್ಥ ಸಚಿವರು ವಿವಿಧ ಅಗತ್ಯ ವಸ್ತುಗಳ ತೆರಿಗೆಗಳನ್ನು ಕಡಿಮೆ ಮಾಡುವ ಮತ್ತು ಭೋಗ ವಸ್ತುಗಳ ತೆರಿಗೆಗಳನ್ನು ಹೆಚ್ಚಿಸುವ ಬಗ್ಗೆ ಅಜೆಂಡಾ ಮಾಡಬೇಕೆಂದು ವಾರಗಳ ಮೊದಲೇ ಬರೆದ ಪತ್ರ ಚರ್ಚೆಗೆತ್ತಿಕೊಳ್ಳಲೇ ಇಲ್ಲ. ಹಾಗೇ ತಮಿಳುನಾಡಿನ ಸಚಿವರು ಕೌನ್ಸಿಲ್‌ನಲ್ಲಿ ಮತದಾನದ ಪದ್ಧತಿಯನ್ನು ಬದಲಾಯಿಸುವ ಬಗ್ಗೆ ಬರೆದ ಪತ್ರವನ್ನು ಮೂಲೆಗಿಡಲಾಯಿತು. ತಮಿಳುನಾಡು ಸಚಿವರು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೂ ಒಂದೇ ಮತದಾನ ಮೌಲ್ಯಕ್ಕೆ ಬದಲಾಗಿ ಆಯಾ ರಾಜ್ಯದ ಜನಸಂಖ್ಯೆ, ವಾಣಿಜ್ಯ ವ್ಯವಹಾರ, ವಸ್ತುಗಳ ಉತ್ಪಾದನೆ ಇತ್ಯಾದಿಗಳನ್ನು ಪರಿಗಣಿಸಿ ಮತದಾನದ ಮೌಲ್ಯವನ್ನು ನಿಗದಿ ಮಾಡಬೇಕು ಎಂದು ಸಲಹೆ ಮಾಡಿದ್ದರು.

ಜಿಎಸ್‌ಟಿ ಕೌನ್ಸಿ‌ಲ್‌ನ ತೀರ್ಮಾನ ತೆಗೆದುಕೊಳ್ಳುವಲ್ಲಿನ ಇಂತಹ ಅಸಮತೋಲನದ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚಿಗೆ ನೀಡಿದ ತೀರ್ಪಿನಲ್ಲಿ ಇದು ಸಂವಿಧಾನ ವಿವಿಧ ರಾಜ್ಯಗಳಿಗೆ ನೀಡಿದ ತೆರಿಗೆ ಹಕ್ಕು ಮೊದಲಾದವುಗಳ ಉಲ್ಲಂಘನೆಯಾಗಿದೆ ಎಂದು ಕಟುವಾದ ಟೀಕೆ ಮಾಡಿದೆ. ಮಾತ್ರವಲ್ಲ ಕೌನ್ಸಿಲ್ ತೀರ್ಮಾನಗಳಿಗೆ ಜಾರಿಗೆ ತರಲೇಬೇಕೆಂಬ ಕಡ್ಡಾಯ ಸ್ವರೂಪ ಇಲ್ಲ. ಕೌನ್ಸಿಲ್ ಕೇವಲ ಶಿಫಾರಸು ಮಾಡುವ ಸಮಿತಿ ಅಷ್ಟೇ. ಅದು ತೆಗೆದುಕೊಳ್ಳುವ ತೀರ್ಮಾನಗಳನ್ನು ಜಾರಿಗೆ ತರುವ ಅಥವಾ ಬಿಡುವ ಸ್ವಾತಂತ್ರ್ಯ ರಾಜ್ಯಗಳಿಗಿದೆ ಎಂದು ಮಹತ್ವದ ತೀರ್ಪಿತ್ತಿದೆ.

ಇದನ್ನು ಓದಿದ್ದೀರಾ? ಸರ್ಕಾರಕ್ಕೆ ಡಬಲ್‌ ದೋಖಾ ಒಳ್ಳೆಯದೇ; ಆದರೆ, ರಾಜ್ಯದ ಪಾಲಿನ ಜಿಎಸ್‌ಟಿ, ಪರಿಹಾರ ಎಲ್ಲವೂ ಹುಸಿ

ಈ ತೀರ್ಪಿನ ನಂತರವೇ ಇತ್ತೀಚಿನ ಕೌನ್ಸಿಲ್ ಸಭೆಯಲ್ಲಿ ಕೌನ್ಸಿಲ್ ರಚನೆ ಬಗೆಗಿನ ಸಂವಿಧಾನ ತಿದ್ದುಪಡಿ ರೂಪಿಸಲು ಸಚಿವರ ಸಮಿತಿ ರಚಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಮಾನವನ್ನು ಅದರ ತಿರುಳನ್ನು ಜಾರಿಗೆ ತರುವ ಬದಲು ಅದನ್ನು ಇಲ್ಲವಾಗಿಸುವ ತಿದ್ದುಪಡಿ ತರುವ ಯೋಚನೆ ಕಾರ್ಪೊರೇಟ್ ಕೋಮುವಾದಿ ಸರ್ಕಾರಕ್ಕಿದೆ. ಈ ಹಿನ್ನೆಲೆಯಲ್ಲಿ ಕೌನ್ಸಿಲ್ ರಚನೆ ಮತ್ತು ಅದರ ನಿಯಮಗಳು, ಕಚೇರಿ ಮೊದಲಾದವುಗಳ ಬಗ್ಗೆ ಜನಾಭಿಪ್ರಾಯ ರೂಪಿಸುವ ತುರ್ತು ಇದೆ.

ನಿಮಗೆ ಏನು ಅನ್ನಿಸ್ತು?
0 ವೋಟ್