ಆತ್ಮಸಾಕ್ಷಿಗಳ ಈ ಪಹರೆದಾರೆಯೀಗ ಜೈಲುಪಾಲು: ಡಿ ಉಮಾಪತಿ

Teesta

ಒಂದು ಕಡೆಗೆ ವಿದೇಶೀ ದೇಣಿಗೆಗಳ ದುರುಪಯೋಗದ ಆಪಾದನೆ ಮುಂದೆ ಮಾಡಿ ಪ್ರಭುತ್ವ ಮತ್ತು ಅದರ ಪಂಜರದ ಗಿಣಿಯಾದ ಸಿಬಿಐ ತೀಸ್ತಾ ಮೇಲೆ ಮುಗಿ ಬಿದ್ದಿವೆ. ಪ್ರಭುತ್ವವನ್ನು ಕಟಕಟೆಯಲ್ಲಿ ನಿಲ್ಲಿಸಿ ಉತ್ತರದಾಯಿ ಆಗಿಸಬಲ್ಲ ನ್ಯಾಯಾಲಯಗಳು ಮತ್ತೊಂದೆಡೆಗೆ. ಈ ಯುದ್ಧದಲ್ಲಿ ಅಂತಿಮ ವಿಜಯ ಯಾರದು?

ಪತ್ರಕರ್ತೆಯ ಕಸುಬು ತೊರೆದು ಹೋರಾಟಗಾರ್ತಿ ಆದವರು ತೀಸ್ತಾ ಸೀತಲ್ವಾಡ್. ಗುಜರಾತಿನ 2002ರ ಕೋಮುಗಲಭೆಗಳಲ್ಲಿ ಸಾವುನೋವಿಗೆ ಈಡಾದವರಿಗೆ ನ್ಯಾಯ ದೊರಕಿಸಿಕೊಡಲು 'ಶಾಂತಿ ಮತ್ತು ನ್ಯಾಯಕ್ಕಾಗಿ ನಾಗರಿಕರು' (ಸಿಟಿಝನ್ಸ್ ಫಾರ್ ಪೀಸ್ ಅಂಡ್ ಜಸ್ಟಿಸ್) ಎಂಬ ಸಂಘಟನೆಯನ್ನು ಕಟ್ಟಿದರು. ನರಮೇಧದ ಕುರಿತು ಸಲ್ಲಿಸಿದ ಅರ್ಜಿಗಳ ಸಹಅರ್ಜಿದಾರ ಸಂಘಟನೆಯಿದು. ವಿಜಯ್ ತೆಂಡುಲ್ಕರ್, ರಾಹುಲ್ ಬೋಸ್, ಅನಿಲ್ ಧಾರ್ಕರ್, ಅಲೀಕ್ ಪದಮಸೀ, ಸೆಡ್ರಿಕ್ ಪ್ರಕಾಶ್ ಮುಂತಾದವರು ಈ ಸಂಘಟನೆಯ ಮುಂಚೂಣಿಯಲ್ಲಿದ್ದರು.

ಗುಜರಾತ್ ನರಮೇಧದ ಅರ್ಜಿದಾರೆ ಝಾಕಿಯಾ ಜಾಫ್ರಿ ಅವರ ಭಾವನೆಗಳನ್ನು 'ಕೀಳು ಉದ್ದೇಶಗಳಿಗಾಗಿ' ಬಳಕೆ ಮಾಡಿಕೊಂಡ ಆರೋಪಕ್ಕೆ ತೀಸ್ತಾ ಅವರನ್ನು ಇತ್ತೀಚಿನ ತೀರ್ಪಿನಲ್ಲಿ ಗುರಿ ಮಾಡಿದೆ ಸುಪ್ರೀಮ್ ಕೋರ್ಟ್. ಅಂದು ಗುಜರಾತಿನ ಮುಖ್ಯಮಂತ್ರಿಯಾದವರು ಇಂದು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಝಾಕಿಯಾ ಜಾಫ್ರಿ ಎಂಬ ವೃದ್ಧ ವಿಧವೆಯ ಗುರಿ ನೇರವಾಗಿ ಅಂದಿನ ಗುಜರಾತಿನ ಮುಖ್ಯಮಂತ್ರಿಯವರೇ. ಜಾಫ್ರಿ ಜೊತೆಗೆ ಕದಲದಂತೆ ನಿಂತು ಆಸರೆಯಾಗಿದ್ದವರು ತೀಸ್ತಾ.

ಒಂದು ಕಾಲದಲ್ಲಿ ಮುಖ್ಯಧಾರೆಯ ಪತ್ರಿಕೋದ್ಯೋಗಿ ಆಗಿದ್ದವರು ತೀಸ್ತಾ. ದಿ ಡೇಲೀ, ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಗಳು ಹಾಗೂ 'ಬ್ಯುಸಿನೆಸ್ ಇಂಡಿಯಾ' ಎಂಬ ಕಾರ್ಪೊರೇಟ್ ಜಗತ್ತಿನ ಇಂಗ್ಲಿಷ್ ನಿಯತಕಾಲಿಕದಲ್ಲಿ ಕೆಲಸ ಮಾಡುತ್ತಿದ್ದರು. ಕೋಮುವಾದವನ್ನು ನಿರ್ಲಕ್ಷಿಸಿದ ಮುಖ್ಯಧಾರೆ ಪತ್ರಿಕೋದ್ಯಮದ ಧೋರಣೆಯಿಂದ ಭ್ರಮನಿರಸನ ಹೊಂದಿ ಹೊರಬಂದರು. ಬಾಬರಿ ಮಸೀದಿ ನೆಲಸಮದ ನಂತರ ದೇಶದ ಮೇಲೆ ಕಾಯಮ್ಮಾಗಿ ಕವಿದ ಕೋಮುವಾದಿ ಕಾವಳದ ಹಿನ್ನೆಲೆಯಲ್ಲಿ 1993ರಿಂದ ಪತಿ ಜಾವೇದ್ ಆನಂದ್ ಜೊತೆಗೂಡಿ 'ಕಮ್ಯೂನಲ್ ಕಾಂಬ್ಯಾಟ್' ಎಂಬ ನಿಯತಕಾಲಿಕವೊಂದನ್ನು ಆರಂಭಿಸಿದರು.

ಗುಜರಾತಿ ನ್ಯಾಯವಾದಿಗಳ ಕುಟಂಬದಲ್ಲಿ ಜನಿಸಿದವರು ತೀಸ್ತಾ. ಅಹಮದಾಬಾದಿನ 'ಸಂಕುಚಿತ' ಪ್ರಾದೇಶಿಕತೆಯಿಂದ ಮುಂಬಯಿಯ ಮಹಾನಗರದ ವೈಶಾಲ್ಯದಲ್ಲಿ ನೆಲೆಸಿದ್ದ ಕುಟುಂಬವದು. ಆಕೆಯ ತಾತ ಎಂ. ಸಿ. ಸೀತಲ್ವಾಡ್ ಭಾರತದ ಮೊದಲ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

2002ರ ಗುಜರಾತ್ ಕೋಮುಗಲಭೆಗಳ ಹಿಂದಿನ ಭಯಾನಕ ಮುಸ್ಲಿಮ್ ದ್ವೇಷವನ್ನು ಬಯಲು ಮಾಡುತ್ತ ಬಂದಿರುವ ತೀಸ್ತಾ ಸ್ವಾಭಾವಿಕವಾಗಿಯೇ ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದಿದ್ದಾರೆ.

ಗುಜರಾತು ನರಮೇಧದ ಹಿಂದಿನ ಪಿತೂರಿಯನ್ನು ಬಯಲಿಗೆಳೆಯಲು ಎಡೆಬಿಡದೆ ಕಾನೂನು ಸಮರ ನಡೆಸಿರುವವರು ಮಾನವ ಹಕ್ಕು ಪ್ರತಿಪಾದಕರಾದ ತೀಸ್ತಾ ಸೀತಲ್ವಾಡ್. ಇವರನ್ನು ಭ್ರಷ್ಟರು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂದು ಸಾರಿ ಹೆಸರಿಗೆ ಕೆಸರು ಬಳಿದು ಜೈಲುಪಾಲು ಮಾಡುವ ಕೇಂದ್ರ ಸರ್ಕಾರದ ಹವಣಿಕೆ ಈ ಹಿಂದೆ ವಿಫಲವಾಗಿತ್ತು.

Image
ಪೊಲೀಸ್‌ ಕಸ್ಟಡಿಯಲ್ಲಿ ತೀಸ್ತಾ
ಪೊಲೀಸ್‌ ಕಸ್ಟಡಿಯಲ್ಲಿ ತೀಸ್ತಾ

ಇದೀಗ ಅಂದಿನ ಗುಜರಾತು ಮುಖ್ಯಮಂತ್ರಿ (ಇಂದಿನ ಪ್ರಧಾನಿ) ನರೇಂದ್ರ ಮೋದಿಯವರ ವಿರುದ್ಧ ಆಧಾರರಹಿತ ಪುರಾವೆಗಳನ್ನು ಹೆಣೆದಿರುವ ಆಪಾದನೆಯ ಮೇರೆಗೆ ತೀಸ್ತಾ ಅವರನ್ನು ಮೊನ್ನೆ ಕಡೆಗೂ ಬಂಧಿಸಲಾಗಿದೆ. ಗುಜರಾತ್ ನರಮೇಧದ ಸಂಬಂಧದಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರ ಕುರಿತು ಹಲವಾರು ಪ್ರಶ್ನೆಗಳನ್ನು ಎತ್ತಿದ್ದ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ಆರ್.ಬಿ. ಶ್ರೀಕುಮಾರ್ ಅವರನ್ನೂ ದಸ್ತಗಿರಿ ಮಾಡಲಾಗಿದೆ.

ಗುಜರಾತ್ ನರಮೇಧದಲ್ಲಿ ಮೋದಿಯವರ ಪಾತ್ರವಿತ್ತು ಎಂಬ ಆಪಾದನೆಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕಳೆದ ವಾರ ಸಾರಿತು ಸುಪ್ರೀಮ್ ಕೋರ್ಟು. ಜೊತೆಗೆ ಮೋದಿ ವಿರುದ್ಧ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದವರ ಮೇಲೆ ಕಾನೂನುಕ್ರಮ ಜರುಗಿಸುವಂತೆಯೂ ತೀರ್ಪಿನಲ್ಲಿ ಹೇಳಿತ್ತು.

ಬಗೆ ಬಗೆಯ ಹತಾರುಗಳ ಪ್ರಯೋಗ

ಈ ದೇಶದ ಪ್ರಧಾನಮಂತ್ರಿ ಮತ್ತು ಗೃಹಮಂತ್ರಿಯವರನ್ನು ಎದುರು ಹಾಕಿಕೊಂಡಿರುವ ತೀಸ್ತಾ ಅವರನ್ನು ಹಣಿಯಲು ಸತತವಾಗಿ ಬಗೆ ಬಗೆಯ ಹತಾರುಗಳ ಪ್ರಯೋಗ ನಡೆಯುತ್ತಲೇ ಬಂದಿದೆ.  ಆದರೆ ಅವರ ಮಾನವ ಹಕ್ಕುಗಳ ಹೋರಾಟವನ್ನು ಗುರುತಿಸಿ ಕೆನಡಾದ ಪ್ರತಿಷ್ಠಿತ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯ ಗೌರವ ಪದವಿ ನೀಡಿ ಸಮ್ಮಾನಿಸಿತ್ತು. ವಿಶ್ವವಿದ್ಯಾಲಯ ಗೌರವಿಸಿರುವ ಹದಿನೇಳು ಮಂದಿಯಲ್ಲಿ ನೊಬೆಲ್ ಬಹುಮಾನ ವಿಜೇತರು, ಮನುಕುಲಕ್ಕೆ ಅಪರಿಮಿತ ಸೇವೆ ಸಲ್ಲಿಸಿದ ಮಹನೀಯರು ಮಹಿಳೆಯರು ಇದ್ದಾರೆ. ಅವರ ಪೈಕಿ ತೀಸ್ತಾ ಕೂಡ ಒಬ್ಬರು.

ಹತ್ತಾರು ವರ್ಷಗಳ ಕಾಲ ನ್ಯಾಯಾಲಯದ ವಿಚಾರಣೆ ವಾಯಿದೆಗಳಲ್ಲಿ ಎಳೆದಾಡಲ್ಪಟ್ಟು, ತಿರುಗಿಬಿದ್ದ ಸಾಕ್ಷ್ಯಗಳು, ಖರೀದಿಯಾದ ಸಾಕ್ಷೀದಾರರ ನಡುವೆ ಕಡೆಗೊಮ್ಮೆ ಪಾತಕಿಗಳು ಎದೆಯುಬ್ಬಿಸಿ ಖುಲಾಸೆಯಾಗುತ್ತಾರೆ. ಪಟ್ಟಭದ್ರ ವ್ಯವಸ್ಥೆ ರೂಪಿಸಿ ತಿದ್ದಿ ತೀಡಿ ಪಳಗಿಸಿರುವ ದುಷ್ಟ ವಿನ್ಯಾಸವಿದು. 2002ರ ಗುಜರಾತ್ ಕೋಮು ನರಮೇಧದಲ್ಲಿ ಈ ವಿನ್ಯಾಸವನ್ನು ಮುರಿದು ದಾಖಲೆ ಪ್ರಮಾಣದ ಹಂತಕರನ್ನು ಜೈಲಿಗೆ ಕಳಿಸಿವೆ ನ್ಯಾಯಾಲಯಗಳು. ಈ ನಡೆಯ ಹಿಂದಿನ ಛಲವಂತ ಹೋರಾಟಗಾರ್ತಿ ತೀಸ್ತಾ ಸೀತಲ್ವಾಡ್.

ಈ ಹಿಂದೆ ಮಾಯಾ ಕೊಡ್ನಾನಿ ಎಂಬ ಗುಜರಾತಿನ ಕ್ಯಾಬಿನೆಟ್ ದರ್ಜೆಯ ಮಂತ್ರಿಯನ್ನು, ಬಾಬು ಭಜರಂಗಿ ಎಂಬ ಕಟ್ಟರ್ ಕೋಮುವಾದಿಯನ್ನು ಜೈಲಿಗೆ ಅಟ್ಟಿದ ನ್ಯಾಯಾಧೀಶೆ ಜ್ಯೋತ್ಸ್ನಾ ಯಾಜ್ಞಿಕ್ ಅವರಿಗೆ ಜೀವ ಬೆದರಿಕೆ ಒಡ್ಡಲಾಗಿತ್ತು. ಗುಜರಾತ್ ನರಮೇಧ ವಿಚಾರಣೆಯಲ್ಲಿ ನ್ಯಾಯಾಲಯಗಳ ತಪರಾಕಿ ತಿಂದ ಆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಬಿಐ ಉನ್ನತ ಪದವಿಗಳು ದೊರೆತಿರುವುದು ಇದೀಗ ಇತಿಹಾಸ. ಗುಜರಾತಿನ ಆಸಾರಾಮ್ ಬಾಪೂ ಎಂಬ ಧರ್ಮಗುರುವಿನ ವಿರುದ್ಧ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿಯಬೇಕಾದ ಸಾಕ್ಷೀದಾರರು ಒಬ್ಬರ ನಂತರ ಮತ್ತೊಬ್ಬರು ನಿಗೂಢವಾಗಿ ಕೊಲೆಯಾದರು.

ಖುದ್ದು ತಾವು ತಿನ್ನುವುದಿಲ್ಲ. ಬೇರೆಯವರು ತಿನ್ನಲು ಬಿಡುವುದೂ ಇಲ್ಲ ಎಂದು ಸಾರಿದ್ದವರು ತಮ್ಮವರು ಎಸಗಿರುವ ಹಲವು ಹಗರಣಗಳಿಗೆ ತಮ್ಮ ರಾಜಕೀಯ ಎದುರಾಳಿಗಳ 'ಹಗರಣ'ಗಳನ್ನು ಗುರಾಣಿಯಾಗಿ ಹಿಡಿದು ತಪ್ಪಿಸಿಕೊಳ್ಳುತ್ತಿದ್ದಾರೆ. ತೀಸ್ತಾ ಎಂಬ ಮಾನವ ಹಕ್ಕು ಹೋರಾಟಗಾರ್ತಿ ಕೂಡ ಇಂತಹುದೇ ಸಂಚಿನ ಬಲಿಪಶು.

ವರ್ಷಗಳ ಹಿಂದೆ ಖ್ಯಾತ ನ್ಯಾಯವಾದಿ ಮಾನವ ಹಕ್ಕು ಪ್ರತಿಪಾದಕಿ ಇಂದಿರಾ ಜೈಸಿಂಗ್ ಆಡಿದ್ದ ಈ ಮಾತುಗಳನ್ನು ಗಮನಿಸಿ-

''ಗುಜರಾತ್ ಕೋಮು ದಂಗೆಗಳ ಕಳಂಕವನ್ನು ನ್ಯಾಯಾಲಯದಲ್ಲಿ ತೊಳೆದುಕೊಂಡು ಶುದ್ಧಹಸ್ತನೆಂಬ ಮೊಹರು ಒತ್ತಿಸಿಕೊಳ್ಳಬೇಕು ಎಂಬುದು ಪ್ರಧಾನಿಯವರ ಪ್ರಬಲ ಬಯಕೆ. ತೀಸ್ತಾ ಅವರ ಹಿಂದೆ ಬಿದ್ದು ಬೇಟೆಯಾಡುತ್ತಿರುವ ಕಾರಣ ಇದೇ ಆಗಿದೆ. 2002ನೆಯ ಗುಜರಾತ್ ನರಮೇಧವನ್ನು ಇತಿಹಾಸದ ತಿಪ್ಪೆಗೆ ಎಸೆಯಿರಿ... ತೀಸ್ತಾ ಅವರನ್ನು ಖಳನಾಯಕಿ ಎಂದು ಹೆಸರಿಸಿ ಹೊಸ ಇತಿಹಾಸ ಬರೆಯಿರಿ ಎಂಬುದು ಪ್ರಧಾನಿಯವರ ಇಷಾರೆ.

ತನ್ನ ವೃದ್ಧ ಪತಿಯನ್ನು ತನ್ನ ಎದುರೇ ಹಿಂಸಿಸಿ ಕತ್ತರಿಸಿ ಬೆಂಕಿ ಹೊತ್ತಿಸಿದ್ದನ್ನು ಕಂಡಿರುವವರು ಝಾಕಿಯಾ ಜಾಫ್ರಿ. ಆಕೆಯ ಹೋರಾಟಕ್ಕೆ ಹೆಗಲು ಕೊಟ್ಟಿರುವವರು ತೀಸ್ತಾ ಸೀತಲ್ವಾಡ್. ಅಂದಿನ ಸರ್ಕಾರದ ಮುಖ್ಯಮಂತ್ರಿ ಆಗಿದ್ದವರನ್ನು 2002ರ ನರಮೇಧಕ್ಕೆ ಜವಾಬ್ದಾರರನ್ನಾಗಿಸಲು ಕಾನೂನಿನ ಎಲ್ಲ ಆಯುಧಗಳ ಹಿಡಿದು ಹೋರಾಡಿದ್ದಾರೆ. ಅಂದಿನ ನರಸಂಹಾರವನ್ನು ತಪ್ಪಿಸಲು ಮುಖ್ಯಮಂತ್ರಿ ಯಾವ ಕ್ರಮವನ್ನೂ ಜರುಗಿಸಲಿಲ್ಲ ಎಂಬುದು ಜಾಫ್ರಿ ಅವರ ದೂರು. ಶ್ರೀಮತಿ ಜಾಫ್ರಿ ಮತ್ತು ತೀಸ್ತಾ ಇಬ್ಬರ ಸೊಲ್ಲನ್ನೂ ಅಡಗಿಸಿ ಸಾಧ್ಯವಾದರೆ ಜೈಲಿಗೆ ಕಳಿಸುವುದು ಆಳುವವರ ಇರಾದೆ. ಭಾರತೀಯ ದಂಡ ಸಂಹಿತೆಯ ವಿಧಿಗಳು ದುರ್ಬಲ. ಅಪರಾಧ ಎಸಗಿದವರನ್ನು ಮಾತ್ರವೇ ಗುರುತಿಸುತ್ತವೆ ಮತ್ತು ಕೊಂದು ಹಾಕಿದ ಕೈಗಳನ್ನಷ್ಟೇ ಶಿಕ್ಷಿಸುತ್ತವೆ. ಹತ್ಯೆಗಳ ಹಿಂದಿನ ಷಡ್ಯಂತ್ರಗಳನ್ನು ಸಾಬೀತು ಮಾಡುವುದು ದುಸ್ಸಾಧ್ಯ. ಆದರೆ, ತೀಸ್ತಾ ಮೇಲಿನ ದಾಳಿಯ ತೀವ್ರತೆಯನ್ನು ನೋಡಿದರೆ ಪ್ರಧಾನಿ ಚಿಂತಾಕ್ರಾಂತರಾಗಿದ್ದಾರೆ ಎನಿಸುತ್ತದೆ.

Image
ಖ್ಯಾತ ನ್ಯಾಯವಾದಿ ಮತ್ತು ಮಾನವಹಕ್ಕುಗಳ ಪ್ರತಿಪಾದಕಿ ಇಂದಿರಾ ಜೈಸಿಂಗ್
ಖ್ಯಾತ ನ್ಯಾಯವಾದಿ ಮತ್ತು ಮಾನವಹಕ್ಕುಗಳ ಪ್ರತಿಪಾದಕಿ ಇಂದಿರಾ ಜೈಸಿಂಗ್

ನರಮೇಧವನ್ನು ನಿಲ್ಲಿಸುವ ಸಂವಿಧಾನಾತ್ಮಕ ಹೊಣೆಯನ್ನು ಮುಖ್ಯಮಂತ್ರಿ ನಿರ್ವಹಿಸಿಲ್ಲ ಎಂಬ ಸಾಕ್ಷ್ಯವನ್ನು ಬೆನ್ನುಮೂಳೆ ನೇರವಿರುವ ನ್ಯಾಯಾಧೀಶರೊಬ್ಬರು ಅಂಗೀಕರಿಸಿಬಿಟ್ಟರೆ ಎಂಬ ಆತಂಕ ಅವರನ್ನು ಕಾಡಿದಂತಿದೆ. ಕಳಂಕಮುಕ್ತ ಎಂಬ ನ್ಯಾಯಾಲಯದ ಮೊಹರಿಗಾಗಿ ಅವರು ಹಾತೊರೆದಿದ್ದಾರೆ. ಆದರೆ ಈ ಕೇಸುಗಳನ್ನು ದೃಢ ಮನೋನಿಶ್ಚಯದೊಂದಿಗೆ ನಡೆಸುತ್ತಿದ್ದಾರೆ ತೀಸ್ತಾ. ನರಮೇಧದ ಐದು ಸಾವಿರ ಮಂದಿ ಸಾಕ್ಷೀದಾರರ ರಕ್ಷಣೆ ತೀಸ್ತಾ ಅವರದೇ. ನರಮೇಧದ ದಿನಗಳಲ್ಲಿ ಮಂತ್ರಿಯಾಗಿದ್ದ ಮಾಯಾ ಕೊಡ್ನಾನಿಯೂ ಸೇರಿದಂತೆ 120 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗುವಂತೆ ನಡೆಸಿದ ಹೋರಾಟ ತೀಸ್ತಾ ಅವರದೇ.

ಗುಜರಾತ್ ಕೋಮು ಗಲಭೆಗಳ ವಿರುದ್ಧ ಹೋರಾಡಿದಷ್ಟೇ ಜಿಗುಟಿನಿಂದ ಸಾಕ್ಷ್ಯ ಪುರಾವೆಗಳನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ 1984ರ ದಿಲ್ಲಿಯ ಸಿಖ್ ನರಮೇಧದ ವಿರುದ್ಧವೂ ಹೋರಾಡಿದ್ದರೆ 1993ರ ಮುಂಬಯಿ ಗಲಭೆಗಳು ನಡೆಯುತ್ತಲೇ ಇರಲಿಲ್ಲ. 1993ರ ಕೋಮುಗಲಭೆಗಳಲ್ಲಿ ಒಬ್ಬನೇ ಒಬ್ಬ ತಲೆಯಾಳು ಕೂಡ ಶಿಕ್ಷೆಯ ಕುಣಿಕೆಗೆ ಸಿಗಲಿಲ್ಲ. ಹಾಗೇನಾದರೂ ಪ್ರಮುಖ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಶಿಕ್ಷೆಯಾಗಿದ್ದಲ್ಲಿ 2002ರ ಗುಜರಾತ್ ನರಮೇಧ ಕೂಡ ನಡೆಯುತ್ತಿರಲಿಲ್ಲ. ತೀಸ್ತಾ ಹೋರಾಟದ ಹಿಂದಿನ ತಿಳಿವಳಿಕೆ ಇದೇ ಆಗಿದೆ. ಒಂದು ಕಡೆಗೆ ವಿದೇಶೀ ದೇಣಿಗೆಗಳ ದುರುಪಯೋಗದ ಆಪಾದನೆ ಮುಂದೆ ಮಾಡಿ ಪ್ರಭುತ್ವ ಮತ್ತು ಅದರ ಪಂಜರದ ಗಿಣಿಯಾದ ಸಿಬಿಐ ತೀಸ್ತಾ ಮೇಲೆ ಮುಗಿ ಬಿದ್ದಿವೆ. ಪ್ರಭುತ್ವವನ್ನು ಕಟಕಟೆಯಲ್ಲಿ ನಿಲ್ಲಿಸಿ ಉತ್ತರದಾಯಿ ಆಗಿಸಬಲ್ಲ ನ್ಯಾಯಾಲಯಗಳು ಮತ್ತೊಂದೆಡೆಗೆ. ಈ ಯುದ್ಧದಲ್ಲಿ ಅಂತಿಮ ವಿಜಯ ಯಾರದು? ನಿಜವಾಗಿಯೂ ವಿಚಾರಣೆ ನಡೆದಿರುವುದು ಈ ದೇಶದ ನ್ಯಾಯಾಲಯಗಳದೇ ವಿನಾ ಕಟಕಟೆಯಲ್ಲಿ ನಿಲ್ಲಿಸಲಾಗಿರುವ ತೀಸ್ತಾ ಅವರದಲ್ಲ".‌

ಇದನ್ನು ಓದಿದ್ದೀರಾ? ತೀಸ್ತಾರ ಕಿರುಚಾಟದಲ್ಲಿ ನೊಂದವರ ಪರ ಸಾಕ್ಷಿಯಿದೆ: ಗುಲಾಬಿ ಬಿಳಿಮಲೆ

ತೀಸ್ತಾ ನಮ್ಮ ಆತ್ಮಸಾಕ್ಷಿಗಳ ಪಹರೆದಾರರು. ಅವರ ಕರೆ ನಮ್ಮ ನಿದ್ರಾಭಂಗ ಮಾಡುತ್ತದೆಯೆಂದು ಅವರನ್ನೇ ಜೈಲಿಗೆ ಕಳಿಸದಿರೋಣ. ಇಂತಹ ಆತ್ಮದ್ರೋಹದ ನಿದ್ರೆಯಲ್ಲಿ ನೆಮ್ಮದಿ ಎಂಬುದು ಕೇವಲ ಭ್ರಮೆ. ಆದರೆ ಈ ಮಾಯಾನಿದ್ದೆಯೇ ನಮ್ಮ ಮರಣ ಎನ್ನುತ್ತಾರೆ ಚಿಂತಕ ಹಿಂದಿಯ ವಿರಳ ಚಿಂತಕ ಡಾ. ಅಪೂರ್ವಾನಂದ್.

ನಿಮಗೆ ಏನು ಅನ್ನಿಸ್ತು?
0 ವೋಟ್