ಹರ್‌ ಘರ್‌ ತಿರಂಗಾ ಅಭಿಯಾನ; ಇದಲ್ಲವೇ ಇತಿಹಾಸದ ಕ್ರೂರ ವ್ಯಂಗ್ಯ!

Tiranga

ʼನಾಗರಿಕ ಅಸಹಕಾರ ಚಳವಳಿʼ ಮತ್ತು ʼಭಾರತ ಬಿಟ್ಟು ತೊಲಗಿ ʼಆಂದೋಲನದಲ್ಲಿ ಸಾವಿರಾರು ಮಂದಿ ಬ್ರಿಟಿಷರ ಲಾಠಿ, ಗುಂಡು ಮತ್ತು ಜೈಲು ಶಿಕ್ಷೆಯನ್ನು ಲೆಕ್ಕಿಸದೇ ತ್ರಿವರ್ಣ ಧ್ವಜವನ್ನು ಹಿಡಿದು ಭಾಗವಹಿಸಿದಾಗ, ಆರ್‌ಎಸ್‌ಎಸ್ ಇವುಗಳಿಂದ ದೂರವೇ ಉಳಿಯಿತು. ಅದಕ್ಕೆ ತ್ರಿವರ್ಣ ಧ್ವಜ ನಮ್ಮ ರಾಷ್ಟ್ರ ಧ್ವಜವಾಗುವುದು ಸುತರಾಂ ಇಷ್ಟವಿರಲಿಲ್ಲ

ಇನ್ನು ಕೆಲವು ದಿನಗಳಲ್ಲಿ ನಮ್ಮ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತದೆ. ಜುಲೈ 22ರಂದು, ಪ್ರಧಾನಿ ಮೋದಿ ʼಹರ್‌ ಘರ್‌ ತಿರಂಗಾʼ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಅವರು ʼಮನ್‌ ಕಿ ಬಾತ್‌ ʼಕಾರ್ಯಕ್ರಮದಲ್ಲಿ ಮಾತನಾಡುತ್ತ ಜನತೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಡಿಪಿಗಳಲ್ಲಿ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಬೇಕೆಂಬ ವಿಷಯದ ಬಗೆಗೆ ಒತ್ತನ್ನು ನೀಡಿದರು.

ನಮ್ಮ ದೇಶದ ಸಾಮಾನ್ಯ ಜನತೆ ಸ್ವಾತಂತ್ರ್ಯ ಮತ್ತು ಗಣತಂತ್ರ ದಿನವನ್ನು ಗೌರವಪೂರ್ವಕವಾಗಿ ಆಚರಿಸುತ್ತಲೇ ಬಂದಿದ್ದಾರೆ.  ಒಂದು ದೇಶದ ಮುನ್ನಡೆಯಲ್ಲಿ ಅಮೃತ ಮಹೋತ್ಸವ ಎಂಬುದು ಪ್ರಮುಖ ಮೈಲಿಗಲ್ಲೇ ಸರಿ. ಈ ಸಂದರ್ಭದಲ್ಲಿ, ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರ, ಹುತಾತ್ಮರಾದವರ ತ್ಯಾಗ ಹಾಗೂ ಸಮರ್ಪಣಾ ಭಾವವನ್ನು ನೆನಪಿಸಿಕೊಳ್ಳಬೇಕು. ಅದರ ಜೊತೆಜೊತೆಗೆ ಸಾಗಿ ಬಂದ ಹಾದಿ ಹಾಗೂ ಮುಂದೆ ಕ್ರಮಿಸಬೇಕಾದ ದೂರದ ಬಗೆಗೆ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕು.  ಇಡೀ ವರ್ಷ ನಮ್ಮ ದೇಶಾದ್ಯಂತ ಈ ಚಾರಿತ್ರಿಕ ಸನ್ನಿವೇಶವನ್ನು ಆಚರಿಸುವ ನಿಟ್ಟಿನಲ್ಲಿ ನಮ್ಮ ರಾಷ್ಟ್ರಧ್ವಜಕ್ಕೆ ಸಹಜವಾಗಿ ವಿಶೇಷ ಸ್ಥಾನ ಇದ್ದೇ ಇರುತ್ತದೆ.

ʼಹರ್‌ ಘರ್‌ ತಿರಂಗಾʼ ಅಭಿಯಾನದ ಕರೆಯ ಹಿಂದೆ ಯಾವ ಪ್ರೇರಕ ಶಕ್ತಿಯಿದೆ ಎಂಬುದು ಗುಟ್ಟಿನ ವಿಷಯವಲ್ಲ.  ಆದರೆ ಈ ಶಕ್ತಿ ಅಂದರೆ ಸಂಘ ಪರಿವಾರ ನಮ್ಮ ತ್ರಿವರ್ಣ ಧ್ವಜದ ಬಗೆಗೆ ಸ್ವಾತಂತ್ರ್ಯದ ಆಸುಪಾಸಿನ ಸಮಯದಲ್ಲಿ ತೆಗೆದುಕೊಂಡ ನಿಲುವಿಗೂ ಪ್ರಸ್ತುತ ಕಾಲಘಟ್ಟದ್ದಕ್ಕೂ ಅಜಗಜಾಂತರವಿದೆ. ʼನಾಗರಿಕ ಅಸಹಕಾರ ಚಳವಳಿʼ ಮತ್ತು ʼಭಾರತ ಬಿಟ್ಟು ತೊಲಗಿ ʼಆಂದೋಲನದಲ್ಲಿ ಸಾವಿರಾರು ಮಂದಿ ಬ್ರಿಟಿಷರ ಲಾಠಿ, ಗುಂಡು ಮತ್ತು ಕಾರಾಗ್ರಹವಾಸದ ಶಿಕ್ಷೆಯನ್ನು ಲೆಕ್ಕಿಸದೇ ತ್ರಿವರ್ಣ ಧ್ವಜವನ್ನು ಹಿಡಿದು ಭಾಗವಹಿಸಿದಾಗ, ಆರ್‌ಎಸ್‌ಎಸ್ ಇವುಗಳಿಂದ ದೂರವೇ ಉಳಿಯಿತು. ಅದಕ್ಕೆ ತ್ರಿವರ್ಣ ಧ್ವಜ ನಮ್ಮ ರಾಷ್ಟ್ರ ಧ್ವಜವಾಗುವುದು ಸುತರಾಂ ಇಷ್ಟವಿರಲಿಲ್ಲ; ತೀವ್ರವಾದ ಭಿನಾಭಿಪ್ರಾಯಗಳಿದ್ದವು. ಅದರ ಗೌರವಕ್ಕೆ ಪಾತ್ರವಾಗಿದ್ದು ಭಗವಧ್ವಜ.

ಆಗಸ್ಟ್‌ 14, 1947ರಂದು ಅಂದರೆ ನಾವು ಗಳಿಸಿದ ಸ್ವಾತಂತ್ರ್ಯದ ಮುನ್ನ ದಿನದಂದು ಆರ್‌ಎಸ್‌ಎಸ್‌ ನ ಅಧಿಕೃತ ಮುಖವಾಣಿ ʼಆರ್ಗನೈಸರ್‌ʼನಲ್ಲಿ ನಮ್ಮ ರಾಷ್ಟ್ರ ಧ್ವಜವನ್ನು ಖಂಡಿಸಲಾಗಿತ್ತು.  “ವಿಧಿಯ ಒದೆಯುವಿಕೆಯಿಂದ ಅಧಿಕಾರಕ್ಕೆ ಬಂದಿರುವ ಜನರು ನಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಇರಿಸಿದ್ದಾರೆ.  ಆದರೆ ಹಿಂದೂಗಳು ಅದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಹಾಗೂ ಅದಕ್ಕೆ ಗೌರವವನ್ನು ನೀಡುವುದಿಲ್ಲ. ಮೂರು ಎನ್ನುವುದೇ ಒಂದು ಕೆಡುಕು. ಮೂರು ಬಣ್ಣಗಳಿರುವ ಧ್ವಜ ಖಂಡಿತವಾಗಲೂ ತುಂಬ ಕೆಟ್ಟ ಮಾನಸಿಕ ಪರಿಣಾಮವನ್ನು ಬೀರಿ ನಮ್ಮ ದೇಶಕ್ಕೆ ಮಾರಕವಾಗುತ್ತದೆ“

ಆರ್‌ಎಸ್‌ಎಸ್‌ ನ ಎರಡನೇ ಸರಸಂಚಾಲಕರಾಗಿದ್ದ, ಗುರೂಜಿ ಎಂದು ಕರೆಯಲ್ಪಡುತ್ತಿದ್ದ ಎಂ ಎಸ್‌ ಗೋಲ್ವಾಲ್ಕರ್‌ ನಮ್ಮ ರಾಷ್ಟ್ರ ಧ್ವಜದ ಬಗೆಗೆ ಪ್ರತಿಕ್ರಿಯಿಸುತ್ತ “ನಮ್ಮ ಸಂಸ್ಕೃತಿಯನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತದೆ ಭಗವಧ್ವಜ.  ಇದು ದೇವರನ್ನು ಮೂರ್ತರೂಪಕ್ಕಿಳಿಸುತ್ತದೆ. ನಮಗೆ ಗಟ್ಟಿಯದ ನಂಬಿಕೆಯಿದೆ- ಇಡೀ ರಾಷ್ಟ್ರ ಈ ಭಗವಧ್ವಜದ ಮುಂದೆ ತಲೆಯನ್ನು ಬಾಗಿಸುತ್ತದೆ (ಪುಸ್ತಕ: ಎಂ ಎಸ್‌ ಗೋಲ್ವಾಲ್ಕರ್‌, ಶ್ರೀ ಗುರೂಜಿ ಸಮಗ್ರ ದರ್ಶನ್‌, ನಾಗಪುರ, ಸಂಪುಟ 1, ಪುಟ 98). “ನಮ್ಮ ನಾಯಕರು ನಮ್ಮ ದೇಶಕ್ಕಾಗಿ ಒಂದು ಹೊಸ ಧ್ವಜವನ್ನು ನಿಶ್ಚಯಿಸಿದರು. ಅವರು ಯಾತಕ್ಕಾಗಿ ಹೀಗೆ ಮಾಡಿದರು?... ಇದು ಬರೀ ತೇಲಿ ಹೋಗುವ ಹಾಗೂ ಅನುಕರಿಸುವ ಪ್ರಕರಣ.. ಈ ಧ್ವಜ ಹೇಗೆ ಅಸ್ತಿತ್ವಕ್ಕೆ ಬಂದಿತು?... ಅದು ನಮ್ಮ ರಾಷ್ಟ್ರೀಯ ಇತಿಹಾಸ ಮತ್ತು ಪರಂಪರೆ ಆಧಾರಿತ ರಾಷ್ಟ್ರೀಯ ದರ್ಶನದಿಂದ ಸ್ಪೂರ್ತಿಗೊಂಡಿದ್ದಲ್ಲ. ನಮಗೆ ನಮ್ಮ ಸ್ವಂತದ ಧ್ವಜವಿರಲಿಲ್ಲವೇ? ಸಾವಿರಾರು ವರ್ಷಗಳಿಂದ ನಮಗೆ ಯಾವ ರಾಷ್ಟ್ರೀಯ ಲಾಂಛನ ಇರಲಿಲ್ಲವೇ? ನಿಸ್ಸಂದೇಹವಾಗಿಯೂ ಇತ್ತು. ಹಾಗಾಗಿ, ನಮ್ಮ ಮನಸ್ಸುಗಳಲ್ಲಿ ಏಕೆ ಈ ತೀವ್ರ ನಿರ್ವಾತ? “(ಗೋಲ್ವಾಲ್ಕರರ ʼ ಬಂಚ್‌ ಆಫ್‌ ಥಾಟ್ಸ್‌ ʼ ಪುಸ್ತಕ, ʼಡ್ರಿಫ್ಟಿಂಗ್‌ ಅಂಡ್‌ ಡ್ರಿಫ್ಟಿಂಗ್‌ ಭಾಗ). ಅಲ್ಲದೆ ಗೋಲ್ವಾಲ್ಕರ್‌ “ಭಗವಧ್ವಜ ನಮ್ಮ ಭಾರತದ ಸಾಂಸ್ಕೃತಿಕ ಇತಿಹಾಸದ ಅದ್ಭುತ ಸಂಕೇತವಾಗಿದೆ. ನಾವು ಈ ಬಾವುಟಕ್ಕೆ ಮಾತ್ರ ವಂದಿಸುತ್ತೇವೆ. ಭವಿಷ್ಯದಲ್ಲಿ ನಮ್ಮ ಇಡೀ ರಾಷ್ಟ್ರ ಈ ಬಾವುಟಕ್ಕೆ ವಂದಿಸುತ್ತದೆ ಎಂಬ ವಿಚಾರದ ಬಗೆಗೆ ನಮಗೆ ಖಚಿತತೆ ಮತ್ತು ನಂಬಿಕೆಯಿದೆ…” ಎಂದು ಹೇಳಿದ್ದರು!

ಸಾವರ್ಕರ್‌ ಕೂಡ ನಮ್ಮ ರಾಷ್ಟ್ರ ಧ್ವಜ ಕುರಿತಂತೆ ಮೇಲಿನ ರೀತಿಯಲ್ಲೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು! ಈ ಹಿನ್ನೆಲೆಯಲ್ಲಿ, ಇದೇ ಸಂಘ ಪರಿವಾರಕ್ಕೆ ಸೇರಿದ ನಮ್ಮ ಮಾನ್ಯ ಪ್ರಧಾನಿ ಮೋದಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಮ್ಮ ದೇಶಾದ್ಯಂತ ಮನೆ-ಮನೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂದು ಕರೆಯನ್ನು ನೀಡಿದ್ದಾರೆ!

ಇದಲ್ಲವೇ ಇತಿಹಾಸದ ಕ್ರೂರ ವ್ಯಂಗ್ಯ!:

ಮಹಾತ್ಮ ಗಾಂಧೀಜಿ ಅವರ ಹೇಯ ಕಗ್ಗೊಲೆಯ ಹಿನ್ನಲೆಯಲ್ಲಿ ಅಂದಿನ ಕೇಂದ್ರ ಸರ್ಕಾರ ಆರ್‌ಎಸ್‌ಎಸ್ ಅನ್ನು ನಿಷೇದಿಸಿತು. ಈ ನಿಷೇದಾಜ್ಞೆಯನ್ನು ಗೃಹ ಸಚಿವಾಲಯ ಹೊರಡಿಸಿತ್ತು. ಆಗ ಗೃಹ ಮಂತ್ರಿಯಾಗಿದ್ದವರು ಸರ್ದಾರ್ ವಲ್ಲಭಭಾಯ್ ಪಟೇಲ್. 1949ರಲ್ಲಿ ಆರ್‌ಎಸ್‌ಎಸ್ ಮೇಲಿನ ನಿಷೇಧವನ್ನು ರದ್ದುಪಡಿಸಲು ಕೆಲವು ನಿಬಂಧನೆಗಳನ್ನು ಸೂಚಿಸಲಾಗಿತ್ತು. ಅವುಗಳಲ್ಲಿ ನಮ್ಮ ರಾಷ್ಟ್ರ ಧ್ವಜವನ್ನು ಆರ್ ಎಸ್  ಎಸ್ ಸ್ವೀಕರಿಸಬೇಕು ಎಂಬುದು ಕೂಡ ಒಂದಾಗಿತ್ತು .  ಡಿಸೆಂಬರ್ 17, 1949ರಂದು ಜೈಪುರದಲ್ಲಿ ಒಂದು ಕಾಂಗ್ರೆಸ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ "ಯಾವುದೇ ಸಂಸ್ಥೆ ನಮ್ಮ ರಾಷ್ಟ್ರ ಧ್ವಜಕ್ಕೆ ಬದಲಾಗಿ ಬೇರೆ ಧ್ವಜವನ್ನು ಚಾಲ್ತಿಗೆ ತರಬೇಕೆಂದು ಪ್ರಯತ್ನಿಸಿದರೇ, ಕಠಿಣ ಕ್ರಮವನ್ನು ಜಾರಿಗೊಳಿಸಬೇಕಾದೀತು" ಎಂದು ಪಟೇಲ್ ಎಚ್ಚರಿಸಿದರು (ಸರ್ದಾರ್ ವಲ್ಲಭಭಾಯ್ ಪಟೇಲ್ ಕೃತಿಗಳ ಸಂಗೃಹ - ಸಂಪುಟ 13, ಸಂಪಾದಕರು - ಪಿ ಎನ್ ಚೋಪ್ರಾ ಮತ್ತು ಪ್ರಭಾ ಚೋಪ್ರಾ).

ಇದನ್ನು ಓದಿದ್ದೀರಾ? ಸಾವರ್ಕರ್‌ ಹಿಂದುತ್ವ ಯೋಜನೆಯ ಸ್ಪಷ್ಟ ವ್ಯಾಖ್ಯಾನವನ್ನು ಎಂದಿಗೂ ನೀಡಿರಲಿಲ್ಲ

ಆರ್ ಎಸ್  ಎಸ್, ನಾಗಪುರದಲ್ಲಿರುವ ತನ್ನ ಕೇಂದ್ರ ಕಚೇರಿಯಲ್ಲಿ ಆಗಸ್ಟ್ 15, 1947 ಮತ್ತು ಜನವರಿ 26,1950ರಂದು ಮಾತ್ರ  ನಮ್ಮ ರಾಷ್ಟ್ರ ಧ್ವಜವನ್ನು ಹಾರಿಸಿತ್ತು. ಐವತ್ತೆರಡು ವರ್ಷಗಳ ತರುವಾಯ ಅದು ಪುನಃ ತ್ರಿವರ್ಣ ಧ್ವಜವನ್ನು ಹಾರಿಸಲು ಮುಂದಾಯಿತು.

ಸಂಘ ಪರಿವಾರದ ನಮ್ಮ ರಾಷ್ಟ್ರ ಧ್ವಜದ ಬಗೆಗಿನ ದ್ವಂದ್ವ ನೀತಿ ಏನೇ ಆಗಿರಲಿ, ಅದರ ರಾಷ್ಟ್ರವಾದದ ವ್ಯಾಖ್ಯಾನ ಯಾವ ರೀತಿಯದ್ದಾಗಿರಲಿ, ಜನತೆಯಂತೂ ನಮ್ಮ ತ್ರಿವರ್ಣ ಧ್ವಜಕ್ಕೆ ಗೌರವವನ್ನು ಸೂಚಿಸುತ್ತಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್