ದ್ವೇಶದ ಹತ್ಯೆಗಳು ಧರ್ಮವನ್ನು ಕೊಲ್ಲುತ್ತವೆ: ರಂಗನಾಥ ಕಂಟನಕುಂಟೆ

Udayapur calprits

ಧರ್ಮದ ಹೆಸರಿನಲ್ಲಿ ಕೊಲ್ಲಲು ಮುಂದಾದರೆ ಅಲ್ಲಿ ಸಾಯುವುದು ವ್ಯಕ್ತಿಗಳಲ್ಲ. ಅಲ್ಲಿ ನಿಜಕ್ಕೂ ಸಾಯುವುದು ಧರ್ಮವೇ ಆಗಿರುತ್ತದೆ. ಅಂದರೆ ಧಾರ್ಮಿಕ ದ್ವೇಶ ಧರ್ಮವನ್ನು ಕೊಲ್ಲುವುದಲ್ಲದೆ ಮತ್ತೇನನ್ನೂ ಅಲ್ಲ. ಜೀವಗಳನ್ನು ದಯೆ, ಕರುಣೆ ಮತ್ತು ಪ್ರೀತಿಗಳಿಂದ ರಕ್ಶಿಸುವ ಕೆಲಸದಲ್ಲಿ ಧರ್ಮ ಹುಟ್ಟುತ್ತದೆ; ಅದು ನಿತ್ಯನೂತನವಾಗುತ್ತದೆ

ಹಿಂದೂತ್ವವಾದಿ ಮತ್ತು ಮತೀಯವಾದಿ ಚಿಂತನೆಯುಳ್ಳ ನೂಪುರ್ ಶರ್ಮ ಎನ್ನುವ ರಾಜಕೀಯ ‘ಫ್ರಿಂಜ್ ಎಲಿಮೆಂಟ್’ ಆದವರೊಬ್ಬರು ಪ್ರವಾದಿ ಮಹಮದ್ ಪೈಗಂಬರ್ ಅವರ ಬಗೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಇತ್ತೀಚೆಗೆ ಭಾರಿ ಗದ್ದಲವೆಬ್ಬಿಸಿತ್ತು. ಇದನ್ನು ವಿರೋಧಿಸಿ ವಿದೇಶಗಳಲ್ಲಿಯೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅದೇ ಹೊತ್ತಿನಲ್ಲಿ ಆಕೆಯನ್ನು ಬೆಂಬಲಿಸಿದ ಘಟನೆಗಳೂ ನಡೆದವು. ಅಂತಹ ಬೆಂಬಲದ ಸುದ್ದಿ-ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದವು. ಹಾಗೆ ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವೊಂದನ್ನು ಹಂಚಿಕೊಂಡ ಕಾರಣಕ್ಕಾಗಿ ರಾಜಸ್ತಾನದ ಉದಯಪುರದಲ್ಲಿ ಕನ್ನಯ್ಯ ಲಾಲ್ ಎಂಬ ಟೈಲರ್ ಒಬ್ಬರನ್ನು ಮತಾಂಧರಿಬ್ಬರು ಕೊರಳು ಕೊಯ್ದು ಬರ್ಬರವಾಗಿ ಕೊಂದಿದ್ದಾರೆ. ಹಾಗೆ ಕೊಂದದ್ದಲ್ಲದೆ ಅದನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದಾರೆ. ಇದು ಕಿಚ್ಚಿನಂತೆ ಎಲ್ಲೆಡೆ ಹಬ್ಬಿದೆ. ದೇಶದಲ್ಲಿ ವ್ಯಾಪಕವಾಗಿ ಬೆಳೆದಿರುವ ಧಾರ್ಮಿಕ ಮೂಲಭೂತವಾದಿ ಮತ್ತು ಕೋಮುವಾದಿ ದ್ವೇಶದ ಕಿಚ್ಚಿಗೆ ಇದು ಮತ್ತಶ್ಟು ಪುಶ್ಟಿ ನೀಡಿದೆ. ಧರ್ಮಗಳ ನಡುವಿನ ದ್ವೇಶ ಮತ್ತಶ್ಟು ಹೆಚ್ಚಲಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ವ್ಯಕ್ತಿಯೊಬ್ಬರನ್ನು ಕೊಂದ ಕೃತ್ಯವನ್ನು ಚಿತ್ರೀಕರಿಸಿ ಹಂಚಿಕೊಂಡವರಲ್ಲಿ ಯಾವುದೇ ಪಾಪಪ್ರಜ್ಞೆ ಕಾಣುತ್ತಿಲ್ಲ. ಬದಲಿಗೆ ಕೊಂದ ‘ಸಂಭ್ರಮ’ವಿದೆ. ವಿಕೃತ ಸಂತಸವಿದೆ. ಇದು ನಿಜಕ್ಕೂ ಭಯಾನಕ ಮತ್ತು ಪೈಶಾಚಿಕ ಕೃತ್ಯವೇ ಸರಿ. ಯಾವ ಧರ್ಮವೂ ಇಂತಹ ಕೃತ್ಯವನ್ನು ಒಪ್ಪುವುದಿಲ್ಲ. ಒಂದು ವೇಳೆ ಒಪ್ಪಿದರೆ ಅದು ಧರ್ಮವಾಗಲು ಸಾಧ್ಯವೇ ಇಲ್ಲ. ಧರ್ಮದ ಹೆಸರಿನಲ್ಲಿ ಕೊಲ್ಲುವುದಕ್ಕೆ ಸೃಶ್ಟಿಸಿಕೊಂಡಿರುವ ಕುತರ್ಕವಲ್ಲದೆ ಅದು ಧಾರ್ಮಿಕ ಮೌಲ್ಯವಾಗಲು ಸಾಧ್ಯವೇ ಇಲ್ಲ.

ಧರ್ಮದ ಹೆಸರಿನಲ್ಲಿ ಕೊಲ್ಲಲು ಮುಂದಾದರೆ ಅಲ್ಲಿ ಸಾಯುವುದು ವ್ಯಕ್ತಿಗಳಲ್ಲ. ಅಲ್ಲಿ ನಿಜಕ್ಕೂ ಸಾಯುವುದು ಧರ್ಮವೇ ಆಗಿರುತ್ತದೆ. ಅಂದರೆ ಧಾರ್ಮಿಕ ದ್ವೇಶ ಧರ್ಮವನ್ನು ಕೊಲ್ಲುವುದಲ್ಲದೆ ಮತ್ತೇನನ್ನೂ ಅಲ್ಲ. ಜೀವಗಳನ್ನು ದಯೆ, ಕರುಣೆ ಮತ್ತು ಪ್ರೀತಿಗಳಿಂದ ರಕ್ಶಿಸುವ ಕೆಲಸದಲ್ಲಿ ಧರ್ಮ ಹುಟ್ಟುತ್ತದೆ; ಅದು ನಿತ್ಯನೂತನವಾಗುತ್ತದೆ. ಆಗ ಮಾತ್ರ ಧರ್ಮ ಮನುಕುಲವನ್ನು ಉದ್ದಾರ ಮಾಡಬಹುದಾದ ಒಂದು ಆಲೋಚನೆಯಾಗಿ ಜೀವನಕ್ರಮವಾಗಿ ಮಹತ್ವವನ್ನು ಪಡೆಯುತ್ತದೆ. ಅದಿಲ್ಲದೆ ಹೋದಾಗ ಧರ್ಮ ನಿಶ್ಕರುಣೆಯ ಒಂದು ಯಕಶ್ಚಿತ್ ಶಾಸ್ತ್ರವಿಧಾನ ಮಾತ್ರ.

Image
ನೂಪುರ್‌ ಶರ್ಮಾ ಮತ್ತು ನವೀನ್‌ ಜಿಂದಾಲ್
ನೂಪುರ್‌ ಶರ್ಮಾ ಮತ್ತು ನವೀನ್‌ ಜಿಂದಾಲ್

ಕನ್ನಯ್ಯ ಲಾಲ್‍ನ ಕೊಲೆಗಾರರಲ್ಲಿ ಧರ್ಮ ನಿಶ್ಕರುಣೆಯ ರೂಪ ಪಡೆದಿದೆ. ಗೌರಿ ಲಂಕೇಶ್ ಮತ್ತು ಕಲ್ಬುರ್ಗಿಯವರ ಕೊಲೆಯ ಸಂದರ್ಭಗಳಲ್ಲಿಯೂ ಧರ್ಮ ಇದೇ ಬಗೆಯ ನಿಶ್ಕರುಣೆಯ ಪಾತ್ರವನ್ನೇ ನಿರ್ವಹಿಸಿದೆ. ಅಲ್ಲದೆ ಧರ್ಮವನ್ನು ಕರ್ಮಠವಾಗಿ ಭಾವಿಸಿದ ಕೊಲೆಗಾರರು ಕೊಂದದ್ದು ಒಬ್ಬ ಅನ್ಯ ವ್ಯಕ್ತಿಯನ್ನು ಮಾತ್ರವಲ್ಲ. ಅವರು ಬೇರೆಯವರನ್ನು ಕೊಲ್ಲುವ ಮೊದಲು ಅವರೊಳಗಿನ ಧರ್ಮವನ್ನು ಕೊಂದುಕೊಂಡಿದ್ದಾರೆ. ಮತ್ತು ಅವರೊಳಗಿನ ಮನುಶ್ಯತ್ವದ ಮೌಲ್ಯಗಳನ್ನು ಕೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧರ್ಮವು ಅವರಲ್ಲಿ ಅರಿವಾಗಿ ಬೆಳೆದಿದ್ದರೆ ಅವರು ಕರುಣೆ ಉದಾರ ಮನೋಭಾವ, ಸಹಿಶ್ಣತೆ ಮತ್ತು ಮುಕ್ತಮಾತುಕತೆಗಳಿಗೆ ತೆರೆದುಕೊಳ್ಳುತ್ತಿದ್ದರು. ಅಂತಹ ಯಾವ ಮೌಲ್ಯಗಳು ಅವರಲ್ಲಿ ಚಿಗುರೊಡೆದೇ ಇಲ್ಲ. ಹಾಗಾಗಿಯೇ ಅವರು ತಮ್ಮ ಎದುರಾಳಿ ಎಂದು ಭಾವಿಸಿದವರನ್ನು ಕೊಂದು ಕ್ರಿಮಿನಲ್ಲುಗಳಾಗಿ ಬೆಳೆದಿದ್ದಾರೆ. ಇಂತಹ ಕ್ರಿಮಿನಲ್ಲುಗಳನ್ನು ಯಾವ ಧರ್ಮವೂ ಬೆಳೆಸಬಾರದು. ಹಾಗೆ ಬೆಳೆಸುವುದು ಧರ್ಮವಾಗಲು ಅರ್ಹತೆಯನ್ನು ಪಡೆಯುವುದಿಲ್ಲ.

ನಿಜವಾದ ಧರ್ಮವು ನಿಂತ ನೀರಲ್ಲ. ಅದು ಸದಾ ಚಲನಶೀಲವಾಗಿದ್ದು ವಿಚಾರ ಪ್ರಧಾನವಾಗಿರಬೇಕು. ಮತ್ತು ಅದು ಅನ್ಯಧರ್ಮಗಳ ವಿಚಾರಗಳಿಗೆ, ಸವಾಲುಗಳಿಗೆ ತೆರೆದುಕೊಳ್ಳಬೇಕು. ಅವುಗಳಿಂದ ಎದುರಾಗುವ ಸೈದ್ಧಾಂತಿಕ ಸವಾಲುಗಳನ್ನು ವೈಚಾರಿಕವಾಗಿ ಮತ್ತು ಸೈದ್ಧಾಂತಿಕವಾಗಿ ಎದುರಿಸಬೇಕು. ಮುಕ್ತಸಂವಾದ ಮತ್ತು ತಾತ್ವಿಕವಾಗಿ ಮಂಥನ ನಡೆಸಬೇಕು. ಯಾವುದೇ ಬಗೆಯ ಕೇಡಿನ ವಿಚಾರವನ್ನು ನ್ಯಾಯದ, ಸತ್ಯ ವಿಚಾರದ, ಸಹಿಶ್ಣತೆ ಮತ್ತು ಪ್ರೇಮದ ತತ್ವವಿಚಾರಗಳ ಮೂಲಕ ಎದುರಿಸಬೇಕು. ಅಲ್ಲದೆ ಹೀನವಾಗಿ ಕೊಲ್ಲುವ ಮೂಲಕ ಭಯೋತ್ಪಾದನೆ ಸೃಶ್ಟಿಸಬಾರದು. ಭಯೋತ್ಪಾದನೆ ಸೃಶ್ಟಿಸುವುದರಿಂದ ಧರ್ಮವನ್ನು ಕಾಪಾಡಲು ಸಾಧ್ಯವಿಲ್ಲ. ಧಾರ್ಮಿಕ ಕೊಲೆಗಳು ಮತ್ತಶ್ಟು ದ್ವೇಶದ ಕಿಚ್ಚನ್ನು ಹೊತ್ತಿಸಬಹುದಲ್ಲದೆ ಒಳ್ಳೆಯ ಧರ್ಮದ ಮಾದರಿಗಳನ್ನು ಸೃಶ್ಟಿಸುವುದಿಲ್ಲ. ಯಾರೋ ಒಂದು ದ್ವೇಶದ ಹೇಳಿಕೆಯನ್ನು ಧರ್ಮದ ಮತ್ತು ತಮ್ಮ ನಂಬಿಕೆಯ ದೇವರ ವಿರುದ್ದ ಕೊಟ್ಟ ಮಾತ್ರಕ್ಕೆ ಅಂತಹ ದೇವರು-ಧರ್ಮವೂ ನಾಶವಾಗುವುದಿಲ್ಲ. ದೇವರು ಧರ್ಮಗಳು ಅಶ್ಟು ದುರ್ಬಲವಲ್ಲ. ದೇವರು-ಧರ್ಮವನ್ನು ಜಂಗಮರೂಪಿಯಾಗಿ ಕಾಣದೆ ಅದನ್ನು ಸ್ಥಾವರವಾಗಿ ಕಾಣುವುದೇ ಇಲ್ಲಿನ ಸಮಸ್ಯೆಯ ಮೂಲ. ದೇವರು-ಧರ್ಮಗಳು ಚರ್ಚೆಗೆ ಒಳಪಡಲೇಬಾರದು ಎಂದು ಭಾವಿಸುವುದು ಧಾರ್ಮಿಕ ಮೂಲಭೂತವಾದ ಅಶ್ಟೇ ಆಗಿರುತ್ತದೆ.‌

ನೆತ್ತರಿನಲ್ಲಿ ನೆಂದ ಯಾವ ದೇಶಗಳೂ ಉದ್ದಾರವಾಗಿಲ್ಲ

ಧರ್ಮವನ್ನು ಕುರುಡು ಶಾಸ್ತ್ರಗ್ರಂಥವೆಂದು ನಂಬಿದರೆ ಅದು ಮತ್ತಶ್ಟು ಜಡವಾಗುತ್ತದೆ. ಅದು ಜಡ್ಡುಗಟ್ಟಿದಾಗಲೇ ಎದುರಾಳಿಗಳನ್ನು ಕೊಲ್ಲುವಂತಹ ವಿಕೃತ ಕೆಲಸಗಳಿಗೆ ಕೈಹಾಕಲಾಗುತ್ತದೆ. ಆಸ್ತಿಕರು ಎಲ್ಲ ಮನುಶ್ಯರಲ್ಲಿಯೂ ದೇವರಿದ್ದಾನೆ ಎಂದು ಭಾವಿಸಿದರೆ ಸಾಕು; ಆಗ ಯಾರನ್ನೂ ಕೊಲ್ಲಲು ಬಯಸುವುದಿಲ್ಲ. ಮೇಲೆ ಹೇಳಿದಂತೆ ದ್ವೇಶದಿಂದ ಇನ್ನಶ್ಟು ಧಾರ್ಮಿಕ ದ್ವೇಶ ಹೆಚ್ಚುತ್ತದೆ. ಇಂತಹ ದ್ವೇಶಗಳಿಂದ ನಮ್ಮಂತಹ ದೇಶದಲ್ಲಿ ಪರಸ್ಪರ ಕಾದಾಟಕ್ಕಿಳಿದರೆ ‘ಧಾರ್ಮಿಕ ಹತ್ಯೆಗಳು’ ಸಾಮಾನ್ಯವಾಗಿಬಿಡುತ್ತದೆ. ನೆಲ ನೆತ್ತರ ಹೊಳೆಯಲ್ಲಿ ನಲುಗಿಹೋಗುತ್ತದೆ. ಎಲ್ಲ ಧರ್ಮಗಳ ಜನರ ಬದುಕು ತತ್ತರಿಸಿ ಹೋಗುತ್ತದೆ. ಹೀಗೆ ನೆತ್ತರಿನಲ್ಲಿ ನೆಂದ ಯಾವ ದೇಶಗಳೂ ಉದ್ದಾರವಾಗಿಲ್ಲ. ನೆತ್ತರು ಹರಿಸಿ ಧರ್ಮವನ್ನು ಉಳಿಸುವ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ಒಳ್ಳೆಯ ದೇಶವನ್ನೂ ಕಟ್ಟಲಾಗುವುದಿಲ್ಲ. ಇದಕ್ಕೆ ಅಫ್ಘಾನಿಸ್ತಾನ ಒಂದು ಉದಾಹರಣೆ. ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು. ಧರ್ಮಗಳು ಉದಾತ್ತವಾಗಿ ಮುಕ್ತಚಿಂತನೆಗಳಿಗೆ ತೆರೆದುಕೊಂಡಾಗ ಮಾತ್ರವೇ ಅವು ಮಾನವೀಯವಾಗಿರುವುದು. ಆಗ ಮಾತ್ರವೇ ಜ್ಞಾನ ಬೆಳೆದಿರುವುದು. ವೈದಿಕ ಪುರೋಹಿತಶಾಹಿಗಳಿಗಿಂತ ಹೆಚ್ಚು ಮಹತ್ವ ಪಡೆದಿರುವ ಶರಣರ ಸಾಹಿತ್ಯವನ್ನು ಗಮನಿಸಿದರೆ ಇದು ಸ್ಪಶ್ಟವಾಗುತ್ತದೆ. ಪಶ್ಚಿಮದ ದೇಶಗಳಲ್ಲಿ ಚರ್ಚುಗಳು ಕೊಂಚ ಉದಾರವಾದ ನಂತರವೇ ವಿಜ್ಞಾನ ತಂತ್ರಜ್ಞಾನಗಳು ಬೆಳೆಯಲು ಸಾಧ್ಯವಾಗಿದ್ದು. ಇದಕ್ಕೆ ಅವಕಾಶ ನೀಡದ ದೇಶಗಳಲ್ಲಿ ಇಂದಿಗೂ ಹೊಸಚಿಂತನೆಗಳು ಬೆಳೆಯಲು ಸಾಧ್ಯವಾಗಿಲ್ಲ. ಮೂಲಭೂತವಾದವನ್ನು ತ್ಯಜಿಸದೆ ಯಾವ ಧರ್ಮಗಳೂ ವಿಕಾಸಗೊಳ್ಳುವುದಿಲ್ಲ.

Image
ಹಿಂದುತ್ವವಾದಿಗಳಿಂದ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್‌ ಮತ್ತು ಚಿಂತಕ ಎಂ.ಎಂ. ಕಲಬುರ್ಗಿ
ಹಿಂದುತ್ವವಾದಿಗಳಿಂದ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್‌ ಮತ್ತು ಚಿಂತಕ ಎಂ.ಎಂ. ಕಲಬುರ್ಗಿ

ಗೌರಿ, ಕಲ್ಬುರ್ಗಿ ಹತ್ಯೆಯಾದಾಗ ಸಂಭ್ರಮಿಸಿದವರಿದ್ದಾರೆ

ಆದರೆ ಇಂತಹ ದುರಂತಗಳನ್ನು ಅರಿಯದೆ ಮುಗ್ಧವಾಗಿಯೋ ಮೌಢ್ಯದಿಂದಲೋ ಧರ್ಮದ ಹೆಸರಿನ ಕೊಲೆಗಳನ್ನು ಗುಪ್ತವಾಗಿ ಮತ್ತು ಮುಕ್ತವಾಗಿ ಸಮರ್ಥಿಸುವ ಜನರು ಇಂದು ಲಕ್ಶಾಂತರ ಸಂಖ್ಯೆಯಲ್ಲಿದ್ದಾರೆ. ಅಖ್ಲಾಖ್ ಕೊಲೆಯನ್ನು ಸಮರ್ಥಿಸುವವರು ಇರುವಂತೆ ಕನ್ನಯ್ಯ ಲಾಲ್‍ನ ಕೊಲೆಯನ್ನು ಸಮರ್ಥಿಸುವವರೂ ಇದ್ದಾರೆ. ಗೌರಿ ಲಂಕೇಶ್ ಮತ್ತು ಕಲ್ಬುರ್ಗಿಯವರ ಹತ್ಯೆಯಾದಾಗ ಸಂಭ್ರಮಿಸಿದವರಿದ್ದಾರೆ. ಅಂತಹ ಬೆಂಬಲಿಗರನ್ನು ಕೋಮುವಾದ ಮತ್ತು ಧಾರ್ಮಿಕ ಮೂಲಭೂತವಾದಗಳ ಕಾರ್ಖಾನೆಗಳಲ್ಲಿ ವ್ಯವಸ್ಥಿತವಾಗಿ ಸೃಶ್ಟಿಸಲಾಗುತ್ತಿದೆ. ಅದೇ ರಾಜಕಾರಣದ ಪ್ರಧಾನ ಉದ್ದೇಶವಾಗಿದೆ. ಆ ಮೂಲಕ ಪಕ್ಶಗಳ ಬೆಂಬಲಿಗರ ಸಂಖ್ಯೆಯನ್ನು ಹೆಚ್ಚಿಸಿ ಶಾಶ್ವತಗೊಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ.  

ಇಲ್ಲಿ ಕೊಲೆಯಾದವರು ಮತ್ತು ಕೊಂದವರು ಇಬ್ಬರೂ ಅಂತಹ ಕಾರ್ಖಾನೆಗಳಲ್ಲಿ ತಯಾರಾದವರೇ ಆಗಿದ್ದಾರೆ. ಅಲ್ಲದೆ ಹೀಗೆ ತಯಾರಾದವರೇ ಅದರ ಬಲಿಪಶುಗಳೂ ಆಗಿದ್ದಾರೆ. ಹೀಗೆ ಬಲಿಯಾಗುವ ಮೂಲಕ ಮನುಕುಲದ ಚರಿತ್ರೆಯನ್ನು ರಕ್ತಸಿಕ್ತಗೊಳಿಸಲಾಗುತ್ತಿದೆ. ವಿಶಾದದ ಸಂಗತಿಯೆಂದರೆ ಇಪ್ಪತ್ತೊಂದನೆಯ ಶತಮಾನದ ಈ ಕಾಲದಲ್ಲಿಯೂ ಮಧ್ಯಕಾಲೀನ ಮತೀಯ ಧಾರ್ಮಿಕ ಚಿಂತನೆಗಳಿಗೆ ಬಲಿಯಾಗುವುದು ದುಖಃದ ಸಂಗತಿ. ಸಮಾಜವನ್ನು ಊಳಿಗಮಾನ್ಯಶಾಹಿಯ ಮೌಲ್ಯಗಳಿಗೆ ಸಜ್ಜುಗೊಳಿಸುತ್ತಿರುವುದು ಚರಿತ್ರೆಯ ಹಿಮ್ಮುಖ ಬೆಳವಣಿಗೆಯ ದ್ಯೋತಕವಾಗಿದೆ. ಬದುಕುವುದು ಆಧುನಿಕ ಜೀವನ. ಧಾರ್ಮಿಕವಾಗಿ ಮಧ್ಯಕಾಲೀನ ಸಮಾಜದ ಮೌಲ್ಯಗಳನ್ನು ಪ್ರತಿಪಾದಿಸುವಂತಹ ಇಬ್ಬಂದಿತನ ಎದ್ದುಕಾಣಿಸುತ್ತದೆ. ಇದು ಎಲ್ಲ ಧರ್ಮಗಳಲ್ಲಿಯೂ ಕಂಡುಬರುತ್ತಿದೆ.

ಕೊಲೆಗಡುಕರಿಗೆ ಕೊಲ್ಲುವುದೇ ಧರ್ಮ

ಇಂತಹ ಇಬ್ಬಂದಿತನದ ಮನಸ್ಥಿತಿಯಲ್ಲಿಯೇ ದೇವರು-ಧರ್ಮ ರಕ್ಶಣೆಯ ಹೆಸರಿನಲ್ಲಿ ಕೊಲೆ ನಡೆಸಿದ್ದಾರೆ. ಈ ಘಟನೆ ಕೊಲೆಗಡುಕರಿಗೆ ಧರ್ಮ ಎನ್ನುವುದಿಲ್ಲ; ಕೊಲ್ಲುವುದು ಮಾತ್ರವೇ ಅವರ ಧರ್ಮ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಧರ್ಮಗಳು ಅಧಃಪತನದ ದಾರಿಯಲ್ಲಿ ಬಹುದೂರ ಸಾಗಿರುವುದನ್ನು ಎತ್ತಿತೋರಿಸಿದೆ.  ಇಸ್ಲಾಂ ಧರ್ಮದ ಒಂದು ವರ್ಗದ ಜನರಲ್ಲಿ ಹುದುಗಿರುವ ಅಜ್ಞಾನ, ಮೌಢ್ಯ, ಪ್ರತಿದ್ವೇಶ ಮತ್ತು ಮತಾಂಧತೆಯನ್ನು ಎತ್ತಿತೋರಿಸಿದೆ. ಅದಕ್ಕಿಂತ ಮುಖ್ಯವಾಗಿ ಅವರು ನಂಬಿರುವ ಧರ್ಮದ ಮಾನ ಮತ್ತು ಅದರ ಘನತೆಯನ್ನು ಕಳೆದಿದ್ದಾರೆ. ನಿಜವಾದ ಧಾರ್ಮಿಕ ನಂಬಿಕೆಯುಳ್ಳವರು ತಲೆತಗ್ಗಿಸುವಂತೆ ಮಾಡಿದ್ದಾರೆ. ಸ್ವತಃ ಪೈಗಂಬರ್ ಅವರು ಕೂಡ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಈ ಕೃತ್ಯದ ಮೂಲಕ ಈಗಾಗಲೇ ದೇಶದಲ್ಲಿ ಹೊತ್ತಿ ಉರಿಯುತ್ತಿರುವ ದ್ವೇಶದ ಜ್ವಾಲೆಗೆ ಮತ್ತಶ್ಟು ಹವಿಸ್ಸನ್ನು ಅರ್ಪಿಸಿದ್ದಾರೆ.

ಪಶುಗಳು ಸತ್ತು ಹೆಣವಾಗುವುದನ್ನೇ ಕಾಯುವ ರಣಹದ್ದುಗಳಂತೆ, ಹಿಂದೂತ್ವವಾದಿ ‘ಧರ್ಮರಾಜಕಾರಣ’ಕ್ಕೆ ಹೆಣಗಳು ಬೀಳುವುದನ್ನೇ ಕಾಯುವವರಿಗೆ ಮತ್ತಶ್ಟು ಬಲತುಂಬಿದಂತೆ ಆಗಿದೆ. ಧರ್ಮದ ಆಧಾರದ ಮೇಲೆ ದೇಶದ ಜನರು ಧ್ರುವೀಕರಣಗೊಂಡಿದ್ದಾರೆ. ಇಂತಹ ಹೊತ್ತಿನಲ್ಲಿ ಹುಲು ಸರವಿ ಹಾವಾಗಿ ಕಾಣುತ್ತದೆ. ದ್ವೇಶದ ಬೆಂಕಿಯಲ್ಲಿ ಇಡೀ ದೇಶ ಹೊತ್ತಿ ಉರಿಯುತ್ತದೆ. ಹೀಗಿರುವಾಗ ಯಾರು ಯಾವುದೇ ಧರ್ಮದವರನ್ನು ಕೊಂದರೂ ಅದರಿಂದ ಎಲ್ಲರೂ ನಶ್ಟ ಅನುಭವಿಸಬೇಕಾಗುತ್ತದೆ. ಅಲ್ಲದೆ ಮತಾಂಧತೆಯನ್ನೇ ಧರ್ಮವೆಂದು ಭ್ರಮಿಸಿಕೊಂಡ ಕ್ರೂರಿಗಳು ನಡೆಸುವ ಹೀನ ಕೃತ್ಯಕ್ಕೆ ಅವರು ಪ್ರತಿನಿಧಿಸುವ ಸಮುದಾಯ ಹೊಣೆಯನ್ನು ಹೊತ್ತು ಅದರಿಂದ ಜೀವ ಹಾನಿ ಅನುಭವಿಸಬೇಕಾಗುತ್ತದೆ. ಸಾಮಾಜಿಕವಾಗಿ ಆರ್ಥಿಕವಾಗಿ ಅಪಮಾನ ಅನುಭವಿಸಬೇಕಾಗುತ್ತದೆ. ಇಂತಹ ಕೊಲೆಗಳು ಇಡೀ ಸಮುದಾಯವನ್ನು ಅಪಾಯಕ್ಕೆ ತಳ್ಳುವಂತಹ ಹೀನ ಕೆಲಸವಾಗಿರುತ್ತವೆ. ಈ ಎಚ್ಚರಿಕೆಯೇ ಇಲ್ಲದೆ ಕೊಲೆಗೆ ಮುಂದಾಗುತ್ತಾರೆಂದರೆ ಅದು ಅಜ್ಞಾನದಿಂದ ಮಾಡಿರುವ ದುಶ್ಟತನ ಮಾತ್ರವಲ್ಲ. ಧರ್ಮವನ್ನು ಹತ್ಯೆಯ ಸಿದ್ಧಾಂತವಾಗಿ ಬದಲಿಸಿರುವುದೂ ಆಗಿದೆ. ಮೂಲಭೂತವಾದದ ಬಸಿರಿನ ಆಳದೊಳಗೆ ದ್ವೇಶ ಕ್ರೌರ್ಯಗಳು ಬೀಜಗಳು ಅಡಗಿರುವುದನ್ನು ಸಾಬೀತುಪಡಿಸುತ್ತವೆ.

ಮತಾಂಧರಿಗೆ ನಿಜವಾದ ಧರ್ಮದ ತಿಳಿವಳಿಕೆಯೇ ಇಲ್ಲ

ಇಲ್ಲಿನ ಮತ್ತೊಂದು ಪ್ರಶ್ನೆಯೆಂದರೆ, ಯಾವುದೇ ನಿಜವಾದ ಧರ್ಮ ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಕೊಲ್ಲುವಂತೆ ಸೂಚಿಸುತ್ತದೆಯೇ? ಹಾಗೆ ಅದು ಕೊಲ್ಲಲು ಮತ್ತು ಹಿಂಸೆ ಮಾಡಲು ಪ್ರಚೋದಿಸಿದರೆ ಅದು ಧರ್ಮವಾಗುತ್ತದೆಯೇ? ನಿಜವಾದ ‘ಧರ್ಮ’ ಹಿಂಸೆಗೆ ಎಂದೂ ಪ್ರಚೋದನೆ ನೀಡುವುದಿಲ್ಲ. ಯಾರನ್ನೂ ಕೊಲ್ಲುವಂತೆ ಉತ್ತೇಜಿಸುವುದಿಲ್ಲ. ಅಂದರೆ ಕೊಂದ ಈ ಇಬ್ಬರು ಮತಾಂಧರಿಗೆ ನಿಜವಾದ ಧರ್ಮದ ತಿಳುವಳಿಕೆಯೇ ಇಲ್ಲ. ಇಲ್ಲವೇ ಅವರಿಗೆ ಧರ್ಮದ ಪಾಠ ಹೇಳಿಕೊಟ್ಟ ಕ್ರಮದಲ್ಲಿಯೇ ಮೂಲಭೂತ ದೋಶವಿದೆ. ‘ಶಾಂತಿ’ ಪಾಠ ಹೇಳಿದ ಪೈಗಂಬರ್ ಅವರನ್ನೇ ತಪ್ಪಾಗಿ ಭಾವಿಸಿಕೊಳ್ಳಲಾಗಿದೆ. ಅಲ್ಲದೆ ದೇವರು-ಧರ್ಮಗಳನ್ನು ಅತ್ಯಂತ ಪವಿತ್ರವಾದುದೆಂದು ಅದನ್ನು ಯಾರೂ ಪ್ರಶ್ನಿಸಬಾರದು ಎಂದು ಭಾವಿಸಿಕೊಳ್ಳುವುದರಲ್ಲಿಯೇ ಸಮಸ್ಯೆಯಿದೆ. ಹೀಗೆ ಪವಿತ್ರೀಕರಿಸುವುದರಲ್ಲಿಯೇ ದ್ವೇಶದ ಬೀಜಗಳು ಹುಟ್ಟುತ್ತವೆ. ಕಣ್ಣಿಗೆ ಎಂದೂ ಕಾಣದ ದೇವರನ್ನು ಕುರುಡಾಗಿ ನಂಬಿ ನಿತ್ಯ ಕಣ್ಣಿಗೆ ಕಾಣುವ ಸಹಮಾನವರನ್ನು ದ್ವೇಶಿಸುವ ಹಿಂಸಿಸುವ ಕೊಲ್ಲುವ ಕೆಲಸಕ್ಕೆ ಕೈಹಾಕಲಾಗುತ್ತಿದೆ. ಇದು ಈಚಿನ ದಿನಗಳ ನಿತ್ಯದ ವಿದ್ಯಮಾನವಾಗಿದೆ. ಅಂದರೆ ಧರ್ಮಗಳು ಜೀವ ಪೊರೆಯುವ ತತ್ವಗಳಾಗದೆ ಕೊಲ್ಲುವ ಸಿದ್ದಾಂತಗಳಾಗಿ ಬದಲಾಗಿರುವುದು ಇಲ್ಲಿ ಎದ್ದು ಕಾಣುತ್ತಿದೆ.  ಅದರಲ್ಲಿಯೂ ಬಹುಸಂಖ್ಯಾತರ ಕೋಮುವಾದದ ಸಿದ್ದಾಂತಗಳು ರಾಜಕೀಯವಾಗಿ ಹೆಚ್ಚು ಬಲಿಶ್ಟವಾಗಿದ್ದು ತನ್ನ ಎದುರಾಳಿಗಳನ್ನು ಕೊಲ್ಲುವುದಕ್ಕೆ ಬಹಳ ಸುಲಭವಾಗಿ ಸಾರ್ವಜನಿಕರಿಂದ ಸಮ್ಮತಿಯನ್ನು ಪಡೆದುಕೊಳ್ಳುತ್ತದೆ. ಹೀಗೆ ಪಡೆದುಕೊಂಡೇ ಅನೇಕ ದ್ವೇಶದ ಹತ್ಯೆಗಳನ್ನು ನಡೆಸುತ್ತ ಬಂದಿದ್ದು ಅದನ್ನು ನ್ಯಾಯಾಲಯಗಳ ಮೂಲಕವೂ ಗೆಲ್ಲುವ ಹಂತಕ್ಕೆ ಬಂದು ಮುಟ್ಟಿದೆ.

Image
bajarangadala

ಧರ್ಮಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಂಡವರು, ಅದನ್ನು ಗುತ್ತಿಗೆ ಹಿಡಿದವರು, ತಾವೇ ನಿಜವಾದ ಧರ್ಮದ ರಕ್ಶಕರು ಮತ್ತು ವಾರಸುದಾರರು ಎಂದು ಭಾವಿಸಿದ ಮತಾಂಧರು; ಧರ್ಮದ-ದೇವರ ಅಮಲಿನಲ್ಲಿ ಸದಾ ನರಳುವ ರೋಗಿಗಳು ಮಾತ್ರ ಕೊಲೆಗಡುಕ ಕೆಲಸ ಮಾಡಲು ಸಾಧ್ಯ. ಅವರು ಮಾತ್ರ ತಾವು ಯಾರನ್ನು ವಿರೋಧಿಗಳೆಂದು ಭ್ರಮಿಸಿಕೊಳ್ಳುತ್ತಾರೆಯೋ ಅಂತಹವರನ್ನು ಕೊಲ್ಲಲು ಕುತಂತ್ರ ರೂಪಿಸುತ್ತಾರೆ ಮತ್ತು ಕೊಲ್ಲುತ್ತಾರೆ. ಧರ್ಮಗಳೆಂಬ ಹುತ್ತಗಳಲ್ಲಿ ಮತಾಂಧ ಶಕ್ತಿಗಳು ಪೆಡಂಭೂತಗಳ ಹಾಗೆ ಬೆಳೆದುಕೊಂಡಿರುವುದರಿಂದಲೇ ಇಂದು ಧರ್ಮಗಳು ದುರ್ನಾತ ಬೀರುತ್ತಿವೆ. ಧರ್ಮಗಳು ಮನುಕುಲಕ್ಕೆ ಮದ್ದಾಗುವ ಬದಲು ನಂಜಾಗಿ ಕೊಲ್ಲತೊಡಗಿವೆ. ಅದರ ಎತ್ತುಗೆಯಾಗಿ ಉದಯಪುರ ಘಟ್ಟನೆ ಎದ್ದು ಕಾಣುತ್ತಿದೆ ಅಶ್ಟೇ. ಈ ಸಾಲಿನಲ್ಲಿ ಕೋಮುವಾದಿಗಳು ನಡೆಸಿರುವ ಅಸಂಖ್ಯ ಕೊಲೆಗಳನ್ನು ಎತ್ತುಗೆಯಾಗಿ ನೀಡಬಹುದು.

ದ್ವೇಶ ಬಿತ್ತಲೆಂದೇ ಸಾಮಾಜಿಕ ಮಾಧ್ಯಮ ಬಳಕೆ

ಲೋಕದಲ್ಲಿರುವ ಯಾವುದೇ ನಿಜವಾದ ಧರ್ಮ ಸಹನೆ, ಸಹಿಶ್ಣತೆ, ಸೌಹಾರ್ದತೆ, ಕರುಣೆ ಮತ್ತು ಪ್ರೀತಿಗಳೊಂದಿಗೆ ಅರಿವಿನ ಬೆಳಕನ್ನು ರೂಪಿಸುತ್ತದೆ. ಅಂತಹ ಅರಿವು ಮಾನವರಲ್ಲಿ ನೆಲೆಗೊಂಡಾಗ ಮಾತ್ರ ‘ಧರ್ಮದ ಪರಿಮಳ’ ಎಲ್ಲೆಡೆ ಪಸರಿಸಲು ಸಾಧ್ಯ. ಅದಿಲ್ಲದೆ ಯಾರೋ ಎಲ್ಲಿಯೋ ಏನೋ ಹೇಳಿಕೆ ಕೊಟ್ಟರು; ಅದನ್ನು ಇನ್ನಾರೋ ಬೆಂಬಲಿಸಿದರು ಎಂದು ಕೆರಳಿ ದಾಂದಲೆ ಮಾಡುವುದು ಧರ್ಮವಲ್ಲ. ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿಗೇಡಿಗಳು ಬೇಕಂತಲೇ ಸುಳ್ಳು ಮತ್ತು ತಿರುಚಿದ ಸುದ್ದಿಗಳನ್ನು ಹರಡಿ ದ್ವೇಶವನ್ನು ಬಿತ್ತುತ್ತಾರೆ. ದ್ವೇಶವನ್ನು ಬಿತ್ತಲೆಂದೇ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ, ಇದರಲ್ಲಿ ಪ್ರಭುತ್ವ ಮತ್ತು ಉದ್ಯಮದಾರರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಬಲಿಶ್ಟರು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಉದ್ದೇಶಪೂರ್ವಕವಾಗಿ ದ್ವೇಶ ಬಿತ್ತುತ್ತಿದ್ದಾರೆ. ಇದರಲ್ಲಿ ಕಿಡಿಗೇಡಿಗಳು ಇಂತಹ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳು ಮನೆಮನೆಗಳನ್ನು ಆಕ್ರಮಿಸಿಕೊಂಡಿವೆ. ಹಾಗಾಗಿ ದ್ವೇಶದ ಸುದ್ದಿಗಳು ಕೆಲವೇ ಚಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತವೆ.

ಇದನ್ನು ಓದಿದ್ದೀರಾ? ಬಹುಸಂಖ್ಯಾತ ಕೋಮುವಾದ ಮತ್ತು ಅಲ್ಪಸಂಖ್ಯಾತ ಕೋಮುವಾದ ಒಂದೇ ಅಲ್ಲ, ಯಾಕೆಂದರೆ...

ಸಮಾಜವು ಕೋಮುವಾದಿ ಮತ್ತು ಮೂಲಭೂತವಾದಿ ಚಿಂತನೆಗಳ ಆಧಾರದ ಮೇಲೆ ಧ್ರುವೀಕರಣಗೊಂಡಿರುವ ಕಾಲದಲ್ಲಿ ಕಿಚ್ಚಿನ ಕಾವು ಬಹಳ ತೀವ್ರವಾಗಿರುತ್ತದೆ. ಅಲ್ಲಿ ಕಿಚ್ಚು ಹಚ್ಚಲು ನೆಪಗಳಿಗಾಗಿ ಕಾಯಲಾಗುತ್ತದೆ. ಅಂತಹ ನೆಪಗಳು ಸಿಕ್ಕಕೂಡಲೇ ಸೀಳುನಾಯಿಗಳು ಬೇಟೆಗಿಳಿಯುವಂತೆ ಬೀದಿಗಿಳಿದು ದಾಂಧಲೆ ಮಾಡಲಾಗುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಕ್ಶುದ್ರ ವಿಚಾರಗಳು ಬೃಹತ್ ಸಮಸ್ಯೆಗಳಂತೆ ಬಿಂಬಿತವಾಗಿ ಜನರ ನಿರುದ್ಯೋಗ, ಬಡತನ, ಹಸಿವು ಅನಾರೋಗ್ಯದಂತಹ ಸಮಸ್ಯೆಗಳು ಚರ್ಚೆಯಾಗದೇ ಹೊರಗೇ ಉಳಿಯುತ್ತಿವೆ.

ವೈದಿಕ ಪುರೋಹಿತಶಾಹಿ ಇಡೀ ದೇಶವನ್ನು ಮತ್ತೆ ಮನುಸ್ಕೃತಿ ಸಿದ್ದಾಂತದ ಮೇಲೆ ಕಟ್ಟಲು ಯತ್ನಿಸುತ್ತಿರುವ ಕುತಂತ್ರಗಳು ಚರ್ಚೆಯಾಗದೇ ಉಳಿಯುತ್ತಿವೆ. ಪ್ರಜಾಪ್ರಭುತ್ವ ದಾಳಿಗೆ ತುತ್ತಾಗಿದ್ದು ಅದರ ಚರ್ಚೆಯೇ ಇಲ್ಲದಂತಾಗಿದೆ. ಹೀಗಿರುವಾಗ ದ್ವೇಶದ ಪ್ರತೀಕಾರದ ದಾಳಿಗಳು ಕೊಲೆಗಳು ಅಂತಿಮವಾಗಿ ದೇಶದ ಜನರ ಬದುಕನ್ನು ಬರ್ಬಾದು ಮಾಡುತ್ತವೆ. ತಿನ್ನುವ ಆಹಾರಕ್ಕೆ ಕುಡಿಯುವ ನೀರಿಗೆ ಪರದಾಡಬೇಕಾಗುತ್ತದೆ. ಹಾಗಾಗಿ ಯಾವುದೇ ಧರ್ಮದವರು ದಾಳಿ ಮತ್ತು ಪ್ರತಿಕಾರದ ದಾಳಿಗಳನ್ನು ನಡೆಸಬಾರದು. ಈ ಹಿನ್ನೆಲೆಯಲ್ಲಿ ನೋಡಿದರೆ ಕನ್ನಯ್ಯ ಲಾಲ್ ಅನ್ನು ಕೊಂದ ಮೂಲಭೂತವಾದಿಗಳು ಕ್ಶಮೆಗೆ ಅರ್ಹರಲ್ಲ.

ನಿಮಗೆ ಏನು ಅನ್ನಿಸ್ತು?
1 ವೋಟ್