ಹಾವನೂರು ವರದಿ ಹಿಂದುಳಿದ ವರ್ಗಗಳ ಚರಿತ್ರೆಗೆ ಹೊಸ ಹಾದಿಯನ್ನೇ ನಿರ್ಮಿಸಿತು

Havanuru

ಅಂಬೇಡ್ಕರ್‌ ಹೆಸರು ಭಾರತದಲ್ಲಿ ಹೇಗೆ ಚಿರಾಯು ಆಗಿದೆಯೋ, ಅದೇ ರೀತಿ ಹಾವನೂರು ಅವರ ವರದಿ ಕರ್ನಾಟಕದಲ್ಲಿ ಚಿರಾಯು. ಈ ವರದಿ ಹಿಂದುಳಿದ ವರ್ಗಗಳ ಚರಿತ್ರೆಯಲ್ಲೇ ಒಂದು ಹೊಸ ಹಾದಿಯನ್ನೇ ನಿರ್ಮಿಸಿತು. ಅಂತಹ ಮಾಹಿತಿ ಸಂಗ್ರಹಣೆ ಹಿಂದೆ ಎಂದೂ ಆಗಿರಲಿಲ್ಲ. ಯಾವ ವರದಿಯೂ ಅಷ್ಟೊಂದು ಮಾಹಿತಿಗಳನ್ನು ಸಂಗ್ರಹಿಸಿಲ್ಲ

ಹಾವನೂರು ಬಗ್ಗೆ ಮಾತನಾಡಬೇಕೆಂದರೆ ಹೆಮ್ಮೆಯಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ʼಹಿಂದುಳಿದ ವರ್ಗʼ ಅಂತ ಹುಟ್ಟಿದ್ದೇ ಅವರ ವರದಿಯಿಂದ. ಅವರು ಮೊದಲನೇ ಆಯೋಗದ ಅದ್ಯಕ್ಷರಾಗಿ ನಡೆಸಿದ ಸಮೀಕ್ಷೆ, ಸಂಗ್ರಹಿಸಿದ ಮಾಹಿತಿ, ಮತ್ತು ವಿಶ್ಲೇಷಣೆ ಅದ್ಭುತವಾದದ್ದು. ಅದನ್ನು ದೇಶದ ಉದ್ದಗಲಕ್ಕೂ ಉಲ್ಲೇಖಿಸಿದ್ದಾರೆ. ಸುಪ್ರೀಂ ಕೋರ್ಟ್‌ ಕೂಡ ಅವರ ಬಗ್ಗೆ ಉನ್ನತವಾದ ಅಥವಾ ಅಭಿಮಾನದ ಮಾತುಗಳನ್ನಾಡಿದೆ. ಬಹುಶಃ ಸ್ವಾತಂತ್ರ್ಯ ಬಂದ ನಂತರ ಹಿಂದುಳಿದವರ ಬಗ್ಗೆ ಸಿದ್ಧವಾದ ಒಂದು ಅಧಿಕೃತ, ವೈಜ್ಞಾನಿಕ ವಿಶ್ಲೇಷಣಾತ್ಮಕವಾದ ಒಂದು ವರದಿ. ಅವರ ಶಿಫಾರಸ್ಸುಗಳು ಇವತ್ತಿಗೂ ಜಾರಿಯಲ್ಲಿವೆ. ಬಹುಶಃ ಅದರ ಶ್ರೇಯ(ಕ್ರೆಡಿಟ್‌) ಅವರಿಗೇ ಸಲ್ಲುತ್ತದೆ. ಅವರಿಗೆ ಎಷ್ಟು ಸಲ್ಲುತ್ತದೋ ಅಷ್ಟೇ ದೇವರಾಜ ಅರಸು ಅವರಿಗೂ ಸಲ್ಲಬೇಕು. ಬಹುಶಃ ದೇವರಾಜ ಅರಸು ಈ ವರದಿಗಳನ್ನು ಜಾರಿಗೆ ತರಲಿಲ್ಲ ಎಂದಿದ್ದರೆ, ಹಿಂದುಳಿದವರ ಸ್ಥಿತಿ ಇವಾಗ ಹೇಗಿದೆಯೋ ಅದಕ್ಕೆ ತದ್ವಿರುದ್ಧವಾಗಿ ಇರುತ್ತಿತ್ತು. ಜನ 50 ವರ್ಷ ಆದರೂ ಹಾವನೂರರ ವರದಿಯನ್ನು ಜ್ಞಾಪಿಸಿಕೊಳ್ಳುತ್ತಾರೆ.

ಅನೇಕ ವರದಿಗಳು ಬಂದಿದ್ದಾವೆ. ಆದರೆ ಹಾವನೂರು ವರದಿಯನ್ನ ಕೇವಲ ಹಿಂದುಳಿದ ವರ್ಗಗಳು ಮಾತ್ರವಲ್ಲದೇ  ಇಡೀ ಕರ್ನಾಟಕದ ಜನತೆ ಜ್ಞಾಪಿಸಿಕೊಳ್ಳುತ್ತದೆ. ನನಗೆ ಗೊತ್ತಿರೋ ಹಾಗೆ ನಾನು ಅನೇಕ ವರದಿಗಳನ್ನು ಓದಿದ್ದೀನಿ, ಅಭ್ಯಾಸ ಮಾಡಿದ್ದೀನಿ. ಆದರೆ ಅಂತಹ ವರದಿ ಇನ್ನೊಂದಿಲ್ಲ. ಉದಾಹರಣೆಗೆ ಅವರ ವರದಿಯ ನಂತರ ವೆಂಕಟ್‌ ಸ್ವಾಮಿಯ ವರದಿ ಬಂತು, ಚನ್ನಪ್ಪರೆಡ್ಡಿ ವರದಿ ಬಂತು, ಅದ್ಯಾವುದೂ ಕೂಡ ಹಾವನೂರು ವರದಿಯಷ್ಟು ಗುಣಾತ್ಮಕವಾದದ್ದಲ್ಲ. 

ಅಂಬೇಡ್ಕರ್‌ ಹೆಸರು ಭಾರತದಲ್ಲಿ ಹೇಗೆ ಚಿರಾಯು ಆಗಿದೆಯೋ, ಅದೇ ರೀತಿ ಹಾವನೂರು ಅವರ ವರದಿ ಕರ್ನಾಟಕದಲ್ಲಿ ಯಾವತ್ತಿಗೂ ಇರುತ್ತದೆ. ಅವರ ವರದಿಯು ಹಿಂದುಳಿದ ವರ್ಗಗಳ ಚರಿತ್ರೆಯಲ್ಲೇ ಒಂದು ಹೊಸ ಹಾದಿಯನ್ನೇ ನಿರ್ಮಸಿತು. ನಾನೂ ಇನ್ನೂ ಹೆಚ್ಚು ಹೇಳಬೇಕು ಅಂದರೆ ಅಂತಹ ಮಾಹಿತಿ ಸಂಗ್ರಹಣೆ ಹಿಂದೆ ಎಂದೂ ಆಗಿರಲಿಲ್ಲ. ಒಂದೇ ಒಂದು ವರದಿಯೂ ಕೂಡ ಅಷ್ಟು ಮಾಹಿತಿಗಳನ್ನು ಸಂಗ್ರಹಣೆ ಮಾಡಿಲ್ಲ. ವಸ್ತು ಆಧಾರಿತ , ಸಾಮಾಜಿಕ ನ್ಯಾಯ, ಸಂವಿಧಾನಕ್ಕೆ ವಿಶ್ಲೇಷಣೆ ಕೂಡಾ ಅದರಲ್ಲಿ ಅಡಕವಾಗಿದೆ. ಅವರ ವರದಿಯನ್ನು ಓದುತ್ತಿದ್ದರೆ ನಮಗೇನೋ ಒಂದು ಹುಮ್ಮಸ್ಸು, ಉತ್ಸಾಹ ಬರಬಹುದು. ಬರೀ ಹಿಂದುಳಿದವರು ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕನೂ ಕೂಡ ಆ ವರದಿಯನ್ನು ಓದಬೇಕು. ಯಾಕೆಂದರೆ, ಮುಂದುವರಿದವರು, ಹಿಂದುಳಿದವರ ಪರಿಸ್ಥಿತಿ ಹೇಗಿತ್ತು, ಅವರ ವರದಿ ಬಂದ ನಂತರ ಏನಾಯಿತು ಎಂದು.

ಹಿಂದುಳಿದವರು ಎಂಬ ಪದಕ್ಕೆ ಅರ್ಥ ಬಂದದ್ದೇ ವರದಿಯಿಂದ

ಎಲ್ಲಿತ್ತು ಹಿಂದುಳಿದವರಿಗೆ ಹಾಸ್ಟೆಲ್‌ಗಳು? ಇವತ್ತು ದೇವರಾಜ ಅರಸು ಅಭಿವೃದ್ಧಿ ನಿಗಮ, ಆವತ್ತು ಅದು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ. ಮತ್ತೆ ಅವರ ವರದಿಯಲ್ಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಕೂಡ out of promotions ಕೊಡೋದಿಕ್ಕೆ ಮಾಡಿದರು. ಯಾಕೆಂದರೆ ಮುಖ್ಯವಾಗಿ ಸಾಮಾಜಿಕ ನ್ಯಾಯದ ನೆಲೆಯ ಮೇಲೆ. ಇವತ್ತು ಕೇವಲ 15/4, 16/4 ಕ್ಕೆ ಮಾತ್ರ ಸೀಮಿತವಾಗಿಲ್ಲ. ಸರ್ವತೋಮುಖ ಅಭಿವೃದ್ಧಿಗೆ ಸೀಮಿತವಾಗಿದೆ. ಹಿಂದುಳಿದವರು ಎಂಬ ಪದಕ್ಕೆ ಅರ್ಥ ಬಂದದ್ದೇ ಅವರ ವರದಿ ಬಂದ ನಂತರ.

ಅಲ್ಲಿಯವರೆಗೂ ಆ ಪದಕ್ಕೆ  ಅರ್ಥವೇ ಇರಲಿಲ್ಲ. ಹಾಗಾಗಿ ನಾವು ಅವರನ್ನ ನೆನೆಸಿಕೊಳ್ಳುತ್ತೇವೆ. ಹಿಂದುಳಿದವರು ಮಾತ್ರವಲ್ಲ, ಇಡೀ ಸಮಾಜದವರೇ ನೆನಸಿಕೊಳ್ಳಬೇಕು. ಬಹುಶಃ ಆ ವರದಿಯನ್ನ ಅವತ್ತು ಕೊಡದೇ ಇದ್ದಿದ್ದರೆ, ಕ್ರಾಂತಿ ಆಗುತ್ತಿತ್ತೋ ಏನೋ. ಯಾಕೆಂದರೆ, ಅದು ಸರಿಯಾದ ಸಮಯದಲ್ಲಿ ಶಿಫಾರಸ್ಸುಗಳನ್ನು ಮಾಡಿ, ವಿದ್ಯೆ ಮತ್ತು ಉದ್ಯೋಗದಲ್ಲಿ ಸಮತೋಲನ ತರೋಣ ಎಂಬ ಪ್ರಯೋಗವಾಗಿದೆ. ಇಲ್ಲದಿದ್ದರೆ ಇವತ್ತು ಸಮಾಜದಲ್ಲಿ ಬೇರೆಯೇ ಸ್ಥಿತಿ ಇರುತ್ತಿತ್ತು. ಅದನ್ನು ನನಗೆ ಊಹಿಸಲೂ ಸಾಧ್ಯವಿಲ್ಲ.

ಸಮಾಜದ ಹಿತದೃಷ್ಠಿಯಿಂದ ಹಾವನೂರ ವರದಿ ಇವತ್ತು ಸಮಾಜದಲ್ಲಿ ಶಾಂತಿ ನೆಲೆಸುವುದಕ್ಕೆ ಕಾರಣವಾಯಿತು. ಈಗ ಅರ್ಹರಲ್ಲದವರಿಗೆ ಮೀಸಲಾತಿ ಸಿಕ್ಕಿದೆ. ಮೊದಲಿಗೆ ಮೀಸಲಾತಿಯಿದ್ದದ್ದು ಸಾಮಾಜಿಕ ಸಮತೋಲನ ತರುವುದಕ್ಕೆ. ಈಗ ಬೇರೆ ಬೇರೆ ಜಾತಿಗಳನ್ನು ಸೇರಿಸಿ ಅಸಮತೋಲನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಬೇರೆ ರಾಜ್ಯದಲ್ಲಿ ಪ್ರಯೋಗ ಮಾಡಿದ್ದು ವ್ಯರ್ಥವಾಗಿದೆ. ತಮಿಳುನಾಡು, ಬಿಹಾರ್‌ನಲ್ಲಿ ಪ್ರಯತ್ನ ಮಾಡಿದರೂ ಇಂತಹ ವರದಿಯೂ ಬರಲಿಲ್ಲ , ವೈಜ್ಞಾನಿಕ ಸಮೀಕ್ಷೆ ಕೂಡ ಆಗಿಲ್ಲ. ಅವರಿಗಿದ್ದ ದೂರದೃಷ್ಟಿ, ಸಮಾಜದ ಹಿತವೇ ಮುಖ್ಯವಾಗಿತ್ತು. ಹಾಗಾಗಿ ಆ ಕೆಲಸ ಅವರು ಮಾಡಿದ್ದಾರೆ.

ಇದನ್ನು ಓದಿದ್ದೀರಾ? ಮುಸ್ಲೀಮರೇ ಇಲ್ಲದ ಸೈಂದೂರಿನಲ್ಲಿ ಮೊಹರಂ ಆಚರಣೆ

ಹಾವನೂರರದ್ದು ಕ್ರಾಂತಿಕಾರಿಯಾದ ಚಿಂತನೆ. ಅವರಿರುವಾಗ ನಾನು ಅವರಿಗೊಂದು ಪ್ರಶ್ನೆ ಕೇಳಿದ್ದೆ,  ʼವರದಿ ಜಾರಿ ಮಾಡಲಿಲ್ಲ ಅಂದರೆ ಏನು ಮಾಡುತ್ತೀರಿʼ ಎಂದು. ಅದಕ್ಕೆ ಅವರು, ʼವಿಧಾನಸೌಧದ ಮುಂದೆ ನಿಂತು ಆ ವರದಿಯನ್ನ ಸುಟ್ಟು ಕ್ರಾಂತಿಯನ್ನು ಮಾಡುತ್ತೀನಿʼ ಎಂದಿದ್ದರು. ಇದು ಅವರಿಗಿದ್ದ ಕಿಚ್ಚು. ಅವರಿಗಿದ್ದ ಬದ್ದತೆ ಹೇಗಿದೆ ನೋಡಿ!.

ನನಗೆ ಹಾವನೂರರು 1964ರಲ್ಲಿ ವಿದ್ಯಾರ್ಥಿಯಾಗಿದ್ದಾಗಿನಿಂದ ಪರಿಚಯ. ಆಗ ಅವರು ವಕೀಲರು ಮಾತ್ರ. ನನಗೆ ಅವರ ಕಚೇರಿಗೆ ಆಗಾಗ ಹೋಗುವುದು ಅಭ್ಯಾಸವಾಗಿತ್ತು. ಸಾಯೋವರೆಗೂ ನಮ್ಮ ಸಂಬಂಧ ಹಾಗೆಯೇ ಇತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್