
ಬಿಸಿ ಮಾರುತ ಎಂದು ಕರೆಯಲಾಗುವ ವಿದ್ಯಮಾನವೊಂದಕ್ಕೆ ಉತ್ತರ ಭಾರತ ಪ್ರತೀ ವರ್ಷ ಸಾಕ್ಷಿಯಾಗುತ್ತಿದೆ. 1970-2019ರ ಅವಧಿಯಲ್ಲಿ ಈ ಮಾರುತದ ಕಾರಣಕ್ಕೆ ಸಾವನ್ನಪ್ಪಿದವರ ಸಂಖ್ಯೆ 17,362. ಈ ವರ್ಷ ಏಪ್ರಿಲ್ ಅಂತ್ಯದವರೆಗೆ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಸಿ ಮಾರುತದ ಕುರಿತು ಪರಿಸರ ತಜ್ಞ ನಾಗೇಶ ಹೆಗಡೆ ಮಾತನಾಡಿದ್ದಾರೆ
ಬಿಸಿ ಮಾರುತ ಎಂದರೇನು?
ದಿನದ ತಾಪಮಾನ ಸರಾಸರಿ 40 ಡಿಗ್ರಿ ಸೆಲ್ಸಿಯಸ್ಗಿಂತ ಜಾಸ್ತಿ ಇದ್ದು, ಹಿಂದಿನ ಐದು ವರ್ಷಗಳ ಇದೇ ದಿನದ ಸರಾಸರಿ ಗರಿಷ್ಠ ತಾಪಮಾನಕ್ಕಿಂತ ಈಗಿನದು ಜಾಸ್ತಿ ಇದ್ದರೆ, ಮರುದಿನವೂ ಅದೇ ಗರಿಷ್ಠ ಮಟ್ಟದಲ್ಲೇ ಇದ್ದರೆ, ಅದಕ್ಕೆ 'ಬಿಸಿ ಮಾರುತ' (ಹೀಟ್ ವೇವ್) ಎನ್ನುತ್ತಾರೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಪದೇ-ಪದೇ ಹೀಗಾಗುತ್ತಿದೆ. ಅಲ್ಲಿ ಈ ಏಪ್ರಿಲ್ನ ಬೇಸಿಗೆ ಕಳೆದ 122 ವರ್ಷಗಳ ದಾಖಲೆಯನ್ನು ಮೀರಿ ಉಗ್ರವಾಗಿತ್ತು. ನಮ್ಮಲ್ಲೂ, ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಕಳೆದ ವಾರ ಮೂರು ದಿನ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ಅದು ಬಿಸಿ ಮಾರುತ.
ಬಿಸಿ ಮಾರುತಕ್ಕೆ ಕಾರಣ ಏನು?
ಎತ್ತರದ ವಾಯುಮಂಡಲದಲ್ಲಿ ತೇವಾಂಶದ ಕೊರತೆ, ಮೋಡರಹಿತ ಆಕಾಶ, ಗಿಡಮರಗಳಿಲ್ಲದ ವಿಶಾಲ ಭೂಮಿ ಇವೆಲ್ಲ ಕಾರಣಗಳಿಂದ ವಾಯವ್ಯ ಭಾರತದಿಂದ ಬೀಸಿ ಬರುವ ಬಿಸಿ ಗಾಳಿ ಇನ್ನಷ್ಟು ಉಗ್ರವಾಗುತ್ತದೆ. ಗಾಳಿಯೇ ಇಲ್ಲದಿದ್ದರೂ ನೆಲವೇ ಕಾದು ಕಾವಲಿಯಂತಾಗುತ್ತದೆ. ಈ ವರ್ಷ ಮಾರ್ಚ್, ಏಪ್ರಿಲ್ ತಾಪಮಾನ ಹಿಂದೆಂದಿಗಿಂತ ಹೆಚ್ಚಾಗಿತ್ತು. ತೇವಾಂಶದ ಅಭಾವಕ್ಕೆ ಅದೂ ಕಾರಣವಾಗಿತ್ತು. ಉತ್ತರ ಭಾರತದ ನಗರಗಳಲ್ಲಿ ಇದೇ ಕಾಲಕ್ಕೆ ಏರ್ ಕಂಡೀಶನರ್ (ಎ.ಸಿ) ಬಳಕೆ ಹೆಚ್ಚಿದ್ದರಿಂದ ನಗರ ಪರಿಸರ ಇನ್ನಷ್ಟು ಬಿಗಡಾಯಿಸಿತ್ತು.
ಭಾರತದಲ್ಲಿ ಬಿಸಿ ಮಾರುತ ಕಾಣಿಸಿಕೊಳ್ಳಲು ನಿರ್ದಿಷ್ಟ ಕಾರಣ ಇದೆಯೇ?

ಇದೆ, ಆದರೆ ಸುಲಭ ವಿವರಣೆಗೆ ಸಿಗುವುದಿಲ್ಲ. ಶಾಂತ ಸಾಗರದಲ್ಲಿ ಉಷ್ಣಪ್ರವಾಹ (ಲಾ ನೀನ್ಯಾ ಪರಿಣಾಮ) ಹೆಚ್ಚಾದಾಗ, ಉತ್ತರ ಭಾರತದ ಮೇಲೆ ಬಿಸಿಯೊತ್ತಡ ಸೃಷ್ಟಿಯಾಗಿ ತಟಸ್ಥ ಕೂತುಬಿಡುತ್ತದೆ. ಸಾಲದ್ದಕ್ಕೆ ಈ ಬಾರಿಯಂತೂ ಅಕ್ಕಪಕ್ಕದ ಕಝಾಕ್ಸ್ತಾನ್, ಅಫ್ಘಾನಿಸ್ತಾನ್, ಪಾಕಿಸ್ತಾನ್ ಮತ್ತು ರಷ್ಯಾದ ಪಶ್ಚಿಮ ಭಾಗದಲ್ಲಿ ಚಳಿಗಾಲವೂ ಬೇಸಿಗೆಯಂತಿತ್ತು. ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರಗಳಲ್ಲೂ ಸೆಖೆ ಹೆಚ್ಚಿ ಆಗಲೇ ಹಿಮ ಕರಗುತ್ತಿತ್ತು. ಅತ್ತಿತ್ತಲಿಂದ ತಂಪು ಗಾಳಿ ಬೀಸಿ ಬರಲು ಅವಕಾಶವೇ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯ ಕಾರಣ ಏನೆಂದರೆ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮಾಮೂಲು ಬೇಸಿಗೆಯಲ್ಲೂ ನೆಲ ಜಾಸ್ತಿ ಕಾಯುತ್ತದೆ. ಅರಣ್ಯವೂ ತೀರಾ ಶುಷ್ಕವಾಗಿ ಬೆಂಕಿ ತಂತಾನೇ ಹೊತ್ತಿಕೊಂಡು ಬಿಸಿಗಾಳಿಯನ್ನೇ ಕಕ್ಕುತ್ತದೆ. ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮಧ್ಯಪ್ರದೇಶಗಳ ಅರಣ್ಯಗಳಲ್ಲಿ ಫೆಬ್ರವರಿ, ಮಾರ್ಚ್ನಲ್ಲೇ ಹತ್ತು ಸಾವಿರಕ್ಕೂ ಹೆಚ್ಚು ತಾಣಗಳಲ್ಲಿ ಕಾಡಿನ ಬೆಂಕಿ ವ್ಯಾಪಿಸಿದ್ದು ದಾಖಲಾಗಿದೆ.
ಬಿಸಿ ಮಾರುತದಿಂದ ಸಾವು ಹೇಗೆ ಸಂಭವಿಸುತ್ತದೆ?
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ರಕ್ತ ಮಂದವಾಗುತ್ತದೆ. ನೀರಿನ ಕೊರತೆಯನ್ನು ಕೆಲವರ ದೇಹ ತಡೆದುಕೊಳ್ಳಲಾರದು. ರಕ್ತ ಸಂಚಲನೆ ಸರಿಯಾಗಿಲ್ಲದಿದ್ದರೆ ಪ್ರಜ್ಞೆ ತಪ್ಪಬಹುದು. ಪರಿಸ್ಥಿತಿ ಗಂಭೀರವಾದರೆ ಶಾಖಲಕ್ವ ಹೊಡೆಯಬಹುದು. ಅಂಥ ಗಂಭೀರ ಲಕ್ಷಣ ಇಲ್ಲದಿದ್ದರೂ, ಕಾಲು ಊದುವುದು, ಶರೀರ ಮರಗಟ್ಟಿದಂತಾಗುವುದು, ತ್ವಚೆ ಒಣಗುವುದು, ಸ್ನಾಯು ಬಿಗಿತ, ಕುತ್ತಿಗೆಯ ಮೇಲೆ ಶಾಖಮಚ್ಚೆ, ತಲೆನೋವು ಕಾಣಿಸಿಕೊಳ್ಳಬಹುದು.
ಈ ಲೇಖನ ಓದಿದ್ದೀರಾ?: ಹಳ್ಳಿ ಹಾದಿ | 26 ಎಕರೆ ಭೂಮಿ, 14 ರೈತರು, ಒಂದೇ ಬಾವಿ, ಸಮೃದ್ಧ ಫಸಲು
ಪಾರಾಗುವ ಬಗೆ ಎಂತು?
ದೇಹಕ್ಕೆ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ನೀರಿನಂಶ ಹೆಚ್ಚಾಗಿರುವ ಆಹಾರವನ್ನೇ ಸೇವಿಸಬೇಕು. ಮಕ್ಕಳ, ಹಿರಿಯರ ಮತ್ತು ಔಷಧ ಸೇವನೆ ಮಾಡುತ್ತಿರುವವರ ಕಡೆ ಹೆಚ್ಚಿನ ಗಮನ ಕೊಡಬೇಕು. ತೇವಗಾಳಿ ಮನೆಯೊಳಕ್ಕೆ ಬರುವಂತೆ ಒದ್ದೆ ಪರದೆಗಳನ್ನು ಕಿಟಕಿಗಳಿಗೆ ಹಾಕಬೇಕು. ಎಲ್ಲಕ್ಕಿಂತ ಮುಖ್ಯವೆಂದರೆ, ಹಗಲಿನ 11ರಿಂದ 4 ಗಂಟೆಯವರೆಗೆ ಮನೆಯಿಂದ ಆಚೆ ಹೋಗುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು... - ಇವೆಲ್ಲ ಈ ವರ್ಷದ ಉಪಾಯಗಳಾದವು. ಮುಂದಿನ ವರ್ಷಗಳಲ್ಲಿ ಇದು ಇನ್ನೂ ಭೀಕರವಾಗಬಹುದು. ಮನೆಯ ಸುತ್ತ ಗಿಡ ನೆಡಿ. ಊರಲ್ಲಿ ಹಸಿರು ವನಗಳನ್ನು ಬೆಳೆಸುವ ಕೆಲಸದಲ್ಲಿ ಕೈಜೋಡಿಸಿ. ಸಮೀಪದ ಕೆರೆಯಲ್ಲಿ ನೀರು ಬೇಸಿಗೆಯಲ್ಲೂ ಇರುವಂತೆ ನೋಡಿಕೊಳ್ಳಿ.